ಆರಿಫುದ್ದೀನ್ ಮುಹಮ್ಮದ್, ಹೈದರಾಬಾದ್

ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಭಯಭೀತ ಘಟನೆಗಳೊಂದಿಗೆ ಪ್ರತಿದಿನ ಬೆಳಗಾಗುತ್ತದೆ. 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಸಾಮೂಹಿಕ ಅತ್ಯಾಚಾರವು ತೀವ್ರವಾದ ಜನಾಕ್ರೋಶಕ್ಕೆ ಕಾರಣವಾಗಿ ಜನರನ್ನು ಬೀದಿಗಿಳಿಯುವಂತೆ ಮಾಡಿತು. ಆದರೆ, ಅದರ ನಂತರದಲ್ಲಿಯೂ ಅತ್ಯಾಚಾರಗಳಲ್ಲಿ ಆದ ಏರಿಕೆಯು ಆಘಾತಕಾರಿಯಾಗಿದೆ.

ಪ್ರತಿದಿನ ದೆಹಲಿಯಲ್ಲಿ ಮಾತ್ರವಾಗಿ ಆರು ಅತ್ಯಾಚಾರ ಕೇಸುಗಳು ದಾಖಲಾಗುತ್ತವೆ ಮತ್ತು ಪ್ರತಿ 20 ನಿಮಿಷಕ್ಕೆ ಒಂದು ಅತ್ಯಾಚಾರ ಕೇಸು ದೇಶದ ವಿವಿಧ ಕಡೆಗಳಲ್ಲಿ ದಾಖಲಾಗುತ್ತದೆ. ಅಲ್ಲದೇ, ಇದಕ್ಕಿಂತಲೂ ಅಧಿಕವಾಗಿ ನೂರಾರು ಆದಿವಾಸಿಗಳ, ದಲಿತರ ಮತ್ತು ಹಿಂದುಳಿದ ವರ್ಗಗಳ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳು ಹೆಚ್ಚಾಗಿ ವರದಿಯಾಗದೆ ಹೋಗುತ್ತದೆ.

ಸರಕಾರವು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ವಿಫಲವಾಗಿರುವುದರ ಕುರಿತು ಜನರು ಪ್ರತಿಭಟಿಸುತ್ತಿರುವಾಗ, ನಾವು ಒಂದು ವಾಸ್ತವವನ್ನು ಮರೆಯುತ್ತಿದ್ದೇವೆ. ಅದೇನೆಂದರೆ, ನಾವು ಒಂದು ಸಮಾಜವಾಗಿ ಅತ್ಯಾಚಾರದ ಸಂಸ್ಕøತಿಯಲ್ಲಿ ಸಹಭಾಗಿಯಾಗಿದ್ದೇವೆ.

ಮಹಿಳೆಯರ ಬಗೆಗಿನ ಪೂರ್ವಾಗ್ರಹವಾದ ಊಹೆಗಳಿಂದಾಗಿ ನಿಜವಾದ ಸಮಸ್ಯೆಗಳು ಉದ್ಭವಿಸುತ್ತದೆ. ವಿರುದ್ಧ ಲಿಂಗದ ಕುರಿತು ಒಬ್ಬ ವ್ಯಕ್ತಿಗೆ ಇರುವ ಆಲೋಚನೆ ಮತ್ತು ದೃಷ್ಠಿಕೋನವು ಆತನ ಪ್ರವೃತ್ತಿಯ ಮೇಲೆ ಬೃಹತ್ ಪ್ರಭಾವ ಬೀರುತ್ತದೆ. ಯಾವಾಗ ಒಬ್ಬ ಮಗುವು ತನ್ನ ಕುಟುಂಬದಲ್ಲಿ ಅಥವಾ ಸುತ್ತಮುತ್ತಲಿನಲ್ಲಿ ಮಹಿಳೆಯನ್ನು ಮೆದು, ವಿಧೇಯಳಾಗಿರುವವಳಾಗಿ, ಪಳಗಿಸಬಹುದಾದ, ಸ್ವಂತಿಕೆಯನ್ನು ನಿಷೇಧಿಸಲಾಗಿರುವವಳಾಗಿ, ಮನೆಗೆಲಸದ ವಸ್ತುವಾಗಿ, ಯಾವುದೇ ಪ್ರಶ್ನೆಯನ್ನು ಮಾಡದೇ ಮನೆಗೆಲಸವನ್ನು ಮಾಡಲೇ ಬೇಕಾದವಳಾಗಿ ಪರಿಗಣಿಸಲ್ಪಟ್ಟಿರುವುದನ್ನು ಕಂಡು ಇದು ಸಮಾಜದಲ್ಲಿ ಮಹಿಳೆಯೊಂದಿಗೆ ವ್ಯವಹರಿಸಬೇಕಾದ ಪ್ರಾಕೃತಿಕ ರೀತಿಯೆಂದು ಆತ ಭಾವಿಸುತ್ತಾನೆ. ಮಹಿಳೆಯು ಪುರುಷರ ಅಧೀನಕ್ಕೊಳಪಟ್ಟವರೆಂದೂ, ಅವರನ್ನು ಸಮಾನವಾಗಿ ಕಾಣಬೇಕಾದ ಅಗತ್ಯವಿಲ್ಲವೆಂಬ ಕಲ್ಪನೆಯನ್ನು ಇದು ಮೂಡಿಸುತ್ತದೆ. ಈ ರೀತಿಯಾಗಿ ಪುರುಷ ಪ್ರಾಧಾನ್ಯತೆಯೂ ಸಮಾಜದಲ್ಲಿ ಮತ್ತೂ ಬಲಗೊಳ್ಳುತ್ತದೆ. ಸಮಾಜವು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಾಮಾನ್ಯೀಕರಿಸಿ, ಅತ್ಯಾಚಾರಗಳನ್ನು ಕ್ಷುಲ್ಲಕಗೊಳಿಸುತ್ತದೆ ಮತ್ತು ನೊಂದವರನ್ನು ಆಕ್ಷೇಪಿಸಿ ತೃಪ್ತಿಪಟ್ಟುಕೊಳ್ಳುತ್ತದೆ.

