ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ,ಮುಸ್ಲಿಮ್ ಶೈಕ್ಷಣಿಕ ಆಂದೋಲನದ ಹರಿಕಾರ, ಉರ್ದು ಸಾಹಿತ್ಯದ ಪಿತಾಮಹ ಮತ್ತು ಪ್ರವಾದಿ ಜೀವನ ಚರಿತ್ರೆಯ ರಚನಾಕರ್ತರಾಗಿರುವ ಮೌಲಾನಾ ಶಿಬ್ಲಿ ನೋಮಾನಿಯವರು ಭಾರತೀಯ ಇಸ್ಲಾಮಿಕ್ ಪಂಡಿತರ ಇತಿಹಾಸದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರು ಕೇವಲ ಒಬ್ಬ ಧಾರ್ಮಿಕ ವಿದ್ವಾಂಸರಷ್ಟೇ ಅಲ್ಲ, ಕವಿ, ಇತಿಹಾಸಕಾರ, ತತ್ವಜ್ಞಾನಿ, ಶಿಕ್ಷಣ ಸುಧಾರಕ ಹಾಗೂ ಸಮಾಜಿಕ ಚಿಂತಕರಾಗಿ ಪ್ರಸಿದ್ಧರಾಗಿದ್ದಾರೆ. ಅವರ ಜೀವನ ಮತ್ತು ಕೃತಿಗಳು ಭಾರತೀಯ ಮುಸ್ಲಿಂ ಸಮಾಜದ ಬೌದ್ಧಿಕ ಪುನರುತ್ಥಾನದಲ್ಲಿ ಮಹತ್ವದ ಪಾತ್ರವಹಿಸಿದೆ.

ಶಿಬ್ಲಿ ನೊಮಾನಿ 1857ರ ಜೂನ್ 4ರಂದು ಉತ್ತರ ಪ್ರದೇಶದ ಅಜಂಘಢ ಜಿಲ್ಲೆಯ ಬಿಂದ್ವಾಲ್ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಶೇಖ್ ಹಬೀಬುಲ್ಲಾ ಮತ್ತು ತಾಯಿ ಮೊಕೀಮಾ ಖಾತೂನ್. ಅವರ ತಂದೆ ವಕೀಲರೂ, ಕೈಗಾರಿಕೋದ್ಯಮಿಯೂ ಆಗಿದ್ದರು. ಸೂಫಿ ಸಂತ ಮತ್ತು ಜುನೈದ್ ಬಾಗ್ದಾದಿಯ ಶಿಷ್ಯರಾಗಿದ್ದ ಅಬು ಬಕರ್ ಅಲ್-ಶಿಬ್ಲಿಯ ಹೆಸರನ್ನೇ ಇವರಿಗೆ ಇಡಲಾಯಿತು. ನಂತರದ ಜೀವನದಲ್ಲಿ, ಅವರು ತಮ್ಮ ಹೆಸರಿಗೆ “ನೊಮಾನಿ” ಎಂದು ಸೇರಿಸಿಕೊಂಡರು ಸಂಪ್ರದಾಯ ಬದ್ಧ ಇಸ್ಲಾಮಿಕ್ ಶಿಕ್ಷಣವನ್ನು ಪಡೆದ ಅವರು ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಆಳವಾದ ಪಾಂಡಿತ್ಯ ಹೊಂದಿದರು ಹಾಗೂ ಉರ್ದು ಭಾಷಾ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನು ಉರ್ದು ಭಾಷೆಯ ಪಿತಾಮಹ ಎಂದು ಕರೆಯಲಾಗುತ್ತದೆ.

