• ಇಸ್ಮತ್ ಪಜೀರ್

ಎಲ್ಲಾ ಕ್ರೈಸ್ತ ಬಂಧುಗಳಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.

ಮನೆಯಿರುವುದು ಕ್ರಿಶ್ಚಿಯನ್ ಬಾಹುಳ್ಯದ ಏರಿಯಾದಲ್ಲಿ.. ಮನೆ ಮನೆಗಳಲ್ಲೂ ಬೆಳಗುವ ಬಣ್ಣ ಬಣ್ಣದ ದೀಪಗಳು, ನಕ್ಷತ್ರಗಳು, ಗೂಡು ದೀಪಗಳು ನಮ್ಮ ಏರಿಯಾಕ್ಕೆ ನಾಡ ಹಬ್ಬದ ಮೆರುಗು ತರುತ್ತದೆ. ನಮ್ಮ ಬೀದಿಯ ತುಂಬಾ ಮಿನುಗುವ ಬಣ್ಣ ಬಣ್ಣದ ದೀಪಗಳನ್ನು ರಾತ್ರಿ ಹೊತ್ತು ನೋಡುವುದೇ ಸಂಭ್ರಮ.

ಹಿಂದೆಲ್ಲಾ ತಡರಾತ್ರಿಯ ಪೂಜೆಗೆಂದು ನಮ್ಮ ಕ್ರೈಸ್ತ ಬಂಧುಗಳು ಚರ್ಚಿಗೆ ಹೋದರೆ ನಾವು ಅವರು ಹಿಂದಿರುಗುವವರೆಗೂ ಮಲಗದೇ ಎಚ್ಚರವಿರುತ್ತಿದ್ದೆವು. ಅವರೇನೂ ನಮಗೆ ಮನೆ ಕಡೆ ನೋಡಿ ಎಂದು ಹೋಗುತ್ತಿರಲಿಲ್ಲ. ಅದಾಗ್ಯೂ ನಮ್ಮ ಏರಿಯಾ ಪೂರಾ ಅವರೇ ಇರುವುದರಿಂದ ಎಲ್ಲಾ ಮನೆಗಳಿಗೂ ಬೀಗ ಹಾಕಿ ಹೋಗುವಾಗ ಕಳ್ಳ- ಕಾಕರು ಬಂದು ನುಗ್ಗಿಯಾರೋ ಎಂಬ ಭಯ ಸಹಜವಾಗಿಯೇ ನಮ್ಮನ್ನು ಕಾಡುತ್ತಿತ್ತು. ನನಗೆ ಎಳೆಯ ವಯಸ್ಸಿನಿಂದಲೇ ಕ್ರಿಸ್ಮಸ್‌ಗೆಂದು ಕ್ರೈಸ್ತ ಬಂಧುಗಳು ಮನೆಯಂಗಳದಲ್ಲಿ ತಯಾರಿಸಿಡುವ ಗೋದಲಿಗಳೆಂದರೆ ಬಹಳ ಕುತೂಹಲ. ಅದರಲ್ಲಿನ ಕುರಿಗಳು, ಒಂಟೆಗಳು, ಸರೋವರ ಸೇತುವೆ. ಇತ್ಯಾದಿ ಎಲ್ಲವೂ ಚಿತ್ತಾಕರ್ಷಕವಾಗಿರುತ್ತದೆ. ಗೋದಲಿಯೆಂದರೆ ಏಸು ಕ್ರಿಸ್ತ ಹುಟ್ಟಿದ ಸಂದರ್ಭದ ಪರಿಸರದ ಮರು ನಿರೂಪಣೆ.

