• ಮೊಹಮ್ಮದ್ ಫೀರ ಲಟಗೇರಿ
    ವಿದ್ಯಾರ್ಥಿ ಪ್ರತಿನಿಧಿ ಮತ್ತು ಸಾಮಾಜಿಕ ಕಾರ್ಯಕರ್ತ ಇಳಕಲ್ಲ.

ಕನ್ನಡ ಶಾಲೆ ಅಥವಾ ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯುವವರೇ ಜಾಸ್ತಿಯಾಗಿರುವ ಇಂದಿನ ದಿನಮಾನಗಳಲ್ಲಿ ಒಂದು ಅಪರೂಪದ ಮತ್ತು ಬಹಳ ವಿಶಿಷ್ಟವಾದ ಕಾರ್ಯಕ್ಕೆ ಮೆಹಬೂಬ್ ಸಾಬ್ ರವರು ಸಾಕ್ಷಿಯಾಗಿದ್ದಾರೆ.

ಮೆಹಬೂಬ್ ಸಾಬ್ ಆಗ್ರಾ ರವರು ಮೂಲತಃ ಇಳಕಲ್ಲ ನಗರದವರಾಗಿದ್ದು ತಂದೆ ಇಮಾಮ್ ಹುಸೇನ ರವರು ಮುಧೋಳ ನಗರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಅವರ ಅಕಾಲಿಕ ಮರಣದ ನಂತರ ಅವರ ಮಗನಾದ ಮೆಹಬೂಬ್ ಸಾಬ್ ರವರು ಹತ್ತನೆ ತರಗತಿ ಮುಗಿಸಿದ ಬಳಿಕ ಅನುಕಂಪದ ಆಧಾರದಲ್ಲಿ ಸನ್ 2002-03 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಡಿ ದರ್ಜೆಯ ನೌಕರರಾಗಿ ಆಯ್ಕೆಯಾಗುತ್ತಾರೆ, ಸರ್ಕಾರಿ ಪ್ರೌಢಶಾಲೆ ಹಿರೇಸಿಂಗನಗುತ್ತಿ ಗ್ರಾಮದಲ್ಲಿ ಅವರು ತಮ್ಮ ಕಾಯಕ ವೃತ್ತಿಯನ್ನು ಪ್ರಾರಂಭಿಸುತ್ತಾರೆ ತಮ್ಮ ಕಾಯಕವನ್ನು ನಿಷ್ಠೆಯಿಂದ ಮತ್ತು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಿ ಅಲ್ಲಿನ ಗ್ರಾಮದ ಪಾಲಕರ ಮತ್ತು ವಿದ್ಯಾರ್ಥಿಗಳಿಗೆ ಪ್ರೀತಿ ಪಾತ್ರರಾಗಿದ್ದರು.

ಸರ್ಕಾರಿ ಶಾಲೆಯ ಮೇಲಿನ ಪ್ರೀತಿಯನ್ನು ಮೆಹಬೂಬ್ ಸಾಬ್ ಆಗ್ರಾ ರವರು ತನ್ನ ಕರುಳ ಕುಡಿಯ ಜನುಮದಿನದ ಅಂಗವಾಗಿ ಮಗ ಮುಸ್ತಫಾನ ಹುಟ್ಟುಹಬ್ಬವನ್ನು ತಾನು ಕಾರ್ಯ ನಿರ್ವಹಿಸುತ್ತಿರುವ ಇಳಕಲ್ಲ ತಾಲೂಕಿನ ಹಿರೇಸಿಂಗನಗುತ್ತಿ ಗ್ರಾಮದ ಪ್ರೌಢ ಶಾಲೆಯ ಸಂಪೂರ್ಣ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿದು ಇಡೀ ನಾಗರಿಕ ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ ಇದರೊಂದಿಗೆ ಬಹಳ ಹೆಮ್ಮೆ ಪಡುವ ಹಾಗೂ ಬಹಳ ಅರ್ಥಪೂರ್ಣವಾಗಿ ಮಗನ ಜನುಮ ದಿನವನ್ನು ಆಚರಣೆ ಮಾಡಿ ಸಮಾಜಕ್ಕೆ ಒಂದು ಉತ್ತಮ ಸಂದೇಶ ರವಾನಿಸಿದ್ದಾರೆ.

