ಲೇಖಕರುಎಂ.ವಿವೇಕ್ ಚೆಂಡಾಡಿ

ಜೋಗಿ ರವರ ಇತ್ತೀಚಿಗಿನ ಕಾದಂಬರಿ ಅಶ್ವತ್ಥಾಮನ್‍ನಲ್ಲಿ ತುಂಬಾ ಸಾಮಾನ್ಯ ಹಿನ್ನೆಲೆಯಿಂದ ಮತ್ತು ತೀವ್ರವಾಗಿ ನೊಂದ ವ್ಯಕ್ತಿಯು ನಟನೆಯ ಮೂಲಕ ಬಾಲಿವುಡ್‍ನಲ್ಲಿ ಹಾಗೂ ಬೇರೆ-ಬೇರೆ ಭಾಷೆಗಳಲ್ಲಿ ಖ್ಯಾತತೆಯ ಎತ್ತರದಲ್ಲಿರುವ ಸೆಲೆಬ್ರಿಟಿಯ ಕತೆ. ಪುಸ್ತಕದ ಮುನ್ನುಡಿಯಲ್ಲಿ ಸುಬ್ರಾಯ ಚೊಕ್ಕಾಡಿಯವರು ಹೇಳಿರುವಂತೆ ಇದು ಪಾತ್ರದ ಆಂತರ್ಯದಲ್ಲಿ ಅಥವಾ ಒಳ ತುಮುಲಗಳನ್ನು ಚಿತ್ರಿಸುವ ಕತೆ.

ಅಶ್ವತ್ಥಾಮನ್ ಫಿಲಾಸಫಿ ಮಾತನಾಡುವ ಇತರ ಜನರೊಂದಿಗೆ ಎಲ್ಲಾ ಸಂದರ್ಭದಲ್ಲಿ ಜಗಳ ಕಾಯುತ್ತಾ ಸ್ವಯಂ ಫಿಲಾಸಫಿ ಮಾತನಾಡುತ್ತಾ ತಿರುಗುವ ತೀವ್ರ ಓದಿನ ಖ್ಯಾತ ನಟ. ತನ್ನ ಪಾತ್ರಗಳಿಂದ ಆಚೆಗೂ ತನ್ನನ್ನು ಹುಡುಕಬಯಸುವ ಮತ್ತು ಪ್ರತಿಯೊಂದನ್ನು ಸ್ವೀಕರಿಸಿದಂತೆ ನಟಿಸಿ ತಿರಸ್ಕರಿಸುವ ನಟ.

ಈ ಕಾದಂಬರಿಯಲ್ಲಿ ಅಶ್ವತ್ಥಾಮನು ವ್ಯಕ್ತಿಸ್ವಾತಂತ್ರ್ಯದ(ಸ್ವೇಚ್ಛೆ) ಬಗ್ಗೆ ಮಾತನಾಡುತ್ತಾನೆ, ನಶ್ವರತೆಯ ಬಗ್ಗೆ ಮಾತನಾಡುತ್ತಾನೆ, ತಿರಸ್ಕಾರದ ಬಗ್ಗೆ ಅಥವಾ ನಿರಾಕರಣೆಯ ಬಗ್ಗೆ ಮಾತನಾಡುತ್ತಾನೆ ಆದರೆ, ಇಡಿಯಾಗಿ ಸ್ವೇಚ್ಛೆಯ ಗುಲಾಮನಾಗಿರುತ್ತಾನೆ. ತನ್ನ ಗುಲಾಮತನವನ್ನು ಅಹಂಕಾರದ ಮೂಲಕ ಮತ್ತು ಇನ್ನೊಬ್ಬರಿಗೆ ನೋವು ಕೊಡುವುದು ಒಂದು ‘ತಾಕತ್ತು’ ಎಂದು ವಾದಿಸುತ್ತಾ ಇನ್ನಷ್ಟು ಆ ಗುಲಾಮತನದ ಆಳಕ್ಕೆ ಜಾರುತ್ತಿರುತ್ತಾನೆ.

