ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ನನ್ನ ಹಾಸ್ಟೆಲ್ ಮೇಟ್, ಮಿತ್ರ ಯಾಕೂಬ್ ಕೊಯ್ಯೂರು ರವರಿಗೆ ಅಭಿನಂದನೆಗಳು

  • ರಫೀಕ್ ಮಾಸ್ಟರ್
    ಸಮಾಜ ಸೇವಕ ಮಂಗಳೂರು

1992-93 ರಲ್ಲಿ ನಾನು ಮಂಗಳೂರಿನ ಅಶೋಕನಗರದ ಸರಕಾರಿ ಹಾಸ್ಟೆಲ್ನಲ್ಲಿ ಇದ್ದುಕೊಂಡು ಓದುತ್ತಿದ್ದೆ. ಆಗ ನಮ್ಮ ಹಾಸ್ಟೆಲ್ನಲ್ಲಿ ಇದ್ದುಕೊಂಡು ಬಿಎಡ್ ಮಾಡುತ್ತಿದ್ದವರು ಯಾಕೂಬ್ ಕೊಯ್ಯೂರು ಮತ್ತು ಬ್ಯಾರಿ ಅಕಾಡೆಮಿಯ ರಿಜಿಸ್ಟ್ರಾರ್ ಆಗಿದ್ದ ಉಮರಬ್ಬ ರವರು. ಬಿಎಸ್ಸಿ ಮಾಡಿ ಬಿಎಡ್ ಮಾಡುತ್ತಿದ್ದ ಯಾಕೂಬ್ ಅವರು ಬಿಎಡ್ ನಲ್ಲಿ First Rank ಅನ್ನು ಪಡೆದಿದ್ದರು. ಸದಾ ಅಧ್ಯಯನ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಬಾಲ್ಯದಲ್ಲೇ ಶಿಸ್ತುಬದ್ಧ ಜೀವನ ಮತ್ತು ಅಚ್ಚುಕಟ್ಟುತನ ಮೈಗೂಡಿಸಿಕೊಂಡಿದ್ದರು. ನಾನು ಮತ್ತು ಅವರು ಜೊತೆಯಾಗಿ ಹಾಸ್ಟೆಲ್ನ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಆದದ್ದು ಮರೆಯಲಾಗದ ಅನುಭವ.

ಬಿಎಡ್ ಮುಗಿಸಿದ ತಕ್ಷಣವೇ ಅಧ್ಯಾಪಕರಾಗಿ ಸರಕಾರಿ ಕೆಲಸ ಪಡೆದುಕೊಂಡರು. ಪ್ರೌಢಶಾಲೆಯಲ್ಲಿ ಗಣಿತ ಅಧ್ಯಾಪಕರಾಗಿ ಸೇವೆಯನ್ನು ಆರಂಭಿಸಿದ ಅವರು ಬೆಳ್ತಂಗಡಿ ತಾಲೂಕಿನ ಅಕ್ಷರ ದಾಸೋಹದ ಪ್ರಭಾರ ಸಹಾಯಕ ನಿರ್ದೇಶಕರಾಗಿಯೂ ಸೇವೆಯನ್ನು ಸಲ್ಲಿಸಿದ್ದರು. ಇದೀಗ ಸೇವೆ ಸಲ್ಲಿಸುತ್ತಿರುವ ಸರಕಾರಿ ಪ್ರೌಢಶಾಲೆ ನಡ ಬೆಳ್ತಂಗಡಿ ಇಲ್ಲಿ ಗಣಿತದ ಪ್ರಯೋಗ ಶಾಲೆಯನ್ನು ತೆರೆದರು. ಆ ಪ್ರಯೋಗದಲ್ಲಿ ಯಶಸ್ವಿಯಾದರು. ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂತು. ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಈಗಾಗಲೇ ಪಡೆದಿರುವ ಅವರಿಗೆ ಈ ಬಾರಿಯ ರಾಷ್ಟ್ರಪ್ರಶಸ್ತಿ ಅರ್ಹವಾಗಿಯೇ ಬಂದಿವೆ. ಮಿತ್ರ ಯಾಕೂಬ್ ಅವರಿಗೆ ಪ್ರಶಸ್ತಿ ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ. ಇದು ಯಾಕೂಬ್ ಅವರಿಗೆ ಮಾತ್ರ ಸಂದ ಗೌರವವಲ್ಲ. ಇಡೀ ಶಿಕ್ಷಕ ಸಮುದಾಯಕ್ಕೆ ಸಂದ ಗೌರವ. ನಮ್ಮ ಸಮುದಾಯಕ್ಕೆ ಸಂದ ಗೌರವ. ಜೊತೆಯಾಗಿ ಇದ್ದವರು ಸಾಧನೆಯ ಏಣಿಯಲ್ಲಿ ಬಹಳ ಎತ್ತರಕ್ಕೆ ಏರಿರುವುದನ್ನು ನೋಡುವುದೇ ತುಂಬಾ ಸಂತೋಷ. ಆ ಸೌಭಾಗ್ಯವನ್ನು ಕರುಣಿಸಿದ ಅಲ್ಲಾಹನಿಗೆ ಸರ್ವ ಸ್ತುತಿಗಳು. ಅಲ್ ಹಮ್ದುಲಿಲ್ಲಾಹ್.

