– ಸುಹಾನ ಸಫರ್
(ಕಾನೂನು ವಿದ್ಯಾರ್ಥಿ, SDM ಲಾ ಕಾಲೇಜು ಮಂಗಳೂರು)

ಮಹಿಳೆಯ ಸ್ಥಾನವು ಸಮಾಜದಲ್ಲಿ ಅತೀ ಮುಖ್ಯವಾಗಿರುತ್ತದೆ. ಏಕೆಂದರೆ, ಆಕೆಯು ಈ ಜಗತ್ತಿನ ಅಮೂಲ್ಯವಾದ ಸೃಷ್ಟಿ. ಪ್ರತಿಯೊಂದು ಧರ್ಮವು ಮಹಿಳೆಗೆ ಅತ್ಯುನ್ನತ ಸ್ಥಾನವನ್ನು ನೀಡಿದೆ. ಹಾಗೆಯೇ ನಮ್ಮ ಭಾರತವಂತೂ ಮಹಿಳೆಗೆ ನೀಡಿರುವುದು ಗೌರವಾನ್ವಿತ ಸ್ಥಾನ. ಆದರೆ ಕೇವಲ ಸೈದ್ಧಾಂತಿಕವಾಗಿ ಉಳಿದಿದೆಯೇ ಹೊರತು, ಆಚರಣೆಯಲ್ಲಿ ನಾವಂತೂ ಕಾಣುತ್ತಿಲ್ಲ.
ಪ್ರಸ್ತುತವಾಗಿ, ದೈನಂದಿನ ಪತ್ರಿಕೆಯಲ್ಲಿ ಕಣ್ಣಾಡಿಸೋದೆ ತಡ ಮೊದಲ ಪುಟದಲ್ಲೇ ದಪ್ಪಕ್ಷರಗಳಲ್ಲಿ ಕಾಣುವುದೆಂದರೆ ಅದು ಅತ್ಯಾಚಾರ! ಇದೇ ನಾವು ನಮ್ಮ ದೇಶದಲ್ಲಿ ಮಹಿಳೆಯರಿಗೆ ನೀಡುತ್ತಿರುವ `ಗೌರವಾನ್ವಿತ ಸ್ಥಾನ’ ಮಹಿಳಾ ದಿನಾಚರಣೆಯಂದು ಹೇಳಿದ ಭಾಷಣಗಳು, ಸಂದೇಶಗಳು ನನ್ನ ಕಿವಿಯಿಂದ ಕಣ್ಣಿನಿಂದ ಅಳಿಸಿ ಹೋಗುವುದಕ್ಕಿಂತ ಮುಂಚಿತವಾಗಿಯೇ ನನ್ನ ಎಷ್ಟೋ ಸಹೋದರಿಯರು ಅತ್ಯಾಚಾರವೆಂಬ ಬಲೆಗೆ ಸಿಲುಕಿ ಮರೆಯಾಗಿ ಬಿಟ್ಟರು.
ಈ ವಿಷಯದ ಕುರಿತು ಮಾತನಾಡುವಾಗ ಕಳೆದ ಎಂಟು ವರ್ಷಗಳ ಹಿಂದೆ ದೆಹಲಿಯಲ್ಲಿ ಓಡುತ್ತಿದ್ದ ಬಸ್ಸಿನಲ್ಲೇ ಸಹೋದರಿಯ ಮೇಲೆ ಅತ್ಯಾಚಾರವೆಸಗಿದ್ದು ನೆನಪಾಗುತ್ತದೆ. ಇದು ಹೆಚ್ಚಿನ ಪ್ರತಿಭಟನೆಗಳಿಗೆ ದಾರಿ ಮಾಡಿಕೊಟ್ಟಿತ್ತಾದರೂ, ಅತ್ಯಾಚಾರವೆಂಬ ಶಿಕ್ಷೆ ಆಕೆ ಹೆಣ್ಣೆಂದ ಮಾತ್ರಕ್ಕೋ ಅಥವಾ ಅದು ರಾತ್ರಿ ಎಂಬುದಕ್ಕೋ? ಆದರೆ ಅತೀ ಹೆಚ್ಚಾಗಿ ಮಹಿಳೆಯರ ಮೇಲೆ ಕೊಲೆ ದೌರ್ಜನ್ಯವು