(ಸ್ಮರಣೆ)

  • ರಿಯಾಝ್ ಅಹ್ಮದ್ ರೋಣ

ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ವಲಯ ಸಂಚಾಲಕರು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಇದರ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರೂ ಇಸ್ಲಾಮಿಯಾ ಅರಬಿಕ್ ಕಾಲೇಜ್ ಮನ್ಸೂರಾ ಇದರ ಪ್ರಿನ್ಸಿಪಾಲ್‌ರಾಗಿದ್ದಂತಹ ಹಿರಿಯ ಜೀವಿ ನಮ್ಮೆಲ್ಲರ ನೆಚ್ಚಿನ ಮುನವ್ವರ್ ಪಾಶಾ ಸಾಹಬ್ ಅವರ ಅಕಾಲಿಕ ನಿಧನ ನಮ್ಮೆಲ್ಲರನ್ನು ದುಖಕ್ಕೀಡು ಮಾಡಿದೆ. ಸರ್ವಶಕ್ತನಾದ ಅಲ್ಲಾಹನು ಅವರಿಗೆ ಸ್ವರ್ಗದ ಅತ್ಯುನ್ನತ ಸ್ಥಾನವನ್ನು ದಯಪಾಲಿಸಲಿ. ಆಮೀನ್

ನಾವು ಬದುಕುತ್ತಿರುವ ಈ ಸಮಾಜದಲ್ಲಿ ಒಬ್ಬ ವ್ಯಕ್ತಿ ಅವನ ಸಂಪತ್ತು ಅಥವಾ ಅಧಿಕಾರಕ್ಕಿಂತಲೂ ಮಿಗಿಲಾಗಿ ನಾಲ್ಕು ಜನರ ನಡುವೆ ಗುರುತಿಸಲ್ಪಡುವುದು ಅವನ ಸಚ್ಯಾರಿತ್ರ್ಯದಿಂದಾಗಿದೆ. ಈ ಲೋಕದಲ್ಲಿ ಇತರ ಯಾವ ವಸ್ತುವಾಗಲಿ ಅದು ಮನುಷ್ಯನಿಗೆ ಸುಲಭವಾಗಿ ಸಿಗಬಹುದು ಅಥವಾ ಸಿಗದೇ ಇರಬಹುದು ಆದರೆ ಒಬ್ಬ ವ್ಯಕ್ತಿ ಉತ್ತಮ ನಡವಳಿಕೆಯನ್ನು ತನ್ನದಾಗಿಸಿಕೊಳ್ಳಬೇಕಾದರೆ ಅದು ತುಂಬ ಪರಿಶ್ರಮದ ಮಾರ್ಗವಾಗಿದೆ. ಹಗಲಿರಳು ಪ್ರತಿಕ್ಷಣ ತನ್ನ ಚಿತ್ತದ ದುಷ್ಪ್ರರಣೆಯ ವಿರುದ್ಧ ಹೋರಾಡುತ್ತ ತನ್ನನ್ನು ಸದಾ ಅವಲೋಕನಕ್ಕೆ ಒಡ್ಡಬೇಕಾಗುತ್ತದೆ. ಜೊತೆಗೆ ತನ್ನ ಕರ್ಮಗಳಿಗೆ ತಾನು ಜವಾಬ್ದಾರನಾಗಿರುವೆನೆಂಬ ಪ್ರಜ್ಞೆ ಅವನಲ್ಲಿ ಸದಾ ಮನೆಮಾಡಿರಬೇಕು. ಮುನವ್ವರ್ ಪಾಶಾ ಅವರ ಬದುಕು ಸಚ್ಚಾರಿತ್ರ್ಯದಿಂದ ಕೂಡಿತ್ತು ಸದಾ ಲವಲವಿಕೆಯಿಂದ ಇರುತ್ತಿದ್ದ ಅವರು ಇತರರ ನೋವವನ್ನು ತನ್ನ ನೋವಾಗಿ ಇತರರ ಕಷ್ಟಗಳನ್ನು ತನ್ನ ಕಷ್ಟವಾಗಿ ಕಾಣುವಷ್ಟು ವಿಶಾಲ ಹೃದಯ ತನ್ನದಾಗಿಸಿಕೊಂಡಿದ್ದರು. ಈ ಲೋಕದಲ್ಲಿ ಅನೇಕರು ತಮಗಾಗಿ ಅಥವಾ ಹೆಚ್ಚೆಂದರೆ ತನ್ನ ಮಡದಿ ಮಕ್ಕಳಿಗಾಗಿ ಮಾತ್ರ ಬದುಕುತ್ತಾರೆ. ಆದರೆ ಮುನವ್ವರ್ ಸಾಬ್ ಬದುಕಿದರು ತನ್ನಂತೆ ಇರುವ ಸಹ ಜೀವಿಗಳಿಗಾಗಿ ದೇವನ ದಾಸರ ಸೇವೆ ಆರೈಕೆ ಹಾಗೂ ಕಾಳಜಿ ಅವರ ಜೀವನದ ಪರಮ ಗುರಿಯಾಗಿತ್ತು. ಇಸ್ಲಾಮಿಯಾ ಅರೆಬಿಕ್ ಕಾಲೇಜ್ ಮನ್ಸೂರಾ ಇದರ ಪ್ರಾಂಶುಪಾಲರಾಗಿದ್ದ ಸಂದರ್ಭ ಅದು ಆಗಿನ ಕಾರ್ಯದರ್ಶಿಯಾಗಿದ್ದ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ ಕರ್ನಾಟಕ ಇದರ ಕಾರ್ಯಕಾರಣಿ ಸಮಿತಿ ಸದಸ್ಯರಾಗಿರುವ ಸಹೋದರ ತಾಹಿರ್ ಹುಸೇನ ಅವರು ‘ನಾನು ಯಾವಾಗಲೂ ಅವರನ್ನು ಸಂಸ್ಥೆಯ ಬೇಳವಣಿಗೆಗಾಗಿ ಹಗಲಿರಳು ದುಡಿಯುವ ಓರ್ವ ಪ್ರಾಮಾಣಿಕ ಹೊಣೆಗಾರನಾಗಿ ಕಂಡಿದ್ದೇನೆ, ಬೆಳಗಿನ ಜಾವ ನಾಲ್ಕು ಘಂಟೆಗೆ ಎದ್ದು ಸ್ವತಃ ಹಾಸ್ಟೇಲ್‌ಗೆ ತಲುಪಿ ಮಕ್ಕಳನ್ನು ಎಚ್ಚರಗೊಳಿಸುತ್ತಿದ್ದರಲ್ಲದೇ ರಾತ್ರಿ ದೀರ್ಘ ಸಮಯದ ವರೆಗೂ ಕ್ಯಾಂಪಸ್‌ನ ಮೇಲ್ವಿಚಾರಣೆಯನ್ನು ನಡೆಸುತ್ತಿದ್ದರು. ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಗಮನ ಹರಿಸುತ್ತ ಅವರಿಗೆ ನೆರವಾಗುತ್ತಿದ್ದರು. ಅವರೋರ್ವ ಅತ್ಯುತ್ತಮ ತರಬೇತುದಾರರಾಗಿದ್ದರು. ಮನ್ಸೂರಾ ಕಾಲೇಜಿನ ಘನತೆಯನ್ನು ಎತ್ತಿ ಹಿಡಿಯುವ ಮತ್ತು ಅದಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುವಲ್ಲಿ ಅವರ ಪಾತ್ರ ಬಹಳ ಪ್ರಮುಖವಾದುದು. ಯಾವುದೇ ಸಮಸ್ಯೆ ಎದುರಾದರೂ ಅದಕ್ಕವರು ಎದೆಗುಂದದೇ ಧೈರ್ಯದಿಂದ ಎದುರಿಸುತ್ತಿದ್ದರಲ್ಲದೇ ಸದಾ ತಮ್ಮ ಸೈದ್ದಾಂತಿಕ ನಿಲುವಿಗೆ ಅಂಟಿಕೊಂಡಿರುತ್ತಿದ್ದರು. ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಸಂಸ್ಥೆಯ ಕಾರ್ಯದಲ್ಲಿಯೂ ಬಹಳ ಉತ್ಸುಕರಾಗಿ ಅವರು ಸಹಕರಿಸುತ್ತಿದ್ದರಲ್ಲದೇ ಇದರ ಸಂದೇಶವನ್ನು ರಾಜ್ಯದ ಉದ್ದಗಲಕ್ಕೂ ತಲುಪಿಸುವ ತುಡಿತ ಅವರಲ್ಲಿ ಮನೆಮಾಡಿತ್ತು. ಅವರೊಟ್ಟಿಗೆ ನಿಕಟ ಸಂಪರ್ಕವನ್ನು ಹೊಂದಿದ್ದು ನನ್ನ ಅದೃಷ್ಟವೇ ಸರಿ’ ಈ ನಿಟ್ಟಿನಲ್ಲಿ ಮುನವ್ವರ್ ಸಾಬ್ ಅವರ ಸೇವೆಯನ್ನು ಎಂದೂ ಮರೆಯಲಾಗದು ಎಂದು ನೆನೆಯುತ್ತಾರೆ ಅವರಿಂದ ಪ್ರಯೋಜನ ಪಡೆದ ಸಾವಿರಾರು ವಿದ್ಯಾರ್ಥಿಗಳು ಇಂದು ಅವರ ನಿಧನದಿಂದಾಗಿ ಕಂಬಿನಿ ಮಿಡಿದಿದ್ದಾರೆ.

