ಲೇಖಕಿ:ಸುಹಾನ್ ಸಫರ್

“ಅನುಮತಿಸಲ್ಪಟ್ಟ ವಿಷಯಗಳಲ್ಲಿ ಅತ್ಯಂತ ಕೆಟ್ಟದಾದ ವಿಚಾರವೇ ತಲಾಖ್”-ಸುನನ್ ಇಬ್ನ್ ಮಜಾಹ್
ಇಸ್ಲಾಮ್ ವಿವಾಹ ಎಂಬ ಬಾಂಧವ್ಯಕ್ಕೆ ಅತ್ಯಂತ ಮಹತ್ತರವಾದ ಸ್ಥಾನವನ್ನು ನೀಡಿದೆ. ಅಲ್ಲಾಹನು ಕುರ್‍ಆನಿನ 189: 2ನೇ ಅಧ್ಯಾಯದಲ್ಲಿ ಹೇಳುತ್ತಾನೆ: “ನಿಮ್ಮನ್ನು ಒಂದು ವ್ಯಕ್ತಿಯಿಂದ ಸೃಷ್ಟಿಸಿದೆವು ಮತ್ತು ಅದೇ ವ್ಯಕ್ತಿಯಿಂದ ಅದರ ಜೋಡಿಯನ್ನು ಮಾಡಿದೆವು. ಏಕೆಂದರೆ ಈ ಕಾರಣದಿಂದ ನೀವು ಪ್ರೀತಿ ಮತ್ತು ಶಾಂತಿಯಿಂದ ಬಾಳಬಹುದು.”

ಪ್ರಾಚೀನ ದೇಶಗಳಾದ ಹಬಿರೀವ್ಸ್, ರೋಮನ್ಸ್, ಇಸ್ರೇಲ್‍ಗಳು ವಿಚ್ಛೇದನ ಎಂಬುವುದನ್ನು ನೈಸರ್ಗಿಕ ಸಹವರ್ತಿ ಅಥವಾ ವೈವಾಹಿಕ ಹಕ್ಕುಗಳು ಎಂದು ಪರಿಗಣಿಸಿದೆ. ಎಲ್ಲ ಧರ್ಮಗಳು ವಿಚ್ಛೇದನವನ್ನು ಅಂಗೀಕರಿಸಿದ್ದರೂ ಕೂಡ, ವಿಚ್ಛೇದನ ನೀಡುವ ಮೂಲಕ ವಿವಾಹದ ಅಂತ್ಯವನ್ನು ಸ್ಪಷ್ಟವಾಗಿ ಗುರುತಿಸಿದ ಮೊದಲ ಧರ್ಮವೇ ಬಹುಶಃ ಇಸ್ಲಾಮ್ ಆಗಿರುತ್ತದೆ. ಇಂಗ್ಲೇಂಡಿನಲ್ಲಿ ಕೇವಲ ಸುಮಾರು ನೂರು ವರ್ಷಗಳ ಹಿಂದೆ ‘ವಿಚ್ಛೇದನ’ ಎಂಬ ವಿಷಯವು ಹುಟ್ಟುಕೊಂಡಿತು.
ಭಾರತದಾದ್ಯಂತ ಹಿಂದೂ ಧರ್ಮದಲ್ಲಿ “ಹಿಂದೂ ವಿವಾಹ ಕಾಯ್ದೆ, 1955ರಲ್ಲಿ ಜಾರಿಗೆ ಬಂದ ನಂತರವೇ ವಿಚ್ಛೇದನವನ್ನು ಅನುಮತಿಸಲಾಯಿತು. ಅದಕ್ಕಿಂತಲೂ ಮೊದಲು ಹಿಂದೂ ಕಾನೂನಿನಲ್ಲಿ ವಿಚ್ಛೇದನ ಎಂಬ ವಿಷಯವೇ ಕಂಡುಬಂದಿಲ್ಲ. ವಿಚ್ಛೇದನ ರೂಪವೇ ಬೇರೆಯಿತ್ತು. ವಿಚ್ಛೇದನ ಕಾನೂನಿನ ಚೌಕಟ್ಟಿನಲ್ಲಿ ಇರಲಿಲ್ಲ. ಪ್ರವಾದಿ(ಸ.ಅ) ವಿಚ್ಛೇದನ ನೀಡುವುದಕ್ಕೆ ತಮ್ಮ ತಿರಸ್ಕಾರವನ್ನು ತೋರಿಸಿದರು. ಪ್ರಾಚೀನ ಅರಬರಲ್ಲಿ ಇದು ರೂಢಿಯಲ್ಲಿತ್ತು.

ಕುರ್‍ಆನಿನ ಅನೇಕ ಅಧ್ಯಾಯಗಳಲ್ಲಿ ತಲಾಖ್‍ನ ಬಗ್ಗೆ ಪ್ರಸ್ತಾಪಿಸಲಾಗಿದೆ. ಅದರಲ್ಲೂ ಅಲ್-ತಲಾಖ್ ಎಂಬ ಅಧ್ಯಾಯದಲ್ಲಿ ತಲಾಖ್‍ನ ಪ್ರತಿ ಹೆಣ್ಣನ್ನು ಮುಂದಿಟ್ಟಿದೆ. ಇದು ಜನರು ಅನುಸರಿಸಬಹುದಾದಂತಹದು. ಪೂರ್ವ ಇಸ್ಲಾಮಿಕ್ ಅರೇಬಿಯಾದಲ್ಲಿ ಅಸ್ತಿತ್ವದಲ್ಲಿದ್ದಂತಹ, ಲಿಂಗ ಅಸಮಾನತೆಯಿಂದ ಕೂಡಿದ ವಿಚ್ಛೇದನಾ ಪದ್ಧತಿಯನ್ನು ಕುರ್‍ಆನ್ ಗಣನೀಯವಾಗಿ ಸುಧಾರಿಸಿತು.

ಇಸ್ಲಾಮ್ ಅನುಮತಿಸಿದ ವಿಚ್ಛೇದನದ ರೂಪಗಳಲ್ಲಿ ‘ತ್ರಿವಳಿ ತಲಾಖ್’ ಎಂಬುವುದು ಒಂದು ರೂಪವಾಗಿದೆ. ಭಾರತದಲ್ಲಿ ತ್ರಿವಳಿ ತಲಾಖ್ ಮೂಲಕ ವಿಚ್ಛೇದನವನ್ನು ನೀಡುವ ಪದ್ಧತಿ ರೂಢಿಯಲ್ಲಿದೆ. ಇದು ಹನಫೀ, ಸುನ್ನಿ ಮುಸ್ಲಿಮ್ ಶಾಖೆಯ ನ್ಯಾಯಶಾಸ್ತ್ರದ ಅನುಕರಣೆಯಲ್ಲಿದೆ. ಈ ತಲಾಖ್‍ನ ಪ್ರಕಾರ, ಒಂದು ಮುಸ್ಲಿಮ್ ವ್ಯಕ್ತಿ ತನ್ನ ಹೆಂಡತಿಗೆ ‘ತಲಾಖ್’ ಎಂಬ ಪದವನ್ನು ಒಂದೇ ಸಮಯದಲ್ಲಿ ಮೂರು ಬಾರಿ ಉಚ್ಛರಿಸುವ ಮೂಲಕ ವಿಚ್ಛೇದನವನ್ನು ಅನುಮತಿಸುತ್ತದೆ.
ನಾನು ಇಂದು ಹೇಳಲಿಕ್ಕೆ ಹೊರಟಿರುವ ವಿಷಯವೇ ತಲಾಖ್ ಮಸೂದೆ. ಪ್ರಸ್ತುತ ಸರಕಾರ “ಮುಸ್ಲಿಂ ಮಹಿಳಾ (ವಿವಾಹ ಹಕ್ಕುಗಳ ರಕ್ಷಣೆ) ಮಸೂದೆ 2017.” ಎಂಬ ಮಸೂದೆಯನ್ನು ಜಾರಿಗೆ ತರುವ ಸಿದ್ಧತೆಯನ್ನು ಮಾಡಿಕೊಂಡಿದೆ. ಈ ಮಸೂದೆಯ ಪ್ರಕಾರ, ತಲಾಖ್ ಕಾನೂನು ಬಾಹಿರವಾಗಿದ್ದು, ಅಪರಾಧ ಆಗಿದೆ.