ಆಕೆಯ ಆಪ್ತರಾದ ಸ್ನೇಹಿತರು ಮತ್ತು ಕುಟುಂಬಸ್ಥರಿಂದಲೇ ವೆಸಗಲ್ಪಡುತ್ತದೆ. ಆದ್ದರಿಂದ ಮನೆಯಂಬುವುದು ಕೂಡಾ ಆಕೆಗೆ ಇಂದು ಅಪಾಯಕಾರಿ ಸ್ಥಳವಾಗಿ ಪರಿಣಮಿಸಿದೆ. ಹಾಗೆಯೇ ಅಂದು ಕಥುವಾದ ಬಾಲ ಕನ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಇವೆಲ್ಲವೂ ಮರೆಯುವಂತಹ ಕಥೆಗಳಂತೂ ಅಲ್ಲ. ಆಕೆಯು ಪವಿತ್ರ ದೇವಸ್ಥಾನದಲ್ಲೇ ಅತ್ಯಾಚಾರಕ್ಕೆ ಬಲಿಯಾದಳು. ಅಂದು ಆಕೆಯ ಅನ್ಯಾಯದ ವಿರುದ್ಧ ಇಡೀ ಜಗತ್ತೇ ಧ್ವನಿ ಎತ್ತುತ್ತಿತ್ತು. ಆ ಸಂದರ್ಭದಲ್ಲಿ ಓರ್ವ ಬಿಜೆಪಿ ಕಾರ್ಯಕರ್ತನ ಧ್ವನಿಯು ಮೊಳಗಿತು. “ಇಂತಹ ಚಿಕ್ಕ ಪುಟ್ಟ ವಿಷಯಗಳನ್ನು ಎಷ್ಟು ದೊಡ್ಡದಾಗಿ ಮಾಡಬೇಕೆಂದಿಲ್ಲ” ಎಂದು. ಇದು ಮನುಷ್ಯನಾದವನು ಆಡುವ ಮಾತಂತೂ ಅಲ್ಲ. ಕೋಮುವಾದ ರಾಜಕೀಯ ಕಡಲಲ್ಲಿ ಮಿಂದವರಿಗಲ್ಲದೇ ಈ ಮಾತು ಬೇರಾರಿಗೆ ತಿಳಿದೀತು? ಆಕೆಯ ಸ್ಥಾನವನ್ನು ಒಂದು ಕ್ಷಣ ತನ್ನವರನ್ನಿಟ್ಟು ಆಲೋಚಿಸುತ್ತಿದ್ದರೇ?

ಮನುಷ್ಯನು ಅರ್ಥ ಮಾಡಿಕೊಳ್ಳಬೇಕಾದ ಮೊದಲ ವಿಷಯವೇ ಮಹಿಳೆಯ ಮೇಲಿನ ದೌರ್ಜನ್ಯ ನಮ್ಮೆಲ್ಲರಿಗೂ ಸಂಬಂಧಿಸಿದ್ದು ಎಂಬುವುದಾಗಿದೆ. ವಿಶೇಷವಾಗಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ವಯಸ್ಸಾದವರ ಮೇಲಿನ ಅತ್ಯಾಚಾರದ ವಿರುದ್ಧ ಕಾನೂನುಗಳನ್ನು ಬಲಪಡಿಸಿದರೂ, ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರದ ಅಧಿಕೃತ ದತ್ತಾಂಶವು ಪ್ರಸ್ತುತ 8,541 ರಿಂದ 19,765ಕ್ಕೆ ಏರಿಕೆಯಾಗಿದೆ.
