– ಯೋಗೇಶ್ ಮಾಸ್ಟರ್

ನಾಯಿಗಿರುವ ನಿಯತ್ತು ಮನುಷ್ಯರಿಗಿರಲ್ಲ ಅಂತನ್ನೋದು ತೀರಾ ಉತ್ಪ್ರೇಕ್ಷೆ ಆಯ್ತು ಬಿಡಿ. ಮನುಷ್ಯನ ವಿಶ್ವಾಸಾರ್ಹ ಪ್ರಾಣಿ ನಾಯಿ ಅಂತನ್ನೋದು ಅದು ತನ್ನ ಅಧೀನವಾಗಿರತ್ತೆ ಅಂತ ಮಾತ್ರಾನೇ! ತನಗೆ ಅಧೀನವಾಗಿ, ಅನುಕೂಲಕರವಾಗಿ ಯಾರು ಅಥವಾ ಯಾವ ಪ್ರಾಣಿ ಇರತ್ತೋ ಅದಕ್ಕೆ ವಿಶ್ವಾಸಾರ್ಹ ಅಂತ ಅನ್ನೋದು ಮನುಷ್ಯನ ಸಹಜವಾದ ಧೋರಣೆ. ಇನ್ನೂ ಮುಂದುವರಿದು ಬೇರೆ ಯಾರಿಗಾದರೂ ಜೋರು ಮಾಡಲಿ, ತನಗೆ ಮಾಡದೇ ಇರೋದು ನಿಯತ್ತಿನ ಇನ್ನೂ ಉತ್ತಮ ಭಾಗ. ಹಾಗೆಯೇ ಮುಂದುವರಿದು, ಯಾರೋ ಅಥವಾ ಯಾವುದೋ ಅಧೀನದಲ್ಲಿರುವ ಮನುಷ್ಯ ಅಥವಾ ಪ್ರಾಣಿ ಸ್ವತಃ ತನಗೇ ಹಾನಿಯಾದರೂ ಸರಿಯೇ ತನ್ನ ಯಜಮಾನ ಅಂತ ಕರೆಯಿಸಿಕೊಳ್ಳುವವನಿಗೆ ರಕ್ಷಣೆ ಕೊಟ್ಟರೆ ನಿಯತ್ತಿನ ಅತ್ಯುತ್ತಮ ನಿದರ್ಶನ. ನಾಯಿ ಮಾತ್ರವಲ್ಲ, ಯಾವುದೇ ಪ್ರಾಣಿಯೂ ಕೂಡಾ ತನ್ನ ಸಹಜ ಪ್ರವೃತ್ತಿಯ ಅಥವಾ ಇನ್ಸ್ಟಿಂಕ್ಟ್ ಆಧಾರವಾಗಿ ನಡೆದುಕೊಳ್ಳುತ್ತದೆ. ಹಾಗೂ ಯಾವುದೇ ಪ್ರಾಣಿ ಅಥವಾ ಮನುಷ್ಯ ಮತ್ತೊಂದು ಜೀವಿಯನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅದು ತನಗೆ ಅನುಕೂಲಕರವಾಗಿದ್ದರೆ ಮಾತ್ರ. ಪರಿಚಯವು ಆಕ್ರಮಣಕಾರಿಯಾಗಿರದೇ, ತನ್ನ ಅಗತ್ಯಗಳನ್ನು ಪೂರೈಸಿದರೆ ಅಥವಾ ಬೇರೆ ಯಾವುದೇ ರೀತಿಯಲ್ಲಿ ಖುಷಿ ಕೊಟ್ಟರೆ ಮತ್ತೊಮ್ಮೆ ಅದನ್ನೇ ಬಯಸಿ ಸಂಪರ್ಕವನ್ನು ಬಯಸುತ್ತದೆ. ತಾನು ಬಯಸಿದಂತೆ ಪ್ರತಿ ಸಂಪರ್ಕದಲ್ಲಿ ತನ್ನ ಬಯಕೆ ಈಡೇರುತ್ತಿದ್ದರೆ ಆ ಜೀವಿಯೊಡನೆ ಬಳಕೆ ಪ್ರಾರಂಭವಾಗುತ್ತದೆ. ಅದೇ ಅನ್ಯೋನ್ಯತೆ ಅಥವಾ ಫೆಮಿಲಿಯಾರಿಟಿ. ಈ ಬಳಕೆ ಅಥವಾ ಫೆಮಿಲಿಯಾರಿಟಿಯನ್ನು ಮನುಷ್ಯ ತನ್ನ ಸಂಬಂಧದ ಗಾಢತೆಯನ್ನು ಹೆಚ್ಚಿಸಿಕೊಳ್ಳಲು ನಾನಾ ಪದಗಳಲ್ಲಿ ವರ್ಣಿಸುತ್ತಾನೆ. ವಿಶ್ವಾಸ, ನಿಯತ್ತು, ಪ್ರೀತಿ, ಬಾಂಧವ್ಯ ಇತ್ಯಾದಿ ಅಲಂಕಾರಿಕ ಪದಗಳು ಅವನಿಗೆ ಸಾಲುವುದಿಲ್ಲ. ಕೊನೆಗೆ ಪ್ರಾಣ ಎನ್ನುತ್ತಾನೆ. ಇನ್ನೂ ಮುಂದುವರಿದು ಒಂದು ಪ್ರಾಣ ಸಾಕಾಗದೆ ‘ಪಂಚಪ್ರಾಣ’ ಎಂದೂ ಉಬ್ಬಿಕೊಳ್ಳುತ್ತಾನೆ. ಒಬ್ಬ ಮತ್ತೊಬ್ಬನ ಅಧೀನದಲ್ಲಿರುವವರೆಗೂ ಮಾತ್ರವೇ ಈ ಪ್ರೀತಿ, ವಿಶ್ವಾಸ, ನಿಯತ್ತು, ಪ್ರಾಣ ಇತ್ಯಾದಿಗಳು. ಯಾವಾಗ ಒಬ್ಬರು ಮತ್ತೊಬ್ಬರ ಯಜಮಾನಿಕೆಯನ್ನು ಅಥವಾ ನಿಯಂತ್ರಣವನ್ನು ಪ್ರಶ್ನಿಸುತ್ತಾರೋ, ಅಥವಾ ನಿನಗಿರುವಂತೆಯೇ ನನಗೂ ಯಜಮಾನಿಕೆ ಮಾಡುವ ಅಧಿಕಾರವಿದೆ ಎಂದು ಅಧೀನವಾಗಿರಲು ಒಪ್ಪದೇ ಸವಾಲೆಯುವಂತೆ ಮಾತಾಡುತ್ತಾರೋ ಅಥವಾ ವರ್ತಿಸುತ್ತಾರೋ ಆಗ ಸಂಬಂಧಗಳು ಹಳಸಲು ಪ್ರಾರಂಭಿಸುತ್ತದೆ. ಪ್ರೇಮ ಭಗ್ನವಾಗುತ್ತದೆ. ವಿಶ್ವಾಸ ಭಂಗವಾಗುತ್ತದೆ. ಅವನಿಗೂ ಯಜಮಾನಿಕೆ ಮಾಡಲು ಸಾಧ್ಯ, ಇವನಿಗೂ ಯಜಮಾನಿಕೆ ಮಾಡಲು ಸಾಧ್ಯ ಎಂದು ತೋರಿದಾಗ ಅವನೂ ಇವನೂ ಇಬ್ಬರೂ ಸಮಾನರು ಎಂದುಬಿಡುತ್ತೇವೆ. ಒಬ್ಬರು ಮತ್ತೊಬ್ಬರ ಮೇಲೆ ಯಜಮಾನಿಕೆ ಮಾಡಬಾರದೆಂದೇ ಸಮಾನತೆಯನ್ನು ಸಾರುವುದು. ಅಭ್ಯಾಸ ಮಾಡಲು ಯತ್ನಿಸುವುದು. ಇದು ಮನುಷ್ಯ ಮನುಷ್ಯನ ಸಂಬಂಧಗಳಲ್ಲಿ ಸಾಧ್ಯ. ಏಕೆಂದರೆ, ಮನುಷ್ಯನಿಗೆ ಪ್ರಾಣಿಗಳಿಗಿರುವಂತೆ ಸಹಜ ಪ್ರವೃತ್ತಿಯೂ ಇದೆ, ಹಾಗೆಯೇ ಸ್ವಕೇಂದ್ರಿತ ಆಲೋಚನೆಗಳು, ತನ್ನ ಗಮ್ಯ ಮತ್ತು ಗಮನಾಧಾರಿತ ಬಯಕೆಗಳೂ ಇರುತ್ತವೆ. ಆದ್ದರಿಂದಲೇ ಮನುಷ್ಯ ಪ್ರಾರಂಭದಲ್ಲಿ ಅಥವಾ ತತ್ಕಾಲದಲ್ಲಿ ತನಗೆ ಒದಗಿಸಿದ ಯಾವುದೇ ಹಿತ ಅಥವಾ ಅನುಕೂಲಗಳಿಗೆ ಪ್ರತಿಯಾಗಿ ಯಾವುದೇ ಪ್ರಾಣಿಯಂತೆ ತನ್ನ ಅನ್ಯೋನ್ಯತೆಯನ್ನು