ಲೇಖಕರು: ಇದ್ರಿಸ್ ಹೂಡೆ

ಪರೀಕ್ಷಾ ಫಲಿತಾಂಶಗಳ ನಂತರ ಕೆಲ ವಿಧ್ಯಾರ್ಥಿಗಳು ಅನುತ್ತಿರ್ಣತೆ , ಹೆಚ್ಚು ಅಂಕ ಗಳಿಸದೇ ಇರುವುದು, ಫೇಲ್ ಆಗಬಹುದೆಂಬ ಬೀತಿ ಇನ್ನಿತರ ಕಲಿಕೆಗೆ ಸಂಬಂಧಿಸಿದ ಕಾರಣಗಳ ಒತ್ತಡದಿಂದ ಅನೇಕ ಎಳೆಜೀವಗಳು ತಮ್ಮ ಜೀವನದ ಪಯಣವನ್ನು ಕೊನೆಗೊಳಿಸಿದವು. ಇವು ನಿಜವಾಗಿಯೂ ಅತ್ಮಹತ್ಯೆಗಳೇ ? ಪೋಷಕರು & ಸಮಾಜ ಶಿಕ್ಷಣದ ಬಗ್ಗೆ ನಿರ್ಮಿಸಿ ಕೊಂಡಿರುವ ಮಾನಸಿಕತೆಯ ಪರಿಣಾಮವಲ್ಲವೇ ? ಅಂಕಗಳಿಸುವ ಒತ್ತಡವೆಂಬ ಅಸ್ತ್ರದಿಂದ ಇರಿದು ಕೊಂದ ಕೊಲೆಗಳಲ್ಲವೇ ?

ಶಾಲಾ ಪರೀಕ್ಷೆಯಲ್ಲಿ ಗಳಿಸುವ ಅಂಕಗಳೇ ಜೀವನದ ಸೋಲು ಗೆಲುವುಗಳನ್ನು ನಿರ್ಧರಿಸುತ್ತದೆ ಎಂಬ ಮಾನಸಿಕತೆಯಿಂದ ವಿದ್ಯಾರ್ಥಿ ಸಮೂಹ ಮತ್ತು ಅವರ ಮಾತಪಿತರನ್ನು ದೂರ ಮಾಡದ ಹೋರತು ನಮ್ಮ ಮುಂದಿನ ಪೀಳಿಗೆಯನ್ನು ಉಳಿಸಲು ಸಾಧ್ಯವಿಲ್ಲ. ಒಂದೊಮ್ಮೆ ಫೇಲ್ ಆದರೂ ಆಕಾಶವೇನೂ ಮೈಮೇಲೆ ಕಳಚಿ ಬೀಳುವುದಿಲ್ಲ ಎಂಬ ಅರಿವು ಅಗತ್ಯ. ಪೋಷಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವ ಬದಲಿಗೆ ಅವರಿಗೆ ಪ್ರೀತಿಯಿಂದ ಕೂಡಿದ ಸಲಹೆ ನೀಡುವುದು ಮತ್ತು ಮಾರ್ಗದರ್ಶನ ಮಾಡುವುದು ಅವರ ಪೋಷಕತ್ವದ ಬೇಡಿಕೆಯಾಗಿದೆ. ಹಾಗಾಗಿ ಮಕ್ಕಳ ಬೆಳವಣಿಗೆಯಲ್ಲಿ ತಮ್ಮದೂ ಕರ್ತವ್ಯವಿದೆ ತಾವದನ್ನು ನಿಭಾಯಿಸಿದ್ದೇಯೇ ಎಂದು ಪೋಷಕರು ಕಾಲ ಕಾಲಕ್ಕೆ ಅವಲೋಕನ ನಡೆಸುವುದು ಅಗತ್ಯ. ಶಿಕ್ಷಕರೊಂದಿಗೆ ಸಕಾರಾತ್ಮಕವಾದ ನಿರಂತರ ಸಂಪರ್ಕವೂ ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಸಹಕರಿಸಲು ಪೋಷಕರಿಗೆ ಸಹಾಯಕವೂ ಆಗಬಹುದು. ಕೇವಲ ಶಾಲಾ ಕಲಿಕೆಯ ಮೇಲೆಯೇ ವಿದ್ಯಾರ್ಥಿಯ ಬುದ್ದಿಮತ್ತೆಯನ್ನು