• ಎಂ.ಎಸ್.ಕೆ ಬೆಂಗಳೂರು

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ‘ಟಿಪ್ಪು ಈ ಮಣ್ಣಿನ ಮಗ’ ಎಂಬ ಹೇಳಿಕೆ ನೀಡಿದ್ದು ಈಗ ದೊಡ್ಡ ಮಟ್ಟದ ಚರ್ಚೆಯಾಗಿ ಬಿಜೆಪಿಯನ್ನು ಸಂಕಷ್ಟಕ್ಕೆ ಸಿಲುಕಿಸಿದರೆ, ಕಾಂಗ್ರೆಸ್ ಗೆ ಬಿಜೆಪಿಯನ್ನು ಕೆಣಕಲು ಸದವಕಾಶ ಎಂಬಂತಾಗಿದೆ. ಈಗಾಗಲೇ ಬಿಜೆಪಿ ನಾಯಕರು ವಿಶ್ವನಾಥ್ ಹೇಳಿಕೆಗೆ ತೀಕ್ಷ್ಣ, ಖಾರ ಮತ್ತು ಸೂಚನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯಾಧ್ಯಕ್ಷ ನಳಿನ್, ‘ವಿಶ್ವನಾಥ್ ಹೇಳಿಕೆ ಬಿಜೆಪಿ ನಿಲುವಲ್ಲ. ಅದು ಅವರ ವೈಯಕ್ತಿಕ. ಆದರೂ ಪೂರ್ಣ ಮಾಹಿತಿ ಪಡೆಯುತ್ತೇನೆ’ ಎಂದಿದ್ದಾರೆ. ಇತ್ತ ಪ್ರತಾಪ ಸಿಂಹ ‘ಇತಿಹಾಸ ಅರಿತು ಮಾತನಾಡಬೇಕು’ ಎಂದು ಸಾಹಿತ್ಯ ವಲಯದಲ್ಲೇ ಹಿಂದೆ ತೊಡಗಿಕೊಂಡಿದ್ದ ‘ಹಳ್ಳಿ ಹಕ್ಕಿ’ಗೆ ಬುದ್ಧಿವಾದ ಹೇಳುವ ಸಾಹಸ ಮಾಡಿದ್ದಾರೆ. ಶಿಕ್ಷಣ ಸಚಿವ ಸಚಿವ ಸುರೇಶ್ ಕುಮಾರ್, ‘ಟಿಪ್ಪು ಬಗ್ಗೆ ಹೇಳಿಕೆ ನೀಡುವಾಗ ಪಕ್ಷದ ನಿಲುವು ಏನೆಂದು ಯೋಚಿಸಬೇಕಿತ್ತು’ ಎಂದು ಹೇಳಿದ್ದಾರೆ. ಹೀಗೆ ಹಲವರ ಹಲವು ಪ್ರತಿಕ್ರಿಯೆಗಳು ಬರುತ್ತಲೇ ಇವೆ. ಈ ನಡುವೆ ಮಾಧ್ಯಮಕ್ಕೆ ಏನೂ ಪ್ರತಿಕ್ರಿಯೆ ನೀಡದ ವಿಶ್ವನಾಥ್ ತನ್ನ ಮಾಸ್ಕ್ ಅನ್ನು ಇನ್ನೂ ಗಟ್ಟಿಯಾಗಿ ಧರಿಸಿಕೊಂಡು ‘ನಾಳೆ ಮಾತಾಡೋಣ’ ಅಂತ ನೋಟ್ ಬುಕ್ ನಲ್ಲಿ ಬರೆದು ಪ್ರದರ್ಶಿಸಿ ಕಾರು ಹತ್ತಿ ಹೊರಟದ್ದೂ ಆಗಿದೆ.

