• ಶಿಕ್ರಾನ್ ಶರ್ಫುದ್ದೀನ್ ಎಂ

ಗಜಲ್ ಒಂದು ಅರೇಬಿಕ್ ಪದ ಗಜಲ್ ಎಂದರೆ ಆಳವಾದ ಭಾವನೆ, ಪ್ರೇಮಿಗಳ ಸಂವಾದ, ದಂಪತಿಗಳ ಮಾತುಕತೆ, ಭಾವುಕ ಜೀವಿಗಳ ಸೂಕ್ಷ್ಮ ಸಂವೇದನೆ, ಪ್ರೇಮಿಗಳ ಜುಗಲ್ ಬಂದಿ, ವಿರಹ ವೇದನೆ ಪ್ರೇಮ ನಿವೇದನೆ, ಪ್ರೀತಿಸುವ ಹೃದಯಗಳ ಚಡಪಡಿಕೆ. ಗಜಲ್ ಗಳು ಒಂದೇ ವಿಷಯ ಒಂದೇ ತರಹದ ದೃಷ್ಟಿಕೋನ ಇಟ್ಟುಕೊಂಡು ಮಾತನಾಡದೇ ಸಾವಿರಾರು ಚಿಂತನೆಗಳಿಂದ ಹತ್ತು ಹಲವು ವಿಚಾರಗಳನ್ನ ಪ್ರತಿಪಾದಿಸುತ್ತವೆ. ಬದುಕಿನ ಎಲ್ಲಾ ರಂಗಗಳ ಹೂರಣದಿಂದ ಸಾಮಾಜಿಕ ಕಳಕಳಿ ಮತ್ತು ವಿಶ್ವಮಾನವತೆಯ ತುಡಿತದಿಂದ ಭೂತ ಭವಿಷ್ಯತ್ವ ವರ್ತಮಾನಗಳ ಬೆಳಕಿನಿಂದ ಮಾತನಾಡುತ್ತವೆ.

ಗಜಲ್ ಗಳ ಪ್ರಕಾರಕ್ಕೆ ಹೊಗುವ ಮೊದಲು ಗಜಲ್ ಅಂಶಗಳ ಬಗ್ಗೆ ತಿಳಿದುಕೊಂಡರೆ ಗಜಲ್ ಪ್ರಕಾರಗಳನ್ನ ಸುಲಭವಾಗಿ ಅರ್ಥಮಾಡಿಕೊಳ್ಳ ಬಹುದು. (ಮಿಸ್ರ, ಮತ್ಲಾ, ಶೇರ್, ಕಾಫಿಯ, ರವಿ, ರದೀಫ್, ಮಕ್ತಾ, ಬೆಹರ್ ಇವು ಗಜಲ್ ಅಂಶಗಳು)

ಮಿಸ್ರ:– ಇದು ಗಜಲ್ನ ಚರಣ ಕವಿಯು ಹೇಳಬೇಕಾದ ವಸ್ತು ವಿಷಯವು ಸಂಪೂರ್ಣ ವಾಕ್ಯ ಸಂದೇಶದೊಂದಿಗೆ ಅರ್ಥಪೂರ್ಣವಾಗಿ ಬಿಂಬಿತವಾಗುವ ಪಂಕ್ತಿಯನ್ನು ಮಿಸ್ರ ಎನ್ನುತ್ತಾರೆ.

ಮತ್ಲಾ:- ಇದು ಗಜಲ್ನನ ಆರಂಭಿಕ ದ್ವಿಪದಿಯಾಗಿದ್ದು ಇದರ ನಿಜವಾದ ಅರ್ಥವು ಉದಯ ಅಥವಾ ಪ್ರಾರಂಭವಾಗುತ್ತದೆ.

ಶೇರ್:- ಇದೊಂದು ಗಜಲ್ನಲ್ಲಿ ಬರುವ ದ್ವಿಪದಿಯಾಗಿದೆ. ಎರಡು ವಾಕ್ಯ ಅಥವಾ ಮಿಸ್ರಗಳಿಂದ ಒಂದು ಶೇರ್ ಆಗುತ್ತದೆ.

