ಭಾಗ: 01

 

-ಡಾ. ಮುಝಫ್ಫರ್ ಅಸ್ಸಾದಿ ವಿಶೇಷ ಅಧಿಕಾರಿ, ರಾಯಚೂರು ವಿಶ್ವವಿದ್ಯಾಲಯ

ಕರ್ನಾಟಕದಲ್ಲಿ ಸಮಾಜ ಮತ್ತು ಅಧಿಕಾರ ರಾಜಕಾರಣದ ನಡುವಿನ ಸಂಬಂಧವನ್ನು ಅರ್ಥೈಸುವ ಸಂದರ್ಭದಲ್ಲಿ ಕೆಲವು ಬಹು ಮುಖ್ಯ ವಾದಗಳನ್ನು ಮುಂದಿಡಬಹುದು:

  1. ಇವೆರಡು ಐಡೆಂಟಿಟಿ ಅಥವಾ ಅಸ್ಮಿತೆ ನಿರ್ಮಿತಿ ರಾಜಕಾರಣದ ಪ್ರಕ್ರಿಯೆಗಳು.
  2. ಸಾಮಾಜಿಕ ಧ್ರುವೀಕರಣ ಮತ್ತು ಶಾಸನೀಯ ನೀತಿಗಳು ಕರ್ನಾಟಕದ ಅಧಿಕಾರ ರಾಜಕಾರಣದ ಸ್ವರೂಪವನ್ನು, ಚೌಕಟ್ಟನ್ನು ಬದಲಾಯಿಸಿವೆ ಮಾತ್ರವಲ್ಲದೇ ಹೊಸ ರಾಜಕೀಯ ಸಮೀಕರಣಕ್ಕೆ ದಾರಿ ಮಾಡಿ ಕೊಟ್ಟಿವೆ.
  3. ಮಾದರಿ ರಾಜ್ಯವೆಂದು ಕರೆಸಲ್ಪಡುತ್ತಿದ್ದ ಕರ್ನಾಟಕವು ಕೋಮುವಾದದ ಧ್ರುವೀಕರಣದಿಂದ ಸಂಘರ್ಷಗಳ ರಾಜ್ಯವಾಗುತ್ತಿದೆ.
  4. ಕರ್ನಾಟಕದಲ್ಲಿ ಹುಟ್ಟಿದ ಹಾಗೂ ಬೆಳೆದ ನವ ಸಾಮಾಜಿಕ ಚಳುವಳಿಗಳು ಕೂಡ ಅಧಿಕಾರ ರಾಜಕಾರಣವನ್ನು ಪ್ರಭಾವಿಸಿವೆ.
  5. ಅಧಿಕಾರ ರಾಜಕಾರಣವು ಹೊಸ ರಾಜಕೀಯ ಕಥನಕ್ಕೆ ದಾರಿ ಮಾಡಿಕೊಟ್ಟಿದ್ದು ದಿಟ-ಅದು ಕಾಂಗ್ರೆಸ್ ಕಥನದಿಂದ “ಕಾಂಗ್ರೇಸೇತರ” ಕಥನಕ್ಕೆ ದಾರಿ ಮಾಡಿಕೊಟ್ಟಿದೆ.

