ಲೇಖಕಿ: ಕವನ ಉಪ್ಪಿನಂಗಡಿ

ಕೊರೋನಾ ಎಂಬ ಒಂದು ಮಾರಣಾಂತಿಕ ವೈರಸ್‍ನಿಂದ ಕಳೆದ ಆರು ತಿಂಗಳಿನಿಂದ ವಿಶ್ವದೆಲ್ಲೆಡೆ ವ್ಯಾಪಾಕವಾಗಿ ಹರಡುತ್ತಿದೆ. ಅದರಲ್ಲಿ ಭಾರತವು ಒಂದು ದೇಶವಾಗಿದೆ. ಮೊದ ಮೊದಲಿಗೆ ನಮ್ಮ ದೇಶವು ತುಂಬಾ ಎಚ್ಚರಿಕೆಯಿಂದ ಲಾಕ್‍ಡೌನ್ ಎಂಬ ಅಸ್ತ್ರವನ್ನು ಹೂಡಿ ಕೊರೋನಾವನ್ನು ನಿಯಂತ್ರಿಸಲು ನಮ್ಮ ಸರ್ಕಾರ ಪ್ರಯತ್ನಿಸಿತು. ಆದರೆ ಅದು ಸಫಲವಾಗುವ ಪರಿಸ್ಥಿತಿಯಲ್ಲಿ ಇರುವಾಗ ದೇಶದ ಆರ್ಥಿಕತೆಯ ಸಮಸ್ಯೆಯಾದ್ದರಿಂದ ಕೊರೋನಾ ಎಂಬ ಮಹಾಮಾರಿಯು ಪ್ರತಿಯೊಬ್ಬ ಜನಸಾಮಾನ್ಯನ ಬೆನ್ನತ್ತಿ ಕೂರಲು ಪ್ರಾರಂಭವಾಯಿತು.

