2010ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಪೆಲೆಟ್ ಬಂದೂಕುಗಳನ್ನು ಪರಿಚಯಿಸಲಾಗಿತ್ತು. ಈ ಬಂದೂಕು ಸಾಮಾನ್ಯ ಗುಂಡುಗಳ (ಲೈವ್ ಬುಲೆಟ್‌ಗಳ) ಬಳಕೆಗೆ ಹೋಲಿಸಿದರೆ ಕಡಿಮೆ ಮಾರಕವಾಗಿರುವುದರಿಂದ ಪರ್ಯಾಯವಾಗಿ ಬಳಸಲು ಪ್ರಾರಂಭಿಸಲಾಗಿತ್ತು. ಆದರೆ, ಪೆಲೆಟ್ ಬಂದೂಕುಗಳ ಬಳಕೆ 2016ರಲ್ಲಿ ತೀವ್ರಗೊಂಡಿತು.

ಆ ವರ್ಷ ಪ್ರಾದೇಶಿಕ ಸಶಸ್ತ್ರ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ನ 22 ವರ್ಷದ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯನ್ನು ವಿರೋಧಿಸಿ ಭಾರೀ ಪ್ರತಿಭಟನೆಗಳು ನಡೆದವು. ಆ ವರ್ಷದ ಅಶಾಂತಿಯ ಸಂದರ್ಭಗಳಲ್ಲಿ ಗಾಯಗೊಂಡ ಸುಮಾರು 12,000 ಜನರಲ್ಲಿ ಕನಿಷ್ಠ 6,000 ಮಂದಿಗೆ ಪೆಲೆಟ್‌ ಗುಂಡುಗಳು ತಗುಲಿದ್ದವು. ಈ ಪ್ರತಿಭಟನೆಗಳಲ್ಲಿ ಬಹಳ ಜನರು ಸಾವನ್ನಪ್ಪಿದರು; ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡಂತೆ ನೂರಾರು ಜನರು ದೃಷ್ಟಿ ಶಾಶ್ವತವಾಗಿ ಕಳೆದುಕೊಂಡರು.

ಅಂದಿನದ ಪೆಲೆಟ್ ದಾಳಿಯ ಸಂತ್ರಸ್ತರಲ್ಲಿ ಅಂದಾಜು ಶೇ.14 ಮಂದಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದರು. ಆ ಸಮಯದಲ್ಲಿ ಪೆಲೆಟ್ ದಾಳಿಗೆ ಒಳಗಾದ ಕಿರಿಯ ಮಗು ಕೇವಲ ಒಂದೂವರೆ ವರ್ಷದ ಹಿಬಾ ಆಗಿದ್ದಳು. ವಿದೇಶಿ ಮಾಧ್ಯಮಗಳು ಈ ಪರಿಸ್ಥಿತಿಯನ್ನು “ಕುರುಡು ಕಣ್ಣುಗಳ ಸಾಂಕ್ರಾಮಿಕ” (Epidemic of Dead Eye) ಎಂದು ಬಣ್ಣಿಸಿದ್ದವು.

2016ರ ಜುಲೈ 11ರಂದು ನಡೆದ ಆ ಘಟನೆ ‘ಇನ್ಷಾ ಮುಷ್ತಾಕ್’ ಎಂಬ ವಿದ್ಯಾರ್ಥಿನಿಯ ಜೀವನವನ್ನೇ ಬದಲಾಯಿಸಿತು. ಅಂದು 14 ವರ್ಷದ ಇನ್ಷಾ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ. ಅವಳು ತನ್ನ ಮನೆಯ ಕಿಟಕಿಯ ಬಳಿ ಕುಳಿತು ಎಂಟನೇ ತರಗತಿಯ ಪರೀಕ್ಷೆಗೆ ಓದುತ್ತಿದ್ದಾಗ, ಏಕಾಏಕಿ ಪೆಲೆಟ್‌ ಗುಂಡುಗಳು ಅವಳ ಮೇಲೆ ಸುರಿದವು.

ಕೇವಲ 14 ವರ್ಷದ ಎಳೆ ವಯಸ್ಸಿನಲ್ಲಿ ಅವಳ ಕಣ್ಣುಗಳಿಗೆ ಪೆಲೆಟ್‌ಗಳು ತಗುಲಿದ ಪರಿಣಾಮ, ಅವಳು ಶಾಶ್ವತವಾಗಿ ದೃಷ್ಟಿಯನ್ನು ಕಳೆದುಕೊಂಡಳು. ಅನೇಕ ಶಸ್ತ್ರಚಿಕಿತ್ಸೆಗಳನ್ನು ನಡೆಸಿದರೂ ಅವಳ ಎರಡೂ ಕಣ್ಣುಗಳ ದೃಷ್ಟಿಯನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ. ಇನ್ಷಾ ಮುಷ್ಟಾಕ್ ಅವರ ಮುಖವು ಪೆಲೆಟ್‌ ಗಳಿಂದ ಎಷ್ಟು ತೀವ್ರವಾಗಿ ವಿರೂಪಗೊಂಡಿತ್ತೆಂದರೆ, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರು ಅವರ ಮುಖವನ್ನು ಪುನಃ ಹೊಲಿಯಲು ಹಲವು ವಾರಗಳ ಕಾಲ ಶ್ರಮಿಸಬೇಕಾಯಿತು. ಜಮ್ಮು-ಕಾಶ್ಮೀರದಲ್ಲಿ ನಡೆದ ‘ಪೆಲೆಟ್ ಭೀಕರತೆ’ಯ ಸಂಕೇತವಾಗಿ ಇನ್ಷಾ ಮುಷ್ಟಾಕ್ ಅವಳನ್ನು ಆಗಾಗ ನೆನಪಿಸಿಕೊಳ್ಳಲಾಗುತ್ತದೆ.

