ಜಗತ್ತಿನಾದ್ಯಂತ ಇವತ್ತು ಅತ್ಯಂತ ಪ್ರಮುಖವಾಗಿ ಚರ್ಚಿಸಲ್ಪಡುತ್ತಿರುವ ವಿಷಯ ‘ಪರಿಸರ”. ಮಾನವ ತನ್ನ ಕೈಯಾರೇ ತನ್ನ ಸ್ವಾರ್ಥ ಹಿತಾಸಕ್ತಿಗಾಗಿ ಪರಿಸರವನ್ನು ನಾಶ ಮಾಡಿ. ಭೂಮಿಯ ಸಮತೋಲನ ಹಾಳು ಮಾಡಿ ಬದುಕುತ್ತಿದ್ದಾನೆ. ದಿನದಿಂದ ದಿನಕ್ಕೆ ಪರಿಸರ ವಿನಾಶದತ್ತ ಸಾಗುತ್ತಿದೆ. ಇದರ ಅರಿವಿದ್ದರೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ತನ್ನ ಜೀವನ ಶೈಲಿ ಬದಲಾಯಿಸಲು ಸಿದ್ಧನಿಲ್ಲ. ಮುಂಬರುವ ತಲೆಮಾರುಗಳಿಗೆ ಭೂಮಿಯನ್ನು ಸುರಕ್ಷಿತವಾಗಿ ವರ್ಗಾಯಿಸಲು ಆತನ ಸ್ವಾರ್ಥ ಜೀವನ ಬಿಡುತ್ತಿಲ್ಲ. ಈ ವಿಚಾರಗಳನ್ನು ಯಾಕೆ ಬರೆಯುತ್ತಿದ್ದೇನೆಂದರೆ ಪ್ರಸ್ತುತ ವಿಶ್ವದಾದ್ಯಂತ ಪರಿಸರದ ಮೇಲೆ ವಿವಿಧ ರೀತಿಯಲ್ಲಿ ಕಾಳಜಿ ವಹಿಸುವಂತಹ ಚರ್ಚೆಗಳು ಮುನ್ನಲೆಗೆ ಬರುತ್ತಿವೆ. ಜಾಗತಿಕ ತಾಪಮಾನದಿಂದ ಭೂಮಿಯನ್ನು ಸಂರಕ್ಷಿಸುವುದು ಹೇಗೆ ಎಂಬ ಬಗ್ಗೆ ಚರ್ಚೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವಾಗ ಭಾರತದಲ್ಲಿ ಮಾತ್ರ ಧರ್ಮದ ಹೊರತಾದ ಚರ್ಚೆಗಳು ಚರ್ಚಿಸಲ್ಪಡುತ್ತಿಲ್ಲ. ನಮ್ಮ ಮಾಧ್ಯಮಗಳ ಪ್ರೈಮ್ ಟೈಮ್ ಗಳಲ್ಲಿ ಇಂತಹ ಒಂದು ಗಂಭೀರ ವಿಚಾರಕ್ಕೆ ಅರ್ಧ ತಾಸಿನ ಪ್ರಾಮುಖ್ಯತೆಯನ್ನೂ ನೀಡುತ್ತಿಲ್ಲ. ಆದರೆ ಇವತ್ತು ಈ ವಿಚಾರದಲ್ಲಿ ನಾವು ಚರ್ಚಿಸಿ ನಮ್ಮ ಜೀವನ ಶೈಲಿ ಬದಲಾಯಿಸಿ ಜಾಗತಿಕ ತಾಪಮಾನದ ಏರಿಕೆಯನ್ನು ಕುಗ್ಗಿಸಲು ನಮ್ಮ ಕೊಡುಗೆ ಅನಿವಾರ್ಯವಾಗಿದೆ.
