ನಾಯಕತ್ವದ ಗುಣಗಳು – ಭಾಗ 5

  • ಅಬೂಕುತುಬ್

ನಾಯಕ ಮತ್ತು ಅನುಯಾಯಿಗಳ ಸಂಬಂಧವು ಯಾಂತ್ರಿಕವಾಗಿದ್ದರೆ ಅಲ್ಲಿ ಆಜ್ಞೆಗೆ ಹೆಚ್ಚು ಒತ್ತು ಕೊಡುತ್ತಾರೆ. ಸಂಘಟನೆ ಎಂದರೆ ಒಂದು ಕಾರ್ಪೊರೇಟ್ ಕಂಪೆನಿಯಲ್ಲ. ಕಂಪೆನಿಯಲ್ಲಿ ಒಬ್ಬ ಬಾಸ್ ಇನ್ನೊಬ್ಬ ನೌಕರ ಇರುತ್ತಾನೆ. ಅಲ್ಲಿ ಹಣ ಸಂಬಳಕ್ಕಾಗಿ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ಅಲ್ಲಿ ಯಜಮಾನ ಗುಲಾಮ ಸಂಸ್ಕೃತಿ ಪರೋಕ್ಷವಾಗಿ ಮೇಳೈಸುತ್ತದೆ.

ಆದರೆ ಒಂದು ಉತ್ತಮ ಸಂಘಟನೆಯಲ್ಲಿ ನಿಸ್ವಾರ್ಥ ಕಾರ್ಯಕರ್ತರೇ ಅದರ ಬಂಡವಾಳ. ಯಾವುದೇ ಸ್ವಾರ್ಥ ಇಲ್ಲದೆ ಕೇವಲ ದೇವ ಸಂಪ್ರೀತಿಗಾಗಿ ಕೆಲಸ ಮಾಡುವ ಕಾರ್ಯಕರ್ತರ ಮುಂದೆ ಬಾಸ್ ಮತ್ತು ನೌಕರರ ಸಂಬಂಧ ಬಂದರೆ ಮತ್ತೆ ಆ ಸಂಘಟನೆ ಹೆಚ್ಚು ಕಾಲ ಉಳಿಯುವುದಿಲ್ಲ.

ನಿಜವಾಗಿ ಇಸ್ಲಾಮಿನಲ್ಲಿ ನಾಯಕತ್ವ ಎಂಬುದು ಒಂದು ಅಹಂ ಅಥವಾ ಆಜ್ಞೆ ಕೊಡುವ ಪೋಸ್ಟ್ ಅಲ್ಲ. ಬದಲಾಗಿ ನಾಯಕತ್ವ ಎಂಬುದು ಒಂದು ಮಹತ್ತರ ಜವಾಬ್ದಾರಿ ಆಗಿದೆ. ಆ ಜವಾಬ್ದಾರಿ ಎಷ್ಟು ಚೆನ್ನಾಗಿ ನಿಭಾಯಿಸುತ್ತಾರೆ ಅಷ್ಟೇ ಅವರ ವಿಚಾರಣೆ ನಾಳೆ ಪರಲೋಕದಲ್ಲಿ ಸುಲಭ ಆಗುತ್ತದೆ. ಎಷ್ಟು ಆಲಸ್ಯ ಅಹಂಕಾರ ಪಡುತ್ತಾರೆ ಅಷ್ಟೇ ಅವರ ವಿಚಾರಣೆ ಕಠಿಣ ಆಗುತ್ತಾ ಹೋಗುತ್ತದೆ‌. ಸಂಘಟನಯಲ್ಲಿ ಜವಾಬ್ದಾರಿಯ ವಿಂಗಡನೆಯೇ ಹೊರತು ಮೇಲು ಕೀಳು ಎಂಬುದಿಲ್ಲ. ನಾಯಕ ವೇದಿಕೆಯ ಮೇಲೆ ಕೂರುವುದು ಒಂದು ಜವಾಬ್ದಾರಿಯ ಸಂಕೇತ. ಹಾಗೆಯೇ ಅನುಯಾಯಿಗಳು ವೇದಿಕೆಯ ಮುಂಭಾಗದಲ್ಲಿ ಕೂರುವುದೂ ಇನ್ನೊಂದು ರೀತಿಯ ಜವಾಬ್ದಾರಿಯಾಗಿದೆ. ಯಾರು ಉತ್ತಮವಾಗಿ ತನ್ನ ಜವಾಬ್ದಾರಿ ನಿರ್ವಹಿಸುತ್ತಾರೆ ಎಂಬುದೇ ಅಲ್ಲಾಹನ ಮುಂದೆ ಪ್ರಮುಖ ಆಗುತ್ತದೆ.

