ಕನ್ನಡ ಕೇವಲ ಒಂದು ಭಾಷೆಯಲ್ಲ; ಅದು ಈ ನಾಡಿನ ಇತಿಹಾಸ, ಸಂಸ್ಕೃತಿ, ಬದುಕು, ಆಚರಣೆ, ಸಾಹಿತ್ಯ ಮತ್ತು ಜನರ ಭಾವನೆಗಳೊಂದಿಗೆ ಬೆಸೆದುಕೊಂಡಿರುವ ಭಾಷೆ. ಹಲವು ಶತಮಾನಗಳ ಕಾಲ ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿರುವ ಈ ಭಾಷೆ , ಇಂದು ಕೂಡ ಕೋಟ್ಯಂತರ ಜನರ ಬದುಕಿನೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ಕಾಲ ಬದಲಾದಂತೆ ಜೀವನಶೈಲಿ ಬದಲಾಗಬಹುದು, ಹೊಸ ತಂತ್ರಜ್ಞಾನಗಳು ಬರಬಹುದು, ಹೊಸ ಭಾಷೆಗಳ ಬಳಕೆ ಹೆಚ್ಚಾಗಬಹುದು. ಆದರೆ ನಮ್ಮ ಭಾಷೆಯ ಮೇಲಿನ ಕಾಳಜಿ ಮತ್ತು ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಮಾತ್ರ ಕಡಿಮೆಯಾಗಬಾರದು.

ಕನ್ನಡ ಸಾಹಿತ್ಯದ ಇತಿಹಾಸ ಬಹಳ ಸಮೃದ್ಧವಾಗಿದೆ. ಪಂಪ, ಪೊನ್ನ, ರನ್ನರಿಂದ ಆರಂಭಿಸಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ರ ವರ ವಚನಗಳವರೆಗೆ, ಕನ್ನಡ ಸಾಹಿತ್ಯವು ಸಮಾಜಿಕ ಬದುಕು, ಮೌಲ್ಯ ಮತ್ತು ಚಿಂತನೆಗಳಿಗೆ ಧ್ವನಿಯಾಗಿದೆ. ನಂತರ ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಯು.ಆರ್. ಅನಂತಮೂರ್ತಿ ಸೇರಿದಂತೆ ಅನೇಕ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ. ಅವರ ಕೃತಿಗಳು ಕೇವಲ ಸಾಹಿತ್ಯದ ಭಾಗವಾಗಿರದೆ, ಸಮಾಜವನ್ನು ಅರ್ಥೈಸಿಕೊಳ್ಳಲು ಮತ್ತು ಪ್ರಶ್ನಿಸಲು ನಮಗೆ ದಾರಿ ತೋರಿಸಿವೆ.

ಆದರೆ ಕನ್ನಡದ ಬಗ್ಗೆ ಮಾತನಾಡುವಾಗ ಕೇವಲ ಅದರ ಭವ್ಯ ಇತಿಹಾಸವನ್ನು ನೆನಪಿಸಿಕೊಳ್ಳುವುದಷ್ಟೇ ಸಾಕಾಗುವುದಿಲ್ಲ. ಇಂದಿನ ಬದುಕಿನಲ್ಲಿ ಕನ್ನಡವನ್ನು ನಾವು ಎಷ್ಟು ಬಳಸುತ್ತಿದ್ದೇವೆ ಎಂಬುದೂ ಮುಖ್ಯ. ಕನ್ನಡದ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವುದರ ಜೊತೆಗೆ, ನಮ್ಮ ದಿನನಿತ್ಯದ ಬದುಕಿನಲ್ಲಿ ಅದಕ್ಕೆ ಸೂಕ್ತ ಸ್ಥಾನ ನೀಡಬೇಕಾಗಿದೆ.ಮನೆಗಳ್ಲಲಿನ ಮಾತುಗಳಿಂದ ಹಿಡಿದು ಶಿಕ್ಷಣ, ಆಡಳಿತ, ವ್ಯಾಪಾರ, ಕಾನೂನು, ವೈದ್ಯಕೀಯ, ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳವರೆಗೆ ಕನ್ನಡದ ಬಳಕೆ ಹೆಚ್ಚಾಗಬೇಕು.

