ಲೇಖಕರು: ಎಲ್ದೋ ಹೊನ್ನೇಕುಡಿಗೆ.

ಬೆಳೆಗಳ ಕಟಾವಿನ ದಿನಗಳೆಲ್ಲಾ ಕಳೆದ ನಂತರದಲ್ಲಿ ಬರುವ ಚಳಿಗಾಲವದು. ಕೆಲಸವೆಲ್ಲ ಮುಗಿದಿದ್ದರಿಂದ ಅರ್ಜುನ್ ಸಂಜೆಯಾಗುತ್ತಿದ್ದಂತೆ ಪೇಟೆಗೆ ಬಂದು ತಾನು ಆಗಾಗ ಕೂರುತ್ತಿದ್ದ ಸಿಮೆಂಟ್ ಕಟ್ಟೆಯ ಮೇಲೆ ಕುಳಿತ. ಪೇಟೆಯಲ್ಲೇ ವಾಸವಿದ್ದ ಆತನ ಬಾಲ್ಯದ ಸಹಪಾಠಿ ಅಕ್ಬರ್ ಅದೇ ಹಾದಿಯಲ್ಲಿ ಸಾಗುತ್ತಿದ್ದಾಗ ಅರ್ಜುನನನ್ನು ಕಂಡು “ನಾ ಮನೆಯಿಂದ ಹೊರಟಾಗಲೇ ಅನ್ಕೊಂಡೆ ಅರ್ಜುನ ಇಲ್ಲೇ ಬಂದಿರಬಹುದೆಂದು” ಎನ್ನುತ್ತಲೇ ಬಿಚ್ಚು ಮನಸ್ಸಿನಿಂದ ಮಾತನಾಡಲಾರಂಭಿಸಿದ. ಇವರಿಬ್ಬರ ಚರ್ಚೆ ಆರಂಭವಾಗುತ್ತಲೆ ಆ ರಸ್ತೆಯಲ್ಲೇ ನಡೆದು ಬರುತ್ತಿದ್ದ ಇವರನ್ನು ನೋಡಿ ಆಂಟೋನಿ “ನನ್ನ ಚಡ್ಡಿ ದೋಸ್ತ್ ಗಳಿಬ್ಬರೂ ಮಾತಾಡೋ ಮಷಿನ್ ಗಳಾದಂಗಿದೆ” ಎಂದು ಸಂತಸದಿಂದಲೇ ಇವರ ಪಕ್ಕ ಬಂದು ಕುಳಿತ.

ಇನ್ನೇನಪ್ಪಾ ಸಮಾಚಾರ ಎಂದು ಅರ್ಜುನ್ ತನ್ನ ಗೆಳೆಯರನ್ನು ಕೇಳುತ್ತಿದ್ದಂತೆ ಆಂಟನಿ “ಏನ್ ಸಮಾಚಾರ ಬಿಡಪ್ಪ, ಈ ವರ್ಷವಾದರೂ ನಾನು ಬೆಳೆದ ಭತ್ತವನ್ನು ಮಾರಿದ ಮೇಲೆ ಒಂದಷ್ಟು ಸಾಲ ತೀರಿಸಿ ನೆಮ್ಮದಿಯಾಗಿರಬಹುದೆಂದುಕೊಂಡಿದ್ದೆ. ಈ ಹಾಳಾದ್ ಮಳೆ, ಬರಬೇಕಾದಾಗ ಬರದೆ ಭತ್ತ ಕೊಯ್ಲಿನ ಟೈಮಲ್ಲಿ ಬಂದು ಒಂದಷ್ಟು ಭತ್ತ ಹಾಳಾಯ್ತು. ಉಳಿದಿರೊ ಇನ್ನೊಂದಷ್ಟಕ್ಕೆ ನೆಟ್ಟಗೆ ರೇಟೂ ಇಲ್ಲ. ಮನೆಯಲ್ಲಿ ಮಕ್ಕಳನ್ನು ಓದ್ಸೋಕೆ ಈ ವರ್ಷನೂ ಸಾಲ ತಗೋಬೇಕೆಂದ”!