ಕಾಫಿಯಾ:- ಈ ಪದವು ‘ಕಪೂ’ ಎಂಬ ಧಾತುವಿನಿಂದ ಉತ್ಪತ್ತಿಯಾಗಿದೆ. ಬೇರೆ ಬೇರೆ ಅರ್ಥ ಸಂದೇಶ ಕೊಡುವ ಸ್ಥಾಯಿಯಲ್ಲದ ಅಕ್ಷರಗಳ ಗುಂಪಿನ ಒಂದು ಪ್ರಾಸಕ್ಕೆ ಕಾಫಿಯ ಎಂದು ಕರೆಯುತ್ತಾರೆ. ಒಂದು ಗಜಲ್ ಪಕ್ವತೆ ಮತ್ತು ಗೇಯತೆ ಕಾಣಲು ಕಾಫಿಯ ಕೇಂದ್ರಬಿಂದು ಆಗಿದೆ ಇದನ್ನು ಗಜಲ್ನ ಹೃದಯ ಹಾಗು ಗಜಲ್ನ ಉಸಿರೆಂದು ಪರಿಣಿತರು ವ್ಯಾಖ್ಯಾನಿಸಿದ್ದಾರೆ. ಗಜಲ್ ಆಗಲು ಕಾಫಿಯಾ ಅತೀ ಮುಖ್ಯವಾಗಿದೆ.

ರವಿ:- ಕಾಫಿಯಾ ಗುಣ ಲಕ್ಷಣಗಳ ಮತ್ತು ಅದರ ಅಂಶವನ್ನು ಅರ್ಥೈಸುವ ನೆಲೆ ಬೆಲೆಯನ್ನು ಎತ್ತಿ ತೋರಿಸುವ ಕಾಫಿಯಾದ ಕೊನೆಯದಾದ ದಿಟವಾದ ಸ್ಥಿರವಾದ ಅಕ್ಷರವೇ ರವಿ. ಗಜಲ್ ಆಗಲು ಕಾಫಿಯಾ ಎಷ್ಟು ಮುಖ್ಯವೋ ಕಾಫಿಯ ಆಗಲು ರವಿಯು ಅಷ್ಟೇ ಮುಖ್ಯ.

ರದೀಫ್:- ಗಜಲ್ ಕಾವ್ಯದಲ್ಲಿ ಬರುವ ಒಂದೇ ತರಹದ ಅಕ್ಷರಗಳ ಗುಂಪಾಗಿದ್ದು ಕಾಫಿಯಾದ ಮುಂದೆ ಬರುವ ಪದವಾಗಿದೆ. ಇದು ಎಲ್ಲಾ ದ್ವಿಪದಿಗಳಲ್ಲಿ ಪುನರಾವರ್ತಿತವಾಗಿ ಬಂದು ಗಜಲ್ ಕಾಂತಿ ಮತ್ತು ರಮ್ಯತೆ ಸೌಂದರ್ಯವನ್ನ ಹೆಚ್ಚಿಸುತ್ತದೆ.

ಮಕ್ತಾ:- ಇದರ ಅರ್ಥ ಮುಕ್ತಾಯ ಮತ್ತು ಸಂಪೂರ್ಣಗೊಳಿಸುವುದು‌ ಗಜಲ್ ಕಾವ್ಯದಲ್ಲಿ ಮತ್ಲಾ ಪ್ರಾರಂಭವಾದರೆ ಮಕ್ತಾದಲ್ಲಿ ಪೂರ್ಣಗೊಳ್ಳುತ್ತದೆ. ಒಂದು ಗಜಲ್ನ‌ ಕೊನೆಯ ದ್ವಿಪದಿಯಲ್ಲಿ ಕವಿಯ ಹೆಸರು ಅಥವಾ ಕಾವ್ಯನಾಮ ಇರುತ್ತದೆ.