ಇಂದಿನ ಪೀಳಿಗೆಯ ಜೀವನದಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಯುವಕರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ಮತ್ತು ಅಂತರ್ಜಾಲದಲ್ಲಿ ಕಳೆಯುತ್ತಿರುವ ಸಂದರ್ಭದಲ್ಲಿ ಕನ್ನಡವೂ ಈ ಡಿಜಿಟಲ್ ಜಗತ್ತಿನಲ್ಲಿ ಪ್ರಭಲವಾಗಿ ಕಾಣಿಸಿಕೊಳ್ಳಬೇಕು . ಕನ್ನಡದಲ್ಲಿ ಉತ್ತಮ ವಿಷಯಗಳನ್ನು ಸೃಷ್ಟಿಸುವುದು, ಓದುವುದು ಮತ್ತು ಹಂಚಿಕೊಳ್ಳುವುದು ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ.ಹಾಗೆಯೆ ಕೃತಕ ಬುದ್ಧಿಮತ್ತೆ, ಭಾಷಾಂತರ ತಂತ್ರಜ್ಞಾನ, ಡಿಜಿಟಲ್ ಶಿಕ್ಷಣ ಮತ್ತು ಇತರ ಹೊಸ ತಂತ್ರಜ್ಞಾನಗಳಲ್ಲಿಯೂ ಕನ್ನಡಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಅಗತ್ಯವಿದೆ.

ಮಕ್ಕಳಲ್ಲಿ ಕನ್ನಡ ಭಾಷೆಯ ಮೇಲೆ ಆಸಕ್ತಿ ಬೆಳೆಸುವ ಜವಾಬ್ದಾರಿಯು ಕುಟುಂಬದಿಂದಲೇ ಆರಂಭವಾಗಬೇಕಿದೆ. ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವುದು, ಕನ್ನಡ ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸುವುದು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯ ಮಾಡಿಸುವುದು ಬಹಳ ಮುಖ್ಯ. ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಯಾವುದೇ ತಪ್ಪಿಲ್ಲ. ಇಂದಿನ ಜಗತ್ತಿನಲ್ಲಿ ಹಲವು ಭಾಷೆಗಳನ್ನು ತಿಳಿದುಕೊಳ್ಳುವುದು ಒಂದು ಸಾಮರ್ಥ್ಯವೇ ಆಗಿದೆ. ಆದರೆ ಬೇರೆ ಭಾಷೆಗಳನ್ನು ಕಲಿಯುವ ಹೆಸರಿನಲ್ಲಿ ಕನ್ನಡದ ಬಳಕೆ ಕಡಿಮೆಯಾಗಬಾರದು. ಇತರ ಭಾಷೆಗಳನ್ನು ಗೌರವಿಸುವುದರ ಜೊತೆಗೆ ಕನ್ನಡಕ್ಕೂ ಸಮಾನ ಗೌರವ ಮತ್ತು ಸ್ಥಾನ ನೀಡುವುದು ನಮ್ಮ ಕರ್ತವ್ಯ.

ಕನ್ನಡವನ್ನು ದಿನನಿತ್ಯದ ಬದುಕಿನಲ್ಲಿ ಬಳಸುವ ಭಾಷೆಯಾಗಿ, ನಮ್ಮ ಕೆಲಸದಲ್ಲಿ, ಶಿಕ್ಷಣದಲ್ಲಿ, ಚಿಂತನೆಗಳಲ್ಲಿ ಮತ್ತು ಸೃಜನಶೀಲತೆಯಲ್ಲಿ ಸ್ಥಾನ ನೀಡಬೇಕು. ಭಾಷೆಯ ಉಳಿವು ಕೇವಲ ಘೋಷಣೆಗಳಿಂದ ಸಾಧ್ಯವಿಲ್ಲ; ಅದರ ನಿರಂತರ ಬಳಕೆಯಿಂದ ಮಾತ್ರ ಸಾಧ್ಯ. ಕನ್ನಡವನ್ನು ಪ್ರೀತಿಸುವುದೆಂದರೆ ಕೇವಲ ಅದರ ಬಗ್ಗೆ ಹೆಮ್ಮೆಪಡುವುದಲ್ಲ, ಅದನ್ನು ಬದುಕಿನ ಭಾಗವನ್ನಾಗಿ ಮಾಡುವುದು.