2016ರ ಜುಲೈ 11ರಂದು ಭದ್ರತಾ ಪಡೆಗಳು ಹಾರಿಸಿದ ಪೆಲೆಟ್‌ಗಳು ತನ್ನ ಜೀವನವನ್ನು ಶಾಶ್ವತವಾಗಿ ಬದಲಾಯಿಸಿದ ಆ ದಿನವನ್ನು ತಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಇನ್ಷಾ ಹೇಳಿದ್ದಾರೆ. ಸದ್ಯಕ್ಕೆ ಇನ್ಷಾ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ; ಮುಂದೆ, ತಾನು ಉದ್ಯೋಗ ಮಾಡುವೆ ಎಂದು ತನ್ನ ಆಸೆಯನ್ನು ವ್ಯಕ್ತಪಡಿಸಿದಳು.

ದೆಹಲಿ ವಿದ್ಯಾರ್ಥಿಗಳ ಇತ್ತೀಚಿನ ಪ್ರತಿಭಟನೆಗಳ ಸಂದರ್ಭದಲ್ಲಿ ಪೆಲೆಟ್ ಬಂದೂಕುಗಳನ್ನು ಬಳಸಲಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸುಮಾರು ಒಂದು ದಶಕದ ಹಿಂದೆ ಕಾಶ್ಮೀರದಲ್ಲಿ ವ್ಯಾಪಕವಾಗಿ ಬಳಸಲಾದ ಪಂಪ್-ಆಕ್ಷನ್ ಪೆಲೆಟ್ ಬಂದೂಕುಗಳ ನೆನಪು ಪುನಃ ಜೀವಂತವಾಯಿತು. ಈ ಹಿನ್ನೆಲೆಯಲ್ಲಿ, ಎನ್‌ಡಿಟಿವಿ ಈ ವಾರದ ಪ್ರಾರಂಭದಲ್ಲಿ ಶೋಪಿಯಾನ್ ಜಿಲ್ಲೆಯ ಸೆಡೋವ್ ಗ್ರಾಮಕ್ಕೆ ಭೇಟಿ ನೀಡಿ, ಇನ್ಷಾ ಅವರ ಹೋರಾಟ ಬದುಕಿನ ಕುರಿತು ವರದಿ ಮಾಡಿತ್ತು.

ಕಾಶ್ಮೀರ ಕಣಿವೆಯಲ್ಲಿ ನೂರಾರು ಜನರು ಪೆಲೆಟ್ ಬಂದೂಕುಗಳ ಗಾಯಗಳಿಂದ ಜೀವನಪೂರ್ತಿ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ದೃಷ್ಟಿ ಕಳೆದುಕೊಳ್ಳುವುದು ಸೇರಿದಂತೆ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಅವರಲ್ಲಿ ಬಹಳಷ್ಟು ಮಂದಿ ತಮ್ಮ ಅನುಭವವನ್ನು ಬಹಿರಂಗವಾಗಿ ಹೇಳಲು ಹಿಂಜರಿತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕಣಿವೆಯಲ್ಲಿ ಪರಿಸ್ಥಿತಿ ಬಹುತೇಕ ಶಾಂತವಾಗಿರುವುದರಿಂದ ಪೆಲೆಟ್ ಗನ್‌ಗಳ ಬಳಕೆ ಕಡಿಮೆಯಾಗಿದೆ. ಆದರೆ, ಇನ್ಷಾ ಅವರಂತಹ ನೂರಾರು ಸಂತ್ರಸ್ತರು, ಈ ಆಯುಧಗಳು ಎಷ್ಟು ಮಾರಕ ಪರಿಣಾಮ ಉಂಟುಮಾಡಬಲ್ಲವು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದ್ದಾರೆ.

ಕಾಶ್ಮೀರದಲ್ಲಿ ನೂರಾರು ಜನರನ್ನು ಕುರುಡರನ್ನಾಗಿ ಮಾಡಿರುವ, ಸಾವಿಗೆ ತಳ್ಳಿರುವ ಹಾಗೂ ಮಾನಸಿಕ ಆಘಾತಕ್ಕೆ ಒಳಪಡಿಸಿರುವ ಪೆಲೆಟ್-ಫೈರಿಂಗ್ ಶಾಟ್‌ಗನ್‌ ಗಳ ಬಳಕೆಯನ್ನು ತಕ್ಷಣವೇ ನಿಷೇಧಿಸಬೇಕು ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ತನ್ನ ಹೊಸ ವರದಿ: “Losing Sight in Kashmir: The Impact of Pellet-Firing Shotguns”ನಲ್ಲಿ ಮತ್ತೊಮ್ಮೆ ಒತ್ತಾಯಿಸಿದೆ.

LEAVE A REPLY

Please enter your comment!
Please enter your name here