ಇನ್ನು ನಮ್ಮ ವಿಚಾರಕ್ಕೆ ಬಂದರೆ ವೈಯಕ್ತಿಕವಾಗಿ ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಕೊಡುಗೆಯಂತೂ ಶೂನ್ಯ. ಪ್ರತಿನಿತ್ಯ ನಾವು ಭೂಮಿ ವಿನಾಶದತ್ತ ಹೋಗುವಂತಹ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ. ನಮ್ಮ ಜೀವನ ಶೈಲಿಗಳು ಇಂದು ಪರಿಸರಕ್ಕೆ ಮಾರಕವಾಗಿ ಪರಿಗಣಿಸಿದೆ. ಪ್ಲಾಸ್ಟಿಕ್ ಬಳಕೆ, ವಿಪರೀತ ವಿದ್ಯುತ್ ಬಳಕೆ, ಪೇಟ್ರೋಲಿಯಮ್ ಉತ್ಪನ್ನಗಳನ್ನು ಎಗ್ಗಿಲ್ಲದೆ ಬಳಸುತ್ತಿರುವುದು ಹೀಗೆ ನಮ್ಮ ಆಯಿಶರಾಮದ ಜೀವನಕ್ಕೆ ಪ್ರಕೃತಿಯ ಸಮತೋಲನವನ್ನು ಬಿಗಡಾಯಿಸುತ್ತಿದ್ದೇವೆ ಎಂಬುದು ನಗ್ನ ಸತ್ಯ. ಬೇಸಿಗೆಯಲ್ಲಿ ನೀರಿಲ್ಲದೆ ಒದ್ದಾಡುವ ಸ್ಥಿತಿಗೆ ಈಗಾಗಲೇ ತಲುಪಿದ್ದೇವೆ. ಅಂತರ್ಜಾಲ ಮಟ್ಟ ಕ್ಷೀಣಿಸುತ್ತಿದೆ. ವಾತವರಣದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಆದರೆ ಮಳೆಗಾಲ ಬಂದ ತಕ್ಷಣ ನಾವು ಪರದಾಡಿದ್ದನ್ನು ಮರೆತು ಬಿಡುತ್ತೇವೆ. ನೀರನ್ನು ಬೇಕಾಬಿಟ್ಟಿ ಉಪಯೋಗಿಸಿ ಪೋಲುಗೊಳಿಸುತ್ತೇವೆ. ಹೀಗೆ ಭೂಮಿಯ ಸಮತೋಲನ ಕದಡಲು ನಮ್ಮ ಕೊಡುಗೆ ಅಪಾರ ಅದನ್ನು ಲೆಕ್ಕ ಹಾಕಲು ಆಗದಷ್ಟು ಮಟ್ಟಿಗೆ ಬೆಳೆದಿದೆ. ಹಾಗದರೆ ಈ ಜಾಗತಿಕ ತಾಪಮಾನ ಏನು ಮತ್ತು ನಾವು ಯಾವ ರೀತಿಯಲ್ಲಿ ವೈಯಕ್ತಿಕವಾಗಿ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಪಾತ್ರ ವಹಿಸಬಹುದೆಂಬುದನ್ನು ಈ ಲೇಖನದಲ್ಲಿ ಚರ್ಚಿಸಲು ಪ್ರಯತ್ನಿಸಿದ್ದೇನೆ.
