ಫ್ರಾನ್ಸಿಸ್ ಹ್ಯಾಲ್ಜೆನ್ (Francis Halzen) ಅವರಿಗೆ “ಐಸ್‌ ಕ್ಯೂಬ್ ನ್ಯೂಟ್ರಿನೋ ಅಬ್ಸರ್ವೇಟರಿಗೆ ನಿರ್ಣಾಯಕ ಕೊಡುಗೆಗಳು ಮತ್ತು ಖಗೋಳ ಮೂಲದ ಉನ್ನತ-ಶಕ್ತಿಯ ನ್ಯೂಟ್ರಿನೋಗಳ ಆವಿಷ್ಕಾರಕ್ಕಾಗಿ” 2026ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿದೆ.

ನ್ಯೂಟ್ರಿನೋಗಳು ಎಂದರೇನು? ಅವುಗಳನ್ನು ಗಮನಿಸಲು ನಮಗೆ ಐಸ್ ಏಕೆ ಬೇಕು? ಮತ್ತು ಅವುಗಳನ್ನು ಏಕೆ ಅಧ್ಯಯನ ಮಾಡಬೇಕು? ಎಂಬಿತ್ಯಾದಿಗಳನ್ನು ಅವಲೋಕಿಸೋಣ

ನ್ಯೂಟ್ರಿನೋ [Neutrino] ಎನ್ನುವುದು ಯಾವುದೇ ವಿದ್ಯುತ್‌ ಚಾರ್ಜ್ ಇಲ್ಲದ ಮತ್ತು ಬಹುತೇಕ ದ್ರವ್ಯರಾಶಿಯೇ ಇಲ್ಲದ ಅತ್ಯಂತ ಸೂಕ್ಷ್ಮ ಕಣವಾಗಿದೆ; ನ್ಯೂಟ್ರಿನೊಗಳು ಅತ್ಯಂತ ಸೂಕ್ಷ್ಮ ಉಪಪರಮಾಣು ಕಣಗಳು [sub-atomic particles]. ಇವು ಮುಖ್ಯವಾಗಿ ನಕ್ಷತ್ರಗಳಲ್ಲಿರುವ ಪರಮಾಣು ಕ್ರಿಯೆಗಳಿಂದ ಉತ್ಪತ್ತಿಯಾಗುತ್ತವೆ. ಬ್ರಹ್ಮಾಂಡದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಕಣಗಳ ಪೈಕಿ ಫೋಟಾನ್‌ ಗಳ [ಬೆಳಕಿನ ಕಣಗಳ] ನಂತರದ ಸ್ಥಾನ ನ್ಯೂಟ್ರಿನೊಗಳದು. ಇವು ಬ್ರಹ್ಮಾಂಡದ ಕುರಿತು ಅಪಾರ ಹೊಸ ಮಾಹಿತಿಯನ್ನು ಒದಗಿಸಬಲ್ಲವು. ಆದರೆ, ಇವುಗಳನ್ನು ಪತ್ತೆ ಹಚ್ಚುವುದು ಬಹಳ ಕಷ್ಟ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹಾಗಾಗಿ, ನ್ಯೂಟ್ರಿನೊಗಳನ್ನು ಸಾಮಾನ್ಯವಾಗಿ ‘ಪ್ರೇತ ಕಣ’ಗಳೆಂದು ಕರೆಯಲಾಗುತ್ತದೆ.

ನ್ಯೂಟ್ರಿನೊಗಳನ್ನು ಪತ್ತೆ ಹಚ್ಚುವ ಮತ್ತು ಅಧ್ಯಯನ ಮಾಡುವ ಪ್ರಯತ್ನಗಳು ಈಗಾಗಲೇ ಹಲವು ನೊಬೆಲ್ ಪ್ರಶಸ್ತಿಗಳಿಗೆ ಕಾರಣವಾಗಿವೆ. ಈ ವರ್ಷದ ನೊಬೆಲ್ ವಿಜೇತರ ಸಂಶೋಧನೆ ಇನ್ನೊಂದು ಸೇರ್ಪಡೆಯಾಗಿದೆ. ಅಂಟಾರ್ಕ್ಟಿಕಾದ ಹಿಮಹಾಳಿಗಳ ಕೆಳಗೆ ಈ ಕಣಗಳನ್ನು ಪತ್ತೆ ಹಚ್ಚಲು ಸಂಕೀರ್ಣ ವ್ಯವಸ್ಥೆಯೊಂದನ್ನು ರೂಪಿಸಿದ ಬೆಲ್ಜಿಯನ್-ಅಮೆರಿಕನ್ ವಿಜ್ಞಾನಿ ಫ್ರಾನ್ಸಿಸ್ ಹಾಲ್ಜೆನ್ ಅವರಿಗೆ 2026ರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಲಭಿಸಿದೆ.

ನ್ಯೂಟ್ರಿನೊಗಳನ್ನು ಪತ್ತೆ ಹಚ್ಚಿದ ಮೊದಲ ವೀಕ್ಷಣಾಲಯ ಅಂಟಾರ್ಕ್ಟಿಕಾದ ಐಸ್‌ಕ್ಯೂಬ್ ಅಲ್ಲ. ನ್ಯೂಟ್ರಿನೊಗಳನ್ನು 1930ರ ದಶಕದಲ್ಲಿ ಮೊದಲು ಪ್ರತಿಪಾದಿಸಲಾಗಿತ್ತು; 1950ರ ದಶಕದಲ್ಲಿ ಮೊದಲ ಬಾರಿಗೆ ಪತ್ತೆ ಹಚ್ಚಲಾಯಿತು. ಪ್ರಸ್ತುತ ದಿನಗಳಲ್ಲಿ, ಜಗತ್ತಿನ ಹಲವು ವೀಕ್ಷಣಾಲಯಗಳು ಈ ಕಣಗಳ ಪತ್ತೆ ಮತ್ತು ಅಧ್ಯಯನಕ್ಕೆ ಮೀಸಲಾಗಿವೆ.

ದೂರದ ಬಾಹ್ಯಾಕಾಶದ ಕುರಿತು ಅಧ್ಯಯನ

ಐಸ್‌-ಕ್ಯೂಬ್ ವೀಕ್ಷಣಾಲಯದ ವಿಜ್ಞಾನ ಗಣಕ-ಉಪಕರಣಗಳು ಸಾಧಿಸಿದ್ದು ಅನನ್ಯವಾದುದು. ಬಹುದೂರದ ಬಾಹ್ಯಾಕಾಶದಿಂದ ಬರುವ ವಿಶೇಷ ಬಗೆಯ ಶಕ್ತಿಶಾಲಿ ನ್ಯೂಟ್ರಿನೊಗಳನ್ನು ಅವು ಯಶಸ್ವಿಯಾಗಿ ಪತ್ತೆ ಹಚ್ಚಿದವು. ಅಲ್ಲಿಯವರೆಗೆ ಭೂಮಿಯ ಸಮೀಪದಲ್ಲಿ, ಮುಖ್ಯವಾಗಿ ಸೂರ್ಯನಲ್ಲಿ ಉತ್ಪತ್ತಿಯಾಗುವ ನ್ಯೂಟ್ರಿನೊಗಳನ್ನು ಮಾತ್ರ ಪತ್ತೆಹಚ್ಚಲಾಗುತ್ತಿತ್ತು. ಭೂಮಿಯ ಮೂಲಕ ಹಾದುಹೋಗುವ ಹೆಚ್ಚಿನ ನ್ಯೂಟ್ರಿನೊಗಳು ಸೂರ್ಯನೊಳಗಿನ ಪರಮಾಣು ಪ್ರಕ್ರಿಯೆಗಳಿಂದ ಉತ್ಪತ್ತಿಯಾದವು.

ಆಕಾಶಗಂಗೆಯಿಂದ ಹೊರಹೊಮ್ಮುವ ನ್ಯೂಟ್ರಿನೊಗಳ ಪತ್ತೆಯು ವಿಜ್ಞಾನಿಗಳಿಗೆ ಬ್ರಹ್ಮಾಂಡದ ಕುರಿತು ಹೊಸ ಮಾಹಿತಿಯ ಮೂಲವನ್ನು ತೆರೆದಿದೆ. ಆರಂಭದಲ್ಲಿ ಬ್ರಹ್ಮಾಂಡದ ವಿದ್ಯಮಾನಗಳ ಅಧ್ಯಯನಕ್ಕೆ ದೃಗ್ಗೋಚರ ಬೆಳಕೊಂದೇ ಸಾಧನವಾಗಿತ್ತು. ನಂತರ, ವಿದ್ಯುತ್ಕಾಂತಿಯ ವರ್ಣಪಟಲದ [Electro-Magnetic Spectrum] ಎಲ್ಲ ವಿಕಿರಣಗಳಿಗೆ ಹಾಗೂ ಕಾಸ್ಮಿಕ್ ಕಿರಣಗಳಿಗೆ ಪತ್ತೆಕಾರಕಗಳನ್ನು ಅಭಿವೃದ್ಧಿಪಡಿಸಲಾಯಿತು. 2015ರಲ್ಲಿ ಗುರುತ್ವ ತರಂಗ [Gravitational Waves]ಗಳ ಪತ್ತೆಯು ವಿಜ್ಞಾನಿಗಳಿಗೆ ವಿಶ್ವವನ್ನು ನೋಡಲು ಸಂಪೂರ್ಣ ಹೊಸ ಕಿಟಕಿಯನ್ನೇ ತೆರೆಯಿತು. ಅತಿದೂರದ ನ್ಯೂಟ್ರಿನೊಗಳು ಇನ್ನೊಂದು ಆಯಾಮದ ಸಾಧ್ಯತೆಗಳನ್ನು ಸೇರಿಸಿವೆ.

