ಲೇಖಕರು: ಹರ್ಷಕುಮಾರ್ ಕುಗ್ವೆ

ಕೆಲವು ವರ್ಷಗಳ ಹಿಂದೆ ದೆಹಲಿಯ ಅರ್ಥಶಾಸ್ತ್ರ ಮೇಸ್ಟ್ರೊಬ್ಬರು ಹೀಗೇ ಮಾತನಾಡುತ್ತಾ, “ಭಾರತದಲ್ಲಿ ನಿಜಕ್ಕೂ ಅರ್ಥಶಾಸ್ತ್ರದಲ್ಲಿ ಯಾವತ್ತೋ ನೊಬೆಲ್ ಪ್ರಶಸ್ತಿ ಸಿಗಬೇಕಿದ್ದ ಒಬ್ಬ ವಿದ್ವಾಂಸರಿದ್ದಾರೆ. ಆದರೆ ಅವರಿಗೆ ನೊಬೆಲ್ ಸಿಗುವ ಸಾಧ್ಯತೆ ಬಹಳ ಕಡಿಮೆ” ಎಂದರು. ಈ ಮೇಸ್ಟ್ರ ಮಾತು ಮಾತು ನನಗೆ ಬಹಳ ಕುತೂಹಲಕಾರಿ ಎನಿಸಿತು. ಯಾರು ಆ ವಿದ್ವಾಂಸರು ಎಂದು ಕೇಳಿದ್ದಕ್ಕೆ ಅವರು ನೀಡಿದ ಉತ್ತರ- “ಪ್ರೊ.ಫ್ರಭಾತ್ ಪಟ್ನಾಯಕ್” ಎಂದಾಗಿತ್ತು. ಆ ನಂತರದಲ್ಲಿ ನನಗೂ ಕುತೂಹಲ ಬಂದು ಪ್ರೊ.ಪಾಟ್ನಾಯಕ್ ಅವರ ಆರ್ಥಿಕ ಚಿಂತನೆಗಳ ಬಗ್ಗೆ ಒಂದಷ್ಟು ಆಸಕ್ತಿವಹಿಸಿದೆ. ಪ್ರೊ.ಪಾಟ್ನಾಯಕ್ ಅವರ ಆರ್ಥಿಕ ಚಿಂತನೆಗಳ ದಿಕ್ಕನ್ನು ಗ್ರಹಿಸಿದ ನಂತರ ಆ ದೆಹಲಿ ಪ್ರೊಫೆಸರ್ ಹೇಳಿದ್ದ ಮಾತು ನೂರಕ್ಕೆ ನೂರು ನಿಜ ಎನಿಸಿತು. ಅರ್ಥಶಾಸ್ತ್ರದಲ್ಲಿ ಬ್ಯಾನರ್ಜಿ ಅಮರ್ತ್ಯ ಸೇನ್ ಅವರನ್ನೂ ಮೀರಿಸುವ ಅಪಾರ ಜ್ಞಾನ ಹೊಂದಿದ್ದರೂ ಪ್ರೊ.ಪಾಟ್ನಾಯಕ್ ಮಾರ್ಕ್ಸ್ ವಾದಿ ತತ್ವಶಾಸ್ತ್ರವನ್ನು ತಮ್ಮ ಚಿಂತನೆಯಲ್ಲಿ ಅಳವಡಿಸಿಕೊಂಡಿರುವುದೇ ಇದಕ್ಕೆ ಕಾರಣ ಎಂಬುದು ನನಗೂ ಅರಿವಾಯಿತು.

