ಲೇಖಕರು : ಮಹಮ್ಮದ್ ಪೀರ್ ಇಲಕಲ್ಲ

ಪ್ರಕರಣಕ್ಕೆ ತಕ್ಕಂತೆ ಬದಲಾದ ಸಾಮಾಜಿಕ ದೃಷ್ಟಿಕೋನ.
ಸಂವಿಧಾನ ವಿರುದ್ಧದ ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ಕಾನೂನನ್ನು ಇತ್ತೀಚೆಗೆ ಕೇಂದ್ರ ಸರ್ಕಾರದ ಜಾರಿಗೆ ತಂದಿದೆ ಮತ್ತು ಇದನ್ನು ವಿರೋಧಿಸಿ ಇಡೀ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ ವಿಭಜಕ ನೀತಿಯ ವಿರುದ್ದ ಭಾರತೀಯರು ರಸ್ತೆಗಿಳಿದು ವಿವಿಧ ಬಗೆಯಲ್ಲಿ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿಭಟನೆಯ ಭಾಗವಾಗಿ CAA ವಿರೋಧಿಸಿ ನಾಟಕ ಪ್ರದರ್ಶಿಸಿದ ಬೀದರ್ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶಾಹಿನ್ ವಿದ್ಯಾಲಯದ ಮಕ್ಕಳನ್ನು ವ್ಯಕ್ತಿಯೊಬ್ಬನ ದೂರು ಆಧರಿಸಿ ಪೋಲಿಸರು ಬಂಧಿಸಿದ್ದಾರೆ.
ಪ್ರಕರಣವನ್ನು ದಾಖಲಿಸಿ ಪೋಲಿಸ್ ಠಾಣೆಗೆ ವಿದ್ಯಾರ್ಥಿಗಳನ್ನು ಮತ್ತು ಬೋಧಕ ಸಿಬ್ಬಂದಿಯನ್ನು ಕರೆತಂದು ವಿಚಾರಣೆ ನಡೆಸಿ ಆ ಘಟನೆಗೆ ಸಂಬಂಧಿಸಿದಂತೆ ಶಾಹಿನ್ ಶಿಕ್ಷಣ ಸಂಸ್ಥೆಯ ವಿರುದ್ಧ ದೇಶದ್ರೋಹ ಮತ್ತು ಅಲ್ಲಿನ ಭೋಧಕ ಶಿಕ್ಷಕರ ಮತ್ತು ವಿದ್ಯಾರ್ಥಿ ಪೋಷಕರ ಮೇಲೆ FIR ದಾಖಲಿಸಲಾಗಿದೆ. ನಾಟಕ ಪ್ರದರ್ಶನದಲ್ಲಿ ಮಕ್ಕಳನ್ನು ಉಪಯೋಗಿಸಿ ಪ್ರಧಾನಿಯ ಬಗ್ಗೆ ಅವಹೇಳನಕಾರಿ ಮಾತನ್ನು ಹೇಳಿಸಲಾಗಿದೆ ಎಂದು ದೂರು ನೀಡಿದ ವ್ಯಕ್ತಿಯ ಅಭಿಪ್ರಾಯವಾಗಿದೆ.

4 ಮತ್ತು 5 ನೇ ತರಗತಿಯ 9 ವರ್ಷದ ಮಕ್ಕಳು CAA ಕಾನೂನಿನಿಂದ ಆಗುವ ಅನಾಹುತಗಳಾದ ಸಂವಿಧಾನ ಉಲ್ಲಂಘನೆ ಮತ್ತು ಧರ್ಮದ ಆಧಾರದ ಪೌರತ್ವ ನೀಡುವುದು ಜಾತ್ಯತೀತ ಹಾಗೂ ಧರ್ಮ ನಿರಪೇಕ್ಷ ಭಾರತ ದೇಶದ ಮೂಲ ರಚನೆಯ ವಿರುದ್ಧವಾಗಿದೆ ಎಂಬುದನ್ನು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸರ್ಕಾರದ ಜನವಿರೋಧಿ ಕಾನೂನುಗಳ ವಿರುದ್ಧ ಮಾತನಾಡುವುದು ಅದನ್ನು ವಿರೋಧಿಸಿ ಪ್ರತಿಭಟಿಸುವುದು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಬೇಡಿಕೆಯಾಗಿದೆ.
ಆದರೆ ಈ ಘಟನೆಯನ್ನು ಸಮಾಜದಲ್ಲಿ ದೇಶವಿರೋಧಿ ಕೃತ್ಯವೆಂಬಂತೆ ಬಿಂಬಿಸಿ ಅಪ್ರಾಪ್ತ ಮುಗ್ಧ ಅಮಾಯಕ ಮಕ್ಕಳಿಗೆ ಮಾನಸಿಕ ಕಿರುಕುಳ ನೀಡುವ ಮತ್ತು ಸಮಾಜದಲ್ಲಿ ಒಂದು ಶಾಲೆಯ ಹಾಗೂ ಒಂದು ಸಮುದಾಯದ ವಿರುದ್ಧ ತಪ್ಪು ಕಲ್ಪನೆಗಳನ್ನು ಬಿತ್ತುವ ಕೆಲಸವು ಇತ್ತೀಚಿನ ದಿನಗಳಲ್ಲಿ ಅತ್ಯಂತ ವೇಗವಾಗಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದಕ್ಕೆ ವ್ಯತಿರಿಕ್ತವೆಂಬಂತೆ ಇನ್ನೊಂದು ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ನಗರದ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಶಾಲೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಪೋಲಿಸರು ಹಾಗೂ ಮಾಜಿ IAS ಅಧಿಕಾರಿ ಕಿರಣ್ ಬೇಡಿ ಸಮ್ಮುಖದಲ್ಲಿ ಇಂತಹದೊಂದು ದೇಶವಿರೋಧಿ ಕೃತ್ಯ ನಡೆದಿದೆ.