ಅಸ್ಮಿತೆ ಅಥವಾ ಐಡೆಂಟಿಟಿ: ಹುಡುಕಾಟ ಮತ್ತು ನಿರ್ಮಿತಿ

ಕರ್ನಾಟಕದಲ್ಲಿ ಬದಲಾಗುತ್ತಿರುವ ಸಮಾಜ ಮತ್ತು ಅಧಿಕಾರದ ರಾಜಕಾರಣವನ್ನು ಅರ್ಥೈಸಬೇಕಾದರೆ ಕರ್ನಾಟಕದಲ್ಲಿ ಹುಟ್ಟಿದ ಮತ್ತು ಬೆಳೆದ ಐಡೆಂಟಿಟಿ ಅಥವಾ ಅಸ್ಮಿತೆ ರಾಜಕಾರಣವನ್ನು ವಿಶ್ಲೇಷಿಸುವುದು ಅವಶ್ಯಕ. ಅದರ ಹುಡುಕಾಟಕ್ಕೆ ಒಂದು ಇತಿಹಾಸವಿದೆ. ಅದನ್ನು ಗತವೈಭವದ ಹುಡುಕಾಟದಿಂದಲೇ ನೋಡಬಹುದು. ಇದಕ್ಕೆ ಸಾಕ್ಷಿ ಆಲೂರು ವೆಂಕಟರಾವ್. ವಿಜಯನಗರದ ಗತವೈಭವದ ಹುಡುಕಾಟದಿಂದ ಈ ಅಸ್ಮಿತೆ/ಐಡೆಂಟಿಟಿ ಪ್ರಶ್ನೆಗಳು ಆರಂಭಗೊಂಡರೂ, ಅದು ಸಂಪೂರ್ಣಗೊಳ್ಳದ ಹುಡುಕಾಟ. ಯಾಕೆಂದರೆ ಈ ಹುಡುಕಾಟದಲ್ಲಿ “ಕೋಮುವಾದದ” ಸೊಗಡು ಇದೆ. “ಹಿಂದೂ” ರಾಜ್ಯದ ನಷ್ಟದ ಪ್ರಲಾಪ ಇದೆ. ಹೊರತು ಮೂಲ ಕರ್ನಾಟಕದ ಭೌಗೋಳಿಕತೆಯ ಹುಡುಕಾಟವಿಲ್ಲ. ಇಲ್ಲಿ ಕರ್ನಾಟಕದ ಚರಿತ್ರೆಯನ್ನು ತಿರುಚುವ ಯತ್ನ ಸ್ಪಷ್ಟ. ಇದು ವಸಾಹತುಶಾಹಿಗಳು ಕಟ್ಟಿದ ಇತಿಹಾಸದ ವಿಸ್‍ತೃತ ಭಾಗ. ವಸಾಹತುಶಾಹಿ ಇತಿಹಾಸವನ್ನು “ಹಿಂದೂ”, “ಮುಸಲ್ಮಾನ” ಹಾಗೂ “ಬ್ರಿಟಿಷ್” ಇತಿಹಾಸವೆಂದು ವಿಂಗಡಿಸಿದ್ದನ್ನು ಇಲ್ಲಿ ಗಮನಿಸಬೇಕು. ಇದೇ ರೀತಿಯ ಕಟ್ಟುವಿಕೆ ಕರ್ನಾಟಕದಲ್ಲೂ ನಡೆಯಿತು. ಆಲೂರು ವೆಂಕಟರಾಯರು ಇದಕ್ಕೆ ಸಾಕ್ಷಿಯಾದರು. ಈ ರೀತಿಯ ರಚನೆಯ ಪ್ರಭಾವ ಈಗಲೂ ಕರ್ನಾಟಕದ ಮೇಲೆ ಆಗುತ್ತಿರುವುದು ಸ್ಪಷ್ಟ. ಸಮಾಜ ಮತ್ತೆ-ಮತ್ತೆ ಧ್ರುವೀಕರಣಗೊಳ್ಳುತ್ತಿರುವುದು ಇದಕ್ಕೆ ಸಾಕ್ಷಿ.

ಕರ್ನಾಟಕ ಹಾಗೂ ಕನ್ನಡದಲ್ಲಿ ಏಕರೂಪದ ಅಸ್ಮಿತೆ/ಐಡೆಂಟಿಟಿ ಇಲ್ಲ. ಮಾತ್ರವಲ್ಲದೆ ಅದಕ್ಕೆ ಭಾಷೆಯೊಂದೆ ಮುಖ್ಯವಾಗುವುದಿಲ್ಲ. ಕರ್ನಾಟಕದೊಳಗೆ ಬಹುರೂಪಿ ಅಸ್ಮಿತೆ ಇದೆ. ಈ ಅಸ್ಮಿತೆ/ಐಡೆಂಟಿಟಿ ನಿರ್ಮಿತಿಯ ಸಂದರ್ಭದಲ್ಲಿ ಭೌಗೋಳಿಕತೆ, ಸಂಸ್‍ಕೃತಿ, ವಿವಿಧ ಉಪಭಾಷೆಗಳು, ನದಿಗಳ ಗಡಿಗಳು, ನಗರಗಳ ಸರಹದ್ದುಗಳು, ಜಾತಿ ಸಂರಚನೆಗಳು, ಅಭಿವೃದ್ಧಿ ಮಾದರಿಗಳು, ಇತಿಹಾಸದ ಸ್ಮ ೃತಿ ಗಳು ಕೂಡ ಅಷ್ಟೇ ಮುಖ್ಯವಾಗುತ್ತದೆ.