ದಾವಣಗೆರೆಯ ಓರ್ವ ಶಿಷ್ಯ ಅಬ್ದುಸ್ಸಲಾಮ್ ಮನ್ಸೂರಿ ಅವರನ್ನು ನೆನೆಯುತ್ತ ‘ಮುನವ್ವರ್ ಸಾಬ್ ಅವರು ಕೇವಲ ಬೋಧಕರಾಗಿರದೆ ಓರ್ವ ನಿಷ್ಟಾವಂತ ಕಾಳಜಿವುಳ್ಳ ತರಬೇತುದಾರರಾಗಿದ್ದರು. ಆ ದಿನಗಳಲ್ಲಿ ನಾವು ಮನೆಯ ವಾತಾವರಣವನ್ನು ಬಿಟ್ಟು ಒಮ್ಮೆಗೆ ಮನ್ಸೂರಾ ಪ್ರಯಾಣ ಬೆಳಸಿದಾಗ ತಮ್ಮವರಿಂದ ದೂರಾಗಿ ಏಕಾಂತ ಕಾಡುತ್ತಿದ್ದದಲ್ಲದೇ ತಂದೆ ತಾಯಿಯರ ನೆನಪಿನಿಂದಾಗಿ ನಮ್ಮ ಹೃದಯಗಳು ಭಾರವಾಗಿರುತ್ತಿತ್ತು. ಮನ್ಸೂರಾದಲ್ಲಿ ಮುನವ್ವರ್ ಪಾಶಾ ಸರ್ ನಮಗೆ ಮಾತಾಪಿತರ ನೆನಪು ಕಾಡದಂತೆ ನೋಡಿಕೊಂಡದ್ದು ಎಂದೂ ಮರೆಯಲಾಗದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಿದ್ದತೆಯ ಆ ವೇಳೆಯಲ್ಲಿ ವಿದ್ಯಾರ್ಥಿಗಳ ಕಾಳಜಿಯ ಕಾರಣದಿಂದಾಗಿ ಅವರು ಬೆಳಗ್ಗಿನ ಜಾವ ನಾಲ್ಕು ಘಂಟೆಗೆ ನಮ್ಮಲ್ಲಿಗೆ ನೇರವಾಗಿ ಆಗಮಿಸಿ ಎಚ್ಚರಿಸುತ್ತಿದ್ದರಲ್ಲದೇ ತಹಜ್ಜುದ್ ನಮಾಝ್‌ನೊಂದಿಗೆ ದಿನದ ಓದು ಪ್ರಾರಂಭಗೊಳ್ಳುವಂತೆ ನೋಡಿಕೊಳ್ಳುತ್ತಿದ್ದರು. ಓರ್ವ ತಾಯಿಯ ಪ್ರೀತಿ ತಂದೆಯಂತಹ ಕನಿಕರ ನಾವು ಅವರಲ್ಲಿ ಕಂಡೆವು ಎಂದು ಅವರನ್ನು ದುಖಿಃತರಾಗಿ ನೆನೆಯುತ್ತ ಹೃದಯದ ಅಂತರಾಳದಿಂದ ಅವರಿಗಾಗಿ ಪ್ರಾರ್ಥಿಸುತ್ತಾರೆ. ಇಸ್ಲಾಮೀ ಆಂದೋಲನದ ಪ್ರಜ್ಞೆ ಹಾಗೂ ನಡುವಳಿಕೆ ಅವರಲ್ಲಿ ಮನೆಮಾಡಿತ್ತು. ಉರ್ದು ಮತ್ತು ಆಂಗ್ಲ ಭಾಷೆಯಲ್ಲಿ ಅವರಿಗೆ ಸಾಕಷ್ಟು ಹಿಡಿತವಿದ್ದು ಅವರು ಓರ್ವ ಉತ್ತಮ ಭಾಷಣಗಾರರಾಗಿ ಗುರುತಿಸಲ್ಪಡುತ್ತಿದ್ದರು. ಪವಿತ್ರ ಕುರ್‌ಆನ್ ಆಳವಾಗಿ ಅಧ್ಯಯನ ನಡೆಸುವ ಪರಿಪಾಠ ಅವರದ್ದಾಗಿತ್ತಲ್ಲದೇ ಅವರ ಭಾಷಣಗಳಲ್ಲಿ ಅದರ ಪ್ರಭಾವ ನಾವು ಕಾಣಬಹುದಾಗಿತ್ತು. ಬಿ.