ಬೆಹರ್:- ಒಂದು ಸಂಪೂರ್ಣ ಗಜಲ್ನ ಚರಣ ಅಥವಾ ದ್ವಿಪದಿಗಳನ್ನು ಮಾತ್ರಾಗಣಗಳ ಮೂಲಕ ಅಳೆಯುವಂತಹ ಪಾರದರ್ಶಕ ಸಾಧನವನ್ನು ಬೆಹರ್ ಎಂದು ಕರೆಯುತ್ತಾರೆ.

ಗಜಲ್ ಪ್ರಕಾರಗಳು:

ಗಜಲ್ ಗಳಲ್ಲಿ ಇಂತಿಷ್ಟೇ ಪ್ರಕಾರಗಳಿವೆಯೆಂದು ನಿಖರವಾಗಿ ಹೇಳಲಾಗದಿದ್ದರೂ ಉರ್ದು, ಫಾರ್ಸಿ, ಕನ್ನಡ ಗಜಲ್ಕಾರರ ಮಾಹಿತಿಯನ್ನ ಆಧರಿಸಿ ಹತ್ತೊಂಬತ್ತು ಪ್ರಕಾರದ ಗಜಲ್ಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ.

ಮುರದ್ದಫ್ ಗಜಲ್:-
ಗಜಲ್ನ ಎಲ್ಲಾ ನಿಯಮಗಳಿಂದ ಪ್ರತಿಯೊಂದು ದ್ವಿಪದಿಯಲ್ಲಿ ಕ್ರಮಬದ್ಧವಾಗಿ ಸಮಾನ ತೂಕ ಸಮಾನ ಮಾತ್ರಾಗಣದಿಂದ ಪುನರಾವರ್ತಿತ ಪದ ರದೀಫ್ ಮತ್ತು ಒಳಪ್ರಾಸ ಕಾಫಿಯಾಗಳು ಹೊಂದಿರುವ ಗಜಲ್ಗಳಿಗೆ ಮುರದ್ದಫ್ ಗಜಲ್ಗಳೆಂದು ಕರೆಯುತ್ತಾರೆ.

ಗೈರ್ ಮುರದ್ದಫ್ ಗಜಲ್:-
ಇದರಲ್ಲಿ ರದೀಪ್ ಇರುವುದಿಲ್ಲ ಆದರೆ ಒಂದು ಮುರದ್ದಫ್ ಗಜಲ್ನನಲ್ಲಿ ಇರುವ ಎಲ್ಲಾ ನಿಯಮಗಳು ಇರುತ್ತವೆ. ಇದನ್ನು “ ಮುಕಪ್ಫ” ಗಜಲ್ ಎಂತಲೂ ಕರೆಯುತ್ತಾರೆ.

ಮುಸಲ್ ಸಲ್ ಗಜಲ್:-
ಇದರ ಅರ್ಥ ಒಂದೇ ವಿಷಯದ ಬಗ್ಗೆ ಪ್ರಸ್ತಾಪಮಾಡಿ ಬರೆಯುವುದೆಂದರ್ಥ.

ಗೈರ್ ಮುಸಲ್ ಸಲ್ ಗಜಲ್:-
ಈ ಗಜಲ್ನ ಎಲ್ಲಾ ದ್ವಿಪದಿಗಳು ಮೂಲ ನಿಯಮಗಳೊಂದಿಗೆ ಬೇರೆ ಬೇರೆ ವಿಷಯಗಳಿಂದ ಓದುಗರನ್ನು ಸೆಳೆಯುತ್ತದೆ. ಒಂದು ದ್ವಿಪದಿ ಹೃದಯದ ಬಗ್ಗೆ ಹೇಳಿದರೆ ಮತ್ತೊಂದು ಪ್ರೇಮದ ಬಗ್ಗೆ ಹೇಳುತ್ತದೆ.

ಆಜಾದ್ ಗಜಲ್:-
ಇದರ ಹೆಸರೇ ಸೂಚಿಸಿದ ಹಾಗೆ ಸ್ವತಂತ್ರವಾದ ಗಜಲ್ ಆಗಿದೆ. ಇದರಲ್ಲಿ ಚರಣಗಳು ಸಮನಾಗಿ ಇರುವುದಿಲ್ಲ ಆದರೆ ಎಲ್ಲಾ ಮೂಲ ಗಜಲ್ ನಿಯಗಳು ಇರುತ್ತವೆ.