ಪರಿಗಣಿಸುವ ಬದಲು ಅವರ ಸಫಲತೆಗೆ ಪೂರಕವಾಗ ಬಹುದಾದ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಪ್ರಯತ್ನವೂ ಆಗಬೇಕು. (ಕೆಲವೊಮ್ಮೆ ಅವರ ವಿಶೇಷ ಪ್ರತಿಭೆಯೇ ಶಾಲಾ ಕಲಿಕೆಗಿಂತ ಸಫಲತೆಗೆ ಮುಖ್ಯ ಕಾರಣವಾಗುವ ಸಾಧ್ಯತೆ ಇದೆ) ಶಾಲೆಗೆ ಕಳುಹಿಸಿ ತಮ್ಮ ಮಕ್ಕಳ ಭೌತಿಕ ಬೇಡಿಕೆಗಳನ್ನು ಪೂರೈಸಿದರೆ ಸಾಕು ಇನ್ನೆಲ್ಲವು ಶಿಕ್ಷಕರ ಮತ್ತು ಮಕ್ಕಳ ಕೆಲಸ ಎಂಬ ಸಮಾಜದ ಸಿದ್ದಪಡಿಸಿದ ಮಾನಸಿಕತೆಯಿಂದ ಪೋಷಕರು ಹೊರಬರಬೇಕು. ಆಗ ಮಾತ್ರ ತಮ್ಮ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ.

ಪೋಷಕರೇ ನೆನಪಿಡಿ..

ನಾವೆಲ್ಲರೂ ನಮ್ಮ ಮತ್ತು ನಮ್ಮ ಮಕ್ಕಳ ವರ್ತಮಾನ ಹಾಗೂ ಭವಿಷ್ಯದ ಕುರಿತು ಚಿಂತಿತರಾಗುತ್ತೇವೆ. ಅಲ್ಲದೇ ಸಮಾಜ ಕೆಟ್ಟು ಹೋಗಿರುವ ಬಗ್ಗೆ,ಅಪ್ರಾಮಾಣಿಕತೆಯು ವ್ಯಾಪಕವಾಗಿರುವುದು, ದೇಶದ ಹಿತಾಸಕ್ತಿಗೆ ಅಡೆತಡೆಗಳು , ಭ್ರಷ್ಟ ವ್ಯವಸ್ಥೆ , ಪರಿಸರಕ್ಕೆ ಮಾರಕ ಚಟುವಟಿಕೆಗಳು, ಸಂಪನ್ಮೂಲಗಳ ಅಮಿತ ಬಳಕೆ, ರಾಜಕೀಯ ಮತ್ತು ಶಿಕ್ಷಣದ ವ್ಯಾಪಾರಿಕರಣ ಇತ್ಯಾದಿಗಳ ಬಗ್ಗೆ ಮಾತನಾಡುತ್ತಿರುತ್ತೇವೆ ಮತ್ತು ದುಃಖ ವ್ಯಕ್ತಪಡಿಸುತ್ತಿರುತ್ತೇವೆ. ಆದರೆ ಈ ಎಲ್ಲಾ ಸಾಮಾಜಿಕ ಕೆಡುಕುಗಳನ್ನು ನಿವಾರಿಸುವಲ್ಲಿ ತಮ್ಮ ಪಾಲಿನ ಕರ್ತವ್ಯ ನಿಭಾಯಿಸುವ ಸಮಯ ಬಂದಾಗ ಜಾರಿ ಕೊಳ್ಳುವ ಪ್ರವೃತ್ತಿ ಹಾಗೂ ನೆವನಗಳ ಹುಡುಕಾಟದಲ್ಲಿರುತ್ತೇವೆ. ನೆನಪಿರಲಿ ನಿಮ್ಮ ಮಕ್ಕಳು ನಿಮ್ಮ ಭವಿಷ್ಯ ಮಾತ್ರವಲ್ಲ ಅವರ ಸ್ವಯಂ ಭವಿಷ್ಯ, ಸಮಾಜದ ಭವಿಷ್ಯ, ದೇಶದ ಭವಿಷ್ಯ. ಅವರ ಭವಿಷ್ಯ ರೂಪಿಸುವುದು ಎಂದರೆ ಅವರನ್ನು ಹಣಗಳಿಸುವ ಯಂತ್ರಗಳಾಗಿಸುವುದಲ್ಲ.