ಎರಡನೇಯದಾಗಿ, ಮಹಿಳೆಯರನ್ನು ಹೆಚ್ಚಿನ ಸಂದರ್ಭಗಳಲ್ಲಿ ಅವರ ಪ್ರತ್ಯೇಕ ಅಸ್ತಿತ್ವವನ್ನು ಮತ್ತು ಸಾಮಥ್ರ್ಯವನ್ನು ಉಪೇಕ್ಷಿಸಿ ದೇಹ ಸೌಂದರ್ಯದಿಂದ ಗುರುತಿಸಲಾಗುತ್ತದೆ. ಇದು ಅವರನ್ನು ಇನ್ನಷ್ಟು ಅಪಮಾನುಷ ಮತ್ತು ಸಾಮಾಗ್ರೀಕರಿಸುತ್ತದೆ. ಸಮಾಜದ ಗ್ರಹಿಕೆ ಅಥವಾ ಕನಿಷ್ಠ ಪಕ್ಷ ಅಜಾಗೃತ ಮನೋವೃತಿಯನ್ನು ರೂಪಿಸುವಲ್ಲಿ ಮಾಧ್ಯಮಗಳು ಮತ್ತು ಜನಪ್ರಿಯ ಪದ್ಧತಿಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಆದರೆ, ದುರದೃಷ್ಟವಶಾತ್ ಮಹಿಳೆಯರನ್ನು ಜನಪ್ರಿಯ ಮನೋರಂಜನೆಗಳಲ್ಲಿ ಸಾಮಾಗ್ರೀಕರಿಸುವುದು ನಾವು ನಿಷೇಧಿಸಲಾಗದಂತಹ ವಾಸ್ತವ. ಸಿನೆಮಾ, ಸಂಗೀತ, ಜಾಹೀರಾತು, ರಿಯಾಲಿಟಿ ಶೋಗಳು ಸ್ತ್ರೀಯನ್ನು ಮಂದ ಬೆಳಕಿನಲ್ಲಿ ಬಿಂಬಿಸಿ, ಆಕೆಯು ಕೇವಲ ವಿನೋದದ ಮತ್ತು ಲೈಂಗಿಕ ತೃಪ್ತಿಯ ವಸ್ತುವಿನಂತೆ ಪ್ರದರ್ಶಿಸುತ್ತದೆ. ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ಸ್ತ್ರೀಯನ್ನು ಒಂದೇ ರೀತಿಯಾದ ಚಿತ್ರಣದೊಂದಿಗೆ ವ್ಯಕ್ತಪಡಿಸಲಾಗುತ್ತದೆ. ಆಕೆಯನ್ನು ಕಾಮುಕತೆಯ, “ಪುರುಷ ದೃಷ್ಟಿ”ಗೆ ಆಹಾರದ ವಸ್ತುವಿನಂತೆ ಬಿಂಬಿಸಲಾಗುತ್ತದೆ. ಆಕೆಯನ್ನು ಅಶಿಷ್ಟ ಭಾಷೆಯ ಮೂಲಕವು ಗುರುತಿಸಿ ಅಪಮಾನುಷಗೊಳಿಸಲಾಗುತ್ತದೆ. ಉದಾಹರಣೆಗೆ- ಐಟಂ, ಮಾಲ್ ಇತ್ಯಾದಿ.