ಜುಲ್ ಕಾಫಿಯ ಗಜಲ್:-
ಜುಲ್ ಕಾಫಿಯ ಎಂದರೆ ಎರಡೆರಡು ಕಾಫಿಯಗಳನ್ನು ಅಳವಡಿಸಿ ಬರೆಯುವುದು. ಜುಲ್ ಎಂದರೆ ದ್ವೀತಿಯ ಎಂಬ ಅರ್ಥ ಬರುತ್ತದೆ. ಒಂದು ಕಾಫಿಯಾ ಮುಂದೆ ಮತ್ತೊಂದು ಕಾಫಿಯಾ ಬರುವ ಗಜಲ್ ಗಳನ್ನು ಜುಲ್ ಕಾಫಿಯಾ ಗಜಲ್ಗಳೆಂದು ಕರೆಯುತ್ತಾರೆ.

ಸೆಹ್ ಗಜಲ್:-
ಸೆಹ್ ಎಂಬ ಉರ್ದುಪದದ ಅರ್ಥ ಸಹಿಸು ಸೈರಿಸು ಎಂದು. ಒಂದು ಗಜಲ್ ತನ್ನ ಜೊತೆಗೆ ಮೂರು ನಾಲ್ಕು ಗಜಲ್ಗಳನ್ನು ಸೇರಿಸಿಕೊಂಡು ಒಂದೇ ಗಜಲ್ ಆಗಿ ಪರಿವರ್ತನೆಯಾಗಿ ಹೋಗುತ್ತದೆ. ಇದು ಏಳನೆಯ ಶತಮಾನದಲ್ಲಿ ರಚಿತವಾದ “ಖಸೀದಾ” ಮಾದರಿಯನ್ನು ಅವಲಂಬಿಸಿದೆ ಎನ್ನಬಹುದು.

ಹುಸ್ನ್ – ಎ – ಮತ್ಲಾ ಗಜಲ್:-
ಹುಸ್ನ್ ಎಂದರೆ ಸೌಂದರ್ಯ ಅರ್ಥಾತ್ ಒಂದು ಗಜಲ್ನ ಅಂದ ಚೆಂದ ರಮ್ಯತೆಯನ್ನು ಹೆಚ್ಚಿಸುವ ಮತ್ಲಾ ಆಗಿದೆ. ಒಂದು ಗಜಲ್ನ ಮೊದಲ ದ್ವಿಪದಿ ಮತ್ಲಾ ಆಗಿದ್ದು ಎರಡನೇ ದ್ವಿಪದಿ ಸಮತೋಲಿತ ಕಾಫಿಯಾ ರಧೀಫ್ಗಳಿಂದ ಮತ್ಲಾ ಆಗಿ ಕಂಗೊಳಿಸಿದರೆ ಅಂತಹ ಗಜಲ್ ಗಳನ್ನು ಹುಸ್ನ್ ಎ ಸಾನಿ ಗಜಲ್ ಎಂದು ಕರೆಯುತ್ತಾರೆ.

ಮತ್ಲಾ – ಎ – ಸಾನಿ ಗಜಲ್:-
ಒಂದು ಗಜಲ್ ನಲ್ಲಿ ಎಲ್ಲಾ ನಿಯಮಗಳೊಂದಿಗೆ ಆರಂಭದ ಮೂರು ದ್ವಿಪದಿಗಳು ಮತ್ಲಾ ಆಗಿದ್ದರೆ ಇಂತಹವುಗಳು ಮತ್ಲಾ ಎ ಸಾನಿ ಗಜಲ್ ಆಗಿರುತ್ತವೆ.