1857ರ ಕ್ರಾಂತಿಯ ನಂತರದ ಘಟನೆಗಳಿಂದ ಭಾರತದ ಮುಸ್ಲಿಮರಲ್ಲಿ ತೀವ್ರ ಹತಾಶೆ ಮೂಡಿತ್ತು. ಸಿಪಾಯಿ ದಂಗೆಯ ಬಳಿಕ ಮುಸ್ಲಿಮರನ್ನು ಶೈಕ್ಷಣಿಕ ಅಭಿವೃದ್ಧಿ ಗೊಳಿಸಬೇಕೆಂಬ ಚಿಂತನೆ ವ್ಯಾಪಕವಾಗಿ ನಡೆಯಿತು. 1882ರಲ್ಲಿ ಶಿಬಿ ನೋಮಾನಿ 25 ವರ್ಷದವರಾಗಿದ್ದಾಗ ಅಲೀಗಡ ದಲ್ಲಿ ಸರ್ ಸಯ್ಯದ್ ಅಹ್ಮದ್ ಖಾನ್‌ರನ್ನು ಭೇಟಿ ಮಾಡಿದರು. ಸರ್ ಸಯ್ಯದ್ ಅಹ್ಮದ್ ಖಾನ್‌ರ ವಿಚಾರಗಳಿಂದ ಎಷ್ಟು ಪ್ರಭಾವಿತರಾದರೆಂದರೆ, ಅಂದಿನಿಂದಲೇ ಸರ್ ಸಯ್ಯದ್‌ರ ಧೇಯವನ್ನು ತಮ್ಮ ಧೈಯವನ್ನಾಗಿಸಿಕೊಂಡರು. ಶಿಬ್ಲಿ ನೊಮಾನಿ Muhammadan Anglo-Oriental College (M.A.O)  ಆಗಿದ್ದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ 1882ರಿಂದ 1898ರವರೆಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಅವರು ಸರ್ ಸೆಯ್ಯದ್ ಅಹ್ಮದ್ ಖಾನ್ ರವರೊಂದಿಗೆ ಕಾರ್ಯನಿರ್ವಹಿಸಿದರು. ಶಿಬ್ಲಿಯವರು ಈ ಪ್ರದೇಶದ ಎರಡು ಪ್ರಭಾವಿ ಚಳುವಳಿಗಳಾದ ಅಲಿಗಢ ಮತ್ತು ನದ್ವಾ ಚಳುವಳಿಗಳೊಂದಿಗೆ ಸಕ್ರೀಯರಾದರು.

ಶಿಬ್ಲಿಯವರು ಪ್ರಾರಂಭದಲ್ಲಿ ಅಲಿಗಢ ಚಳುವಳಿಯ ಕೆಲವು ಆಲೋಚನೆಗಳನ್ನು ವಿರೋಧಿಸಿದರು. ಅವರು ಪಾಶ್ಚಾತ್ಯ ವಿದ್ಯೆಯನ್ನು ಸ್ವೀಕರಿಸುವ ಅಗತ್ಯವಿದ್ದರೂ, ಇಸ್ಲಾಮಿಕ್ ಪರಂಪರೆಯನ್ನು ಕಾಪಾಡಿಕೊಳ್ಳಬೇಕು ಎಂದು ನಂಬಿದರು. ಅವರ ದೃಷ್ಟಿಯಲ್ಲಿ ಶಿಕ್ಷಣವು ಸಂಸ್ಕೃತಿ ಮತ್ತು ಧರ್ಮದ ಬೇರುಗಳನ್ನು ಕಳೆದುಕೊಳ್ಳಬಾರದು ಎಂದಾಗಿತ್ತು.

1894ರಲ್ಲಿ ಲಕ್ಕೋದಲ್ಲಿ ಇಸ್ಲಾಮಿ ವಿದ್ಯಾಸಂಸ್ಥೆ ನದ್ವತುಲ್ ಉಲೆಮಾ ಆರಂಭವಾಯಿತು. 1898ರಲ್ಲಿ ಸರ್ ಸಯ್ಯದ್ ನಿಧನ ಹೊಂದಿದಾಗ, ಮೌಲಾನಾ ಶಿಬ್ಲಿ ನೋಮಾನಿ M.A.O. ಕಾಲೇಜು ತೊರೆದು ನದ್ವತುಲ್ ಉಲೆಮಾ ಸೇರಿದರು. ಇಲ್ಲಿ ಪಠ್ಯಕ್ರಮದಲ್ಲಿ ಸುಧಾರಣೆಗಳನ್ನು ತಂದರು. ಇಸ್ಲಾಮಿಕ್ ಮತ್ತು ಆಧುನಿಕ ಶಿಕ್ಷಣವನ್ನು ಸಮನ್ವಯಗೊಳಿಸಲು ಪ್ರಯತ್ನಿಸಿದರು. ಈ ವಿದ್ಯಾ ಕೇಂದ್ರವು ಸ್ವಾತಂತ್ರ್ಯ ಹೋರಾಟದ ಕೇಂದ್ರವಾಗಿ ಪರಿವರ್ತಿತಗೊಂಡಿತು. ಪೊಲೀಸರು ಇದರ ಮೇಲೆ ತೀವ್ರ ನಿಗಾ ಇಟ್ಟಿದ್ದರು. ಐದಕ್ಕಿಂತ ಹೆಚ್ಚಿನ ಮುಸ್ಲಿಮರು ಎಲ್ಲಿಯಾದರೂ ಸೇರುತ್ತಿದ್ದರೆ, ಅದು ಶಾಂತಿಗೆ ಭಂಗ ತರುವುದೆಂದು ಸರಕಾರ ಪರಿಗಣಿಸುತ್ತಿತ್ತು. ಸರಕಾರ ತೀವ್ರ ಕಿರುಕುಳ ಕೊಡಲು ಆರಂಭಿಸಿದಾಗ ಅನೇಕ ಉಲೆಮಾಗಳು ಬ್ರಿಟಿಷ್ ಇಂಡಿಯಾ ತೊರೆಯಲು ನಿರ್ಬಂಧಿತರಾದರು. ಮೌಲಾನಾ ಶಿಬ್ಲಿ ನೋಮಾನಿಯವರು ಸಹ ಕೆಲವು ಕಾಲ ನದ್ವಾ ತೊರೆದು ಹೈದರಾಬಾದ್‌ನಲ್ಲಿ ಆಶ್ರಯ ಪಡೆದರು. ಅಲಿಗಢವನ್ನು ತೊರೆದ ನಂತರ, ಅವರು ಹೈದರಾಬಾದ್ ರಾಜ್ಯದಲ್ಲಿ ಶಿಕ್ಷಣ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಅವರ ಪ್ರಯತ್ನಗಳಿಂದ Osmania University ನಲ್ಲಿ ಉರ್ದುವನ್ನು ಬೋಧನಾ ಮಾಧ್ಯಮವಾಗಿ ಬಳಸಲಾಯಿತು.

ಶಿಬ್ಲಿಯವರು ಮುಸ್ಲಿಮ್ ಯುವ ಹೋರಾಟಗಾರರಲ್ಲಿ ಹುರುಪು ಹೆಚ್ಚಿಸಲು ಹಲವು ಮುಸ್ಲಿಂ ವೀರರ ಜೀವನ ಚರಿತ್ರೆಗಳನ್ನು ಬರೆದರು, ಅವರ ಕಾಲದ ಮುಸ್ಲಿಮರು ಹಿಂದಿನ ಕಾಲದಿಂದ ಅಮೂಲ್ಯವಾದ ಪಾಠಗಳನ್ನು ಕಲಿಯಬಹುದು ಎಂದು ಮನವರಿಕೆ ಮಾಡಿಕೊಂಡರು.1892ರಲ್ಲಿ ಅವರು Thomas Walker Arnold ಅವರೊಂದಿಗೆ ಸಿರಿಯಾ, ಟರ್ಕಿ ಮತ್ತು ಈಜಿಪ್ಟ್‌ಗೆ ಪ್ರವಾಸ ಮಾಡಿದರು. ಈ ಪ್ರವಾಸವು ಅವರ ಚಿಂತನೆಗೆ ಹೊಸ ಆಯಾಮ ನೀಡಿತು. ಅವರು ಕೈರೋದಲ್ಲಿ ವಿದ್ವಾಂಸ ಮುಹಮ್ಮದ್ ಅಬ್ದುಲ್ಲಾ ರವರನ್ನು ಭೇಟಿಯಾದರು, ಇದು ಅವರ ಸುಧಾರಣಾತ್ಮಕ ಚಿಂತನೆಗೆ ಪ್ರೇರಣೆಯಾಯಿತು. ಪ್ರವಾದಿ ಮುಹಮ್ಮದ್ ಅವರ ಜೀವನದ ಬಗ್ಗೆ ಹೆಚ್ಚಿನ ವಸ್ತುಗಳನ್ನು ಸಂಗ್ರಹಿಸಿದರು ಮತ್ತು ಯೋಜಿತ ಕೃತಿಯಾದ ಸಿರತ್ ಅಲ್-ನಬಿಯ ಮೊದಲ ಎರಡು ಸಂಪುಟಗಳನ್ನು ಪೂರ್ಣಗೊಳಿಸಿದರು.