ಕರ್ನಾಟಕವೆಂದ ಕೂಡಲೇ ನೆನಪಾಗುವುದು “ಕಾವೇರಿಯಿಂದ ಗೋದಾವರಿ ಇರ್ಪ ಕನ್ನಡ ನಾಡು” ಎಂದು ಹೇಳಿದ ಕವಿರಾಜ ಮಾರ್ಗನ ಮಾತು. ಕಾವೇರಿ ಮತ್ತು ಗೋದಾವರಿ ಕನ್ನಡ ನಾಡನ್ನು ನಿರ್ಧರಿಸುವ ಗಡಿಗಳಾಗುತ್ತವೆ. ಇವು ನದಿಗಳು ಮಾತ್ರವಲ್ಲ ಕನ್ನಡ ನಾಗರೀಕತೆಯ, ಕನ್ನಡ ಸಂಸ್‍ಕೃತಿಯನ್ನು ನಿರ್ಧರಿಸುವ ಗಡಿಗಳು. ಕರ್ನಾಟಕ ಅಸ್ಮಿತೆ/ಐಡೆಂಟಿಟಿಯ ಮೂಲ ಕವಿರಾಜ ಮಾರ್ಗಕ್ಕೆ ಮಾತ್ರ ಸೀಮಿತಗೊಳಿಸಬೇಕೆ? ಎಂದಾಗಲೆಲ್ಲಾ ಕುಮಾರ ವ್ಯಾಸನ ‘ಕರ್ನಾಟ ಭಾರತ ಮಂಜರಿ’ ನೆನಪಾಗುತ್ತದೆ. ಇದು ಮೂಲತಃವಾಗಿ ಮಹಾಭಾರತದ ಕುರಿತಾಗಿರಬಹುದು. ಅದರೊಳಗೆ “ಕರ್ನಾಟಕ” ಇರಬಹುದೇ ಎಂಬ ಗುಮಾನಿ ಇದೆ. ಇಲ್ಲಿ ಕನ್ನಡದ ಸೊಗಡು ಇದೆ. ನಿರ್ಮಿತಿಯ ಕಲ್ಪನೆ ಇದೆ. ದುರ್ಗಾ ದಾಸ್ ದಿಕ್ಷಿತ್‍ರವರು ತಮ್ಮ ‘ಪೊಲಿಟಿಕಲ್ ಹಿಸ್ಟರಿ ಆಫ್ ಚಾಲುಕ್ಯಾಸ್ ಆಫ್ ಬಾದಾಮಿ’ಯಲ್ಲಿ ಹೇಳುವಂತೆ(ಪುಟ 26) ಕರ್ನಾಟಕವೆಂದರೆ “ಯುದ್ಧೋತ್ತ ಲಕ್ಷಣಗಳಿದ್ದ ಕರ್ನಾಟ”(ಗಮನಿಸಿ:ಕರ್ನಾಟ ಶಬ್ಧ ಕರ್ನಾಟಕವಲ್ಲ)ದ ಜನರೇ? ಎಂಬ ಮಹತ್ತರವಾದ ವಾದವೂ ಇದೆ. ಆ ಕರ್ನಾಟಕ ರವಿಕೀರ್ತಿಯ ಮೂರು ಪ್ರದೇಶಗಳಾದ-ಕರ್ನಾಟ, ಕೊಂಕನ ಹಾಗೂ ಮಹಾರಾಷ್ಟ್ರದ ಒಂದು ಭಾಗವೂ ಆಗಿರಬಹುದೇ? ಅಥವಾ ಇದು ಚೀನಾದ ಪ್ರವಾಸಿ ಹುಯಾನ್ ತ್ಸಾಂಗ್‍ನ ಕಥನದ ಭಾಗವಾಗಿರಬಹುದೇ? ಕರ್ನಾಟಕವನ್ನು “ಬನವಾಸಿ ಮೂಲಕ”ವೂ ನೋಡಬಹುದೇ? “ನೆನೆಯುದೆನ್ನ ಮನವು ಬನವಾಸಿ ದೇಶಮಮಂ” ಎನ್ನುವಲ್ಲಿ ಕರ್ನಾಟಕವಿರಬಹುದೇ? ಯಾಕೆಂದರೆ ಇದನ್ನೆ ಹುಯಾನ್ ತ್ಸಾಂಗ್ “ಕರ್ನಾಟ”ವೆಂದು ಕರೆದಿರುವುದು ದಿಟ. “ಕರ್ನಾಟ ಶಬ್ಧ ಮಂಜರಿ” ಏನನ್ನು ಸೂಚಿಸುತ್ತದೆ? ಚಂದ್ರಗುಪ್ತ ಮೌರ್ಯ ತನ್ನ ಜೀವನದ ಕೊನೆಯ ದಿನಗಳಲ್ಲಿ ಜೈನನಾಗಿ ಕಳೆಯಲು ಶ್ರವಣಬೆಳಗೊಳಕ್ಕೆ ಆಗಮಿಸಿದಾಗ ಅವನಿಗೆ “ಕರ್ನಾಟಕದ” ಅರಿವಿತ್ತೇ ಅಥವಾ ಜೈನ ಧರ್ಮವೇ ಮುಖ್ಯವಾಗಿತ್ತೇ? ಕಾವ್ಯಗಳ “ಕರ್ನಾಟಕವನ್ನು” “ರಾಜಕೀಯ ಕರ್ನಾಟಕ”ವನ್ನು ಒಂದೇ ರೀತಿಯಾಗಿ ಹೋಲಿಕೆಯಾಗಿ ನೋಡಲು ಸಾಧ್ಯವಿಲ್ಲ. ಕವಿರಾಜಮಾರ್ಗನ ಕರ್ನಾಟಕ, ಐಹೋಳೆ ಶಾಸನದಿಂದ ವಿಭಿನ್ನ ವಿಜಯನಗರ ಸಾಮ್ರಾಜ್ಯಕ್ಕೆ ಬಂದಾಗಲೆಲ್ಲಾ “ಕರ್ನಾಟಕ ದಟ್ಟವಾಗುತ್ತದೆ”.

