• ಮುಷ್ತಾಕ್ ಹೆನ್ನಾಬೈಲ್

ಒಂದೇ ತಂದೆಯ ಎರಡು ಮಕ್ಕಳ ಸಂತತಿಗಳು ಹೊಡೆದಾಡಿಕೊಳ್ಳುತ್ತಿವೆ. ಅರಬ್ಬರು ಮತ್ತು ಇಸ್ರಾಯೀಲರು ಅನುಕ್ರಮವಾಗಿ ಪ್ರವಾದಿ ಇಬ್ರಾಹಿಮರ ಎರಡು ಮಕ್ಕಳಾದ ಇಸ್ಮಾಯಿಲ್ ಮತ್ತು ಇಸ್ಹಾಕರ ಸಂತತಿಗಳು. ಕಾಲಚಲನೆಯೊಂದಿಗೆ ಈ ಎರಡು ಸಂತತಿಗಳು, ಮುಸ್ಲಿಮರು ಮತ್ತು ಯಹೂದಿಗಳಾಗಿ ಲೋಕಮುಖಕ್ಕೆ ಪರಿಚಿತರಾದರು. 90 ರ ದಶಕದಲ್ಲಿ ಬಿಲ್ ಕ್ಲಿಂಟನ್ ಅಮೇರಿಕಾದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ “ನೀವಿಬ್ಬರು “ಕಸಿನ್”ಗಳು, ಸೌಹಾರ್ದತೆ ಮತ್ತು ಸದ್ಭಾವನೆಯ ಬುನಾದಿಯ ಮೇಲೆ ಸುಸೂತ್ರವಾದ ಸಂಧಾನ ಸೂತ್ರಗಳಿಗೆ ಬದ್ಧರಾಗಿ, ಸರಿ-ತಪ್ಪುಗಳನ್ನು ಸರಿದೂಗಿಸಿಕೊಂಡು ಬದುಕುವುದೇ ಬುದ್ಧಿವಂತಿಕೆಯಾದೀತು” ಎಂದು ಪ್ರಾಮಾಣಿಕ ಸಲಹೆ ನೀಡಿದ್ದರು. ಅದರಂತೆಯೇ ಆಗಿನ ಇಸ್ರೇಲ್ ಪ್ರಧಾನಿ ಯಿಜ್ತಾಕ್ ರಾಬಿನ್ ಮತ್ತು ಪ್ಯಾಲೆಸ್ಟೈನ್ ನಾಯಕ ಯಾಸೆರ್ ಅರಾಫತ್ , ಈ ವಿವಾದವನ್ನು ಕೊನೆಗಾಣಿಸುವ ಗಂಭೀರ ಪ್ರಯತ್ನ ಮಾಡಿದರು. ಇವರ ಶಾಂತಿ ಒಪ್ಪಂದದ ನೀತಿಗಳಿಗೆ ಕಟ್ಟರ್ ಯಹೂದಿಗಳು ತಕರಾರು ತೆಗೆದು, ತಮ್ಮ ಪ್ರಧಾನಿ ಯಿಜ್ತಾಕ್ ರಾಬಿನ್ ರನ್ನು ಕೊಂದೇ ಬಿಟ್ಟರು. ತದನಂತರದ ದಿನಗಳಲ್ಲಿ ಯಾಸಿರ್ ಅರಾಫತರೊಂದಿಗೆ ಇಸ್ರೇಲ್ ಪ್ರಧಾನಿ ಯಹೂದ್ ಬರಾಕ್ ಮತ್ತು ಏರಿಯಲ್ ಶೆರೋನ್ ಕೂಡ ವಿವಾದಕ್ಕೆ ಮಂಗಳ ಹಾಡುವ ಪ್ರಯತ್ನ ಮಾಡಿದರು. ಈ ಎರಡು ರಾಷ್ಟ್ರ ಸ್ವರೂಪವಿಲ್ಲದ ರಾಷ್ಟ್ರಗಳ ಸಮಸ್ಯೆ ಅದೆಷ್ಟು ಜಟಿಲವಿದೆ ಎಂದರೆ, ಲೋಕಾಂತ್ಯದವರೆಗೆ ಅದು ಬಗೆಹರಿಯಲಾರದು. ಒಂದೊಮ್ಮೆ ಈ ದಳ್ಳುರಿ ಶಮನಗೊಂಡರೆ ಅದು ಪವಾಡವೇ ಸರಿ. ಇತ್ಯರ್ಥದ ಕುರಿತಾಗಿ ಉಭಯ ಕಡೆಯಲ್ಲೂ ಸ್ಪಷ್ಟತೆಯಿಲ್ಲ. ವಿವಾದವನ್ನು ರಾಜಕೀಯದವರು ಒಂದು ಕಡೆ ಎಳೆದರೆ, ಎರಡೂ ಕಡೆಯ ಮೂಲಭೂತವಾದಿಗಳು ಮತ್ತೊಂದು ಕಡೆ ಎಳೆಯುತ್ತಿದ್ದಾರೆ. ಇಡೀ ಜಗತ್ತಿನಲ್ಲಿರುವ ಯಹೂದಿ ಜನಸಂಖ್ಯೆಯ ಕೇವಲ 25% ರಿಂದ 30% ಜನರು ಮಾತ್ರ ಇಸ್ರೇಲಿನಲ್ಲಿರುವುದು. ಯಹೂದಿಗಳಲ್ಲಿ 3 ವಿಭಾಗಗಳಿವೆ. ಒಂದನೇಯ ವಿಭಾಗದವರು ಕಟ್ಟರ್ ವಾದಿಗಳು. ಇವರು “ಗ್ರೇಟರ್ ಇಸ್ರೇಲ್” ನ ಪ್ರತಿಪಾದಕರು. ಸುಮಾರು 2000 ವರ್ಷಗಳ ಹಿಂದೆ ಅಂದರೆ, ಕ್ರಿಸ್ತಪೂರ್ವ ಕಾಲಘಟ್ಟದಲ್ಲಿ ತಮ್ಮ ವಶ ಹೊಂದಿದ್ದ ಜಗತ್ತಿನ ಎಲ್ಲ ಭೂಭಾಗವನ್ನು ಹೇಗಾದರೂ ಮಾಡಿ ವಶಪಡಿಸಿಕೊಳ್ಳಬೇಕೆಂಬುದು ಇವರ ಉದ್ದೇಶ. ಯುರೋಪಿನ ಕೆಲಭಾಗಗಳು, ಈಜಿಪ್ಟ್, ಸೌದಿ, ಇರಾನ್, ಇರಾಕಿನ ಭಾಗಗಳು ಈ ಗ್ರೇಟರ್ ಇಸ್ರೇಲ್ ಪರಿಕಲ್ಪನೆಯ ವ್ಯಾಪ್ತಿಯಲ್ಲಿ ಬರುತ್ತದೆ. ಈ ಎಲ್ಲ ಪೂರ್ವಾಡಳಿತದ ಪ್ರದೇಶಗಳನ್ನು ಗೆದ್ದು ರಾಷ್ಟ್ರ ಸ್ಥಾಪನೆ ಈ ಕಟ್ಟರ್ ವಾದಿಗಳ ಉದ್ದೇಶ. ಸದ್ಯಕ್ಕೆ ಇಸ್ರೇಲ್ ನಲ್ಲಿರುವ ಯಹೂದಿಗಳು ಇವರೇ. ಎಲ್ಲ ಧರ್ಮಗಳಲ್ಲಿರುವ ಕಟ್ಟರ್ ವಾದಿಗಳಂತೆಯೇ, ಇವರೂ ಕೂಡ ಜೀವ ಹೋದರೂ ತೊಂದರೆಯಿಲ್ಲ, ಬೇಕಾದುದನ್ನು ಪಡೆದೇ ತೀರಬೇಕೆಂಬ ಹಠ. ಹಾಗಾಗಿಯೇ ಕಾಲಕಾಲದ ಶಾಂತಿ ಒಪ್ಪಂದಗಳು ಹಳ್ಳಹಿಡಿದು, ಎರಡೂ ಕಡೆಯವರು ಬದುಕಲಾರದ ಸ್ಥಿತಿ ಸೃಷ್ಟಿಯಾಗಿರುವುದು. ಎರಡನೇಯ ವರ್ಗ ಸೌಮ್ಯವಾದಿಗಳದ್ದು. ಇವರು ಸಂಘರ್ಷದ ಪರವಿಲ್ಲ. ತುಸು ಹೆಚ್ಚೇ ವ್ಯಾಪಾರಿ ಮನಸ್ಥಿತಿಯವರು. ಯುರೋಪ್, ಅಮೇರಿಕಾದ ರಾಜಕೀಯ, ಆರ್ಥಿಕ, ಮಾಧ್ಯಮ ಕ್ಷೇತ್ರಗಳಲ್ಲಿ ಪ್ರಭಾವಿಯಾಗಿದ್ದಾರೆ. ಇವರಲ್ಲಿ ಒಂದು ಸಣ್ಣ ವರ್ಗದವರು ತಮ್ಮ ದೇಶಕ್ಕೆ ಬೇಕಾದ ಆರ್ಥಿಕ, ತಾಂತ್ರಿಕ, ನೈತಿಕ ಸಹಕಾರವನ್ನು ನೀಡುತ್ತಾರೆ. ಇನ್ನು 3ನೇ ವರ್ಗದವರ ವಾದ ಕುತೂಹಲಕಾರಿಯಾಗಿದೆ. ಜಗತ್ತಿನ ಯಹೂದಿಗಳಲ್ಲಿ ಈ ವಾದದವರೇ ಹೆಚ್ಚಿರುವುದು. ಈ 3ನೇಯ ವರ್ಗದವರು ಧಾರ್ಮಿಕ ಅನುಸರಣೆ ಮತ್ತು ಸ್ಥಳಗಳ ಸಂದರ್ಶನ ಹೊರತುಪಡಿಸಿ, ಬೇರಾವುದೇ ವಿಚಾರದಲ್ಲಿ ಇಸ್ರೇಲಿನ ಪ್ರಸ್ತುತ ರಾಜಕೀಯದೊಂದಿಗೆ ಇಲ್ಲ. ಇವರ ವಾದ ವಿಶೇಷವಾಗಿದೆ. ಮೂಲತಃ ಯಹೂದಿಗಳು ಪ್ರವಾದಿ ಮೂಸಾ( ಮೊಸಸ್)ರ ಅನುಯಾಯಿಗಳು. ಪ್ರವಾದಿ ಮೂಸಾರಿಗೆ (ಮೊಸಸ್ ) ತೂರ್ ಎಂಬ ಪರ್ವತದ ಮೇಲೆ ದೇವ ಸಂಪರ್ಕವೇರ್ಪಡುತ್ತದೆ. ತದನಂತರ ಅವರಿಗೆ ತೌರಾತ್ ಎಂಬ ದೇವಗ್ರಂಥದ ಅವತೀರ್ಣವಾಗುತ್ತದೆ. ಆ ಗ್ರಂಥದಲ್ಲಿ, ಹುಟ್ಟು- ಸಾವು- ಬದುಕು- ಬದ್ಧತೆ-ಕರ್ತವ್ಯ- ಧರ್ಮ- ದೇವರುಗಳ ವಿಚಾರ ಸೇರಿದಂತೆ ಬಹಳಷ್ಟು ವಿಚಾರಗಳಿವೆ. ಇವೆಲ್ಲವುದರ ಜೊತೆಗೆ ಧರ್ಮಗ್ರಂಥ ತೌರಾತ್ ನಲ್ಲಿ ಲೋಕಾಂತ್ಯದವರೆಗಿನ ಭವಿಷ್ಯವಾಣಿಯೂ ಇದೆ. ಈ ಭವಿಷ್ಯವಾಣಿಯಲ್ಲಿ, ಇಡೀ ಜಗತ್ತು ಇವರನ್ನು ನಾನಾ ಕಾರಣಗಳಿಗಾಗಿ ಶತಶತಮಾನಗಳವರೆಗೆ ಕಾಡುತ್ತದೆ. ಯಹೂದಿಗಳ ಮೇಲಿನ ದೌರ್ಜನ್ಯ ಅಧಿಕವಾದಾಗ, ಇವರ ಅಧಿಕಾರ ಜಗತ್ತಿನ ಮೇಲೆ ಪ್ರತಿಷ್ಠಾಪಿಸಲು ಮತ್ತು ದೌರ್ಜನ್ಯಗೈದವರ ಮೇಲೆ ಸೇಡು ತೀರಿಸಿಕೊಳ್ಳಲು ಇವರ ಪಾಲಿನ ವಿಮೋಚಕನೊಬ್ಬನು ಧರೆಗವತರಿಸುತ್ತಾನೆ ಎಂದಿದೆ. ಈ 3ನೇಯ ವರ್ಗದ ಬಹುಸಂಖ್ಯಾತ ಯಹೂದಿಗಳಿಗೆ ಈ ಭವಿಷ್ಯವಾಣಿಯ ಮೇಲೆ ಅಪಾರ ವಿಶ್ವಾಸವಿದೆ. ಅವರ ವಾದವೇನೆಂದರೆ, ಹೇಗೂ ತಮ್ಮ ಪಾಲಿನ ರಕ್ಷಕ ಸದ್ಯೋಭವಿಷ್ಯದಲ್ಲಿ ಬರುತ್ತಿರುವಾಗ ಮತ್ತು ವಿರೋಧಿಗಳನ್ನು ಸಂಹರಿಸಲಿರುವಾಗ, ಸುಮ್ಮನೆ ಅದಕ್ಕಿಂತ ಮುಂಚೆ ಸಂಘರ್ಷ ನಡೆಸಿ ಸಾಯುವುದು ಮತ್ತು ರಾಷ್ಟ್ರ ಸ್ಥಾಪನೆ ಮಾಡಿ ರಕ್ತಪಾತವಾಗುವುದೇಕೆ? ..ಇದು ಬಹುಸಂಖ್ಯಾತ ವಿದೇಶಗಳಲ್ಲಿ ನೆಲೆಸಿರುವ ಯಹೂದಿಗಳ ವಾದ ಮತ್ತು ಪ್ರೆಶ್ನೆ. .ಹೀಗೆ ರಾಷ್ಟ್ರ, ಧರ್ಮ, ರಾಜಕೀಯದ ಕುರಿತಾಗಿ ಯಹೂದಿಗಳಲ್ಲಿ ಇತರೆಲ್ಲ ಸಮುದಾಯಗಳಲ್ಲಿರುವುದಕ್ಕಿಂತ ಹೆಚ್ಚು ಭಿನ್ನಮತವಿದೆ.