ಜಾಗತಿಕ ತಾಪಮಾನವೆಂಬುದು ಸರಳ ಭಾಷೆಯಲ್ಲಿ ಹೇಳುವುದಾದರೆ ಭೂಮಿಗೆ ಜ್ವರ ಬಂದಿರುವುದು. ಅದು ಹೇಗೆ ಎಂದರೆ ರಾತ್ರಿ ಹೊತ್ತು ಚಳಿಯಾದಾಗ ನಾವು ಕಂಬಳಿಯನ್ನು ಹೊದ್ದು ನಮ್ಮ ದೇಹವನ್ನು ಬಿಸಿಯಾಗಿಡಲು ಪ್ರಯತ್ನಿಸುತ್ತೇವೆ. ಆದರೆ ನಾವು ಎಂದು ಚಳಿಯೆಂದು ನಮ್ಮ ಮೇಲೆ ಮಲಗುವ ದಪ್ಪವಾದ ಹಾಸಿಗೆಯನ್ನು ಹೊದ್ದು ಮಲಗುದಿಲ್ಲ. ಒಂದು ವೇಳೆ ನಾವು ದಪ್ಪವಾದ ಹಾಸಿಗೆ ಹೊದ್ದು ಮಲಗಿದರೆ ನಮ್ಮ ದೇಹ ಬಿಸಿಯಾಗಿ ಬೆವರಲು ಆರಂಭಿಸಿದಾಗ ನಮಗೆ ಸಮಸ್ಯೆ ಎದುರಾಗುತ್ತದೆ. ಉಸಿರು ಕಟ್ಟಿದ ಅನುಭವವಾಗುತ್ತದೆ. ಅದೇ ರೀತಿ ಭೂಮಿಯ ಸುತ್ತ ತೆಳುವಾದ ವಾಯುಮಂಡಲವಿದೆ. ಅದು ಭೂಮಿಯನ್ನು ಬೆಚ್ಚಗೆ ಇಡಲು ಪ್ರಯತ್ನಿಸುತ್ತದೆ. ಆದರೆ ಈ ವಾಯು ಮಂಡಲ ದಿನದಿಂದ ದಿನಕ್ಕೆ ದಪ್ಪವಾಗುತ್ತಿದ್ದು ಭೂಮಿ ತಾಪಮಾನ ಹೆಚ್ಚಾಗುತ್ತಿದೆ. ಭೂಮಿಯನ್ನು ಸುತ್ತುವರಿದಿರುವ ವಾಯುಮಂಡಲದ ಸುತ್ತ ಮನುಷ್ಯನ ಹಲವಾರು ಕಾರ್ಯಚಟುವಟಿಕೆಗಳಿಂದಾಗಿ ದಿನದಿಂದ ದಿನಕ್ಕೆ ಮಿಥೈನ್, ಇಂಗಾಲದ ಡೈ ಆಕ್ಸೈಡ್, ನೀರಾವಿ ಸೇರಿದಂತೆ ಶಾಖಾ ಹೀರುವ ಅನಿಲಗಳು ಹೆಚ್ಚಾಗುತ್ತಿದ್ದು ಇದರಿಂದಾಗಿ ‘ಹಸಿರು ಮನೆ ಪರಿಣಾಮ” ಉಂಟಾಗುತ್ತದೆ. ಹಸಿರು ಮನೆ ಪರಿಣಾಮ ಎಂದರೆ ಸೂರ್ಯನಿಂದ ಬಂದ ಶಾಖವು ಭೂಮಿಯಿಂದ ಹೊರಗೆ ಹೋಗದ ಹಾಗೆ ತಡೆಯುವ ಈ ಮೇಲಿನ ಅನಿಲಗಳ ಗುಣದಿಂದಾಗಿ ಉಂಟಾಗುವ ತಾಪಮಾನದ ಹೆಚ್ಚಳವನ್ನು “ಹಸಿರು ಮನೆ ಪರಿಣಾಮ” ಎನ್ನಲಾಗುತ್ತದೆ. ಇದನ್ನು ಜಾಗತಿಕ ತಾಪಮಾನ ಹೆಚ್ಚಳ, ಹವಾಮಾನ ಬದಲಾವಣೆ ಹೀಗೆ ನಾನಾ ಹೆಸರಿನಲ್ಲಿ ಕರೆಯಲ್ಪಡುತ್ತದೆ. ಆದರೆ ಪರಿಣಾಮ ಒಂದೇ ಈ ಭೂಮಿಯ ತಾಪಮಾನ ಏರಿಕೆಯಾಗುವುದಾಗಿದೆ. ಭೂಮಿಯ ಶಾಖದ ಏರಿಕೆಯನ್ನು ನಾವು ಇತ್ತೀಚ್ಚಿಗೆ ಕರಗುತ್ತಿರುವ ಹಿಮಗಳ ಆಧಾರದಲ್ಲಿ, ಹವಾಮಾನ ಬದಲಾವಣೆಯಲ್ಲಿ ಕಾಣ ಸಿಗುತ್ತದೆ. ಇದೇ ರೀತಿ ವಾತವರಣದ ತಾಪಮಾನ ಹೆಚ್ಚಾದರೆ ಭೂಮಿಯಲ್ಲಿ ನಾವು ಕಂಡರಿಯದ ಆಪತ್ತುಗಳನ್ನು ಎದುರಿಸಬೇಕಾದ ಸಾಧ್ಯತೆಗಳು ಹೆಚ್ಚಿದೆ. ಉದಾಹರಣೆಗೆ ಹೇಳುವುದಾದರೆ ಹಿಮ ಪರ್ವತಗಳು ಕರಗಿ ಸಮುದ್ರ ಮಟ್ಟ ಏರಿಕೆಯಾಗಿ ಕ್ರಮೇಣ ಕರಾವಳಿ ಪ್ರದೇಶದಲ್ಲೆಲ್ಲ ಆವರಿಸಿಕೊಳ್ಳಬಹುದು. ಉಪ್ಪು ನೀರಿನ ಅಂಶ ಹೆಚ್ಚಾಗಿ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆಯಿದೆ. ಇನ್ನು ಉಷ್ಣ ಮಾರುತಗಳ ಏರುಪೇರುನಿಂದಾಗಿ ಉಷ್ಣ ಪ್ರವಾಹದ ದಿಕ್ಕು ತಪ್ಪಾ ಬಹುದು. ಮಳೆ ಮಾರುತಗಳ ಸ್ವಾಭಾವಿಕ ಲೆಕ್ಕಾಚಾರ ತಪ್ಪಿ ಗಂಡಾಂತರ ನಿರ್ಮಾಣವಾಗಬಹುದು. ಇದೆಲ್ಲಾ ಒಮ್ಮೆಲೇ ಆಗದಿದ್ದರೂ ನಮ್ಮ ಕಾರ್ಯಚಟುವಟಿಕೆಗಳು ಪರಿಸರ ಸಂರಕ್ಷಣೆಯ ಕಾಳಜಿಯಿಲ್ಲದೆ ಮುಂದುವರಿದರೆ ಖಂಡಿತ ಈ ಎಲ್ಲ ಸಮಸ್ಯೆಗಳು ಹಂತ ಹಂತವಾಗಿ ನಮ್ಮನ್ನು ವ್ಯಾಪಿಸಿ ಮಾನವ ಕುಲದ ಅಸ್ತಿತ್ವದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಮುಖ್ಯವಾಗಿ ಜಾಗತಿಕ ತಾಪಮಾನದ ಹೆಚ್ಚಳದಿಂದ ಮನುಷ್ಯ ಹವಾಮಾನ ಬದಲಾವಣೆಯೆಂಬ ಪ್ರಕೃತಿ ವಿಕೋಪವನ್ನು ಎದುರಿಸಬೇಕಾಗುತ್ತದೆ. ಇದರಿಂದ ಮುಖ್ಯವಾಗಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಅದನ್ನು ಪಟ್ಟಿ ಮಾಡುವುದಾದರೆ:
1. ರುತುಮಾನಗಳಲ್ಲಿ ಬದಲಾವಣೆ ಉಂಟಾಗಬಹುದು. ಈಗಾಗಲೇ ನಾವು ಪರಿಣಾಮ ಎದುರಿಸುತ್ತಿದ್ದೇವೆ. ಮಳೆಗಾಲದಲ್ಲಿ ಮಳೆಯಾಗದಿರುವುದು. ಇದರಿಂದಾಗಿ ಕೃಷಿ ವಲಯದಲ್ಲಿ ಏರುಪೇರಾಗಬಹುದು. ನೀರಿನ ವ್ಯಥ್ಯಯ. ನಗರದಲ್ಲಿ ನೀರಿಗಾಗಿ ಅಹಾಕಾರ ನಿರ್ಮಾಣವಾಗಬಹುದು
2. ಧ್ರುವ ಪ್ರದೇಶಗಳ ಹಿಮ ಕರಗಬಹುದು. ಪ್ರತಿಫಲಿಸಿ ಸೂರ್ಯನ ಶಾಖವನ್ನು ಹಿಂದಕ್ಕೆ ಕಳುಹಿಸುತ್ತಿದ್ದ ಹಿಮ ಶಿಖರಗಳ ಕರಗುವಿಕೆಯಿಂದ ಶಿಖರಗಳು ಶಾಖ ಹೀರಿ ಮತ್ತಷ್ಟು ತಾಪಮಾನ ಹೆಚ್ಚಾಗಬಹುದು.
