ಇಸ್ಮತ್ ಫಜೀರ್

ಭಾರತೀಯ ಮುಸ್ಲಿಮರು ರಾಷ್ಟ್ರೀಯತೆಯ ವಿಚಾರದಲ್ಲಿ ಇಂದು ಎಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಬದುಕುತ್ತಿದ್ದಾರೆಂದರೆ ಅವರಿಗೆ ಅವರ ಬದುಕಿನ ಹೆಜ್ಜೆ ಹೆಜ್ಜೆಗೂ ದೇಶನಿಷ್ಠೆಯನ್ನು ಸಾಬೀತುಪಡಿಸಬೇಕಾದಂತಹ ಸ್ಥಿತಿಯಿದೆ. ಹೀಗೆ ಅವರ ದೇಶನಿಷ್ಠೆಯನ್ನು ಪ್ರಶ್ನಾರ್ಹಗೊಳಿಸಿದವರಾದರೂ ಯಾರು…..? ಈ ದೇಶದ ಸ್ವಾತಂತ್ರ್ಯ ಸಮರಕ್ಕೆ ನಯಾ ಪೈಸೆಯ ಕೊಡುಗೆ ನೀಡದವರು ಮಾತ್ರವಲ್ಲ ವಸಾಹತುಶಾಹಿ ಶಕ್ತಿಗಳೊಂದಿಗೆ ಕೈ ಜೋಡಿಸಿ ದೇಶಕ್ಕೆ ದ್ರೋಹ ಬಗೆದವರು. ಇಂದು ಅದೇ ಮಂದಿಗಳು ಮುಸ್ಲಿಮರ ಜ್ಞಾನ ಕೇಂದ್ರಗಳಾದ, ಅವರಿಗೆ ಬದುಕಿನ ಸಂಸ್ಕಾರ ಬೋಧಿಸುವ ಮದ್ರಸಾಗಳನ್ನು ಭಯೋತ್ಪಾದನಾ ತರಬೇತಿ ಕೇಂದ್ರಗಳೆಂದು ಚಿತ್ರಿಸುತ್ತಿದ್ದಾರೆ. ಇಂದು ಮುಸ್ಲಿಮರ ಧಾರ್ಮಿಕ ವಿದ್ವಾಂಸರನ್ನು ಅವರ ಬಿಳಿ ದಿರಿಸು, ಅವರ ಬಿಳಿ ಟೊಪ್ಪಿ ಮತ್ತು ಗಡ್ಡಗಳ ಕಾರಣದಿಂದ ಭಯೋತ್ಪಾಕರೆಂದೇ ಬಿಂಬಿಸಲಾಗುತ್ತಿದೆ. ಮುಸ್ಲಿಮರ ಮದ್ರಸಾಗಳು ಸ್ವಾತಂತ್ರ್ಯಪೂರ್ವಕಾಲದಿಂದಲೂ ರಾಷ್ಟ್ರೀಯ ವಿಚಾರಧಾರೆಯ ಕೇಂದ್ರಗಳಾಗಿದ್ದವು. ಈ ದೇಶದ ಉದ್ದಗಲಕ್ಕೂ ಇದ್ದ ಮದ್ರಸಾಗಳು ಲಕ್ಷಾಂತರ ಸ್ವಾತಂತ್ರ್ಯ ಯೋಧರನ್ನು ದೇಶಕ್ಕೆ ಅರ್ಪಿಸಿದೆ. ಮದ್ರಸಾಗಳಷ್ಟು ದೊಡ್ಡ ಸಂಖ್ಯೆಯ ಸ್ವಾತಂತ್ರ್ಯ ಸೇನಾನಿಗಳನ್ನು ಈ ದೇಶದ ಯಾವ ಯುನಿವರ್ಸಿಟಿಗಳೂ ದೇಶಕ್ಕೆ ನೀಡಿಲ್ಲ. ಮುಸ್ಲಿಂ ಧಾರ್ಮಿಕ ವಿದ್ವಾಂಸರಷ್ಟು ದೊಡ್ಡ ಸಂಖ್ಯೆಯಲ್ಲಿ ಯಾವುದೇ ಧರ್ಮದ ಧರ್ಮಗುರುಗಳೋ, ಆಚಾರ್ಯರೋ, ಸ್ವಾಮಿಗಳೋ ಸ್ವರಾಜ್ಯ ಚಳವಳಿಯ ಕಣಕ್ಕೆ ಇಳಿದಿಲ್ಲ. ಇತರ್ಯಾವುದೇ ಧರ್ಮಿಯರಿಗೆ ಸ್ವಾತಂತ್ರ್ಯ ರಾಜಕೀಯ ಅನಿವಾರ್ಯತೆಯಾಗಿತ್ತು. ಆದರೆ ಮುಸ್ಲಿಮರಿಗೆ ಅದು ಕೇವಲ ರಾಜಕೀಯ ಅನಿವಾರ್ಯತೆ ಮಾತ್ರವಲ್ಲದೇ ಧಾರ್ಮಿಕ ಅಗತ್ಯತೆಯೂ ಆಗಿತ್ತು. ವಸಾಹತು ಶಾಹಿ ಶಕ್ತಿಗಳ ಕಪಿಮುಷ್ಟಿಯಲ್ಲಿ ನಲುಗುತ್ತಿದ್ದ ದೇಶದ ಕುರಿತಂತೆ ಮುಸ್ಲಿಂ ವಿದ್ವಾಂಸರು “ದಾರುಲ್ ಹರ್ಬ್” (ಸಂಘರ್ಷದ ನಾಡು) ಎಂದು ಫತ್ವಾ ನೀಡಿದ್ದರು. ದಾರುಲ್ ಹರ್ಬ್ ಎಂದ ಮೇಲೆ ದೈಹಿಕವಾಗಿ ಶಕ್ತಿಯುಳ್ಳ ಪ್ರತಿಯೋರ್ವ ಮುಸ್ಲಿಮನಿಗೂ ನಾಡಿನ ಶತ್ರುಗಳ ವಿರುದ್ಧ ಜಿಹಾದ್ ನಡೆಸುವುದು ಧಾರ್ಮಿಕ ಕರ್ತವ್ಯವಾಗಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡೋ ಅಲ್ಲದೆಯೋ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಲಕ್ಷಾಂತರ ಮುಸ್ಲಿಂ ಸೇನಾನಿಗಳಿದ್ದಾರೆ. ಅವರಲ್ಲಿ ಬಹಳಷ್ಟು ದೊಡ್ಡ ಸಂಖ್ಯೆಯ ಮುಸ್ಲಿಂ ವಿದ್ವಾಂಸರು (ಉಲೆಮಾಗಳು) ಇದ್ದಾರೆ. ಅವರಲ್ಲಿ ಅನೇಕ ಹೆಸರುಗಳು ಚರಿತ್ರೆಯ ಪುಟಗಳಿಂದ ಬದಿಗೆ ತಳ್ಳಲ್ಪಟ್ಟಿವೆ. ಆದುದರಿಂದ ಅವರಲ್ಲಿ ಒಂದಿಬ್ಬರ ಬದುಕು ಚಳವಳಿ ಇತ್ಯಾದಿಗಳ ಮೇಲೆ ಕ್ಷ-ಕಿರಣ ಬೀರುವ ಪ್ರಯತ್ನವನ್ನು ನಾನಿಲ್ಲಿ ಮಾಡುತ್ತೇನೆ.