ಇನ್ನು ಯಹೂದಿಗಳ ಚರ್ಯೆ ಮತ್ತು ಚರಿತ್ರೆಯ ಬಗ್ಗೆ ಹೇಳುವುದಾದರೆ, ಇವರು ಜಗತ್ತಿನ ಇತರೆಲ್ಲ ಸಮುದಾಯದವರಿಗಿಂತ ಹೆಚ್ಚು ಶ್ರೇಷ್ಠತೆಯ ವ್ಯಸನಿಗಳು.. ತಮ್ಮನ್ನು ತಾವು ಅನುಗ್ರಹೀತರು ಮತ್ತು ಶ್ರೇಷ್ಠರು ಎಂಬ ಸದಾಕಾಲದ ಇವರ ಪ್ರತಿಪಾದನೆ ಇವರನ್ನು ಶತಮಾನಗಳ ಕಾಲ ಕಷ್ಟಕ್ಕೀಡುಮಾಡಿದೆ. ಜಗತ್ತಿನಲ್ಲಿ ದೇವಗ್ರಂಥವನ್ನು ಪಡೆದ ಮೊದಲ ಜನಾಂಗ ಎಂಬ ಹಿರಿಮೆ ಇವರದ್ದು. ಅದನ್ನು ಬಲವಾಗಿ ಇವರು ಪ್ರತಿಪಾದಿಸುತ್ತಾರೆ ಕೂಡ.. ಧರ್ಮಗ್ರಂಥ ತೌರಾತಿನ ನಂತರದ ಕಾಲಘಟ್ಟಗಳಲ್ಲಿ ಅವತೀರ್ಣಗೊಂಡ ಗ್ರಂಥಗಳಾದ ಝಬೂರ್, ಬೈಬಲ್ , ಕುರ್ ಆನ್ ಗಳನ್ನು ಇವರು ಒಪ್ಪುವುದಿಲ್ಲ..ಸನಾತನ ಭಾರತೀಯ ಗ್ರಂಥಗಳು, ಸಮಾಜ ಸುಧಾರಕರ ವಾಣಿ-ವಚನಗಳು ಸೇರಿದಂತೆ, ಜಗತ್ತಿನ ಯಾವುದೇ ಧರ್ಮ ಶಾಖೆಯ ಯಾವ ಗ್ರಂಥವನ್ನೂ ಯಹೂದಿಗಳು ಒಪ್ಪುವುದಿಲ್ಲ. ಮಾತ್ರವಲ್ಲ ಸಮೀಕರಿಸುವುದೂ ಇಲ್ಲ. ಜಗತ್ತಿನ ಧಾರ್ಮಿಕ, ರಾಜಕೀಯ, ಸಾಮಾಜಿಕ, ಆರ್ಥಿಕತೆಯ ನೈಜ ನೇತಾರರು ತಾವೆನ್ನುವುದು ಇವರ ವಾದ. ಯಹೂದಿಗಳು ಯಾವತ್ತೂ ಅನ್ಯರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳುವುದಿಲ್ಲ.. ಜಗತ್ತಿನ ಇತರ ಜನಾಂಗಗಳಿಗಿಂತ ಪ್ರತ್ಯೇಕವಾಗಿದ್ದು, ಪ್ರತ್ಯಕ್ಷ ಪರೋಕ್ಷ ಆಡಳಿತದ ಬಯಕೆ ಮತ್ತು ಹಸ್ತಕ್ಷೇಪಗಳಿಂದಾಗಿ ಜಗತ್ತಿನ ಹೆಚ್ಚುಕಡಿಮೆ ಎಲ್ಲ ದೇಶದ ಆಡಳಿತಗಾರರು ಮತ್ತು ಧರ್ಮದವರು ಇವರೊಂದಿಗೆ ಸಂಘರ್ಷ ನಡೆಸಿದ್ದಾರೆ. ಕ್ರಿಸ್ತಪೂರ್ವ 1400 ವರ್ಷಗಳಿಂದ ಆರಂಭವಾದ ಯಹೂದಿಗಳ ಮೇಲಿನ ದಾಳಿ ಬಹುಶಃ ಇಂದಿನವರೆಗೆ ನಿಂತಿಲ್ಲ. ಇತಿಹಾಸದುದ್ದಕ್ಕೂ, ಬರೀ ಇವರ ಮೇಲಿನ ಪ್ರತಿಕ್ರಿಯೆಯನ್ನು ಅವಲೋಕಿಸುತ್ತಾ ಹೋದರೆ ಯಹೂದಿಗಳು ದಮನಿತರಂತೆ ಕಾಣುತ್ತಾರಾದರೂ, ಪ್ರತಿಕ್ರಿಯೆಗಳಿಗೆ ಕಾರಣವಾದ ಕ್ರಿಯೆಗಳನ್ನು ಅಧ್ಯಯನ ಮಾಡಿದರೆ ಯಹೂದಿಗಳು ತಪ್ಪಿತಸ್ಥರಂತೆ ಕಾಣುತ್ತಾರೆ. ಆರಂಭದ ಕಾಲದಲ್ಲಿ ಸಿರಿಯನ್ನರು ಇವರ ಮೇಲೆ ಯುದ್ಧ ಮಾಡಿ ತಮ್ಮ ನೆಲದಿಂದ ಹೊರಗಟ್ಟುತ್ತಾರೆ. ನಂತರ ಬ್ಯಾಬಿಲೋನಿಯಾದವರು ಸಂಘರ್ಷ ನಡೆಸಿ ತಮ್ಮ ನೆಲವನ್ನು ಯಹೂದಿ ಮುಕ್ತವಾಗಿಸುತ್ತಾರೆ. ಗ್ರೀಕಿನವರೊಂದಿಗೂ ಕೂಡ ಯಹೂದಿಗಳು ಯುದ್ಧವನ್ನು ಮಾಡಿ ಕಷ್ಟ ಮೈಮೇಲೆ ಎಳೆದುಕೊಳ್ಳುತ್ತಾರೆ. ಕ್ರಿಸ್ತಪೂರ್ವ 578 ರಲ್ಲಿ ದಾಳಿ ಮಾಡಿದ ಗ್ರೀಕರು ಇವರ ಜೆರುಸಲೇಮಿನ ಕೇಂದ್ರ ಪ್ರಾರ್ಥನಾ ಗೃಹವನ್ನು ಧ್ವಂಸ ಮಾಡುತ್ತಾರೆ. 150 ವರ್ಷಗಳ ನಂತರ ಇರಾನಿನ ಚಕ್ರವರ್ತಿಯ ಸಹಾಯದಿಂದ ಮತ್ತೆ ಧ್ವಂಸಗೊಂಡದ್ದನ್ನು ಯಹೂದಿಗಳು ಮರುನಿರ್ಮಾಣ ಮಾಡುತ್ತಾರೆ. ಹೀಗೆ ಮುಂದಿನ ಬಹಳ ವರ್ಷಗಳ ಕಾಲ ತಮ್ಮದೇ ಸಾಮಾಜಿಕ ಶೈಲಿಯನುಸಾರ ರೋಮನ್ ಆಳ್ವಿಕೆಯಡಿಯಲ್ಲಿ ಯಹೂದಿಗಳಿರುತ್ತಾರೆ. ಆಳ್ವಿಕೆ ರೋಮನ್ನರದ್ದಾದರೂ ಪ್ರತ್ಯಕ್ಷ ಪರೋಕ್ಷ ಪ್ರಭಾವ ಯಹೂದಿಯರದ್ದಾಗಿತ್ತು.