ಒಂದೇ ಹಾಸ್ಟೆಲ್ನಲ್ಲಿ ಇದ್ದು ಒಂದೇ ವರ್ಷ ಸರಕಾರಿ ಕೆಲಸಕ್ಕೆ ಸೇರಿದ ನಾನು ಮತ್ತು ಅವರು ಕ್ರಮಿಸಿದ ದೂರ ಮತ್ತು ದಾರಿ ಬೇರೆ ಬೇರೆ. ಉತ್ತಮ ಶಿಕ್ಷಕನಾಗಿ ಅವರು ಬಹಳಷ್ಟು ಯಶಸ್ಸನ್ನು ಕಂಡರು ಮತ್ತು ಯಶಸ್ಸಿನ ಉತ್ತುಂಗಕ್ಕೆ ಏರಿದರು. ನೂರಾರು ಪ್ರತಿಭೆಗಳನ್ನು ಜಗತ್ತಿಗೆ ಸಮರ್ಪಿಸುವ ದೃಷ್ಟಿಯಿಂದ 40 ವರ್ಷಕ್ಕೆ ನನ್ನ ಸರಕಾರಿ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದುಕೊಂಡು 6 ವರ್ಷಗಳಾಗುತ್ತಾ ಬಂತು. ನನ್ನ ಕನಸು ನನಸಾಗಲಿ ಮತ್ತು ಅದಕ್ಕಾಗಿ ದುಡಿಯುವ ಶಕ್ತಿ ಮತ್ತು ಮನಸ್ಸನ್ನು ಅಲ್ಲಾಹು ಕೊಡಲಿ ಎಂದು ತಾವೆಲ್ಲರೂ ನನಗಾಗಿ ಪ್ರಾರ್ಥಿಸಿರಿ. ಮಿತ್ರ ಯಾಕೂಬ್ ಅವರ ಯಶಸ್ಸನ್ನು ಹೃದಯ ತುಂಬಿ ಅಭಿನಂದಿಸಿ ಅವರಿಗೆ ಸರ್ವವಿಧದ ಶುಭಾಶಯಗಳನ್ನು ಕೋರುತ್ತಿದ್ದೇನೆ. ಅವರ ಈ ಸಾಧನೆ ನಮಗೆಲ್ಲರಿಗೂ ಸ್ಫೂರ್ತಿಯಾಗಲಿ ಮತ್ತು ಸರ್ವಶಕ್ತನು ಅವರಂತಹ ಸಾವಿರಾರು ಸಾಧಕರನ್ನು ಈ ಜಗತ್ತಿಗೆ ನೀಡಲಿ ಆಮೀನ್.

LEAVE A REPLY

Please enter your comment!
Please enter your name here