ಲೇಖಕರು:ಇಸ್ಮತ್ ಪಜೀರ್

ನಾನಿಂದು ಈ ಸಮಾಜದಲ್ಲಿ ಲೇಖಕನೆಂಬ ಗೌರವಕ್ಕೆ ಪಾತ್ರನಾಗಿದ್ದರೆ ಅದರ ಸಂಪೂರ್ಣ ಕ್ರೆಡಿಟ್ ಮದ್ರಸಾಕ್ಕೆ ಸಲ್ಲಬೇಕು.
ಮನೆಯಲ್ಲಿ ಓದಿಗೆ ಪೂರಕ ವಾತಾವರಣವಿತ್ತು. ತಂದೆಯನ್ನು ಬಾಲ್ಯದಲ್ಲೇ ಕಳೆದುಕೊಂಡಿದ್ದೆ. ನನಗೆ ಓದು ಬರುವ ಹೊತ್ತಿಗೆಲ್ಲಾ ನಮ್ಮ ಮನೆಯಲ್ಲಿ ಎಲ್ಲಿ ನೋಡಿದರಲ್ಲಿ ಕನ್ನಡ ಮ್ಯಾಗಝಿನ್ ಗಳೇ ತುಂಬಿದ್ದವು. ಆದರೆ ನಾನು ಬಾಲ್ಯವನ್ನು ಕಳೆದದ್ದು ಉಳ್ಳಾಲದ ಅಜ್ಜಿಯ ಮನೆಯಲ್ಲಿ (ತಾಯಿಯ ತವರು ಮನೆ). ನನ್ನಜ್ಜ ಮೂಸಾಕ ಆ ಕಾಲದ ಇಂಟರ್ ಮೀಡಿಯೆಟ್.ಅವರಿಗೆ ಓದಿನ ತೀರದ ದಾಹವಿತ್ತು. ಆ ಕಾಲದಲ್ಲಿ ಬ್ಯಾರಿ ಮುಸ್ಲಿಂ ಮನೆಗಳಲ್ಲಿ ಪತ್ರಿಕೆಗಳನ್ನು ತರಿಸುವ ಪರಿಪಾಠವಿರಲಿಲ್ಲ. ಯಾಕೆಂದರೆ ಹೆಚ್ಚಿನ ಬ್ಯಾರಿಗಳು ಅವಿದ್ಯಾವಂತರು. ಅಜ್ಜ ಮುಂಜಾನೆಯ ನಮಾಝ್ ಮುಗಿಸಿ ಮಸೀದಿಯಿಂದ ನೇರವಾಗಿ ತೊಕ್ಕೊಟ್ಟು ಪೇಟೆಗೆ ನಡೆದುಕೊಂಡು ಹೋಗಿ ಪತ್ರಿಕೆ ಹಿಡಿದುಕೊಂಡೇ ಮನೆಗೆ ಮರಳುತ್ತಿದ್ದರು.ಕೆಲವು ಸಾಪ್ತಾಹಿಕ ಮತ್ತು ಮಾಸಿಕ ಮ್ಯಾಗಝಿನ್ ಗಳೂ ಮನೆಗೆ ಬರುತ್ತಿದ್ದವು. ಅಲ್ಲಿಂದ ಪ್ರಾರಂಭವಾದ ಓದಿನ ದಾಹ ಬೆಳೆಯಲು ಕಾರಣ ಚಿಕ್ಕಪ್ಪ ಉಮರ್ ಪಜೀರ್. ರಜಾದಿನಗಳಲ್ಲಿ ಪಜೀರಿನ ಮನೆಗೆ ಬಂದಾಗ ಎರಡು ತಿಂಗಳು ಓದಿದರೂ ಮುಗಿಯದಷ್ಟು ಮ್ಯಾಗಝಿನ್ ಗಳ ರಾಶಿ ಮನೆಯಲ್ಲಿರುತ್ತಿತ್ತು. ಚಿಕ್ಕಪ್ಪ ಅತ್ಯಂತ ಜತನದಿಂದ ಕಾಪಾಡಿಡುತ್ತಿದ್ದ ಲಂಕೇಶ್ ಪತ್ರಿಕೆಯ ಓದು ಮೊದಮೊದಲು ಮನಸ್ಸಿಗೆ ಮುದ ನೀಡುತ್ತಿರಲಿಲ್ಲ. ಯಾಕೆಂದರೆ ಅದರಲ್ಲಿನ ರಾಜಕೀಯ, ಸಾಹಿತ್ಯ ಇತ್ಯಾದಿ ವಿಚಾರಗಳು ಅಷ್ಟು ಸುಲಭವಾಗಿ ಅರ್ಥವಾಗುತ್ತಿರಲಿಲ್ಲ. ಆದರೂ ಮತ್ತೆ ಮತ್ತೆ ಲಂಕೇಶ್ ಪತ್ರಿಕೆಯನ್ನು ಓದಲು ಪ್ರಯತ್ನಿಸುತ್ತಿದ್ದೆ. ಕ್ರಮೇಣ ಅಲ್ಪ ಸ್ವಲ್ಪ ಅರ್ಥವಾಗತೊಡಗಿತು. ಬರಬರುತ್ತಾ ಅದು ನನ್ನ ಅತ್ಯಂತ ಇಷ್ಟದ ಪತ್ರಿಕೆಯಾಗಿ ಬಿಟ್ಟಿತು.ಅದೆಷ್ಟು ಬೆಳೆಯಿತೆಂದರೆ ಮುಂದೆ ಲಂಕೇಶರ ಮಗಳ ಪತ್ರಿಕೆಯಲ್ಲಿ ನಿರಂತರ ಬರೆಯುತ್ತಾ ಅಕ್ಕ ಗೌರಿಯ ಅತ್ಯಂತ ಆಪ್ತ ವಲಯದ ಸದಸ್ಯನಾಗುವವರೆಗೂ ಹೋಯಿತು.