ಇತ್ತೀಚೆಗೆ ಎನ್ನಾರೈ ಅಭಿಜಿತ್ ಬ್ಯಾನರ್ಜಿ ಅವರಿಗೆ ನೊಬೆಲ್ ಪ್ರಶಸ್ತಿ ಬಂದ ನಂತರ ಹಲವಾರು ಚರ್ಚೆಗಳು ನಡೆಯುತ್ತಿವೆ. ಯಾವಾಗ ಕಾಂಗ್ರೆಸ್ ನಾಯಕರು ಅಭಿಜಿತ್ ಬ್ಯಾನರ್ಜಿಯನ್ನು “ಇವ ನಮ್ಮವ, ಇವ ನಮ್ಮವ” ಎಂದು ಕ್ಲೇಮ್ ಮಾಡಿಕೊಂಡರೋ ಕೂಡಲೇ ಚೇಳು ಕಡಿದಂತೆ ಆಡಿದ ಬಿಜೆಪಿಯ ಕೆಂದ್ರ ನಾಯಕರು “ಅವನಾರವ ಅವನಾರವ” ಎಂದು ಬ್ಯಾನರ್ಜಿಯವರನ್ನು ದೂರವಿಡತೊಡಗಿದರು. ಕಳೆದ ಲೋಕಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷ ಘೋಷಿಸಿದ್ದ “ನ್ಯಾಯ್”- ಬಡವರಿಗೆ ಆದಾಯ ಖಾತ್ರಿ ಯೋಜನೆಯ ರೂವಾರಿ ಅಭಿಜಿತ್ ಬ್ಯಾನರ್ಜಿಯವರೇ ರೂಪಿಸಿದ್ದು ಎಂದು ಕಾಂಗ್ರೆಸ್ ಮುಖಂಡರು ನೀಡಿದ ಒಂದೇ ಹೇಳಿಕೆ ಸಾಕಾಯಿತು. ಕೇಂದ್ರದ ರೈಲು ಮಂತ್ರಿ ಪಿಯೂಶ್ ಗೋಯೆಲ್ ಮನಬಂದಂತೆ ಮಾತಾಡತೊಡಗಿದರು. ಅಭಿಜಿತ್ ಬ್ಯಾನರ್ಜಿಯ ಮೇಲೆ ವೈಯಕ್ತಿಕ ದಾಳಿಯನ್ನೇ ಶುರುವಿಟ್ಟುಕೊಂಡರು. ಹಾಗೆ ನೋಡಿದರೆ ಅಭಿಜಿತ್ ಬ್ಯಾನರ್ಜಿ ಬಿಜೆಪಿಯ ಕೆಲವರು ಭಾವಿಸಿಕೊಂಡಂತೆ ಬಿಜೆಪಿ ಸರ್ಕಾರದ ಅಥವಾ ಮೋದಿ ಸರ್ಕಾರದ ವಿರೋಧಿಯೇನೂ ಅಲ್ಲ. ವಾಸ್ತವದಲ್ಲಿ “ನ್ಯಾಯ್” ಯೋಜನೆ ಅಭಿಜಿತ್ ಬ್ಯಾನರ್ಜಿ ರೂಪಿಸಿದ ಯೋಜನೆ ಆಗಿರಲಿಲ್ಲ. “ಇಂತಹ ಒಂದು ಯೋಜನೆ ರೂಪಿಸುತ್ತಾ ಇದ್ದೇವೆ ನಮಗೆ ಅಂಕಿ ಸಂಖ್ಯೆಗಳನ್ನು ಕೊಡಿ ಎಂದರು. ನಾನು ಕೊಟ್ಟೆ” ಎಂದು ಇತ್ತೀಚೆಗೆ ಬ್ಯಾನರ್ಜಿ ಕರಣ್ ಥಾಪರ್ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದ ಬ್ಯಾನರ್ಜಿ “ನಾವು ಪಕ್ಷಾತೀತವಾಗಿ ಕೆಲಸ ಮಾಡುತ್ತೇವೆ. ಗುಜರಾತಿನಲ್ಲಿ ಮೋದಿಯವರ ಜೊತೆಗೂ ಕೆಲಸ ಮಾಡಿದ್ದೇವೆ, ರಾಜಾಸ್ತಾನ, ಮಧ್ಯಪ್ರದೇಶ ಸರ್ಕಾರಗಳೂ ತಮ್ಮ ನೀತಿ ನಿರೂಪಣೆಗೆ ನಮ್ಮ ಸಹಾಯ ಪಡೆಯುತ್ತಿವೆ” ಎಂದು ಹೇಳಿದ್ದರು. ಬಿಜೆಪಿಯ ಜೊತೆಗೂ ಸೇರಿ ಕೆಲಸ ಮಾಡಲು ತಯಾರಿದ್ದರೂ ತಮ್ಮನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸಿ ಚರ್ಚೆಗಳಾಗುತ್ತಿರುವ ಬಗ್ಗೆ ಅವರು ಬಹಳ ಬೇಜಾರಾಗಿದ್ದರು.