ಯೇಸು ಕ್ರಿಸ್ತರ ಜನ್ಮವಾಗುತ್ತಿದ್ದಂತೆ, ರೋಮನ್ ಸಾಮ್ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಯಿತು. ಜನರು ತಂಡೋಪತಂಡವಾಗಿ ಯೇಸುಕ್ರಿಸ್ತರ ಪ್ರವಚನದ ಆಕರ್ಷಣೆಗೆ ಒಳಗಾದರು. ಕ್ರೈಸ್ತ ಧರ್ಮದ ಅನುಯಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುವುದನ್ನು ಕಂಡು ಆತಂಕಿತರಾಗಿ, ಯಹೂದಿಗಳು ತಮ್ಮ ಪ್ರಭಾವ ಬಳಸಿ ಕ್ರಿ.ಶ 37 ರಲ್ಲಿ ರೋಮನ್ ಚಕ್ರವರ್ತಿಯನ್ನು ಪುಸಲಾಯಿಸಿ, ಯೇಸುಕ್ರಿಸ್ತರನ್ನು ಶಿಲುಬೆಗೇರಿಸುವಂತೆ ಮಾಡುತ್ತಾರೆ. ಈ ಕಾರಣದಿಂದಾಗಿ ರೋಮನ್ ಆಡಳಿತದ ಅಡಿಯಲ್ಲಿ ಕ್ರೈಸ್ತರು ಮತ್ತು ಯಹೂದಿಗಳು ಆಗಾಗ ಸಣ್ಣಪುಟ್ಟ ಸಂಘರ್ಷ ನಡೆಸುತ್ತಿರುತ್ತಾರೆ. ಕ್ರೈಸ್ತರು ಯಹೂದಿಗಳ ಒಂದು ಶಾಖೆ ಎಂದು ಬಗೆದು, ಹೊಡೆದಾಡಿಕೊಂಡಿರಲಿ ಎಂದು ರೋಮನ್ನರು ಸುಮ್ಮನಿರುತ್ತಾರೆ. ಆದರೆ ಕ್ರಿ.ಶ 70 ನೇ ಇಸವಿಯಲ್ಲಿ ರೋಮನ್ನರ ಆಡಳಿತದ ವಿರುದ್ದ ಯಹೂದಿಗಳು ದಂಗೆ ಏಳುತ್ತಾರೆ. ಇದರಿಂದ ಸಿಟ್ಟಿಗೆದ್ದ ಆಗಿನ ರೋಮನ್ ಸೇನಾ ಜನರಲ್ , ತನ್ನ ಬಲಾಢ್ಯ ಸೇನೆಯ ಮೂಲಕ ಜೆರುಸಲೇಂ ಮೇಲೆ ದಾಳಿ ಮಾಡಿ ಒಂದೇ ದಿನ 133000 ಯಹೂದಿಗಳನ್ನು ಕೊಲ್ಲುತ್ತಾನೆ. ಜೊತೆಗೆ ಗ್ರೀಕರಿಂದ ಧ್ವಂಸಗೊಂಡು ಮತ್ತೆ ಸ್ಥಾಪಿತವಾದ ಪ್ರಾರ್ಥನಾ ಗೃಹ ಸೆಕೆಂಡ್ ಟೆಂಪಲನ್ನು ಸಂಪೂರ್ಣ ನೆಲಸಮಗೈಯುತ್ತಾನೆ. ಅಂದು ನೆಲಸಮಗೊಂಡ ಆ ಪ್ರಾರ್ಥನಾ ಗೃಹ ಇಂದಿಗೂ ಹಾಗೆಯೇ ಬಿದ್ದುಕೊಂಡಿದೆ. ಇತಿಹಾಸ ಹಿಂದೆಂದೂ ಕಾಣದ ಈ ಮಹಾ ಮಾರಣಹೋಮ ನಡೆಸಿದ ನಂತರ, ಭವಿಷ್ಯದಲ್ಲಿ ಯಾವುದೇ ಯಹೂದಿ ಜೆರುಸಲೆಂ ಸುತ್ತಮುತ್ತಲಿನ ಸ್ಥಳಗಳಲ್ಲಿ ತನ್ನ ಕಣ್ಣಿಗೆ ಸಿಕ್ಕರೆ ಸಾವು ಖಚಿತ ಎಂದೂ ಎಚ್ಚರಿಸುತ್ತಾನೆ. ಹೀಗೆ ಕ್ರಿ.ಶ 70 ರಲ್ಲಿ ಯಹೂದಿಗಳು ತಮ್ಮ ತಾಯ್ನೆಲವನ್ನು ಬಿಟ್ಟು ಜೇರುಸಲೆಂನಿಂದ ಹೊರಟು ಸೌದಿ ಅರೇಬಿಯ, ಯೂರೋಪ್, ನಂತರ ಅಮೇರಿಕಾಗಳಲ್ಲಿ ಹಂಚಿಹೋದರು. ಬಹುತೇಕರು ಯೂರೋಪಿನಲ್ಲಿ ಆಶ್ರಯ ಪಡೆದರು. ಆದರೆ ಕ್ರಿ.ಶ 305ರಲ್ಲಿ ನಡೆದ ಯಹೂದಿಗಕಳ ಪಾಲಿನ ಆಘಾತಕಾರಿ ವಿದ್ಯಮಾನವೊಂದರಲ್ಲಿ, ರೋಮನ್ ಚಕ್ರವರ್ತಿ ಒಂದನೇ ಕಾನ್ಸ್ ಟಾಂಟೈನ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದುತ್ತಾನೆ. ಅವನೊಂದಿಗೆ ಅವನ ಸಮಸ್ತ ವಿಶಾಲ ಸಾಮ್ರಾಜ್ಯವೂ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತದೆ. ಈ ಬೆಳವಣಿಗೆಯಿಂದ ಯೂರೋಪ್ ನಲ್ಲಿಯೂ ಯಹೂದಿಗಳ ಮೇಲೆ ವ್ಯಾಪಕವಾದ ಹಿಂಸೆ ಆರಂಭವಾಗುತ್ತದೆ. ಯೇಸುಕ್ರಿಸ್ತನ ಹಂತಕರು ಎಂಬ ಅಪವಾದ ಹೊರಿಸಿ ಯೂರೋಪಿಯನ್ನರು, ಇವರನ್ನು ಶತಮಾನಗಳ ಕಾಲ ಕಾಡುತ್ತಾರೆ.

ಕ್ರಿ.ಶ 70 ನೇ ಇಸವಿಯ ಆರಂಭಿಕ ವಲಸೆಯಲ್ಲಿ ಯಹೂದಿಗಳ ಬಹುದೊಡ್ಡ ಗುಂಪು ಅರೇಬಿಯಾದ ಮಕ್ಕಾ ಮತ್ತು ಮದೀನಾಗಳಲ್ಲಿ ಹೋಗಿ ನೆಲೆಯಾಗಿತ್ತು. ಇವರಿಗೂ ಮತ್ತು ಮಕ್ಕಾದ ಅರಬ್ಬರಿಗೂ ಆಗಾಗ ಜಗಳಗಳಾಗುತ್ತಿದ್ದವು. ಆ ಕಾಲದ ಅರಬ್ಬರು ಬಹುದೇವಾರಾಧಕರಾಗಿದ್ದರು. ಇವರ ಬಹುದೇವಾರಾಧನೆಯನ್ನು ಯಹೂದಿಗಳು ವಿಪರೀತ ಹಿಯಾಳಿಸುತ್ತಿದ್ದರು. ಅದಕ್ಕೆ ಪ್ರತಿಯಾಗಿ ದೈಹಿಕವಾಗಿ ಬಲಾಢ್ಯರಾಗಿದ್ದ ಅರಬ್ಬರು ಯಹೂದಿಗಳಿಗೆ ಬಹಳ ತೊಂದರೆ ಕೊಡುತ್ತಿದ್ದರು. ಪ್ರವಾದಿ ಪೂರ್ವಕಾಲದ ಅರಬ್ಬರು ತುಸು ಹೆಚ್ಚೇ ಅನಾಗರಿಕರು. ಅವರೊಂದಿಗೆ ಜಗಳವಾದಾಗಲೆಲ್ಲ” ನಿಮ್ಮ ಆಟ ಹೆಚ್ಚು ದಿನ ನಡೆಯದು. ಇನ್ನು ಬೆರಳೆಣಿಕೆಯ ವರ್ಷದಲ್ಲಿ ನಮ್ಮ ಪಾಲಿನ ದೇವದೂತ ಭೂಮಿಗೆ ಬರುತ್ತಾನೆ. ಆಗ ಗೊತ್ತಾಗುತ್ತದೆ, ನಾವು ಯಾರು ಅಂತ” ಎಂದು ಅರಬ್ಬರಿಗೆ ಹೆದರಿಸುತ್ತಿದ್ದರು. ಧರ್ಮಗ್ರಂಥ ತೌರಾತ್ ನಲ್ಲಿ ಸರಿಯಾಗಿ 6 ನೇ ಶತಮಾನದಲ್ಲಿ ಅರೇಬಿಯಾ ಮಣ್ಣಿನಲ್ಲಿ ದೇವದೂತನೊಬ್ಬ ಅವತರಿಸುವ ಸುಳಿವು ನೀಡಲಾಗಿತ್ತು. ಯಹೂದಿಯರು ಆ ದೇವದೂತ ಉಚ್ಚ ಕುಲದವರಾದ ತಮ್ಮಲ್ಲಿಯೇ ಹುಟ್ಟುತ್ತಾನೆ ಎಂದು ಪ್ರಬಲವಾಗಿ ನಂಬಿದ್ದರು. ಯಹೂದಿಯರಿಗೆ ಹೋಲಿಸಿದರೆ ಅರಬ್ಬರು ವಿದ್ಯೆಯಿಂದಾಗಲಿ, ಜ್ಞಾನದಿಂದಾಗಲಿ ಅವರಿಗೆ ಸರಿಸಮರಾಗಿರಲಿಲ್ಲ. ತಮಗಿಂತ ಕೆಳಮಟ್ಟದ ಜನಾಂಗದಲ್ಲಿ ದೇವದೂತ ಬರಲು ಸಾಧ್ಯವೇ ಇಲ್ಲ ಎಂಬುದು ಯಹೂದಿಗಳ ಪ್ರಬಲ ನಂಬಿಕೆಯಾಗಿತ್ತು.