ಇದು ಬದಲಾಯಿಸಲಾಗದಂತಹ ತಲಾಖ್‍ನ ರೂಪ. ಅಂದರೆ ಒಂದು ಸಲ ತಲಾಖ್ ನೀಡಿದರೆ ಮತ್ತೆ ಹಿಂದಕ್ಕೆ ತೆಗೆಯಲು ಅಸಾಧ್ಯವಾಗುವಂತಹ ರೀತಿ. ತಲಾಖ್ ಮಸೂದೆಯಲ್ಲಿ ತಲಾಖನ್ನು ಜಾಮೀನು ಪಡೆಯಲು ಸಾಧ್ಯವಾಗದಂತಹ ಮತ್ತು ಅರಿವಿನ ಅಪರಾಧಿ ಎಂದು ಘೋಷಿಸಲಾಗಿದೆ. ಅಂದರೆ ಪೋಲಿಸ್ ವಾರೆಂಟ್ ಇಲ್ಲದೆಯೂ ಆರೋಪಿಯನ್ನು ಬಂಧಿಸಬಹುದಾಗಿದೆ ಎಂದು ತಿಳಿಸುತ್ತದೆ.
ಯಾವ ವ್ಯಕ್ತಿ ತಲಾಖ್ ನೀಡಿರುವನೋ ಅವನಿಗೆ ದಂಡದ ಜೊತೆಗೆ ಮೂರು ವರ್ಷಗಳ ಕಾಲ ಜೈಲು ವಾಸವನ್ನು ಬಹುಮಾನವಾಗಿ ನೀಡಿದೆ. ಯಾರ ಮೇಲೆ ತಲಾಖ್ ಪ್ರಯೋಗಿಸಿದ್ದಾನೋ ಅಂದರೆ ಹೆಂಡತಿಗೆ ಹಾಗೂ ಆಕೆಯ ಅವಲಂಬಿತ ಮಕ್ಕಳಿಗೂ ಜೀವನಾಧಾರ ಭತ್ಯೆಯನ್ನು ಕೂಡಾ ಆತ ನೀಡಬೇಕು ಎಂದು ಈ ಮಸೂದೆ ತಿಳಿಸುತ್ತದೆ. ಈ ಭತ್ಯೆಯನ್ನು ಪ್ರಥಮ ದರ್ಜೆ ನ್ಯಾಯಾಧೀಶರು ನಿಗದಿಪಡಿಸುತ್ತಾರೆ. ಹೀಗೆ ತಲಾಖ್ ಸ್ವೀಕರಿಸಿದ ಮುಸ್ಲಿಮ್ ಮಹಿಳೆ ತನ್ನ ಅಪ್ರಾಪ್ತ ಮಕ್ಕಳನ್ನು ತನ್ನ ವಶಕ್ಕೆ ಪಡೆಯಲು ಅರ್ಹಳಾಗಿದ್ದಾಳೆ ಎಂದೂ ತಿಳಿಸುತ್ತದೆ.

ಈ ಮಸೂದೆಯಲ್ಲಿ ತೀರಾ ಧರ್ಮದ ಅಸಮಾನತೆ ಎದ್ದು ಕಾಣುತ್ತಿದೆ. ಯಾವುದೇ ಧರ್ಮದ ವಿಚಾರಗಳಲ್ಲಿ ಮೂಗು ತೂರಿಸುವ ಅಧಿಕಾರ ರಾಜ್ಯಕ್ಕೆ ಇರುವುದಿಲ್ಲ ಹಾಗೂ ಇತರ ಎಲ್ಲಾ ಧರ್ಮಕ್ಕೆ ಹೋಲಿಕೆ ಮಾಡಿ ನೋಡಿದರೆ ಮುಸ್ಲಿಮ್ ಧರ್ಮದ ಜನರ ವಿಚ್ಛೇದನ ಪ್ರಕರಣಗಳು ಬಹಳ ಕಡಿಮೆಯಿದೆ. 2011ರ ಜನಗಣತಿಯ ಪ್ರಕಾರ ಮುಸ್ಲಿಮರಲ್ಲಿ ವಿಚ್ಛೇದನದ ಸಂಖ್ಯೆ ಶೇ0.56ರಷ್ಟಿದ್ದೂ, ಹಿಂದೂ ಧರ್ಮಗಳಲ್ಲಿ ವಿಚ್ಛೇದನ ನೀಡುವ ಸಂಖ್ಯೆಗಿಂತಲೂ ತುಂಬಾ ಕಡಿಮೆ ಇದೆ. ಇಂತಹ ಸನ್ನಿವೇಶದಲ್ಲಿ ಮುಸ್ಲಿಮ್ ಮಹಿಳೆಗಾಗಿ ಪ್ರತ್ಯೇಕವಾದ ಕಾನೂನು ಬೇಕಿತ್ತೇ ಎನ್ನುವುದೇ ತಿಳಿಯುತ್ತಿಲ್ಲ. ಈ ಮಸೂದೆ ಕಾನೂನಾಗಿ ಹೊರ ಬಂದರೆ ಮಹಿಳೆಯರಿಂದ ಈ ಕಾನೂನಿನ ದುರುಪಯೋಗ ಆಗುವ ಸಾಧ್ಯತೆ ಹೆಚ್ಚಿದೆ ಹಾಗೂ ಇದು ಶಕ್ತಿಯ ಅಸಮತೋಲನಕ್ಕೂ ಕಾರಣವಾಗಬಹುದು. ಉದಾಹರಣೆಗೆ ಮಸೂದೆಯ ಪ್ರಕಾರ ಪೋಲಿಸ್ ಅಧಿಕಾರಿಯೊಬ್ಬರು ದೂರು ಸ್ವೀಕರಿಸಿದಾಗ, ನ್ಯಾಯಾಧೀಶರ ಆದೇಶಕ್ಕೆ ಕಾಯದೇ ಅಥವಾ ನ್ಯಾಯಾಧೀಶರ ಪೂರ್ವಾನುಮತಿ ಪಡೆಯದೇ ಕಠಿಣ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. ಆದ್ದರಿಂದ ಯಾರೊಬ್ಬರ ದೂರಿನ ಆಧಾರದ ಮೇಲೆ ಮುಸ್ಲಿಮ್ ಪುರುಷರನ್ನು ಮೂರು ವರ್ಷಗಳ ಕಾಲ ಜೈಲಿನಲ್ಲಿ ಎಸೆಯಲೂ ಬಹುದು ಎಂಬ ಭಯವನ್ನು ಈ ಮಸೂದೆ ಜನರಲ್ಲಿ ಹುಟ್ಟಿಸಿದೆ.

ಈ ಮಸೂದೆ ಮುಸ್ಲಿಮರ ವೈಯಕ್ತಿಕ ಕಾನೂನಿನ ಮೇಲೆ ಮಾಡುತ್ತಿರುವ ದಾಳಿ ಎಂದು ಭಾಸವಾಗುತ್ತಿದೆ. ಆಲ್ ಇಂಡಿಯಾ ಪ್ರೊಗ್ರೆಸ್ಸಿವ್ ವಿಮೆನ್ಸ್ ಅಸೋಸಿಯೇಶನ್ ಈ ಮಸೂದೆಯನ್ನು ಕ್ರಿಯಾತ್ಮಕವಲ್ಲದ್ದು ಎಂದು ಕರೆದಿದೆ. ಏಕೆಂದರೆ ಹೆಣ್ಣಿನ ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳಿಗೆ ಭದ್ರತೆಯನ್ನು ನೀಡುವುದಕ್ಕಾಗಿ ಜಾರಿಗೆ ಬರುತ್ತದೆ ಎಂದು ಸರಕಾರ ಭರವಸೆ ನೀಡಿದೆ. ಆದರೆ ಯಾವುದೇ ರೀತಿಯಲ್ಲಿ ಹೆಣ್ಣಿನ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನದ ಉತ್ತೇಜನ ಈ ಮಸೂದೆಯಲ್ಲಿ ಕಾಣ ಸಿಗುವುದಿಲ್ಲ. ಇದು ಸಂಪೂರ್ಣವಾಗಿ ಕೋಮುವಾದಿ ಅಜೆಂಡವಾಗಿದೆ ಎಂದು ‘ಎಐಪಿಡಬ್ಲ್ಯೂಎ’ಯ ನಾಯಕಿ ಕವಿತಾ ಕೃಷ್ಣನ್‍ರವರು ಹೇಳಿದ್ದಾರೆ. ಈ ಮಸೂದೆಯು ಮಹಿಳೆಯನ್ನು ರಕ್ಷಿಸಲು ಇರುವ ದಾರಿಯಾಗಿರದೆ ಮುಸ್ಲಿಮ್ ಗಂಡಸಿನ ಮೇಲೆ ದಾಳಿ ಮಾಡಲು ಉಪಯೋಗಿಸಿರುವ ಅಸ್ತ್ರವೆಂದು ಹೇಳಿದರೆ ತಪ್ಪಾಗಲಾರದು.