ಇವೆಲ್ಲಾ ಇತಿಹಾಸದಲ್ಲಿ ಕರ್ನಾಟಕವನ್ನು ಹುಡುಕುವ ಯತ್ನ. ಆಲೂರು ಪ್ರಲಾಪಿಸುವ ಕಾಲಘಟ್ಟ ಕರ್ನಾಟಕದ ಪುನರ್ ವಿಂಗಡನೆಯ ಕಾಲ, ಆಧುನಿಕತೆಯ ಕಾಲ, ಆಧುನಿಕೋತ್ತರದ ಕಾಲವಲ್ಲ. ವಿಶಾಲವಾದ ಆಧುನಿಕೋತ್ತರ ಕಾಲದಲ್ಲಿ ಕರ್ನಾಟಕ ಬಹಳಷ್ಟು ಬದಲಾಗಿತ್ತು. ವಿಚಿತ್ರವೆಂದರೆ ಭಾರತದ ಗತವೈಭವದ ಇತಿಹಾಸದಲ್ಲಿ ಈಗಲೂ ಕರ್ನಾಟಕದ ಸ್ಥಾನ ಹಾಗೂ ಉಲ್ಲೇಖ ಅಷ್ಟಕಷ್ಟೇ. ವಿಜಯನಗರ ಸಾಮ್ರಾಜ್ಯಕ್ಕೆ ಸಿಕ್ಕಿದ ಮಹತ್ವ ಉಳಿದ ಕರ್ನಾಟಕದ ಗತವೈಭವಕ್ಕೆ ಸಿಗುವುದಿಲ್ಲ. ಇನ್ನೊಂದು ವಿಚಿತ್ರವೆಂದರೆ ಬೆಂಗಳೂರು ಅಂತರಾಷ್ಟ್ರೀಯ ಬಂಡವಾಳದ ಕೇಂದ್ರ ಸ್ಥಾನವಾಗುವವರೆಗೂ ಉತ್ತರ ಭಾರತೀಯರಿಗೆ ಕರ್ನಾಟಕವೆಂದರೆ “ಮದ್ರಾಸಿಗಳು”, ಇಲ್ಲವೇ “ಗೋವಂಟಿಗಳು”(ಗೋವಾದವರ ಪರಿಕಲ್ಪನೆಯಲ್ಲಿ ಕನ್ನಡಿಗರೆಂದರೆ ಗೋವಂಟಿಗಳು). ಈಗ ಉತ್ತರ ಭಾರತೀಯರಿಗೆ ಕರ್ನಾಟಕವೆಂದರೆ “ಬೆಂಗಳೂರು”, ಮೈಸೂರು ಅಲ್ಲ, ಗುಲ್ಬರ್ಗಾವಲ್ಲ. ಆಧುನಿಕೋತ್ತರ ಕಾಲಾವಧಿಯಲ್ಲಿ “ಬೆಂಗಳೂರು” ಕರ್ನಾಟಕದ ಅಸ್ಮಿತೆ/ಐಡೆಂಟಿಟಿಯ ಬಹುಮುಖ್ಯ ಅಂಶವಾಗಿ ಹೊರಹೊಮ್ಮಿದರೆ ಉಳಿದ ಸ್ಥಳಗಳು, ನಗರಗಳು, ಪಟ್ಟಣಗಳು ಈ ಉಲ್ಲೇಖದಿಂದ ಹೊರಗುಳಿಯುತ್ತದೆ. ವಿಸ್‍ಮೃತಿಯ ಭಾಗಗಳಾಗುತ್ತದೆ. ಬೌದ್ಧಿಕ ಚಿಂತನೆಯೂ ಇದಕ್ಕೆ ಹೊರತಾಗಿಲ್ಲ. ಇದೇ ಸ್ಥಿತಿ ಕರ್ನಾಟಕದ ಸಬಾಲ್ಟರ್ನ್ ಪ್ರತಿರೋಧಗಳು ಭಾರತದ ಇತಿಹಾಸ ಸಂಕಲನಗಳಲ್ಲಿ ದಾಖಲಾಗುವುದೇ ಇಲ್ಲ. ಇದನ್ನು ಹೊರ ರೂಪದ ನಿರ್ಮಾಣವೆನ್ನದೆ ವಿಧಿಯಿಲ್ಲ.

ಕರ್ನಾಟಕದ ಒಳರೂಪ ನಿರ್ಮಾಣದಲ್ಲಿ ಗತವೈಭವ ಒಂದೆಡೆ ಮುಖ್ಯವಾದರೆ ಇನ್ನೊಂದೆಡೆ ಸಾಹಿತ್ಯ, ಸೂಫಿ-ನಾಥ ಪಂಥಗಳು, ಚಳುವಳಿಗಳು, ಸಿನೆಮಾಗಳು, ಪರಂಪರೆಗಳು, ಜಾತಿ ಸ್ವರೂಪಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಕುವೆಂಪು, ಅನಂತಮೂರ್ತಿ, ದೇವನೂರು ಮಹಾದೇವ, ಕಂಬಾರ, ಚಂಪಾ, ಲಂಕೇಶ್, ಶಿವರಾಮ ಕಾರಂತ, ಯಶವಂತ ಚಿತ್ತಾಲ, ನಿಸಾರ್ ಅಹ್ಮದ್, ಗೋಕಾಕ್, ದ.ರಾ.ಬೇಂದ್ರೆ, ತೇಜಸ್ವಿ, ಸಾರಾ ಅಬೂಬಕ್ಕರ್, ಬೋಳುವಾರ್, ಅಡಿಗ, ಸಿದ್ಧಲಿಂಗಯ್ಯ, ಡಿ.ಆರ್.ನಾಗರಾಜ್, ಎ.ಕೆ ರಾಮನುಜನ್, ಗಿರೀಶ್ ಕಾರ್ನಾಡ್ ಇವರೆಲ್ಲರೂ ಕರ್ನಾಟಕವನ್ನು ಮುಟ್ಟುವ ರೂಪವೇ ಬೇರೆ. ಕತೆ, ಕವನ, ನಾಟಕ, ಕಾದಂಬರಿ, ವಿಮರ್ಶೆ ಇತ್ಯಾದಿಗಳು. ಇವರೆಲ್ಲರೂ ಅಸ್ಮಿತೆ/ಐಡೆಂಟಿಟಿಗಳನ್ನು ಕನ್ನಡದ ಮೂಲಕ ನಿರ್ಮಿಸಿದರು. ಕೆಲವರು ದೇಶದ ಉದ್ದಗಲಕ್ಕೂ ತಲುಪಲು ಸಾಧ್ಯವಾದರೆ(ಡಿ.ಅರ್.ನಾಗರಾಜ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಇದಕ್ಕೆ ಉತ್ತಮ ಉದಾಹರಣೆ) ಇನ್ನು ಕೆಲವರು ಪಾಶ್ಚತ್ಯರೊಂದಿಗೆ ಮುಖಾಮುಖಿಯಾದರು(ಅರವಿಂದ ಅಡಿಗ, ಶಶಿ ದೇಶಪಾಂಡೆ, ಸಿ.ಡಿ.ನರಸಿಂಹಯ್ಯ, ಹಾಗೂ ಡಿ.ಆರ್.ನಾಗರಾಜ್) ಉಳಿದವರು ಇಲ್ಲೇ ಉಳಿದರು-ಇಲ್ಲೇ ನಿಂತು ಉಳಿದವರೊಂದಿಗೆ ಮುಖಾಮುಖಿಯಾದರು.

ಕರ್ನಾಟಕದ ಅಸ್ಮಿತೆ/ಐಡೆಂಟಿಟಿಯನ್ನು ನಿರ್ಮಿಸಿದವರಲ್ಲಿ ಸಮಾಜ ವಿಜ್ಞಾನಿಗಳ ಸಂಖ್ಯೆ ಕಡಿಮೆ ಇರಬಹುದು. ಆದರೆ ಅವರ ಕೊಡುಗೆಯನ್ನು ನಿರಾಕರಿಸಲು ಸಾಧ್ಯವಿಲ್ಲ. ಇವರಲ್ಲಿ ಅತ್ಯಂತ ಪ್ರಮುಖರೆಂದರೆ ಎಂ.ಎನ್.ಶೀನಿವಾಸ್. ಉಳಿದವರನ್ನು ಬಿಡುವಂತಿಲ್ಲ: ಶೆಲ್ಡಾನ್ ಪೊಲ್ಲಾಕ್, ಸತೀಶ್ ದೇಶ್ಪಾಂಡೆ, ಹಿರೆಮಲ್ಲೂರು ಈಶ್ವರನ್, ವಿವೇಕ್ ಧಾರೇಶ್ವರ್, ಎಸ್.ಶೇಟ್ಟರ್, ತೇಜಸ್ವಿನಿ ನಿರಂಜನ, ಜಾನಕಿ ನಾಯರ್, ಪೀಟರ್ ಕ್ಲಾಸ್, ಜೇಮ್ಸ್ ಮೇನರ್. ವಿಚಿತ್ರವೆಂದರೆ ಡಿ.ಆರ್ ನಾಗರಾಜ್ ಇಲ್ಲಿಯೂ ಸಮಾಜ ವಿಜ್ಞಾನಿಯಾಗಿ ಕಾಡುತ್ತಾರೆ.