ಜಮಾಅತ್ ಉಪಾಧ್ಯಕ್ಷರಾದ ಜನಾಬ್ ನುಸ್ರತ್ ಸಾಹಬ್ ಒಂದು ಕಥೆ ಹೇಳಿದ್ದರು, “ವೇದಿಕೆಯಲ್ಲಿ ಒಂದು ನಾಟಕ ನಡೆಯುತ್ತದೆ. ರಾಜ ಮಂತ್ರಿ,ದಂಡ ನಾಯಕರು, ಸಿಪಾಹಿ ಎಲ್ಲರೂ ಇರುತ್ತಾರೆ. ನಾಟಕ ತುಂಬಾ ಚೆನ್ನಾಗಿ ನಡೆಯುತ್ತದೆ. ಕೊನೆಗೆ Best Actor Award ಓರ್ವ ಕಸಗುಡಿಸುವ ಪಾತ್ರ ಮಾಡಿದ ವ್ಯಕ್ತಿಗೆ ಸಿಗುತ್ತದೆ. ಎಲ್ಲರಿಗೂ ಆಶ್ಚರ್ಯ. ಆಗ ಜಡ್ಜ್ ಹೇಳುತ್ತಾರೆ, ಆತ ತನ್ನ ನಟನೆಯನ್ನು ಅದ್ಬುತವಾಗಿ ಮಾಡಿದ್ದಾನೆ” ಹೌದು ಅಲ್ಲಾಹನ ಮುಂದೆ ನಮಗೆ ಅವಾರ್ಡ್ ಸಿಗುವುದು ನಾವು ನಾಯಕ ಅಥವಾ ಅನುಯಾಯಿಗಳು ಎಂಬ ಕಾರಣಕ್ಕಾಗಿ ಅಲ್ಲ. ಬದಲಾಗಿ ನಾವು ನಮ್ಮ ಜವಾಬ್ದಾರಿಯನ್ನು ಎಷ್ಟು ನಿಭಾಯಿಸಿದ್ದೇವೆ ಎಂಬ ನೆಲೆಯಲ್ಲಿ ಆಗಿದೆ.

ಇದೇ ಮಾತನ್ನು ಒಮ್ಮೆ ಮರ್ಹೂಮ್ ಇಬ್ರಾಹಿಂ ಸಯೀದ್ ಸಾಹಬ್ ಹೇಳಿದ್ದರು, ಅವರ ಕಚೇರಿಗೆ ಕ್ಲೀನಿಂಗ್ ಕೆಲಸಕ್ಕೆ ಒಬ್ಬರು ಬಂದರು. ಅವರೊಂದಿಗೆ ಇಬ್ರಾಹಿಂ ಸಯೀದ್ ಹೇಳಿದರು, ನಾನು ಕೂತ ಕುರ್ಚಿಗೂ ಮತ್ತು ನೀವು ಮಾಡುವ ಕೆಲಸಕ್ಕೂ ಈ ಕಚೇರಿಯಲ್ಲಿ ಒಂದೇ ಸ್ಥಾನ. ಕೇವಲ ಜವಾಬ್ದಾರಿ ಮಾತ್ರ ವಿಂಗಡಿಸಲಾಗಿದೆ. ಬಳಿಕ ಅದೇ ಕಚೇರಿಯಲ್ಲಿ ಆ ಕ್ಲೀನಿಂಗ್ ಮಾಡುವ ವ್ಯಕ್ತಿ ನಮಾಝಿಗೆ ಇಮಾಮತ್ ಮಾಡಿದರೆ ಇಬ್ರಾಹಿಂ ಸಯೀದ್ ಅವರ ಹಿಂದೆ ನಿಂತು ನಮಾಝ್ ಮಾಡುತ್ತಿದ್ದರು.

ಎಲ್ಲಿ ಉತ್ತಮ ನಾಯಕ ಮತ್ತು ಅನುಯಾಯಿಗಳು ಇರುತ್ತಾರೋ ಅಲ್ಲಿ ಬಾಸ್, ಯಜಮಾನ ಗುಲಾಮ, ಮೇಲು ಕೀಳು, ಆಜ್ಞೆಗೆ ಸ್ಥಾನ ಇರುವುದಿಲ್ಲ. ಅಲ್ಲಿ ವಿಷಯಗಳನ್ನು ಜವಾಬ್ದಾರಿಗಳನ್ನು ಮನವರಿಕೆ (Convince) ಮಾಡಿಕೊಡಲಾಗುತ್ತದೆ. ಆ ಮನವರಿಕೆಯ ಬಳಿಕ ಅಲ್ಲಿ ಆಜ್ಞೆ, ಕಟ್ಟುನಿಟ್ಟಿನ ಆದೇಶಕ್ಕೆ ಅವಕಾಶ ಸಿಗುವುದಿಲ್ಲ. ಇದರ ಅರ್ಥ ಆಜ್ಞೆ ಕೊಡಲೇಬಾರದು ಎಂದಲ್ಲ. ಅದರ ಬದಲಾಗಿ ಆಜ್ಞೆ ಮಾಡಿದರೆ ಮಾತ್ರ ಕೆಲಸ ಆಗಲು ಸಾಧ್ಯ ಎಂಬ ಭ್ರಮೆಯಿಂದ ನಾಯಕ ಹೊರಬರಬೇಕು.

ಮುಂದುವರಿಯುವುದು……

LEAVE A REPLY

Please enter your comment!
Please enter your name here