ಮೌಲಾನಾ ಶಾಹ್ ಅಬ್ದುಲ್ ಅಝೀಝ್:

ಆಗಿನ್ನೂ ರಾಷ್ಟ್ರೀಯತೆಯ ಸ್ಪಷ್ಟ ಪರಿಕಲ್ಪನೆ ಮೂಡಿರಲಿಲ್ಲ. ಆ ಕಾಲದಲ್ಲಿಯೇ ಬ್ರಿಟಿಷರು ಈ ನೆಲದ ಪರಮ ಶತ್ರುಗಳೆಂದು ಪರಿಗಣಿಸಿ ಅವರ ಕುತಂತ್ರ, ರಹಸ್ಯ ಕಾರ್ಯಸೂಚಿ ಇವೆಲ್ಲವುಗಳನ್ನು 18 ನೇ ಶತಮಾನದಲ್ಲಿಯೇ ಅರ್ಥೈಸಿದ್ದ ಪ್ರಖರ ಇಸ್ಲಾಮಿ ವಿದ್ವಾಂಸ ಮೌಲಾನಾ ಶಾಹ್ ಅಬ್ದುಲ್ ಅಝೀಝ್. ಉಪಖಂಡದಲ್ಲಿ ಮೊಟ್ಟ ಮೊದಲ ಬಾರಿಗೆ “ದಾರುಲ್ ಹರ್ಬ್” ಎಂಬ ಫತ್ವಾ ನೀಡಿದವರು ಇದೇ ಮೌಲನಾ ಶಾಹ್ ಅಬ್ದುಲ್ ಅಝೀಝ್. ಶಾಹ್ ಅಬ್ದುಲ್ ಅಝೀಝ್‍ರ ತಂದೆ ಶಾ ವಲಿಯುಲ್ಲಾಹ್ ಮಹದ್ದಿಸ್ ದೆಹ್ಲಮಿಯರೂ ಬ್ರಿಟಿಷರ ರಾಜಕೀಯ ಕಾರ್ಯತಂತ್ರಗಳನ್ನು, ಸಾಮ್ರಾಜ್ಯಶಾಹಿ ಆಲೋಚನೆಗಳನ್ನು ಗುರುತಿಸಿದ್ದರು. ಶಾಹ್ ವಲಿಯುಲ್ಲಾಹ್‍ರವರು ಮದ್ರಸಾಗಳನ್ನು ರಾಷ್ಟ್ರೀಯ ಅಂದೋಲನದ ಕೇಂದ್ರಗಳಾಗಿಸುವ ನಿಟ್ಟಿನಲ್ಲಿ ಬಹಳಷ್ಟು ಶ್ರಮಿಸಿದ್ದರು. ದಾರುಲ್ ಹರ್ಬ್ ಫತ್ವಾದ ಕಾರಣದಿಂದಾಗಿಯೇ ಮುಸ್ಲಿಮರಿಗೆ ಬ್ರಿಟಿಷ್ ಸಾಮ್ರಾಜ್ಯಶಾಹಿತ್ವದ ಸ್ಪಷ್ಟ ಪರಿಕಲ್ಪನೆ ಸಿಕ್ಕಿದ್ದು, ಶಾಹ್ ಅಬ್ದುಲ್ ಅಝೀಝ್‍ರು ಬಿತ್ತಿದ ದಾರುಲ್ ಹರ್ಬ್‍ನ ಬೀಜ ಮೊಳಕೆಯೊಡೆದು ಫಲ ನೀಡಲಾರಂಭಿಸಿದ್ದು 1857 ರ ಮೊದಲ ಏಕೀಕೃತ ಸ್ವಾತಂತ್ರ್ಯ ಸಂಗ್ರಾಮದ ವೇಳೆಗೆ. ಆ ಫತ್ವಾದ ಅರ್ಥವ್ಯಾಪ್ತಿಯನ್ನು ಮುಸ್ಲಿಮರ ಮನದಲ್ಲಿ ಗಟ್ಟಿಯಾಗಿ ಬೇರೂರಿಸಲು 1857ರವರೆಗಿನ ಹಲವು ರಾಷ್ಟ್ರೀಯವಾದಿ ಉಲೆಮಾಗಳು ಶ್ರಮಿಸಿದ್ದರು.

ಸಯ್ಯದ್ ಅಹ್ಮದ್ ಶಹೀದ್: 

ಹುತಾತ್ಮ ಸಯ್ಯದ್ ಅಹ್ಮದ್‍ರು ದೇಶದಾದ್ಯಂತ ಸಂಚರಿಸಿ ಜನರಲ್ಲಿ ಸ್ವರಾಜ್ಯದ ಕಿಚ್ಚು ಹಚ್ಚಿ ಬ್ರಿಟಿಷರೊಂದಿಗೆ ಹೋರಾಡಲು ಒಂದು ಬೃಹತ್ ಯೋಧರ ಪಡೆಯನ್ನೇ ಸಜ್ಜುಗೊಳಿಸಿದ್ದರು. ಹುತಾತ್ಮ ಸಯ್ಯದ್ ಅಹ್ಮದ್‍ರ ಅವಿರತ ಶ್ರಮದ ಫಲವಾಗಿ ದೇಶದ ವಿವಿದೆಡೆಗಳಲ್ಲಿ ಜನಸಂಘಟಿತರಾದರು. ಫರಾಯಿದಿ ಚಳವಳಿ ಮತ್ತು ಮುಜಾಹಿದೀನ್ ಚಳವಳಿಗಳ ಕಾರ್ಯಕರ್ತರು ತಮ್ಮೊಳಗಿನ ತಾತ್ವಿಕ ಭಿನ್ನಾಭಿಪ್ರಾಯ ಮರೆತು ಸ್ವಾತಂತ್ರ್ಯದ ಹೆಸರಲ್ಲಿ ಒಂದಾದರು. ಸಯ್ಯದ್ ಅಹ್ಮದರು ಬ್ರಿಟಿಷರೊಂದಿಗೆ ಹೋರಾಡುತ್ತಾ ಬಾಲಾಕೋಟ್‍ನಲ್ಲಿ ಹುತಾತ್ಮರಾದರು. ಅಪ್ರತಿಮ ವಾಗ್ಮಿಯಾಗಿದ್ದ ಹುತಾತ್ಮ ಸಯ್ಯದ್ ಅಹ್ಮದ್‍ರ ಪ್ರಾರ್ಥನೆಯೊಂದು ಆ ಕಾಲದಲ್ಲಿ ಪ್ರಸಿದ್ದಿಯಾಗಿತ್ತು.