1910 ಮತ್ತು 1935 ರ ನಡುವೆ ಉರ್ದು ಭಾಷೆಯಲ್ಲಿ ನಿರ್ಮಾಣವಾದ ಇಸ್ಲಾಮಿಕ್ ಸಾಹಿತ್ಯಕ್ಕೆ ಅವರ ಹಿಂದಿನ ಮತ್ತು ಆಧುನಿಕ ವಿಚಾರಗಳ ಸಂಶ್ಲೇಷಣೆ ಗಣನೀಯ ಕೊಡುಗೆ ನೀಡಿತು. ಇಸ್ಲಾಮಿಕ್ ಪಾಂಡಿತ್ಯವನ್ನು ಉತ್ತೇಜಿಸಲು ಶಿಬ್ಲಿ 1883 ರಲ್ಲಿ ತಮ್ಮ ಊರಾದ ಅಝಂಗಡದಲ್ಲಿ ಶಿಬ್ಲಿ ನ್ಯಾಶನಲ್ ಕಾಲೇಜು ಸ್ಥಾಪಿಸಿದರು.

ಆಗಿನ ಕಾಲದಲ್ಲಿ ಮುಸ್ಲಿಮರಿಗೆ ಇಸ್ಲಾಮಿನ ಸುವರ್ಣ ಇತಿಹಾಸ, ಜಾಗತಿಕ ಸಂಸ್ಕೃತಿಗೆ, ಸಮಾಜಕ್ಕೆ ಮುಸ್ಲಿಮರ ಕೊಡುಗೆಗಳ ಅರಿವನ್ನು ಮೌಲಾನಾ ಶಿಬ್ಲಿ ನೋಮಾನಿ ಮಾಡಿದರು. ಅವರ ಬರವಣಿಗೆಯಲ್ಲಿ ವಿಶೇಷ ಆಕರ್ಷಣೆ ಇತ್ತು. ಅಲ್ ಮಾಮೂನ್, ಸೀರತ್ ನೋಮಾನ್, ಅಲ್ ಫಾರೂಕ್, ಸೀರತುನ್ನಬಿ(ಸ) ಮುಂತಾದ ಗ್ರಂಥಗಳನ್ನು ಬರೆದು ಮುಸ್ಲಿಮರಿಗೆ ಅವರ ಭವ್ಯ ಪರಂಪರೆಯ ತಿಳುವಳಿಕೆ ನೀಡಿದರು. ಹಾಗೆಯೇ ಅವರ ಕೆಲವು ಕೃತಿಗಳಾದ ಇಲ್‌ಮುಲ್ ಕಲಾಮ್, ಅಲ್ ಕಲಾಮ್, ಅಲ್ ಗಝಾಲಿ, ಮೌಲಾನಾ ರೂಮಿ ಪರ್ಷಿಯನ್ ಕಾವ್ಯದ ಇತಿಹಾಸ ಕೃತಿಗಳು, ಇಸ್ಲಾಮಿಕ್ ಇತಿಹಾಸ ಮತ್ತು ತತ್ವಶಾಸ್ತ್ರವನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸುತ್ತವೆ. ಹಾಗೂ ವೈಚಾರಿಕ ಸಿದ್ಧಾಂತಕ್ಕೆ ಹೊಸ ನೆಲೆಗಟ್ಟನ್ನು ಒದಗಿಸಿತು. ಶಿಕ್ಷಣ, ಇತಿಹಾಸ, ಸಾಹಿತ್ಯ, ವಿಮರ್ಶೆ ಮೊದಲಾದ ವಿಷಯಗಳ ಬಗ್ಗೆ ಲೇಖನಗಳನ್ನು ಬರೆದರು.

