ಭಾಗ: 4

-ಡಾ. ಮುಜಾಫ್ಫರ್ ಅಸ್ಸಾದಿ
ವಿಶೇಷಾಧಿಕಾರಿ, ರಾಯಚೂರು ವಿಶ್ವವಿದ್ಯಾಲಯ

ಹೊಸ ಮಾನದಂಡಗಳ ಹುಡುಕಾಟ ಮತ್ತೊಮ್ಮೆ ಆರಂಭಗೊಳ್ಳುತ್ತದೆ. ಇಲ್ಲಿ ಜಾತಿಗಳ ಹುಡುಕಾಟದೊಂದಿಗೆ ಮಾನದಂಡಗಳ ಹುಡುಕಾಟವು ಅತ್ಯಂತಪ್ರಮುಖವಾಗುತ್ತದೆ. 1970ರ ದಶಕ ಈ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಘಟ್ಟ ಎನ್ನಬಹುದು. ಈ ದಶಕದಲ್ಲಿ ಸಮಾಜ ಮತ್ತು ಅಧಿಕಾರ ರಾಜಕಾರಣದಲ್ಲಿ ಮಹತ್ತರವಾದ ಬದಲಾವಣೆಯಾದದ್ದು ದಿಟ. 1970ರ ಆರಂಭ ತನಕ ಅಧಿಕಾರ ರಾಜಕಾರಣವು ಪ್ರಬಲ ಜಾತಿಗಳ ಹಿಡಿತದಲ್ಲಿತ್ತು. ಪ್ರಬಲ ಜಾತಿಗಳು ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದವು. ಮುಖ್ಯಮಂತ್ರಿಗಳು ಈ ಜಾತಿಗಳಿಂದ ಬಂದಿದ್ದರು ಹಿಂದುಳಿದ ಜಾತಿಗಳಿಗ ಯಾವ ಸ್ಥಾನಮಾನಗಳಿರಲಿಲ್ಲ.

