ಶಾರೂಕ್ ತೀರ್ಥಹಳ್ಳಿ

ಮಹಮ್ಮದ್ ಶಾರೂಕ್ ತೀರ್ಥಹಳ್ಳಿ.

ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನವರಿ 20 ರ ಸೋಮವಾರ ಶಂಕಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಬಾಂಬ್ ಇಟ್ಟಿರುವ ಬಗ್ಗೆ ಮಾಧ್ಯಮಗಳು ಪ್ರಸಾರ ಮಾಡಿದ್ದವು. ವಾರಸುದಾರರು ಇಲ್ಲದೇ ಇರುವ ಬ್ಯಾಗ್ ಇರುವುದನ್ನು ಗಮನಿಸಿದ ಪ್ರಯಾಣಿಕರು ಕೂಡಲೇ ಭದ್ರತಾ ಸಿಬ್ಬಂದಿಯ ಗಮನಕ್ಕೆ ತಂದಿದ್ದರು. ನಂತರದಲ್ಲಿ ಬ್ಯಾಗ್ ನಲ್ಲಿ ಸಜೀವ ಬಾಂಬ್ ಇರುವುದಾಗಿ ವರದಿಗಳು ತಿಳಿಸಿದವು. ಆಟೋದಲ್ಲಿ ಬಂದಂತಹ ಇಬ್ಬರು ವ್ಯಕ್ತಿಗಳು ಬಾಂಬ್ ಇರುವ ಬ್ಯಾಗನ್ನು ಇಟ್ಟುಹೋಗಿದ್ದಾರೆಂದು ಪ್ರಾಥಮಿಕ ತನಿಕೆಯಲ್ಲಿ ವರದಿಯಾಗಿತ್ತು. ಆರೋಪಿಯನ್ನು ಪತ್ತೆ ಹಚ್ಚಲು ವಿಮಾನ ನಿಲ್ದಾಣದ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾದ ದೃಶ್ಯಗಳನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ. ಹರ್ಷ ಅಧಿಕೃತವಾಗಿ ಆಟೋ ರಿಕ್ಷಾ ಮತ್ತು ಶಂಕಿತ ವ್ಯಕ್ತಿಯ ಚಿತ್ರವನ್ನು ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ ಇಲ್ಲಿನ ದೃಶ್ಯ ಮಾಧ್ಯಮಗಳು ಹಸಿರು ಬಣ್ಣದ ಆಟೋ ರಿಕ್ಷ ಮತ್ತು ಬೇರೆ ಯಾವುದೋ ಶಂಕಿತ ವ್ಯಕ್ತಿಯ ಪೋಟೋವನ್ನು ಮಾಧ್ಯಮದಲ್ಲಿ ಪ್ರಕಟಿಸಿ, ಜನರ ಗಮನವನ್ನು ಬೇರೆಡೆಗೆ ಸೆಳೆದದ್ದನ್ನು ನೀವು ಗಮನಿಸಿರಬಹುದು. ನಂತರದಲ್ಲಿ ಕೆಂಜಾರು ಮೈದಾನದಲ್ಲಿ ಬಾಂಬ್ ನಿಷ್ಕ್ರಯದಳದ ತಜ್ಞ ಸಿಬ್ಬಂದಿಗಳು ಬಾಂಬನ್ನು ಸುರಕ್ಷಿತವಾಗಿ ಸ್ಟೋಟಿಸಿದರು. ಇನ್ನೊಂದು ಕಡೆಯಲ್ಲಿ ಬಾಂಬ್ ಇಟ್ಟ ಶಂಕಿತ ವ್ಯಕ್ತಿಗಾಗಿ ಪೊಲೀಸರು ಬಲೆ ಬೀಸಿದ್ದರು. ಮಾರನೇ ದಿನ ದಿನ ಪತ್ರಿಕೆಗಳ ಮುಂಬರಹಗಳಲ್ಲಿ ವರದಿಗಳು ಪ್ರಕಟವಾಯಿತು “ ಮಂಗಳೂರಿನಲ್ಲಿ ಬಾಂಬ್ ಪತ್ತೆ”, “ಬಾಂಬ್ ಭಯೋತ್ಪಾಧನೆ”, “ಅತಿದೊಡ್ಡ ಸಜೀವ ಬಾಂಬ್ ಬೆಚ್ಚಿ ಬಿದ್ದ ಕರ್ನಾಟಕ” ಎಂಬೆಲ್ಲ ಶೀರ್ಷಿಕೆ ಕೊಟ್ಟು ಬಾಂಬ್ ಸಿಡಿಸಿದ ಬೆನ್ನಲ್ಲೆ  ಈ ನಾಡಿನ ಜನರಲ್ಲಿ ಹೆಚ್ಚು ಭೀತಿಯನ್ನು ಉಂಟು ಮಾಡಲಾಯಿತು. ಕೆಲವೊಂದು ಪತ್ರಿಕೆಗಳಂತು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ಪ್ರತಿಭಟನೆಗೆ ಪ್ರತಿಕಾರ ಎಂಬೆಲ್ಲ ರೀತಿಯಲ್ಲಿ ಪ್ರಕಟಿಸಿದವು. ನಂತರದಲ್ಲಿ ಚುರುಕಾದ ಪೊಲೀಸ್ ತನಿಖಾ ತಂಡ ಶಂಕಿತ ವ್ಯಕ್ತಿ ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೂ ಬಾಂಬ್ ಇಡಲು ಪ್ರಯತ್ನಿಸಿದ್ದನು ಎಂದು ತಿಳಿಸಿದ್ದರು. ನಂತರದಲ್ಲಿ ಬಾಂಬ್ ಇಟ್ಟ ಶಂಕಿತ ವ್ಯಕ್ತಿಯನ್ನು ಪತ್ತೆ ಹಚ್ಚಿದ ಪೊಲೀಸರು ಆತ ಮಣಿಪಾಲದ ಆದಿತ್ಯ ರಾವ್ ಎಂದು ತಿಳಿದಾಗ ಇಲ್ಲಿನ ಕೆಲವೊಂದು ಮಾಧ್ಯಮಗಳಿಗೆ ಮತ್ತು ಕೆಲವೊಂದು ವ್ಯಕ್ತಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗದೇ ಹೋಯಿತು. ಕಾರಣ ಇಷ್ಟೇ ಪ್ರತಿ ಭಾರಿ ಬಾಂಬ್ ಸ್ಟೋಟವಾದಾಗ ಅಥವಾ ಬಾಂಬ್ ಸಿಕ್ಕಿದಾಗ ಆ ವ್ಯಕ್ತಿಯು ಮುಸ್ಲಿಮನೆಂದು ಬಿಂಬಿಸಿ ಇಡೀ ಮುಸ್ಲೀಮ್ ಸಮುದಾಯವನ್ನೇ ಭಯೋತ್ಪಾದಕರೆಂದು ಬಿಂಬಿಸುವ ಮಾಧ್ಯಮಗಳಿಗೆ ಮತ್ತು ರಾಜಕೀಯ ನೇತಾರರಿಗೆ ಈ ಮಂಗಳೂರು ಬಾಂಬ್ ಸ್ಟೋಟ ಪ್ರಕರಣದಲ್ಲಿ ಬಹಳ ನಿರಾಸೆಯನ್ನು ತಂದು ಕೊಟ್ಟಿತು. ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಎಂದು ಮನಗಂಡ ವ್ಯಕ್ತಿಗಳು, ಚಿಂತಕರು, ರಾಜಕೀಯ ನೇತಾರರು ಮಾತ್ರ ಈ ಸ್ಪೋಟವನ್ನು ಖಂಡಿಸಿದರು. ಭಯೋತ್ಪಾದನೆ ಎಂಬುದು ಇಂದು ನಿನ್ನೆಯ ಸಮಸ್ಯೆಯಲ್ಲ, ಈ ಜಗತ್ತೇ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದೆ ಈ ಭಯೋತ್ಪಾದನೆ. ಧರ್ಮದ ಹೆಸರಿನಲ್ಲಿ ಯಾವುದೇ ಸಂಘಟನೆ ಈ ಭಯೋತ್ಪಾದನೆಯಲ್ಲಿ ತೊಡಗಿಕೊಂಡರೇ ಅದು ಧರ್ಮಕ್ಕೆ ಮಾರಕ. ಯಾವುದೇ ಧರ್ಮವು ಸಹ ಭಯೋತ್ಪಾದನೆಯನ್ನು ಕಲಿಸಿಕೊಡುವುದಿಲ್ಲ. ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ, ಭಯೋತ್ಪಾದಕರಿಗೆ ಭಯೋತ್ಪಾದನೆಯೇ ಅವರ ಧರ್ಮ ಎಂಬುದನ್ನು ನಾವು ಮನವರಿಕೆ ಮಾಡಬೇಕಾಗಿದೆ. ಕಳೆದ ವಾರ ಭಾರತಕ್ಕೆ ಶಂಕಿತ ಉಗ್ರರು ಬಂದಿದ್ದು ತೀರ್ಥಹಳ್ಳಿಯ ಇಬ್ಬರು ವ್ಯಕ್ತಿಗಳಿಗೆ ಅವರ ಜೊತೆ ನಂಟಿದೆ ಎಂದೆಲ್ಲ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು ಇದರ ಬಗ್ಗೆ ಕೂಲಂಕುಶ ತನಿಖೆ ನಡೆಸಿ ಶಂಕಿತರು ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆ ಖಂಡಿತ ಅವರಿಗೆ ಶಿಕ್ಷೆ ಆಗಲೇ ಬೇಕು. ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಈ ಮಂಗಳೂರಿನ ಬಾಂಬ್ ಸ್ಟೋಟದ ವಿಷಯಗಳು ಬಹಳ ಚರ್ಚೆಗೆ ಒಳಗಾಗಿದೆ. ಒಂದು ವೇಳೆ ಮಂಗಳೂರಿನ ಬಾಂಬ್ ಪ್ರಕರಣದಲ್ಲಿ ಶಂಕಿತ ವ್ಯಕ್ತಿ ಆದಿತ್ಯ ರಾವ್ ಬದಲು ಆದಿಲ್ ಪಾಷ ಆಗಿದ್ದರೆ ಈ ಸಮಾಜ ಒಂದು ಸಮುದಾಯದ ಮೇಲೆ ಯಾವ ರೀತಿಯಲ್ಲಿ ನೋಡುತ್ತಿತ್ತು ಮತ್ತು ಮಾಧ್ಯಮಗಳಿಗೆ ಎರಡು ಮೂರು ದಿನಗಳವರೆಗೆ ಬ್ರೇಕಿಂಗ್ ನ್ಯೂಸ್ ಆಗಿ ಪರಿಣಮಿಸುತ್ತಿತ್ತು. ಅದರ ಬೆನ್ನಲ್ಲೆ ಜವಾಬ್ದಾರಿ ಸ್ಥಾನದಲ್ಲಿರುವ ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿಯವರು ಆದಿತ್ಯ ರಾವ್ ಒಬ್ಬ ಮಾನಸೀಕ ಅಸ್ವಸ್ಥ ಎಂದು ಹೇಳಿಕೆ ನೀಡಿದ್ದು ಇದು ಒಂದು ಸಮುದಾಯವನ್ನು ಕೇಂದ್ರೀಕರಿಸಿ ಪ್ರಾಥಮಿಕ ತನಿಖೆ ನಡಸುವ ಮೊದಲೇ ಪೂರ್ವಗ್ರಹ ಪೀಡಿತರಾಗಿ ಹೇಳಿಕೆ ನೀಡಿರುವುದು ಅವರ ಮನಸ್ಥಿತಿ ಮತ್ತು ಬೇಜವಾಬ್ದಾರಿ ತನವನ್ನು ಬಹಿರಂಗಪಡಿಸಿದೆ.