2019 ನವೆಂಬರ್ ತಿಂಗಳಿನಲ್ಲಿ
ಹೈದರಾಬಾದಿನಲ್ಲಿ ಅತ್ಯಾಚಾರವೆಂಬ ಕ್ರೂರ ಕೃತ್ಯಕ್ಕೆ ಸಿಲುಕಿ ಮಹಿಳೆಯೊಬ್ಬಳು ಭಾಗಶಃ ಸುಟ್ಟು ಮೃತವಾಗಿ ಬಿದ್ದಿದ್ದಳು ಎಂಬ ವಾರ್ತೆಯನ್ನು ಕಂಡೊಡನೆ ನಾನು ಮೂಕವಿಸ್ಮಿತಳಾದೆ! ಈ ಪ್ರಕರಣ ಬುಧವಾರ ರಾತ್ರಿ ನಡೆದಿತ್ತು. ವೈದ್ಯೆ ನಿಲ್ಲಿಸಿದ್ದ ಸ್ಕೂಟರಿನ ಟೈಯರಿನ ಗಾಳಿ ತೆಗೆದ ಆರೋಪಿಯು ಸರಿ ಮಾಡಿತರುವೆ ಎಂದು ತೆರಳಿದಾಕ್ಷಣ ಸಂತ್ರಸ್ತೆ ತನ್ನ ಸಹೋದರನಿಗೆ ಕರೆಮಾಡಿ ನನಗೆ ಭಯವಾಗುತ್ತಿದೆ ಎಂದು ತನ್ನಲ್ಲಿನ ಆತಂಕವನ್ನು ವ್ಯಕ್ತ ಪಡಿಸಿರುತ್ತಾಳೆ. ಈ ಆರೋಪಿಗಳೆಲ್ಲ ಆಕೆಯ ಮೇಲೆ ಅತ್ಯಾಚಾರವೆಸಗಿ ಸುಟ್ಟು ಕೊಂದುಬಿಟ್ಟರು. ವ್ಯಕ್ತಿಯೊಬ್ಬನನ್ನು ಇಂತಹ ಭಯಾನಕ, ಅಪ್ರಚೋದಿತ ಅಮಾನವೀಯ ಕೃತ್ಯಗಳಿಗೆ ಇನ್ನೊಬ್ಬ ಮನುಷ್ಯನಾದವನು ಒಳಪಡಿಸುತ್ತಾನೆ ಎಂಬುವುದು ಕಲ್ಪನೆಗೂ ಮೀರಿದ್ದಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದನದಲ್ಲಿ ಶಾಸಕರು ಆರೋಪಿಗಳಿಗೆ ಗುಂಪು ಹತ್ಯೆ ಮತ್ತು ಮಹಿಳೆಯರನ್ನು ಮನೆಯಲ್ಲಿರಿಸುವಂತೆ ಬೆಂಬಲವನ್ನು ನೀಡಿದರು. ದೇಶದ ಮಹಿಳೆಯರನ್ನು ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳುವ ಉಸ್ತುವಾರಿ ಪಡೆದವರಿಗೆ ತಾವು ಏನು ಮಾತನಾಡುತ್ತಿದ್ದಾರೆ ಎಂದೇ ತಿಳಿದಿಲ್ಲವೆಂಬಂತೆ ನನಗೆ ತೋರಿತು ಹೌದು, ನಿಜವಾಗಿಯೂ ನಮ್ಮ ಶಾಸಕರು ಅಪರಾಧಕ್ಕೆ, ಗುಂಪು ಹತ್ಯೆಯನ್ನು ಶಿಫಾರಸ್ಸು ಮಾಡಿದ್ದಾರೆ. ಪೋಲೀಸ್ ಸುಧಾರಣೆಗಳು, ಉತ್ತಮ ಭದ್ರತಾ ಕ್ರಮಗಳ ಅನುಷ್ಠಾನದಲ್ಲಿನ ಅಂತರವನ್ನು ನಿವಾರಿಸುವುದು ಮತ್ತು ಲಿಂಗ ಸಂವೇಧನೆಗಾಗಿ ವಾದಿಸುವ ಬದಲು ಭಾರತೀಯ ಗಣರಾಜ್ಯದ ಅತ್ಯಂತ ಪವಿತ್ರ ದೇವಾಲಯದಲ್ಲಿ ನಿಂತು ರಕ್ತಕ್ಕಾಗಿ ಬೇಡಿದಂತಿತ್ತು. ಈ ಗುಂಪು ಹತ್ಯೆಯು ಭಾರತದ ದೊಡ್ಡ ಸವಾಲುಗಳಲ್ಲಿ ಒಂದಾಗಿದ್ದು, ಕ್ವಿಂಟ್ ವರದಿಯ ಪ್ರಕಾರ 2016ರಲ್ಲಿ ಭಾರತದಲ್ಲಿ 113 ಲಿಂಚಿಂಗ್ ಪ್ರಕರಣಗಳು ದಾಖಲಾಗಿರುತ್ತವೆ.
ಹೈದರಾಬಾದ್ ಅತ್ಯಾಚಾರ-ಕೊಲೆ ಪ್ರಕರಣದ ಕ್ರೂರತೆಯೊಂದಿಗೆ ರಾಷ್ಟ್ರವು ಹಿಡಿತಕ್ಕೆ ಬರುತ್ತಿದ್ದಂತೆ ಮಹಿಳೆಯರನ್ನು ಮನೆಯಲ್ಲಿರಿಸಿ ಎಂಬಂತಹ ಸೂಚನೆಗಳು ಶಾಸಕರು ನೀಡುತ್ತಿದ್ದಾರೆ. ಜನಸಂಧಣಿ ಪ್ರದೇಶಗಳಿಗೆ ಓಡುವುದು ಮತ್ತು ಬೊಬ್ಬೆ ಹಾಕುವುದು ಕೂಡಾ ಸಲಹೆಗಳಲ್ಲಿ ಒಂದಾಗಿದ್ದು, ಈ ರೀತಿ ಹೆಣ್ಣು ಈ ದೇಶದಲ್ಲಿ ಬದುಕಬೇಕೇ? ಎಂಬ ಪ್ರಶ್ನೆ ನನ್ನಲ್ಲಿ ಮೂಡುತ್ತಿದೆ.

ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ನೇತೃತ್ವದಲ್ಲಿ ತೆಲಂಗಾಣ ಸರಕಾರದ ಪ್ರತಿಕ್ರಿಯೆ ಇನ್ನೂ ಅತಿರೇಖದ ಸಂಗತಿಯಾಗಿದೆ. ತೆಲಂಗಾಣದ ಸಾರಿಗೆ ಇಲಾಖೆಯಲ್ಲಿ ಮಹಿಳೆಯರಿಗೆ ರಾತ್ರಿ 8 ಘಂಟೆಗೆ ಕರ್ಫ್ಯೂ ನೀಡಬೇಕೆಂದು ಸಿ.ಎಂ. ಕರೆ ನೀಡಿದರು. ರಾತ್ರಿ ಪಾಲಿಯಲ್ಲಿ ಕೆಲಸ ಮಾಡುವುದಕ್ಕೆ ಅಂತ್ಯವನ್ನು ಕೋರುವ ನಿಟ್ಟಿನಲ್ಲಿ ಮಹಿಳೆಯರ ಸುರಕ್ಷತೆಯ ಹೊಣೆಯನ್ನು ಸಂಪೂರ್ಣವಾಗಿ ಅವರ ಮೇಲೆಯೇ ಇಡಬೇಕಾಗಿದೆ. ಆದರೆ ಮಹಿಳೆಯರು ಹೊರಗುಳಿಯುದನ್ನು ತಡೆಯುವುದು ಯಾವುದೇ ರೀತಿಯಲ್ಲಿ ಅತ್ಯಾಚಾರಕ್ಕೆ ತಡೆಯಾಗುವುದಿಲ್ಲ. ಏಕೆಂದರೆ ನ್ಯಾಷನಲ್ ಕ್ರೈಮ್ ರೆಕಾಡ್ರ್ಸ್ ಬ್ಯುರೋ (ಎನ್‍ಸಿಆರ್‍ಬಿ) ಬಿಡುಗಡೆ ಮಾಡಿದ ಅತ್ಯಾಚಾರದ ಇತ್ತೀಚಿನ ಮಾಹಿತಿಯ ಪ್ರಕಾರ 2017ರಲ್ಲಿ ಭಾರತದಲ್ಲಿ 32,559 ಅತ್ಯಾಚಾರಗಳು ವರದಿಯಾಗಿದೆ ಮತ್ತು ಇದರಲ್ಲಿನ 93% ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತರಿಗೆ ತಿಳಿದವರೇ ಆಗಿರುತ್ತಾರೆ. ಆದ್ದರಿಂದ ಅತ್ಯಾಚಾರಕ್ಕೆ ಯಾವುದೇ ಸ್ಥಳ ಸಮಯವೆಂಬ ಬೇಧವಿಲ್ಲ. ಬದಲಾಗ ಬೇಕಾಗಿರುವುದು ಕ್ರಮಗಳು ಮತ್ತು ನೋಡುವ ದೃಷ್ಟಿ ಮಾತ್ರ.