3. ಸಮುದ್ರ ಮಟ್ಟದ ಏರಿಕೆ. ಉಪ್ಪು ನೀರಿನ ಒಳ ಹರಿಯುವಿಕೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಳ್ಳ ಬಹುದು.
4. ಸಮುದ್ರದ ಅಂಚಿನಲ್ಲಿರುವ ಜನ ನಿರಾಶ್ರಿತರಾಗಬಹುದು. ನೀರು, ಆಹಾರ ಮತ್ತು ವಸತಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು.
5. ತಾಪಮಾನ ಹೆಚ್ಚಾದಂತೆ ಜನರು ವಿದ್ಯುತ್ ಮೊರೆ ಹೋಗುವರು ಇದರಿಂದಾಗಿ ಇನ್ನಷ್ಟು ತಾಪಮಾನ ಹೆಚ್ಚಾಗಿ ಮತ್ತಷ್ಟು ಸಂಕಷ್ಟಕ್ಕೆ ಈಡಾಗುವ ಸಾಧ್ಯತೆ ಹೆಚ್ಚು.
6. ಹೊಸ ಬಗೆಯ ರೋಗ ರುಜಿನಗಳು ಹೆಚ್ಚಾಗಬಹುದು. ಆರೋಗ್ಯ ವ್ಯವಸ್ಥೆಗೆ ಸವಾಲಾಗುವ ಸಾಧ್ಯತೆ ಹೆಚ್ಚು.
ಹೀಗೆ ಈ ಮೇಲೆ ಪಟ್ಟಿ ಮಾಡಿದ ಸಮಸ್ಯೆಗಳೊಂದಿಗೆ ನಮ್ಮ ಅಲೋಚನೆಗೆ ಹೊರತಾದ ಸಮಸ್ಯೆಗಳು ಕೂಡ ನಮ್ಮನ್ನು ಎದುರುಗೊಳ್ಲಬಹುದು. ಇಷ್ಟೆಲ್ಲಾ ಸಮಸ್ಯೆಗಳು ನಮಗೆ ಎದುರಾಗಲು ಮುಖ್ಯ ಕಾರಣ ನಮ್ಮ ಸ್ವಾರ್ಥ. ಪರಿಸರದ ಬಗೆಗಿನ ತಾತ್ಸರ ಮನೋಭಾವ. ಆಯಿಶರಾಮ ಜೀವನದ ಹೆಸರಿನಲ್ಲಿ ಪರಿಸರದ ಮೇಲೆ ನಾವು ಮಾಡುವ ದೌರ್ಜನ್ಯಗಳು. ಸರಕಾರಗಳು ಅವೈಜ್ಞಾನಿಕವಾಗಿ ಕಾರ್ಖಾನೆಗಳ ಸ್ಥಾಪನೆ ಪರವಾನಿಗೆ ನೀಡುತ್ತಿರುವುದು. ಹೀಗೆ ವೈವಿಧ್ಯಮಯ ರೀತಿಯಲ್ಲಿ ಮಾನವ ಈ ಪರಿಸರವನ್ನು ನಾಶ ಮಾಡಲು ತನ್ನ ಕೊಡುಗೆ ನೀಡುತ್ತಿದ್ದಾನೆ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರಿದರೆ 2003 ರಲ್ಲಿ ಯುರೋಪ್ ನಲ್ಲಿ ಸೆಕೆ ಹೆಚ್ಚಾಗಿ 35000 ಸಾವಿರ ಮಂದಿ ಅಸುನೀಗಿದರು. ಇದೇ ಪರಿಸ್ಥಿತಿ ವಿಶ್ವದ ನಾನಾ ಕಡೆಗಳಲ್ಲಿ ಸಂಭವಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಈಗಾಗಲೇ ನಾವು ವಿಶ್ವದ ನಾನಾ ಕಡೆಗಳಲ್ಲಿ ಕಾಡ್ಗಿಚ್ಚು, ಪ್ರವಾಹ, ಬರದ ಸುದ್ದಿಗಳನ್ನು ಕೇಳುತ್ತಿದ್ದೇವೆ. ಇದು ಮತ್ತಷ್ಟು ವ್ಯಾಪಿಸಲಿದೆ.