ಮುಸ್ಲಿಮರಲ್ಲಿ ಮದುವೆಯೆನ್ನು ನಾಗರಿಕ ಒಪ್ಪಂದವಾಗಿದ್ದು, ಇದರ ಕೊನೆಯು ನಾಗರಿಕ ಒಪ್ಪಂದವೇ ಆಗಬೇಕು. ಆದರೆ ಈ ವಿವಾಹದ ವಿಚ್ಛೇದನವನ್ನು ಅಪರಾಧೀಕರಣಗೊಳಿಸುವುದರಲ್ಲಿ ಯಾವುದೇ ಹುರುಳಿಲ್ಲವಾಗಿದೆ. ಈ ತ್ರಿವಳಿ ತಲಾಖ್‍ನ ಅನುಷ್ಠಾನದ ನಿರ್ಧಾರವು ಪಕ್ಕಾ ಕೆಟ್ಟ ಉದ್ದೇಶದಿಂದ ಕೂಡಿದೆ. ಯಾಕೆಂದರೆ ಎಲ್ಲಾ ಧರ್ಮಗಳಲ್ಲಿಯೂ ವಿಚ್ಛೇದನವನ್ನು ನಾಗರಿಕ ಸೃಷ್ಟಿಯಿಂದ ತೆಗೆದುಕೊಳ್ಳುವಾಗ ಇಲ್ಲಿ ಸಂವಿಧಾನದ ಉಲ್ಲಂಘನೆ ತಲೆಯೆತ್ತಿ ತೋರುತ್ತಿದೆ. ಇದು ಸರಕಾರದ ಕಡೆಯಿಂದ ಮಹತ್ತರವಾದ ತಪ್ಪು
ಸುಪ್ರೀಂ ಕೋರ್ಟ್ ಅಂದು ಸಲಿಂಗರತಿಯನ್ನು ನಿರಪರಾಧೀಕರಣ ಎಂದು ಘೋಷಿಸಿದಾಗ ನಮ್ಮ ಸರಕಾರಕ್ಕೆ ಯಾವುದೇ ತೊಂದರೆಗಳು ಎದುರಾಗಲಿಲ್ಲ. ಹಾಗೆಯೇ ವ್ಯಭಿಚಾರವನ್ನು ನಿರಪರಾಧೀಕರಣಗೊಳಿಸಿದಾಗಲೂ ಅಷ್ಟೇ ಇದಕ್ಕೆ ಅಡಚಣೆಗಳೇ ಕಂಡುಬಂದಿಲ್ಲ. ಆದರೆ ಇಂದು ‘ತ್ರಿವಳಿ ತಲಾಖ’ನ್ನು ಅಪರಾಧೀಕರಣಗಿಳಿಸುವ ಸಂಗಡಕ್ಕೆ ಇಳಿದಿದೆ.