ಅಕ್ಬರ್: ಭತ್ತ ಮಾತ್ರವೇನು? ನಮ್ಮೂರ ರೈತರು ಬೆಳೆಯುವ ಸುವರ್ಣ ಗೆಡ್ಡೆ, ಗೇರುಬೀಜ ರಬ್ಬರು, ಶುಂಠಿ, ತರಕಾರಿಗಳು.. ಯಾವುದನ್ನಾದರೂ ನಂಬಿ ಸಾಲ ಮಾಡಕ್ಕಾಗುತ್ತಾ? ಮಕ್ಕಳನ್ನು ಓದ್ಸೋದಂತೂ ಬಿಡಪ್ಪ, ಬಡವ್ರು, ನಮ್ಮಂತವರ ಕೈಯಲ್ಲಿ ಆಗಲ್ಲ ಅನ್ನೋ ಕಾಲ ಬಂದಾಯ್ತು. ವಿದ್ಯಾಭ್ಯಾಸಕ್ಕೆ ಲಕ್ಷಗಟ್ಟಲೆ ಸುರೀಬೇಕು. ಅದೊಂದು ಬ್ಯುಸಿನೆಸ್ ತರ ಆಗೋಗಿದೆ. ಶ್ರೀಮಂತರ ಮಕ್ಕಳಿಗೆ ಮಿರಮಿರ ಮಿಂಚುವ ಯೂನಿಫಾರಂ, ಸ್ಕೂಲ್ ಬಸ್ಸು, ಎಲ್ಲಾ ಸಿಗುತ್ತೆ. ನಮ್ ಮಕ್ಕಳಿಗಂತೂ ಮಳೆ ನೀರು ಸೋರುವ, ಸರಿಯಾಗಿ ಮೇಷ್ಟ್ರುಗಳೇ ಇಲ್ಲದ ಸರ್ಕಾರಿ ಶಾಲೇನೇ ಗತಿ.!

ಆಂಟೋನಿ: ನಮ್ಮಣ್ಣನ ಮಗಳು ನೋಡಪ್ಪ, ನಾವೆಲ್ಲ ಓದಿದ ಈ ಸರ್ಕಾರಿ ಶಾಲೇಲೆ ಇಪ್ಪತ್ತು ವರ್ಷದ ಹಿಂದೆ ಓದಿ, ನರ್ಸಿಂಗ್ ಮುಗಿಸ್ಕೊಂಡು ಪಟ್ಟಣದ ಒಂದು ಹಾಸ್ಪಿಟಲ್ನಲ್ಲಿ ಕೆಲಸಕ್ಕೆ ಸೇರಿ ಅಣ್ಣ-ಅತ್ತಿಗೆಗೆ ಆಸರೆಯಾದಳು. ನನ್ನ ಮಕ್ಕಳನ್ನು ಸಾಲ-ಸೂಲ ಮಾಡಿ ಓದ್ಸಿದರೂ ಕೆಲಸ ಸಿಕ್ತತೈತೆ ಅನ್ನೊ ಯಾವ್ ಭರವಸೇನೂ ಇಲ್ಲ. ಬೇರೆಲ್ಲಾ ದೇಶಕ್ಕಿಂತ ನಮ್ಮ ದೇಶದಲ್ಲೇ ಅತಿ ಹೆಚ್ಚಿನ ನಿರುದ್ಯೋಗಿಗಳು ಇರೋದಂತೆ!

ಅರ್ಜುನ: ಒಟ್ಟಿನಲ್ಲಿ ಇವತ್ತಿನ ಕಾಲದಲ್ಲಿ ಬದುಕು ಸಾಗಿಸುವುದೇ ಬಹಳ ಕಷ್ಟಕರ. ಅಂದ್ಹಾಗೆ, ಅಕ್ಬರ್ ನೀ ನಿನ್ನ ಹಳೆಯ ಬೈಕ್ನಲ್ಲಿ ಬರದೆ ಇವತ್ತು ನಡ್ಕೊಂಡೆ ಯಾಕೆ ಬಂದೆ?

ಅಕ್ಬರ: ಈಗೀನ್ ಪೆಟ್ರೋಲ್ ರೇಟಿಗೆ ಬೈಕಲ್ಲಿ ಬಂದ್ರೆ…..
ಬೈಕಿನ ಹೊಟ್ಟೆಗೆ ಪೆಟ್ರೋಲ್ ಹಾಕಿಸಿದರೆ ನನ್ ಹೊಟ್ಟೆಗೆ ತಣ್ಣೀರು ಬಟ್ಟೇನೆ ಗತಿ! ಸರಿಸರಿ, ನೀನೇಕೆ ಆಂಟೋನಿ ಇವತ್ತು ಪೇಟೆಗೆ ಸಂಜೆಯಾದ ಮೇಲೆ ಬಂದೆ?

ಆಂಟೋನಿ: ನಮ್ಮ ಮನೇಲಿ ಇವತ್ತು ಮಧ್ಯಾಹ್ನದ ಅಡಿಗೆ ಮಾಡುತ್ತಿರುವಾಗಲೇ ಅಡಿಗೆ ಗ್ಯಾಸ್ ಖಾಲಿ ಆಗೋಯ್ತು! ನನ್ ಹೆಂಡತಿ- ಮಕ್ಳು ಮಧ್ಯಾಹ್ನಕ್ಕೆ ನಾವು ಬೆಳೆದಿದ್ದ ಮರಗೆಣಸು ತಿಂದು ಅರೆಹೊಟ್ಟೆ ತುಂಬಿಸಿಕೊಂಡೆವು. ಈಗಿನ ಗ್ಯಾಸ್ ರೇಟಿಗೆ ಗ್ಯಾಸ್ ಕೊಳ್ಳುವುದಕ್ಕೆ ನನ್ನ ಬಳಿಯಂತೂ ದುಡ್ಡಿಲ್ಲ. ರಾತ್ರಿ ಊಟಕ್ಕೆ ಅವಲಕ್ಕಿಯಾದರೂ ಕೊಂಡುಕೊಳ್ಳೋಣವೆಂದು ದಿನಸಿ ಅಂಗಡಿಗೆ ಬಂದೆ.

( ಇದರ ಮಧ್ಯೆ ಅರ್ಜುನ ಜೋರಾಗಿ ಕೆಮ್ಮುತ್ತಿದ್ದದ್ದನ್ನು ಕಂಡು)

ಅಕ್ಬರ್ : ಯಾಕೋ ಅರ್ಜುನ ನಿನ್ನ ಕೆಮ್ಮು ಎಷ್ಟೊಂದು ದಿನಗಳಾಯ್ತು ಹಾಗೆ ಇದಿಯಲ್ಲೋ?

ಅರ್ಜುನ: ಗೋರ್ಮೆಂಟ್ ಹಾಸ್ಪಿಟಲ್ ಗೆ ತೋರಿಸಿದ್ದೆ. ಶಿವಮೊಗ್ಗಕ್ಕೆ ಹೋಗಿ ಸ್ಕ್ಯಾನಿಂಗ್ ಮಾಡಿಸಿ ಅಂತ ಚೀಟಿ ಬರೆದ್ ಕೊಟ್ರು. ಶಿವಮೊಗ್ಗಕ್ಕೆ ಫೋನ್ ಮಾಡಿ ವಿಚಾರಿಸಿದರೆ ಸ್ಕ್ಯಾನಿಂಗ್, ಔಷದಿಗಳಿಗಾಗೊ ಖರ್ಚು ಕೇಳಿ ಇದು ನನ್ ಕೈಯಲ್ಲಾಗುವ ಕೆಲಸವಲ್ಲವೆಂದು ತಿಳೀತು. “ಬಡವ ನೀ ಮಡಗ್ದಗಿರು” ಅನ್ನೋ ಗಾದೆ ತರ ನಾ ಹೀಗೆ ಇದೀನಿ.
ಅಂದ್ಹಾಗೆ ಆಂಟೋನಿ, ಮಳೆ ಬಂದು ಅದೇನೊ ಭತ್ತವೆಲ್ಲಾ ನಾಶವಾಯಿತು ಅಂದ್ಯಲ್ಲೊ, ಸರ್ಕಾರದೋರು ಅದೇನೋ ಪರಿಹಾರ ಕೊಡುತ್ತಾರಂದ್ರಲ್ವ, ನೀನೂ ಒಂದು ಅರ್ಜಿ ಕೊಡೋದಲ್ವ?

ಆಂಟೋನಿ: ಅರ್ಜಿ ಕೊಟ್ರೆ ಆಗೋಗುತ್ತಾ? ದಿನಗಟ್ಟಲೆ ಅವರ ಕಛೇರಿಗೆ ಅಲೀಬೇಕು, ಟೇಬಲ್ ಕೆಳಗೆ ಒಂದಷ್ಟು ತಳ್ಳಬೇಕು. ಇಷ್ಟೆಲ್ಲಾ ಮಾಡಿದ ಮೇಲೆ ಈ ಸರ್ಕಾರದವರಿಂದ ನಮ್ಮ ಕೈಸೇರೋದು ಪುಡಿಗಾಸು!

( ಮೂರು ಮಂದಿ ಗೆಳೆಯರು ಚರ್ಚೆ ನಡೆಸುತ್ತಿರುವಾಗಲೇ ಪೇಟೆಯಲ್ಲಿ ಅಲ್ಲಲ್ಲಿ ಹೆಚ್ಚೆಚ್ಚು ಪೋಲಿಸರು ನಿಂತಿರುವುದನ್ನು ಕಂಡು)

ಅಕ್ಬರ್: ಇಂದೇಕೆ ನಮ್ಮ ಪೇಟೆಯಲ್ಲಿ ಇಷ್ಟೊಂದು ಪೊಲೀಸರು?