ಹಾಗದರೆ ಈ ದುರಂತಗಳನ್ನು ತಡೆಗಟ್ಟುವುದು ಹೇಗೆ? ಯಾರೋ ಈ ದುರಂತವನ್ನು ತಡೆಗಟ್ಟುವರೆಂದು ನಾವು ಸುಮ್ಮನೆ ನಮ್ಮಷ್ಟಕ್ಕೆ ಕೈ ಕಟ್ಟಿ ಕುಳಿತುಕೊಳ್ಳೋಣವೇ? ಖಂಡಿತ ಇಲ್ಲ. ಜಗತ್ತಿನ ಪ್ರತಿಯೊಬ್ಬ ಮನುಷ್ಯನು ಈ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ. ಅದಕ್ಕಾಗಿ ಪ್ರಯತ್ನಿಸಬೇಕಾಗಿದೆ. ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲವೆಂದು ಕೊರಗುವ ನಾವುಗಳು ನೀರು ಬತ್ತುವ ಮುನ್ನ ಪರಿಹಾರದ ಬಗ್ಗೆ ಚಿಂತಿಸಬೇಕು. ಮಳೆಗಾಲದಲ್ಲಿ ಇಂಗು ಗುಂಡಿ, ಮಳೆ ನೀರಿನ ಕೊಯ್ಲುಗಳ ಮುಖಾಂತರ ಮಳೆ ನೀರು ಸಂಗ್ರಹಿಸಿ ಭೂಮಿಯ ಅಂರ್ಜಾಲ ಮಟ್ಟ ಏರಿಸಬೇಕು. ಬೇಕಾಬಿಟ್ಟಿ ಪ್ಲಾಸ್ಟಿಕೆ ಬಳಕೆಯನ್ನು ನಾವು ವೈಯಕ್ತಿಕ ನೆಲೆಗಟ್ಟಿನಲ್ಲಿ ನಿಲ್ಲಿಸಬೇಕು. ಮರಗಳನ್ನು ಕಡಿಯುವ ಸಂಸ್ಕೃತಿಯನ್ನು ತಡೆಯಬೇಕು. ವ್ಯಾಪಕವಾಗಿ ವಿವಿಧ ಬಗೆಯ ಮರಗಳನ್ನು ನೆಟ್ಟು ಬೆಳೆಸುವ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು.
ಇತ್ತೀಚ್ಚಿನ ದಿನಗಳಲ್ಲಿ ನಾವೆಲ್ಲರೂ ವಿದ್ಯುತ್ತನ್ನು ವ್ಯಾಪಕವಾಗಿ ಬಳಕೆ ಮಾಡುತ್ತಿದ್ದೇವೆ. ತಾಪಮಾನದ ಹೆಸರಿನಲ್ಲಿ ಹವಾನಿಯಂತ್ರಿತ ಯಂತ್ರಗಳ ಬಳಕೆ ಸಾಮಾನ್ಯವಾಗಿದೆ. ಒಂದು ಕ್ಷಣಕ್ಕೆ ನಾವು ಬಿಸಿಯಿಂದ ತಪ್ಪಿಸಿಕೊಂಡರು ಇಂತಹ ಕ್ರಮಗಳು ಭೂಮಿಯ ತಾಪಮಾನವನ್ನು ಮತ್ತಷ್ಟು ಹೆಚ್ಚಿಸಲಿದೆ. ಅದರಿಂದ ಮನೆ ನಿರ್ಮಾಣ ಸಂದರ್ಭದಲ್ಲಿ ನೈಸರ್ಗಿಕ ಗಾಳಿ, ಬೆಳಕು ಮನೆಯೊಳಗೆ ಪ್ರವೇಶಿಸುವಂತೆ ಮನೆ ನಿರ್ಮಾಣ ಮಾಡಬೇಕು. ಅಗತ್ಯ ಸಂದರ್ಭದಲ್ಲಿ ಮಾತ್ರ ವಿದ್ಯುತ್ ಬಳಸಿ.
ಇವತ್ತು ಪೆಟ್ರೋಲ್, ಡಿಸೇಲ್, ಕಲ್ಲಿದ್ದಲುಗಳ ವ್ಯಾಪಕ ಬಳಕೆ ಮಾಡುವ ನಾವುಗಳು ಶುದ್ಧ ಪರಿಸರವನ್ನು ಮಲಿನಗೊಳಿಸುವುದರೊಂದಿಗೆ, ಭೂಮಿಯ ಬಿಸಿ ಏರಿಸುವಲ್ಲಿ ಕೊಡುಗೆ ನೀಡುತ್ತಿದ್ದೇವೆ. ಇದೊಂದು ಗಂಭೀರ ವಿಚಾರವಾಗಿದ್ದು ಈ ಇಂಧನಗಳ ಹೊರತಾಗಿ ಜೈವಿಕ ಇಂಧನಗಳ ಬಗ್ಗೆ ಜಾಗೃತಿ ಹೊಂದಿ ಅದನ್ನು ವ್ಯಾಪಕವಾಗಿ ಬಳಸಬೇಕು. ಈಗಾಗಲೇ ಸರಕಾರಗಳು ಕೂಡ ಜೈವಿಕ ಇಂಧನಗಳನ್ನು ಪ್ರೋತ್ಸಾಹಿಸುತ್ತಿರುವುರಿಂದ ಸಾಧ್ಯವಾದರೆ ಜೈವಿಕ ಇಂಧನ ಉತ್ಪಾದಕ ಘಟಕಗಳನ್ನು ಕೂಡ ಸ್ಥಾಪಿಸಬಹುದಾಗಿದೆ.
ಇನ್ನು ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಸೂಕ್ತವಾಗಿ ನಿರ್ವಹಿಸಬೇಕಾಗಿರುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ಜೈವಿಕ ತ್ಯಾಜ್ಯಗಳನ್ನು ಬಳಸಿ ‘ಬಯೋ ಗ್ಯಾಸ್’ ಉತ್ಪಾದಿಸುವ ತಂತ್ರಜ್ಞಾನಗಳು ಕೂಡ ಇದೆ. ಅದರ ಬಗ್ಗೆ ಅರಿವು ಮೂಡಿಸಬಹುದಾಗಿದೆ. ದಿನ ನಿತ್ಯ ಬಳಕೆಯ ತ್ಯಾಜ್ಯಗಳಲ್ಲಿ ಪ್ಲಾಸ್ಟಿಕ್ ನಂದೇ ಸಿಂಹಪಾಲು ಇಂತಹ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ಕೈ ಬಿಟ್ಟು ಪರಿಸರಕ್ಕೆ ಪೂರಕವಾದ ಬಟ್ಟೆ ಚೀಲಗಳನ್ನು, ಅಥವಾ ಇನ್ನಿತರ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಹೀಗೆ ಸ್ವತಃ ವೈಯಕ್ತಿಕ ಮಟ್ಟದಲ್ಲಿ ನಾವು ಜಾಗೃತರಾಗಿ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮುಂದುವರಿದರೆ ಸರಕಾರಗಳು ಕೂಡ ನಿಯಮಗಳನ್ನು ಉಲ್ಲಂಘಿಸಿ ಕಾರ್ಖಾನೆಗಳಿಗ ಅನುಮತಿ ಕೊಟ್ಟು ಬೇಕಾಬಿಟ್ಟಿ ಪರಿಸರಕ್ಕೆ ಮಾರಕವಾದ ವಸ್ತುಗಳ ಉತ್ಪನ್ನ ಕೈ ಬಿಡಬಹುದು.