ಕ್ರಿ.ಶ 571 ರಲ್ಲಿ ಮಕ್ಕಾದಲ್ಲಿ ಪ್ರವಾದಿ ಮೊಹಮ್ಮದ್ ಆಸಿಫ್ ಅಲಿ ಜರ್ದಾರಿ ( ಸ) ರವರ ಜನನವಾಯಿತು. ತಮ್ಮ 40 ನೇ ವಯಸ್ಸಿನಲ್ಲಿ ಅವರಿಗೆ ದೇವ ಸಂದೇಶ ಲಭಿಸಲಾರಂಭಿಸಿದಾಗ, ಮಕ್ಕಾದ ಅರಬ್ಬರು ಪ್ರವಾದಿಗೆ ಇನ್ನಿಲ್ಲದ ಕಾಟ ಕೊಡಲು ಆರಂಭಿಸಿದರು. ಈ ಹೊತ್ತಿನಲ್ಲಿ ಮಕ್ಕಾದ ಅರಬರೊಂದಿಗೆ ಸೇರಿದ ಯಹೂದಿಗಳು ಪ್ರವಾದಿಯವರಿಗೆ ವಿಪರೀತ ಹಿಂಸೆ ನೀಡಿದರು. ಪ್ರವಾದಿಯವರಿಗೆ ಅವತೀರ್ಣಗೊಳ್ಳುತ್ತಿದ್ದ ದೇವವಾಣಿಯನ್ನು ಲೇವಡಿ ಮಾಡುತ್ತಿದ್ದರು. ಕೆಲವು ಕುರ್ ಆನ್ ಸೂಕ್ತಗಳಿಗೆ ಪರ್ಯಾಯಾರ್ಥವನ್ನು ಕಲ್ಪಿಸಿ ಜನರನ್ನು ತಪ್ಪುದಾರಿಗೆಳೆಯುತ್ತಿದ್ದರು. ಇವರಿಂದ ಪ್ರೇರಿತರಾದ ಅರಬ್ಬರು ಪ್ರವಾದಿಯನ್ನು ಮೋಸಗಾರ, ಜಾದೂಗಾರ ಎಂದು ಕರೆಯಲಾರಂಭಿಸಿದರು. ಇವರ ನಿರಂತರವಾದ ಕಾಟ ತಡೆಯಲಾರದೆ, ಪ್ರವಾದಿಯವರು ಮತ್ತು ಅವರ ಸಂಗಡಿಗರು ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋಗುತ್ತಾರೆ. ಇದನ್ನು ಇಸ್ಲಾಮೀ ಇತಿಹಾಸದ “ಹಿಜ್ರತ್” ಎನ್ನುತ್ತಾರೆ. ಈ ವಲಸೆಯ ದಿನದಿಂದಲೇ ಇಸ್ಲಾಮಿನ ಹಿಜರಿ ಕ್ಯಾಲೆಂಡರ್ ಆರಂಭವಾಗುತ್ತದೆ. ಅತ್ತ ಮದೀನಾದ ಸುತ್ತಮುತ್ತಲೂ ಯಹೂದಿಗಳ ಮೂರು ಪ್ರಬಲ ಗೋತ್ರಗಳಾದ ಬನೂ ಕೌನಕಾ, ಬನೂ ನಝೀರ್, ಬನೂ ಖುರೈಜಾ, ಸುಸಜ್ಜಿತ ಕೋಟೆಗಳನ್ನು ಕಟ್ಟಿಕೊಂಡು ವಾಸವಾಗಿದ್ದವು. ಮದೀನಾದ ಸ್ಥಳೀಯರು ಮತ್ತು ಯಹೂದಿಗಳ ನಡುವೆ ಆಗಾಗ ಸಣ್ಣ ಪ್ರಮಾಣದ ಯುದ್ಧಗಳು ನಡೆಯುತ್ತಿದ್ದವು. ಪ್ರವಾದಿ ಮೊಹಮ್ಮದರು ಮದೀನಾಕ್ಕೆ ಬಂದ ಮೊದಲ ವರ್ಷವೇ ಯಹೂದಿಗಳೊಂದಿಗೆ ಸಂಘರ್ಷ ಕೊನೆಗಾಣಿಸುವ ನಿಟ್ಟಿನಲ್ಲಿ ಶಾಂತಿ ಒಪ್ಪಂದ ಮಾಡಿಕೊಂಡು, ಮದೀನಾದಲ್ಲಿ ಶಾಂತಿ ನೆಲಸುವಂತೆ ಮಾಡುತ್ತಾರೆ. ಈ ಒಪ್ಪಂದದ ಪ್ರಕಾರ ಒಂದೊಮ್ಮೆ ಮಕ್ಕಾದವರು ಸೇರಿದಂತೆ ಹೊರಗಿನ ಯಾರೇ ಮದೀನಾದ ಮೇಲೆ ದಾಳಿ ಮಾಡಿದರೆ, ಯಹೂದಿಗಳು ಮತ್ತು ಮುಸಲ್ಮಾನರು ಸಂಘಟಿತರಾಗಿ ಅವರ ವಿರುದ್ಧ ಹೋರಾಡುವುದಾಗಿತ್ತು. ಹೀಗೆ ಪ್ರವಾದಿಯ ಆಗಮನದಿಂದ ಮದೀನಾ ಒಗ್ಗಟ್ಟಿನ ಬದುಕಿನ ವೇದಿಕೆಯಾಯಿತು. ಮೊದಲು ನಖಶಿಖಾಂತ ವಿರೋಧಿಸಿದರೂ, ನಂತರದ ದಿನಗಳಲ್ಲಿ ಪ್ರವಾದಿಯ ಸಿದ್ಧಾಂತಕ್ಕೆ ಆಕರ್ಷಿತರಾಗಿ ಮಕ್ಕಾದಿಂದ ಮತ್ತು ಅರೇಬಿಯಾದ ಇತರ ಭಾಗಗಳಿಂದ ಜನರು ತಂಡೋಪತಂಡವಾಗಿ ಮದೀನಾಕ್ಕೆ ಬಂದು ಪ್ರವಾದಿಯ ಅನುಯಾಯಿಗಳಾದರು. ಇತ್ತ ಯಹೂದಿಗಳಿಂದ ಹೊರತಾದ ಸಮಸ್ತ ಮದೀನದ ( ಆಗಿನ ಮದೀನಾದ ಹೆಸರು ಯಸ್ರೀಬ್) ಇತರ ಗೋತ್ರಗಳು ಪ್ರವಾದಿ ಮೊಹಮ್ಮದರ ಹಿಂಬಾಲಕರಾದರು. ಆದರೆ ದಿನದಿಂದ ದಿನಕ್ಕೆ ಪ್ರವಾದಿಯವರ ಪ್ರಭಾವ ಮದೀನಾದಲ್ಲಿ ಹೆಚ್ಚುತ್ತಿದ್ದಂತೆ, ಒಪ್ಪಂದದ ಷರತ್ತುಗಳನ್ನು ಯಹೂದಿಗಳು ಉಲ್ಲಂಘಿಸಿ, ಮಕ್ಕಾದ ಖುರೈಷಿ ಪಂಗಡದ ಅರಬ್ಬರಿಗೆ ಮದೀನಾದ ಮುಸ್ಲಿಮರ ಮೇಲೆ ದಾಳಿಗಳಿಗೆ ಪ್ರಚೋದಿಸಿದರು. ಹೀಗೆ ಯಹೂದಿಗಳ ಮಸಲತ್ತು ಮತ್ತು ಪ್ರವಾದಿ ಕುಟುಂಬದವನಾದ ಅಬೂಜಹಲನ ಆಕ್ರಮಣಕಾರಿ ಮನೋಭಾವದಿಂದ ಅರಬ್ಬರ ಬಹುದೊಡ್ಡ ಪಂಗಡವಾದ ಕುರೈಷರು, ಕೇವಲ 313 ಜನ ಪ್ರವಾದಿ ಸಂಗಡಿಗರ ಮೇಲೆ ಮದೀನಾ ಹೊರವಲಯದ ಬದ್ರ್ ಎಂಬ ಸ್ಥಳದಲ್ಲಿ ಆಕ್ರಮಣ ಮಾಡುತ್ತಾರೆ. ಇದು ಇಸ್ಲಾಮಿ ಇತಿಹಾಸದ ಮೊದಲ ಯುದ್ಧ. ಯುದ್ಧದಲ್ಲಿ ದಾಳಿಗೆ ಬಂದ ಮಕ್ಕಾದವರು ಸೋಲುತ್ತಾರೆ. ಈ ಯುದ್ಧಕ್ಕೆ ಮಕ್ಕಾದವರ ಆಕ್ರಮಣಕಾರಿ ಮನೋಭಾವ ಎಷ್ಟು ಕಾರಣವೋ, ಅಷ್ಟೇ ಕಾರಣ, ಮದೀನಾದ ಯಹೂದಿಗಳ ಪರೋಕ್ಷ ಬೆಂಬಲವೂ ಆಗಿತ್ತು. ಈ ಕಾರಣದಿಂದ ಯಹೂದಿಗಳ ಬನೂ ಕೌನಕಾ ಎಂಬ ಗೋತ್ರದವರನ್ನು ಮದೀನಾದಿಂದ ಓಡಿಸಲಾಯಿತು. ಎರಡು ವರ್ಷಗಳ ನಂತರ ಬದ್ರ್ ಯುದ್ಧದ ಸೋಲಿಗೆ ಪ್ರತೀಕಾರ ತೀರಿಸಲು ಮದೀನಾ ಸಮೀಪದ ಉಹುದ್ ನಲ್ಲಿ ಬಲಾಢ್ಯ ಸೇನೆಯೊಂದಿಗೆ ಪ್ರವಾದಿ ಮತ್ತು ಅವರ ಸಂಗಡಿಗರ ಮೇಲೆ ಮತ್ತೆ ಮಕ್ಕಾದ ಅರಬ್ಬರು ದಾಳಿ ಮಾಡುತ್ತಾರೆ. ಯುದ್ಧದಲ್ಲಿ ಉಭಯ ಕಡೆಯಲ್ಲೂ ಸಾಕಷ್ಟು ಸಾವುನೋವುಗಳಾಗಿ, ಸೋಲು ಗೆಲುವುಗಳ ಸ್ಪಷ್ಟತೆ ಮೂಡದೇ ಯುದ್ಧ ಮುಗಿಯುತ್ತದೆ. ಅಬ್ದುಲ್ಲಾ ಬಿನ್ ಉಬೈ ಎಂಬ ಮುಸ್ಲಿಮ್ ಕಪಟಿಯೊಬ್ಬನನ್ನು ಬಳಸಿಕೊಂಡು ಯಹೂದಿಗಳು ಈ ಯುದ್ಧದಲ್ಲೂ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿ ಮಕ್ಕಾದ ಅರಬ್ಬರಿಗೆ ಪರೋಕ್ಷ ಸಹಕಾರ ನೀಡಿದ್ದರು. ಯುದ್ಧದ ನಂತರ ಮದೀನಾದ ಮುಸ್ಲಿಮರು ತಮ್ಮ ಮೇಲೆ ಆಕ್ರಮಣಕ್ಕೆ ಕುಮ್ಮಕ್ಕು ನೀಡಿದ್ದಕ್ಕಾಗಿ ಯಹೂದಿಗಳ ಇನ್ನೊಂದು ಪಂಗಡವಾದ ಬನೂ ನಝೀರ್ ಗೋತ್ರದವರನ್ನು ಮದೀನಾದಿಂದ ಹೊರಗಟ್ಟುತ್ತಾರೆ. ಬದ್ರ್ ಮತ್ತು ಉಹುದ್ ಎರಡೂ ಯುದ್ಧಗಳಲ್ಲಿ ತಮಗಾದ ಅವಮಾನದಿಂದ ಕ್ರುದ್ಧರಾಗಿದ್ದ ಮಕ್ಕಾದ ಕುರೈಷಿ ಅರಬ್ಬರು, ಈ ಬಾರಿ ಯಹೂದಿಗಳೂ ಸೇರಿದಂತೆ ಅರೇಬಿಯಾದ ಸಮಸ್ತ ಮುಸ್ಲಿಮೇತರ ಪಂಗಡಗಳೊಂದಿಗೆ ಸೇರಿ, ಭಾರೀ ಸೇನೆಯೊಂದಿಗೆ ಮದೀನಾದ ಮೇಲೆ ಆಕ್ರಮಣಕ್ಕೆ ತಯಾರಿ ನಡೆಸುತ್ತಾರೆ. ಮುಸ್ಲಿಮರು ಯಹೂದಿಗಳಿಗೆ ಒಪ್ಪಂದದ ಷರತ್ತುಗಳನ್ನು ನೆನಪಿಸಿದರೂ, ಈ ಬಾರಿ ಮದೀನಾದ ಬನೂ ಖುರೈಜಾ ಎಂಬ ಯಹೂದಿ ಪಂಗಡ ಮಕ್ಕಾದ ಅರಬ್ ಸೇನೆಯಲ್ಲಿ ನೇರವಾಗಿ ಪಾಲ್ಗೊಳ್ಳುತ್ತದೆ. ಹೀಗೆ ಅರೇಬಿಯಾ ನೆಲದ ಅಷ್ಟೂ ಪಂಗಡಗಳಿರುವ ವಿಶಾಲ ಸೇನೆ ಮದೀನಾದತ್ತ ಹೊರಡುತ್ತದೆ. ಈ ಯುದ್ಧವನ್ನು ಖಂದಕ್ ಯುದ್ಧವೆನ್ನುತ್ತಾರೆ. ಯಹೂದಿಗಳಿಂದ ಪ್ರೇರಿತರಾಗಿ ಮಕ್ಕಾದಿಂದ ದೊಡ್ಡ ಸೇನೆ ಹೊರಟಿದೆ ಎನ್ನುವ ಸುದ್ದಿಯಿಂದ ಮದೀನಾದಲ್ಲಿದ್ದವರೆಲ್ಲ ಆತಂಕಕ್ಕಿಡಾಗುತ್ತಾರೆ. ಆ ಹೊತ್ತಿನಲ್ಲಿ ಅಂತಹ ವಿಶಾಲ ಸೇನೆಯನ್ನು ಎದುರಿಸುವ ಯಾವ ಶಕ್ತಿಯೂ ಮದೀನಾದವರಿಗಿರಲಿಲ್ಲ. ಪ್ರವಾದಿಯವರು ಯುದ್ಧವನ್ನು ನಿವಾರಿಸುವ ನಿಟ್ಟಿನಲ್ಲಿ, ತಮ್ಮ ಸಂಗಡಿಗರಲ್ಲೊಬ್ಬರಾದ ಸಲ್ಮಾನ್ ಫಾರ್ಸಿಯವರ ಸಲಹೆಯಂತೆ ಮದೀನಾದ ಪ್ರವೇಶದ್ವಾರದಲ್ಲಿ 10 ಅಡಿ ಆಳವೂ, 13 ಅಡಿ ಅಗಲವೂ ಆದ, ಸುಮಾರು 1.5 ಮೈಲು ದೂರದ ಕಂದಕವನ್ನು ತೋಡುತ್ತಾರೆ. ಸಲ್ಮಾನ್ ಫಾರ್ಸಿ, ಸಕಾಲದಲ್ಲಿ ತೋರಿದ ಸಮಯಪ್ರಜ್ಞೆಯಿಂದಾಗಿ ಒಂದು ತಿಂಗಳ ಕಾಲ ಕಾದು ಕೂತರೂ, ಮದೀನಾದ ಮೇಲೆ ಅರೇಬಿಯಾದ ಇತರ ಪಂಗಡದವರಿಗೆ ದಾಳಿ ಮಾಡಲು ಆಗಲೇ ಇಲ್ಲ. ಕಾದು ಕಾದು ಬೇಸತ್ತ ಅರೇಬಿಯಾದ ಸೇನೆ ಮಕ್ಕಾಕ್ಕೆ ಹಿಂತಿರುಗಿತು. ಇತ್ತ ಮದೀನಾದ ಪ್ರವಾದಿ ಸಂಗಡಿಗರು, ಒಪ್ಪಂದ ಉಲ್ಲಂಘಿಸಿ ದ್ರೋಹಗೈದಿದ್ದಕ್ಕೆ ಖೈಬರ್ ಎಂಬಲ್ಲಿ, ಬನೂ ಖುರೈಜಾ ಯಹೂದಿಗಳ ಮೇಲೆ ದಾಳಿ ಮಾಡುತ್ತಾರೆ. ಯುದ್ಧದಲ್ಲಿ ಸೆರೆಸಿಕ್ಕ 400 ಕ್ಕೂ ಹೆಚ್ಚು ಯುದ್ಧ ಖೈದಿಗಳಿಗೆ ಒಪ್ಪಂದ ಉಲ್ಲಂಘನೆ ಮತ್ತು ಷಡ್ಯಂತ್ರಕ್ಕಾಗಿ, ಅವರದ್ದೇ ಗ್ರಂಥ ತೌರಾತಿನ ನಿಯಮದನುಸಾರ ಮರಣದಂಡನೆಯನ್ನು ನೀಡಿ, ಉಳಿದವರನ್ನು ಮದೀನಾದಿಂದ ಗಡಿಪಾರು ಮಾಡಲಾಗುತ್ತದೆ.

