“ಭಾರತವನ್ನು ವಿಭಜಿಸಿ ಆಳುವ ನಿಮ್ಮ ಪಿತೂರಿ ಕೆಲಸ ಮಾಡುವುದಿಲ್ಲ ನಾವು ಹಿಂದೂಸ್ಥಾನವನ್ನು ನಮ್ಮದಾಗಿಸುತ್ತೆವೆ”-ಅಶ್ಫಾಖುಲ್ಲಾ ಖಾನ್

ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ

ಪೌರತ್ವ ಮಸೂದೆಯೂ ಸಂಸತ್ ಮತ್ತು ರಾಜ್ಯ ಸಭೆಯಲ್ಲಿ ಅಂಗೀಕಾರವಾದ ಅಂದಿನಿಂದ ಭಾರತದ ವಿವಿಧ ಭಾಗದಲ್ಲಿ ಪ್ರತಿಭಟನೆಗಳು ಪರ ವಿರುದ್ಧ ವಾದಗಳು ನಡೆಯುತ್ತಿದೆ. ಮುಸ್ಲಿಮರು ಭಾರತೀಯರು ಅಲ್ಲ ಎಂಬ ತೀರ್ಮಾನವನ್ನು ಹಿಂದುತ್ವವಾದಿಗಳಂತೆ ಕೆಲವು ಸೊ ಕಾಲ್ಡ್ ಸಮಾಜವಾದಿ ಶಕ್ತಿಗಳು ಒಪ್ಪಿದಂತಿದೆ. ಭಾರತಕ್ಕೆ  ಮುಸ್ಲಿಮರ ಕೊಡುಗೆ ಏನೂ ಇಲ್ಲ ಕೇವಲ ದರೋಡೆ ಲೂಟಿ ಹತ್ಯಾಕಾಂಡಗಳು ಮಾತ್ರ ಎಂದು ಬಿಂಬಿಸುವ ಸಿನಿಮಾಗಳೂ ಸಹ ಒಂದರ ಬೆನ್ನ ಹಿಂದೆ ಒಂದರಂತೆ ಬಿಡುಗಡೆಯಾಗುತ್ತಲಿದೆ. ಮುಸ್ಲಿಮರು ತಾನು ಹುಟ್ಟಿ ಬೆಳೆದ ದೇಶದಲ್ಲಿ ಬದುಕಬೇಕಾದರೆ ದಾಖಲೆ ತೋರಿಸಬೇಕು ಎನ್ನುವುದು ಇಲ್ಲಿ ಹುಟ್ಟಿದ ಪ್ರತಿಯೊಬ್ಬ ಭಾರತಿಯನಿಗೂ ನುಂಗಲಾರದ ನೋವು. ಭಾರತವನ್ನು ಜಾತಿ ಧರ್ಮ ಆಧಾರದಲ್ಲಿ  ವಿಭಜಿಸುವ ಮನು ಸಿದ್ದಾಂತ ವಾದಿಗಳ ಗೂಡ ತಂತ್ರ ಸಂವಿಧಾನಕ್ಕೆ ವಿರುದ್ದವಾದದ್ದು ನಾವು ವಿರೋಧಿಸಲೇ ಬೇಕು.

ಮುಸ್ಲಿಮರು ದಾಖಲೆ ತೋರಿಸಬೇಕು ಎಂದಾದರೆ ಯಾವ ದಾಖಲೆಗಳನ್ನು ತೋರಿಸಲಿ ?, ಇಲ್ಲಿ ಹುಟ್ಟಿ ಬೆಳೆದದ್ದೇ? ಅಥವಾ ಈ ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ದಾಖಲೆಯೇ? ಈ ನಾಡಿಗಾಗಿ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಆರ್ಥಿಕವಾಗಿ ಸೇವೆ ಮಾಡಿದ ದಾಖಲೆಯೇ ? 

ದಾಖಲೆಗಳು ಬೇಕು ಎನ್ನುವವರಿಗೆ ಈ ದೇಶಕ್ಕಾಗಿ ಪ್ರಾಣವನ್ನು ಪಣಕ್ಕಿಟ್ಟು ಬ್ರಿಟೀಷ್ ವಸಾಹತು ಶಾಹಿಯ ವಿರುದ್ಧ ಹೋರಾಡಿ ತನ್ನ 27 ನೇ ವಯಸ್ಸಿನಲ್ಲಿ ಹುತಾತ್ಮರಾದ ಶಾಹೀದ್ ಅಶ್ಫಾಕುಲ್ಲಾ ಖಾನ್ ರವರ ದಾಖಲೆ ಸಾಕೆ?.

ಭಾರತ ಯಾವುದೇ ಧರ್ಮದವನ ಸೂತ್ತಲ್ಲ ಅದು ಭಾರತೀಯರದ್ದು. ಹಿಂದು ಮುಸ್ಲಿಂ ಎಂಬ ಧರ್ಮ ಕೇವಲ ನಂಬಿಕೆಯೇ ಹೊರತು ಅದು ಮಾನವಿಯತೆಯಿಲ್ಲದ ಸಿದ್ದಂತವಲ್ಲ ಎಂಬುವುದನ್ನು ನಮಗೆ ಸಾಬೀತು ಪಡಿಸಿದವರು ಸ್ವಾತಂತ್ರ್ಯ ಹೋರಾಟಗಾರರಾದ ಅಶ್ಫಾಕುಲ್ಲಾ ಖಾನ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್ಲಾ.

ಹಿಂದು ಮತ್ತು ಮುಸ್ಲಿಮ್ ಗೆಳೆಯರು ತಮ್ಮ ಧಾರ್ಮಿಕ ವಿಧಿಗಳನ್ನು ಪಾಲಿಸುತ್ತಲೇ ದೇಶದ ರಕ್ಷಣೆಗಾಗಿ ನೇಣುಗಂಬದ ಉರುಳನ್ನು ಹಾರವಾಗಿ ಸ್ವೀಕರಿಸಿದ ಇತಿಹಾಸ ಹೆಚ್ಚಿನವರಿಗೆ ತಿಳಿದಿಲ್ಲ ಎಂಬುವುದು ಖೇದಕರ.

ಶಾಹೀದ್ ಅಶ್ಫಾಕುಲ್ಲಾ ಖಾನ್ ರವರು ಬಡ ಕುಟುಂಬದಿಂದ ಬಂದವರಲ್ಲ ಉನ್ನತ ಹುದ್ದೆಯಲ್ಲಿದ್ದ ಪಠಾಣ್ ಕುಟುಂಬದವರು. ಆದರೆ, ಸ್ವಾತಂತ್ರ್ಯ ಹೋರಾಟ ರಂಗದಲ್ಲಿ ಧುಮುಕಿ ಎಲ್ಲವನ್ನೂ ಸಹಿಸಿದರು. ಹಲವು ದಿನಗಳ ವರೆಗೆ ದಾರಿದ್ಯ ಅನುಭವಿಸಿದರು. ಅವರ ಇತಿಹಾಸವನ್ನು ಅರಿತು ಸ್ಮರಿಸದಿದ್ದರೆ ನಮ್ಮ ದೇಶ ಪ್ರೇಮಕ್ಕೆ ಬೆಲೆಯಿಲ್ಲ. ಡಿಸೆಂಬರ್ 19 ಅವರ ಹುತಾತ್ಮತೆಯ ದಿನ.