ಮೋದಿ ಸರ್ಕಾರ ಜಾರಿಗೊಳಿಸಿದ್ದ ಡಿಮಾನೆಟೈಸೇಶನ್ ಮತ್ತು ಜಿ ಎಸ್ ಟಿ ಗಳ ಕುರಿತು ಅಭಿಜಿತ್ ಬ್ಯಾನರ್ಜಿ ಸಕಾರಣವಾಗಿಯೇ ತಕರಾರು ಎತ್ತಿರುವುದನ್ನು ನೀವು ಗಮನಿಸಿರಬಹುದು. ಆದರೆ ಇಲ್ಲಿ ನಾವು ಕೇಳಬೇಕಾದ ಪ್ರಶ್ನೆ ಏನೆಂದರೆ ಇಷ್ಟು ದಿನ ಅಭಿಜಿತ್ ಬ್ಯಾನರ್ಜಿ ಯಾಕೆ ಈ ಕುರಿತು ಮಾತಾಡಿರಲಲ್ಲ? ಈಗ ಅವರಿಗೆ ನೊಬೆಲ್ ಪ್ರಶಸ್ತಿ ಬರದೇ ಇದ್ದಿದ್ದರೆ ಬಹುಶಃ ಅವರ ಅಭಿಪ್ರಾಯ ಯಾರಿಗೂ ತಿಳಿಯುತ್ತಲೇ ಇರಲಿಲ್ಲ ಎಂಬುದು ದಿಟ.

ಅಭಿಜಿತ್ ಬ್ಯಾನರ್ಜಿಯವರ ಆರ್ಥಿಕ ವಿಚಾರಗಳ ಬಗ್ಗೆ ನಾವು ಬಹಳ ಭ್ರಮೆಗಳನ್ನೇನೂ ಇಟ್ಟುಕೊಳ್ಳುವ ಅಗತ್ಯವಿಲ್ಲ. ಅವರ ಇತ್ತೀಚಿನ ಕೆಲ ಹೇಳಿಕೆಗಳು ಮತ್ತು ಸಂದರ್ಶನಗಳ ಮೂಲಕ ನನಗೆ ಅನಿಸಿದ್ದೇನೆಂದರೆ ಹಿರಿಯ ಅರ್ಥಶಾಸ್ತ್ರಜ್ಞ, ನೊಬೆಲ್ ವಿಜೇತ ಅಮರ್ತ್ಯ ಸೇನ್ ಅವರಷ್ಟೂ ಗಟ್ಟಿತನ ಅಥವಾ ಖಚಿತತೆ ಬ್ಯಾನರ್ಜಿಯವರ ವಿಚಾರಗಳಲ್ಲಿ ಇಲ್ಲ ಎಂದು. ಭಾರತ ಇಂದು ಎದುರಿಸುತ್ತಿರುವ ಆರ್ಥಿಕ ಹಿಂಜರಿತದ ಕುರಿತು ಅವರ ಗ್ರಹಿಕೆ ತೀರಾ ಮೇಲುಮಟ್ಟದಲ್ಲಿದೆ. ಅವರು ದೇಶದಲ್ಲಿ ಜನರಲ್ಲಿ ಕೊಳ್ಳುವ ಶಕ್ತಿ ಕುಸಿದಿರುವುದನ್ನು