ಕರ್ನಾಟಕದ ಅಸ್ಮಿತೆ/ಐಡೆಂಟಿಟಿಯ ಸಂದರ್ಭದಲ್ಲಿ ಸಿನೆಮಾಗಳನ್ನು ಮರೆಯಬಾರದು. 1934ರಲ್ಲಿ ಪ್ರಥಮ ಕನ್ನಡ ಚಲನಚಿತ್ರ “ಸತಿ ಸುಲೋಚನ”ದಿಂದ ಆರಂಭಗೊಂಡ ಪ್ರಯಾಣ ಇವತ್ತಿಗೂ ಮುಗಿದಿಲ್ಲ. ಇದರಲ್ಲಿ ರಾಜ್‍ಕುಮಾರ್ ಕೊಡುಗೆ ಅನನ್ಯ. ರಾಜ್‍ಕುಮಾರ್ ಚಲನಚಿತ್ರಗಳ ಕಥನಗಳು ಪೌರಾಣಿಕವೂ, ಗತವೈಭವದ ಮೆರವಣಿಗೆಯು ಹೌದು. ಬೇಡರ ಕಣ್ಣಪ್ಪದಿಂದ(1954)ಆರಂಭಗೊಂಡ ಪ್ರಯಾಣ ಇಸವಿ 2000ಕ್ಕೆ(ಚಿತ್ರ: ಶಬ್ಧವೇದಿ) ಬಂದಾಗ ಸಿನೆಮಾಕ್ಕೆ ಆಧುನಿಕೋತ್ತರದ ಮಜಲುಗಳು ಮುಖಾಮುಖಿಯಾಗಿದ್ದವು. ರಾಜ್‍ಕುಮಾರ್ ನಟಿಸಿದ್ದು ಬರೊಬ್ಬರಿ 206 ಚಲನಚಿತ್ರಗಳು. ಗತವೈಭವದ ರೂಪಕಗಳಾಗಿರುವುದು ಈ ಚಲನಚಿತ್ರಗಳು:- ರಣಧೀರ ಕಂಠಿರವ(1960), ರಾಣಿ ಹೊನ್ನಮ್ಮ(1960), ಕಿತ್ತೂರು ಚನ್ನಮ್ಮ(1961), ಇಮ್ಮಡಿಪುಲಕೇಶಿ(1967), ಶ್ರೀಕೃಷ್ಣದೇವರಾಯ, ಮಯೂರ(1975). ಇವು ಕರ್ನಾಟಕ ಅಸ್ಮಿತೆ/ಐಡೆಂಟಿಟಿಯನ್ನು ಆಂತರಿಕವಾಗಿ, ಒಳನೋಟದ ಭಾಗವಾಗಿ ನಿರ್ಮಿಸಲು ಮತ್ತು ಕಟ್ಟಲು ಸಹಕಾರಿಯಾದವು. ಈ ಸಿನೆಮಾಗಳಲ್ಲಿ “ಮಯೂರ” ಬಹಳ ಪ್ರಮುಖ.

