ಹುಚ್ಚು ಮನಸ್ಸಿನ ಸಾವಿರ ಮುಖಗಳು01

  • ಯೋಗೇಶ್ ಮಾಸ್ಟರ್, ಬೆಂಗಳೂರು

ಮನಸ್ಸೆಂಬುದು ಮಹಾಸಮುದ್ರ. ಅದರ ಆಳ, ರಭಸ, ಸೆಳೆತ, ಏರಿಳಿತ ಎಲ್ಲವೂ ಭಯಂಕರ ಚಂಡಮಾರುತಗಳನ್ನು ಸೃಷ್ಟಿಸುವವೇ ಆಗಿವೆ.
ನಿಮ್ಮ ಗಮನಕ್ಕಿರಲಿ; ಭಾವನೆಗಳಾಗಲಿ, ವಿಚಾರಗಳಾಗಲಿ, ಸಂಗತಿಗಳಾಗಲಿ ನಕಾರಾತ್ಮಕವಾಗಿರುವುದು ಹೆಚ್ಚು ಬಲಶಾಲಿಯಾಗಿರುತ್ತದೆ.

ಭಯ, ಆಘಾತ, ಸಾಮಾಜಿಕ ಜೀವನದಲ್ಲಿ ಸಮಸ್ಯೆ, ಸಂಬಂಧಗಳಲ್ಲಿ ಒಡಕು; ಅಷ್ಟೇ ಏಕೆ? ಕೆಟ್ಟ ಆಲೋಚನೆಗಳು, ನೋವಿನ ಭಾವನೆಗಳು, ಕೆಟ್ಟ ಪೋಷಕರು, ಒರಟು ಶಿಕ್ಷಕರು, ಹಳಸಿದ ಸಂಬಂಧಗಳು, ನಕಾರಾತ್ಮಕ ಪ್ರತಿಕ್ರಿಯೆಗಳು; ಇವುಗಳೇ ಒಳ್ಳೆಯ ಭಾವನೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುವುದು. ನಕಾರಾತ್ಮಕ ಪ್ರಕ್ರಿಯೆಗಳು ಹೆಚ್ಚು ಗಮನವಹಿಸಲಿಲ್ಲವೆಂದರೂ ಅದು ತಾನೇ ಚೆನ್ನಾಗಿ ಗಟ್ಟಿಯಾಗಿ ನೆಲೆಗೊಳ್ಳುತ್ತಾ ಹೋಗುತ್ತದೆ. ಮನಸ್ಸು ಹೊಗಳಿದ್ದನ್ನು ಮೆಚ್ಚಿದ್ದನ್ನು ಬೇಗನೆ ಮರೆತುಬಿಡುತ್ತದೆ. ಆದರೆ, ಅಪಮಾನಿಸಿದ್ದು, ಅನುಮಾನಿಸಿದ್ದು ಮರೆಯದು. ಒಳಿತು ಮತ್ತು ಕೆಡಕು ಎಂಬ ಎರಡು ಭಿನ್ನ ಪ್ರಭಾವ ಮತ್ತು ಪ್ರತಿಮೆಗಳನ್ನು ಮುಂದಿಟ್ಟುಕೊಂಡೇ ಗಮನಿಸಿದರೆ, ಕೆಡುಕಿನ ಪ್ರಭಾವ, ಕೆಟ್ಟ ಮಾದರಿಗಳು (ಸ್ಟಿರಿಯೋ ಟೈಪ್) ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತು ಬೇಗನೆ ಹರಡುವುದಕ್ಕೆ ಸಾಧ್ಯವಾಗುತ್ತದೆ.
ವ್ಯಕ್ತಿಯ ದೌರ್ಬಲ್ಯವೇ ಹೆಚ್ಚು ಬಲಶಾಲಿ ಎಂದರೆ ಪ್ರಾಮಾಣಿಕವಾಗಿ ಆತ್ಮವಿಶ್ಲೇಷಣೆ ಮಾಡಿಕೊಳ್ಳುವ ಬಹುಪಾಲು ಮಂದಿ ಒಪ್ಪಲು ಸಾಧ್ಯ.