 

ಹೌದು.. ಜೀವನಕ್ಕೆ ದುಡ್ಡೂ ಅಗತ್ಯ ಆದರೆ ಅದು ಜೀವನ ಒಂದು ಅಂಶ ಮಾತ್ರವೇ ಹೋರತು ಹಣ ಸಂಪೂರ್ಣ ಜೀವನವಲ್ಲ. ಅದೆಷ್ಟೋ ಮಹನೀಯರು ತಮ್ಮ ಮಕ್ಕಳನ್ನು ಕೇವಲ ಧನವಂತರನ್ನಾಗಿಸುವ ಉದ್ದೇಶದ ಶಿಕ್ಷಣ ನೀಡಿ ಹಣ ಸಂಪಾದನೆಯ ಯಂತ್ರವನ್ನಾಗಿಸಿದ ಪರಿಣಾಮ ತನ್ನ ಸಂತಾನ ಸ್ವಯಂ ತನ್ನನ್ನು ಮಾತ್ರ ಕೇಂದ್ರೀಕರಿಸಿಕೊಂಡ ಸ್ವಾರ್ಥಿಯನ್ನಾಗಿಸಿದ ಹೋರತು ಆ ವ್ಯಕ್ತಿಯನ್ನು ಉತ್ತಮ ಸಮಾಜ ರೂಪಿಸುವುದರಲ್ಲಿ ಪಾಲ್ಗೊಳಿಸುವುದು ಬಿಡಿ ಸ್ವತಃ ಅವರುಗಳನ್ನೆ ವೃದ್ದಾಶ್ರಮಗಳಿಗೆ ತಳ್ಳಿತು. ತಮ್ಮ ಕೊನೆಗಾಲದಲ್ಲಿ ತನ್ನ ಜೀವದ ಭಾಗವಾದ ಸಂತಾನಗಳಿಂದ ಪ್ರೀತಿ,ಮಮತೆ ಮತ್ತು ಸೇವೆ ಪಡೆಯುವ ಅದಮ್ಯ ಬಯಕೆಗಳೇ ಪೂರ್ತಿಯಾಗಲಿಲ್ಲ ಇನ್ನೆಲ್ಲಿ ಸಮಾಜದ ಹಾಗೂ ದೇಶದ ಭವಿಷ್ಯದಲ್ಲಿ ಭಾಗಿದಾರಿಕೆ ? ನೀವು ನಿಜವಾಗಿ ಅವರ ಭವಿಷ್ಯ ರೂಪಿಸುದಾದರೆ ಅವರನ್ನು ಹಣಗಳಿಸುವ ಯಂತ್ರವಲ್ಲ ಒಬ್ಬ ಒಳ್ಳೆಯ ಮನುಷ್ಯನ್ನಾಗಿಸಿ. ಒಳ್ಳೆಯ ಮನುಷ್ಯನಾಗುವ ಕಡೆಗೆ ಸಾಗುವ ವಿದ್ಯಾರ್ಥಿ ಅಥವಾ ಮಕ್ಕಳೇ ಸಮಾಜದ ಉತ್ತಮ ಭವಿಷ್ಯ , ದೇಶದ ಉತ್ತಮ ಭವಿಷ್ಯ.