ಓರ್ವ ಶಂಕಿತ ವ್ಯಕ್ತಿ ಮುಸ್ಲಿಮನಾದರೆ ಭಯೋತ್ಪಾದಕ, ಮುಸ್ಲೀಮೇತರನಾದರೇ ಮಾನಸೀಕ ಅಸ್ವಸ್ಥನಾಗಲು ಕಾರಣವೇನು ಎಂಬುದನ್ನು ಇಲ್ಲಿನ ಸಮಾಜ ತಿಳಿಯಬೇಕಾಗಿದೆ. ಇದೇ ಮೊದಲಲ್ಲ ಕಳೆದ ಮಾರ್ಚ್ ನಲ್ಲಿ ಪಾಕಿಸ್ತಾನ ಝಿಂದಾಬಾದ್ ಪೋಷಣೆ ಹಾಕಿ, ಮಲ್ಪೆ ಬೀಚ್ ನಲ್ಲಿ ಬಾಂಬ್ ಸ್ಟೋಟಿಸುವ ಬೆದರಿಕೆ ಹಾಕಿದ ಆರೋಪಿ ಸೃಜನ್ ಪೂಜಾರಿ ಕೂಡ ಅಲ್ಲಿನ ಮಾಧ್ಯಮಗಳಿಗೆ ಮಾನಸೀಕ ಅಸ್ವಸ್ಥರಂತೆ ಕಾಣಿಸುತ್ತಾರೇ. ಈ ಸಮಾಜ ಯಾಕೆ ಈ ರೀತಿಯ ದ್ವೀಮುಖ ಧೋರಣೆ ಸೃಷ್ಟಿಸುತ್ತಿದೆ ? ಒಟ್ಟಿನಲ್ಲಿ ಆದಿತ್ಯ ರಾವ್ ವಿದ್ಯಾವಂತ ಯುವಕ, ಕೆಲಸ ಸಿಗದೆ ಮಾನಸೀಕವಾಗಿ ಕುಗ್ಗಿದ್ದು ಬಾಂಬ್ ಸ್ಟೋಟ ಮಾಡಲು ತಯಾರಾಗಿದ್ದಾನೆ ಅಷ್ಟೇ ಎಂದು ಮಾಧ್ಯಮಗಳು ಬಿಂಬಿಸುತ್ತಿದೆ ಆದರೆ ಈ ಬಗ್ಗೆ ಪೊಲೀಸ್ ಇಲಾಖೆ ಕೂಲಂಕುಶವಾಗಿ ತನಿಖೆ ನಡೆಸಿ ಈ ಸ್ಟೋಟದ ಹಿಂದೆ ಯಾರಿದ್ದಾರೆಂಬ ಮಾಹಿತಿ ಇಲ್ಲಿನ ಜನರಿಗೆ ತಲುಪಿಸಲು ಪ್ರಯತ್ನಿಸಿ ಆರೋಪಿಗೆ ತಕ್ಕ ಶಿಕ್ಷೆಯನ್ನು ವಿಧಿಸಬೇಕಾಗಿದೆ.

LEAVE A REPLY

Please enter your comment!
Please enter your name here