ತಮ್ಮ ಬರವಣಿಗೆಯಿಂದ ಮೌಲಾನಾ ಶಿಬ್ಲಿ ನೋಮಾನಿ ರಾಷ್ಟ್ರ ಮಟ್ಟದ ನಾಯಕನ ಸ್ಥಾನವನ್ನು ಪಡೆದರು. ನದ್ವತುಲ್ ಉಲೆಮಾ ಸೇರಿದ ನಂತರ ಮುಸ್ಲಿಮ್ ಸಮುದಾಯಕ್ಕೆ ಅದರಿಂದ ಗರಿಷ್ಠ ಪ್ರಯೋಜನವಾಗುವಂತೆ ಯತ್ನಿಸಿದರು. ದಾರುಲ್-ಉಲೂಮ್ ದೇವ್ ಬಂದ್‌ನ ಮೇಲ್ವಿಚಾರಣೆಯೂ ಇವರ ಮೇಲೆಯೇ ಇತ್ತು. ಮದ್ರಸಾಗಳ ಪಠ್ಯ ಪುಸ್ತಕ ಕ್ರಮದಲ್ಲಿ ಮಹತ್ತರ ಬದಲಾವಣೆಗಳನ್ನು ತಂದರು. ಇಂಗ್ಲಿಷ್ ಭಾಷೆಯ ಕಲಿಕೆಯನ್ನು ಕಡ್ಡಾಯಗೊಳಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ದು, ಅವರಿಗೆ ವೈಯಕ್ತಿಕ ಗಮನಕೊಟ್ಟು ಅವರ ಪ್ರತಿಭೆಗಳು ಬೆಳಗುವಂತೆ ಮಾಡುತ್ತಿದ್ದರು. ಮೌಲಾನಾ ಸಯ್ಯದ್ ಸುಲೈಮಾನ್ ನದ್ವಿ ಮತ್ತು ಮೌಲಾನಾ ಅಬುಲ್ ಕಲಾಮ್ ಆಝಾದ್, ಅವರ ವಿಶೇಷ ಗಮನ ಸೆಳೆದವರಲ್ಲಾಗಿದ್ದರು.

ಶಿಬ್ಲಿ ನೊಮಾನಿಯವರ ಚಿಂತನೆಯ ಕೇಂದ್ರಬಿಂದು “ಪೂರ್ವ ಮತ್ತು ಪಾಶ್ಚಾತ್ಯ ಜ್ಞಾನಗಳ ಸಮನ್ವಯ” ಆಗಿತ್ತು. ಅವರು ಮುಸ್ಲಿಮರು ತಮ್ಮ ಪರಂಪರೆಯನ್ನು ಮರೆಯದೆ, ಆಧುನಿಕ ವಿಜ್ಞಾನ ಮತ್ತು ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕು ಎಂದು ನಂಬಿದರು. ಅವರ ಅಭಿಪ್ರಾಯದಲ್ಲಿ ಶಿಕ್ಷಣವು ಧರ್ಮ ಮತ್ತು ವಿಜ್ಞಾನ ಎರಡನ್ನೂ ಒಳಗೊಂಡಿರಬೇಕು. ಮುಸ್ಲಿಮರು ತಮ್ಮ ಇತಿಹಾಸದಿಂದ ಪಾಠ ಕಲಿಯಬೇಕು ಮತ್ತು ಅವರಿಗೆ ಸ್ವಾಭಿಮಾನ ಮತ್ತು ಸ್ವಾವಲಂಬನೆ ಅತ್ಯಗತ್ಯವಾಗಿದೆ ಎಂದರು. ಅವರ ಚಿಂತನೆಗಳು ಇಸ್ಲಾಮಿಕ್ ಅಧ್ಯಯನ ಮತ್ತು ಉರ್ದು ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಪಡೆದಿವೆ. ಅವರು ಇತಿಹಾಸಶಾಸ್ತ್ರದಲ್ಲಿ ಹೊಸ ವಿಧಾನಗಳನ್ನು ಪರಿಚಯಿಸಿದರು ಮತ್ತು ಮುಸ್ಲಿಂ ಸಮಾಜದಲ್ಲಿ ಬೌದ್ಧಿಕ ಚೈತನ್ಯವನ್ನು ಮೂಡಿಸಿದರು.