ಶಫಿಕುಲ್ಲಾ ಖಾನ್ ಮತ್ತು ಮಜರುನ್ನಿಸ ದಂಪತಿಯ ಕಿರಿಯ ಮಗನಾಗಿ 1900 ಅಕ್ಟೊಬರ್ 22 ರಂದು ಈಗಿನ ಉತ್ತರ ಪ್ರದೇಶದ ಷಹಜಹಾನ್ ಪುರದಲ್ಲಿ ಜನಿಸಿದರು. ಪದವಿ ಶಿಕ್ಷಣ ಪಡೆದ ಇವರು ಒಬ್ಬ ಕವಿ ಮತ್ತು ಚಿಂತಕ. ಉರ್ದು ಮತ್ತು ಹಿಂದಿ ಭಾಷೆಯಲ್ಲಿ ಅತ್ಯಂತ ಉದ್ಬೋದಕ ದೇಶ ಭಕ್ತಿ ಗೀತೆಗಳನ್ನು ರಚಿಸಿ ಯುವಕರಿಗೆ ಸ್ಫೂರ್ತಿ ನೀಡುತ್ತಿದ್ದರು ‘ವರಾಸಿ ಮತ್ತು ಹಝರತ್’ ಎಂಬ ಅಂಕಿತ ನಾಮದಿಂದ ಅವರು ಕವನಗಳನ್ನು  ಬರೆಯುತ್ತಿದ್ದರು ಅಲ್ಲದೆ ಅವರೊಬ್ಬರು ಧಾರ್ಮಿಕ ವ್ಯಕ್ತಿಯಾಗಿದ್ದರು. ನಮಾಜ್, ಉಪವಾಸ ಕುರ್ಆನ್ ಪಾರಾಯಣ ಅವರ ಆಧ್ಯಾತ್ಮಿಕ ಶಕ್ತಿಯಾಗಿತ್ತು.

1920ರಲ್ಲಿ ಗಾಂಧೀಜಿ ದೇಶಾದ್ಯಂತ ಅಸಹಕಾರ ಚಳುವಳಿ ಆರಂಭಿಸಿದಾಗ ಹೆಚ್ಚಿನ ಯುವಕರು ಬ್ರಿಟೀಷರ ವಿರುದ್ಧ ದಂಗೆ ಎದ್ದರು.1922 ರ ಚೌರಿ ಚೌರಾ ಘಟನೆಯ ಬಳಿಕ ಮಹಾತ್ಮಾ ಗಾಂಧೀಜಿಯವರು ಅಸಹಕಾರ ಚಳುವಳಿ ಹಿಂಪಡೆದಾಗ ಶಹೀದ್ ಅಶ್ಫಾಕುಲ್ಲಾ ಖಾನ್  ನಂತೆ ಹಲವರು ಅಸಮಾಧಾನಕ್ಕೆ ಒಳಗಾಗಿದ್ದರು.

ನಂತರ ಅವರು “ಕಾಕೊರಿ” ಪ್ರಕರಣದ ಮೂಲಕ  ಹೋರಾಟಗಾರರಾಗಿ ಪ್ರಸಿದ್ದರಾಗುತ್ತಾರೆ.

ರಾಮ್ ಪ್ರಸಾದ್ ಬಿಸ್ಮಿಲ್ ರ ನೇತೃತ್ವದಲ್ಲಿ ಕೆಲವು ಗೆಳೆಯರು ಸೇರಿ Hindustan Socialist Republican Association ಎಂಬ ಕ್ರಾಂತಿ ಸಮಿತಿಯನ್ನು ಸ್ಥಾಪಿಸಿದರು ಸ್ವಾತಂತ್ರ್ಯದ ಉದ್ದೇಶವಿಟ್ಟುಕೊಂಡಿದ್ದ ಈ ಸಮಿತಿಗೆ ಶಾಹೀದ್ ಅಶ್ಫಾಕುಲ್ಲಾ ಖಾನ್ ರವರು ಆಕರ್ಷಿತರಾಗಿ ಸೇರಿಕೊಂಡರು. ಕಾರಣ ಅವರು  ರಾಮ್ ಪ್ರಸಾದ್ ಬಿಸ್ಮಿಲ್ಲಾರ ಕವನಗಳ ಮೂಲಕ ಪ್ರೇರಿತರಾಗಿದ್ದರು. ಅವರಿಬ್ಬರೂ ಪರಸ್ಪರ ಆತ್ಮೀಯ ಮಿತ್ರರೂ ಕೂಡಾ   ಅವರನ್ನು “ನನ್ನ ರಾಮ” ಎಂದು ಕರೆಯುತ್ತಿದ್ದರು ಅವರ ಪ್ರಸಿದ್ದ ಕವನ  