ಸರಿಯಾಗಿಯೇ ಗುರುತಿಸುತ್ತಾರಾದರೂ ಅದಕ್ಕೆ ಮೂಲ ಕಾರಣವೇನು ಎಂಬ ಬಗ್ಗೆ ಸೂಕ್ತ ವಿವರಣೆ ಅವರಲ್ಲಿಲ್ಲ. ಹೀಗಾಗಿ ಇಂತಹ ಹಿಂಜರಿತಕ್ಕೆ ಬಂಡವಾಳಿಗರ ಸರಕುಗಳಿಗೆ “ಬೇಡಿಕೆ ಸೃಷ್ಟಿಸುವ” ತಕ್ಷಣದ ಪರಿಹಾರವನ್ನಷ್ಟೇ ಸೂಚಿಸಲು ಅವರಿಗೆ ಸಾಧ್ಯ. “ಗುಂಡಿ ತೋಡಿ ಗುಂಡಿ ಮುಚ್ಚಿ” ಎನ್ನುವ ಕೇನ್ಸ್ (Keyns) ಸಿದ್ಧಾಂತದ ಆಚೆಗೆ ಬ್ಯಾನರ್ಜಿಯವರ ಗ್ರಹಿಕೆ ಇಲ್ಲವೆಂಬುದನ್ನು ನೋಡಬಹುದು. ಲಾಭಬಡುಕ ಬಂಡವಾಳಶಾಹಿ ಸಂಕಷ್ಟಕ್ಕೆ ಬಿದ್ದಾಗ ಸರ್ಕಾರ ಅದರ ನೆರವಿಗೆ ಬಂದು ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚುವಂತೆ ಮಾಡಬೇಕು ಎಂಬುದು ಕೇನ್ಸ್ ಸಿದ್ಧಾಂತದ ಸಾರ. ಈಗ ಬ್ಯಾನರ್ಜಿ ಸಹ ಅದನ್ನೇ ಹೇಳುತ್ತಿದ್ದಾರೆ. ದೇಶಕ್ಕೆ ನವ ಉದಾರವಾದಿ ಆರ್ಥಿಕತೆ ಪರಿಚಯಿಸಿ ಇಂದಿನೆಲ್ಲಾ ಸಂಕಷ್ಟಕ್ಕೆ ನಾಂದಿ ಹಾಡಿದ್ದ ಮನಮೋಹನ್ ಸಿಂಗ್ ಕೂಡಾ ಇದನ್ನೇ ಹೇಳುತ್ತಿರುವುದು. ನಾವೂ ಸಹ ಇಂದಿನ ಪರಿಸ್ಥಿತಿಯಲ್ಲಿ ಮೋದಿ ಸರ್ಕಾರಕ್ಕೆ ಅದನ್ನೇ ಒತ್ತಾಯಿಸಬೇಕೆಂಬುದು ನಿಜವಾದರೂ ಇದು ಶಾಶ್ವತ ಪರಿಹಾರ ಅಲ್ಲ ಎಂಬ ಅರಿವೂ ಮುಖ್ಯ.