ಇರಲಿ ಈ ಬರಹದ ಶೀರ್ಷಿಕೆಯ ವಿಚಾರಕ್ಕೆ ಬರುತ್ತೇನೆ.
ಸ್ವಲ್ಪ ಓದಿನ ಹುಚ್ಚು ಇದ್ದುದರಿಂದ ಎ‌ಳವೆಯಲ್ಲೇ ನನ್ನ ಕನ್ನಡ ಭಾಷೆಯೂ ತಕ್ಕ ಮಟ್ಟಿಗೆ ಚೆನ್ನಾಗಿತ್ತು. ಮದ್ರಸಾ ವಿದ್ಯಾರ್ಥಿಯಾಗಿದ್ದಾಗ ಇಂಟರ್ ಮದ್ರಸಾ ಪ್ರಬಂಧ ಸ್ಪರ್ಧೆಗಳಿಗೆ ನನ್ನನ್ನೇ ಕಳುಹಿಸಲಾಗುತ್ತಿತ್ತು.ಕನ್ನಡ ಭಾಷಣಕ್ಕೂ ನಾನೇ ಸ್ಪರ್ಧಾಳು.. ನನ್ನ ಸಭಾ ಕಂಪನವನ್ನು ಇಲ್ಲವಾಗಿಸಿದ್ದೂ ಮದ್ರಸಾ.
ಆಗೆಲ್ಲಾ ಬಹುಮಾನ ಗೆಲ್ಲುತ್ತಿದ್ದ ನನ್ನ ಬಗ್ಗೆ ನನ್ನ ಅತೀವ ತುಂಟತನದ ನಡುವೆಯೂ ಉಸ್ತಾದರುಗಳಿಗೆ ತುಸು ಹೆಚ್ಚೇ ಪ್ರೀತಿಯಿತ್ತು. ನಾಗರ ಬೆತ್ತದ ಪೆಟ್ಟಿನ ರುಚಿಯೂ ದಿನಾ ತಪ್ಪದೇ‌ ಸಿಗುತ್ತಿತ್ತು.
ಮದ್ರಸಾದಲ್ಲಿ‌ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಉಸ್ತಾದ್ ಸಂಶುದ್ದೀನ್ ಮದನಿಯವರಲ್ಲಿ ಯಾವುದೋ ಒಂದು ಧಾರ್ಮಿಕ ಕನ್ನಡ ವಿಶೇಷಾಂಕಕ್ಕೆ ಯಾರೋ ಲೇಖನ ಕೇಳಿದ್ದರು. ಉಸ್ತಾದರಿಗೆ ಕನ್ನಡದಲ್ಲಿ ಹಿಡಿತವಿಲ್ಲದ್ದರಿಂದ ಅವರು ನನ್ನನ್ನು ಅವರ ಅನುವಾದಕನಾಗಿ ನೇಮಿಸಿದರು. ಅವರು ಬ್ಯಾರಿ ಭಾಷೆಯಲ್ಲಿ ಡಿಕ್ಟೇಟ್ ಮಾಡಿದ್ದನ್ನು ನಾನು ಕನ್ನಡದಲ್ಲಿ ಬರೆಯಬೇಕಿತ್ತು.