ನಶ್ವರತೆಯ ಬಗ್ಗೆ ಮೆಚ್ಚಿ ಮಾತನಾಡಿದರೂ ಸಾವನ್ನು ಬಯಸುತ್ತಾನೆ ಮತ್ತು ಸಾವು ಶಾಶ್ವತ ಎಂಬುವುದು ಮರೆಯುತ್ತಾನೆ. ಪ್ರೀತಿಯ ಬಗ್ಗೆ ವಿಶಾಲವಾಗಿ ಮಾತನಾಡುತ್ತಾನೆ ಆದರೆ ಸ್ತ್ರೀಯೊಂದಿಗೆ ಪ್ರೀತಿ ತೋರಿಸಲು ಕಾಮದಾಚಿನ ಚಾಗಿಲನ್ನು ಮುಚ್ಚುತ್ತಾನೆ. ತಿರಸ್ಕರಿಸುವುದೇ ಅಥವಾ ನಿರಾಕರಣೆಯೆ ಉತ್ತಮವಾದುದು ಎಂದು ವಾದಿಸುತ್ತಲೂ ನಟ ತಾನು ಬಂದ ಪಾತ್ರವನ್ನು ಸ್ವೀಕರಿಸಲೇ ಬೇಕು ಎಂದೂ ಹೇಳುತ್ತಾನೆ.

ಜಗತ್ತಿನಲ್ಲಿ ಪ್ರತಿಯೊಂದೂ ನಾಟಕ ಯಾವುದೂ ನಿಜವಲ್ಲ ಎಂದು ಹೇಳಿ ತನ್ನ ಆತ್ಮಚರಿತ್ರೆ ಬರೆಯುವಾಗ ಈ ಜಗತ್ತಿನಲ್ಲಿ ತನ್ನ ಘನತೆ ಹಾಳಾಗದಂತೆ ಉಳಿಯಬೇಕು ಎಂಬ ಮುನ್ನೆಚ್ಚರಿಕೆಯನ್ನು ಕೊಡುತ್ತಾನೆ. ಒಟ್ಟಿನಲ್ಲಿ ತನಗೇನು ಬೇಕೋ ಅಥವಾ ತೋಚುವುದೋ ಅದನ್ನು ಬೇಕೆಂಬಂತೆ ವಾಸಿದಬಹುದಾದ ಚತುರತೆ ಆತನಲ್ಲಿದೆ ಅಥವಾ ಸ್ವೇಚ್ಛೆಯ ಗುಲಾಮತನ ಅಷ್ಟು ಅಗಾಧ ಪ್ರಮಾಣದಲ್ಲಿದೆ.

ಕಾದಂಬರಿಯ ಉದ್ದಕ್ಕೂ ಅನೇಕ ಚರ್ಚಿಸಬಹುದಾದಂತ ವಿಷಯಗಳು ಬರುವುದರಿಂದ ತುಂಬಾ ಚಿಂತನಾ ಪ್ರಚೋದಿತವಾಗಿ ಓದಿಸಿಕೊಂಡು ಹೋಗುತ್ತದೆ. ಅನೇಕ ಕಡೆಗಳಲ್ಲಿ ಪಾತ್ರವು ತನ್ನ ಒಂದು ಮಾತನ್ನು ಇನ್ನೊಂದು ಸಂದರ್ಭದಲ್ಲಿ ಧಿಕ್ಕರಿಸುತ್ತದೆ.

ಆದರೆ, ಅನೇಕ ಆಲೋಚನಾ ಪ್ರಚೋದಿತ ಮಾತುಗಳು ಸ್ವೇಚ್ಛೆಯ ಗುಲಾಮತನಕ್ಕೆ ಎಳೆಯುವಂತದ್ದೇ ಆಗಿದೆ. ದೈನಂದಿನ ಜೀವನದಲ್ಲಿ ಶಿಸ್ತುಬದ್ಧರಾಗಿದ್ದರೆ ಅಂತರಂಗದಲ್ಲಿ ಬಂಡುಕೋರರಾಗಬಹುದು ಎಂಬುವುದು ನಿರೂಪಕನಿಗೆ ಸರಿ ಎಂದು ಅನ್ನಿಸಿದೆ ಎಂದು ನಿರೂಪಕ ಹೇಳುತ್ತಾನಾದರೂ ಆತನ ಒಳಗೆ ಪ್ರಬಲ ಬಂಡಾಯ ಏಳುವುದೇ ಇಲ್ಲ. ಕಾದಂಬರಿಯಲ್ಲಿ ಮರ್ಲಿನ್ ಬ್ರಾಂಡೋನ ಹೆಗಲಿನಲ್ಲಿಟ್ಟು ಗುರಿ ಹೊಡೆಯುವ ಪ್ರಯತ್ನ ಕಂಡರು ತಪ್ಪಿಲ್ಲ.

LEAVE A REPLY

Please enter your comment!
Please enter your name here