ಹಾಗೇಯೇ ಇನ್ನೊಂದು ವಿಭಾಗ ತಮ್ಮ ಪ್ರತಿಷ್ಠೆಯನ್ನು ಮೆರೆಯುವ ಉದ್ದೇಶದಿಂದ ಮಾತ್ರ ತಮ್ಮ ಮಕ್ಕಳನ್ನು ಬಳಸಿಕೊಳ್ಳುವ ಪೋಷಕರ ವಿಭಾಗ. ಮಾನವೀಯ ಮೌಲ್ಯಗಳನ್ನು ಬೋಧಿಸದ ಸಮಾಜದ ಆಗು ಹೋಗುಗಳೊಂದಿಗೆ ಸಂಬಂಧವೇ ಇಲ್ಲದ ಕೇವಲ ಭಾಷೆ ಮತ್ತು ಇತರ ವಿಷಯಗಳಲ್ಲಿ ಪ್ರವೀಣರನ್ನಾಗಿಸುವ ಯಾಂತ್ರಿಕ ಶಿಕ್ಷಣ ನೀಡುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಒಡಲ ಕುಡಿಗಳನ್ನು ಅರ್ಪಿಸಿ ಕೃತಾರ್ಥರಾಗುತ್ತಾರೆ ಈ ಜನರು. ಇಂತಹ ಮಾನಸಿಕತೆಯ ಪೋಷಕರು ತಮ್ಮ ಸಂತಾನಗಳನ್ನು ಮನುಷ್ಯನೆಂಬ ನೆಲೆಯಲ್ಲಿ ಮಾನವೀಯತೆಯನ್ನು ಅಳವಡಿಸಿ ಕೊಳ್ಳಲು ಸ್ವಯಂ ತೊಡಕಾಗುತ್ತಾರೆ. ಈ ರೀತಿಯ ಸ್ವಾರ್ಥಪರತೆಯು ಮಕ್ಕಳ ಮೇಲೆ ಅಂಕಗಳಿಕೆಯೂ ಸೇರಿದಂತೆ ವಿವಿಧ ರೀತಿಯ ಒತ್ತಡವನ್ನು ಹೇರುತ್ತದೆ. ಪ್ರತಿಶ್ಠಿತ ವರ್ಗದ ಈ ಕಾಯಿಲೆಯು ಅದೇ ಸಮಾಜದ ಭಾಗವಾಗಿರುವ ಸಾಮಾನ್ಯ ವರ್ಗಗಳಿಗೂ ಹರಡುತ್ತಾ ಹೋಗಿದೆ. ಅದರ ಪರಿಣಾಮ ಅತ್ಮಹತ್ಯೆ, ಪಲಾಯನ, ಮಾನಸಿಕ ಸಂತುಲನ ಕಳೆದು ಕೊಳ್ಳುವುದು ಮುಂತಾದ ರೂಪದಲ್ಲಿ ಸಮಾಜದ ಮುಂದೆ ಬರುತ್ತಿದೆ. ಭವಿಷ್ಯ ರೂಪಿಸುವ ಉನ್ನತ ಮಾತುಗಳು ಮಾತುಗಳಾಗಿಯೇ ಉಳಿದು ಕೊಳ್ಳುತ್ತದೆ. ಶಾಲೆ ಮಕ್ಕಳ ಭವಿಷ್ಯ ರೂಪಿಸುವ ಪ್ರಕ್ರಿಯೆಯ ಒಂದು ನಿರ್ದಿಷ್ಟ ಭಾಗ ಮಾತ್ರ. ಇದನ್ನು ಅರಿಯದೆ ಮಕ್ಕಳನ್ನು ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸಿ ಯಾವಾಗ ತಾವು ಕರ್ತವ್ಯ ಮುಕ್ತರಾದೆವು ಎಂದು ಕೊಳ್ಳುತ್ತೇವೆಯೋ ಅಲ್ಲಿಯೇ ಎಡವಟ್ಟುಗಳು ಆರಂಭ. ಮಕ್ಕಳು ಅನೇಕರನ್ನು ಅನುಕರಿಸುತ್ತದೆ ಆದರೆ ಅವರು ಅತಿ ಹೆಚ್ಚು ಅನುಕರಿಸುವುದು ತಮ್ಮ ಹೆತ್ತವರನ್ನು ಹಾಗೆಯೇ ಹೆಚ್ಚಿನ ಸಂದರ್ಭದಲ್ಲಿ ಮಕ್ಕಳಿಗೆ ಮಾತಾಪಿತರೇ ರೋಲ್ ಮಾಡಲ್’ಗಳು. ತಂದೆ ತಾಯಿಗಳೊಂದಿಗೆ ಸೆಣಸಾಟವೂ, ಪುಸಲಾಯಿಸಿ ತಮ್ಮ ಬೇಡಿಕೆ ಈಡೇರಿಸಿಕೊಳ್ಳುವಿಕೆಯು, ಸಿಟ್ಟು ಸೆಡವುಗಳು, ಪ್ರಾಮಾಣಿಕತೆ – ಅಪ್ರಾಮಾಣಿಕತೆಗಳು, ಸತ್ಯ- ಸುಳ್ಳುಗಳೂ ಹಾಗೂ ವಚನ ಪಾಲನೆಯೂ ,ಅಸತ್ಯ ವಂಚನೆಗಳೂ, ಸೈದಾಂತಿಕ – ಧಾರ್ಮಿಕ – ರಾಜಕೀಯ ಒಲವು ನಿಲುವುಗಳೂ , ಘನತೆ ಗಾಂಭಿರ್ಯಗಳೂ, ಮಾನವೀಯ ಪ್ರೀತಿ ವಾತ್ಸಲ್ಯ ಇತ್ಯಾದಿಗಳೂ ಹೆಚ್ಚಾಗಿ ತಂದೆ ತಾಯಿಗಳ ಅನುಕರಣೆಯೇ ಆಗಿರುತ್ತದೆ. ಮಕ್ಕಳು ಕ್ಷಣ ಕ್ಷಣವೂ ಅವರನ್ನು ಗಮನಿಸಿ ತಾವು ಹೋಗಬೇಕಾದ ದಾರಿಯನ್ನು ತಮ್ಮ ಅಂತಃಪ್ರಜ್ಞೆ ( Subconscious )ಯಲ್ಲಿ ಜಮೆ ಮಾಡಿಕೊಳ್ಳುತ್ತಿರುತ್ತಾರೆ. ಆದ್ದರಿಂದ ತಮ್ಮ ಮಕ್ಕಳು ಉನ್ನತ ಚಾರಿತ್ರ್ಯವಂತರೂ, ಯುಕ್ತಿ ಹಾಗೂ ವಿವೇಕವುಳ್ಳವರೂ ಆಗಬೇಕೆಂದು ಬಯಸುವ ತಂದೆ ತಾಯಿಗಳು ತಮ್ಮ ಮಕ್ಕಳ ಮುಂದೆ ತಮ್ಮ ಉತ್ತಮ ಮಾದರಿಯನ್ನು ತೋರ್ಪಡಿಸಿ ಕೊಳ್ಳಬೇಕಾದದು ಅತೀ ಅಗತ್ಯ. ಕನಿಷ್ಠ ಪಕ್ಷ ತಂದೆ ತಾಯಂದಿರು ತಮ್ಮ ಜಗಳಗಂಟಿತನವನ್ನು ಮಕ್ಕಳ ಮುಂದೆಯಾದರೂ ಮಾಡದೇ ಇರುವುದು, ತಾಯಿ ಧಾರವಾಹಿಗಳ ದಾಸ್ಯತನ ತೊರೆದು ಮಕ್ಕಳೊಂದಿಗೆ ಬೆರೆಯುವುದು. ತಂದೆ ತಾನೂ ತನ್ನ ಬಾಹ್ಯ ಆಕರ್ಷಣೆಗಳನ್ನು ಬಿಟ್ಟು ಸಂಸಾರದ ಸಾಂಗತ್ಯದಲ್ಲಿ ಸೇರಿಕೊಂಡು ಮಕ್ಕಳೊಂದಿಗೆ ಬೆರೆಯುವುದು