ವಿಶ್ವನಾಥ್ ಕಂಡ ಟಿಪ್ಪು, ಬಿಜೆಪಿಗರು ಕಾಣುತ್ತಿರುವ, ಎಲ್ಲರೂ ಹಾಗೇ ಕಾಣಬೇಕೆಂದು ಬಯಸುತ್ತಿರುವ ಟಿಪ್ಪು, ಕಾಂಗ್ರೆಸ್ಸಿನ ಟಿಪ್ಪು, ಮುಸಲ್ಮಾನರು ಕಂಡ ಟಿಪ್ಪು, ಕೊಡವರು ಕಾಣುವ ಟಿಪ್ಪು, ಬ್ರಿಟಿಷರು ಕಂಡು ನಡುಗಿದ ಟಿಪ್ಪು, ಅಮೆರಿಕಾದ ‘ನಾಸಾ’ ಕಂಡ ಟಿಪ್ಪು… ಇತಿಹಾಸವನ್ನು ದಿಕ್ಕು ತಪ್ಪಿಸುವುದು ಹೇಗೆ ಎನ್ನುವುದಕ್ಕೆ ಇದು ಸರಳ ಸಾಕ್ಷಿ ಅಷ್ಟೆ. ಟಿಪ್ಪುವನ್ನು ಒಬ್ಬ ಧರ್ಮಾಂಧ, ದೇಶದ್ರೋಹಿ ಎಂದು ತೋರಿಸುವಲ್ಲಿ ಬಿಜೆಪಿ ಉತ್ಸಾಹ ತೋರುವುದು ಏಕೆ ಎಂಬ ಚರ್ಚೆಯೇ ಬೇಕಾಗಿಲ್ಲ. ಅದು ಬಟಾಬಯಲಾಗುವ ಸಂಗತಿ. ಈ ಹಿಂದೆ ಯಡಿಯೂರಪ್ಪ ಟಿಪ್ಪು ಜಯಂತಿಗೆ ಕಿರೀಟ ತೊಟ್ಟು, ಖಡ್ಗ ಹಿಡಿದು ಪ್ರಯತ್ನ ಪಟ್ಟರು. ಅದರ ಪ್ರತಿಫ ಏನೂ ಇರಲಿಲ್ಲ. ಹಾಗಾಗಿ ಬಿಜೆಪಿಗೆ ಟಿಪ್ಪು ಲಾಭವಿರದ ಹೆಸರು. ಕಾಂಗ್ರೆಸ್ ಟಿಪ್ಪು ಜಯಂತಿಯನ್ನು ಆರಂಭಿಸಿತು. ಅದರ ಹಿಂದೆ ಓಟು ಲಾಭವೂ ಇತ್ತು ಎನ್ನುವುದು ವಾಸ್ತವವೇ. ಹೀಗೆ ಈ ವಿಚಾರ ಒಂದೆಡೆ ಇರಲಿ.

ಚರ್ಚಿಸಬೇಕಾದ ಬಲುಮುಖ್ಯ ವಿಷಯ ಎಂದರೆ ರಾಜಕೀಯ ಪಕ್ಷಗಳ ಸಿದ್ಧಾಂತಗಳಿಗೆ ಅನುಗುಣವಾಗಿ ಪಠ್ಯಪುಸ್ತಕಗಳು, ಪಠ್ಯಗಳು ಸಿದ್ಧವಾಗುವುದಾದರೆ, ಅವನ್ನೇ ಪುಟ್ಟ ಪುಟ್ಟ ಮಕ್ಕಳು, ಅವರ ಮುಗ್ಧ ಮನಸ್ಸು ಓದಬೇಕು ಎಂದಾದರೆ ಇದು ಯಾವ ಬಗೆಯ ನ್ಯಾಯ ಎಂದು ಭಾವಿಸಬೇಕು? ಆ ಪುಟ್ಟ ಮಕ್ಕಳನ್ನೇಕೆ ತಮ್ಮ ರಾಜಕೀಯಕ್ಕಾಗಿ ಬಲಿಪಶು ಮಾಡಲಾಗುತ್ತಿದೆ? ಬಿಜೆಪಿ ಸರಕಾರ ಇರುವಾಗ ಸಾವರ್ಕರ್, ಶಿವಾಜಿ ವಿಜೃಂಭಣೆ, ಕಾಂಗ್ರೆಸ್ ಇರುವಾಗ ಟಿಪ್ಪು ಪಠ್ಯ, ಮತ್ತೆ ಬಿಜೆಪಿ ಬರುವಾಗ ಟಿಪ್ಪು ಮಾಯ… ನಡುವೆ ಶಾಲೆಯ ಮಕ್ಕಳ ಪರಿಸ್ಥಿತಿ?? ಇದರ ಬಗ್ಗೆ ಯಾರು ಯೋಚಿಸುತ್ತಾರೆ. ಸ್ವತಃ ಶಿಕ್ಷಣ ಸಚಿವರೇ ‘ಪಕ್ಷದ ನಿಲುವು ಏನೆಂದು ಯೋಚಿಸಬೇಕಿತ್ತು’ ಎನ್ನುವುದಾದರೆ ಇವರು ವಿದ್ಯಾರ್ಥಿಗಳಿಗೆ ಏನನ್ನು ಕಲಿಸಲು ಹೊರಟಿದ್ದಾರೆ?
ಟಿಪ್ಪುವನ್ನು ಒಬ್ಬ ಮಹಾನ್ ವ್ಯಕ್ತಿಯಾಗಿ ತೋರಿಸಬೇಕೆಂದಿಲ್ಲ. ಎಲ್ಲ ಇತಿಹಾಸದ ವ್ಯಕ್ತಿಗಳ ಹಾಗೆ ಟಿಪ್ಪುವೂ ಒಬ್ಬ ಇತಿಹಾಸದ ವ್ಯಕ್ತಿಯಾಗಿದ್ದ ಎಂಬುದನ್ನು ವಿದ್ಯಾರ್ಥಿಗಳು ಓದಬಾರದೇ? ಟಿಪ್ಪು ಆಡಳಿತದ ಕಾಲಾವಧಿಯನ್ನು ಪಠ್ಯದಲ್ಲಿ ತೋರಿಸುವುದು ಹೇಗೆ ?. ಪುಟಗಳನ್ನು ಖಾಲಿ ಬಿಡಲಾಗುತ್ತದೆಯೇ ? ಇಡೀ ರಾಜಕೀಯ ವಲಯಕ್ಕೇ ಇಂತಹ ವರ್ತನೆ ನಾಚಿಕೆಗೇಡು.