ಅತ್ಯಾಚಾರ ಹೇಗೆ ಸಂಭವಿಸುತ್ತದೆ ಎಂಬುವುದಕ್ಕೆ ಹಲವು ಕಾರಣಗಳನ್ನು ಸಂಸತ್ತಿನಲ್ಲಿ ನೀಡಲಾಯಿತು. ಕಾರಣಗಳು ಮೊಬೈಲ್ ಫೋನ್, ಮದ್ಯಪಾನ ಮತ್ತು ಸಂತ್ರಸ್ತೆಯನ್ನು ಒಳಗೊಂಡು ಅವನು ಮುಸ್ಲಿಮನಾಗಿದ್ದಾನೆ ಎಂದೂ ಘೋಷಿಸಿದರು. ಗೋಶ ಮಹಲ್ ಬಿಜೆಪಿ ಶಾಸಕರು ಮತ್ತು ಅನೇಕ ರಾಜಕಾರಣಿಗಳು ಮುಸ್ಲಿಮ್ ಪ್ರಾಬಲ್ಯದ ಪ್ರದೇಶದಲ್ಲಿ ಘಟನೆ ಸಂಭವಿಸಿದೆ ಎಂದು ಹೇಳುವ ಮೂಲಕ ಕೋಮುವಾದಿ ಹೇಳಿಕೆಗಳಿಗೆ ಅವಕಾಶಗಳನ್ನು ಕಂಡುಕೊಂಡರು. ಇನ್ನುಳಿದ ಆರೋಪಿಗಳನ್ನು ಮರೆತು ಘಟನೆಗೆ ಧರ್ಮವೆಂಬ ಮಣಿಯನ್ನು ಪೋಣಿಸಿದರು.

ಅಪರಾಧಿಗಳನ್ನು ಗುಂಡಿಟ್ಟು ಕೊಂದದ್ದು ಸ್ವಾಗತಾರ್ಹವಾದರೂ, ಬಡವರು ಎಂಬ ಕಾರಣಕ್ಕೆ ಕೊಂದಿದ್ದಾರೆಯೇ ಎಂಬುವುದು ಸಂಶಯಾಸ್ಪದ ಅದರ ನಂತವೂ ಅತ್ಯಾಚಾರ ಪ್ರಕರಣಗಳು ದಾಖಲಾಗಿ ವರದಿ ಬಂದವು. ಇಂತಹ ಎಂಕೌಟರ್ ಶಿಕ್ಷೆಯು ಸಮರ್ಥನೀಯವಾದದ್ದಂತೂ ಅಲ್ಲ. ಇದನ್ನೆಲ್ಲವನ್ನು ನೋಡಿದಾಗ ಎಲ್ಲ ಅಪರಾಧಿಗಳಿಗೆ ನಿಜವಾಗಿಯೂ ಶಿಕ್ಷೆ ದೊರೆತು ಸಂತ್ರಸ್ತೆಯರಿಗೆ ನ್ಯಾಯ ಸಿಗಬಹುದೇ ಎಂಬುವುದು ಸಂಶಯಾಸ್ಪದವಾಗಿದೆ. 2011ರ ವರದಿಯ ಪ್ರಕಾರ, 2009ರಿಂದ 2011ರ ವರೆಗೆ 68,000ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ಸಂಬಂಧಿಸಿದ್ದು ಕೇವಲ 16,000 ಆರೋಪಿಗಳನ್ನು ಮಾತ್ರ ಶಿಕ್ಷೆಗೊಳಪಡಿಸಲಾಗಿದೆ. ಆದರೆ ವರದಿಯಾಗದಿರೋ ಪ್ರಕರಣಗಳೆಷ್ಟೋ?