“ಇಲಾಹೀ ದೇ ಮುಜೆ ಬೀ ಶಹಾದತ್ ನಸೀಬ್

ಯೆ ಅಫ್‍ಝಲ್ ಸೆ ಅಫ್‍ಝಲ್ ಇಬಾದತ್ ನಸೀಬ್”

(ಅರ್ಥ ಅಲ್ಲಾಹನೇ ನನಗೂ ರಕ್ತಸಾಕ್ಷಿಯಾಗುವ ಭಾಗ್ಯ ನೀಡು. ಆರಾಧನೆಗಳಲ್ಲೇ ಶ್ರೇಷ್ಟ ಆರಾಧನೆಯಾಗಿರುವ ಹುತಾತ್ಮತೆಯ ಭಾಗ್ಯ ನೀಡು”)

ಮೌಲನಾ ಶಿಬ್ಲಿ ನೋಮಾನಿ:

ಉತ್ತರ ಪ್ರದೇಶದ ಆಝಂಗಡ್‍ನ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದ ಮೌಲಾನಾ ಶಿಬ್ಲಿ ನೋಮಾನಿ ಆಧುನಿಕ ಮತ್ತು ಧಾರ್ಮಿಕ ಎರಡೂ ಬಗೆಯ ಉನ್ನತ ಶಿಕ್ಷಣ ಪಡೆದಿದ್ದರು. 1857 ರ ಕ್ರಾಂತಿಯ ನಂತರದ ಬೆಳವಣಿಗೆಗಳು ಮುಸ್ಲಿಮರಲ್ಲಿ ತೀವ್ರ ಹತಾಶೆ ಮೂಡಿಸಿತ್ತು. ಶಿಬ್ಲಿಯವರು 1882 ರಲ್ಲಿ ತನ್ನ 25ನೇ ಹರೆಯದಲ್ಲಿ ಸರ್ ಸಯ್ಯದ್ ಅಹ್ಮದ್ ಖಾನ್‍ರ ಪ್ರಗತಿಪರ ಚಿಂತನೆಗಳಿಂದ ಪ್ರಭಾವಿತರಾದರು. ಭಾರತೀಯ ಮುಸ್ಲಿಂ ವಿದ್ವಾಂಸರು ಆಂಗ್ಲ ಶಿಕ್ಷಣವನ್ನು ಬಹಿಷ್ಕರಿಸಲು ಕರೆ ಕೊಟ್ಟ ಕಾಲದಲ್ಲಿ ಶಿಬ್ಲಿ ಆಂಗ್ಲ ಶಿಕ್ಷಣದ ಅಗತ್ಯತೆಯನ್ನು ಪ್ರತಿಪಾದಿಸಿದ್ದರು. ಸ್ವಾತಂತ್ರ್ಯ ಚಳವಳಿಗೆ ಆಧುನಿಕ ಆಯಾಮ ಒದಗಿಸಲು ಮತ್ತು ಬ್ರಿಟಿಷರ ತಂತ್ರಗಳಿಗೆ ಪ್ರತಿತಂತ್ರ ಹೂಡಲು ಆಂಗ್ಲ ಶಿಕ್ಷಣ ಅಗತ್ಯವೆಂಬುವುದನ್ನು ಪ್ರತಿಪಾದಿಸಿದರು. ವಿಮೋಚನಾ ಚಳವಳಿಗೆ ಅಂತರಾಷ್ಟ್ರೀಯ ಬೆಂಬಲ ಪಡೆಯಬೇಕಾದರೆ ಅವರೊಂದಿಗೆ ವ್ಯವಹರಿಸಲು ಆಧುನಿಕ ಶಿಕ್ಷಣ ಬಹಳ ಅಗತ್ಯವಿತ್ತು. ಶಿಬ್ಲಿಯವರು ಮುಸ್ಲಿಂ ಆಂಗ್ಲೋ ಒರಿಯಂಟಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು. 1898 ರಲ್ಲಿ ಸರ್ ಸೆಯ್ಯದ್ ಅಹ್ಮದ್ ಖಾನ್ ನಿಧನರಾದಾಗ ಒ.ಂ.ಔ ಕಾಲೇಜು ತೊರೆದು ನದ್ವತುಲ್ ಉಲೆಮಾ  ಶರೀಅತ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಹುದ್ದೆಗೆ ಸೇರಿದರು. ಶಿಬ್ಲಿಯವರ ಆಗಮನದ ಬಳಿಕ ನದ್ವತುಲ್ ಉಲೆಮಾ ಕ್ರಾಂತಿಕಾರಿ ವಿಮೋಚನಾ ಹೋರಾಟದ ಕೇಂದ್ರವಾಗಿ ಪರಿವರ್ತನೆಗೊಂಡಿತು. ವಿದ್ಯಾರ್ಥಿಗಳು ಬ್ರಿಟಿಷ್ ಪ್ರಭುತ್ವದ ವಿರುದ್ಧ ಪ್ರತಿರೋಧ ಚಳವಳಿಗೆ ದುಮುಕಿದರು. ಇದರಿಂದಾಗಿ ಬ್ರಿಟಿಷ್ ಪ್ರಭುತ್ವ ನದ್ವತುಲ್ ಉಲೆಮಾದ ಮೇಲೆ ತೀವ್ರ ನಿಗಾ ಇಟ್ಟಿತು. ಐದಕ್ಕಿಂತ ಹೆಚ್ಚು ಮುಸ್ಲಿಮರು ಗುಂಪು ಕೂಡಿದರೆ ಅವರನ್ನು ಬಂಧಿಸುವ ಪ್ರಕ್ರಿಯೆಗೆ ಬ್ರಿಟಿಷ್ ಪ್ರಭುತ್ವ ಕೈ ಹಾಕಿತು. ಉಲೆಮಾಗಳ ಮೇಲೆ ಪ್ರಭುತ್ವದ ಕಿರುಕುಳ ಜಾಸ್ತಿಯಾದಾಗ ಅನೇಕ ಉಲೆಮಾಗಳು ತಲೆಮರೆಸಿ ಓಡಾಡತೊಡಗಿದರು. ಶಿಬ್ಲಿಯವರೂ ಕೆಲಕಾಲ ನದ್ವತುಲ್ ಉಲೆಮಾ ತೊರೆದು ಹೈದ್ರಾಬಾದ್‍ನಲ್ಲಿ ಆಶ್ರಯ ಪಡೆದಿದ್ದರು.