ಹೀಗೆ ಸ್ಥಳೀಯ ಧಾರ್ಮಿಕ ಬುಲೆಟಿನ್ ಗಳಿಗೆ ಬರೆಯಲು ಅವರಿಗೆ ಆಗಾಗ ಕೋರಿಕೆ ಬರುತ್ತಿತ್ತು.ಅವರು‌ ಬ್ಯಾರಿಯಲ್ಲಿ ಡಿಕ್ಟೇಟ್ ಮಾಡಿದ್ದನ್ನು ನಾನು ಕನ್ನಡಕ್ಕೆ ಅನುವಾದಿಸುತ್ತಿದ್ದೆ.
ಮುಂದೊಂದು ದಿನ ಅವರು ಇಸ್ಲಾಮೀ ಕರ್ಮಶಾಸ್ತ್ರದ ಕುರಿತಂತೆ ಪುಟ್ಟ ಬುಕ್ ಲೆಟ್ ಹೊರತರಲು ಯೋಚಿಸಿದರು.ಅದಕ್ಕೂ ನನ್ನನ್ನೇ ಬಳಸಿದರು.ಅಲ್ಲಿಂದ ಆರಂಭವಾದ ಬರವಣಿಗೆಯ ಪಯಣ ಮುಂದೆ ಕಾಲೇಜು ದಿನಗಳಲ್ಲಿ ಸ್ಥಗಿತಗೊಂಡಿತು.ಆದರೂ ಓದಿನ ದಾಹ ಮತ್ತಷ್ಟು ಹೆಚ್ಚಾಗುತ್ತಾ ಹೋಯಿತು. ವೃತ್ತಿ ಬದುಕಿಗೆ ಇಳಿದಾಗ ಬರೆಯಲೇಬೇಕು ಎಂಬ ತುಡಿತ ಪ್ರಾರಂಭವಾಯಿತು. ತುಸು ದೀರ್ಘ ಇಂಟರ್ವೆಲ್ ಆದುದರಿಂದ ಸ್ವಲ್ಪ ಕಷ್ಟವಾಯಿತು. ಇನ್ನೂ ಎಳಸು ಬರಹಗಾರನಾದುದರಿಂದ ನಾನದಕ್ಕೆ ರೈಟರ್ಸ್ ಬ್ಲಾಕ್ ಎಂಬ ದೊಡ್ಡ ಪದ ಬಳಸಲಾರೆ.
ಇಂದು ನಾನು ನನ್ನದೇ ಮುಸ್ಲಿಮ್ ಸಮುದಾಯದ ವಿದ್ವಾಂಸ ಮತ್ತು ನಾಯಕ ವರ್ಗವನ್ನು ಪ್ರಶ್ನೆ ಮಾಡಿ ಬರೆಯುತ್ತಿದ್ದರೆ ಅದಕ್ಕೆ ಕಾರಣ ಮದ್ರಸಾ….
ಇಂದು ನಾನು ಏಳು ಪುಸ್ತಕಗಳ ಲೇಖಕನಾಗಿದ್ದರೆ, ಐದು ಕತೆಗಳ ಮತ್ತು ಇಪ್ಪತ್ತು ಕಿರುಕತೆಗಳ ಕತೆಗಾರನಾಗಿದ್ದರೆ, ಸುಮಾರು ಏಳುನೂರರಷ್ಟು ಪತ್ರಿಕಾ ಅಂಕಣ ಬರಹಗಳ ಜನಕನಾಗಿದ್ದರೆ ಅದರ ಕ್ರೆಡಿಟ್ ಮದ್ರಸಾಕ್ಕೆ ಸಲ್ಲಬೇಕು.
ನಾನು ವಿಶ್ವವಿದ್ಯಾನಿಲಯದಲ್ಲಿ ಸಾಂಪ್ರದಾಯಿಕವಾಗಿ ಬರವಣಿಗೆಯ ಪಾಠ ಕಲಿತದ್ದರಿಂದ ಬರಹಗಾರನಾಗಿದ್ದಂತೂ ಅಲ್ಲವೇ ಅಲ್ಲ. ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಬರವಣಿಗೆಯ ನಿಯಮಗಳನ್ನು ಸೂಕ್ಷ್ಮಗಳನ್ನು ಮತ್ತು ತತ್ವವನ್ನು ಕಲಿಸಿದೆಯೇ ಹೊರತು ಬರವಣಿಗೆ‌ಯ ಪ್ರಾಯೋಗಿಕ ರೂಪವನ್ನಲ್ಲ. ಅದನ್ನು ಕಲಿಸಿದ್ದು ಮದ್ರಸಾ….
ನಾನೊಬ್ಬ ದೊಡ್ಡ ಬರಹಗಾರನೇನೂ ಅಲ್ಲ. ಬರಹದ ಕ್ಷೇತ್ರದಲ್ಲಿ ಅಲ್ಪ ಸ್ವಲ್ಪ ಹೆಸರುಗಳಿಸಿದ್ದರೆ ಅದಕ್ಕೆ ಕಾರಣ ಮದ್ರಸಾ ಮತ್ತು ಸಂಶುದ್ದೀನ್ ಮದನಿ ಉಸ್ತಾದ್.ಮದ್ರಸಾದ ಬಗ್ಗೆ ಸಮಾಜದ ಒಂದು ವರ್ಗ ಪೂರ್ವಾಗ್ರಹ ಪೀಡಿತವಾಗಿ ಮಾತನಾಡುವಾಗ,