ಇದನ್ನು ಬದಲಾಯಿಸಿದವರು ದೇವರಾಜ್ ಅರಸ್‍ರವರು. ಇವರು ಮುಖ್ಯಮಂತ್ರಿಯಾದ ಮೇಲೆ ಪ್ರಪ್ರಥಮ ಬಾರಿಗೆ ರಾಜ್ಯದ ಅಧಿಕಾರವು ಬಲಾಢ್ಯ ಜಾತಿಗಳಿಂದ ಹಿಂದುಳಿದ ಜಾತಿ/ವರ್ಗಗಳ ಹಿಡಿತಕ್ಕೆ ಹೋಯಿತು. 1975ರಲ್ಲಿ ಅವರು ಪ್ರಪ್ರಥಮ ಹಿಂದುಳಿದ ಆಯೋಗವನ್ನು ರಚಿಸಿ ಅಧಿಕಾರ ರಾಜಕಾರಣದಲ್ಲೂ, ಮೀಸಲಾತಿ ರಾಜಕಾರಣದಲ್ಲೂ, ಅಸ್ಮಿತೆ ರಾಜಕಾರಣದಲ್ಲೂ ಮಹತ್ತರವಾದ ಬದಲಾವಣೆಯನ್ನು ತಂದರು. ಹಾವನೂರು ಆಯೋಗದ ರಚನೆ ಇವರ ಮಹತ್ತರವಾದ ಕೊಡುಗೆಗಳಲ್ಲಿ ಒಂದು. ಇದರ ಫಲಶ್ರುತಿಯಂತೆ ಕನಾಟಕದಲ್ಲಿ ಪ್ರಪ್ರಥಮ ಬಾರಿಗೆ ಹೊಸ ಸಾಮಾಜಿಕ ಸಮೀಕರಣ-ಮುಸ್ಲಿಮ್, ಹಿಂದುಳಿದ ವರ್ಗ ಹಾಗೂ ದಲಿತ- ಅಥವಾ “ಅಹಿಂದಾ” ಹುಟ್ಟಿಕೊಂಡಿತು. ಇದು ಕಾಲ್ಪನಿಕವೂ ಹಾಗೂ ವಾಸ್ತವವು ಆಗಿತ್ತು. ಸಾಮಾಜಿಕವಾಗಿ ಅದು ಕಾಲ್ಪನಿಕವಾಗಿತ್ತು. ರಾಜಕಾರಣದಲ್ಲಿ ಅದು ವಾಸ್ತವವು ಆಗಿತ್ತು. “ಅಹಿಂದ”ದ ಮತ ರಾಜಕಾರಣದಿಂದ ಕಾಂಗ್ರೆಸ್ ಗಟ್ಟಿಯಾಗುತ್ತಾ ಹೋಯಿತು. ಅಖಿಲ ಭಾರತದ ಮಟ್ಟದಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಜನಪ್ರಿಯ ಘೋಷಣೆಗಳು ಮತ್ತು ಕಾರ್ಯಕ್ರಮಗಳು- ಗರೀಬಿ ಹಟಾವೋ, ಬಾಂಗ್ಲಾ ಯುದ್ಧ, ಬ್ಯಾಂಕ್ ರಾಷ್ಟ್ರೀಕರಣ ಇತ್ಯಾದಿ ಕಾಂಗ್ರೆಸ್‍ನ ತಳಹದಿಯನ್ನು ಗಟ್ಟಿಗೊಳಿಸದರೆ- ಕರ್ನಾಟಕದಲ್ಲಿ ದೇವರಾಜ್ ಅರಸ್ ಜಾರಿಗೆ ತಂದ ಜನಪ್ರಿಯ ಯೋಜನೆಗಳು-ಅದರಲ್ಲೂ ಭೂಸುಧಾರಣೆ, ಜೀತ ಪದ್ಧತಿಯ ನಿರ್ಮೂಲನೆ, ಅದರೊಟ್ಟಿಗೆ ಜಾರಿಗೆ ತಂದ ಹಾವನೂರು ಆಯೋಗದ ಶಿಫಾರಸ್ಸುಗಳು ಕಾಂಗ್ರೆಸ್‍ನ ತಳಹದಿಯನ್ನು ಇನ್ನಷ್ಟು ಗಟ್ಟಿಗೊಳಿಸಿತು. ಅದು ಪ್ರಪ್ರಥಮ ಬಾರಿಗೆ ನೂರಾರು ಸಣ್ಣ ಪುಟ್ಟ ಜಾತಿಗಳಿಗೆ ಅಸ್ಮಿತೆ ಅಥವಾ ಐಡೆಂಟಿಟಿಯನ್ನು ನೀಡಲು ಸಫಲವಾಯಿತು. ಅಸ್ಮಿತೆ ಇಲ್ಲದ ಸಮುದಾಯಗಳಿಗೆ ಅಸ್ಮಿತೆ ದೊರೆಯಿತು. ಸಾವಿರಾರು ಕೆಳ ಅಂಚಿನ ನಾಯಕರು ಹುಟ್ಟಿದರು. ಕರ್ನಾಟಕದಲ್ಲಿ ಬೆಳೆಯಲು ಸಾಧ್ಯವಾಯಿತು. ಇದು ಹೊಸ ನಾಯಕತ್ವದ ಕಾಲಘಟ್ಟವೆನ್ನಬಹುದು. ವೀರಪ್ಪ ಮೊಯಿಲಿ, ಜಾಲಪ್ಪ, ಅಜೀಜ್ ಸೇಟ್, ಕಾಗೊಡು ತಿಮ್ಮಪ್ಪ, ರಮೇಶ್ ಕುಮಾರ್ ಇತ್ಯಾದಿಯವರು ಈ ಹೊಸ ಸಾಮಾಜಿಕ ಸಮೀಕರಣದ ಹಾಗೂ ಅಧಿಕಾರ ರಾಜಕಾರಣದ ಕೊಡುಗೆ. ಪ್ರಪ್ರಥಮ ಬಾರಿಗೆ ಚಾರಿತ್ರಿಕವಾಗಿದ್ದ ರಾಜಕೀಯ ವೈರುದ್ಯಗಳು ಬದಲಾದವು: ಮೇಲ್ಜಾತಿ ಮತ್ತು ಪ್ರಬಲ ಜಾತಿಗಳ ನಡುವಿನ ವೈರುಧ್ಯಗಳು ಬದಲಾಗಿ ಪ್ರಬಲ ಜಾತಿ ಮತ್ತು “ಅಹಿಂದಾ” ಅದರಲ್ಲೂ “ಹಿಂದುಳಿದ ವರ್ಗಗಳ” ನಡುವಿನ ವೈರುಧ್ಯಗಳ ಎರಡನೇ ಹಂತ. ಮೊದಲನೆ ಹಂತದಲ್ಲಿ ವೈರುಧ್ಯಗಳು ಮೇಲ್ಜಾತಿ ಹಾಗೂ ಪ್ರಬಲ ಜಾತಿಗಳ ನಡುವೆ ಇತ್ತು. ಬದಲಾದ ರಾಜಕೀಯದ ಸಮೀಕರಣದೊಂದಿಗೆ ವೈರುಧ್ಯಗಳು ಕೂಡ ಬದಲಾದವು.