ಶೈಖುಲ್ ಹಿಂದ್ ಮೌಲಾನಾ ಮಹಮೂದ್ ಅಲ್ ಹಸನ್:

ಸ್ವಾತಂತ್ರ್ಯ ಸಂಗ್ರಾಮದ ಕಾವು ದಿನೇ ದಿನೇ ಏರುತ್ತಲೇ ಸ್ವರಾಜ್ಯ ಹೋರಾಟಗಾರರ ಸರಣಿ ವೈಫಲ್ಯಗಳು ಮೌಲಾನಾ ಮಹಮೂದ್ ಅಲ್ ಹಸನ್‍ರನ್ನು ಕಂಗೆಡಿಸಿತ್ತು. ಬ್ರಿಟಿಷರೊಂದಿಗೆ ಏಕಾಂಗಿಯಾಗಿ ಹೋರಾಡುವುದು ಅಷ್ಟೊಂದು ಸುಲಭವಲ್ಲ ಎಂದು ಮೌಲಾನಾರಿಗೆ ಮನವರಿಕೆಯಾದಾಗ ಅವರು ಅಫಘಾನಿಸ್ತಾನ, ಇರಾನ್ ಮತ್ತು ತುರ್ಕಿಯ ಸಹಾಯ ಪಡೆಯಬಯಸಿದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಉತ್ತರ ಭಾರತದ ವಿವಿಧೆಡೆ ಅನೇಕ ಸಂಘ ಸಂಸ್ಥೆಗಳನ್ನು ಮೌಲಾನಾ ಸ್ಥಾಪಿಸಿದರು. ಅಲೀ ಸಹೋದರರು, ಮೌಲಾನಾ ಆಝಾದ್, ಉಬೇದುಲ್ಲಾ ಸಿಂದಿ, ಡಾ| ಎಂ.ಎ. ಅನ್ಸಾರಿ, ಮೋತಿಲಾಲ್ ನೆಹರೂ, ಲಾಲಾ ಲಜಪತ ರಾಯ್, ಬಾಬು ರಾಜೇಂದ್ರ ಪ್ರಸಾದ್ ಮುಂತಾದವರು ಮೌಲಾನಾರ ಅನುಯಾಯಿಗಳಾಗಿದ್ದರು. ಮೌಲಾನಾರು ದಾರುಲ್ ಉಲೂಂ ದೇವಬಂದ್‍ನ ವಿದ್ಯಾರ್ಥಿಗಳ “ಜಮಿಯ್ಯತುಲ್ ಅನ್ಸಾರ್” ಎಂಬ ವಿದ್ಯಾರ್ಥಿ ಸಂಘವನ್ನು ಸ್ಥಾಪಿಸಿ ಅವರನ್ನು ಹೋರಾಟದ ಕಣಕ್ಕೆ ಇಳಿಸಿದರು. ಮೌಲಾನಾರ ಚಟುವಟಿಕೆ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಯಿತು. ಮೌಲಾನಾರಿಗೆ ತನ್ನ ಬಂಧನದ ದಿನಗಳು ಸನ್ನಿಹಿತವಾಗಿದೆಯೆಂದು ಅರಿತಾಗ ಅವರು ದೇಶ ತೊರೆದು ಪವಿತ್ರನಗರಿ ಮಕ್ಕಾ ಸೇರಿದರು. 1916 ರಲ್ಲಿ ಮದೀನಾಕ್ಕೆ ತೆರಳಿದ ಮೌಲಾನಾರು ಬ್ರಿಟಿಷರೊಂದಿಗೆ ಹೋರಾಡಲು ತುರ್ಕಿಯ ಗವರ್ನರ್ ಘಾಲಿಬ್ ಪಾಷಾರೊಂದಿಗೆ ಸೇರಿ ಒಕ್ಕೂಟ ರಚಿಸಿದರು. ಪಾಷಾರಿಂದ ಮಿಲಿಟರಿ ಬೆಂಬಲದ ವಾಗ್ಧಾನ ಪಡೆದು ಅಫ್‍ಘಾನಿಸ್ತಾನ ಮಾರ್ಗವಾಗಿ ಭಾರತಕ್ಕೆ ಆಗಮಿಸಿ ಹೋರಾಟವನ್ನು ಬಲಿಷ್ಠಗೊಳಿಸುವ ಯೋಜನೆ ಹಾಕಿದ್ದರು. ಅರಬ್ ಮತ್ತು ತುರ್ಕಿಸ್ಥಾನದಲ್ಲಿನ ರಾಜಕೀಯ ಸ್ಥಿತ್ಯಂತರದ ಕಾರಣದಿಂದಾಗಿ ಮೌಲಾನಾ 1917 ರ ಜನವರಿಯಲ್ಲಿ ಇತರ ಮುಸ್ಲಿಂ ಉಲೆಮಾಗಳಾದ ಹುಸೇನ್ ಅಹ್ಮದ್ ಮದನಿ, ಹಕೀಂ ನುಸ್ರತ್ ಹುಸೇನ್, ವಹೀದ್ ಅಹ್ಮದ್ ಮದನಿ, ಅಝೀಝ್ ಗುಲ್‍ರೊಂದಿಗೆ ಬಂಧಿತರಾಗಿ ಮಾಲ್ಟಾ ದ್ವೀಪದ ಸೆರೆಮನೆ ಸೇರಿದರು. ಮೌಲಾನರ ಬಿಡುಗಡೆಗಾಗಿ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದವು. ಕೊನೆಗೆ ಮೂರು ವರ್ಷಗಳ ಸೆರೆವಾಸದ ಬಳಿಕ ಮೌಲಾನಾ ಬಿಡುಗಡೆಗೊಂಡರು. ಮೌಲಾನಾ ಆ ಬಳಿಕ ಇತರ ವಿದ್ವಾಂಸರೊಂದಿಗೆ ಸೇರಿ ಚರ್ಚಿಸಿ ಸಂಪೂರ್ಣ ಸ್ವರಾಜ್ಯಕ್ಕಾಗಿ ಫತ್ವಾ ಹೊರಡಿಸಿದರು. ಬ್ರಿಟಿಷರೊಂದಿಗೆ ಅಸಹಕಾರ ತೋರುವುದು ಮುಸ್ಲಿಮರಿಗೆ ಕಡ್ದಾಯ ಎಂದು ಮತ್ತೊಂದು ಫತ್ವಾ ನೀಡಿದರು. ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಇಳಿವಯಸ್ಸಿನಲ್ಲೂ ದೇಶ ಸಂಚರಿಸಿ ಚಳವಳಿ ಕಟ್ಟಿದರು. ಹಿಂದೂ ಮುಸ್ಲಿಂ ಒಗ್ಗಟ್ಟಿಗಾಗಿ ಜೀವನ ಪರ್ಯಂತ ಶ್ರಮಿಸಿದರು. ಅವರ ಅಪ್ರತಿಮ ಕೆಚ್ಚಿನ ಹೋರಾಟಕ್ಕಾಗಿ ಅವರಿಗೆ ಶೇಖುಲ್ ಹಿಂದ್ ಎಂಬ ಬಿರುದನ್ನು “ಸಹ ಹೋರಾಟಗಾರರು” ನೀಡಿದರು.