ಉತ್ತಮ. ಈ ಬದಲಾವಣೆಗಳು ಮಕ್ಕಳ ಮಾನಸಿಕ ವಿಕಸನಕ್ಕೆ ಪೂರಕವಾಗುವುದು ಖಂಡಿತ. ಈ ರೀತಿಯಲ್ಲಿ ಉಂಟಾಗುವ ಭಾವನಾತ್ಮಕ ಸಾಮಿಪ್ಯಗಳು , ಪ್ರೀತಿಯ ಉತ್ಪತ್ತಿಗಳು ನಿಮ್ಮ ಗೌರವ ಮತ್ತು ನಿಮ್ಮ ಆಜ್ಞಾಪಾಲನೆ ಭಾವ ಅವರಲ್ಲಿ ಅನೈಚ್ಛಿಕವಾಗಿ ಸೃಷ್ಟಿಯಾಗುವುದು ಖಚಿತ. ಏನಿಲ್ಲವೆಂದರೂ ಕನಿಷ್ಠ ಪಕ್ಷ ನಿಮ್ಮನ್ನು ವೃದ್ದಾಶ್ರಮಕ್ಕೆ ತಳ್ಳುವ ವಾತಾವರಣ ಸೃಷ್ಟಿಯಾಗದು.

ಕಡಿಮೆ ಅಂಕಗಳಿಸಿಯೂ, ಅನುತ್ತೀರ್ಣರಾಗಿಯೂ ಹಾಗೂ ಅನುತ್ತೀರ್ಣದ ನಂತರ ಪುನಃ ಪ್ರಯತ್ನಿಸಿ ಸಫಲರಾದವರ ಯಾದಿ(List) ದೊಡ್ಡದಿದೆ. ಇದನ್ನು ಸಮಾಜಕ್ಕೆ ,ಮಾತಪಿತರಿಗೆ, ಸ್ವತಃ ವಿದ್ಯಾರ್ಥಿಗಳಿಗೆ ಮನಗಾಣಿಸ ಬೇಕಾದದು ಇಂದಿನ ತುರ್ತು ಅಗತ್ಯ. ಜನತೆ ಸರಿಯಾಗಿ ಕಣ್ತೆರೆದು ನೋಡಿದರೆ ವಾಸ್ತವಿಕತೆ ಅರಿವಿಗೆ ಬರುತ್ತದೆ. ದೇಶ ಮತ್ತು ಜಗತ್ತಿನ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಶಾಲಾ ಕಾಲೇಜುಗಳಿಂದ ಬಂದ Top Scorer ಗಳಿಗಿಂತ ಪೋಷಕರ ಬೆಂಬಲದಿಂದ ಸಾಮಾನ್ಯ ದರ್ಜೆಯಲ್ಲಿ ಪಾಸಾಗಿಯೂ, ತನ್ನ ಸ್ವಯಂ ಪ್ರಯತ್ನದಿಂದಲೂ ಮತ್ತು ವಿಫಲವಾದ ನಂತರವೂ ಪುನಃ ಪ್ರಯತ್ನ ನಡೆಸಿ ಮುನ್ನುಗ್ಗಿಯೂ ಸಾಧನೆ ಮಾಡಿದವರೇ ಹೆಚ್ಚು ಸಿಗುತ್ತಾರೆ. ಆದ್ದರಿಂದ ಆತ್ಮಹತ್ಯೆ, ನಿರಾಶರಾಗುವಿಕೆ, ಆತ್ಮಸ್ಥೈರ್ಯ ಕಳೆದು ಕೊಳ್ಳುವಿಕೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ.

LEAVE A REPLY

Please enter your comment!
Please enter your name here