ಈ ತ್ರಿವಳಿ ತಲಾಖ್ ಮಸೂದೆ ಜಾರಿಗೆ ಬಂದರೆ ಅಡಚಣೆಗಳೇ ಅಧಿಕ ಬದಲಾಗಿ ಲಾಭಗಳಿಲ್ಲ. ಏಕೆಂದರೆ ತಲಾಖ್ ಪ್ರಯೋಗಿಸಿದ ಗಂಡಸಿಗೆ ಮೂರು ವರ್ಷಗಳ ಜೈಲು ವಾಸವನ್ನು ಈ ಮಸೂದೆ ಘೋಷಿಸಿರುವುದರಿಂದ ಆತ ಹೇಗೆ ತಾನೇ ತನ್ನ ತಲಾಖ್ ನೀಡಿದ ಹೆಂಡತಿಗೆ ಜೀವನಾಧಾರ ನೀಡಿಯಾನು? ಅದಲ್ಲದೇ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ತ್ರಿವಳಿ ತಲಾಖ್ ಅನೂರ್ಜಿತ ಹಾಗೂ ವಿವಾಹಕ್ಕೆ ಯಾವುದೇ ಅಡ್ಡಿಯನ್ನು ತರುವುದಿಲ್ಲ. ಈ ಅಂಶವನ್ನೇ ಮಸೂದೆಯು ಮರೆತು ಬಿಟ್ಟಂತಿದೆ. ಸಂಗಾತಿಗಳ ನಡುವಿನ ಸಂಯೋಗದ ಹಕ್ಕುಗಳಿಗೂ ಖಂಡಿತವಾಗಿಯೂ ಈ ಮಸೂದೆ ಚ್ಯುತಿ ನೀಡುತ್ತದೆ. ಗಂಡನನ್ನು ಅಪರಾಧಿ ಎಂದು ಘೋಷಿಸುವುದು ಹೆಂಡತಿಯ ಇಚ್ಛೆಗೆ ವಿರುದ್ಧವಾಗಿರಲೂಬಹುದು. ಹೀಗೆ ದಂಪತಿಗಳ ನಡುವಿನ ಅನಗತ್ಯ ಪ್ರತ್ಯೆಕತೆಗೆ ಇದು ಕಾರಣವಾಗುತ್ತದೆ. ಒಟ್ಟಿನಲ್ಲಿ ಸರಕಾರವು ಏನನ್ನೋ ಮಾಡಲು ಭರವಸೆಯನ್ನಿತ್ತು. ಮತ್ತೇನನ್ನೋ ಈ ಮಸೂದೆಯ ಮೂಲಕ ತನ್ನ ಬಂಡವಾಳವನ್ನಾಗಿಸಿಕೊಂಡಿದೆ.
ಸರಕಾರ ತ್ರಿವಳಿ ತಲಾಖ್‍ನ ಉಚ್ಛರಣೆಯನ್ನು ಅಪರಾಧೀಕರಣಗೊಳಿಸುವುದಕ್ಕಿಂತಲೂ ಆರ್ಥಿಕ ಮತ್ತು ಸಾಮಾಜಿಕ-ಕಾನೂನು ನೆರವನ್ನು ಒದಗಿಸುವುದರ ಮೂಲಕ ಮಹಿಳಾ ಸಮಾಲೋಚನಾ ಸಾಮಥ್ರ್ಯವನ್ನು ಹೆಚ್ಚಿಸಬೇಕು. ಇದು ತ್ರಿವಳಿ ತಲಾಖ್‍ನ ಉಚ್ಛರಣೆಯು ಅನೂರ್ಜಿತವಾಗಿರುವ ಕಾರಣದಿಂದ ಇದು ಸಾಮಾನ್ಯವಾಗಿ ಹೆಂಡತಿಯನ್ನು ತೊರೆಯುವುದು ಎಂಬ ಅರ್ಥವನ್ನು ಕೊಡುತ್ತದೆ. ಯಾವುದೇ ಕಾನೂನಿನಲ್ಲಿ ಹೆಂಡತಿಯನ್ನು ತೊರೆಯುವುದು ಅಪರಾಧವಲ್ಲ. ಇಲ್ಲಸಲ್ಲದ ರೀತಿಯಲ್ಲಿ ಹಾಗಾಗ ಹೆಂಡತಿಯನ್ನು ತೊರೆಯುವುದರ ವಿರುದ್ಧ ಕಾನೂನು ವ್ಯಾಪಕವಾಗಿ ತರಲಿ ಇದಕ್ಕೆ ಧರ್ಮದ ಪಟ್ಟವನ್ನು ಕಟ್ಟಬೇಡಿ. ತ್ರಿವಳಿ ತಲಾಖ್‍ನೊಂದಿಗೆ ವಿವಾಹ ಬಾಂಧವ್ಯದಲ್ಲಿ ಯಾವುದೇ ಹಿಂಸೆ ದೌರ್ಜನ್ಯಗಳಿದ್ದಲ್ಲಿ ಮಹಿಳೆಯು ಅದರ ವಿರುದ್ಧ ಈಗಾಗಲೇ ಅನುಷ್ಠಾನದಲ್ಲಿರುವಂತಹ ಕೌಟುಂಬಿಕ ಹಿಂಸಾಚಾರ ಕಾಯ್ದೆ 2005, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಆಕ್ಟನ್ನು ಉಪಯೋಗಿಸಿಕೊಳ್ಳಬಹುದಾಗಿದೆ. ಈ ಎರಡು ಕಾನೂನುಗಳನ್ನು ಜೊತೆಯಾಗಿ ಸದುಪಯೋಗಿಸಿಕೊಂಡರೆ ಕೌಟುಂಬಿಕ ಹಿಂಸಾಚಾರದಿಂದ ಬದುಕುಳಿದ ಮಹಿಳೆಯರಿಗೆ ಲಭ್ಯವಿರುವ ವ್ಯಾಪಕವಾದ ಕಾನೂನು ಆಯ್ಕೆಗಳನ್ನು ಈ ಮಹಿಳೆ ಪ್ರತಿನಿಧಿಸಬಹುದು. ಇವು ನಾಗರಿಕ ಮತ್ತು ಅಪರಾಧಿತ ಕಾನೂನು ಇವೆರಡನ್ನೂ ಒಳಗೊಂಡಿದೆ.
ಗಂಡ ಸೆರೆವಾಸ ಅನುಭವಿಸುತ್ತಿರುವಾಗ ಹೆಂಡತಿ ಮತ್ತು ಮಕ್ಕಳು ಅಥವಾ ಇತರ ಅವಲಂಭಿತರಿಗೆ ಸರಕಾರ ಯಾವುದೇ ಆರ್ಥಿಕ ಮತ್ತು ಕಾನೂನು ನೆರವು ನೀಡುವುದಿಲ್ಲವಾದ್ದರಿಂದ ಅವರ ಬದುಕುವ ದಾರಿ ಯಾವುದು..?
ಅದೇ ಸಮಯದಲ್ಲಿ ತಲಾಖ್ ಅನೂರ್ಜಿತ, ಗಂಡ ಜೈಲಿನಲ್ಲಿ ಹೆಂಡತಿ ಬೇರೆ ಮದುವೆಯಾಗಲಾದರೂ ಸಾಧ್ಯವೇ..?
ಕೌಟುಂಬಿಕ ದೌರ್ಜನ್ಯ ಕಾಯ್ದೆ 2005ರಡಿಯಲ್ಲಿ ಸೆಕ್ಷನ್ 21 ಈ ದುಃಖಿತ ಮಹಿಳೆ ತನ್ನ ಮಕ್ಕಳನ್ನು ತನ್ನ ವಶದಲ್ಲಿರಿಸಲು ಮತ್ತು ಸೆಕ್ಷನ್ 20 ಮಹಿಳೆಗೆ ಜೀವನಾಧಾರವನ್ನೂ ಘೋಷಿಸುತ್ತದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್‍ನ ಸೆಕ್ಷನ್ 125 ಕೂಡ ಈಗಾಗಲೇ ದುಃಖಿತ ಮಹಿಳೆಗೆ ಜೀವನಾಧಾರ ನೀಡಲು ಸಹಾಯ ಮಾಡುತ್ತದೆ. ಅತ್ಯಂತ ಕ್ರೂರ ಅಪರಾಧಗಳಾದ ಆತುರದ ಮತ್ತು ನಿರ್ಲಕ್ಷ್ಯದಿಂದ ಸಂಬಂಧಿಸಿದ ಮರಣ (ಭಾದಸ ಸೆ. 304ಎ) ಗಲಭೆ (ಭಾದಸ, ಸೆ.372)ಗಳಿಗೆ ಕೇವಲ ಎರಡು ವರ್ಷಗಳ ಜೈಲುವಾಸ ನೀಡುವಾಗ, ಈ ವಿಚ್ಛೇದನಕ್ಕೆ ಮೂರು ವರ್ಷದ ಜೈಲು ವಾಸ ಒಟ್ಟಿನಲ್ಲಿ ನಿರಂಕುಶ ಮತ್ತು ಅಳತೆಗೂ ಮೀರಿದ್ದಾಗಿದೆ.