ಕ್ರಿ.ಶ 70 ರಲ್ಲಿ ರೋಮನ್ನರು ನಡೆಸಿದ ಯಹೂದಿಗಳ ಆ ಮಹಾ ಹತ್ಯಾಂಕಾಂಡ ಮತ್ತು ಪ್ರಾರ್ಥನಾ ಗೃಹದ ಧ್ವಂಸದ ನಂತರ ಅದೇ ಜಾಗದಲ್ಲಿ ರೋಮನ್ ಕ್ರೈಸ್ತರು ಪ್ರಾರ್ಥನಾ ಮಂದಿರ ನಿರ್ಮಿಸುತ್ತಾರೆ. ಯಹೂದಿಗಳ ಹತ್ಯಾಕಾಂಡ ನಡೆಸಿದ್ದು, ಮಾತ್ರವಲ್ಲದೇ ಸುಮಾರು 500 ವರ್ಷಗಳ ಕಾಲ ಪ್ರಾರ್ಥನಾ ಸ್ಥಳಗಳ ಸಂದರ್ಶನಕ್ಕೂ ಯಹೂದಿಗಳಿಗೆ ರೋಮನ್ನರು ಅವಕಾಶ ನೀಡಿರಲಿಲ್ಲ. ಹೀಗಾಗಿ ಸುಮಾರು 5 ಶತಮಾನ, ಯಹೂದಿಗಳಿಗೆ ತಮ್ಮ ಪುಣ್ಯಭೂಮಿಯ ದರ್ಶನಭಾಗ್ಯ ಸಿಗಲೇ ಇಲ್ಲ. ಕ್ರಿ. ಶ 637 ರಲ್ಲಿ ಇಸ್ಲಾಮಿನ ಖಲಿಫಾ ಉಮರ್ (ರ), ತಮ್ಮ ಅತ್ಯಾಪ್ತ ಯುದ್ಧ ಕಮಾಂಡರ್ ಗಳಾದ ಖಾಲಿದ್ ಬಿನ್ ವಲೀದ್ ಮತ್ತು ಅಬೂ ಉಬೈದಾ ಬಿನ್ ಜರ್ರಾರ ಮೂಲಕ ರೋಮನ್ನರನ್ನು ಸೋಲಿಸಿ ಜೆರುಸಲೇಮ್ ವಶಪಡಿಸಿಕೊಳ್ಳುತ್ತಾರೆ. ವಿಶಾಲ ರೋಮನ್ ಸಾಮ್ರಾಜ್ಯದ ಮೇಲೆ ಪ್ರಬಲ ಪ್ರಹಾರ ಮಾಡಿದರೂ, ಮೂರು ಧರ್ಮ ಶಾಖೆಗಳಿಗೆ ಸೇರಿದ ಪುಣ್ಯಭೂಮಿ ಎನ್ನುವ ನಿಟ್ಟಿನಲ್ಲಿ, ಜೆರುಸಲೇಮ್ ಮೇಲೆ ಖಲೀಫಾ ಉಮರ್ ಸೇನೆ ಯಾವುದೇ ಬಲಪ್ರಯೋಗ ಮಾಡುವುದಿಲ್ಲ. ಯುದ್ಧದಲ್ಲಿ ಗೆದ್ದರೂ ಕೂಡ, ಜೆರುಸಲೆಂ ಕುರಿತಾಗಿ ಅಲ್ಲಿನ ಪ್ರಮುಖ ಪಾದ್ರಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ.

ಒಪ್ಪಂದದ ಅನ್ವಯ, ಪ್ರವಾದಿ ಮೋಸೆಸ್ , ಪ್ರವಾದಿ ಯೇಸು ಮತ್ತು ಪ್ರವಾದಿ ಮೊಹಮದರ ಕಾರಣಕ್ಕೆ ಮುಸ್ಲಿಮರಿಗೂ ಪವಿತ್ರವಾಗಿರುವ ಹಾಗೂ ಪ್ರವಾದಿ ಮೊಹಮ್ಮದರು ದೇವ ಸಾನಿಧ್ಯಕ್ಕೆ ತೆರಳುವ ಸಂದರ್ಭದ ಆಕಾಶಾರೋಹಣಗೈದ ಸ್ಥಳ ಎಂಬ ಹಿರಿಮೆ ಹೊಂದಿರುವ ಜೆರುಸಲೇಮ್ ಮೇಲಿನ ಆಡಳಿತವು ಮುಸ್ಲಿಮರದ್ದಾಗುತ್ತದೆ. ಜಗತ್ತಿನ ಯಾವುದೇ ಕ್ರೈಸ್ತರು ಮತ್ತು ಯಹೂದಿಗಳು ತಮ್ಮ ಈ ಪುಣ್ಯಸ್ಥಳವನ್ನು ಯಾವಾಗ ಬೇಕಾದರೂ ಸಂದರ್ಶಿಸಲು ಮುಕ್ತ ಅವಕಾಶ ಕಲ್ಪಿಸುವ ಘೋಷಣೆಯನ್ನು ಖಲೀಫಾ ಉಮರ್ ಮಾಡುತ್ತಾರೆ. ಯಹೂದಿಗಳಿಗೆ 500 ವರ್ಷಗಳಿಂದ ತಾವು ನಿರ್ಬಂಧ ಹೇರಿದ ಸ್ಥಳಕ್ಕೆ ಒಪ್ಪಂದದಲ್ಲಿ ಪ್ರವೇಶ ಮುಕ್ತಗೊಳಿಸಿದ್ದು ಆ ಕಾಲದ ಕ್ರೈಸ್ತ ಮುಖಂಡರಿಗೆ ಇಷ್ಟವಾಗಲಿಲ್ಲ. ಯಹೂದಿಗಳ ಮೇಲೆ ಯೇಸುಕ್ರಿಸ್ತರನ್ನು ಕೊಂದ ಸಮುದಾಯವೆಂಬ ಸಿಟ್ಟು ಆಗಲೂ ಅಲ್ಲಿನ ಕ್ರೈಸ್ತರಿಗೆ ಇತ್ತು. ಕೆಲ ಮುಸ್ಲಮರಿಗೂ ಇದು ಸರಿಕಾಣಲಿಲ್ಲ. ಆದರೂ ಯಾವ ಒತ್ತಡಕ್ಕೂ ಮಣಿಯದ ಖಲೀಫಾ ಉಮರ್, ಆ ಸುದೀರ್ಘ ನಿರ್ಬಂಧ ತೆರವುಗೊಳಿಸಿ, ಯಹೂದಿಗಳಿಗೆ ಶತಮಾನಗಳ ನಂತರ ತಮ್ಮ ಮಾತ್ರಭೂಮಿಯನ್ನು ಮತ್ತು ಅವರ ಪುಣ್ಯಸ್ಥಳವನ್ನು ಸಂದರ್ಶಿಸುವ ಅವಕಾಶ ಮಾಡಿಕೊಟ್ಟರು. ಅದಾದ ನಂತರದ 1350 ವರ್ಷಗಳ ಕಾಲಘಟ್ಟದಲ್ಲಿ ಅದೆಷ್ಟೋ ಮುಸ್ಲಿಂ ದೊರೆಗಳು ಪ್ಯಾಲೆಸ್ಟೈನನ್ನು ಆಳಿದರು. ಮುಸ್ಲಿಂ ಮತ್ತು ಕ್ರೈಸ್ತ ಮೂಲಭೂತವಾದಿಗಳು ಅದೆಷ್ಟೇ ಒತ್ತಡ ಹೇರಿದರೂ, ಖಲಿಫಾ ಉಮರ್ ಮಾಡಿದ ಆ ಸದ್ಭಾವನೆಯ ಒಪ್ಪಂದ ಯಾವುದೇ ಮುಸ್ಲಿಂ ದೊರೆ ರದ್ದುಗೊಳಿಸಲಿಲ್ಲ. ಹಾಗಾಗಿ ಯಹೂದಿಗಳು, ಸುದೀರ್ಘ ಕಾಲದ ಮುಸ್ಲಿಂ ಆಡಳಿತಗಳಲ್ಲಿ ನಿರಾತಂಕವಾಗಿ ವಿಶ್ವದ ನಾನಾ ಭಾಗಗಳಿಂದ ಬಂದು ಜೇರುಸಲೇಮಿನ ಪುಣ್ಯಸ್ಥಳಗಳನ್ನು ಸಂದರ್ಶಿಸುತ್ತಿದ್ದರು.

ನಿಮಗೆ ಆಶ್ಚರ್ಯವಾಗಬಹುದು, ಬ್ಯಾಬಿಲೋನಿಯರು, ಗ್ರೀಕರು, ಪರ್ಶಿಯನ್ನರು, ರೋಮನ್ನರು, ಕ್ರಿಶ್ಚಿಯನ್ನರು, ಅರಬ್ಬರು, ಇರಾನಿಯರು, ಜರ್ಮನ್ನರು ಹೀಗೆ ಇವರೆಲ್ಲರೂ ತಮ್ಮ ಇತಿಹಾಸದುದ್ದಕ್ಕೂ ಯಹೂದಿಗಳೊಂದಿಗೆ ಯುದ್ಧ ಮಾಡಿದ್ದಾರೆ ಅಥವ ಅವರುಗಳು ಯಹೂದಿಗಳ ಮಾರಣಹೋಮ ನಡೆಸಿದ್ದಾರೆ. ಆದರೆ ವರ್ತಮಾನದ ಸಂಘರ್ಷ ಹೊರತುಪಡಿಸಿ, ಗತ ಇತಿಹಾಸದಲ್ಲಿ ಮುಸ್ಲಿಮರೊಂದಿಗೆ ಯಹೂದಿಗಳ ಸಂಘರ್ಷ, ಇತರ ಸಮುದಾಯದವರೊಂದಿಗೆ ತುಲನಾತ್ಮಕವಾಗಿ ಹೋಲಿಸಿದರೆ ಅತೀ ಕಡಿಮೆ. ಕೆಲ ಸಣ್ಣಪುಟ್ಟ ಪರೋಕ್ಷ ಯುದ್ಧಗಳನ್ನು ಹೊರತುಪಡಿಸಿ, ಮುಸ್ಲಿಮರು ಮತ್ತು ಯಹೂದಿಗಳ ನಡುವೆ ಯುದ್ಧವಾಗಿದ್ದು ಖೈಬರ್ ನ ಬನೂ ಖುರೈಜಾ ಗೋತ್ರದೊಂದಿಗೆ ಮಾತ್ರ. ಕೇವಲ 400 ಜನ, ಆ ಕಾಲದ ಯಹೂದಿ- ಮುಸ್ಲಿಮ್ ಯುದ್ಧದಲ್ಲಿ ಜೀವ ಕಳೆದುಕೊಂಡಿರುವುದು..ಯಹೂದಿಗಳ ಸುಮಾರು 5000 ವರ್ಷಗಳ ಚರಿತ್ರೆಯಲ್ಲಿ, ಪ್ರವಾದಿ ಮೊಹಮ್ಮದರ ಕಾಲದಲ್ಲಿ 6 ವರ್ಷ ಮತ್ತು ಈಗ 1917 ರಿಂದ ಇಲ್ಲಿಯವರೆಗಿನ ಹೆಚ್ಚುಕಡಿಮೆ 100 ವರ್ಷಗಳ ಕಾಲ ಮಾತ್ರ ಮುಸ್ಲಿಮರು ಮತ್ತು ಯಹೂದಿಗಳು ನೇರ ಸಂಪರ್ಕದಲ್ಲಿದ್ದದ್ದು. ಕ್ರಿಶ್ಚಿಯನ್ನರೂ ಸೇರಿದಂತೆ ಜಗತ್ತಿನ ಉಳಿದವರೆಲ್ಲರೊಂದಿಗಿನ ಆಡಳಿತ ಕಾಲದ ಸಂಘರ್ಷದಲ್ಲಿ ತಮ್ಮ ತಾಯ್ನೆಲವೂ ಸೇರಿದಂತೆ ಲಕ್ಷಾಂತರ ಜನರನ್ನು ಯಹೂದಿಗಳು ಕಳೆದುಕೊಂಡರು.

10 ಶತಮಾನದ ಹಿಂದೆ ಸ್ಪೇನ್ ನಲ್ಲಿಯೂ ಕೂಡ ಕ್ರೈಸ್ತರ ಎರಡು ಪಂಗಡಗಳಾದ ರೋಮನ್ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ರ ನಡುವೆ ವೈಮನಸ್ಸು ಮೂಡಿಸಿ ಕ್ರೈಸ್ತರನ್ನು ಒಡೆದರೆನ್ನುವ ಆರೋಪ ಯಹೂದಿಗಳ ಮೇಲಿದೆ. ಹೆಚ್ಚುಕಡಿಮೆ ಯೂರೋಪಿನ ಎಲ್ಲ ರಾಷ್ಟ್ರಗಳಲ್ಲಿ ರಾಜಕೀಯ ಸಾಮಾಜಿಕ ಏರುಪೇರುಗಳಿಗೆ ಯಹೂದಿಗಳು ಕಾರಣರಾಗಿದ್ದನ್ನು ಜಾಗತಿಕ ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಕ್ರಿ.ಶ 70 ನೇ ಇಸವಿಯಲ್ಲಿ ರೋಮನ್ ಚಕ್ರವರ್ತಿ ನಡೆಸಿದ ಮಹಾ ಮಾರಣಹೋಮದ ನಂತರ ಯಹೂದಿಗಳ ವಂಶವನ್ನೇ ನಿರ್ನಾಮ ಮಾಡಲು ಹೊರಟದ್ದು ಜರ್ಮನಿಯ ನಾಝಿ ಚಕ್ರವರ್ತಿ ಅಡಾಲ್ಫ್ ಹಿಟ್ಲರ್ . ಈ ಕ್ರೂರಿ ಅದೆಂತಹ ಕ್ರೂರತ್ವ ಮೆರೆದನೆಂದರೆ, ಇಡೀ ಯಹೂದಿ ಸಮುದಾಯವನ್ನು ಭೂಮಿಯ ಮೇಲಿಂದ ನಾಶಗೊಳಿಸಿಯೇ ವಿರಮಿಸುತ್ತೇನೆ ಎಂದು ಶಪಥಗೈದ.. ಅದರಂತೆಯೇ, ಜಗತ್ತಿನ ಬಹುತೇಕ ಯಹೂದಿಗಳನ್ನು ಕೊಂದು ಮುಗಿಸಿದ ಹಿಟ್ಲರ್ ” ಇದೀಗ ಜಗತ್ತಿನಲ್ಲಿ ಕೇವಲ 10% ಯಹೂದಿಗಳನ್ನು ಉಳಿಸಿದ್ದೇನೆ. ಇವರ ಮೂಲಕ ಭವಿಷ್ಯದ ಜಗತ್ತು, ಯಹೂದಿಗಳು ಯಾರು ಎಂಬುದು ಮಾತ್ರವಲ್ಲ, ಅವರನ್ನು ನಾನು ಏಕೆ ಕೊಂದೆ ಎಂಬುದನ್ನು ಅರಿಯಲಿದೆ” ಎಂದನು. ಒಂದು ಮತ್ತು ಎರಡನೇ ಮಹಾಯುದ್ಧದ ಪ್ರತಿಕೂಲ ಪರಿಣಾಮಗಳು ಮತ್ತು ಜರ್ಮನಿಯಲ್ಲಿ ದೊಡ್ಡ ಮಟ್ಟದ ಸಾಮೂಹಿಕ ಹತ್ಯಾಕಾಂಡಗಳು ಆರಂಭವಾದಾಗ, ಇನ್ನು ಯೂರೋಪ್ ನಲ್ಲಿ ತಮ್ಮ ಭವಿಷ್ಯ ಕರಾಳವಾಗಲಿದೆ ಎಂದರಿತ ಯಹೂದಿಗಳು, ಈ ಕಾಲಘಟ್ಟದಲ್ಲಿ ತಮ್ಮ ತಾಯ್ನೆಲ ಜೆರುಸಲೇಮನತ್ತ ದೃಷ್ಟಿ ಬೀರಿದರು.