ಹಾವನೂರು ಆಯೋಗವನ್ನು “ಹಿಂದುಳಿದ ವರ್ಗಗಳ ಬೈಬಲ್”, “ಹಿಂದುಳಿದ ವರ್ಗಗಳ ಕಾನೂನಿನ ಪುಸ್ತಕ”, “ಜಾತಿಗಳ ಆಧ್ಯಾತ್ಮ” ಎಂದೆಲ್ಲಾ ಕರೆಯಲಾಗುತ್ತದೆ. ವಾಸ್ತವವಾಗಿ ಐತಿಹಾಸಿಕವಾಗಿ ವಂಚಿತವಾಗಿದ್ದ ನೂರಾರು ಸಣ್ಣ ಸಣ್ಣ ಜಾತಿಗಳನ್ನು ಸರಕಾರಿ ಪಟ್ಟಿಯೊಳಗೆ ಪ್ರಪ್ರಥಮ ಬಾರಿಗೆ ತಂದಿತ್ತು ಮತ್ತು ಗುರುತಿಸಿತ್ತು. ಆಯೋಗದ ತೀರ್ಪನ್ನು ವಸ್ತುನಿಷ್ಠವೆಂದೂ, ನಂಬಿಕೆಗೆ ಅರ್ಹವಾಗಿರುವ ತೀರ್ಪೆಂದು ಕರೆಯಲಾಗುತ್ತದೆ.

ನಾಗನ್‍ಗೌಡ ಸಮಿತಿ ಮೂರು ಮಾನದಂಡಗಳನ್ನು ಉಪಯೋಗಿಸಿ “ಹಿಂದುಳಿದ ವರ್ಗಗಳನ್ನು” ಪಟ್ಟಿ ಮಾಡಿದರೆ, ಹಾವನೂರು ಆಯೋಗ ಎರಡು ಮಾನದಂಡಗಳನ್ನು ಉಪಯೋಗಿಸಿತ್ತು. ಅಂದರೆ ಮಾನದಂಡಗಳೇ ಬದಲಾಗಿದ್ದವು. ಈ ಎರಡು ಮಾನದಂಡಗಳೆಂದರೆ: ರಾಜ್ಯವ್ಯವಸ್ಥೆಯಲ್ಲಿ ಜಾತಿಗಳ ಹಿಡಿತ ಅಥವಾ ಪ್ರಾತಿನಿಧಿತ್ವ ಎರಡನೇಯದಾಗಿ ಸಮುದಾಯಗಳ ಶೈಕ್ಷಣಿಕ ಹಿಂದುಳಿದಿರುವಿಕೆ. ಹತ್ತನೇ ತರಗತಿ ಶಿಕ್ಷಣ ಇಲ್ಲಿ ಮತ್ತೊಂದು ಮಾನದಂಡವಾಯಿತು. ಹಾವನೂರು ಆಯೋಗ ಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿತ್ತು. ಹಿಂದುಳಿದ ಜಾತಿಗಳು, ಹಿಂದುಳಿದ ಸಮುದಾಯಗಳು ಹಾಗೂ ಹಿಂದುಳಿದ ಪರಿಶಿಷ್ಟ ಪಂಗಡ. ಅದು 15 ಜಾತಿಗಳನ್ನು ಹಿಂದುಳಿದ ವರ್ಗಗಳಲ್ಲಿ, 128 ಜಾತಿಗಳನ್ನು ಹಿಂದುಳಿದ ಜಾತಿಗಳಲ್ಲಿ, 62 ಜಾತಿಗಳನ್ನು ಹಿಂದುಳಿದ ಪರಿಶಿಷ್ಟ ಪಂಗಡಗಳಲ್ಲಿ ಪಟ್ಟಿ ಮಾಡಿತ್ತು.
ಬಹಳ ಮುಖ್ಯವೆನಿಸುವುದು ಹಾವನೂರು ಆಯೋಗದ ಶಿಫಾರಸ್ಸುಗಳು. ಹಿಂದುಳಿದ ಸಮುದಾಯಗಳಿಗೆ 20ಶೇಕಾಡ ಮೀಸಲಾತಿ, ಹಿಂದುಳಿದ ಜಾತಿಗಳಿಗೆ 10ಶೇಕಾಡ ಮೀಸಲಾತಿ ಹಾಗೂ ಹಿಂದುಳಿದ ಪರಿಶಿಷ್ಟ ಪಂಗಡಗಳಿಗೆ 5ಶೇಕಾಡ ಮೀಸಲಾತಿ. ಅಂತಿಮವಾಗಿ ಹಾವನೂರು ಆಯೋಗ ಈ ಮೀಸಲಾತಿ ಮುಖಾಂತರ ಮುಟ್ಟಿದ್ದು 44.52 ಶೇಕಾಡ ಜನಸಂಖ್ಯೆಯನ್ನು ಮುಂದೆ 19 ಜಾತಿಗಳನ್ನು “ಹಿಂದುಳಿದ ಜಾತಿಗಳ” ಪಟ್ಟಿಯಲ್ಲಿ ಹಾಕಿದ ಕಾರಣ ಆವರಿಸಿದ ಜನಸಂಖ್ಯ ಪ್ರಮಾಣ 57 ಶೇಕಾಡಕ್ಕೆ ಹೆಚ್ಚಾಯಿತು. ವಾಸ್ತವವಾಗಿ ಈ ಆಯೋಗದ ವಿಶೇಷವೆಂದರೆ ಇದು ಎಲ್ಲಾ ಸಮುದಾಯ ಅಥವಾ ಜಾತಿಗಳನ್ನು ಹಿಂದುಳಿದ ಪಟ್ಟಿಯಲ್ಲಿ ಸೇರಿಸಲಿಲ್ಲ. ಲಿಂಗಾಯತರು, ಮುಸ್ಲಿಮರನ್ನು ಆಯೋಗ ಹಿಂದುಳಿದವರ ಪಟ್ಟಿಯಿಂದ ಹೊರಗೆ ಇಟ್ಟಿತ್ತು. ಒಕ್ಕಲಿಗರು ಪಟ್ಟಿಯೊಳಗೆ ಇದ್ದರು. ದೇವರಾಜ್ ಅರಸ್ ರಾಜಕೀಯ ಒತ್ತಡಕ್ಕೆ ಮಣಿದು ಈ ಜಾತಿಗಳನ್ನು “ಹಿಂದುಳಿದ ವರ್ಗ”ಗಳ ಪಟ್ಟಿಗೆ ಸೇರಿಸಿದರು.

 

(ಮುಂದಿನ ಭಾಗದಲ್ಲಿ: ಸಾರ್ವಜನಿಕ ನೀತಿ, ಹೊಸ ಸಾಮಾಜಿಕ ಅಸ್ಮಿತೆ ಮತ್ತು ಅಧಿಕಾರ ರಾಜಕಾರಣ ಭಾಗ-5)

(ಲೇಖನ: ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಕೆಲವು ಚಿಂತನೆಗಳು (2017)ಪುಸ್ತಕದಿಂದ)

LEAVE A REPLY

Please enter your comment!
Please enter your name here