ಮನಶಾಸ್ತ್ರೀಯವಾಗಿಯೂ ಕೂಡಾ ಕೆಡುಕಿನ ಮನಸ್ಸು ಅಥವಾ ನಕಾರಾತ್ಮಕ ಧೋರಣೆಯ ಮನಸ್ಸೇ ಹೆಚ್ಚು ಶಕ್ತಿಶಾಲಿ ಎಂಬುದನ್ನು ಅಲ್ಲಗಳೆಯಲಾಗದು.
ಆದರ್ಶವಾದ ವ್ಯಕ್ತಿತ್ವಗಳ, ಮಾದರಿಯಾಗುವ ಮಹಾತ್ಮರ ಗುಣಗಾನ ಮಾಡಲು ಈ ಬರಹವೊಲ್ಲದು. ಸಂತರ, ಮಹಾತ್ಮರ ಎಟುಕಿಸಿಕೊಳ್ಳಲಾಗದ ಭವ್ಯ ಸ್ವರೂಪಗಳ ಆರಾಧನೆಗಳಿಂದಾಗಿ ಆರಾಧನಾ ಮಂದಿರಗಳಾಗುತ್ತಿವೆಯೇ ಹೊರತು, ಮದ್ಭಕ್ತರ ವಿರಾಟ್ ಸಭೆಗಳು ವಿಸ್ತಾರವಾಗುತ್ತಿವೆಯೇ ಹೊರತು ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಮಾನಸಿಕ ಆರೋಗ್ಯವನ್ನು ಪಡೆಯಲಾಗಿಲ್ಲ. ಆ ಆರೋಗ್ಯವಂತ ಮನಸ್ಥಿತಿ ಇಲ್ಲದೇ ಒಳಗೂ ಮತ್ತು ಹೊರಗೂ ಶಾಂತಿಯಿಲ್ಲ. ಹಾಗಾಗಿ ಈಗ ಇಲ್ಲಿ ನಕಾರಾತ್ಮಕ ಅಥವಾ ಕೇಡಿನ ಪ್ರತಿಮೂರ್ತಿಗಳದ್ದೇ ತಪಸ್ಸು. ನಮ್ಮ ಮುಂದೆ ನಮ್ಮತನವನ್ನು ತೋರಿಸುವ ಮುಖಗನ್ನಡಿಗಳು ಬೇಕಾಗಿವೆ.
ಧರ್ಮ ಮತ್ತು ತಾತ್ವಿಕತೆಗಳು ನೈತಿಕತೆಯನ್ನು ಎತ್ತಿ ಹಿಡಿಯುತ್ತಾ ಸಾವಿರಾರು ವರ್ಷಗಳ ಪ್ರಯತ್ನ ಮಾಡಿದ್ದರೂ ಮನುಷ್ಯನ ಜೀವನದಲ್ಲಿ ಇಂದಿಗೂ ಒಳಿತು ಮತ್ತು ಕೆಡುಕಿನ ಸಂಘರ್ಷದಲ್ಲಿ ಕೆಡುಕಿಗೇ ಜಯ. ಸತ್ಯಕ್ಕೇ ಜಯ ಅಥವಾ ಒಳ್ಳೆಯದೇ ಗೆಲ್ಲುವುದು ಎಂಬುದೆಲ್ಲಾ ಭರವಸೆಯ ಎಳೆಯ ಕಿರಣಗಳಾಗಿಯೇ ಇವೆ. ಕೆಡುಕೆಂಬುದೇ ವಿಜೃಂಭಿಸಿ ಜ್ವಲಿಸುತ್ತಿರುವುದಕ್ಕೆ ನಾವು ಜ್ವಲಂತ ಸಾಕ್ಷಿಗಳೇ ಆಗಿದ್ದೇವೆ.