 

ಮೌಲಾನಾ ಹುಸೈನ್ ಅಹ್ಮದ್ ಮದನಿ:

ಮೌಲಾನಾ ಮಹಮೂದುಲ್ ಹಸನ್‍ರ ಸಹವರ್ತಿ ಹುಸೈನ್ ಅಹ್ಮದ್ ಮದನಿ ದ್ವಿರಾಷ್ಟ್ರ ಸಿದ್ಧಾಂತದ ಕಟು ವಿರೋಧಿಯಾಗಿದ್ದರು. 1940 ರಲ್ಲಿ ಮುಸ್ಲಿಂ ಲೀಗ್ ಜಿನ್ನಾರ ನೇತೃತ್ವದಲ್ಲಿ ಲಾಹೋರ್ ಠರಾವನ್ನು ಅಂಗೀಕರಿಸಿ ದೇಶ ಒಡೆಯುವ ಷಡ್ಯಂತ್ರ ರೂಪಿಸಿದಾಗ ಮೌಲಾನಾ ಹುಸೈನ್ ಅಹ್ಮದ್ ಮದನಿಯವರು “ದ್ವಿ-ರಾಷ್ಟ್ರ” ಧೋರಣೆಯಿಂದ ವಂಚನೆಗೊಳಗಾಗಬೇಡಿ ಎಂದು ಮುಸ್ಲಿಮರಿಗೆ ಕರೆ ನೀಡಿದರು. ಕುಪಿತರಾದ ಮುಸ್ಲಿಮ್ ಲೀಗ್‍ನ ಕಾರ್ಯಕರ್ತರು ಮದನಿಯವರ ಮೇಲೆ ವಿವಿದೆಡೆಗಳಲ್ಲಿ ದೈಹಿಕ ಹಲ್ಲೆ ನಡೆಸಿದರು. 1938 ರಲ್ಲಿ ಬಹು ಸಂಸ್ಕೃತಿಯ ಸಮಾಜ ಕಟ್ಟುವ “ಮುತ್ತಹಿದ ಕೌಮಿಯತ್ ಜೌರ್ ಇಸ್ಲಾಂ” ಎಂಬ ಗ್ರಂಥ ರಚಿಸಿದರು.

 

ಖಾಝಿ ಸಯ್ಯದ್ ಅಹ್ಮದ್ ಹುಸೈನ್:

ಇವರು ಸಂಗ್ರಾಮದ ಕಣಕ್ಕಿಳಿದ ಆರಂಭದ ಕಾಲಘಟ್ಟದಲ್ಲಿ ಹಿಂಸಾತ್ಮಕ ಹೋರಾಟದ ಪರವಾಗಿದ್ದರು. ಹಿಝ್‍ಬುಲ್ಲಾಹ್ ಸಂಘಟನೆಯ ಸದಸ್ಯರಾಗಿದ್ದ ಖಾಝಿಯವರು ಮುಂದೆ ಹಿಂಸೆಯ ಮಾರ್ಗ ತ್ಯಜಿಸಿ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟದ ಬೆಂಬಲಿಗರಾದರು. ಬಾಂಬೆಯ ಖಿಲಾಫತ್ ಹೌಸ್‍ನಲ್ಲಿ ಮುಹಮ್ಮದ್ ಅಲಿ ಮತ್ತು ಶೌಕತ್ ಅಲಿ ಸಹೋದರರ ಜೊತೆಗೂಡಿ ಚಳವಳಿಯ ಕೆಲಸದಲ್ಲಿ ನಿರತರಾಗಿದ್ದ ಖಾಝಿಯವರನ್ನು ಬಿಹಾರದಲ್ಲಿ ಚಳವಳಿಗೆ ನೇತೃತ್ವ ನೀಡಲು ಗಾಂಧೀಜಿ ಕಳುಹಿಸಿದರು. 1921 ರ ಡಿಸೆಂಬರ್‍ನಲ್ಲಿ ಹೋರಾಟ ನಿರತ ಖಾಝಿಯವರ ಬಂಧನವಾಯಿತು. ಆಗ ಗಾಂಧೀಜಿಯವರು ಯಂಗ್ ಇಂಡಿಯಾದ ತನ್ನ ಸಂಪಾದಕೀಯದಲ್ಲಿ ಹೀಗೆ ಬರೆದಿದ್ದರು. “ಕೃಷ್ಣಪ್ರಸಾದ್, ರಾಜಾರಂಗದತ್ತ, ರಾಜಾಶಂಕರ್, ಖಾಝಿ ಸಯ್ಯದ್ ಅಹ್ಮದ್ ಹುಸೈನ್‍ರ ಬಂಧನದಿಂದ ಬಿಹಾರ ದು:ಖತಪ್ತವಾಗಿದೆ. ಇವರು ಮತ್ತು ಇವರೊಂದಿಗೆ ಬಂಧಿತರಾದ 150 ಹೋರಾಟಗಾರರು ಸಂಗ್ರಾಮದ ಅತ್ಯಂತ ನಿಸ್ವಾರ್ಥ ಕಾರ್ಯಕರ್ತರು. ಯಾವುದೇ ಅಹಂ ಇಲ್ಲದೇ ಇವರೆಲ್ಲಾ ಸಂಗ್ರಾಮದ ಕೆಲಸದಲ್ಲಿ ಮೌನವಾಗಿ ತೊಡಗಿಸಿಕೊಂಡಿದ್ದರು.”

