ಅರ್ಥಪೂರ್ಣ ಇತಿಹಾಸದಿಂದ… ಭರವಸೆಯ ಭವಿಷ್ಯದೆಡೆಗೆ ಸಾಗುತ್ತಿರುವ ಐತಿಹಾಸಿಕ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು

ವಸಾಹತುಶಾಹಿ ಆಡಳಿತ ಕಾಲದ 1860ರ ದಶಕದಲ್ಲಿ ಮಂಗಳೂರಿನ ನಾಗರಿಕರ ದೂರದೃಷ್ಟಿ, ಸಮಾಜಮುಖಿ ಚಿಂತನೆಯ ಫಲವಾಗಿ ಅಸ್ತಿತ್ವಕ್ಕೆ ಬಂದ ಅಂದಿನ ಸರಕಾರಿ ಕಾಲೇಜು, ಪ್ರಸ್ತುತ ವಿಶ್ವವಿದ್ಯಾನಿಲಯ ಕಾಲೇಜು ಬೀಜದಿಂದ ಹೆಮ್ಮರವಾಗಿ ಬೆಳೆದು ನಿಂತಿದೆ.  ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 149 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ಣಗೊಳಿಸಿ 150ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುತ್ತದೆ.  ಜಾತಿ, ಅಂತಸ್ತು, ಐಶ್ವರ್ಯ, ಲಿಂಗ, ಬಡವ ಬಲ್ಲಿದರೆನ್ನುವ ಬೇಧವಿಲ್ಲದೇ “ಕಾಮಿತಾರ್ಥ ಪ್ರಧಾಯಿನಿಯಾಗಿರುವ” ವಿಶ್ವವಿದ್ಯಾನಿಲಯ ಕಾಲೇಜು ನಮ್ಮ ಕರಾವಳಿ ಕರ್ನಾಟಕದ ಅನಘ್ರ್ಯ ರತ್ನ.  ‘ಸಮಾಜದ ಎಲ್ಲಾ ವರ್ಗದ ಜನರಿಗೆ ಜ್ಞಾನದ ಕೇಂದ್ರವಾಗಿರುವ’ ಧ್ಯೇಯ ವಾಕ್ಯಕ್ಕೆ ಯಾವುದೇ ಚ್ಯುತಿ ಬಾರದಂತೆ ಕಳೆದ 150 ವರ್ಷಗಳಿಂದಲೂ  ನಡೆದುಕೊಂಡು ಬಂದಿದ್ದು, ಯಾನ ಮುಂದುವರಿದೇ ಇದೆ. ಈ ಹಿನ್ನೆಲೆಯಲ್ಲಿ 2020ರ ಫೆಬ್ರವರಿ 6ರಂದು 150 ರ ವಾರ್ಷಿಕ ಸಂಭ್ರಮದಲ್ಲಿದೆ. 1860ರ ದಶಕದಲ್ಲಿ ಕರಾವಳಿ ಭಾಗದ ಜನರಿಗೆ ಹೆಚ್ಚಿನ ಅಕ್ಷರಾಭ್ಯಾಸಕ್ಕೆ ಮದರಾಸಿಗೆ ಹೋಗಬೇಕಾದ ಪರಿಸ್ಥಿತಿಯಿತ್ತು.  ಜನಸಾಮಾನ್ಯರಿಗೆ ಆಧುನಿಕ ವಿದ್ಯಾಭ್ಯಾಸ ಕನಸಿನ ಗಂಟಾಗಿದ್ದ ಕಾಲವದು.  ಮಂಗಳೂರಿನ ಮಹನೀಯರಾಗಿದ್ದ ಶ್ರೀ ಎಂ. ರಾಮಪ್ಪ, ಶ್ರೀ ಶ್ರೀನಿವಾಸ ರಾವ್, ಶ್ರೀ ರಾಮಚಂದ್ರಯ್ಯ, ಎನ್ ಗುಂಡೂರಾವ್, ಶ್ರೀ ಎನ್ ತಿಮ್ಮಪ್ಪಯ್ಯ, ಶ್ರೀ ಸಾದಾತ್ ಖಾನ್, ಶ್ರೀ ಸಿ. ರಂಗಪ್ಪ, ಶ್ರೀ ನಾರಾಯಣ ಪೈ, ಶ್ರೀ ಮುತ್ತು ಸ್ವಾಮಿ ಅಯ್ಯರ್ ಮುಂತಾದವರು ಸಾರ್ವಜನಿಕರಿಂದ ರೂ.65,000/-ವನ್ನು ಸಂಗ್ರಹಿಸಿ ಅಂದಿನ ಮದರಾಸು ಸರಕಾರಕ್ಕೆ ನೀಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಖ್ಯಸ್ಥರಾಗಿದ್ದ ಮಿಸ್ಟರ್ ಪಾವೆಲ್ರವರಿಂದ ಅಂದು ಮಂಜೂರುಗೊಂಡ ವಿದ್ಯಾಸಂಸ್ಥೆ ತನ್ನ ಯಾನವನ್ನು ಇಂದಿಗೂ ಮುಂದುವರಿಸುತ್ತಲೇ ಇದೆ.   