ಕರಣ್ ಥಾಪರ್ ಅವರೊಂದಿಗಿನ ಸಂದರ್ಶನದಲ್ಲಿಯೇ ದೇಶವನ್ನು ಕಾಡುತ್ತಿರುವ ನಿರುದ್ಯೋಗದ ಸಮಸ್ಯೆಗೆ ಪರಿಹಾರವೇನೆಂದು ಕೇಳಿದ್ದಕ್ಕೆ ಬ್ಯಾನರ್ಜಿಯವರ ಉತ್ತರವೇನು ಗೊತ್ತೇ? “ಸರ್ಕಾರಿ ಉದ್ಯೋಗಗಳನ್ನೇ ಅಪ್ರಸ್ತುತಗೊಳಿಸುವುದು ಮತ್ತು ಯುವಕರು ತಾವಾಗಿಯೇ ನಾಲಾಯಕ್ ಎಂಬ ಅಭಿಪ್ರಾಯಕ್ಕೆ ಬರುವಂತೆ ಮಾಡುವ ತಂತ್ರಗಳನ್ನು ಅವರು ಸೂಚಿಸುತ್ತಾರೆ. ಇದಕ್ಕೂ ಅಪಾಯಕಾರಿ ನಿಲುವು. ಅವರ ಪ್ರಕಾರ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ನಾಲ್ಕೈದು ವರ್ಷಗಳ ಕಾಲದ ವರೆಗೆ ತಾತ್ಕಾಲಿಕ ಆಧಾರದಲ್ಲಿ ನೇಮಕ ಮಾಡಿಕೊಂಡು ನಂತರ ಹಲವು ಮಾನದಂಡಗಳ ಮೂಲಕ unfit ಆದವರನ್ನು ಫಿಲ್ಟರ್ ಮಾಡಬೇಕು. ಆಗ ಯಾರಿಗೂ ಖಾಯಂ ಸರ್ಕಾರಿ ಉದ್ಯೋಗದ ಆಸೆ ಹುಟ್ಟುವುದಿಲ್ಲ. ಪದವಿ ಪಡೆದವರಿಗೆಲ್ಲಾ ಉದ್ಯೋಗ ಹುಟ್ಟಿಸಲಾಗದ ಸರ್ಕಾರಗಳು ಹೇಗೆ ಎಲ್ಲಾ ಹುದ್ದೆಗಳ ನೇಮಕಾತಿಯಲ್ಲೂ CET ಪರೀಕ್ಷೆ ಎಂಬ ನಟೋರಿಯಸ್ ತಂತ್ರವನ್ನು ಅಳವಡಿಸಿದವೋ ಆ ಬಗೆಯ ಮತ್ತೊಂದು ತಂತ್ರವನ್ನಷ್ಟೆ ಅಭಿಜಿತ್ ಹೇಳಿದ್ದಾರೆ. ವಾಸ್ತವದಲ್ಲಿ ಪದವಿ ಪಡೆದವರಿಗೆ ಉದ್ಯೋಗವನ್ನು ಒಂದು ಮೂಲಬೂತ ಹಕ್ಕು ಎಂದು ಪರಿಗಣಿಸಬೇಕಾಗಿದ್ದು ಯಾವುದೇ ಕಲ್ಯಾಣ ರಾಜ್ಯ ಮಾಡಬೇಕಾದ ಕೆಲಸ. ತಮ್ಮನ್ನು ಕಲ್ಯಾಣಪರ ಎಡಪಂಥೀಯ ಎಂದು ಕರೆದುಕೊಳ್ಳುವ ಅಭಿಜಿತ್ ಬ್ಯಾನರ್ಜಿ ವಾಸ್ತವದಲ್ಲಿ ಅದರ ವಿರುದ್ಧ ನಿಲುವು ಹೊಂದಿದ್ದಾರೆ.