ಹೆಚ್ಚು ಕಡಿಮೆ ಕ್ರಿ.ಶ 1917 ರಲ್ಲಿ ಯಹೂದಿಗಳು ಪ್ರಪಂಚದ ವಿವಿಧ ಭಾಗಗಳಿಂದ ಪ್ಯಾಲೆಸ್ಟೈನ್ ನತ್ತ ವಲಸೆ ಬರತೊಡಗಿದರು. ಇವರ ವಲಸೆಯ ಹಿಂದೆ ಅಮೇರಿಕಾ ಮತ್ತು ಬ್ರಿಟನ್ ಆಡಳಿತದ ದೂರಾಲೋಚನೆ ಕೆಲಸ ಮಾಡಿತ್ತು. ಕೊಲ್ಲಿ ರಾಷ್ಟ್ರಗಳನ್ನು ಪರೋಕ್ಷವಾಗಿ ನಿಯಂತ್ರಿಸಲು ಮತ್ತು ಜಗತ್ತಿನ ಮೇಲೆ ಮುಸ್ಲಿಮರ ಪ್ರಭಾವ ತಗ್ಗಿಸಲು ಮುಸ್ಲಿಮ್ ರಾಷ್ಟ್ರಗಳ ಮಧ್ಯೆ ಸೇನಾ ಬಂಕರ್ ಸ್ವರೂಪದ ರಾಷ್ಟ್ರ ರಚನೆ ಮಾಡಲು ಅಮೇರಿಕಾ ನೇತ್ರತ್ವದ ಬಾಹ್ಯ ಶಕ್ತಿಗಳು ಆಖಾಡಕ್ಕೆ ಇಳಿದವು. ಇದಕ್ಕೆ ಅವರು ಬಳಸಿಕೊಂಡಿದ್ದು ಕಟ್ಟರ್ ಯಹೂದಿಗಳನ್ನು ಮತ್ತು ಅಧಿಕಾರ ಲಾಲಸೆಯ ಅರಬ್ಬರನ್ನು. ಮೂಲಭೂತವಾದಿ ಯಹೂದಿಗಳು ಮತ್ತು ಮೂಲಭೂತವಾದಿ ಮುಸ್ಲಿಮರು ಬಡಿದಾಡಿಕೊಂಡರೆ ಸಮಸ್ತ ಮುಸ್ಲಿಂ ಜಗತ್ತಿನ ಗಮನ ಅದರ ಮೇಲೆಯೇ ಇರುತ್ತದೆ. ಸೌದಿ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ತಮ್ಮ ಮಾತು ಕೇಳುವವರನ್ನೇ ಅಧಿಕಾರದಲ್ಲಿಟ್ಟರೆ ಇಡೀ ಜಗತ್ತು ತಮ್ಮದೇ ಎಂಬುದು ಅಮೇರಿಕಾ ಮತ್ತು ಬ್ರಿಟಿಷರ ಆಲೋಚನೆಯಾಗಿತ್ತು. ಅದು ಹಾಗೇಯೇ ಅಯಿತು ಕೂಡ..ಮಧ್ಯಪ್ರಾಚ್ಯದ ಮೇಲೆ ತುರ್ಕಿಯ ಆಡಳಿತ ಕೊನೆಯಾಗಿ ಬ್ರಿಟಿಷರು ನಿಯಂತ್ರಣ ಸಾಧಿಸತೊಡಗಿದರು. ಹಾಗಾಗಿ ಬ್ರಿಟಿಷರ ಕೃಪಾಕಟಾಕ್ಷದಲ್ಲಿ ಯಹೂದಿಗಳ ವಲಸೆ ವ್ಯಾಪಕವಾಗತೊಡಗಿ 1948 ರಲ್ಲಿ ಇಸ್ರೇಲ್ ಸ್ಥಾಪನೆಯಾಯಿತು. ಈ ಬೆಳವಣಿಗೆಯನ್ನು ಮುಸ್ಲಿಮ್ ಜಗತ್ತು ಸಹಿಸದಾಯಿತು. ಇಸ್ರೇಲ್ ಮೇಲೆ ದಾಳಿಮಾಡಲು ಪ್ಯಾಲೆಸ್ಟೈನ್ ಪಕ್ಕದ ರಾಷ್ಟ್ರಗಳ ಮುಸ್ಲಿಮ್ ಆಡಳಿತಗಾರರ ಮೇಲೆ ಪ್ರಜೆಗಳ ವ್ಯಾಪಕ ಒತ್ತಡ ಆರಂಭವಾಯಿತು. ಮೊದಲೇ ಈಜಿಪ್ಟ್, ಸೌದಿ ಸೇರಿದಂತೆ ಪಕ್ಕದ ಎಲ್ಲ ರಾಷ್ಟ್ರಗಳ ದೊರೆಗಳ ರೂಪದ ಸರ್ವಾಧಿಕಾರಿಗಳು, ಅಮೇರಿಕಾ ಯೂರೋಪ್ ಕೃಪಾಪೋಷಿತ ನಾಟಕ ಮಂಡಳಿಯ ಖಾಯಂ ಸದಸ್ಯರು. 1948, 1966 ಮತ್ತು 1973 ರಲ್ಲಿ ನಡೆದ ಅರಬ್- ಇಸ್ರೇಲ್ ಯುದ್ಧದಲ್ಲಿ ಬರೀ ಜನಸಾಮಾನ್ಯರು ಜೀವತೆತ್ತು, ಸಣ್ಣಮಟ್ಟದ ಭೌಗೋಳಿಕ ಬದಲಾವಣೆಯಾಯಿತು ಬಿಟ್ಟರೆ, ಮುಖ್ಯ ವಿಷಯದ ಕುರಿತಾಗಿ ಒಂದು ನಿರ್ದಿಷ್ಟ ಫಲಿತಾಂಶವೆನ್ನುವುದು ಈ ಮೂರೂ ಯುದ್ಧಗಳಲ್ಲಿ ಬರಲಿಲ್ಲ. ಪ್ಯಾಲೆಸ್ಟೈನ್ ಹೊರತುಪಡಿಸಿ, ಸೌದಿ, ಈಜಿಪ್ಟ್ , ಜೋರ್ಡಾನ್, ಇಸ್ರೇಲ್ ಅಮೇರಿಕಾದ ಹೆಗಲ ಮೇಲಿನ ಶಿಶುಗಳು. ಫಲಿತಾಂಶ ಬರುವುದಾದರೂ ಹೇಗೆ? ಎರಡೂ ಕಡೆಯವರು ಅಂದೂ ಸಾಯುತ್ತಿದ್ದರು, ಇಂದೂ ಸಾಯುತ್ತಿದ್ದಾರೆ. ಎಲ್ಲರೂ ತಮ್ಮ ತಮ್ಮ ಇತಿಹಾಸಕಾರರ ಮೂಲಕ ತಾವೇ ಗೆದ್ದೆವು ಅಂದು ಬರೆಸಿಕೊಂಡು ಮೀಸೆ ತಿರುವಿದರು. ಯಾರ ಹಣೆಬರಹವೂ ಬದಲಾಗಲಿಲ್ಲ. ಸದ್ಯೋಭವಿಷ್ಯದಲ್ಲಿ ಬದಲಾಗುವುದೂ ಇಲ್ಲ. ಜಗತ್ತು ಮಾತ್ರ ಎರಡು ಭಾಗವಾಗಿ ನಾನಾ ಊಹಾಪೋಹದ ಸಿದ್ಧಾಂತ ಒದರುತ್ತಾ, ತೋಚಿದ ಇತಿಹಾಸ ಪಠಿಸುತ್ತಾ, ತಮಗಾಗದವರ ಹೆಣ ಲೆಕ್ಕ ಹಾಕುತ್ತಿದೆ. ಈ ಮೂರೂ ಯುದ್ಧಗಳು ಅರಬ್ಬರನ್ನು ಯಾಮಾರಿಸಲು ಅವರ ಆಡಳಿತಗಾರರು ನಡೆಸಿದ್ದಾಗಿತ್ತು.

ಟನಿಜವಾಗಿ ಅರಬ್ ಇಸ್ರೇಲ್ ಸಂಘರ್ಷ, ನೀನು ಅತ್ತಂತೆ ಮಾಡು ನಾನು ಸತ್ತಂತೆ ಮಾಡುತ್ತೇನೆ ಎಂಬ ನಾಟಕದ ಪುನರಾವರ್ತಿತ ದೃಶ್ಯಗಳು. ಈಗಲೂ ವರ್ಷಕ್ಕೊಮ್ಮೆ ಒಂದು ವಾರ ಹೊಡೆದುಕೊಳ್ಳುವುದು ಮತ್ತದೇ ಅಮೇರಿಕ ಮತ್ತು ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಿ ಶಮನಗೊಳ್ಳುವ ನಾಟಕ ನಡೆಯುತ್ತಿರುತ್ತದೆ. ಈ ನಾಟಕ ಎಲ್ಲಿಯವರೆಗೆ ನಡೆಯುತ್ತದೆ ಎಂದರೆ ಚೀನಾ ಸೂಪರ್ ಪವರ್ ಆಗುವವರೆಗೆ. ಜಗತ್ತಿನ ಮೇಲೆ ಚೀನಾದ ಪಾರುಪತ್ಯ ಆರಂಭವಾಯಿತೋ, ಆಗ ಮಾತ್ರ ನಾಟಕ್ ಬಂದ್ ..ಖೇಲ್ ಖತಂ.. ಹೀಗೆ ಮುಂದುವರಿದರೆ ಈ ವಿವಾದ ಅಣುಬಾಂಬುಗಳನ್ನು ಕೋಠಿಯಿಂದ ಹೊರತರುವುದು ನಿಶ್ಚಿತ…ಆದರೆ ಅಲ್ಲಿಯವರೆಗೆ ಯಹೂದಿಗಳು ಮತ್ತು ಆ ಭಾಗದ ಮುಸ್ಲಿಮರು ಸತ್ತು ಸತ್ತು ಬದುಕಬೇಕಿದೆ.