ಬರೆಯುವಾಗ ಇಂದು ಮುಸ್ಲಿಂ ಸಮಾಜದೊಳಗಿದ್ದುಕೊಂಡೇ ಸಮಾಜವನ್ನು ವಿಮರ್ಶಿಸುವುದನ್ನೂ ನನಗೆ ಮದ್ರಸಾ ಕಲಿಸಿದೆ ಎಂದು ಧೈರ್ಯವಾಗಿ ಬರೆಯುತ್ತಿದ್ದೇನೆ. ಕಟ್ಟಾ ಧಾರ್ಮಿಕ, ಸಾಂಪ್ರದಾಯಿಕ ಕುಟುಂಬದ ಹಿನ್ನೆಲೆಯ ನಾನು ವೈಚಾರಿಕವಾಗಿ ಮಾತನಾಡಲು, ಬರೆಯಲು ಧೈರ್ಯ ನೀಡಿದ್ದು ಮತ್ತು ಕಲಿಸಿದ್ದು ಮದ್ರಸಾ…
ಮದ್ರಸಾ ಭಯೋತ್ಪಾದನಾ ಕೇಂದ್ರವಲ್ಲ…..
ಮದ್ರಸಾ ವೈಚಾರಿಕತೆ ಕಲಿಸುವ ಅತ್ಯುತ್ಕೃಷ್ಟ ಅನೌಪಚಾರಿಕ ವಿಶ್ವವಿದ್ಯಾನಿಲಯ…..

 

LEAVE A REPLY

Please enter your comment!
Please enter your name here