ಈ ವೈರಸ್‍ನಿಂದಾದ ಪರಿಣಾಮಗಳು ಹಲವಾರು. ಅವುಗಳನ್ನು ಒಂದೊಂದಾಗಿ ಬಿಚ್ಚಿಡೋಣ. ಈ ಮಾರಣಾಂತಿಕ ರೋಗದಿಂದ ಎಲ್ಲಾ ತರಹದ ಕೆಲಸವನ್ನು ಮಾಡುವವರಿಗೂ ಕೂಡ ಇದರ ಪರಿಣಾಮ ಬೀರಿದೆ. ಹೊಸದನ್ನು ಸೃಷ್ಟಿಸುವ ವಿಜ್ಞಾನಿಯಿಂದ ಹಿಡಿದು ಜನತೆಗೆ ಅನ್ನವನ್ನು ನೀಡುವ ರೈತನವರೆಗೆ. ಮಕ್ಕಳು, ಮೊಮ್ಮಕ್ಕಳು ತಮ್ಮ ಅನುಭವನ್ನು ಹಂಚುತ್ತಾ ಇರುವ ವೃದ್ಧರಿಂದ ಹಿಡಿದು ಸಮಾಜದಲ್ಲಿನ ಜನರೊಡನೆ ಬೆರೆತು ಅನುಭವವನ್ನು ಪಡೆಯಲಿರುವ ಪುಟ್ಟ ಮಕ್ಕಳ ವರೆಗೆ ಈ ವೈರಸ್‍ನ ಪ್ರಭಾವ ಬೀರಿದೆ. ಈ ವೈರಸ್‍ನಿಂದ ಹಲವರಿಗೆ ಅಪ್ರಯೋಜನವಾದರೆ ಕೆಲವರಿಗೆ ಪ್ರಯೋಜನವಾಗುತ್ತಿದೆ. ಹಲವು ಜನರ ಬಂಡವಾಳ ಬಯಲಾಗುತ್ತಿದೆ ಎನ್ನಬಹುದಾಗಿದೆ. ಹೇಗೆಂದರೆ ಯಾವಾಗಲೂ ಕೆಲಸ ಕೆಲಸ ಎಂದು ಬೆಳಿಗ್ಗೆ 6 ಗಂಟೆಗೆ ಹೊರಟರೆ ರಾತ್ರಿ 9 ಗಂಟೆ ಹೊತ್ತಿಗೆ ತಲುಪುವ ತಂದೆ-ತಾಯಿಯರ ಪ್ರೀತಿಯಿಂದ ವಂಚಿತರಾದ ಮಕ್ಕಳಿಗೆ ಈಗ ಅವರೊಂದಿಗೆ ಕಾಲ ಕಳೆಯುವ ಅವಕಾಶ. ಈ ಹಳ್ಳಿಯಲ್ಲಿ ಏನೂ ಇಲ್ಲ. ಸರಿಯಾದ ವ್ಯವಸ್ಥೆಗಳಿಲ್ಲ’ ಎಂದು ಹಳ್ಳಿಬಿಟ್ಟು ಪಟ್ಟಣಕ್ಕೆ ಹೊರಟ ಆಸಾಮಿಗಳೆಲ್ಲ ಪುನಃ ಹಳ್ಳಿಗೆ ವಾಪಾಸಾಗಿ ಕೃಷಿಯಲ್ಲಿ ತಮ್ಮನ್ನು ತಾವು ಕೈಗೊಳ್ಳಲು ಆರಂಭಿಸಿದ್ದಾರೆ. ಇನ್ನೂ ಕೆಲವರು ಪಟ್ಟಣದಿಂದ ಬಂದು ಕೂತಲ್ಲಿ ಕೂರದೆ ಅಡ್ಡಾದಿಡ್ಡಿ ಓಡಾಡಿಕೊಂಡು ಹಲವೆಡೆ ಕೊರೋನವನ್ನು ಹರಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎನ್ನಬಹುದಾಗಿದೆ. ಇನ್ನು ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೆಟ್ಟು ಬೀಳುವಂತಹ ಸಾಧ್ಯತೆ ಹೆಚ್ಚು. ಸಣ್ಣ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಮಾಡುವಂತಿಲ್ಲ. ಮೆದುಳಿಗೆ ಪೆಟ್ಟಾಗುತ್ತದೆ. ಎನ್ನುಂತಹ ಆರೋಪ. ಆದರೆ ಅದೇ ಮಕ್ಕಳು ವೀಡಿಯೋ ಗೇಮ್‍ನಂತಹ ಆಟಗಳನ್ನು ಆಡುವಾಗ ಮಕ್ಕಳಿಗೆ ಏನಾಗುತ್ತದೆ. ಎನ್ನುವ ಪರಿಜ್ಞಾನ ಹೆತ್ತವರಲಿಲ್ಲ. ಸ್ವಲ್ಪ ದಿನ ಈ ವೀಡಿಯೋ ಗೇಮ್‍ನಂತಹ ಆಟಗಳನ್ನು ತ್ಯಜಿಸಿ ಆ ಸಮಯದಲ್ಲಿ ಮಕ್ಕಳಿಗೆ ಕ್ಲಾಸ್ ಕೇಳುವಂತೆ ಮಾಡಿದರೆ ಮಕ್ಕಳಿಗೆ ಎಷ್ಟು ಪ್ರಯೋಜನ ಎನ್ನುವುದು ಅವರಿಗೆ ಗೊತ್ತಿದ್ದರೂ ಸುಮ್ಮನೆ ಕೂತಿರುವ ಮೂಖರಾಗಿರುವ ಪೋಷಕರು.

ಇನ್ನೂ ಕೆಲವೆಡೆ ಮೊಬೈಲ್‍ಗಳ ಸೌಕರ್ಯವಿಲ್ಲದೆ ಪರದಾಡುತ್ತಿರುವವರಿದ್ದಾರೆ. ಇದರಿಂದ ನಮಗೆ ನಮ್ಮ ದೇಶದಲ್ಲಿ ಎಷ್ಟು ಕಡುಬಡವರಿದ್ದಾರೆ ಎನ್ನುವುದು ನಮಗೆ ತಿಳಿಯುತ್ತದೆ. ಇನ್ನು ದ್ವಿತೀಯ ಪಿಯುಸಿ ಯವರಿಗೆ ಈ ಗೋಳಾದರೆ. ಇನ್ನು ಪದವಿಯ ಮಕ್ಕಳ ಗೋಳನ್ನು ಹೇಳಲು ಬೇಸರವಾಗುತ್ತದೆ. ಆನ್‍ಲೈನ್ ಕ್ಲಾಸ್ ಮಾಡುತ್ತಿದ್ದ ಸಂದರ್ಭದಲ್ಲಿ ಪದವಿ ಮಕ್ಕಳಿಗೆ ಪರೀಕ್ಷೆಗಳಿಲ್ಲ ಎಂದು ತಿಳಿದ ನಂತರ ಮಕ್ಕಳಿಗೆ ಉಳಿದ ಪಾಠವನ್ನು ಮಾಡುತ್ತಿದ್ದಂತಹ ಶಿಕ್ಷಕರು ಅದನ್ನೂ ಕೂಡ ಕೈಬಿಟ್ಟರು. ಮಕ್ಕಳ ಮನಸ್ಸಿನಲ್ಲಿ ಪರೀಕ್ಷೆಗಾಗಿ ಓದಬೇಕು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಅಲ್ಲ ಎಂಬ ಮನೋಭಾವವಿದೆ ಎಂದು ಹೇಳುತ್ತಿದ್ದ ಶಿಕ್ಷಕರೇ ಈಗ ಪರೀಕ್ಷೆ ಇದ್ದರೆ ಮಾತ್ರ ಪಾಠ ಮಾಡುತ್ತೇವೆ ಎಂಬ ಮನೋಭಾವಕ್ಕೆ ಬಂದಿದ್ದಾರೆ. ಇಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ವಿಧ್ಯಾರ್ಥಿ-ವಿಧ್ಯಾರ್ಥಿನಿಯರು.

