ವಿವೇಕಾನಂದ. ಹೆಚ್.ಕೆ. ಬೆಂಗಳೂರು

ಅವರ ಜನುಮ ದಿನದ ನೆನಪಿನಲ್ಲಿ…

ಎರಡು ವೈರುಧ್ಯಗಳ ಚಿಂತನೆಯ ಜನರಲ್ಲಿ ಪ್ರೀತಿ – ದ್ವೇಷ ಸಮ ಪ್ರಮಾಣದಲ್ಲಿ ಸೃಷ್ಟಿಸುವ ಒಂದು ವರ್ಣಮಯ ವ್ಯಕ್ತಿತ್ವ. 70-80-90 ರ ದಶಕದಲ್ಲಿ ಕರ್ನಾಟಕ ರಾಜಕೀಯ ಮತ್ತು ಸಾಂಸ್ಕೃತಿಕ ಜನಜೀವನದಲ್ಲಿ ಅತಿಮುಖ್ಯ ಪಾತ್ರವಹಿದ ಕೆಲವೇ ಪ್ರಮುಖರಲ್ಲಿ ಲಂಕೇಶ್ ಒಬ್ಬರು.

ಒಬ್ಬ ಸಾಧಾರಣ ಕುಟುಂಬದ ಶಿಕ್ಷಕ ತನ್ನ ಚಿಂತನೆಗಳಿಂದಲೇ ಸಾಹಿತ್ಯ, ಸಿನಿಮಾ, ನಾಟಕ, ಪತ್ರಿಕೋದ್ಯಮ, ಸಂಘಟನೆ, ರಾಜಕೀಯ, ಹೋರಾಟಗಳಲ್ಲಿ ಒಂದು ಕ್ರಿಯಾತ್ಮಕ ಮತ್ತು ಚಲನಾತ್ಮಕ ಚಳವಳಿ ರೂಪಿಸಿರುವುದು ಒಂದು ಅಧ್ಯಯನ ಯೋಗ್ಯ ವಿಷಯ. ಹೌದು, ಅವರನ್ನು ತೀವ್ರವಾಗಿ ಪ್ರೀತಿಸುವ ಮತ್ತು ಅಭಿಮಾನಿಸುವ ಒಂದು ವರ್ಗವಿದೆ ಹಾಗೆಯೇ ತೀಕ್ಷ್ಣವಾಗಿ ವಿರೋಧಿಸುವ – ದ್ವೇಷಿಸುವ ವರ್ಗವೂ ಇದೆ. ಸ್ವಾತಂತ್ರ್ಯ ನಂತರ ಸುಮಾರು 25-30 ವರ್ಷಗಳು ಭಾರತದಲ್ಲಿ ಗಾಂಧಿ ಪ್ರಭಾವದ ನೆಹರು ಮತ್ತು ಇಂದಿರಾ ಆಡಳಿತ ಆಕ್ರಮಿಸಿಕೊಂಡಿತ್ತು. ಅವರ ಬಹುತೇಕ ಆಡಳಿತ ಬಡವರ ಮೂಲಭೂತ ಅವಶ್ಯಕತೆಗಳ ಪೂರೈಕೆಯ ಸುತ್ತವೇ ಇರುತ್ತಿತ್ತು. ಚೀನಾ ಪಾಕಿಸ್ತಾನದ ಜೊತೆ ಒಂದೆರಡು ಯುದ್ಧ ಹೊರತುಪಡಿಸಿದರೆ ಬಹುತೇಕ ಕೃಷಿ ಕೈಗಾರಿಕಾ ಸ್ವಾವಲಂಬನೆಯೇ ಅವರ ಆಧ್ಯತೆಯಾಗಿತ್ತು.

ಆದರೆ, 1977 ರ ತುರ್ತು ಪರಿಸ್ಥಿತಿಯ ನಂತರ ಭಾರತದ ಜನರಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾಯಿತು. ಜಯಪ್ರಕಾಶ್ ನಾರಾಯಣ್ ಅವರ ಭ್ರಷ್ಟಾಚಾರ ವಿರೋಧಿ ಚಳವಳಿ, ರೈತ ಚಳವಳಿ, ದಲಿತ – ಬಂಡಾಯ ಚಳವಳಿ, ಭಾಷೆ ಮತ್ತು ದ್ರಾವಿಡ ಚಳವಳಿ, ಪ್ರಗತಿಪರ ಚಳವಳಿ ಎಲ್ಲವೂ ಅಂದಿನ ಕಾಲಘಟ್ಟದಲ್ಲಿ ‌ಟಿಸಿಲೊಡೆದವು. ಆಗ ರಾಮ್ ಮನೋಹರ್ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದ ಲಂಕೇಶ್ ತಮ್ಮ ಚಿಂತನೆಗಳನ್ನು ರೂಪಿಸಿಕೊಂಡರು. ಅವರ ಸಾಹಿತ್ಯ, ರಾಜಕೀಯ, ಪತ್ರಿಕೋದ್ಯಮದ ಭಾಷೆಯೇ ಒಂದು ಹೊಸ ತಿರುವಿಗೆ ಕಾರಣವಾಯಿತು. ಮುಂದೆ ಅದರ ಪರಿಣಾಮ ಬಹಳಷ್ಟು ಒಳ್ಳೆಯ ಒಂದಷ್ಟು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಯಿತು. ಅದು ಈಗಲೂ ಮುಂದುವರಿದಿದೆ.