ಈ ವಿವಿಧ ಬಗೆಯ ಸಂಕೇತಗಳು ಒಟ್ಟುಗೂಡಿ ‘ಬಹು-ಸಂದೇಶವಾಹಕ ಖಗೋಳವಿಜ್ಞಾನ’ವನ್ನು (Multi-Messenger Astronomy) ಸಾಧ್ಯವಾಗಿಸುತ್ತವೆ. ಅಂದರೆ, ಬ್ರಹ್ಮಾಂಡ ಪ್ರಾರಂಭವನ್ನು ವಿವಿಧ ಬಗೆಯ ಸಂಕೇತಗಳ ಮೂಲಕ ಅಧ್ಯಯನ ಮಾಡುವ ಸಾಮರ್ಥ್ಯ ಎಂದು ಬೆಂಗಳೂರಿನ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ [Indian Institute of Astrophysics] ವಿಜ್ಞಾನಿ ಡಿ. ಇಂದುಮತಿ ಹೇಳಿದರು. ಅವರು ಭಾರತದ ನ್ಯೂಟ್ರಿನೊ ಪತ್ತೆಕಾರಕ ನಿರ್ಮಾಣ ಯತ್ನದೊಂದಿಗೆ ಈ ಹಿಂದೆ ಗುರುತಿಸಿಕೊಂಡಿದ್ದರು.

‘ಬ್ರಹ್ಮಾಂಡದ ಅತ್ಯಂತ ನಾಚಿಕೆಯುಳ್ಳ ಕಣ’ಗಳು

ನ್ಯೂಟ್ರಿನೊಗಳನ್ನು ಪತ್ತೆಹಚ್ಚುವುದು ಬಹಳ ಕಷ್ಟ. ಅವು ದ್ರವ್ಯದೊಂದಿಗೆ ಪರಸ್ಪರ ಕ್ರಿಯೆ ನಡೆಸುವ ಪ್ರವೃತ್ತಿ ಬಹಳ ಕಡಿಮೆ. ನೊಬೆಲ್ ಸಮಿತಿ ಅವುಗಳನ್ನು “ಬ್ರಹ್ಮಾಂಡದ ಅತ್ಯಂತ ನಾಚಿಕೆಯುಳ್ಳ ಕಣಗಳು” ಎಂದು ವರ್ಣಿಸಿದೆ. ಅತಿ ಸಾಂದ್ರ ದ್ರವ್ಯದ ಪ್ರದೇಶಗಳ ಮೂಲಕವೂ ಅವು ಯಾವುದೇ ಅಡಚಣೆಯಿಲ್ಲದೆ ಹಾದುಹೋಗುತ್ತವೆ.