ಆ್ಯಂಟಿ ಗಜಲ್:-
ಇದೊಂದು ಲಾವಣಿಯ ರೂಪದಲ್ಲಿ ಬಿಂಬಿತವಾಗುವ ಗಜಲ್ ದೇಶ ಭಕ್ತಿ ನೆಲದ ಸೊಗಡು, ವೀರಪುರುಷ ವೀರವನಿತೆಯರ ಮಹತ್ವವನ್ನು ಸಾರುವ ಮೂಲಕ ಗಜಲ್ ಹೇಳುತ್ತದೆ.

ಫನ್ನಿ ಗಜಲ್:-
ಹೆಸರೇ ಸೂಚಿಸುವಂತೆ ಇದು ಒಂದು ಹೊಸ ಪ್ರಕಾರದ ಹಾಸ್ಯ ಮಿಶ್ರಿತವಾದ ಗಜಲ್ ಆಗಿದೆ.

ನಜರಿ ಗಜಲ್:-
ನಜರ್ ಎಂದರೆ ದೃಷ್ಟಿ ನಜರಿ ಎಂದರೆ ದೃಷ್ಟಿಕೋನ. ಈ ಪ್ರಕಾರದ ಗಜಲ್ ಗಳು ಓದುಗರ ಭಾವನೆ ಆಸಕ್ತಿಯನ್ನು ಕೇಂದ್ರೀಕೃತವಾಗಿ ಇಟ್ಟುಕೊಂಡು ಮನಸುಗಳಿಗೆ ಎಟುಕುವಂತೆ ನೇರವಾಗಿ ಓದಿಸಿಕೊಂಡು ಹೋಗುತ್ತವೆ.

ಸಿಯಾಸಿ ಗಜಲ್:-
ಸಿಯಾಸತ್ ಎಂದರೆ ಉರ್ದು ಪದದ ಅರ್ಥ ರಾಜಕೀಯ. ಈ ಪ್ರಕಾರದ ಗಜಲ್ ಗಳಲ್ಲಿ ರಾಜಕೀಯ ವಿಚಾರಗಳ ಬಗ್ಗೆ ಪ್ರಸಕ್ತ ಕಾಲಘಟ್ಟ ಸಾಂದರ್ಭಿಕ ಚಿತ್ರಣ ಪ್ರತಿಬಿಂಬಿಸುವ ಕಾವ್ಯ ಪ್ರಕಾರವಾಗಿದೆ.

ಝೆನ್ ಗಜಲ್:-
ಇದು ಬೌದ್ಧಧರ್ಮದ ತತ್ವ ಸಿದ್ಧಾಂತ ನಂಬಿಕೆಗಳನ್ನು ಆಧ್ಯಾತ್ಮಿಕ ಸಂದೇಶಗಳಿಂದ ತಿಳಿ ಹೇಳುವ ಗಜಲ್ ಆಗಿದೆ.

ಜಿನ್ ಸಿ ಗಜಲ್:-
ಇದು ಲೈಂಗಿಕ ವಿಷಯಗಳ ಬಗ್ಗೆ ಮಾತನಾಡುವ ಗಜಲ್ ಎಂದು ಹೇಳಲಾಗಿದೆ. ಆದರೂ ಇಂತಹ ಗಜಲ್ ಬರೆಯುವಾಗ ಕವಿಯು ಒಂದು ಸಭ್ಯತೆಯ ದಾಯರೆಯಲ್ಲಿ ಬರೆಯುವುದು ಅವಶ್ಯಕವಾಗಿದೆ.

ಸೂಫಿ ಗಜಲ್:-
ಪ್ರೇಮ ಮತ್ತು ಭಕ್ತಿ ಆದ್ಯಾತ್ಮದ ತಳಹದಿಯ ಮೇಲೆ ಜಗತ್ತು ತಿರುಗುತಿದೆ ಎಂಬ ಸತ್ಯವನ್ನು ಪ್ರತಿಪಾದಿಸುವ ಪರಸ್ಪರ ಪ್ರೀತಿ ಸ್ನೇಹ ಮಾನವತೆಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಶೇರ್ ಗಳನ್ನು ಈ ಗಜಲ್ ಉದ್ದಕ್ಕೂ ಕಾಣಬಹುದು. ವಿಶ್ವಮಾನವ ಸಂದೇಶಗಳನ್ನು ಸಾರುವಂತಹ‌ ಅನುಭವ ಅನುಭಾವದಿಂದ ಆಧ್ಯಾತ್ಮಿಕ ಬೆಳಕನ್ನು ಚೆಲ್ಲುವ ಗಜಲ್ಗಳನ್ನು ಸೂಫಿ ಗಜಲ್ಗಳೆಂದು ಕರೆಯಲಾಗುತ್ತದೆ.