ಇತಿಹಾಸವನ್ನು ಎತ್ತಿಕೊಂಡು, ವರ್ತಮಾನದ ಸಮಾಜಕ್ಕೆ ದೊಡ್ಡ ದೊಡ್ಡ ಗಾಯಗಳನ್ನು ಉಂಟುಮಾಡುತ್ತಿರುವ ರಾಜಕೀಯ ನಾಯಕರು ಕ್ಷಮಗೂ ಅನರ್ಹರು. ತಮ್ಮ ಮಾತುಗಳಿಂದ, ಹೇಳಿಕೆಗಳಿಂದ ವಿದ್ಯಾರ್ಥಿಗಳು ಎಲ್ಲರನ್ನೂ ಅನುಮಾನದಿಂದ ನೋಡುವುದಿಲ್ಲವೇ? ಶಿವಾಜಿಯಾಗಲಿ, ಟಿಪ್ಪುವಾಗಲಿ, ಇತಿಹಾಸ ಇತಿಹಾಸವೇ. ನಿಮ್ಮ ಕೋಮು ಮನಸ್ಥಿತಿಯನ್ನು, ಪಕ್ಷ ಸಿದ್ಧಾಂತವನ್ನು ವಿದ್ಯಾರ್ಥಿಗಳ ತಲೆಗೆ ತುಂಬಬೇಡಿ. ಇದು ಎಲ್ಲ ಪಕ್ಷಗಳಿಗೂ ಅನ್ವಯ. ವಿದ್ಯಾರ್ಥಿಗಳಿಗೆ ಸಿಗಬೇಕಾದ ಶಿಕ್ಷಣವನ್ನು ನ್ಯಾಯಯುತವಾಗಿಯೇ ನೀಡಬೇಕು. ಆಥವಾ ಎಚ್ ಎಸ್ ದೊರೆಸ್ವಾಮಿ ಅವರು ಹೇಳಿದಂತೆ ಸ್ವಾಯತ್ತ ಸಂಸ್ಥೆಯೊಂದಕ್ಕೆ ವಹಿಸಿಬಿಡಬೇಕು. ಯಾವ ಪಕ್ಷವೂ ಮೂಗು ತೂರಿಸಿ ತಮ್ಮ ಸಿದ್ಧಾಂತಗಳನ್ನು ಪಠ್ಯಪುಸ್ತಕಗಳ ಮೂಲಕ ಪುಟ್ಟ ಮಕ್ಕಳ ಮುಗ್ಧ ಮನಸ್ಸಿನ ಮೇಲೆ ವಾಂತಿ ಮಾಡಬಾರದು. ಬಿಜೆಪಿ-ಕಾಂಗ್ರೆಸ್ ಅಥವಾ ಯಾವುದೇ ಪಕ್ಷದ ಸಿದ್ಧಾಂತ ನಿಲುವುಗಳ ಅನುಸರಣೆಯಲ್ಲಿಯೇ ಮಕ್ಕಳು ಬೆಳೆಯಬೇಕಾದ ಅನಿವಾರ್ಯವೇನು? ಅಂಥ ಮಹಾ ಸಿದ್ಧಾಂತವೇ ಈ ಪಕ್ಷಗಳದ್ದು? ಈ ದೋಷಯುಕ್ತ ಶಿಕ್ಷಣ ವ್ಯವಸ್ಥೆಯನ್ನು ಕಡ್ಡಾಯವಾಗಿ ಬುಡಮೇಲು ಮಾಡಲೇಬೇಕಿದೆ. ಸಿದ್ಧಾಂತಗಳನ್ನು ಬದಿಗಿಟ್ಟರೆ ಕಾಣಬಹುದಾದ ಇತಿಹಾಸವನ್ನು, ಅದರ ವಾಸ್ತವಗಳನ್ನು ವಿದ್ಯಾರ್ಥಿಗಳು ಕಲಿಯಲಿ, ಅರಿಯಲಿ. ರಾಜಕೀಯ ಸಿದ್ಧಾಂತಗಳು ಕಲಿಕೆಯ ಮೇಲೆ ಪ್ರಭಾವ ಬೀರಲೇಬಾರದು. ಈ ಕುರಿತು ನಾಡಿನ ಪ್ರಮುಖ ಶಿಕ್ಷಣತಜ್ಞರು ಗಮನ ಹರಿಸಬೇಕಿದೆ.

LEAVE A REPLY

Please enter your comment!
Please enter your name here