ಇನ್ನು ಕೊನೆಯದಾಗಿ ಪರಿಸರವನ್ನು ಪ್ರೀತಿಸಲು ಕಲಿಯಿರಿ ಯಾವ ರೀತಿ ನಿಮ್ಮ ಮನೆಯನ್ನು ಸ್ವಚ್ಚವಾಗಿಡುತ್ತೀರೋ ಹಾಗೆ ನಿಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿಡಿ. ಯಾವುದೇ ಕಾರಣಕ್ಕೂ ಮನಸ್ಸು ಬಂದಲ್ಲಿ ಕಸ ಎಸೆಯಬೇಡಿ. ಇನ್ನು ನಿಮ್ಮ ಎಲ್ಲ ಸಂತೋಷ – ದುಃಖದ ಸಂದರ್ಭದಲ್ಲಿ ಒಂದು ಗಿಡ ನೆಟ್ಟು ಬೆಳೆಸಿ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ. ಹೀಗೆ ಸ್ವತಃ ವೈಯಕ್ತಿಕ ಮಟ್ಟದಲ್ಲಿ ನಾವುಗಳು ಬದಲಾಗುತ್ತ ಸಾಗಿದರೆ ಈ ಭೂಮಿಯ ಬಗ್ಗೆ ಕಾಳಜಿ ವಹಿಸುತ್ತಾ ಮುಂದುವರಿದರೆ ನಮ್ಮ ಮುಂದಿನ ಪೀಳಿಗೆಗೆ ಸ್ವಚ್ಚ ಭೂಮಿಯನ್ನು ವರ್ಗಾಯಿಸಲು ಸಾಧ್ಯ. ಇಲ್ಲದಿದ್ದ ಪಕ್ಷದಲ್ಲಿ ನಮ್ಮ ಮುಂದಿನ ತಲೆಮಾರುಗಳು ಪರಿಸರದ ಭೀಕರ ಪರಿಣಾಮ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾನವಾಗಬಹುದು.
ಲೇಖಕರು: ಯಾಸೀನ್ ಕೋಡಿಬೆಂಗ್ರೆ ( ಕಾನೂನು ಪದವೀಧರ, ರಾಜಕೀಯ ಶಾಸ್ತ್ರ ಸ್ನಾತಕೋತ್ತರ ವಿದ್ಯಾರ್ಥಿ )
Refrences:
ಕೊಪೆನ್ ಹೆಗೆನ್ ಒಪ್ಪಂದ
ಮನುಕುಲದ ರಕ್ಷಣೆಗೆ ಮಹತ್ವದ ದಿನಗಳು – ಪರಿಸರ ಸಾಹಿತ್ಯ ಪುಸ್ತಕ
ಉರಿಯ ಸಿರಿ ಪುಸ್ತಕ
ಲೇಖಕರಿಗೆ ಧನ್ಯವಾದಗಳು ಪ್ರಸಕ್ತ ಪರಿಸ್ಥಿತಿಯಲ್ಲಿ ಪ್ರಕ್ರತಿ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಪರಿಣಾಮಕಾರಿ ಲೇಖನವನ್ನು ನೀಡಿದ್ದೀರಿ ತಮ್ಮ ಈ ಲೇಖನವು ಸಮಾಜದಲ್ಲಿ ಜಾಗೃತಿ ಮೂಡಿಸಲಿ..