ಆದರೆ ನೀವು ಪ್ರೊ. ಪ್ರಭಾತ್ ಪಾಟ್ನಾಯಕ್ ಅವರ ಚಿಂತನೆಗಳಲ್ಲಿ ಈ ಬಗೆಯ ತೆಳುವಾದ ಮೇಲುಮೇಲಿನ ಗ್ರಹಿಕೆಯನ್ನು ಕಾಣುವುದಿಲ್ಲ. ಡಿಮಾನೆಟೈಸೇಶನ್ ನಡೆದ ಒಂದೆರಡು ದಿನಗಳಲ್ಲಿಯೇ ಅದರ ವಿರುದ್ಧ ಕಟು ಟೀಕೆ ಮಾಡಿದ್ದ ಪಾಟ್ನಾಯಕ್ ಅದೆಂತಹ ಅವೈಜ್ಞಾನಿಕ ಮೂರ್ಖ ಯೋಜನೆ ಎಂದು ಎಳೆಎಳೆಯಾಗಿ ಬಿಡಿಸಿಟ್ಟಿದ್ದರು. ಆಗ ಆ ಲೇಖನವನ್ನು ನಾನು ಅನುವಾದಿಸಿದ್ದೆ. ಸಮಾಚಾರ.ಕಾಂ ಪತ್ರಿಕೆ ಪ್ರಕಟಿಸಿತ್ತು. ಭಾರತದ ಆರ್ಥಿಕ ಬಿಕ್ಕಟ್ಟು ಹೇಗೆ ಬಂಡವಾಳಶಾಹಿ ವ್ಯವಸ್ಥೆಯ ರಾಚನಿಕ ಬಿಕ್ಕಟ್ಟಿನ ಭಾಗವಾಗಿದೆ, ಇವತ್ತಿನ ಜಾಗತೀಕರಣದ ಕಾಲದ ಬಂಡವಾಳಶಾಹಿ ಸಣ್ಣ ಉತ್ಪಾದನೆಗಳನ್ನು ಹೇಗೆ ನಾಶ ಮಾಡುತ್ತಿದೆ, ಯಾಕೆ ಮಾಡುತ್ತಿದೆ, ರೈತಾಪಿಯನ್ನು ಹೇಗೆ ಬಿಕ್ಕಟ್ಟಿನಲ್ಲಿ ಮುಳುಗಿಸಿದೆ ಎಂದು ಅತ್ಯಂತ ಖಚಿತತೆಯಿಂದ ಮಾತನಾಡುವ ಪಾಟ್ನಾಯಕ್ ಇಡೀ ದೇಶದ ಆರ್ಥಿಕತೆನ್ನು ರೈತಾಪಿ ಕೇಂದ್ರಿತವಾಗಿ ಬದಲಾಯಿಸದೇ ಇದ್ದರೆ ಈ ಬಿಕ್ಕಟ್ಟಿನಿಂದ ಪರಿಹಾರವಿಲ್ಲ ಎಂದು ತಿಳಿಸುತ್ತಾರೆ. ಬಂಡವಾಳಿಗ ವ್ಯವಸ್ಥೆಯ ಆಂತರಿಕ ಸ್ವರೂಪದಿಂದಲೇ ಸೃಷ್ಟಿಯಾಗಿರುವ ಈ ಬಿಕ್ಕಟ್ಟು ಪ್ರಪಂಚ ಮಟ್ಟದ ಬಿಕ್ಕಟ್ಟಿನೊಂದಿಗೆ ಹೊಂದಿರುವ ಸಂಬಂಧವನ್ನು ಹೇಳುತ್ತಲೇ ಇಂದು ಬಂಡವಾಳಶಾಹಿ ಸೃಷ್ಟಿಸಿರುವ ಈ ಬಿಕ್ಕಟ್ಟು ಬಜೆಟ್ ಗಳ ಮೂಲಕ ಟ್ರಿಕ್ ಮಾಡಿ ಪರಿಹರಿಸಿಕೊಳ್ಳುವ ಬಿಕ್ಕಟ್ಟಲ್ಲ. ಇದಕ್ಕೆ ಒಳದಾರಿಯೂ ಇಲ್ಲ ಕಳ್ ದಾರಿಯೂ ಇಲ್ಲ. This is a structural crisis. ಇದಕ್ಕೆ ಜನರು ಶಾಶ್ವತ ಪರಿಹಾರ ಹುಡುಕಿಕೊಳ್ಳುವುದೇ ಈಗ ಉಳಿದಿರುವ ದಾರಿ ಭಾರತದಂತಹ ದೇಶಗಳು ಈಗಿರುವ ಶ್ರೀಮಂತ ದೇಶಳು ಮತ್ತು ಕಾರ್ಪೊರೇಟ್ ಗಳ ಹಿತಕಾಯುವ ಬಂಡವಾಳಶಾಹಿ ಜಾಗತೀಕರಣ ವ್ಯವಸ್ಥೆಯ ಸಂಕೋಲೆಯಿಂದ ತಕ್ಷಣ ಕಳಚಿಕೊಳ್ಳಬೇಕು (delinking from capitalist globalization). ನಂತರ ಹೊಸ ಮಾನದಂಡಗಳ ಆಧಾರದಲ್ಲಿ ಸಹಕಾರಿ ತತ್ವದ ಜಾಗತಿಕರಣವೊಂದು ಸಾಧ್ಯವಾಗಬೇಕು. ಆದರೆ ಇದಕ್ಕೆ ಭಾರತದ ಕಾರ್ಪೊರೇಟ್ ಬಂಡವಾಳಶಾಹಿ ವರ್ಗ (ಅದರ ಪರವಾದ ರಾಜಕೀಯ ಪಕ್ಷಗಳನ್ನು ಸೇರಿಸಿಕೊಂಡು) ಸುತಾರಾಂ ತಯಾರಿಲ್ಲ. ಹೀಗಾಗಿ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತಾಪಿ, ಕಾರ್ಮಿಕರು ಮತ್ತಿತರ ಜನವರ್ಗಗಳು ದೊಟ್ಟ ಮಟ್ಟದ ನಿರ್ಣಾಯಕ ಹೋರಾಟ ನಡೆಸಿ, ಬಂಡವಾಳಶಾಹಿಯ ವ್ಯವಸ್ಥೆಯ ಮೂಲರಚನೆಯನ್ನೇ ಬದಲಿಸುವ social conflict ಮಾತ್ರ ಸರಿಯಾದ ಪರಿಹಾರ ಆಗಬಲ್ಲದು. ಇಂತಹ ಶಾಶ್ವತ ಪರಿಹಾರಕ್ಕೆ ಮುಂದೆ ಬರಲಿರುವ ದೊಡ್ಡ ಮಟ್ಟದ ಬಿಕ್ಕಟ್ಟು ದಾರಿ ಮಾಡಿಕೊಡಲಿದೆ” ಎಂದು ಪ್ರಭಾತ್ ಪಾಟ್ನಾಯಕ್ ಖಚಿತವಾಗಿ ಹೇಳುತ್ತಾರೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಪಡೆದು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿ ಕೆಲಸ ಮಾಡಿ 1974ರ ನಂತರ ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಸೆಂಟರ್ ಫಾರ್ ಎಕನಮಿಕ್ ಸ್ಟಡೀಸ್ ಅಂಡ್ ಪ್ಲಾನಿಂಗ್ ನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವ ಓಡಿಶಾ ರಾಜ್ಯದ ಪ್ರೊ.ಪಾಟ್ನಾಯಕ್ 2010ರಲ್ಲಿ ನಿವೃತ್ತಿ ಹೊಂದಿದರು. ಕೇರಳ ಸರ್ಕಾರದ ಆರ್ಥಿಕ ನೀತಿ ನಿರೂಪಣೆಗಳಿಗೂ ಕೆಲಸ ಮಾಡಿದ್ದರು. ವಿಶೇಷವೆಂದರೆ ಅಭಿಜಿತ್ ಬ್ಯಾನರ್ಜಿಯವರಿಗೂ ಪ್ರೊ.ಪಾಟ್ನಾಯಕ್ ಮೇಸ್ಟ್ರಾಗಿದ್ದರು. ಸಮಗ್ರ ಅರ್ಥಶಾಸ್ತ್ರ ಮತ್ತು ಪೊಲಿಟಿಕಲ್ ಎಕಾನಮಿಯಲ್ಲಿ ಅಗಾಧ ಪಾಂಡಿತ್ಯ ಹೊಂದಿರುವ ಅವರು Inflation and Growth (1988), Economics and Egalitarianism (1990), Whatever Happened to Imperialism and Other Essays (1995), Accumulation and Stability Under Capitalism (1997), The Retreat to Unfreedom (2003), The Value of Money (2008) ಮತ್ತು Re-envisioning Socialism (2011) ಕೃತಿಗಳನ್ನು ಬರೆದಿದ್ದಾರೆ. ಹತ್ತು ನೊಬೆಲ್ ಪ್ರಶಸ್ತಿ ಕೊಡಬಹುದಾದ ಅರ್ಹತೆ ಈ ಕೃತಿಗಳಿಗಿದೆ.