ಅರ್ಜುನ: ಅಲ್ಲೊಂದು ಶಿಲುಬೆ ಸ್ಥಾಪಿಸಿದ್ದಾರಂತೆ, ಆ ಶಿಲುಬೆಯನ್ನು ತೆರವುಗೊಳಿಸಬೇಕೆಂದು ಒಂದಷ್ಟು ಜನ ಮೆರವಣಿಗೆ ಮಾಡುತ್ತಿದ್ದಾರಂತೆ ಅದಕ್ಕೆ ನಮ್ ಪೇಟೆಯಲ್ಲಿ ಬಿಗುವಿನ ವಾತಾವರಣ!

ಅಕ್ಬರ್: ಇದೊಳ್ಳೆ ರಂಪಾಟವಾಯಿತಲ್ಲ, ನಮ್ಮ ಪೇಟೆಯಲ್ಲಿ ನಾವು ಹುಟ್ಟಿದಾಗಲಿಂದಲೂ ನೋಡುತ್ತಿದ್ದೇವೆ ಈ ರೀತಿ ಇರಲಿಲ್ವಲ್ಲ ಇಲ್ಲಿ! 60-70 ವರ್ಷದ ಹಿಂದೆ ಅಣೆಕಟ್ಟು ಕಟ್ಟಿದ್ದರಿಂದ ನಮ್ಮೂರ ಮುಳುಗಡೆಯಾಗಿ ನಾವ್ ಅನುಭವಿಸಿದ್ದೇ ಸಾಕು. ಈಗ ಇದು ಬೇರೆ..

ಆಂಟೋನಿ: ಕಳೆದ ತಿಂಗಳು ಮೆರವಣಿಗೆ ಮಾಡಿ ಬೇರೆಯವರ ಬಿಜಿನೆಸ್ ಹಾಳುಮಾಡಲು ಹಲಾಲ್ ಮಾಂಸ ಮಾರಾಟ ಮಾಡುತ್ತಾರೆ, ಕೆಲವೊಂದು ಸ್ಕೂಲ್ಗೆ ಮಕ್ಕಳನ್ನು ಕಳುಹಿಸಿದರೆ ಅಲ್ಲಿ ನಮ್ಮ ಸಂಸ್ಕಾರ-ಸಂಸ್ಕೃತಿಯನ್ನು ಹಾಳು ಮಾಡುತ್ತಾರೆಂದು ಪರ ಊರಿಂದ ಬಂದವರೊಬ್ಬರು ನಮ್ಮೂರಿನ ಬಗ್ಗೆ ಮುಜುಗರ ಹುಟ್ಟುವಂತೆ ಭಾಷಣ ಮಾಡಿ ಹೋಗ್ಲಿಲ್ವಾ..

ಅರ್ಜುನ್: ಹೌದು, ಹಂಗೆ ಭಾಷಣ ಮಾಡಿದ್ದು ನನಗಂತೂ ತುಂಬಾ ನೋವುಂಟು ಮಾಡ್ತು. ಈ ರೀತಿ ಇಲ್ಲ-ಸಲ್ಲದನ್ನು ಹೇಳಿದರೆ ನಾವಂತೂ ನಂಬಲ್ಲ ಯಾಕಂದರೆ ನಾವು ಹುಟ್ಟಿದಾಗಲಿಂದ ನಮ್ಮೂರ ಸ್ಥಿತಿ-ಗತಿಯನ್ನು ನೋಡುತ್ತಾ ಬಂದಿದ್ದೇವೆ. ಆದರೆ ಇಪ್ಪತ್ತು ಮೂವತ್ತು ವಯಸ್ಸಿನ ಯುವಕರು ಬಹುಬೇಗನೆ ಇಂತಹ ಮಾತುಗಳಿಗೆ ಬಲಿಯಾಗುತ್ತಾರೆ ಅದರಿಂದ ನಮ್ಮೂರಿನ ನೆಮ್ಮದಿ ಹಾಳಾಗುತ್ತದೆ. ಈ ರೀತಿ ಮಾಡುವುದರಿಂದ ಮುಂದೆ ಎಲೆಕ್ಷನ್ ಬಂದಾಗ ಯಾರಿಗೆಷ್ಟು ಲಾಭ-ನಷ್ಟಗಳು ಎಂಬ ಲೆಕ್ಕಾಚಾರಗಳು ನಡೆಯುತ್ತಿರುತ್ತೆ ವಿನಃ ನಮ್ಮ-ನಿಮ್ಮ ಜೀವನದಲ್ಲಿ ಏನಾದರೂ ಒಳ್ಳೆ ಬದಲಾವಣೆ ಬರುತ್ತ?