ಪ್ರತಿ ಸೆಕೆಂಡಿಗೆ ಸುಮಾರು 6,500 ಕೋಟಿ [65 ಶತಕೋಟಿ] ನ್ಯೂಟ್ರಿನೊಗಳು ಮಾನವನ ಉಗುರುಗಳ ಮೂಲಕ ಹಾದುಹೋಗುತ್ತವೆ. ಆದರೆ, ಯಾರಿಗೂ ಇದರ ಕುರಿತು ಅರಿವು ಇರುವುದಿಲ್ಲ. ಅವು ದ್ರವ್ಯದೊಂದಿಗೆ ಪರಸ್ಪರ ಕ್ರಿಯೆ ನಡೆಸುವ ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಪತ್ತೆ ಸಾಧ್ಯವಾಗುತ್ತದೆ. ಇದು ಬಹುಶಃ ನೂರಾರು ಕೋಟಿ ಅಥವಾ ಲಕ್ಷಾಂತರ ಕೋಟಿ ನ್ಯೂಟ್ರಿನೊಗಳಲ್ಲಿ ಒಂದಕ್ಕೆ ಮಾತ್ರ ಸಂಭವಿಸುತ್ತದೆ. ಹೀಗಾಗಿ, ಜಗತ್ತಿನ ನ್ಯೂಟ್ರಿನೊ ವೀಕ್ಷಣಾಲಯಗಳು ಬಹಳ ದೊಡ್ಡ ಸೌಲಭ್ಯಗಳಾಗಿರುತ್ತವೆ ಮತ್ತು ಅತ್ಯಂತ ಏಕಾಂತ—ಸಾಮಾನ್ಯವಾಗಿ, ಭೂಗತ ಸ್ಥಳಗಳಲ್ಲಿ ನಿರ್ಮಾಣವಾಗುತ್ತವೆ.

ನ್ಯೂಟ್ರಿನೊಗಳ ಈ ನುಣುಚಿಕೊಳ್ಳುವ ಸ್ವಭಾವವೇ ಅವುಗಳನ್ನು ಅಧ್ಯಯನಕ್ಕೆ ವಿಶೇಷವಾಗಿ ಆಸಕ್ತಿಕರವಾಗಿಸುತ್ತದೆ. ಇತರ ಸಂಕೇತಗಳಿಗೆ ಎಂದಿಗೂ ದಾಟಲಾಗದ ಬಾಹ್ಯಾಕಾಶದ ಪ್ರದೇಶಗಳಿಂದ ಅವು ಹಾದು ಹೋಗುತ್ತವೆ.

ಉದಾಹರಣೆಗೆ, ಬಾಹ್ಯಾಕಾಶದ ಅತಿ ಸಾಂದ್ರ ಪ್ರದೇಶಗಳು ಎಲ್ಲ ವಿದ್ಯುತ್ಕಾಂತೀಯ ವಿಕಿರಣಗಳನ್ನು ಹೀರಿಕೊಳ್ಳಬಹುದು ಅಥವಾ ಚದುರಿಸಬಹುದು; ಆದರೆ, ನ್ಯೂಟ್ರಿನೊಗಳು ಸರಾಗವಾಗಿ ಹರಿದುಹೋಗುತ್ತವೆ.

ಹೀಗಾಗಿ, ಅಂತಹ ದಟ್ಟ ಪ್ರದೇಶದ ಒಳಗೆ ಅಥವಾ ಅದರಾಚೆ ನಡೆಯುವ, ಬೇರೆ ರೀತಿಯಲ್ಲಿ ವಿಜ್ಞಾನಿಗಳ ಕೈಗೆಟುಕದ ಪ್ರಕ್ರಿಯೆಗಳನ್ನು ಅವು ಬಹಿರಂಗಪಡಿಸಬಲ್ಲವು.

ಐಸ್‌ಕ್ಯೂಬ್ ಸೌಲಭ್ಯ

1960ರ ದಶಕದಿಂದಲೂ ಬ್ರಹ್ಮಾಂಡದ ಕಿರಣಗಳ ಅಧ್ಯಯನದಲ್ಲಿ ತೊಡಗಿರುವ 82 ವಯಸ್ಸಿನ ಹಾಲ್ಜೆನ್ ಅವರಿಗೆ, ಅಂಟಾರ್ಕ್ಟಿಕಾದಲ್ಲಿ ನ್ಯೂಟ್ರಿನೊ ಪತ್ತೆಕಾರಕ ನಿರ್ಮಿಸುವ ಸೋವಿಯತ್ ಸಂಶೋಧಕರ ಪ್ರಯತ್ನಗಳ ಕುರಿತು ತಿಳಿದು ಬಂತು ಎಂದು ನೊಬೆಲ್ ಸಮಿತಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ. ನ್ಯೂಟ್ರಿನೊವೊಂದು ಹಿಮದಲ್ಲಿನ ಪರಮಾಣು ಬೀಜಕ್ಕೆ ಮುಖಾಮುಖಿಯಾಗುವಾಗ ವಿದ್ಯುತ್ ಕಿಡಿ ಉಂಟಾಗುತ್ತದೆ. ಇದು ರೇಡಿಯೊ ತರಂಗಗಳನ್ನು ಉತ್ಪಾದಿಸುತ್ತದೆ; ಅವುಗಳನ್ನು ರೇಡಿಯೊ ಆಂಟೆನಾಗಳ ಮೂಲಕ ಪತ್ತೆ ಹಚ್ಚಬಹುದು.