ಖುರ್‌ಆನಿನಲ್ಲಿ ಪ್ರವಾದಿ ಈಸಾ (ಅಲೈಹಿಸ್ಸಲಾಂ) (ಏಸುಕ್ರಿಸ್ತ) ಹುಟ್ಟಿದ ಸಂದರ್ಭದ ನಿರೂಪಣೆ ಕ್ರೈಸ್ತರ ಗೋದಲಿಗಿಂತ ಭಿನ್ನವಾಗಿದೆ.ತುಂಬು ಗರ್ಭಿಣಿ ಮಾತೆ ಮರ್ಯಮ್ (ರಳಿಯಲ್ಲಾಹು ಅನ್‌ಹಾ) ಅವರಿಗೆ ಹೆರಿಗೆಯ ನೋವು ಬಂದಾಗ ಅವರೊಂದು ನಿರ್ಜನ ಪ್ರದೇಶದಲ್ಲಿರುತ್ತಾರೆ, ಸಹಾಯಕ್ಕೆ ಯಾರೂ ಇಲ್ಲದಾದಾಗ ಓ…ದೇವಾ ನಾನೇನು ಮಾಡಲಿ ಎಂದು ತನ್ನ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಓ ಮರ್ಯಮ್, ನೀವು ಹೆದರಬೇಕಾಗಿಲ್ಲ. ನಿಮ್ಮ ಉದರದಲ್ಲಿರುವುದು ಸಾಮಾನ್ಯ ಶಿಶುವಲ್ಲ. ಎಂದು ಸೃಷ್ಟಿಕರ್ತನು ಅಭಯ ನೀಡುತ್ತಾನೆ. ಒಂದು ಒಣ ಖರ್ಜೂರದ ಮರದಡಿ ಮರ್ಯಮ್(ರ) ಪ್ರವಾದಿ ಈಸಾ (ಅ)ರಿಗೆ ಜನನ ನೀಡುತ್ತಾರೆ. ಬಾಯಾರಿಕೆ ಮತ್ತು ಹಸಿವಿನಿಂದ ಬಳಲಿ ಬೆಂಡಾದ ಮರ್ಯಮ್ ಅಸಹಾಯಕತೆಯಿಂದ ಓ.. ದೇವಾ! ನಾನೇನು ಮಾಡಲಿ ಎನ್ನುವಾಗ ಒಂದು ಅಶರೀರವಾಣಿ ಕೇಳಿಸುತ್ತದೆ. ಮರ್ಯಮ್ , ನೀವು ಒರಗಿರುವ ಒಣಗಿರುವ ಖರ್ಜೂರದ ಮರವನ್ನು ಅಲುಗಾಡಿಸಿರಿ..ಹಾಗೆ ಮರ್ಯಮ್ ಒಣಗಿರುವ ಖರ್ಜೂರದ ಮರ ಅಲುಗಾಡಿಸುವಾಗ ಫಲಗಳೇ ಇರದಿದ್ದ ಆ ಮರದಿಂದ ಸಿಹಿಯಾದ, ತಾಜಾ ಖರ್ಜೂರಗಳ ರಾಶಿಯೇ ಉದುರುತ್ತದೆ. ಮರ್ಯಮ್ ಖರ್ಜೂರ ತಿಂದು ಹಸಿವು ತಣಿಸುತ್ತಾರೆ. ಅವರಿಗೆ ನೀರಡಿಕೆಯಾಗುತ್ತದೆ. ಆಗ ಮರ್ಯಮ್ ನಿಮ್ಮ ಪಕ್ಕದಲ್ಲೇ ಸಿಹಿ ನೀರಿನ ಸರೋವರವಿದೆ. ಎಂಬ ಅಶರೀರವಾಣಿ. ಏನೂ ಇರದಿದ್ದ ಅಲ್ಲೊಂದು ಸಿಹಿ ನೀರಿನ ಸರೋವರ ಉದ್ಭವವಾಗುತ್ತದೆ. ಮರ್ಯಮ್ ಅದರಿಂದ ನೀರು ಕುಡಿಯುತ್ತಾರೆ. ಇದು ನಮ್ಮ ಬಲವಾದ ವಿಶ್ವಾಸ.. ಅದಾಗ್ಯೂ ನಮ್ಮ ಕ್ರೈಸ್ತ ಬಂಧುಗಳ ವಿಶ್ವಾಸವನ್ನು ನಾನು ಗೌರವಿಸುವ. ನನಗೀಗಲೂ ಅನ್ನಿಸುವುದು. ಈ ಗೋದಲಿಯ ಕಲ್ಪನೆ ಏಸುಕ್ರಿಸ್ತರ ಜನನಾನಂತರ ಅಂದರೆ ಅವರು ಪುಟ್ಟ ಶಿಶುವಾದಾಗದ್ದಿರಬಹುದೇನೋ. ಈಸಾ (ಅ) (ಏಸು ಕ್ರಿಸ್ತ)ರನ್ನುಗೌರವಿಸಬೇಕಾದುದು ಮುಸ್ಲಿಮರ ಧಾರ್ಮಿಕ ಕರ್ತವ್ಯವಾಗಿರುತ್ತದೆ. ಮುಸ್ಲಿಮರಿಗೆ ಐದು ಮೂಲಭೂತ ಕರ್ಮಗಳು ಮತ್ತು ಆರು ಮೂಲಭೂತ ನಂಬಿಕೆಗಳು ಕಡ್ಡಾಯ.‌ ಅದರಲ್ಲಿ ಅಲ್ಲಾಹನ ಪ್ರವಾದಿಗಳ ಮೇಲೆ ನಂಬಿಕೆಯಿರಿಸುವುದು.ಈಸಾ (ಅ) ಪ್ರವಾದಿ ಮುಹಮ್ಮದ್ (ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರಿಗಿಂತ) ಮುಂಚೆ ಜಗತ್ತಿಗೆ ಸನ್ಮಾರ್ಗದರ್ಶಕರಾಗಿ ಬಂದ ಪ್ರವಾದಿ ಎಂದು ನಾವು ಬಲವಾಗಿ ಮತ್ತು ಕಡ್ಡಾಯವಾಗಿ ವಿಶ್ವಾಸವಿರಿಸುತ್ತೇವೆ.ಒಟ್ಟಿನಲ್ಲಿ ಮುಸ್ಲಿಮರ ಮತ್ತು ಕ್ರೈಸ್ತರ ನಂಬಿಕೆಗಳ ಮೂಲ ಒಂದೇ ಆಗಿರುತ್ತದೆ. ಅನುಸರಣೆಯಲ್ಲಿ ಮಾತ್ರ ವ್ಯತ್ಯಾಸವಿದೆ. ಏನೇ ಇರಲಿ.. ಅವರವರ ನಂಬಿಕೆಗಳನ್ನು ಪಾಲಿಸುತ್ತಾ.. ಇತರರ ನಂಬಿಕೆಗಳನ್ನು ಗೌರವಿಸುತ್ತಾ ಪ್ರೀತಿ ಮತ್ತು ಸಹೋದರತೆಯಿಂದ ಬಾಳೋಣ.

LEAVE A REPLY

Please enter your comment!
Please enter your name here