ಮಹಿಳೆಯರೇ, ಹೆಣ್ಣು ಮಕ್ಕಳೇ, ಮೇಣದ ಬತ್ತಿಯ ಪ್ರತಿಭಟಣೆಗಳೇನೇ ಇದ್ದರೂ 6ಗಂಟೆಗೊಳಗೆ ಮುಗಿಸಿ ಬಿಡಿ ಏಕೆಂದರೆ ಕ್ರಮಗಳು ಸರಿಯಾಗುವವರೆಗೂ ಭಾರತದಲ್ಲಿ ನಾವು ಯಾರು ಸುರಕ್ಷಿತರಲ್ಲ. 2012ರ ದೆಹಲಿ ಮತ್ತು 2019ರ ಹೈದರಾಬಾದ್‍ನ ಈ ಎರಡೂ ಪ್ರಕರಣಗಳಲ್ಲಿ ಒಂದೇ ರೀತಿಯ ವಿಷಯವೇ ಕಂಡುಬರುತ್ತದೆ. ಎರಡರಲ್ಲಿಯೂ ಡ್ರೈವರ್‍ಗಳು ಮತ್ತು ಕ್ಲೀನರ್‍ಗಳು ಕುಡಿದವರೇ ಆಗಿದ್ದಾರೆ. ಆದ್ದರಿಂದ ಭಾರತದಾದ್ಯಂತ ಟ್ರಾಫಿಕ್ ಪೋಲಿಸರು ಎಲ್ಲಾ ಸಾರಿಗೆ ಚಾಲಕರ ಡ್ರೈವಿಂಗ್ ಲೈಸನ್ಸನ್ನು ಸರಿಯಾಗಿ ಪರಿಶೀಲಿಸಬೇಕು ಮತ್ತು ಲೈಸೆನ್ಸ್ ಇಲ್ಲದಿದ್ದಲ್ಲಿ, ಕುಡಿದು ಗಾಡಿ ಚಲಾಯಿಸುತ್ತಿದ್ದಲ್ಲಿ ಅಥವಾ ಕುಡಿದಿದ್ದಲ್ಲಿ ಅವರಿಗೆ ಕಠೋರ ಶಿಕ್ಷೆಯನ್ನು ನೀಡಬೇಕಾಗಿದೆ ಮತ್ತು ಜೀವನ ಪರಿಯಾಂತ ಡ್ರೈವಿಂಗ್ ಕೆಲಸವನ್ನು ಮಾಡಲು ಅನುಮತಿ ನೀಡಲೇಬಾರದು ಮತ್ತು ಟ್ರಾಫಿಕ್ ಪೋಲಿಸರಿಗೆ ನನ್ನದೊಂದು ಕೋರಿಕೆ ದಂಡ ವಸೂಲಿಯ ಹಿಂದೆ ಹೋಗದಿರಿ ಸರಿಯಾದ ರೀತಿಯ ಟ್ರಾಫಿಕ್ ನಿಯಮಗಳ ಅನುಷ್ಠಾನಕ್ಕೆ ತಯಾರಾಗಿ.
ಕ್ಯಾಂಡಲ್ ಹಚ್ಚೋದು ಅಥವಾ ಇನ್ಯಾವುದೋ ಪ್ರತಿಭಟನೆಗಳಿಂದ ಆಕೆಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ನನ್ನಲ್ಲಿಲ್ಲ. 2014ರ ಎನ್‍ಸಿಆರ್‍ಬಿ ವರದಿಯ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ಗಂಟೆಗೆ 4ರಿಂದ 5 ಅತ್ಯಾಚಾರ ಪ್ರಕರಣಗಳಾಗುತ್ತಿದೆ. 2014ರಲ್ಲಿ 36,975 ಅತ್ಯಾಚಾರಗಳಾಗಿದ್ದು, ಅದರಲ್ಲಿ 2,361 ಸಾಮೂಹಿಕ ಅತ್ಯಾಚಾರಗಳೇ ಆಗಿದೆ. ಶೇ.31ರಷ್ಟು ಕೇಸ್‍ಗಳು ಕೋರ್ಟಿನಲ್ಲಿ ಉಳಿದಿದ್ದು ಶೇ. 28 ಕೇಸ್‍ಗಳಿಗೆ ಶಿಕ್ಷೆಯಾಗಿದೆ. ಆದರೆ ನಮ್ಮ ದುರಾದೃಷ್ಟವೇನೆಂದರೆ, ಶೇ. 86ರಷ್ಟು ಪ್ರಕರಣಗಳು ಪೋಲಿಸ್ ಸ್ಟೇಷನ್‍ನಲ್ಲಿ ದಾಖಲಾದರೂ, ಇನ್ನೂ ವಿಚಾರಣೆ ಶುರುವಾಗುತ್ತಿಲ್ಲ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಂತೂ ಅಲ್ಲ. ನಮ್ಮ ದೇಶದಲ್ಲಿ ಇನ್ನೂ ಎಷ್ಟು ವಿಕೃತ ಮನುಷ್ಯರಿದ್ದಾರೆ ಎಂದರೆ ಇದಕ್ಕೆಲ್ಲ ಜಾತಿ, ಧರ್ಮ ಮತ್ತು ರಾಜಕೀಯವೆಂಬುವುದನ್ನು ತರುತ್ತಾರೆ. ನಮ್ಮ ಮನೆಯವಳಾದರೇನು ನಿಮ್ಮ ಮನೆಯವಳಾದರೇನು? ಆಕೆ ಹೆಣ್ಣೆ ಅಲ್ವೇ?

LEAVE A REPLY

Please enter your comment!
Please enter your name here