ಆರಂಭದಲ್ಲಿ 315 ಜನ ವಿದ್ಯಾರ್ಥಿಗಳಿಂದ ಆರಂಭವಾದರೂ ಪ್ರಾಂತೀಯ ಶಾಲೆ, 1870ರಲ್ಲಿ ತನ್ನದೇ ಸ್ವಂತ ಕಟ್ಟಡವನ್ನು ಹೊಂದಲು ಶಕ್ತವಾಯಿತು. 1879ರಲ್ಲಿ ಸರಕಾರಿ ಕಾಲೇಜು ಮಂಗಳೂರು ಎಂದು ನಾಮಕರಣಗೊಂಡಿತು. ಹಲವಾರು ಏಳುಬೀಳುಗಳನ್ನು ಕಂಡ ಈ ಸಂಸ್ಥೆಯಲ್ಲಿ 1902ರಲ್ಲಿ ಹುಡುಗಿಯರಿಗೆ ಪ್ರಥಮ ಬಾರಿಗೆ ಪ್ರವೇಶ ನೀಡಲಾಯಿತು, ಮತ್ತು 1905ರ ಮಾರ್ಚ್ 18ರಂದು ಮೊದಲ ಕಾಲೇಜು ವಾರ್ಷಿಕೋತ್ಸವವನ್ನು ಆಚರಿಸಲಾಯಿತು. 1920ರಲ್ಲಿ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಶ್ರೀ ಗೋವಿಂದ ಕೃಷ್ಣ ಚೆಟ್ಟೂರ್ರವರು ಈ ಸರಕಾರಿ ಕಾಲೇಜಿಗೆ ಆಡಳಿತಾತ್ಮಕವಾಗಿ ಹಾಗು ಶೈಕ್ಷಣಿಕವಾಗಿ ಚೈತನ್ಯ ತುಂಬಿರುವುದು ತಿಳಿದು ಬರುತ್ತದೆ.  ಕಾಲೇಜ್ ಟೈಮ್ಸ್ ಎನ್ನುವ ಹೆಸರಿನ ಸಾಪ್ತಾಹಿಕ ಭಿತ್ತಿ ಪತ್ರಿಕೆ, ವಿದ್ಯಾರ್ಥಿ ಸಹಕಾರಿ ಸಂಘ, ಶಿಕ್ಷಕ-ರಕ್ಷಕ ಸಂಘಗಳು ಕಾರ್ಯ ಆರಂಭ ಮಾಡಿದವು. ಕಾಲೇಜಿನ ವಾರ್ಷಿಕ ಸಂಚಿಕೆ ‘ಮಿಸಲೇನಿ’ಯ ಪ್ರಥಮ ಸಂಚಿಕೆ 1923ರಲ್ಲಿ ಪ್ರಕಟವಾಯಿತು.  ವಿಶ್ವಕವಿ ರಬೀಂದ್ರನಾಥ ಟಾಗೋರ್ ಅವರು 1922ರಲ್ಲಿ ಈ ಸಂಸ್ಥೆಗೆ ನೀಡಿದ ಭೇಟಿಯ ಸ್ಮರಣಾರ್ಥ ನಿರ್ಮಿಸಲಾದ ವಿಶಿಷ್ಟ ವಾಸ್ತು ವಿನ್ಯಾಸದ ‘ಅಕಾಡೆಮಿ ಹಾಲ್’ 1996ರಲ್ಲಿ ‘ರವೀಂದ್ರ ಕಲಾ ಭವನ’ ಎಂದು ಪುನರ್ ನಾಮಕರಣಗೊಂಡಿತು. 2015 ಸೆಪ್ಟಂಬರ್ ತಿಂಗಳಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಈ ಕಟ್ಟಡವನ್ನು ಪಾರಂಪರಿಕ ಕಟ್ಟಡವೆಂದು ಪರಿಗಣಿಸಿ ರೂ.1.83 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ನೀಡಿರುತ್ತದೆ.   1948ರಲ್ಲಿ ಪ್ರಥಮ ದರ್ಜೆ ಸ್ಥಾನಮಾನ ಪಡೆದ ಈ ಕಾಲೇಜಿನಲ್ಲಿ, ವಾಣಿಜ್ಯ ವಿಭಾಗಗಳು ಆರಂಭಗೊಂಡವು.  