ಫ್ರೆಂಚ್ ಲೇಖಕ, ಬುದ್ಧಿಜೀವಿ ಜೀನ್ ಪಾಲ್ ಸಾರ್ತರ್, ದಕ್ಷಿಣ ಅಮೆರಿಕದ ಜಗತ್ ಪ್ರಸಿದ್ಧ ಕವಿ, ಹೋರಾಟಗಾರ ಪಾಬ್ಲೊ ನೆರಡೂ, ರಷ್ಯಾದ ಲೇಖಕ ಮಿಖಾಯಿಲ್ ಶೋಲೋಖೋವ್ ಅವರಂತಹ ಕೆಲವರನ್ನು ಬಿಟ್ಟರೆ ಮಾರ್ಕ್ಸ್ ವಾದಿ ಸಮಾಜವಾದಿ ಚಿಂತನೆಯೊಂದಿಗೆ ಗುರುತಿಸಿಕೊಂಡವರಿಗೆ ನೊಬೆಲ್ ನೀಡಿರುವ ಉದಾಹರಣೆ ಇಲ್ಲ. 60ರ ದಶಕದಲ್ಲಿ ಜೀನ್ ಪಾಲ್ ಸಾರ್ತರ್ ಗೆ ಸಾಹಿತ್ಯ ವಿಭಾಗದಲ್ಲಿ ನೀಡಲಾಗಿತ್ತು. ಆದರೆ ಸೈದ್ಧಾಂತಿಕ ಕಾರಣದಿಂದಲೇ ತಮಗೆ ಬಂದ ಅಪಾರ ಮೊತ್ತದ ಪ್ರಶಸ್ತಿಯನ್ನು ಅವರು ಸಾರಾಸಗಟಾಗಿ ನಿರಾಕರಿಸಿದ್ದರು. ಪಾಬ್ಲೊ ನೆರೂಡಾಗೆ ನೊಬೆಲ್ ಕೊಡದಿದ್ದರೆ ನೊಬೆಲ್ ಪಶಸ್ತಿಗೇ ಮರ್ಯಾದೆ ಸಿಗುವುದಿಲ್ಲ ಎಂಬ ಕಾರಣದಿಂದಲೋ ಏನೋ ಬಹಳ ತಡವಾಗಿ ನೀಡಲಾಗಿತ್ತು.

ಸಧ್ಯದ ಕಾಲಮಾನದಲ್ಲಿ ನವ ಉದಾರವಾದಿ ವ್ಯವಸ್ಥೆಯೊಂದಿಗೆ ಹೊಂದಿಕೊಂಡು ಹೋಗುವ ಮಿಸಳಬಾಜಿ ಫಾರ್ಮುಲಾ ನೀಡುವಂತವರಿಗೆ ಮಾತ್ರ ನೊಬೆಲ್ ಸಿಗಬಹುದೇ ವಿನಃ ಪ್ರೊ.ಪಾಟ್ನಾಯಕ್ ತರದವರಿಗೆ ಸಾಧ್ಯವಿಲ್ಲ. ಮತ್ತವರು ಅದನ್ನು ನಿರೀಕ್ಷಿಸಲಾರರೂ ಕೂಡಾ.

LEAVE A REPLY

Please enter your comment!
Please enter your name here