ಉಳಿದ ಎಲ್ಲ ಸಮುದಾಯಗಳಿಗಿಂತ ಯಹೂದಿಯರು ಮತ್ತು ಮುಸ್ಲಿಮರ ನಡುವೆ ಸಾಕಷ್ಟು ಧಾರ್ಮಿಕ ಸಮಾನತೆಗಳಿವೆ. ಎರಡೂ ಸಮುದಾಯ ಮಾಂಸಾಹಾರದಲ್ಲಿ ಹಲಾಲ್ ಪದ್ಧತಿಯನ್ನು ಅನುಸರಿಸುತ್ತವೆ. ಮುಸ್ಲಿಮರು ಮತ್ತು ಯಹೂದಿಗಳು ವಿಗ್ರಹ ಆರಾಧಕರಲ್ಲ. ಎರಡೂ ಸಮುದಾಯಗಳು ದೈವೀಕ ಗ್ರಂಥ ಹೊಂದಿವೆ. ಯಹೂದಿಗಳು ಕುರ್ ಆನ್ ಮತ್ತು ಪ್ರವಾದಿ ಮೊಹಮ್ಮದರನ್ನು ನಂಬದಿದ್ದರೂ, ಮುಸ್ಲಿಮರು ಮಾತ್ರ ಕಾಲ ಮತ್ತು ಜನಾಂಗ ಸೀಮಿತವಾದ ಯಹೂದಿ ಗ್ರಂಥ ತೌರಾತ್ ಮತ್ತು ಅವರ ಮಸೀಹ ಮೋಸಸ್ ರ ಮೇಲೆ ವಿಶ್ವಾಸವಿಡುತ್ತಾರೆ. ಕುರ್ ಆನ್ ನಲ್ಲಿ ಯಹೂದಿಗಳು ಕಾಲಗಳ ಹಿಂದೆ ಅನುಗ್ರಹಿತ ಜನಾಂಗವಾಗಿದ್ದರ ಬಗ್ಗೆ ಉಲ್ಲೇಖವಿದೆ. ತದನಂತರದ ಕಾಲಘಟ್ಟದಲ್ಲಿ ಯಹೂದಿಗಳು ಶಾಪಗ್ರಸ್ತ ಜನಾಂಗವಾಗಿ ಬದಲಾಗಿ, ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ವಲಸೆ ಬಂದ ಭಾರತ ಮತ್ತು ಆಫ್ರಿಕಾ ರಾಷ್ಟ್ರಗಳನ್ನು ಹೊರತುಪಡಿಸಿ, ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳಿಂದ ಹೊರದಬ್ಬಲ್ಪಟ್ಟಿದ್ದು ನಿಜಕ್ಕೂ ಆಶ್ಚರ್ಯದ ಸಂಗತಿ….ಯಹೂದಿಗಳ ಬಗ್ಗೆ ಇನ್ನೂ ಕುತೂಹಲದ ಸಂಗತಿಯೆಂದರೆ, ಯಹೂದಿಗಳು ಮತಾಂತರ ಮಾಡುವುದಿಲ್ಲ. ಕಟ್ಟರ್ ಯಹೂದಿಗಳ ಗ್ರೇಟರ್ ಇಸ್ರಾಯಿಲಿನ ಸೀಮಿತ ವಿಸ್ತರಣಾವಾದದ ಕನಸೊಂದು ಬಿಟ್ಟರೆ ಇವರಲ್ಲಿ ಸಾಮ್ರಾಜ್ಯ ವಿಸ್ತರಣಾ ಆಕಾಂಕ್ಷೆಗಳಿಲ್ಲ. ಜಗತ್ತಿನ ಇತರೆಲ್ಲ ಸಮುದಾಯದವರಿಗಿಂತ ಶಿಸ್ತುಬದ್ಧರು. ವೈದ್ಯಕೀಯ, ಕೃಷಿ, ಕೈಗಾರಿಕೆ, ಶಿಕ್ಷಣದ, ಆಧುನಿಕ ತಂತ್ರಜ್ಞಾನಗಳ ವಿಚಾರದಲ್ಲಿ ಇವರನ್ನು ಮೀರಿಸುವ ಮತ್ತೊಂದು ಸಮುದಾಯ ಜಗತ್ತಿನಲ್ಲಿಲ್ಲ. ಪ್ರಸ್ತುತ ಜಗತ್ತಿನ ಬಹುತೇಕ ವಿಜ್ಞಾನಿಗಳು ಇದೇ ಯಹೂದಿ ಸಮುದಾಯದವರು. ತನ್ನ ಆವಿಷ್ಕಾರಗಳ ಮೂಲಕ ಜಗತ್ತಿನ ಚಿತ್ರಣ ಬದಲಿಸಿ, ಶತಮಾನದ ವಿಜ್ಞಾನಿ ಎಂದು ಕರೆಸಿಕೊಂಡ ಅಲ್ಬರ್ಟ್ ಐನ್‍ಸ್ಟೈನ್ ಒಬ್ಬ ಯಹೂದಿ. ಹೀಗೆ ಯಹೂದಿಗಳು ಈ ಜಗತ್ತಿಗೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಜಗತ್ತಿನ ದೊಡ್ಡ ದೊಡ್ಡ ಬ್ಯಾಂಕರ್ ಗಳು, ಚಿಂತಕರು, ವಿಜ್ಞಾನಿಗಳು, ಫೇಸ್‌ಬುಕ್‌ ಸೇರಿದಂತೆ ಬೃಹತ್ ಸಂಸ್ಥೆಗಳ ಮುಖ್ಯಸ್ಥರೆಲ್ಲ ಬಹುತೇಕ ಯಹೂದಿಗಳೇ. ಯೇಸುಕ್ರಿಸ್ತರನ್ನು ಕೊಲ್ಲಲು ಕಾರಣವಾಗಿದ್ದಕ್ಕೆ, ಪ್ರವಾದಿ ಮೊಹಮ್ಮದರನ್ನು ಕೊಲ್ಲಲು ಯತ್ನಿಸಿದ್ದಕ್ಕೆ ಜಗತ್ತಿನ ಬಹುದೊಡ್ಡ ಸಮುದಾಯಗಳಾದ ಕ್ರೈಸ್ತರು ಮತ್ತು ಮುಸ್ಲಿಮರ ಕೆಂಗಣ್ಣಿಗೆ ಯಹೂದಿಗಳು ಗುರಿಯಾದವರು. ವಿಪರೀತ ರಾಜಕೀಯ ,ಸಾಮಾಜಿಕ ಹಸ್ತಕ್ಷೇಪಗಳಿಂದಾಗಿ ಯೂರೋಪ್ ರಾಷ್ಟ್ರಗಳಲ್ಲೂ ಅವರ ಬಗ್ಗೆ ವ್ಯಾಪಕ ವಿರೋಧವಿತ್ತು. ಅದೇನೇ ಇದ್ದರೂ, ದೇಶವಿಲ್ಲದ ಯಹೂದಿಗಳು ದೇಶವನ್ನು ಬಯಸಿ, ತಮ್ಮ ಪುಣ್ಯಸ್ಥಳವಿರುವ ಮತ್ತು ಶತಮಾನಗಳ ತಮ್ಮ ಪೂರ್ವಜರ ಇತಿಹಾಸವಿರುವ ಭೂಮಿಯನ್ನು ಬಯಸುವುದರಲ್ಲೂ ನ್ಯಾಯವಿದೆ. ಹಾಗೇಯೇ, ಇತಿಹಾಸ ಏನೇ ಇದ್ದರೂ, ನ್ಯಾಯಯುತವಾಗಿ ಶತಮಾನಗಳ ಕಾಲ ಅಲ್ಲಿ ಬದುಕಿದ್ದೂ ಅಲ್ಲದೇ, ಯೂರೋಪ್ ನಲ್ಲಿನ ವ್ಯಾಪಕ ಹಿಂಸೆಯಿಂದ ನಲುಗಿ, ಪ್ಯಾಲೆಸ್ಟೈನಿಗೆ ಯಹೂದಿಗಳು ವಲಸೆ ಬಂದಾಗ, ತಮ್ಮ ವಾಸಸ್ಥಾನದಲ್ಲಿ ಅಷ್ಟೇನೂ ಪ್ರತಿರೋಧ ತೋರದೇ, ವಾಸಿಸಲು ಅವಕಾಶ ಕೊಟ್ಟು ಈಗ ತಮ್ಮ ಮನೆಗಳಿಂದ ಹೊರದಬ್ಬಲ್ಪಟ್ಟ ಪ್ಯಾಲೆಸ್ಟೈನಿಗರ ನೋವಿನ ಧ್ವನಿಯೂ ನ್ಯಾಯಯುತವಾಗಿದೆ..ಆದರೆ ಜಾಗತಿಕ ರಾಜಕಾರಣ ಈ ನ್ಯಾಯ ಅನ್ಯಾಯ ತೀರ್ಮಾನದ ಸಾಮರ್ಥ್ಯ ಕಳೆದುಕೊಂಡಿರುವುದು ದುರಂತ..

ಜಗತ್ತಿನ ಎರಡು ಪ್ರಬಲ ಧಾರ್ಮಿಕ ಶಾಖೆಗಳಾದ ಯಹೂದಿ ಮತ್ತು ಮುಸ್ಲಿಮರು ಶಾಂತಿ ಒಪ್ಪಂದಗಳಿಗೆ ಬದ್ಧರಾಗಿ ಬದುಕುವ ಆವಿಷ್ಕಾರ ನಡೆಸಬೇಕಿದೆ. ಅಣುಬಾಂಬುಗಳ ಕಾಲದಲ್ಲಿ ಗೆಲುವು ಇಲ್ಲ ಎಂಬುದು ಸಾಮಾನ್ಯ ಜ್ಞಾನಕ್ಕೆ ನಿಲುಕುವ ಸತ್ಯ. ಭಾರತದ ಮಾಜಿ ಪ್ರಧಾನಿ ವಾಜಪೇಯಿ” ಮನುಷ್ಯನೇನೋ ಚಂದ್ರನ ಮೇಲೆ ಕಾಲಿಡುವಷ್ಟು ಕಲಿತಿದ್ದಾನೆ. ಆದರೆ ಭೂಮಿಯ ಮೇಲೆ ಬದುಕುವುದು ಹೇಗೆಂದು ಈಗಷ್ಟೆ ಕಲಿಯಬೇಕಿದೆ” ಎಂದಿದ್ದರು. ಜಾಗತಿಕ ಜಗಳಗಳನ್ನು ನೋಡಿದರೆ ವಾಜಪೇಯಿ ಮಾತು ನೆನಪಾಗುತ್ತಿದೆ. ಈ ವಿಶ್ವವಿವಾದ ವಿಶ್ವಯುದ್ಧದಲ್ಲೇ ಕೊನೆಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾಯಿತಾದರೆ ನಾವಿದ್ದೇವೆ ಎಂದು ಅಣುಬಾಂಬುಗಳು ಇಣುಕಿ ನೋಡುತ್ತಿವೆ.

ಕೃಪೆ.:”ವಾರದ ವಿಚಾರ” ಮಾಲಿಕೆ 94

LEAVE A REPLY

Please enter your comment!
Please enter your name here