ಐ.ಇ ಮೇಲ್ನೋಟದಲ್ಲಿದ್ದ ರಾಜ್ಯ ಶಾಲಾ ಪರಿಶೀಲನಾ ಸಮಿತಿಯ ಸಂಚಾಲಕರಾಗಿದ್ದ ಮುನವ್ವರ್ ಪಾಶಾ ಸಾಹಬ್‌ರ ಜೊತೆ ಕಾರ್ಯ ನಿರ್ವಹಿಸುವ ಸಂದರ್ಭ ನನಗೆ ಒದಗಿ ಬಂದಿತ್ತು. ಜಮಾಅತಿನ ಶಿಕ್ಷಣ ಸಂಸ್ಥೆಗಳ ಪರೀಶಿಲನೆಗಾಗಿ ವಿವಿಧೆಡೆ ಪ್ರಯಾಣ ಬೆಳೆಸುವ ಆ ಸಂದರ್ಭದಲ್ಲಿ ನಾನು ಅವರನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಅಂತಹ ಇಳಿವಯಸ್ಸಿನಲ್ಲಿಯೂ ಯುವಕನಂತಹ ಉತ್ಸಾಹ ಅವರಲ್ಲಿ ಕಂಡು ನಾನು ಚಕಿತನಾದೆ. ಶಿಸ್ತು ಸಂಯಮ ನಿರಂತರ ಪರಿಶ್ರಮದ ಅವರ ವ್ಯಕ್ತಿತ್ವ ಎಲ್ಲರ ಆಕರ್ಷಿಣೆಯ ಕೇಂದ್ರ ಬಿಂದುವಾಗಿದ್ದರು.

ಒಮ್ಮೆ ಬಾಗಲಕೋಟೆಯ ಒಂದು ಶಾಲೆಗೆ ಭೇಟಿ ನೀಡಿದಾಗ ಬೆಳಗಿನ ಪ್ರಾರ್ಥನೆಯಲ್ಲಿ ಎಲ್ಲರೊಟ್ಟಿಗೆ ನಮ್ಮ ತಂಡ ಪಾಲ್ಗೊಂಡಿತ್ತು ಪ್ರಾರ್ಥನೆಯ ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರಿಗೆ ಅಭಿಸಂಬೋದಿಸಬೇಕಾಗಿತ್ತು ಆದರೆ ಅಲ್ಲಿ ಶಿಕ್ಷಕರನ್ನೊಳಗೊಂಡಂತೆ ನಾವೆಲ್ಲ ನೆರಳಿನಲ್ಲಿ ನಿಂತಿದ್ದರೆ ಎಲ್ಲ ಮಕ್ಕಳು ಬಿಸಿಲಿನ ತಾಪದಲ್ಲಿ ನಿಂತು ತೊಂದರೆಯನ್ನನುಭವಿಸುತ್ತಿದ್ದುದನ್ನು ಗಮನಿಸಿದ ಮುನವ್ವರ್ ಪಾಶಾ ಅವರು ಮುಖ್ಯೋಪಾಧ್ಯಾಯರನ್ನುದ್ದೇಶಿಸಿ ನಾಳೆಯಿಂದ ತಾವೆಲ್ಲ ಎಲ್ಲಿ ನಿಂತು ಪ್ರಾರ್ಥಿಸುತ್ತೀರೋ ಮಕ್ಕಳನ್ನು ಸಹ ಅಂತಹದೇ ನೆರಳಿನ ಜಾಗದಲ್ಲಿ ನಿಲ್ಲಿಸಿ ಪ್ರಾರ್ಥನೆಯ ವ್ಯವಸ್ಥೆ ಮಾಡಿ ಅದು ಸಾಧ್ಯವಾಗದಿದ್ದರೇ ಅವರವರ ತರಗತಿಯಲ್ಲಿಯೇ ಅದನ್ನು ನೆರವೇರಿಸುವಂತೆ ನೋಡಿಕೊಳ್ಳಿ ಎಂದು ನುಡಿದಂತಹ ಸಂದರ್ಭ ಇಂದಿಗೂ ಕೂಡಾ ನನ್ನ ಸ್ಮೃತಿಪಟಲದಲ್ಲಿದೆ. ಶಾಲೆ ಪರೀಶಿಲನೆಯ ಬಳಿಕ ಅಲ್ಲಿಯ ಸಿಬ್ಬಂದಿ ವರ್ಗ ಹಾಗೂ ಆಡಳಿತ ಸಮಿತಿಯ ಸದಸ್ಯರು ಅವರಿಂದ ತುಂಬ ಪ್ರಭಾವಿತರಾಗಿ ಇಂತಹ ಪ್ರಯೋಜ ಪಡೆದದಕ್ಕಾಗಿ ಕೃತಜ್ಞೆಯನ್ನು ಸಲ್ಲಿಸುತ್ತಿದ್ದವು. ಅವರ ಹೃದಯದಂತೆ ಅವರ ಮನೆಯು ಕೂಡಾ ತುಂಬಾ ವಿಶಾಲವಾಗಿತ್ತು. ಅತಿಥಿ ಸತ್ಕಾರದ ವಿಷಯದಲ್ಲಂತು ಅವರು ನಮಗೆಲ್ಲ ಮಾದರಿಯಾಗಿದ್ದರೆಂದರೆ ಅತೀಶಯೋಕ್ತಿಯಾಗದು, ಜಮಾಅತಿನ ಹೊಣೆಗಾರರು ಮೈಸೂರಿಗೆ ಭೇಟಿ ನೀಡಿದಾಗಲೆಲ್ಲ ಸಾಮಾನ್ಯವಾಗಿ ಅವರ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರು. ನಾನೊಮ್ಮೆ ಅವರ ಮನೆಯಲ್ಲಿ ತಂಗಿದ್ದ ಸಂದರ್ಭ ಅವರು ತೋರಿಸಿದ ಕಾಳಜಿ ಇಂದಿಗೂ ಕೂಡಾ ಮರೆಯಲಾಗದು. ವಯಸ್ಸಿನಲ್ಲಿ ನನಗಿಂತ ಸಾಕಷ್ಟು ಹಿರಿಯರಾಗಿದ್ದರೂ ಅವರು ತೋರ್ಪಡಿಸುತ್ತಿದ್ದ ಗೌರವ ಒಂದು ಕ್ಷಣ ನಮ್ಮನ್ನು ಪುಳುಕಿತರನ್ನಾಗಿಸುತ್ತಿತ್ತು. ಶ್ರೀಮಂತಿಕೆ ಎಂಬುದು ಸಂಪತ್ತಿನ ಶ್ರೀಮಂತಿಕೆಯಲ್ಲ ಹೃದಯದ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆ ಎಂಬ ಪ್ರವಾದಿ(ಸ) ಅವರ ವಚನದಂತೆ ಅವರು ಬದುಕಲು ಸದಾ ಪ್ರಯತ್ನಿಸುವ ವ್ಯಕ್ತಿತ್ವ ಅವರದ್ದಾಗಿತ್ತು.ಆ ಅಲ್ಲಾಹನು ಅವರ ಸೇವೆಗಳನ್ನು ಸ್ವೀಕರಿಸಿ ಕುಂದುಕೊರತೆಗಳನ್ನು ಕ್ಷಮಿಸಿ ಸ್ವರ್ಗದ ಅತ್ಯುನ್ನತ ಸ್ಥಾನವನ್ನು ದಯಪಾಲಿಸಲಿ ಎಂಬ ಪ್ರಾರ್ಥನೆ ನಮ್ಮದು. ಆಮೀನ್

LEAVE A REPLY

Please enter your comment!
Please enter your name here