 

ಮೌಲಾನಾ ಅಹ್ಮದ್ ಸಈದ್ ದೆಹ್ಲವಿ:

ಪವಿತ್ರ ಖುರ್‍ಆನ್ ಕಂಠಸ್ಥ, ಇಸ್ಲಾಮಿ ಕರ್ಮಶಾಸ್ತ್ರ ತಜ್ಞರಾಗಿದ್ದ ದೆಹ್ಲವಿಯವರು ಉರ್ದುವಿನಲ್ಲಿ ಉತ್ತಮ ವೈಚಾರಿಕ ಲೇಖಕರಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ದೆಹ್ಲವಿಯವರು 1921 ರಲ್ಲಿ ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸಿ ಹೋರಾಟದ ಕಣಕ್ಕಿಳಿಸಿದ್ದ ಕಾರಣಕ್ಕಾಗಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಜೈಲಿನ ಯಾತನಾಮಯ ಬದುಕು ಸ್ವರಾಜ್ಯದೆಡೆಗಿನ ಅದರ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸಿತು. ಜೈಲಿನಿಂದ ಬಿಡುಗಡೆಗೊಂಡು ಬಂದವರು ತಡಮಾಡದೇ ಮತ್ತೆ ಸಂಗ್ರಾಮದ ಕಣಕ್ಕೆ ದುಮುಕಿದರು. ಬ್ರಿಟಿಷರ ವಿರುದ್ಧ ಬೆಂಕಿಯುಗುಳುವ ಭಾಷಣ ಮಾಡುತ್ತಿದ್ದ ಅವರನ್ನು 1930 ರಲ್ಲಿ ಬ್ರಿಟಿಷ್ ಪ್ರಭುತ್ವವು ಬಂಧಿಸಿ ದೆಹಲಿಯ ಜೈಲಿಗೆ ತಳ್ಳಿತು. ಜೈಲಿನಲ್ಲಿಯೂ ಸಾಮ್ರಾಜ್ಯಶಾಹಿಗಳ ವಿರುದ್ಧ ಪಿತೂರಿ ನಡೆಸಿದ ಕಾರಣವೊಡ್ಡಿ ಅಲ್ಲಿಂದ ಅವರನ್ನು ಗುಜರಾತಿನ ಜೈಲಿಗೆ ಸ್ಥಳಾಂತರಿಸಲಾಯಿತು. ಎರಡು ವರ್ಷಗಳ ಬಳಿಕ ಬಿಡುಗಡೆಗೊಂಡ ದೆಹ್ಲವಿಯವರು ಮತ್ತಷ್ಟು ಹುಮ್ಮಸ್ಸಿನೊಂದಿಗೆ ಸಮರ ಕಣಕ್ಕಿಳಿದರು. 1942 ರಲ್ಲಿ ಮತ್ತೆ ಬಂಧಿತರಾಗಿ ಮೂರು ವರ್ಷಗಳ ಸೆರೆವಾಸ ಅನುಭವಿಸಿದರು. ನೆಹರೂ ಪ್ರಧಾನಿಯಾದಾಗ ದೆಹ್ಲವಿಯವರಿಗೆ 200 ರೂಪಾಯಿ ಮಾಸಿಕ ಪಿಂಚಣಿ ನೀಡಲು ನಿರ್ಧರಿಸಿ ಕಾಗದ ಪತ್ರಗಳನ್ನು ರವಾನಿಸಿದರು. ಕುಪಿತರಾದ ಮೌಲಾನಾ ದೆಹ್ಲವಿಯವರು ಸ್ವಾತಂತ್ರ್ಯಕ್ಕಾಗಿ ಹೊರಡುವುದು ನನ್ನ ಕರ್ತವ್ಯವಾಗಿತ್ತು ಅದನ್ನು ನಿಭಾಯಿಸಿದ್ದೇನಷ್ಟೆ. ಅದಕ್ಕೆ ಬೆಲೆಕಟ್ಟುವಷ್ಟು ದೊಡ್ಡವರು ಯಾರೂ ಇಲ್ಲ ಎಂದು ಮರುತ್ತರ ನೀಡಿ ಕಾಗದ ಪತ್ರಗಳನ್ನು ಹಿಂದಿರುಗಿಸಿದರು.

1912 ರಲ್ಲಿ ಹೈದರಾಬಾದಿನ ನಿಝಾಮನಿಂದ ದೆಹ್ಲವಿಯವರು 200 ರೂಪಾಯಿ ಮಾಸಿಕ ಪಿಂಚಣಿ ಪಡೆಯುತ್ತಿದ್ದರು. ಸ್ವಾತಂತ್ರ್ಯ ಚಳವಳಿಯಿಂದ ವಿಮುಖರಾಗದಿದ್ದರೆ ಪಿಂಚಣಿಯನ್ನು ರದ್ದುಗೊಳಿಸಲಾಗುವುದು ಎಂದು ನಿಝಾಮನು ಬೆದರಿಕೆಯೊಡ್ಡಿದಾಗ ನಿನ್ನ ಜುಜುಬಿ ದುಡ್ಡಿನಿಂದ ನೀನು ನನ್ನನ್ನು ಖರೀದಿಸಲಾರೆ. ಈ ನೆಲದ ವಿಮೋಚನೆಗಿಂತ ಮಿಗಿಲಾದುದು ನನಗೆ ಯಾವುದೂ ಇಲ್ಲ “ಎಂದು ನಿಝಾಮನ ಪಿಂಚಣಿಯನ್ನು ನಿರಾಕರಿಸಿದರು.

 

ಮೌಲಾನಾ ಹಿಫ್‍ಝರ್ರಹ್ಮನ್ ಸಿಯೋಹಾರ್‍ವಿ:

ತನ್ನ 20ನೇ ವಯಸ್ಸಿನಲ್ಲಿ ಹೋರಾಟದ ಕಣಕ್ಕಿಳಿದ ಮೌಲಾನಾರು ಜಮಿಯ್ಯತುಲ್ ಉಲಮಾ-ಯೆ-ಹಿಂದ್‍ನ ಮುಂಚೂಣಿಯ ನಾಯಕರಾಗಿದ್ದರು. 1922 ರ ಚೌರಿಚೌರಾ ಘಟನೆಯ ನಂತರ ಗಾಂಧೀಜಿಯವರು ಯಾರಲ್ಲೂ ಚರ್ಚಿಸದೇ ಅಸಹಕಾರ ಚಳವಳಿಯನ್ನು ಹಠಾತ್ತಾಗಿ ನಿಲ್ಲಿಸಿದಾಗ ಮೌಲಾನಾರು ಗಾಂಧೀಜಿಯವರ ವಿರುದ್ಧವೇ ತಿರುಗಿಬಿದ್ದರು. ಜಮಿಯ್ಯತುಲ್ ಉಲಮಾ ಯೆ-ಹಿಂದ್ ಸಂಪೂರ್ಣವಾಗಿ ಚಳುವಳಿಯಲ್ಲಿ ಭಾಗವಹಿಸಲು ಮುಖ್ಯ ಕಾರಣಕರ್ತರಲ್ಲಿ ಮೌಲಾನಾ ಒಬ್ಬರಾಗಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಮೌಲಾನಾ ಎರಡು ವರ್ಷಗಳ ಕಠಿಣ ಶಿಕ್ಷೆಯನ್ನು ಅನುಭವಿಸಿದ್ದರು 1944 ರಲ್ಲಿ ದೇಶ ವಿಭಜನೆಯ ಸವಾಲು ಬಲವಾದಾಗ “ದೇಶ ವಿಭಜನೆ ದೇಶಕ್ಕೂ ಮತ್ತು ಮುಸ್ಲಿಂ ಸಮಾಜಕ್ಕೂ ಮಾರಕ” ಎಂಬ ಜಮಿಯ್ಯತುಲ್ ಉಲಮಾದ ಫತ್ವಾಕ್ಕೆ ಮೌಲಾನಾ ಸಿಯೋಹಾರ್‍ವಿ ಪ್ರಮುಖ ಕಾರಣಕರ್ತರಾಗಿದ್ದರು.