ಸೂಕ್ಷ್ಮವಾಗಿ ಗಮನಿಸಿ, ನಮ್ಮ ಆಸೆಯ ಸೆಳೆತ, ವ್ಯಸನ, ತಡೆಯಲಾರದ ಕೋಪ, ಅದುಮಿಟ್ಟುಕೊಳ್ಳಲಾಗದ ದ್ವೇಷ, ಗುಪ್ತವಾದ ವ್ಯಾಮೋಹಗಳು; ಎಷ್ಟೊಂದು ವಿಷಯಗಳನ್ನು ನಾವಾಗಿಯೇ ಬಿಡಬೇಕೆಂದು ಬಯಸುತ್ತಿದ್ದರೂ ಅವು ನಮ್ಮನ್ನು ಬಿಡದೇ ಸತಾಯಿಸುತ್ತಿರುವವು. ಎಷ್ಟೋ ಬಾರಿ ನಮ್ಮ ಕೋಪ, ವ್ಯಸನಗಳಂತಹ ಹಲವು ವಿಷಯಗಳನ್ನು ಹೊರಗೆ ಸಮರ್ಥಿಸಿಕೊಂಡರೂ ನಮ್ಮೊಳಗೆ ಅದು ನಮಗೇ ಬೇಡವಾಗಿರುವಂತವೇ ಆಗಿರುತ್ತವೆ. ಆದರೆ ಅವನ್ನು ಇಲ್ಲವಾಗಿಸಿಕೊಳ್ಳಲು ಸಾಧ್ಯವೇ ಆಗದು. ಅದೇ ಸಮಸ್ಯೆ. ವ್ಯಕ್ತಿಯೊಳಗೇ ಮಹಾ ಸಂಘರ್ಷ ನಡೆಯುತ್ತಿರುತ್ತದೆ. ಮನಸ್ಸಿನ ಮಹಾಸಮುದ್ರದಲ್ಲಿ ನಡೆಯುವ ಈ ಸಂಘರ್ಷದ ಮಥನದಿಂದಾಗಿ ಉಬ್ಬರವಿಳಿತಗಳು ಅಬ್ಬರಿಸುತ್ತಿರುತ್ತವೆ. ಇಂಥಾ ಹುಚ್ಚು ಉಬ್ಬರವಿಳಿತದ ಮನಸ್ಸಿನ ಅನೇಕಾನೇಕ ಅಲೆಗಳು ನಮ್ಮ ಮತ್ತು ನಮ್ಮವರ ಮುಖಗಳಾಗಿ ಪ್ರತಿಫಲಿಸುತ್ತಿರುತ್ತವೆ.
ಇದೇ ಹುಚ್ಚುಮನಸ್ಸಿನ ಸಾವಿರ ಮುಖಗಳು.

ಈ ಸರಣಿಯಲ್ಲಿ ಸಾವಿರ ಮುಖಗಳ ದರ್ಶನವಾಗುವಾಗ ನಮ್ಮ ಮುಖವು ಕನ್ನಡಿಯ ಪ್ರತಿಫಲನದಂತೆ ಕಂಡರೆ ಎಚ್ಚೆತ್ತುಕೊಂಡು ಬಿಡೋಣ. ಹಮ್ಮುಬಿಮ್ಮುಗಳಿಲ್ಲದೇ ನಮ್ಮನ್ನು ನಾವು ನೋಡಿಕೊಂಡರೆ ನಮ್ಮದೇ ಮನಸ್ಸಿನ ಹುಚ್ಚುತನವನ್ನು ಬಿಚ್ಚುಮನದಿಂದ ಸ್ವಸ್ಥಗೊಳಿಸಿಕೊಳ್ಳಲು ಸಾಧ್ಯವೇನೋ. ನೋಡೋಣ.
(ಮುಂದುವರಿಯುವುದು)

LEAVE A REPLY

Please enter your comment!
Please enter your name here