ಅಕ್ಬರ್ : ಈ ರೀತಿ ಮಾಡೋ ಬದ್ಲು, ನಾವ್ ಇಷ್ಟೊತ್ತು ಮಾತಾಡಿದಂತಹ ನಮ್ಮ ಜೀವನ-ಸಂಸಾರ ನಡೆಸೋಕೆ ಅಡ್ಡಿಯಾಗಿರುವ ಬೆಲೆಯೇರಿಕೆ, ಲಂಚಗುಳಿತನ, ಶಿಕ್ಷಣ-ಆರೋಗ್ಯದ ವ್ಯಾಪಾರೀಕರಣ, ರೈತರ ಕಷ್ಟ-ನಷ್ಟಗಳು, ನಿರುದ್ಯೋಗದಂತಹ ಸಮಸ್ಯೆಗಳ ಬಗ್ಗೆ ಹೆಚ್ಚು ತಲೆ ಕೆಡಿಸ್ಕೊಂಡು, ಪ್ರೋಗ್ರಾಮ್ ಮಾಡಿ ಮೆರವಣಿಗೆ ನಡೆಸಿದ್ರೆ ನಮ್ಮ ಕಷ್ಟಗಳೆಲ್ಲ ಹೋಗಿ ನಮಗೂ ಒಂದು ಒಳ್ಳೆ ಕಾಲ ಬರುತ್ತೆ ಅನ್ನೋ ಭರವಸೆ ಹುಟ್ತಿತ್ತು. ನಮ್ಮೂರಿಗೆ ಒಳ್ಳೆ ಹೆಸರೂ ಬರುತಿತ್ತು. ಅದನ್ನು ಬಿಟ್ಟು ಇನ್ನೊಬ್ಬರ ಮೇಲೆ ದ್ವೇಷವನ್ನು ಹರಡುವುದರಿಂದ ನಮ್ಮೂರಿನ ವಾತಾವರಣ ಇನ್ನೊಂದಷ್ಟು ಹಾಳಾಗುತ್ತಷ್ಟೆ.

(ಚರ್ಚೆ ಮುಂದುವರಿಯುತ್ತಿದ್ದಂತೆ ಮುಸ್ಸಂಜೆಯೊಂದಿಗೆ ಚಳಿಯೂ ಆರಂಭವಾಯಿತು. ಪಕ್ಕದಲ್ಲೇ ಇದ್ದ ಚಹಾ ಅಂಗಡಿಯಿಂದ ಅರ್ಜುನ 3 ಬೆಚ್ಚಗಿನ ಚಹಾವನ್ನು ತಂದ.)

ಅರ್ಜುನ: ಅಚ್ಚು-ಮೆಚ್ಚಿನ ನಮ್ಮ ಮೂರೂ ಜನರಂತೆ ಬೆಚ್ಚಗಿನ ಸಂಬಂಧವಿಟ್ಟುಕೊಂಡು ಬದುಕುತ್ತಿರುವ ನಮ್ಮೂರಿನ ಜನಗಳ ಮಧ್ಯೆ ಇವರುಗಳ ಈ ಬೇಳೆ ಬೇಯುತ್ತದೇನೊ……
ಎನ್ನುತ್ತಾ ಚಹಾ ಹೀರಿ ಮುಗಿಸಿ ಅವರು ತಮ್ಮ ತಮ್ಮ ಮನೆಗಳ ಕಡೆ ಹೆಜ್ಜೆ ಹಾಕಿದರು…

(ವಿ.ಸೂ. : ಜನಸಾಮನ್ಯರ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತುತ್ತಾ ವೈವಿಧ್ಯತೆಯಲ್ಲಿ ಏಕತೆಯನ್ನು ಗಟ್ಟಿಗೊಳಿಸಲು ಯತ್ನಸಿರುವ ಈ ರಚನೆಯಲ್ಲಿ ಉಲ್ಲೇಖಿಸಿರುವ ಹೆಸರುಗಳು ಹಾಗೂ ಸಂಭಾಷಣೆಗಳು ಕಾಲ್ಪನಿಕ.)

LEAVE A REPLY

Please enter your comment!
Please enter your name here