 

ವೆಲಿಯಂಗೋಡು ಉಮರ್‍ಖಾಝಿ:

ಕೇರಳದ ಪ್ರಸಿದ್ದ ಉಲೆಮಾನಾಯಕ ಉಮರ್ ಖಾಝಿಯವರು ಶುಕ್ರವಾರ ಜುಮಾನಮಾಝಿನ ಬಳಿಕ ಬ್ರಿಟೀಷ್ ಪ್ರಭುತ್ವದ ವಿರುದ್ದ ಉರಿಭಾಷಣ ಮಾಡುತ್ತಿದ್ದರು. ಬ್ರಿಟೀಷರ ಸಾಮಾನು ಸರಂಜಾಮುಗಳನ್ನು ಖರೀದಿಸುವುದು ಮುಸ್ಲಿಮರಿಗೆ ಹರಾಂ (ನಿಷಿದ್ಧ) ಎಂದು ಫತ್ವಾ ಜಾರಿ ಮಾಡಿ ಕೇರಳದಲ್ಲಿ ಅಸಹಕಾರ ಚಳವಳಿಯ ಬೆಂಕಿಗೆ ತುಪ್ಪ ಸುರಿದರು. ಮತ್ತೆ “ಬ್ರಿಟೀಷರಿಗೆ ತೆರಿಗೆ ನೀಡುವುದು ಹರಾಂ” ಎಂದು ಫತ್ವಾ ಜಾರಿಗೊಳಿಸಿ ಕರ ನಿರಾಕರಣೆ ಚಳವಳಿ ಆರಂಭಿಸಿ ಬ್ರಿಟೀಷ್ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾದರು. ಮತ್ತೆ ಮುಂದುವರಿದು ಕ್ವಿಟ್ ಇಂಡಿಯಾ ಚಳವಳಿಯ ಸಮರ ಘೋಷ ಮೊಳಗಿಸುತ್ತಾ ಸಾರ್ವಜನಿಕರಿಗೆ ಪ್ರಚೋದನೆ ನೀಡಿದರು ಇದರಿಂದ ಬಂಧನಕ್ಕೊಳಗಾದ ಖಾಝಿಯವರು ಬ್ರಿಟೀಷ್ ಅಧಿಕಾರಿಯ ಮುಖಕ್ಕೆ ಕ್ಯಾಕರಿಸಿ ಉಗಿದು ದೊಡ್ಡ ವಿವಾದ ಸೃಷ್ಟಿಸಿದರು. ಉಮರ್ ಖಾಝಿಯವರನ್ನು ಬ್ರಿಟೀಷ್ ಪ್ರಭುತ್ವವು ಬಂಧಿಸಿದರೂ, ಆ ಬಂಧನಕ್ಕೆ ಬಾರೀ ಬೆಲೆ ತೆರೆಬೇಕಾಗಿ ಬರಬಹುದು, ಜನ ಸಾಮೂಹಿಕವಾಗಿ ಹಿಂಸಾತ್ಮಕ ದಂಗೆಯೇಳಬಹುದು ಎಂಬ ಭಯದಿಂದ ಖಾಝಿಯವರಿಗೆ ಆರೋಪ ನಿರಾಕರಿಸಿದರೆ ಬಂಧಮುಕ್ತಿ ನೀಡಲಾಗುವುದು ಎಂಬ ಆಮಿಷವೊಡ್ಡಿದರು. ಇದರಿಂದ ಮತ್ತಷ್ಟು ಉತ್ತೇಜಿತರಾದ ಖಾಝಿಯವರು “ನಮ್ಮನ್ನೆದುರಿಸುವ ಹಕ್ಕು ನಿಮಗಿರುವುದಾದರೆ ನಿಮ್ಮ ವಿರುದ್ಧ ಹೋರಡುವುದು ನಮ್ಮ ಕರ್ತವ್ಯ” ಎಂದು ಬ್ರಿಟೀಷ್ ಅಧಿಕಾರಿಗೆ ಕ್ಯಾಕರಿಸಿ ಉಗಿಳಿ ಹಲ್ಲೆ ಮಾಡಿದ ಆರೋಪವನ್ನು ಅಭಿಮಾನದಿಂದ ಸಮರ್ಥಿಸಿ ಜೈಲು ಸೇರಿದರು. ದೇಶವಿಮೋಚಣೆಯ ಹೋರಾಟ ಜಿಹಾದ್ ಎಂದು ಖಾಝಿಯವರು ನೀಡಿದ ಫತ್ವಾವನ್ನಾಧರಿಸಿ ಸಹಸ್ರಾರು ಮುಸ್ಲಿಮರು ವೀರಾವೇಷದಿಂದ ಸಂಗ್ರಾಮದ ಕಣಕ್ಕೆ ದುಮುಕಿದರು. ಕೇರಳದಲ್ಲಿ ಉಮರ್ ಖಾಝಿಯವರಲ್ಲದೇ ಅಲೀ ಮುಸ್ಲಿಯಾರ್, ಸಯ್ಯದ್ ಮಂಬುರಂ ತಂಙಳ್‍ರಂತಹ ನೂರಾರು ಉಲೆಮಾಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯರಾಗಿದ್ದರು.