ಇವರ ಸಮಾಜಮುಖಿ ಕೇಲಸದ ಇನ್ನೊಂದು ಉದಾಹರಣೆ ಹೇಳಬಹುದಾದರೆ ಶಾಲಾ ದಾಖಲಾತಿ ಸಮಯದಲ್ಲಿ ಹಣದ ಕೊರತೆ ಇರುವ ವಿದ್ಯಾರ್ಥಿಗಳಿಗೆ ತಾನೆ ದುಡ್ಡು ಕೊಟ್ಟು ಶಾಲೆಗೆ ಸೇರಿಸುತ್ತಾರೆ ಇದರೊಂದಿಗೆ ಆರ್ಥಿಕ ಸಾಮರ್ಥ್ಯವಿರದ ವಿದ್ಯಾರ್ಥಿಗಳಿಗೆ ಶಾಲಾ ಬಟ್ಟೆಯನ್ನು ಹೋಲಿಸಲು ಹಣ ಒದಗಿಸಿ ಕೊಡುವ ಇವರ ಮಾನವೀಯ ಕಾರ್ಯವು ಅವರ ಮಾತೃ ಹೃದಯವನ್ನು ಪರಿಚಯಿಸುತ್ತದೆ.

ಅವರನ್ನು ಸಂದರ್ಶನ ಮಾಡಿ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ತನ್ನ ಮಗನಿಗೆ ಆಯುಷ್ಯ ಆರೋಗ್ಯ ವೃದ್ಧಿಸಲಿ ಮತ್ತು ವಿದ್ಯೆ ಬುದ್ಧಿಯಲ್ಲಿ ಉನ್ನತಿ ಸಿಗಲಿ ಎಂಬ ಕಾರಣಕ್ಕೆ ಜನರ ಪ್ರಾರ್ಥನೆ ಅವನ ಮೇಲಿರಲಿ ಎಂಬ ವಿಚಾರದೊಂದಿಗೆ ಮಾಡಿರುವುದಾಗಿ ಹೇಳಿದರು.

ಸರ್ಕಾರದಿಂದ ತನಗೆ ಬರುವ ಅಲ್ಪ ಸಂಭಳದಲ್ಲಿ ಎರಡು-ಮೂರು ತಿಂಗಳ ಹಣವನ್ನು ವಿನಿಯೋಗಿಸಿ ಸುಮಾರು 35 ಸಾವಿರ ವೆಚ್ಚದಲ್ಲಿ ಸ್ವಂತ ಹಣವನ್ನು ಖರ್ಚು ಮಾಡಿ ಇಡೀ ಶಾಲಾ ಕೊಠಡಿಗಳಿಗೆ ಬಣ್ಣ ಹಚ್ಚಿಸಿ ಶಾಲೆ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಸಾರ್ವಜನಿಕ ಶಿಕ್ಷಣದ ಬಗ್ಗೆ ಸಮಾಜದಲ್ಲಿ ತಾತ್ಸಾರ ಮನೋಭಾವವು ಜನರಲ್ಲಿ ಸರ್ವೇ ಸಾಮಾನ್ಯವಾಗಿರುವ ಹಾಗೂ ಅಲ್ಲಿನ ಪರಿಸರದ ಮತ್ತು ವಾತಾವರಣದ ಕುರಿತು ಸರ್ಕಾರಿ ಶಾಲೆಯ ಆಡಳಿತ ವ್ಯವಸ್ಥೆಯ ವಿರುದ್ಧ ಮಾತುಗಳು ಕೇಳಿಬರುತ್ತಿರುವ ಇಂತಹ ಒಂದು ಘಳಿಗೆಯಲ್ಲಿ ಜನಮಾನಸದಲ್ಲಿ ತನ್ನ ನಿಸ್ವಾರ್ಥ ಸೇವೆಯಿಂದ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.

ಸುಮಾರು ಎಂಟು ವರ್ಷದ ತನ್ನ ಏಕೈಕ ಸುಪುತ್ರನಾದ ಮುಸ್ತಫಾನ ಭವಿಷ್ಯ ಉಜ್ವಲವಾಗಲಿ ಎಂದು ಈ ಸಂದರ್ಭದಲ್ಲಿ ಆಶಿಸುತ್ತೇನೆ.

LEAVE A REPLY

Please enter your comment!
Please enter your name here