ಆಧುನಿಕೋತ್ತರದ ಒಂದು ಕೊಡುಗೆ ಏನೆಂದರೆ 1970ರ ದಶಕದ ನಂತರ ಹುಟ್ಟಿದ ಪರ್ಯಾಯ ಸಿನೆಮಾ ಅಥವಾ ಚಲನ ಚಿತ್ರಗಳು. ಜಾಗತೀಕ ಕಥನಗಳು ಆಧುನಿಕೋತ್ತರವಾಗಿರುವ ಸಂದರ್ಭಗಳಲ್ಲಿ ಈ ಪರ್ಯಾಯ ಚಿಂತನೆಗಳು, ಚಲನಚಿತ್ರಗಳು ಹುಟ್ಟಿಕೊಂಡವು. ಪರ್ಯಾಯ ಸಿನೆಮಾಗಳು ಬಂಗಾಳಿ ಹಾಗೂ ಹಿಂದಿ ಸಿನೆಮಾಗಳಿಗೆ ಸೀಮಿತಗೊಂಡಿರುವ ಕಾಲಘಟ್ಟದಲ್ಲಿ ಕರ್ನಾಟಕದ ಪ್ರಯೋಗ ಚಾರಿತ್ರಿಕ ಹಾಗೂ ವಿಶಿಷ್ಟ. ಗಿರೀಶ್ ಕಾಸರವಳ್ಳಿಯ “ಘಟಶ್ರಾದ್ಧ”(1977) ಹಾಗೂ ಇತ್ತೀಚಿನ “ಗುಲಾಬಿ ಟಾಕೀಸ್”, ಗಿರೀಶ್ ಕಾರ್ನಾಡ್ ರವರ “ಸಂಸ್ಕಾರ”(1970), “ಕಾಡು”(1974) ಹಾಗೂ “ಒಂದಾನೊಂದು ಕಾಲದಲ್ಲಿ”(1978), ಜಿ.ವಿ ಅಯ್ಯರ್‍ರವರ “ಹಂಸಗೀತೆ”(1975), ಗಿರೀಶ್ ಕಾರ್ನಾಡ್ ಹಾಗೂ ಬಿ.ವಿ ಕಾರಂತರ “ವಂಶವೃಕ್ಷ”(1972), ಎಂ.ಎಸ್.ಸತ್ಯು ರವರ”ಬರ”(1980), “ಕನ್ನೇಶ್ವರ ರಾಮ್”(1977), “ಚಿತೆಗೂ ಚಿಂತೆ”(1978), “ಗಳಿಗೆ”(1995), ಬಿ.ವಿ.ಕಾರಂತರ “ಚೋಮನ ದುಡಿ”(1975), ಪ್ರೇಮ ಕಾರಂತರ “ಪಣಿಯಮ್ಮ”(1983), ಲಂಕೇಶ್ ರವರ “ಎಲ್ಲಿಂದಲೋ ಬಂದವರು”(1980), ಎನ್.ಲಕ್ಷ್ಮೀನಾರಯಣ ರವರ “ಅಬಚೂರಿನ ಪೋಸ್ಟ್ ಆಫೀಸ್”(1973), “ಮುಯ್ಯಿ”(1979), ಇತ್ಯಾದಿ ಬಹುಮುಖ್ಯ. ಇವತ್ತು ಕನ್ನಡ ಸಿನೆಮಾಗಳು ಚಲನಚಿತ್ರಗಳು ಸಾಗರದಾಚೆ ಬಿಡುಗಡೆಗೊಳ್ಳುತ್ತಿವೆ. ಜಾಗತೀಕರಣದ ಭಾರಟೆಯಲ್ಲಿ ಅನುಸಂಧಾನದ ರೂಪಕವಾಗುತ್ತಿವೆ. ಇವೆಲ್ಲವೂ ಕರ್ನಾಟಕ ಸಮಾಜದ ವಾಸ್ತವಿಕತೆಯನ್ನು ಮತ್ತು ಅಧಿಕಾರ ರಾಜಕಾರಣದೊಂದಿಗೆ ಜನಸಾಮಾನ್ಯರ ಮುಖಾಮುಖಿಯನ್ನು ಪ್ರತಿನಿಧಿಸುವ ಚಲನಚಿತ್ರಗಳು. ಆದರೆ, ಇವುಗಳನ್ನೇ ಕರ್ನಾಟಕದ ಸಮಾಜವೆಂದು ಹೇಳಲು ಅಸಾಧ್ಯ. ಆದರೆ ಅವುಗಳ ಕತೆಗಳು, ನಿರೂಪಣೆಗಳು ಅಂದಿನ ಸಮಾಜದ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುತ್ತಿದ್ದುದು ದಿಟ.