ಲಂಕೇಶ್ ಅವರ ಬಹುದೊಡ್ಡ ಸಾಮರ್ಥ್ಯ ಅವರ ಚಿಂತನೆಯಲ್ಲ, ಹೋರಾಟವಲ್ಲ, ಸಾಹಿತ್ಯವಲ್ಲ ಅದೆಲ್ಲವನ್ನೂ ಮೀರಿದ ಗ್ರಹಿಕೆ. ಖುರಾನ್ ಇರಬಹುದು, ಭಗವದ್ಗೀತೆ, ಬೈಬಲ್, ಸಂವಿಧಾನ ಅಥವಾ ಯಾವುದೇ ಧರ್ಮಶಾಸ್ತ್ರವಿರಬಹುದು ಅನೇಕರು ಅನೇಕ ಬಾರಿ ಓದುತ್ತಾರೆ. ಕೆಲವರು ಕಂಠಪಾಠ ಮಾಡಬಹುದು ಎಲ್ಲವನ್ನೂ ನೆನಪಿಟ್ಟುಕೊಳ್ಳಬಹುದು. ಆದರೆ ಅವುಗಳ ವಾಸ್ತವತೆ ಅರಿಯುವಲ್ಲಿ ವಿಫಲರಾಗುತ್ತಾರೆ. ಯಾವುದೇ ಪರೀಕ್ಷೆಗಳಲ್ಲಿ 100 ರಲ್ಲಿ 100 ಅಂಕಗಳನ್ನು ಪಡೆಯಬಹುದು. ಆದರೆ ಅದು ಜ್ಞಾನದ ಆಳವನ್ನು ಅರಿಯುವ ಸಾಧನವಾಗುವುದಿಲ್ಲ. ಒಟ್ಟು ಗ್ರಹಿಕೆ ಮುಖ್ಯ.

ಸಮಾಜವನ್ನು ಗ್ರಹಿಸುವಲ್ಲಿ ಲಂಕೇಶರು ಬಹು ಸೂಕ್ಷ್ಮತೆಯನ್ನು ಹೊಂದಿದ್ದರು. ಮನುವಾದ, ಬಸವ ಧರ್ಮ, ಗಾಂಧಿವಾದ, ಅಂಬೇಡ್ಕರ್ ಚಿಂತನೆಗಳು, ಪ್ರಜಾಪ್ರಭುತ್ವ, ಇಂದಿರಾಗಾಂಧಿಯ ಧೋರಣೆ, ಮಾರ್ಕ್ಸ್ ಮತ್ತು ವಿಶ್ವದ ಇನ್ನಿತರ ವಿಚಾರಗಳ ಜೊತೆಗೆ ಮಣ್ಣಿನ ಸೊಗಡಿನ ಸ್ಥಳೀಯತೆಯನ್ನು ಸಮೀಕರಿಸಿ ಅಭಿಪ್ರಾಯ ರೂಪಿಸಿಕೊಳ್ಳುವ ಅರಿವನ್ನು ಹೊಂದಿದ್ದರು.

ಅಮ್ಮನ ಶ್ರೇಷ್ಠತೆಯನ್ನು ಬಣ್ಣಿಸುತ್ತಾ ಅಮ್ಮನ ಸ್ವಾರ್ಥ ಮತ್ತು ನೀಚತನವನ್ನು ಗುರುತಿಸಬಲ್ಲವರಾಗಿದ್ದರು. ವಿಶ್ವಮಾನವ ಪ್ರಜ್ಞೆಯ ಜೊತೆ ಗೆಳೆತನದ ಅಸೂಯೆಗಳನ್ನು ಅರ್ಥಮಾಡಿಕೊಂಡಿದ್ದರು. ಆದರ್ಶ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸ ಅವರಿಗೆ ತಿಳಿದಿತ್ತು. ತಮ್ಮ ತಪ್ಪುಗಳು, ಅದನ್ನು ಮರೆಮಾಚುವ ವಿಧಾನ, ವ್ಯಕ್ತಿ ಸ್ವಾತಂತ್ರ್ಯ, ಆತ್ಮಾವಲೋಕನ, ಇದರ ನೆರಳಲ್ಲಿ ಮತ್ತೊಬ್ಬರಿಗೆ ವಂಚಿಸುವ ನೋಯಿಸುವ ಕಲೆಗಾರಿಕೆ ಅವರಿಗೆ ಗೊತ್ತಿತ್ತು. ಜೀವನೊತ್ಸಾಹದ ಕುರುಹಾಗಿ ಬೇರೆಯವರನ್ನು ಅನವಶ್ಯಕವಾಗಿ ಮೇಲೆತ್ತುವ, ಕಾಲೆಳೆಯುವ, ಶಾಂತಿಯ ಸಮಯದಲ್ಲಿ ಸಂಘರ್ಷ ಉಂಟುಮಾಡುವ, ಅದನ್ನು ತಮ್ಮ ವಿಚಾರಗಳ ಅಡಿಯಲ್ಲಿ ಸಮರ್ಥಿಸಿಕೊಳ್ಳುವ ಉದ್ದೇಶ ಪೂರ್ವಕ ತುಂಟತನವೂ ಇತ್ತು.