“ಸರ್ಫರೋಷಿ ಕಿ ತಮ್ಮನ್ನಾ ಅಬ್ ಹಮಾರೇ ದಿಲ್ ಮೇ ಹೇ. ದೇಖ್ ನಾ ಹೇ ಜೋರ್ ಕಿತನಾ ಬಾಜೂಏ ಕಾತಿಲ್ ಮೆ ಹೈ” (ಸಾಯುವ ಹುಚ್ಚು ಹೃದಯವನ್ನು ಆವರಿಸಿಕೊಂಡಿದೆ, ಕೊಲ್ಲುವವನ ರಟ್ಟೆಯಲ್ಲಿನ ತಾಕತ್ತನ್ನು ನಾವೀಗ ಪರೀಕ್ಷಿಸಬೇಕಿದೆ) ಸ್ವಾತಂತ್ರ್ಯ ಹೋರಾಟಕ್ಕೆ ಹೆಚ್ಚು ಸ್ಫೂರ್ತಿ ದಾಯಕವಾಗಿದ್ದವು 

ಹೋರಾಟ ರಂಗದಲ್ಲಿ ಮದ್ದು ಗುಂಡುಗಳ ಅವಶ್ಯಕತೆ ಇದ್ದು ಅದನ್ನು ಕೊಂಡು ಕೊಳ್ಳಲು ಸಾಕಷ್ಟು ಹಣ ಸಂಸ್ಥೆಯಲ್ಲಿ ಇರಲಿಲ್ಲ. ಅದಕ್ಕಾಗಿ ಅವರು ಬ್ರಿಟೀಷರ ತಿಜೋರಿಯನ್ನು ಲೂಟಿ ಮಾಡಲು ತಂತ್ರ ಹೂಡಿದರು. ಷಹಜಹಾನ್ ಪುರದಿಂದ ಲಕ್ನೋ ವರೆಗೆ ಹೊರಡುತ್ತಿದ್ದ ರೈಲಿನಲ್ಲಿ ಬ್ರಿಟೀಷರು ಪ್ರತಿನಿತ್ಯ ತಾವು ವಸೂಲಿ ಮಾಡುತಿದ್ದ ಸುಂಕವನ್ನು ಸಾಗಿಸುತ್ತಿದ್ದರು. ಲಕ್ನೋದ ಹತ್ತಿರ ಕಾಕೋರಿ ಎಂಬ ಪ್ರದೇಶದಲ್ಲಿ, ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಖುಲ್ಲಾ ಖಾನ್, ಸಚೀಂದ್ರನಾಥ್  ಭಕ್ಷಿ, ರಾಜೇಂದ್ರ ಲಹರಿ, ಥಾಕೋರ್ ರೋಷನ್ ಸಿಂಹ, ಮುಖಂದಿಲಾಲ್, ಮನ್ಮತನಾಥ್ ಗುಪ್ತ, ಮತ್ತು ಆಝಾದ್ ಒಳಗೊಂಡ ತಂಡ 1925 ಆಗಸ್ಟ್ 9 ರಂದು ‘ಏಯ್ ದೌನ್’ ಎಂಬ ರೈಲನ್ನು ಲೂಟಿ ಮಾಡಿದರು. ಈ ಪ್ರಕರಣದಲ್ಲಿ ಎಲ್ಲರೂ ಬಂದಿತರಾಗಿದ್ದರೂ ಅಶ್ಫಾಕುಲ್ಲಾ ಖಾನ್ ತಲೆ ಮೆರೆಸಿಕೊಂಡಿದ್ದರು. ಬಿಹಾರದಿಂದ ಬನಾರಸ್ ಗೆ ತೆರಳಿ 10 ತಿಂಗಳ ಕಾಲ ಇಂಜಿನಿಯರಿಂಗ್ ಕೆಲಸ ಮಾಡಿದ್ದರು. ವಿದೇಶ ಪ್ರಯಾಣ ಮಾಡಬೇಕೆಂದು ಬಯಸಿ ದೆಹಲಿ ಯಾತ್ರೆ ಕೈಗೊಂಡರು. ಈ ನಡುವೆ ತನ್ನ ಸಹಪಾಠಿ ಮಿತ್ರ ಪಠಾಣ್ ಗೆಳೆಯನೊಬ್ಬ ಬ್ರಿಟಿಷ್ ಪೊಲೀಸರಿಗೆ ಮಾಹಿತಿ ಕೊಟ್ಟನು. ಅಶ್ಫಾಖುಲ್ಲಾ ಖಾನ್ ನನ್ನು ಬಂಧಿಸಿ ಫಾಯ್ ಝಾಬಾದ್ ಜೈಲಿನಲ್ಲಿ ಇಡಲಾಯಿತು. 