ಆಧುನಿಕೋತ್ತರದ ಭಾಗವಾಗಿ ಈ ಅಸ್ಮಿತೆಯ/ಐಡೆಂಟಿಟಿ ಒಂದು ಸಮಗ್ರ, ವಿಶಾಲವೆಂದು ಹೊರನೋಟಕ್ಕೆ ಕಂಡುಬಂದರೂ ಅದರ ಆಳದಲ್ಲಿ ವಿಧಳತೆಯ ದನಿಗಳಿವೆ. ಗೋಕಾಕ್ ಚಳುವಳಿ ಸಮಗ್ರತೆಯ ಸಂಕೇತ, ರೈತ ಚಳುವಳಿ, ದಲಿತ ಚಳುವಳಿ, ಮಹಿಳಾ ಚಳುವಳಿ ವಿಧಳತೆಯ ಸಂಕೇತ. ಇವುಗಳು ಹತ್ತು ಹಲವು ಅಸ್ಮಿತೆ/ಐಡೆಂಟಿಟಿಗಳನ್ನು ಪ್ರತಿನಿಧಿಸುತ್ತವೆ- ಅದು ರೈತರ, ದಲಿತರ, ಮಧ್ಯಮವರ್ಗದ, ಕನ್ನಡ ಪರ ಜನರ, ಮಹಿಳೆಯ ಅಸ್ಮಿತೆಯನ್ನು ಪ್ರತಿನಿಧಿಸುತ್ತವೆ. ವಿಚಿತ್ರವೆಂದರೆ ಈ ಅಸ್ಮಿತೆಗಳು ಒಂದಕ್ಕೊಂದು ಅನುಸಂಧಾನ ಮಾಡುತ್ತಿರುತ್ತವೆ ಅಥವಾ ಮುಖಾಮುಖಿಯಾಗಿರುತ್ತವೆ.  ಆದರೆ ಇವುಗಳ ನಡುವೆಯೂ ಒಂದೆರಡು ವಿಭಿನ್ನ ಧ್ವನಿಗಳಿವೆ. ಕೊಡಗು ಪ್ರತ್ಯೇಕ ಚಳುವಳಿ ಇದಕ್ಕೆ ಉದಾಹರಣೆ. ಅದು ಮುಖಾಮುಖಿಯಾಗುವುದು ಕರ್ನಾಟಕವೆಂಬ ಬೃಹತ್ ಆಕಾರದ ಅಸ್ಮಿತೆ/ಐಡೆಂಟಿಟಿಯೊಂದಿಗೆ. ಅದು ಪ್ರಶ್ನಿಸುವುದು ಕರ್ನಾಟಕವೆಂಬ ಮೇಲ್ ಕಥನವನ್ನು, ಬೃಹತ್ ಕಥನವನ್ನು. ಅದಕ್ಕೆ ಗತಕಾಲದ ವೈಭವದ ನೆನಪುಗಳಿವೆ. ವಿಸ್‍ಮೃತಿಗಳಿಲ್ಲ. ಇದೇ ರೀತಿ ಕರ್ನಾಟಕವನ್ನು ಪ್ರಶ್ನಿಸುವ ಇತರ ಅಸ್ಮಿತೆ/ಐಡೆಂಟಿಟಿಗಳೆಂದರೆ ಉತ್ತರ ಕರ್ನಾಟಕದ ಪ್ರತ್ಯೇಕತಾ ಹೋರಾಟ. ವಿಚಿತ್ರವೆಂದರೆ, ಅಲ್ಲಿ ಗತಕಾಲದ ವೈಭವದ ವರ್ಣನೆಗಳಿಲ್ಲ, ತಾರತಮ್ಯದ ಕಥನಗಳಿವೆ. ಇಂತಹ ಧ್ವನಿಗಳು ಅಲ್ಲಲ್ಲಿ ಕಂಡು ಬಂದರೂ, ಅವುಗಳು ಸೂಕ್ಷ್ಮವಾಗಿವೆ. ಅವುಗಳಲ್ಲಿ ತುಳುನಾಡಿನ ಕಲ್ಪನೆ ಸೇರಿದೆ. ಇತ್ತೀಚಿನ ಕಾವೇರಿ ಗಲಭೆ ಸಂದರ್ಭದಲ್ಲಿ “ಹೊಸ ಕರ್ನಾಟಕ ದೇಶ”ದ ಕ್ಷೀಣವಾದ ಕಲ್ಪನೆ ಹೊರಹೊಮ್ಮಿತ್ತು. ಈ ರೀತಿಯಾದ ಅಸ್ಮಿತೆ ಸಂಘರ್ಷಗಳು, ತಾಕಲಾಟಗಳು, ಪ್ರತಿರೋಧಗಳು, ಅನುಸಂಧಾನಗಳು ಕರ್ನಾಟಕದ ಅಧಿಕಾರ ರಾಜಕಾರಣದ/ಸಮಾಜದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಇವುಗಳನ್ನು ಸಾಮಾಜಿಕವಾಗಿ ಪ್ರಗತಿಪರವೆಂದು ಒಪ್ಪಿಕೊಳ್ಳುತ್ತೇವೆ. ಬಹಳಷ್ಟು ಸಂದರ್ಭದಲ್ಲಿ ಇವುಗಳನ್ನು ಪ್ರತ್ಯೇಕತಾ ದೃಷ್ಟಿಕೋನದಿಂದಲೂ, ಕರ್ನಾಟಕ ವಿರೋಧಿ ನೆಲೆಯಲ್ಲೂ ನೋಡುತ್ತೇವೆ. ಕರ್ನಾಟಕದ ಸಮಾಜ ಆಂತರಿಕವಾಗಿ ಹಾಗೂ ಬಾಹ್ಯವಾಗಿ-ಸಮುದಾಯಗಳ ತಲ್ಲಣಗಳು, ಜಾತಿಯ ನೆಲೆಗಟ್ಟುಗಳು ಕುಸಿಯುತ್ತಿರುವ ಹಾಗೂ ಆಧುನಿಕತೆ ಮತ್ತು ಜಾಗತೀಕರಣ ಮುಖಾಮುಖಿಯಾಗುತ್ತಿರುವ ಸಂದರ್ಭಗಳಲ್ಲಿ ಇವುಗಳು ಸರ್ವೆ ಸಾಮಾನ್ಯ. ಇದರಲ್ಲಿ ಕರ್ನಾಟಕ ಅಪವಾದವಲ್ಲ. (ಮುಂದುವರಿಯುವುದು)

 

(ಮುಂದಿನ ಭಾಗದಲ್ಲಿ: ಸಾರ್ವಜನಿಕ ನೀತಿ, ಹೊಸ ಸಾಮಾಜಿಕ ಅಸ್ಮಿತೆ ಮತ್ತು ಅಧಿಕಾರ ರಾಜಕಾರಣ)

 

(ಲೇಖನ: ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಕೆಲವು ಚಿಂತನೆಗಳು ಪುಸ್ತಕದಿಂದ)

LEAVE A REPLY

Please enter your comment!
Please enter your name here