ಸುಲ್ತಾನ್ ಅಬ್ದುಲ್ ಹಮೀದ್ II ಅವರಿಂದ ಒಟ್ಟೋಮನ್ ಸಾಮ್ರಾಜ್ಯದ ಆರ್ಡರ್ ಆಫ್ ದಿ ಮೆಡ್ಜಿಡಿ (Order of the Medjidie) ಪದಕವನ್ನು ಪಡೆದರು. ಬ್ರಿಟಿಷ್ ಸಾಮ್ರಾಜ್ಯದಿಂದ ಶಂಸುಲ್ ಉಲಮಾ ಮಿಲಿಟರಿ ಸೇವೆ ಗೌರವ ಗಳಿಸಿದರು. 1876 ರಲ್ಲಿ ಮಜೀದುನ್ನಿಸಾ ರನ್ನು ವಿವಾಹವಾದರು ಅವರಿಗೆ ಮೂರು ಮಕ್ಕಳು. 1913 ರಲ್ಲಿ ತಮ್ಮ ಊರಾದ ಅಜಮ್‌ಘರ್ ಸುತ್ತಮುತ್ತಲಿನ ಪ್ರದೇಶದಲ್ಲಿ ನೆಲೆಸಲು ಲಕ್ನೋವನ್ನು ಬಿಡಬೇಕಾಯಿತು.  1914 ನವೆಂಬರ್ 18ರಂದು ತಮ್ಮ 57ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿಧನದ ಮೂರು ದಿನಗಳ ಬಳಿಕ ನವೆಂಬರ್ 21ರಂದು ದಾರುಲ್ ಮುಸನ್ನೆಫಿನ್ ಶಿಬ್ಲಿ ಅಕಾಡೆಮಿಯನ್ನು ಸ್ಥಾಪಿಸಲಾಯಿತು.

ಶಿಬ್ಲಿ ನೊಮಾನಿ ಕೇವಲ ಒಂದು ವ್ಯಕ್ತಿ ಅಲ್ಲ, ಒಂದು ಯುಗದ ಪ್ರತೀಕ. ಅವರ ಜೀವನವು ಪರಂಪರೆ ಮತ್ತು ಆಧುನಿಕತೆಯ ನಡುವಿನ ಸಮತೋಲನವಾಗಿದೆ. ಇಂದಿನ ಕಾಲದಲ್ಲೂ ಅವರ ಸಾಹಿತ್ಯ ಮತ್ತು ಧರ್ಮದ ಸಮನ್ವಯದ ಚಿಂತನೆಗಳು ಇಂದು ಅತೀ ಅಗತ್ಯವಾಗಿದೆ.

Previous article“ಇನ್ನಮಲ್ ಆಮಾಲು ಬಿನ್ನಿಯತ್ “
ಎಂ. ಅಶೀರುದ್ದೀನ್ ಸಾರ್ತಬೈಲ್
ಮುಹಮ್ಮದ್ ಅತೀರುದ್ದೀನ್ ಸಾರ್ತಬೈಲ್ ವಿಭಿನ್ನ ಹಾಗೂ ಬಂಡಾಯ ಸ್ವರೂಪದ ಬರಹದಿಂದ ಗುರುತಿಸಿಕೊಂಡ ಲೇಖಕ. ಕಥೆ, ಲೇಖನ, ಕವನಗಳು ಹಲವು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಬ್ಯಾರಿ, ಕನ್ನಡ, ಮಲಯಾಳಂ, ಅರೇಬಿಕ್, ತುಳು, ಇಂಗ್ಲಿಷ್, ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ಹಿಡಿತವಿರುವ ಇವರು ಅನುವಾದಕರೂ ಹೌದು. ‘ಅಶೀರನ ಕವನಗಳು’ ಇವರ ಮೊದಲ ಕೃತಿ; ‘ಹನುಮಾನ್ ಕಟ್ಟೆಯ ಆಲದ ಮರ’ ಕಥೆ 2024ರ ಬುಕ್ ಬ್ರಹ್ಮ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದಿದೆ. ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2019ರಲ್ಲಿ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಪ್ರಬಂಧ ಮಂಡಿಸಿದ್ದು, ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕರಾಗಿದ್ದಾರೆ.

LEAVE A REPLY

Please enter your comment!
Please enter your name here