ರೀಖ್ತ ಗಜಲ್:-
ಇದು ಫಾರ್ಸಿ ಅರೇಬಿಕ್ ಮತ್ತು ನಾಗರಿ ‌ಭಾಷೆಗಳ ಮಿಶ್ರಿತ ಕಾವ್ಯ ಪ್ರಕಾರವಾಗಿದ್ದು ಉರ್ದು, ಹಿಂದಿ ಪ್ರಾರಂಭಿಕ ಹಂತದ ಗಜಲ್ ಎಂದು ಹೇಳಲಾಗಿದೆ.

ತರಹಿ ಗಜಲ್:-
ತರಹಿ ಎಂದರೆ ತರಹ ಧಾಟಿ ಶೈಲಿ ಎಂದರ್ಥ. ಅಂದರೆ ಕವಿಯು ತನಗಿಷ್ಟದ ಬೇರೊಬ್ಬ ಕವಿಯ ಗಜಲ್ ನ ಒಂದು ಮತ್ಲಾ ಅಥವಾ ಮಿಸ್ರ ಆರಿಸಿಕೊಂಡು ಮೂಲ ಕವಿಯ ಮಾದರಿಯಲ್ಲೇ ಬರೆಯುವುದನ್ನು ತರಹಿ ಗಜಲ್ ಎಂದು ಕರೆಯುತ್ತಾರೆ.

ಜದೀದ್ ಗಜಲ್:-
ತನ್ನ ಮೂಲ ಸ್ವರೂಪವನ್ನ ಕಳೆದುಕೊಳ್ಳದೆ ಲಯ ಭಾವಗಳೊಂದಿಗೆ ಹೊಸತನವನ್ನು ಪಡೆದುಕೊಂಡು ಸಾಂದರ್ಭಿಕ ಸನ್ನಿವೇಶಗಳನ್ನು ನವನವೀನ ಸಂಶೋಧನೆಗಳೊಂದಿಗೆ ರೂಪಕ ಪ್ರತಿಮೆ ಹೋಲಿಕೆಗಳಿಂದ ಭಿತ್ತರಿಸಲ್ಪಡುವ ಗಜಲ್ ಗಳಿಗೆ ಜದೀದ್ ಗಜಲೆ ಗಳೆಂದು ಕರೆಯಲಾಗುತ್ತದೆ‌

ಇವಿಷ್ಟು ಗಜಲ್ ಪ್ರಕಾರಗಳು. ಇಲ್ಲಿ ವಿವರವಾಗಿ ಹೇಳಿಲ್ಲ ಬದಲಾಗಿ ನಮ್ಮ ತಿಳುವಳಿಕೆಗಾಗಿ ಕೇವಲ ಪ್ರಕಾರಗಳ ಬಗ್ಗೆ ಮಾಹಿತಿ ನೀಡಿದ್ದೆನೆ ಆಸಕ್ತಿ ಉಳ್ಳವರು ಈ ಎಲ್ಲಾ ಪ್ರಕಾರಗಳನ್ನ ವಿಸ್ತಾರವಾಗಿ ಅಭ್ಯಾಸ ಮಾಡಬಹುದು.

ಕೃಪೆ:
“ನೂರ್ – ಏ – ತಬಸ್ಸುಮ್” ಪುಸ್ತಕದ ಮುನ್ನುಡಿಯಿಂದ
ಯು ಸಿರಾಜ್ ಅಹಮದ್ ಸೊರಬ.
ಸಾಹಿತಿ, ಗಜಲ್ ಕವಿ.

LEAVE A REPLY

Please enter your comment!
Please enter your name here