ಈ ಮೇಲಿನ ವ್ಯಕ್ತಿಗಳು ಅತಿಥಿಗಳಾಗಿ ಭಾಗವಹಿಸಿದ್ದ ಆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳ ಎದುರಲ್ಲೇ ಮಕ್ಕಳು ಬಾಬರಿ ಮಸ್ಜೀದ್ ಅನ್ನು ಉರುಳಿಸುವ ಅಣಕು ಪ್ರದರ್ಶನ ನೀಡಿದರು ವಿಚಿತ್ರವೆಂಬಂತೆ ಅಲ್ಲಿದ್ದ ಅತಿಥಿಗಳು ಮತ್ತು ಪೋಲಿಸರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಈ ಘಟನೆಯನ್ನು ಖಂಡಿಸುವುದಾಗಲಿ ಅಥವಾ ಅದನ್ನು ವಿರೋಧಿಸುವುದಾಗಲಿ ಮಾಡುವುದಿಲ್ಲ ದೇಶದ ಐಕ್ಯತೆ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಕೃತ್ಯವನ್ನು ನೋಡಿ ಇನ್ನೊಂದು ಸಮುದಾಯ ಭಾವನೆಗಳನ್ನು ಕೆರಳಿಸುವ ಮತ್ತು ಕೋಮು ಗಲಭೆಗೆ ಉತ್ತೇಜನ ನೀಡುವ ಘಟನೆಯ ಬಗ್ಗೆ ಯಾವುದೇ ದೇಶದ್ರೋಹ ಪ್ರಕರಣವಾಗಿರಲಿ ಅಥವಾ ಸಮಾಜದ ಸ್ವಾಸ್ಥ್ಯ ಹಾಳುವ ಮಾಡುವ ಕಾರ್ಯಕ್ಕೆ ಪ್ರಕರಣ ದಾಖಲಾಗುವುದಿಲ್ಲ. ಆ ಘಟನೆಯನ್ನು ಬೆಂಬಲಿಸಿ ಅಲ್ಲಿ ಭಾಗವಹಿಸಿದ್ದ ಕಲ್ಲಡ್ಕ ಪ್ರಭಾಕರ ಭಟ್ ಅದಕ್ಕೆ ಸಮರ್ಥನೆಯನ್ನು ಕೊಡುತ್ತಾರೆ ಇದು ನಮಗೆ ಶೌರ್ಯದ ಹಾಗೂ ಅಭಿಮಾನದ ಸಂಕೇತ ಎಂದು ಹೇಳುತ್ತಾರೆ.
ಇದು ದೇಶದ ಎಲ್ಲ ಪ್ರಜೆಗಳು ಖಂಡಿಸುವಂತಹ ಘಟನೆ ಆದರೆ ಇದರ ಬಗ್ಗೆ ಯಾವ ಮಾಧ್ಯಮವಾಗಲಿ ಅಥವಾ ದೇಶದ ಯಾವೊಬ್ಬ ಜವಾಬ್ದಾರಿಯುತ ಪ್ರಜೆಗಳಾದ ರಾಜಕಾರಣಿಗಳಲಿ ಸ್ವಲ್ಪವೂ ಕೂಡಾ ತುಟಿ ಬಿಚ್ಚಿಲ್ಲ ಇಂತಹ ಮಾನಸಿಕ ಮತ್ತು ಸೈದ್ಧಾಂತಿಕ ನಿಲುವು ದೇಶಕ್ಕೆ ತುಂಬಾ ಅಪಾಯಕಾರಿ ಬೆಳವಣಿಗೆ.

ದೆಹಲಿಯ ಜಾಮಿಯಾ ವಿದ್ಯಾರ್ಥಿಗಳು CAA NRC NPR ವಿರೋಧಿಸಿ ಗಾಂಧೀಜಿಯವರು ಹುತಾತ್ಮರಾದ ದಿನದಂದು ಗಾಂಧೀಜಿ ಸ್ಮಾರಕದೆಡೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಅಪರಿಚಿತ ಸಂಘಿ ಮನಸ್ಥಿತಿಯ ವ್ಯಕ್ತಿ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ಪೋಲಿಸರ ಎದುರೆ ಯಾವುದೇ ಭಯವಿಲ್ಲದೆ ಪ್ರತಿಭಟನಾನಿರತರ ಮೇಲೆ “ಮೈ ಆಪ್ ಕೋ ಆಜಾದಿ ದೂಂಗಾ” ಎಂದು ಹೇಳುತ್ತಾ ಗುಂಡು ಹಾರಿಸಿದ. ಆ ಗುಂಡು ವಿದ್ಯಾರ್ಥಿಯೊಬ್ಬನ ಕೈಗೆ ತಗುಲಿದೆ ಆ ವಿದ್ಯಾರ್ಥಿ ಈಗ ಚಿಕಿತ್ಸೆಗೆ ಒಳಗಾಗಿದ್ದಾನೆ ಈ ಪ್ರಕರಣದಲ್ಲಿ ಆರೋಪಿಯನ್ನು ಅಪ್ರಾಪ್ತ ಮತ್ತು ಅಮಾಯಕ ಎಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿ ಹಾಕಲು ವಾರ್ತಾ ಮಾಧ್ಯಮಗಳು ನ್ಯಾಯದ ದ್ವಿಮುಖ ಧೋರಣೆ ತೋರುತ್ತಿರುವುದು ಮಾಧ್ಯಮ ಧರ್ಮಕ್ಕೆ ಅವಮಾನ.

LEAVE A REPLY

Please enter your comment!
Please enter your name here