ಯಾವಾಗ ಸಿನೆಮಾದ ನಾಯಕ ಹುಡುಗಿಯನ್ನು ಹಿಂಬಾಲಿಸುವುದು, ಚೆಲ್ಲಾಟವಾಡುವುದು ಮತ್ತು ಚುಡಾಯಿಸುವುದು ಹಾಗು ಕಡೆಗೆ ಆಕೆಯನ್ನು ಓಲೈಸುವುದನ್ನು ಮಾಡುತ್ತಾನೆ. ನಾವು ಕೂತು ನೋಡಿ ನಕ್ಕು ಖುಷಿಪಡುತ್ತೇವೆ. ಇದು ಮುಂದುವರಿದು ಐಟಂ ದೃಶ್ಯ(ಪ್ರಸಂಗ)ದಲ್ಲಿ ಮಹಿಳೆಯನ್ನು ಪುರುಷರ ಗುಂಪು ಆವರಿಸಿರುವಂತೆ ಅವಹೇಳನಕಾರಿಯಾಗಿ ಚಿತ್ರಿಸಲಾಗುತ್ತದೆ. ಈ ರೀತಿಯಾದ ಚಿತ್ರಗಳು, “ಸ್ತ್ರೀಯರು ಲೈಂಗಿಕ ಸಾಮಾಗ್ರಿ ಮತ್ತು ಅವರು ಪುರುಷರ ಕಲ್ಪನೆಗಳನ್ನು ಪಾಲಿಸಲು ಸಿದ್ಧರಾಗಿದ್ದಾರೆ” ಎಂಬ ಗ್ರಹಿಕೆಯನ್ನು ಉಂಟು ಮಾಡುತ್ತದೆ. ಇದು ನಮ್ಮ ಆಲೋಚನೆಗಳಲ್ಲಿ ಆಳವಾದ ಬೇರು ಬಿಡುತ್ತದೆ ಹಾಗು ದೀರ್ಘಕಾಲದ ಪರಿಣಾಮ ಬೀರುತ್ತದೆ. ಆಕೆಯನ್ನು ಕೇವಲ ವಸ್ತುವಾಗಿ ಪರಿಗಣಿಸಲ್ಪಟ್ಟ ನಂತರದಲ್ಲಿ, ಆಕೆಯ ಒಪ್ಪಿಗೆಯು ಅಗತ್ಯವೆಂದು ತಿಳಿಯಲಾಗುವುದಿಲ್ಲ ಮತ್ತು ಅದು ಅವರ ಮೇಲೆ ದೌರ್ಜನ್ಯವೆಸಗುವುದನ್ನು ಇನ್ನಷ್ಟು ಸುಲಭಗೊಳಿಸಿದೆ.

ಖಂಡಿತವಾಗಿ, ಮಹಿಳೆಯರ ಬಗೆಗೆ ಪುರುಷರ ಈ ರೀತಿಯಾದ ದೃಷ್ಠಿಕೋನವು ಅವರ ಮೇಲೆ ಪ್ರಾಬಲ್ಯ ಸಾಧಿಸುವ, ಪೀಡಿಸುವ, ದೌರ್ಜನ್ಯವೆಸಗುವ ಸಾಮಾಜಿಕ ರಚನೆ ನಿರ್ಮಾಣ ಮಾಡುತ್ತದೆ. ನಾವು ನಿರ್ವಹಿಸಬೇಕಾದ ಕರ್ತವ್ಯವೇನೆಂದರೆ- ಎಲ್ಲಾ ರೀತಿಯಾದ ಸಾಮಾಗ್ರೀಕರಣದ ವಿರುದ್ಧ ನಿಲ್ಲಬೇಕು ಮತ್ತು ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಬುನಾದಿಯಲ್ಲಿ ಸಮಾಜದ ನಿರ್ಮಾಣಕ್ಕೆ ಪರಿಶ್ರಮಿಸಬೇಕು.

 

ಕೃಪೆ: ದಿ ಕಂಪಾನಿಯನ್

LEAVE A REPLY

Please enter your comment!
Please enter your name here