ಈ ಎಲ್ಲದರ ಪ್ರಭಾವದಿಂದಾಗಿ ಭಿಕ್ಷುಕನ್ನು, ಸಾಮಾನ್ಯನನ್ನು, ಅಸಾಮಾನ್ಯನನ್ನು, ಅದ್ಭುತನನ್ನು ಒಂದು ಜೀವಿಯಂತೆ ಗ್ರಹಿಸಿ ಅವರನ್ನು ವಿಮರ್ಶಿಸಬಲ್ಲ‌ ಪಾಂಡಿತ್ಯ ಅವರಿಗಿತ್ತು. ಬುದ್ಧ ಬಸವ ಗಾಂಧಿ ಅಂಬೇಡ್ಕರ್ ‌ಅಥವಾ ಯಾರೇ ಇರಲಿ ಅವರ ಶ್ರೇಷ್ಠತೆಯ ಜೊತೆಗೆ ಮನುಷ್ಯ ಸಹಜ ದೌರ್ಬಲ್ಯಗಳನ್ನು ಗುರುತಿಸಿ ಹೇಳಬಲ್ಲವರಾಗಿದ್ದರು. ನಮ್ಮ ಆಧುನಿಕ ಸಮಾಜದ, ಮಾಧ್ಯಮ ಕ್ರಾಂತಿಯ ಒಂದು ಸಮಸ್ಯೆಯೆಂದರೆ, ಜಾಗೃತವಾಗಿರುವ ಬಲ ಮತ್ತು ಎಡ ಪಂಥಗಳ ಮನಸ್ಥಿತಿ ಮತ್ತು ವಿವೇಚನೆಯನ್ನು ನುಂಗಿ ಹಾಕಿದ ಭಾವೋದ್ವೇಗ ಮತ್ತು ಅತಿರೇಕಗಳು.

ಒಬ್ಬ ಜನಪ್ರಿಯ ವ್ಯಕ್ತಿಯನ್ನು ಎಡಕ್ಕೋ ಬಲಕ್ಕೋ ವಾಲಿಸಲಾಗುತ್ತದೆ. ತದನಂತರ ಆತನ ಬಗೆಗಿನ ಅಧ್ಯಯನವನ್ನೇ ಮರೆಯಲಾಗುತ್ತದೆ. ಕೇವಲ ಪರ ವಿರೋಧದ ಚರ್ಚೆ ಮಾತ್ರ ನಡೆಯುತ್ತದೆ.

ಸ್ವತಃ ಲಂಕೇಶರೇ ಹೇಳಿರುವಂತೆ “ಆರಾಧನಾ ಭಾವ ಅಥವಾ ದ್ವೇಷ ಅಸೂಯೆಯ ಭಾವ ಎರಡೂ ಸಹ ವಿಮರ್ಶಕರಲ್ಲಿ ಕುರುಡುತನ ಸೃಷ್ಟಿಸುತ್ತದೆ”.

“ಸತ್ಯವನ್ನು ವಾಸ್ತವವನ್ನು ಗ್ರಹಿಸುವ ಮತ್ತು ಎದುರಿಸುವ ಮಾನಸಿಕತೆಯೇ ಕಡಿಮೆಯಾಗಿದೆ”.

ಆ ದೃಷ್ಟಿಯಿಂದ ಲಂಕೇಶ್ ನಿಜಕ್ಕೂ ವಿಚಾರ ಪ್ರಚೋದಕ ನಿಷ್ಠುರವಾದಿ. ಕೆಲವೇ ಅಪರೂಪದ ವ್ಯಕ್ತಿಗಳಿಗೆ ಮಾತ್ರ ಸಾಧ್ಯವಾಗಬಹುದಾದ ನೇರವಂತಿಕೆ ಅವರಲ್ಲಿತ್ತು. ಅವರ ಚಿಂತನೆಗಳನ್ನು ಒಪ್ಪುವ, ನಿರ್ಲಕ್ಷಿಸುವ, ತಿರಸ್ಕರಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅವರ ಗ್ರಹಿಕೆಯ ಶಕ್ತಿ ಒಂದು ಯುವ ಪೀಳಿಗೆಗೆ ಮಾರ್ಗದರ್ಶಕವಾಗಿದೆ, ಸ್ಪೂರ್ತಿದಾಯಕವಾಗಿದೆ ಎಂದು ಹೇಳಬಹುದು.

LEAVE A REPLY

Please enter your comment!
Please enter your name here