ಪ್ರದರ್ಶಿಸಿದರೂ, ಅವನಿಗೆ ಅವನ ಮೂಲ ಆಸಕ್ತಿಯ ಗಮ್ಯ ಮತ್ತು ಗಮನಗಳಿರುವ ಕಾರಣದಿಂದ ಅಧೀನವಾಗಿಯೇ ಇರಲಾರನು. ಹಾಗೆ ಇರುವುದು ಅವನ ಜಾಯಮಾನವೂ ಅಲ್ಲ. ಹಾಗೆ ಇರಬೇಕೆಂದು ಬಯಸಿದ್ದೇ ಆದರೆ ಅದು ಮನುಷ್ಯನ ಪ್ರಕೃತಿಗೆ ವಿರೋಧವಾಗಿ ಬಯಸುತ್ತಿರುವುದು ಎಂದೇ ಆಗುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದಂತಹ ಗುರುತರವಾದಂತಹ ಜವಾಬ್ದಾರಿ, ಆಸಕ್ತಿ, ಕನಸು, ಗುರಿ; ಇತ್ಯಾದಿಗಳಿರುತ್ತವೆ. ಅವನು ಅವನ್ನು ಬದಿಗೊತ್ತುವುದು, ಅವನ ಪಾಲಿಗೆ ಅದು ಆತ್ಮದ್ರೋಹ. ಇನ್ನು ನಾಯಿಯ ವಿಶ್ವಾಸವನ್ನು ಒರೆಗೆ ಹಚ್ಚಿ ನೋಡುವ. ಒಬ್ಬನ ಮನೆಗೆ ಬಂದಿರುವ ನಾಯಿ ಸ್ವತಂತ್ರವಾಗಿ ತಾನೇ ಅಡುಗೆ ಮನೆಗೆ ಹೋಗಿ ಮಾಡಿಕೊಂಡು ಉಣ್ಣಲಾದೀತೇ? ಅಥವಾ ಅದರ ಆಹಾರಕ್ಕೆ ಅಗತ್ಯವಿರುವುದೆಲ್ಲಾ ಅಲ್ಲಿಲ್ಲಿ ಇಟ್ಟಾಡುತ್ತಿದ್ದು, ಅದು ಬೇಕಾದಂಗೆ ತಿನ್ನಲಾದೀತೇ? ಇನ್ನು ಬೇಟೆಯಾಡಿಕೊಂಡು ತಿನ್ನುವುದು ದೂರವೇ ಉಳಿಯಿತು. ಅದು ಯಾರ ಹಿಂದೆ ಓಡಾಡಿದರೆ, ಯಾರಿಂದ ಆಹಾರ ಸಿಗುತ್ತದೆ ಎಂದು ತಿಳಿದುಕೊಳ್ಳಲೇ ಬೇಕು. ಅವರನ್ನು ಅವಲಂಬಿಸಲೇ ಬೇಕು. ತಾನುಂಡು ಹಸಿವನ್ನು ತಣಿಸಿಕೊಳ್ಳಲು ಪರಾವಲಂಬಿಯಾಗಿರಲೇ ಬೇಕು. ಅಷ್ಟೇ ಅಲ್ಲದೇ ಅದರ ನೈಸರ್ಗಿಕವಾಗಿರುವಂತಹ ಎಲ್ಲಾ ಬಗೆಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ಅದು ನಮ್ಮ ಮನೆಗೆ, ಮನೆಯ ವಾತಾವರಣಕ್ಕೆ ಮತ್ತು ಮನೆಯವರೊಂದಿಗೆ ಬಳಕೆಯಾಗುವಂತೆ ಮಾಡಿರುತ್ತೇವೆ. ಅದು ತನ್ನತನವನ್ನು ಸಂಪೂರ್ಣವಾಗಿ ನಮ್ಮ ಸೃಷ್ಟಿತ ವ್ಯವಸ್ಥೆಗೆ ಒಗ್ಗಿಸಿಕೊಂಡುಬಿಟ್ಟಿರುತ್ತದೆ. ಅದಕ್ಕೇನಾದರೂ ಮೂಲ ಪ್ರವೃತ್ತಿಯ ಆಚೆಗೆ ಆಲೋಚನೆ ಮಾಡುವ ಸಾಮರ್ಥ್ಯ ಇದ್ದಿದ್ದರೆ ಅದೂ ಕೂಡಾ ಮನುಷ್ಯನಂತೆ ಬಂಡಾಯವೇಳುತ್ತಿತ್ತು. ತನ್ನ ದಾಸ್ಯದ ಶೃಂಖಲೆಯನ್ನು ಕಳಚಿಕೊಂಡು ಬಿಡುಗಡೆಯ ಹಾದಿ ಹಿಡಿಯುತ್ತಿತ್ತು. ಮನೆಯ ನಾಯಿ ಬಿಡಿ. ಬೀದಿಯ ನಾಯಿಗಳು ಆಹಾರಕ್ಕಾಗಿ ನಡೆಸುವ ಹೋರಾಟವನ್ನು ನೋಡಿ. ಒಂದು ಹೊಸ ನಾಯಿಯಾಗಲಿ, ತನ್ನೊಡನೆಯೇ ಆಡಿಕೊಂಡಿರುವ ಹಳೆಯ ಮಿತ್ರ ನಾಯಿಯೇ ಆಗಲಿ, ಆಹಾರ ದೊರಕಿದಾಗ “ಓ ಗೆಳೆಯಾ, ಬಾ ತಿನ್ನು. ನೀ ಮೊದಲು, ನಾ ನಂತರ” ಎಂದೇನೂ ಎನ್ನುವುದಿಲ್ಲ. ಅದಕ್ಕೆ ತಾನು ಶಕ್ತಿಶಾಲಿ ಎಂಬ ಪೂರ್ವಾನುಭವವಿದ್ದರೆ ಜೋರು ಮಾಡಿ ಓಡಿಸಿ ತಿನ್ನುತ್ತದೆ. ಇಲ್ಲವೇ, ತಾನು ಮತ್ತೊಂದರ ಶಕ್ತಿಗೆ ಅಧೀನವಾಗಿ ನೋವು ಉಂಡಿದ್ದರೆ, ಆ ನೋವಿನ ನೆನಪಿನಲ್ಲಿ ಬಾಲವನ್ನು ತನ್ನ ಹಿಂದಿನೆರಡು ಕಾಲುಗಳ ನಡುವೆ ಸೇರಿಸಿಕೊಂಡು ಹಸಿವನ್ನು ಅಥವಾ ಆಸೆಯನ್ನು ತಡೆದುಕೊಳ್ಳುತ್ತದೆ.ನಾವು ಮನುಷ್ಯ ಸೃಷ್ಟಿತ ನೈತಿಕತೆಯಾದ ವಿಶ್ವಾಸ, ನಿಯತ್ತು ಇತ್ಯಾದಿಗಳನ್ನೆಲ್ಲಾ ನಾಯಿಗಳಿಗೆ ಆರೋಪಿಸುತ್ತೇವಲ್ಲಾ, ನಾಯಿಗಳ ಸಂತಾನೋತ್ಪತ್ತಿಯ ಋತುಮಾನದಲ್ಲಿ ನೋಡಬೇಕು. ಋತುಸ್ರಾವವಾಗಿರುವ ಹೆಣ್ಣುನಾಯಿಯ ಹಿಂದೆ ಗಂಡುನಾಯಿಗಳ ಮೆರವಣಿಗೆ. ಅದು ವಾಸ್ತವದಲ್ಲಿ ಶಕ್ತಿಪ್ರದರ್ಶನ. ಹೆಣ್ಣು ನಾಯಿ ಒಲಿಯುವುದು ಕೂಡಾ ಶಕ್ತಿ ಪೂರ್ವಕವಾಗಿ ತನ್ನ ಒಲಿಸಿಕೊಳ್ಳುವವನನ್ನು. ಗಂಡು ನಾಯಿಗಳ ದಂಡು ಪರಸ್ಪರ ದಾಳಿ ಮಾಡಿಕೊಂಡು, ಕಚ್ಚಾಡಿಕೊಂಡು ಬಲವುಳ್ಳದ್ದು ಗಂಟು ಬೀಳುತ್ತದೆ. ಉಳಿದಿದ್ದು ನಾಲಿಗೆ ಚಾಚಿಕೊಂಡು, ಜೊಲ್ಲು ಸುರಿಸಿಕೊಂಡು ಕುಂಯ್ ಗುಡುತ್ತಾ ನೋಡಿಕೊಂಡು ನಿಲ್ಲಬೇಕು. ಇನ್ನೂ ಕೆಲವು ಮೊಂಡು ಬಲದವು ಎರಡರ ನಡುವೆ ಮೂರನೆಯದರ ಪ್ರವೇಶ ಏಕೆ ಸಾಧ್ಯವಿಲ್ಲ ಎಂದು ಹೋಗಿ ವಿಫಲವಾಗುತ್ತವೆ. ಮನುಷ್ಯನ ಕಣ್ಗಾವಲಿನ ಮತ್ತು ಅವನ ನಿಯಂತ್ರಣದ ವ್ಯವಸ್ಥೆಯಲ್ಲಿ ಮಾತ್ರವೇ ನಾಯಿಗಳೆರಡರ ‘ಡೀಸೆಂಟ್ ಮೇಟಿಂಗ್’ ಸಾಧ್ಯ. ಮನುಷ್ಯನ ಅತಿಕ್ರಮ ಪ್ರವೇಶವಿರದೇ ಅವು ನೈಸರ್ಗಿಕವಾಗಿದ್ದರೆ ಅದು ಫೈಟರ್ಸ್ ಮೇಟಿಂಗ್!  ಬೇಕರಿಯ ಮುಂದೆ ಇರುವ ನಾಯಿಯ ವಿಶ್ವಾಸ ಯಾರಿಗೆ? ಅದನ್ನು ಗಮನಿಸದೇ ತಿನ್ನುವವರ ಕಾಲಬಳಿ ಕುಳಿತುಕೊಂಡು ಇದೋ ಹಾಕುತ್ತಾರೆ, ಅದೋ ಹಾಕುತ್ತಾರೆ ಎಂದು ತನ್ನ ಹಳೆಯ ಅನುಭವದ ಆಧಾರದಲ್ಲಿ ಕಾಯುತ್ತಿರುತ್ತದೆ. ಅದಕ್ಕೆ ಹಾಕಲಿಲ್ಲವೋ, ತನ್ನ ಕಾಲಿನಿಂದ ನಿಂತಿರುವವನ ಕಾಲಿಗೆ ತಗುಲಿಸಿ ಕರೆದು ಗಮನ ಸೆಳೆಯುತ್ತದೆ. ಅದನ್ನು ನೋಡಿದಾಗ ನಮಗೆ ಮಮತೆ ಉಕ್ಕಿ ಹರಿಯುತ್ತದೆ. ವಿಧೇಯವಾಗಿ ಕುಳಿತುಕೊಂಡು ವಿನಮ್ರದಿಂದ ಪಿಳಿಪಿಳಿ ನೋಡುತ್ತಾ ಮುದ್ದು ಮುಖದಿಂದ, ಮುಗ್ಧನೋಟ ಬೀರುತ್ತಾ ಇರುವ ನಾಯಿಗೆ ಯಾರಿಗೆ ಕೊಡಲು ಮನಸ್ಸಾಗುವುದಿಲ್ಲ! ನಾವು ಇಂತಹ ವಿನಯಶೀಲ, ವಿಧೇಯ, ದೀನ ಪರಾವಲಂಬಿಗೇ ಕೊಡಲು ಇಷ್ಟಪಡುವುದು. ನೋಡಿ, ಯಾವುದಾದರೂ ಬೆಟ್ಟ ಅಥವಾ ದೇವಸ್ಥಾನದ ಬಳಿ ನಮ್ಮ ಕೈಯಲ್ಲಿರುವುದನ್ನು ಕಿತ್ತುಕೊಳ್ಳುವ ಕೋತಿಗಳಿವೆ ಎಂದರೆ ಕೋಲು ಹಿಡಿದುಕೊಂಡು ಹೋಗುತ್ತೇವೆ. ಕೋತಿ ನಮ್ಮ ಬಳಿ ವಿಧೇಯವಾಗಿರದೇ ಹಕ್ಕಿನಲ್ಲಿ ಕಿತ್ತುಕೊಂಡು ಹೋಗುತ್ತದೆ ಎಂದು ನಮಗೆ ಕೋಪ. ಹಕ್ಕು ಚಲಾಯಿಸುವವರ ಕಂಡರೆ ನಮ್ಮ ಅಹಂಕಾರಕ್ಕೆ ನಖಶಿಖಾಂತ ಉರಿ. ನಾಯಿ ವಿಧೇಯವಾಗಿರುವ ಕಾರಣವೇ ನಾವು ನೀಡುವ ಆಹಾರ ಮತ್ತು ಆಶ್ರಯ. ಅದೂ ತಾನು ಕೋತಿಯಂತೆ ಕಿತ್ತುಕೊಳ್ಳಲು ಹೋದರೆ ಕಲ್ಲು ಹೊಡೆದು ಓಡಿಸುತ್ತಾರೆ, ಮೆಲ್ಲನೆ ಬಾಲವಾಡಿಸಿಕೊಂಡು ವಿದೇಯತೆ ತೋರಿದರೆ ಆಹಾರ ಸಿಗುತ್ತದೆ ಎಂಬ ಪಾಠ ಅವುಗಳ ಡಿ ಎನ್ ಎ ನಲ್ಲಿಯೇ ಬಂದುಬಿಟ್ಟಿದೆ. ಮನುಷ್ಯನಿಗೆ ವಿಧೇಯತೆ ಬೇಕು, ನನಗೆ ಆಹಾರ ಬೇಕು. ಪರಸ್ಪರ ಕೊಟ್ಟು ತೆಗೆದುಕೊಳ್ಳೋಣ ಎಂಬ ಅರಿವು ಅದಕ್ಕಿದೆ. ಜೊತೆಗೆ ನಾಯಿಯೂ ಕೂಡಾ ನೈಸರ್ಗಿಕವಾಗಿ ಸಂಘ ಜೀವಿ. ಹಾಗಾಗಿ ಸಾಮಾನ್ಯವಾಗಿ ಅನುಕೂಲಕರವಾದ ಜೀವಿಯೊಡನೆ ಹೊಂದಿಕೊಂಡು ಬಿಡುತ್ತದೆ. ಅದು ಸ್ವಭಾವತಃ ಒಂಟಿಯಾಗಿರುವುದಿಲ್ಲ.  ನಾಯಿಗಿರುವ ನಿಯತ್ತು ಮನುಷ್ಯರಿಗಿಲ್ಲ ಬಿಡಿ ಎನ್ನುವಾಗಲೆಲ್ಲಾ ನನಗೆ ಬರುವ ಆಲೋಚನೆ ಎಂದರೆ, ಈ ಮನುಷ್ಯ ಮತ್ತೊಬ್ಬನನ್ನು ತನ್ನ ಬಳಿ ನಾಯಿಯಂತೆ ಅಧೀನವಾಗಿ, ಪರಾವಲಂಬಿಯಾಗಿ ಇರಬೇಕೆಂದು ಬಯಸುವುದು. ಹಾಗೂ ತಾನು ಕೊಟ್ಟಿರುವುದರ ಅಥವಾ ಮಾಡಿರುವುದರ ಒಳಿತಿನ ಪ್ರತಿಫಲವನ್ನು ಆಶಿಸುತ್ತಿರುವನು. ಒಬ್ಬರು ಮತ್ತೊಬ್ಬರಿಂದ ವಿಶ್ವಾಸವನ್ನು ಅಥವಾ ನಿಯತ್ತನ್ನು ಅಪೇಕ್ಷಿಸುತ್ತಿದ್ದಾರೆಂದರೆ, ಅವನು ತನ್ನ ಸ್ವಾರ್ಥದಲ್ಲಿ ಸ್ವಹಿತಾಸಕ್ತಿಯನ್ನು ಅತೀವವಾಗಿ ಬಯಸುತ್ತಾ ಮತ್ತೊಬ್ಬನನ್ನು ನೈತಿಕ ಸರಪಳಿಯಲ್ಲಿ ಬಂಧಿಸಿ ತನ್ನ ಅಧೀನ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾನೆ ಎಂದೇ ಅರ್ಥ. ಒಟ್ಟಾರೆ ಹೇಳುವುದಿಷ್ಟು. ತನ್ನ ಪಶುಪ್ರವೃತ್ತಿಯ ಅನುಸಾರವಾಗಿ ನಾಯಿಯ ಅನ್ಯೋನ್ಯತೆಯ ‘ಬಳಕೆ’ಯನ್ನು ವಿಶ್ವಾಸ ಅಥವಾ ನಿಯತ್ತು ಎಂದು ಅಪವ್ಯಾಖ್ಯಾನ ಮಾಡಿಕೊಂಡು, ಅದನ್ನು ಮನುಷ್ಯರ ವರ್ತನೆಗಳಿಗೆ ಹೋಲಿಸುತ್ತಾ ಮನುಷ್ಯರಿಗಿಂತ ನಾಯಿಯೇ ವಾಸಿ ಎಂದೆನ್ನುವುದು ನಮ್ಮ ಅಜ್ಞಾನದ ಪ್ರದರ್ಶನ. ಪಶುಗಳು ತಮ್ಮ ಸಹಜ ಸ್ವಭಾವವನ್ನು ಬಿಡುವಷ್ಟು ಪಳಗಿಸಲು ಮನುಷ್ಯನಿಗೆ ಗೊತ್ತಿದೆ. ಮನೆಯ ನಾಯಿಗಳನ್ನು ಆಡಿಸುವಂತೆ ಸಿಂಹ, ಹುಲಿಗಳನ್ನೂ ಅನ್ಯೋನ್ಯತೆಯ ಬಳಕೆಯಿಂದ ಆಡಿಸುವುದನ್ನು ಕಂಡಿದ್ದೇವೆ. ಒಬ್ಬ ಯಾವುದೇ ಪ್ರಾಣಿಯನ್ನು ಅದೆಷ್ಟೇ ಗಾತ್ರದಲ್ಲಿ ಮತ್ತು ಶಕ್ತಿಯಲ್ಲಿ ಹಿರಿದಾಗಿದ್ದರೂ ಹಾಗೆ ಪಳಗಿಸಬಹುದು. ಆದರೆ ತನ್ನ ಹೆಂಡತಿ ಅಥವಾ ಗಂಡನನ್ನು, ಮಕ್ಕಳನ್ನು, ಸಹೋದರ ಸಹೋದರಿಯನ್ನು ಅಂತೆಯೇ ತನ್ನ ಅಧೀನದಲ್ಲಿಟ್ಟುಕೊಂಡಿರುತ್ತೇನೆ ಎಂಬುದು ಅಸಾಧ್ಯದ ಮಾತು. ಸಮಾಜ ಜೀವಿಯಾದ್ದರಿಂದ ಕೆಲವು ಶಿಷ್ಟಾಚಾರಗಳಿಗೆ ಅನುಗುಣವಾಗಿ ನಡೆದುಕೊಂಡರೂ ಅವರ ಪ್ರತಿಭಟನೆ ಎಂತಾದರೂ ಪ್ರಕಟಿಸುತ್ತಲೇ ಇರುತ್ತಾರೆ. ಅಂತೆಯೇ ಪ್ರಾಣಿಗಳೂ ಕೂಡಾ ಅದರ ಮಾನಸಿಕ ಒತ್ತಡ ಅತಿರೇಕಕ್ಕೆ ಹೋಗಿ ತಡೆಯಲಾರದೇ ವಿರೋಧಿಸುವ, ಪಳಗಿಸುವವನ ಮೇಲೆ ದಾಳಿ ಮಾಡುವ ಉದಾಹರಣೆಗಳುಂಟು. ಆದರೆ ಅವು ತಮ್ಮ ಸಾಮಾನ್ಯ ಆರೋಗ್ಯದಲ್ಲಿರುವ ಪ್ರವೃತ್ತಿಯನ್ನು ಕಳೆದುಕೊಂಡು ಅದರ ಮೆದುಳು ಮತ್ತು ನರಗಳು ಅಸಹಜವಾದಾಗ ಅಥವಾ ಸಮಸ್ಯೆ ಉಂಟಾದಾಗ ಆಕ್ರಮಣಕಾರಿ ವರ್ತನೆಗಳನ್ನು ತೋರುತ್ತವೆ. ಇದು ಅವು ಮೆದುಳಿನ ಮತ್ತು ನರಗಳ ಆರೋಗ್ಯ ತಪ್ಪಿರುವ ಸೂಚನೆ. ಹಾಗೆಯೇ ಯಾವುದೇ ಮನುಷ್ಯನೂ ಒಬ್ಬನ ಅಧೀನದಲ್ಲಿಯೇ, ವಿನಮ್ರವಾಗಿ ತನ್ನ ಪ್ರಾಣವನ್ನು ಒತ್ತೆಯಿಟ್ಟು ಯಾವುದೇ ಲಾಭವಿಲ್ಲದೇ, ಸುಖವಿಲ್ಲದೇ, ಗೊತ್ತುಗುರಿಗಳಿಲ್ಲದೇ ಬದುಕುತ್ತಿದ್ದಾನೆಂದರೆ ಅವನ ಮಾನಸಿಕ ಆರೋಗ್ಯ ಹದಗೆಟ್ಟಿದೆ ಎಂದೇ ಅರ್ಥ. ಇವೆಲ್ಲಾ ಏನೇ ಇರಲಿ, ತನ್ನ ಮಾತನ್ನು ತನ್ನ ಹೆಂಡತಿ ಕೇಳದೇ ಇದ್ದರೂ, ತನ್ನ ಮಕ್ಕಳು ತಾನು ಹೇಳುವುದಕ್ಕೆ ವಿರುದ್ಧ ಹೋದರೂ, ತನ್ನ ಮಿತ್ರರು, ಸಹೋದ್ಯೋಗಿಗಳು ತನ್ನಿಂದ ವಿಮುಖರಾದರೂ, ತನ್ನೊಂದಿಗೆ ಅನ್ಯೋನ್ಯತೆಯಿಂದ ಇರುವ ನಾಯಿಯು ಬಾಲವಾಡಿಸಿಕೊಂಡು ಬಂದು ಮೇಲೆರಗಿ ಮುದ್ದಾಡುವುದು ಒಂದು ಸಾಂತ್ವಾನ. ಇತಿಹಾಸ ಪೂರ್ವದಿಂದ, ಆದಿಮ ಕಾಲದಿಂದಲೂ ತನ್ನೊಡನೆ ಒಡನಾಡಿಯಾಗಿರುವ ನಾಯಿ ಮನುಷ್ಯನಿಗೆ ಪ್ರೀತಿಯ ಸಂಗಾತಿಯೇ. ತನ್ನ ಪಶು ಸಹಜ ನೈಸರ್ಗಿಕ ಗ್ರಹಿಕೆಯ ಶಕ್ತಿಯಿಂದ ಮೂರ್ಚೆ ಬೀಳುವವರಿಗೆ ಸಂಗಾತಿಯಾಗುತ್ತದೆ. ಕಾವಲು ಕಾಯುತ್ತದೆ. ಸ್ಪಂದಿಸುತ್ತದೆ. ತಾನು ಗ್ರಹಿಸುವ ಸೂಕ್ಷ್ಮ ಸೂಚನೆಗಳಿಂದಾಗಿ ಪ್ರಾಕೃತಿಕ ವಿಕೋಪ ಅಥವಾ ವೈಮಾನಿಕ ಬಾಂಬ್ ದಾಳಿಯ ಆಪತ್ತುಗಳಿಂದ ಕೂಡಾ ನಮ್ಮನ್ನು ರಕ್ಷಿಸುವುದು. ಆಹಾರದ ಮತ್ತು ತನ್ನಾಶ್ರಯದ ವಾಸನೆಯನ್ನು ಗ್ರಹಿಸುವಂತೆ ಅದಕ್ಕೆ ಸಂಬಂಧಿಸಿರುವ ವ್ಯಕ್ತಿಯ ವಾಸನೆಯನ್ನೂ ಕೂಡಾ ಅದು ಗ್ರಹಿಸುವುದು. ತನ್ನ ಆಶ್ರಯ ಮತ್ತು ಆಹಾರಕ್ಕೆ ತನ್ನ ಒಲವನ್ನು ತೋರಿಸುವಂತೆಯೇ, ಅದಕ್ಕೆ ಸಂಬಂಧಪಟ್ಟಂತಹ ವ್ಯಕ್ತಿಗೂ ಅಥವಾ ಯಜಮಾನನಿಗೂ ತನ್ನ ಒಲವನ್ನು ತೋರುವುದು. ಆ ಒಲವನ್ನೇ ನಾವು ಪ್ರೀತಿ ಎಂದರೆ ಅದಕ್ಕೆ ಅದರ ಅಭ್ಯಂತರವೇನೂ ಇಲ್ಲ. ಅದಕ್ಕೆ ಆಹಾರ ಮತ್ತು ಆಶ್ರಯದ ಕೊರತೆ ಮಾಡದಿದ್ದರಾಯಿತು. ನಾಯಿಯ ಪ್ರತಿಕ್ರಿಯೆ ಮತ್ತು ಸ್ಪಂದನೆ ಎಲ್ಲವೂ ಅದರ ಪಶು ಸಹಜ ಪ್ರವೃತ್ತಿಗಳನ್ನು ಅರಿತುಕೊಂಡು ನಾವು ಕೊಟ್ಟಿರುವ ತರಬೇತಿಗಳಿಂದ ಮತ್ತು ಬಳಕೆಯಿಂದ. ಅದಕ್ಕೆ ಖುಷಿ ಪಡೋಣ. ನಾವದನ್ನು ಪ್ರೀತಿಸೋಣ. ನಮಗೆ ವಿಶ್ವಾಸ ಅಥವಾ ನಿಯತ್ತು ಎಂಬುದು ಏನೆಂದು ನಮ್ಮ ಪರಿಕಲ್ಪನೆಯಲ್ಲಿ ಗೊತ್ತಿದೆ. ಅದನ್ನು ಅದಕ್ಕೆ ತೋರೋಣ. ಆದರೆ ಅದು ನಮಗೆ ವಿಶ್ವಾಸ ತೋರುತ್ತಿದೆ ಎಂಬ ಭ್ರಮೆಯಲ್ಲಿ ನಮ್ಮಂತೆಯೇ ಇರುವ ನಮ್ಮ ಸಹಜೀವಿಗಳನ್ನು ಕುಟುಕದಿರೋಣ. ಅಷ್ಟೇ!

LEAVE A REPLY

Please enter your comment!
Please enter your name here