ನಮಗೆ ಹಿಂದಿನ ಪೀಳಿಗೆಯಿಂದ ದೊರೆತಿರುವ ಈ ಭಾಷೆಯು ಒಂದು ಅಮೂಲ್ಯ ಸಾಂಸ್ಕೃತಿಕ ಪರಂಪರೆ. ಅದನ್ನು ಕೇವಲ ಸಂರಕ್ಷಿಸುವುದಷ್ಟೇ ಅಲ್ಲ, ಕಾಲದ ಅಗತ್ಯಗಳಿಗೆ ತಕ್ಕಂತೆ ಬೆಳೆಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಮುಂದಿನ ಪೀಳಿಗೆ ಕನ್ನಡವನ್ನು ಕೇವಲ ಹಳೆಯ ಸಾಹಿತ್ಯದ ಭಾಷೆಯಾಗಿ ನೋಡದೆ, ತನ್ನ ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ಚಿಂತನೆ ಮತ್ತು ಸೃಜನಶೀಲತೆಯ ಭಾಷೆಯಾಗಿ ಕಾಣುವಂತಾಗಬೇಕು.

ಕನ್ನಡದ ಉಳಿವು ಕೇವಲ ಭಾಷಾಭಿಮಾನದಿಂದ ಸಾಧ್ಯವಿಲ್ಲ; ಅದರ ನಿರಂತರ ಬಳಕೆ, ಬೆಳವಣಿಗೆ ಮತ್ತು ಮುಂದಿನ ಪೀಳಿಗೆಗೆ ಅದರ ಮೌಲ್ಯವನ್ನು ತಲುಪಿಸುವ ಪ್ರಯತ್ನದಿಂದ ಸಾಧ್ಯ. ಕಾಲ ಬದಲಾಗುತ್ತಿದ್ದಂತೆ ಭಾಷೆಯ ಬಳಕೆಯ ರೂಪ ಬದಲಾಗಬಹುದು, ಆದರೆ ಕನ್ನಡದ ಅಸ್ತಿತ್ವ ಮತ್ತು ಗೌರವವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕನ್ನಡವನ್ನು ಪ್ರೀತಿಸುವುದು ಎಂದರೆ ಕೇವಲ ಅದರ ಬಗ್ಗೆ ಮಾತನಾಡುವುದಲ್ಲ, ನಮ್ಮ ಬದುಕಿನ ಪ್ರತಿಯೊಂದು ಸಾಧ್ಯ ಕ್ಷೇತ್ರದಲ್ಲೂ ಅದಕ್ಕೆ ಗೌರವದ ಸ್ಥಾನ ನೀಡುವುದು. ನಮ್ಮಿಂದ ಆರಂಭವಾಗುವ ಸಣ್ಣ ಪ್ರಯತ್ನಗಳು ಮುಂದಿನ ಪೀಳಿಗೆಗೆ ದೊಡ್ಡ ಪರಂಪರೆಯಾಗಬಹುದು. ಆದ್ದರಿಂದ ಕನ್ನಡವನ್ನು ಕೇವಲ ನೆನಪಿಸಿಕೊಳ್ಳುವ ಭಾಷೆಯಾಗಿ ಅಲ್ಲ, ಬದುಕುವ, ಬೆಳೆಯುವ ಮತ್ತು ಭವಿಷ್ಯವನ್ನು ಕಟ್ಟುವ ಭಾಷೆಯಾಗಿ ರೂಪಿಸುವ ಸಂಕಲ್ಪ ನಮ್ಮದಾಗಬೇಕು.

LEAVE A REPLY

Please enter your comment!
Please enter your name here