ಮೊದಲು ಮದರಾಸು ವಿಶ್ವವಿದ್ಯಾನಿಲಯಕ್ಕೆ, ತದ ನಂತರ 1957ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ, 1958ರಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ (1959-60 ವಿಜ್ಞಾನದ ವಿಭಾಗ ಪ್ರಾರಂಭ) ಹಾಗೂ 1982ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟಿತು.  1993ರಲ್ಲಿ ಈ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗೂ ಕರ್ನಾಟಕ ರಾಜ್ಯದ ಅಂದಿನ ಮುಖ್ಯಮಂತ್ರಿಯಾಗಿದ್ದ ಡಾ. ಎಂ. ವೀರಪ್ಪ ಮೊಯಿಲಿಯವರ ದೂರದರ್ಶಿತ್ವದ ಫಲವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾಗಿ ಪರಿವರ್ತನೆಗೊಂಡಿತು.  2004ರಲ್ಲಿ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಂಸ್ಥೆಯಿಂದ ಮೌಲ್ಯಾಂಕನಗೊಂಡು ಬಿ+ ಶ್ರೇಣಿಯನ್ನು ಪಡೆಯಿತು.  2016ರಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ ‘ಶ್ರೇಷ್ಠತಾ ಸಾಮಥ್ರ್ಯವಿರುವ ಕಾಲೇಜಿ’ನ ಮಾನ್ಯತೆಯನ್ನು ಪಡೆದಿರುತ್ತದೆ. ಕಳೆದ 149 ವರ್ಷದಲ್ಲಿ ಲಕ್ಷಾಂತರ ಜನ ವಿದ್ಯಾರ್ಥಿಗಳ ಎದೆಯಲ್ಲಿ ಜ್ಞಾನಜ್ಯೋತಿ ಹಚ್ಚಿ ಅರಿವಿನ ಲೋಕದ ಕದ ತೆರೆದ ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಸಮಾಜದ ವಿವಿಧ ರಂಗಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರು ಡಾ. ಶಿವರಾಮ ಕಾರಂತ, ಡಾ. ಎಂ. ವೀರಪ್ಪ ಮೊಯಿಲಿ, ಡಾ. ಮನಮೋಹನ ಅತ್ತಾವರ, ಮಂಜೇಶ್ವರ ಗೋವಿಂದ ಪೈ, ಹಾಗೆಯೇ ರಾಜಕೀಯದಲ್ಲಿ ಪ್ರಸಿದ್ಧಿ ಪಡೆದ ಗಣ್ಯರಾದ ಶ್ರೀ ಎ. ಬಿ. ಶೆಟ್ಟಿ, ಶ್ರೀ ಯು. ಪಿ. ಮಲ್ಯ, ಶ್ರೀ ವೈಕುಂಠ ಬಾಳಿಗ ಹಾಗೂ ಸಕ್ರಿಯ ರಾಜಕಾರಣದಲ್ಲಿರುವ ಶ್ರೀಯುತರುಗಳಾದ ಡಾ. ಎಂ. ವೀರಪ್ಪ ಮೊಯಿಲಿ, ವಿಜಯ ಕುಮಾರ್ ಶೆಟ್ಟಿ, ರಮಾನಾಥ ರೈ, ವಿನಯಕುಮಾರ್ ಸೊರಕೆ, ಜಯರಾಮ ಶೆಟ್ಟಿ ಮುಂತಾದವರು ಇಲ್ಲಿನ ವಿದ್ಯಾರ್ಥಿಗಳು, ಕೇಂದ್ರ ಸರಕಾರದ ಮಾಜಿ ಸಚಿವರಾಗಿದ್ದ ದಿ. ಶ್ರೀ ಪಿ. ಎಂ. ಸಯಿದ್ ಅವರೂ ಇಲ್ಲಿನ ವಿದ್ಯಾರ್ಥಿ, ಪ್ರಸಿದ್ಧ ವೈದ್ಯರಾಗಿದ್ದ ಡಾ. ಎಂ.