ಹಾಲ್ಜೆನ್ ಅವರಿಗೆ ಸ್ವಲ್ಪ ಭಿನ್ನವಾದ ವಿಚಾರ ಹೊಳೆಯಿತು. ಹಿಮನದಿಯ ಮಂಜುಗಡ್ಡೆಯಲ್ಲಿ ಬೆಳಕಿನ ಸಂವೇದಕಗಳನ್ನು ಅಳವಡಿಸಬಹುದು ಎಂದು ಅವರು ಅರಿತರು. ನ್ಯೂಟ್ರಿನೊಗಳು ಹಿಮದ ಪರಮಾಣುಗಳ ಬೀಜಗಳಿಗೆ ಡಿಕ್ಕಿ ಹೊಡೆದಾಗ ಈ ಸಂವೇದಕಗಳು ಬೆಳಕಿನ ಮಿಂಚುಗಳನ್ನು ದಾಖಲಿಸಬಲ್ಲವು. ದಕ್ಷಿಣ ಧ್ರುವದ ಸುತ್ತಲಿನ ಪ್ರದೇಶ ಇದಕ್ಕೆ ಅನುಕೂಲಕರ ಸ್ಥಳವಾಗಿತ್ತು. ಅದು ಏಕಾಂತವಾಗಿತ್ತು, ಮತ್ತು ಗಣನೀಯ ಆಳದಲ್ಲಿ ಇತರ ವಿಕಿರಣ ಅಥವಾ ಸಂಕೇತಗಳ ಯಾವುದೇ ಅಡಚಣೆಯಿಲ್ಲದ ಗಾಢ ಕತ್ತಲೆ ಇತ್ತು.

ತಮ್ಮ ಆಲೋಚನೆಗಳನ್ನು ಅವರು ಕೆಲವು ಸಹೋದ್ಯೋಗಿಗಳೊಂದಿಗೆ ಚರ್ಚಿಸಿದರು ಮತ್ತು ಹಿಮಹಾಳಿಗಳ ಆಳದಲ್ಲಿ ವೀಕ್ಷಣಾಲಯ ವಿನ್ಯಾಸಗೊಳಿಸುವ ಹೆಚ್ಚಿನ ಸೈದ್ಧಾಂತಿಕ ಕೆಲಸವನ್ನು ತಾವೇ ನಿರ್ವಹಿಸಿದರು. ಐಸ್‌ಕ್ಯೂಬ್ ಎಂದರೆ ಒಂದು ಘನ ಕಿಲೋಮೀಟರ್ ಮಂಜುಗಡ್ಡೆ. ಅದರಲ್ಲಿ ಉದ್ದನೆಯ ಕೇಬಲ್‌ಗಳ ಮೇಲೆ ೫,೦೦೦ಕ್ಕೂ ಹೆಚ್ಚು ಬೆಳಕಿನ ಸಂವೇದಕಗಳನ್ನು ಅಳವಡಿಸಲಾಗಿದೆ, ಜೊತೆಗೆ ಸಂಕೇತಗಳನ್ನು ಸಂಗ್ರಹಿಸುವ ನೆಲದ ಮೇಲಿನ ಸೌಲಭ್ಯವೂ ಇದೆ. ನ್ಯೂಟ್ರಿನೊ ಹಿಮದ ಪರಮಾಣು ಬೀಜದೊಂದಿಗೆ ಅಪರೂಪವಾಗಿ ಪರಸ್ಪರ ಕ್ರಿಯೆ ನಡೆಸಿದಾಗ, ಒಂದು ಆವೇಶಿತ ಕಣ ಉತ್ಪತ್ತಿಯಾಗುತ್ತದೆ. ಆ ಆವೇಶಿತ ಕಣ ಹಿಮದಲ್ಲಿನ ಬೆಳಕಿನ ವೇಗಕ್ಕಿಂತ ವೇಗವಾಗಿ ಚಲಿಸಿದರೆ, ಅದು ಮಸುಕಾದ ಹೊಳಪನ್ನು ಉಂಟುಮಾಡುತ್ತದೆ. ಈ ಹೊಳಪಿನ ಲಕ್ಷಣಗಳಿಂದ, ಡಿಕ್ಕಿಯಲ್ಲಿ ಭಾಗಿಯಾದ ನ್ಯೂಟ್ರಿನೊದ ಶಕ್ತಿ ಮತ್ತು ದಿಕ್ಕನ್ನು ವಿಜ್ಞಾನಿಗಳು ಪುನರ್ನಿರ್ಮಿಸಬಲ್ಲರು.