” ದೇಶ ಭಕ್ತಿ ತನ್ನ ಜೊತೆಗೆ ಎಲ್ಲಾ ರೀತಿಯಲ್ಲಿ ವಿಪತ್ತು ಮತ್ತು ದುಃಖಗಳನ್ನು ಇಟ್ಟುಕೊಂಡಿರುತ್ತದೆ. ಆದರೆ, ಆ ದೇಶಭಕ್ತಿಯ ಮಾರ್ಗವನ್ನು ಅನುಸರಿಸುವ ಕ್ರಾಂತಿಕಾರಿ ಮಾತ್ರ ಅವೆಲ್ಲವನ್ನು ಸ್ವೀಕರಿಸಲು ಸಾಧ್ಯ”

“ನನ್ನ ದೇಶ ಬಿಡುಗಡೆ ಯಾಗುವ ವರೆಗೂ ಯುವಕರೆಲ್ಲರೂ ದೇಶಕ್ಕಾಗಿ ಜೀವ ತ್ಯಾಗ ಮಾಡಲು ಸಿದ್ದರಾಗಬೆಕು”

1927 ಡಿಸೆಂಬರ್ 19 ರಂದು ಅವರನ್ನು ಫಾಯ್ ಝಾಬಾದ್ ಜೈಲಿನಲ್ಲಿ ಗಲ್ಲಿಗೆರಿಸಲಾಯಿತು. ಇದೆ ದಿನ ರಾಮ್ ಪ್ರಸಾದ್ ಬಿಸ್ಮಿಲ್ಲಾ ರನ್ನು ಗೋರಕ್ ಪುರದಲ್ಲಿ ಗಲ್ಲಿಗೇರಿಸಲಾಯಿತು. ಇಬ್ಬರು ಗೆಳೆಯರು ತ್ಯಾಗ ಬಲಿದಾನದಲ್ಲಿ ಒಂದಾದರು. ಅಶ್ಫಾಖುಲ್ಲಾ ಖಾನ್ ಕುರ್ಆನ್ ಪತಿಸುತ್ತಲೇ ಅವರು ನೇಣಿಗೆ ಶರಣಾಗಿ ಹುತಾತ್ಮರಾದರು. ಅವರು ಬ್ರಿಟಿಷರಲ್ಲಿ ಹೀಗೆಂದರು ” ಭಾರತವನ್ನು ವಿಭಜಿಸಿ ಆಳುವ ನಿಮ್ಮ ಪಿತೂರಿ ಕೆಲಸ ಮಾಡುವುದಿಲ್ಲ ನಾವು ಹಿಂದೂಸ್ಥಾನವನ್ನು ನಮ್ಮದಾಗಿಸುತ್ತೆವೆ”

ರಂಗದೇ ಬಸಂತಿ ಸಿನಿಮಾದಲ್ಲಿ ಕುನಾಲ್ ಕಪೂರ್ ಅಶ್ಫಾಖುಲ್ಲಾ ಖಾನ್ ಪಾತ್ರದಲ್ಲಿ ಅಭಿನಯಿಸಿದ್ದರು.

LEAVE A REPLY

Please enter your comment!
Please enter your name here