ಪಿ. ಪೈ, ಹಾಲಿ ವೈದ್ಯರಾಗಿರುವ ಡಾ. ಬಾಬು ಶೆಟ್ಟಿ, ಡಾ. ಕೆ.ವಿ. ದೇವಾಡಿಗ, ರಂಗಕರ್ಮಿ, ಸಾಹಿತಿಗಳಾಗಿರುವ ಡಾ. ಡಿ.ಕೆ. ಚೌಟ ಮುಂತಾದವರು, ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ದಿ. ಡಾ. ಎಂ. ವಿ. ಕಾಮತ್, ಶ್ರೀ ಸಂತೋಷ್ ಕುಮಾರ್ ಗುಲ್ವಾಡಿ, ಮಲಬಾರ್ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಅಬ್ದುಲ್ ರೆಹಮಾನ್, ರಾಷ್ಟ್ರ ಪ್ರಶಸ್ತಿ ವಿಜೇತರಾದ ಶ್ರೀ ಬಾಲಕೃಷ್ಣ ಆಚಾರ್ಯ, ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಪ್ರಶಾಂತ ಮಾಡ್ತಾ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದ ಕೆ. ಸಿ. ಕೇಶವ ರಾವ್, ಶ್ರೀ ಇಬ್ರಾಹಿಂ ಬ್ಯಾರಿ ಮುಂತಾದವರು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.  ದಕ್ಷಿಣ ಕನ್ನಡದ ಟೆಲಿಕಾಂ ಕ್ಷೇತ್ರದಲ್ಲಿ ದಾಖಲೆ ಸ್ಥಾಪಿಸಿದ ಶ್ರೀ ಕೆ. ರಾಮ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಸರು ಗಳಿಸಿದ ದಿ. ಶ್ರೀ ಎಂ. ಎಸ್. ಕೃಷ್ಣ ಭಟ್, ಶ್ರೀ ಕರುಣಾಕರ ಆಳ್ವ, ಶ್ರೀ ಕೃಷ್ಣ ಭಟ್, ಉದ್ಯಮಿಗಳಾದ ಡಾ. ದಯಾನಂದ ಪೈ, ಸಮಾಜಸೇವೆಯಲ್ಲಿ ನಿರತರಾಗಿರುವ ಫಾದರ್ ಸಮರ್ಥ, ಶ್ರೀಮತಿ ಹಿಲ್ಡಾ ರಾಯಪ್ಪನ್, ಶ್ರೀ ನಂದಳಿಕೆ ಬಾಲಚಂದ್ರ ರಾವ್, ಸೈನಿಕ ಸೇವೆಯಲ್ಲಿ ಪರಮೋಚ್ಛ ಪದಕ ಪಡೆದಿರುವ ಬ್ರಿಗೇಡಿಯರ್ ಗೋಖಲೆ, ಅಂತರರಾಷ್ಟ್ರೀಯ ಉದ್ಯಮದಲ್ಲಿದ್ದು ಬೀಜ ತಳಿ ಕುರಿತು ವಿಶೇಷ ಶೋಧನೆ ನಡೆಸಿರುವ ಮನಮೋಹನ ಅತ್ತಾವರ, ವಿಶೇಷವಾಗಿ ಕಲೆಯ ಪುನರುಜ್ಜೀವನದಲ್ಲಿ ಕೆಲಸ ಮಾಡಿದ  ದಿ. ಶ್ರೀಮತಿ ಕಮಲಾ ದೇವಿ ಚಟ್ಟೋಪಧ್ಯಾಯ, ಅತ್ತ್ಯುತ್ತಮ ಅಧ್ಯಾಪಕರೆಂದು ಪರಿಗಣಿಸಲಾಗಿದ್ದ ಶ್ರೀ ಎಂ.ಆರ್. ಶಾಸ್ತ್ರಿ, ಡಾ. ಎನ್. ಆರ್. ಶೆಟ್ಟಿ, ಶ್ರೀ ಹರಿದಾಸ ಭಟ್, ಶ್ರೀ ಶಾಂತರಾಮ ರಾವ್,  ಎಸ್.ಪಿ. ಹರನ್, ದಿ.  ಪಿ. ಪಿ. ಗೋಮತಿ, ಪ್ರೊ. ರಾಮಾಚಾರ್ಲು, ಶ್ರೀಮತಿ ಪಾರ್ವತಿ ಪ್ರಭು, ಶ್ರೀಮತಿ ಐ.ಕೆ. ವಸುಂಧರಾ, ಶ್ರೀ ಎಸ್. ನಾರಾಯಣ್, ಶ್ರೀ ಎ. ರತ್ನಾಕರ, ಶ್ರೀ ಡಿ. ನಾರಾಯಣ, ಶ್ರೀ ನರಸಿಂಹ ಮೂರ್ತಿ ಇವರುಗಳು ಮನನೀಯರು.   ಇಂದು ಈ ಸಂಸ್ಥೆಯಲ್ಲಿ 4 ಸ್ನಾತಕ ಮತ್ತು 5 ಸ್ನಾತಕೋತ್ತರ ವಿಭಾಗಗಳಿದ್ದು ಸುಮಾರು 1800ರಷ್ಟು ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ.  51 ಜನ ಖಾಯಂ, 50 ಜನ ಅತಿಥಿ ಉಪನ್ಯಾಸಕರು, 20 ಮಂದಿ ಆಡಳಿತ ಸಿಬ್ಬಂದಿಗಳು ಹಾಗು ಗುತ್ತಿಗೆದಾರ ನೌಕರರು ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ.  2016ರಿಂದ ಶಿಕ್ಷಕ ಹಾಗೂ ಶಿಕ್ಷಕೇತರರ ಸ್ವಯಂ ಪ್ರೇರಣೆ ಹಾಗೂ ದಾನಿಗಳ ಸಹಕಾರದಿಂದ 200 ಜನ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನದ ಭೋಜನವನ್ನು ನೀಡಲಾಗುತ್ತಿದೆ. 2016ರಲ್ಲಿ ದುಡಿಮೆ ಮಾಡುವ ಅರ್ಹ ವಿದ್ಯಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಸಂಧ್ಯಾ ಕಾಲೇಜನ್ನು ಆರಂಭಿಸಲಾಗಿದೆ.  ಸದಾ ಜ್ಞಾನ ದೀವಿಗೆಯನ್ನು ಬೆಳಗಿಸಿ, ಸಾವಿರಾರು ಜನರ ಬದುಕು ಹಸನಾಗಿಸಿದ ಈ ಸಂಸ್ಥೆಯು ಇಂದು 150ನೇ ವರ್ಷಾಚರಣೆಯ ಹೊಸ್ತಿಲಲ್ಲಿದೆ.  ಈ ಚಾರಿತ್ರಿಕ ಸಂದರ್ಭದಲ್ಲಿ ಸಂಸ್ಥೆ ಸವೆಸಿದ ದಾರಿಯನ್ನು ನೆನೆದುಕೊಳ್ಳುತ್ತಾ ವರ್ತಮಾನದ ಅವಲೋಕನ ಮಾಡಿ ಭವಿಷ್ಯದೆಡೆಗೆ ಭರವಸೆಯ ಹೆಜ್ಜೆಯಿಡುವ ಸಂಕಲ್ಪ ಮಾಡಬೇಕಿದೆ.  ಸಂಸ್ಥೆಯೊಂದಿಗೆ ಬೆಳೆದವರು ಮತ್ತು ಸಂಸ್ಥೆಯಿಂದ ಬೆಳೆದ ನಾವು ನೀವೆಲ್ಲರೂ ಈ ಶುಭ ಸಂದರ್ಭದಲ್ಲಿ, ಸಮಾಜಕ್ಕೆ ಸ್ಪೂರ್ತಿ ತುಂಬಬಲ್ಲ, ಹೊಸ ಕನಸುಗಳನ್ನು ಮುಂದಿನ ಪೀಳಿಗೆಯ ಕಣ್ತುಂಬುವಂತೆ ಮಾಡುವ ಯೋಜನೆಗಳಿಗೆ ಭಾಷ್ಯ ಬರೆಯಬೇಕಿದೆ.

LEAVE A REPLY

Please enter your comment!
Please enter your name here