ಇನ್ನೊಂದೆಡೆ ಮತ ಕೇಳಲು ಬರುತ್ತಿದ್ದ ಕೆಲವು ರಾಜಕಾರಣಿಗಳು ಅಲ್ಲೋ-ಇಲ್ಲೋ ಅಲ್ಪಸ್ವಲ್ಪ ಜನರ ಸಮಸ್ಯೆಗಳನ್ನು ಕೇಳುತ್ತಿದ್ದರು. ಈಗಲಂತೂ ಮನೆಯಿಂದ ಹೊರ ಬರಲು ಹೆದರುತ್ತಿರುವ ರಾಜಕಾರಣಿಗಳು. ಮನೆಯ ಬಳಿ ಸಮಸ್ಯೆಯನ್ನು ನಿವಾರಿಸಲು ಕೇಳಿಕೊಂಡು ಬಂದ ಜನಸಾಮಾನ್ಯರನ್ನು ಒಳಬಿಡಲು ಹೆದರುತ್ತಿರುವ ರಾಜಕಾರಣಿಗಳು ಏನೇ ಆಗಲಿ ರಾಜಕಾರಣಿಗಳು ಯಾರು ಹೇಗೆ ಎಂಬುವುದು ಜನರಿಗೆ ತಿಳಿಯುತ್ತಿದೆ. ರಾಜಕಾರಣಿಗಳ ಬಂಡವಾಳ ಬಯಲಾಗುತ್ತಿದೆ.
ಏನೇ ಆಗಲಿ ಕೊರೋನಾ ಎಂದರೆ ಭಯಪಟ್ಟು ಮನೆಯಲ್ಲೇ ಕುಳಿತುಕೊಂಡು ಸುರಕ್ಷತೆಯನ್ನು ಆರೋಗ್ಯವನ್ನು ಕಾಪಾಡಿಕೊಂಡಿದ್ದವರೆಲ್ಲಾ ಈಗ ಪುನಃ ಮೊದಲಿನ ರೀತಿಯಲ್ಲಿ ತಮ್ಮ ಕಸುಬನ್ನು ಮಾಡುವತ್ತ ಸಾಗಿದ್ದಾರೆ. ಕೊನೆಗೆ ಈ ಮಹಾಮಾರಿಯು ಸಾಮಾನ್ಯ ಡೆಂಗ್ಯೂ-ಮಲೇರಿಯಾದಂತಹ ರೋಗಗಳಂತೆ ಎಂಬ ಮನೋಭಾವ ಜನರ ಮನಸ್ಸಿನಲ್ಲಿ ಬರಲು ಇನ್ನು ಸಮಯವಿಲ್ಲ. ಹೀಗೆಯೇ ನಾವು ಈ ರೋಗವು ಸಾಮಾನ್ಯ ಎಂದು ಭಾವಿಸಿದಲ್ಲಿ ಬರೀ ದೇಶವೇ ಅಲ್ಲ. ಇಡೀ ವಿಶ್ವವೇ ಕರಾಳದಿನಗಳನ್ನು ನೋಡಬೇಕಾದ ಪರಿಸ್ಥಿತಿ ಎದುರಾಗಲಿದೆ.

LEAVE A REPLY

Please enter your comment!
Please enter your name here