ಈ ಅತ್ಯುತ್ತಮ ವ್ಯವಸ್ಥೆ 2011ರಲ್ಲಿ ಕಾರ್ಯಾರಂಭ ಮಾಡಿತು. ಅಷ್ಟರಲ್ಲಾಗಲೇ, ಅತಿದೂರದ ನ್ಯೂಟ್ರಿನೊಗಳ ಸಂಬಂಧವನ್ನು ಸೂಚಿಸುವ ಒಂದೆರಡು ಘಟನೆಗಳನ್ನು ಅದು ದಾಖಲಿಸಿತ್ತು. 2013ರಲ್ಲಿ, ಅತ್ಯಂತ ಅಧಿಕ ಶಕ್ತಿಯ ನ್ಯೂಟ್ರಿನೊಗಳನ್ನು ಪತ್ತೆಹಚ್ಚಿದ ಮೊದಲ ಸಾಕ್ಷ್ಯವನ್ನು ವೀಕ್ಷಣಾಲಯ ಮಂಡಿಸಿತು. ಅಂದಿನಿಂದ ಇಂತಹ ಹಲವು ಘಟನೆಗಳು ದಾಖಲಾಗಿ ದೃಢಪಟ್ಟಿವೆ.

“ಇದೊಂದು ವಿಶಿಷ್ಟ ಪತ್ತೆಕಾರಕ, ಮತ್ತು ಹಾಲ್ಜೆನ್ ಮಾಡಿರುವ ಕೆಲಸ ನಿಜಕ್ಕೂ ರೋಮಾಂಚಕ. ಇದು ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರಕ್ಕೆ ಹೊಸ ದಾರಿಗಳನ್ನು ತೆರೆದಿದೆ,” ಎಂದು ಭಾರತದಲ್ಲಿ ನ್ಯೂಟ್ರಿನೊ ಪತ್ತೆಕಾರಕ ನಿರ್ಮಿಸುವ ಬಹುಕಾಲ ವಿಳಂಬಿತ ಯತ್ನವಾದ ಇಂಡಿಯಾ-ಬೇಸ್ಡ್ ನ್ಯೂಟ್ರಿನೊ ಒಬ್ಸರ್ವೇಟರಿಯ (ಐಎನ್‌ಒ) ಮಾಜಿ ಯೋಜನಾ ನಿರ್ದೇಶಕ ನಾಬಾ ಕೆ. ಮೊಂಡಲ್ ಹೇಳಿದರು. “ನ್ಯೂಟ್ರಿನೊ ಸಂಶೋಧನಾ ವಲಯಗಳಲ್ಲಿ, ಹಾಲ್ಜೆನ್ ಅವರಿಗೆ ಈ ಪ್ರಶಸ್ತಿ ಬರುವುದು ಕೆಲವು ವರ್ಷಗಳಿಂದ ನಿರೀಕ್ಷಿತವೇ ಆಗಿತ್ತು”

ಐಎನ್‌ಒವನ್ನು ಮೊದಲು ಕೇರಳದಲ್ಲಿ ಮತ್ತು ನಂತರ ತಮಿಳುನಾಡಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಆದರೆ, ಭೂಸ್ವಾಧೀನ ಹಾಗೂ ಪರಿಸರ ಕಾರಣಗಳಿಗಾಗಿ ಸ್ಥಳೀಯ ಮತ್ತು ರಾಜಕೀಯ ಪಕ್ಷಗಳಿಂದ ವಿರೋಧ ಎದುರಾಯಿತು. ಹೊಸ ಸ್ಥಳ ಇನ್ನೂ ನಿಶ್ಚಿತವಾಗಿಲ್ಲ.

ಭಾರತದಲ್ಲಿ ಐಎನ್‌ಒ ಎಲ್ಲಿ ಸ್ಥಾಪಿತಗೊಳ್ಳಲಿದೆ ಎನ್ನುವ ಪ್ರಶ್ನೆಗೆ ಕಾಲ ಉತ್ತರಿಸಲಿದೆ.

LEAVE A REPLY

Please enter your comment!
Please enter your name here