ಸಂವಿಧಾನದ ವಿಧಿ 14, 15 ಮತ್ತು 25ಗಳನ್ನು ಸ್ಪಷ್ಟವಾಗಿ ಈ ಮಸೂದೆಯು ಉಲ್ಲಂಘಿಸಿದೆ. ಸುಪ್ರೀಂ ಕೋರ್ಟ್ ತ್ರಿವಳಿ ತಲಾಖನ್ನು ಅನೂರ್ಜಿತ ಎಂದು ಘೋಷಿಸಿರುವಾಗ ಈ ಮಸೂದೆಯ ಅಗತ್ಯ ಯಾವ ರೀತಿಯಲ್ಲಿ ಎದುರಾಯಿತು ಎನ್ನುವುದೇ ಜನರಲ್ಲಿ ದೊಡ್ಡ ಪ್ರಶ್ನೆಯಾಗಿ ಕಾಡಿದೆ.
ಇದು ಕೇವಲ ಮುಸ್ಲಿಮ್ ಸಮುದಾಯವನ್ನು ವಿಭಾಗಿಸಲು ಉಪಯೋಗಿಸಿದ ಅಸ್ತ್ರವಾಗಿದೆ. ಮಸೂದೆಯು ಸರಕಾರದ ರಾಜಕೀಯ ಅಜೆಂಡಾದ ಒಂದು ಭಾಗವಷ್ಟೇ. ಇದು ಮುಗ್ಧ ಜನರಲ್ಲಿ ಅನೇಕ ಆಮಿಷಗಳನ್ನೊಡ್ಡಿ ಇಂದು ಉಳಿಸಿಕೊಳ್ಳಲು ಸೋತಿರುತ್ತದೆ. ಆದ್ದರಿಂದ ಈಗ ಇಂತಹ ತಂತ್ರಗಳನ್ನು ಉಪಯೋಗಿಸುತ್ತಿದೆ. ಜನರ ನಡುವೆ ಕೋಮುಧ್ವೇಷವನ್ನು ಬಿತ್ತಲು ಹೊರಟಿದೆ.

ಸರಕಾರ ನಿಜವಾಗಿಯೂ ಮುಸ್ಲಿಮ್ ಮಹಿಳೆಯ ಕಲ್ಯಾಣದ ಕಾಳಜಿಯನ್ನು ಹೊಂದಿದ್ದರೆ, ತನ್ನ ಸಹಾನುಭೂತಿಯನ್ನು ಕೇವಲ ಒಂದು ವಿಭಾಗಕ್ಕೆ ಅರ್ಪಿಸುತ್ತಿರಲಿಲ್ಲ. ಬದಲಾಗಿ ಇಡೀ ಸಮುದಾಯವನ್ನು ಪ್ರತಿನಿಧಿಸುತ್ತಿತ್ತು. ಆದರೆ ಇದು ನಿಜವಲ್ಲವಲ್ಲಾ. ಏಕೆಂದರೆ ನಮ್ಮ ಗಣ್ಯ ರಾಜಕಾರಣಿಯರೊಬ್ಬರು ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಕ್ಕೋ, ಬಾಂಗ್ಲಾದೇಶಕ್ಕೋ ಪಲಾಯನಗೈಯುವಂತೆಯೂ, ಜುಮಾ ಮಸೀದಿಗಳನ್ನು ಕೆಡವುವಂತೆಯೂ ಸ್ಪಷ್ಟವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಇವುಗಳನ್ನೆಲ್ಲಾ ನೋಡುತ್ತಿದ್ದರೆ ತ್ರಿವಳಿ ತಲಾಖ್‍ನ ಮೇಲೆ ಸರಕಾರದ ಗಮನ ಮಾನವೀಯತೆಯ ದೃಷ್ಟಿಗಿಂತಲೂ ಹೆಚ್ಚಾಗಿ ರಾಜಕೀಯ ಮಾರ್ಗದರ್ಶನದಿಂದ ಕೂಡಿದೆ ಎಂದು ಜನರಲ್ಲಿ ಭಾಸವಾಗುತ್ತಿದೆ.

LEAVE A REPLY

Please enter your comment!
Please enter your name here