1921 ರಲ್ಲಿ ಕೇರಳದ ಮುಸ್ಲಿಮರು ಬ್ರಿಟೀಷರ ವಿರುದ್ಧ ಬಂಡೆದ್ದ ಮಲಬಾರ್ ದಂಗೆಯಲ್ಲಿ ಹಲವಾರು ಉಲೆಮಾಗಳು, ಮುಸ್ಲಿಂ ಸ್ವಾತಂತ್ರ್ಯವೀರರು ಹುತಾತ್ಮರಾದರು. ಈ ದಂಗೆಯನ್ನು ನಿಗ್ರಹಿಸಲಾಗದ ಬ್ರಿಟೀಷರು ಮುಖಭಂಗಕ್ಕೀಡಾಗಿ ಅದನ್ನು “ಮಾಪ್ಲಾ ದಂಗೆ” ಎಂದು ಸಂಕುಚಿತ ಗೊಳಿಸುವ ಪ್ರಯತ್ನಮಾಡಿದ್ದರು. 1857 ಮೊದಲ ಏಕೀಕೃತ ಸ್ವಾತಂತ್ರ್ಯ ಸಂಗ್ರಾಮವನ್ನು ಹೇಗೆ ಸಿಪಾಯಿದಂಗೆ ಎಂದು ಸಂಕುಚಿತಗೊಳಿಸುವ ಪ್ರಯತ್ನನಡೆಸಿದ್ದರೋ ಅಂತಹದ್ದೇ ವಿಫಲ ಯತ್ನವನ್ನು ಮಲಬಾರ್ ದಂಗೆಯ ವಿಚಾರದಲ್ಲೂ ನಡೆಸಿದ್ದರು. ಖ್ಯಾತ ಚರಿತ್ರೆಕಾರ ಮಾಧವ ಮೆನನ್ ಮಲಬಾರ್ ದಂಗೆಯು ಯಾವುದೇ ವಿಧದಲ್ಲೂ 1857ರ ಸೀಪಾಯಿದಂಗೆಗಿಂತ ಕಡಿಮೆಯದ್ದಲ್ಲ ಎಂದು ಬಣ್ಣಿಸಿದ್ದಾರೆ.

1857 ರ ಮೊದಲ ಏಕೀಕೃತ ಸ್ವಾತಂತ್ರ್ಯ ಸಂಗ್ರಾಮದಲ್ಲಿನ ಮುಸ್ಲಿಂ ಭೂಮಿಕೆಗಳನ್ನು ಮಹಾರಾಷ್ಟ್ರದ ಇತಿಹಾಸಕಾರ ಸೇತು ಮಾಧವ ಪಗಡಿಯವರು “ಸಯ್ಯದ್ ಅಹ್ಮದ್ ಬರೇಲ್ವಿಯವರ ಇಸ್ಲಾಂ ಪುನರುಜ್ಜೀವನ ಚಳವಳಿಯ ಮುಂದಿನ ಹೆಜ್ಜೆ ಬ್ರಿಟೀಷರನ್ನು ವಿರೋಧಿಸುವುದಾಗಿತ್ತು. 1857ರ ಕ್ರಾಂತಿಗೆ ಮೂಲ ಕಾರಣಕರ್ತರು ಮುಸ್ಲಿಮರೇ ಹೊರತು ಹಿಂದೂಗಳಲ್ಲ. ಅವರ ಪಾತ್ರವೇನಿದ್ದರೂ ಎರಡನೇ ಸ್ಥಾನದಲ್ಲಿದೆ. ಝಾನ್ಸಿರಾಣಿ ಲಕ್ಷ್ಮೀಬಾಯಿ, ತಾಂತ್ಯಾಟೋಪಿ, ನಾನಾ ಸಾಹೇಬ್ ಮೊದಲಾದವರ ಹೋರಾಟಕ್ಕೆ ಮೂಲ ಕಾರಣಕರ್ತರು ಮುಸಲ್ಮಾನರು (ಆದ್ಯರಾಮಾಚಾರ್ಯರು ಅನುವಾದಿಸಿದ “ಭಾರತೀಯ ಮುಸ್ಲಿಮರು: ಶೋಧ ಮತ್ತು ಭೋಧ” ಪುಟ:105)

1857 ರ ಕ್ರಾಂತಿಗೆ ಮುಸ್ಲಿಂ ಉಲೆಮಾಗಳು ನೀಡಿದ ಕೊಡುಗೆ ಮತ್ತು ಪ್ರೇರಣೆ ಅಗಾಧವಾದುದು ಅವರ ಜಿಹಾದ್ ಫತ್ವಾವು ಉತ್ತರದಿಂದ ದಕ್ಷಿಣದವರೆಗೆ ಮುಸ್ಲಿಮರನ್ನು ಚಳವಳಿಗೆ ದುಮುಕುವಂತೆ ಮಾಡಿತು. ಬೌಲೆಮಾಗಳು ಕೇವಲ ಧಾರ್ಮಿಕ ವಿದ್ವಾಂಸರು ಮಾತ್ರವಾಗಿರದೇ ದೀರ ಸೇನಾನಿಗಳೂ ಆಗಿದ್ದರು ಎಂದು The Genesis of fundamentalism in British India ಎಂಬ ಕೃತಿಯಲ್ಲಿದಾಖಲಾಗಿದೆ.

ಮುಸ್ಲಿಂ ಉಲೆಮಾಗಳು ಸ್ವತಃ ಸ್ವಾಂತ್ರ ಸಂಗ್ರಾಮಕ್ಕಾಗಿ ಬೆವರು ಹರಿಸಿ ರಕ್ತ ಸುರಿಸಿ, ಪ್ರಾಣತ್ಯಾಗ ಮಾಡಿದ್ದಲ್ಲದೇ ದೇಶದಾದ್ಯಂತ ಅಸಂಖ್ಯಾತ ಮುಸ್ಲಿಂ ಸ್ವಾತಂತ್ರ್ಯ ಸೇನಾನಿಗಳನ್ನು ಸೃಷ್ಟಿಸಿದ್ದರು. ಮದ್ರಸಾಗಳು ಸ್ವಾತಂತ್ರ್ಯ ಸೇನಾನಿಗಳನ್ನು ಸೃಷ್ಟಿಸುವ ಫ್ಯಾಕ್ಟರಿಗಳಾಗಿದ್ದವು ಎಂಬ ಸತ್ಯವು ಇತಿಹಾಸ ಗರ್ಭದಲ್ಲಿ ಧಾರಾಳವಾಗಿ ಹೂತು ಹೋಗಿವೆ. ಇಂತಹ  Marginalized history ಯನ್ನು ಮತ್ತೆ ಮುಖ್ಯವಾಹಿಸಿಗೆ ತರುವ ಕೆಲಸ ತ್ವರಿತಗತಿಯಲ್ಲಿ ಆಗಬೇಕಾಗಿದೆ.

 

ಆಕರ:

  1. Understanding the Muslim minds (ರಾಜ್‍ಮೋಹನ್ ಗಾಂಧಿ)
  2. ಭಾರತದ ಸ್ವಾತಂತ್ರ್ಯಚಳವಳಿಯಲ್ಲಿ ಮುಸ್ಲಿಮರು: ಶಾತಿ ಮೈರಾಯ್
  3. ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಮುಸ್ಲಿಮರು (ಆಸಿಫ್ ಅಲಿ ಇಂಜಿನಿಯರ್)
  4. ಸ್ವಾತಂತ್ರ್ಯ ಕಥಾನಕದ ಮುಸ್ಲಿಂ ಪಾತ್ರಗಳು (ಸಿದ್ದೀಖ್.ಕೆ.ಎಂ.ಮೋಂಟುಗೋಳಿ)

 

LEAVE A REPLY

Please enter your comment!
Please enter your name here