ಆತ್ಮಹತ್ಯೆ – 03

ಯೋಗೇಶ್ ಮಾಸ್ಟರ್ (ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ)

ಪ್ರಾಣವೆಂಬ ಅಮೂಲ್ಯವಸ್ತು
ವೀರಗಲ್ಲು ಮತ್ತು ಮಹಾಸತಿ (ಮಾಸ್ತಿ) ಕಲ್ಲುಗಳು ಅತ್ಯಂತ ಆದರಕ್ಕೆ ಒಳಗಾಗಿರುವಂತಹ ನಮ್ಮ ನಾಡಿನ ಸ್ಮಾರಕಗಳು. ತನ್ನ ಒಡೆಯ, ಗ್ರಾಮ, ಪಶು ಸಂಪದ ಅಥವಾ ಮಹಿಳೆಯ ಮಾನ ಪ್ರಾಣ ರಕ್ಷಣೆಗೆ ತಮ್ಮ ಪ್ರಾಣವನ್ನು ಲೆಕ್ಕಿಸದೇ ತಾವು ಸಾಯುವಂತಹ ಯಾವುದೇ ಸಮಯ ಸಂದರ್ಭಗಳಿಗೊ ಹೆದರದೇ ತಾವು ಮುನ್ನುಗ್ಗಿ ಗೆದ್ದರೆ ಅವರಿಗೆ ವೀರೋಚಿತವಾದಂತಹ ಮರ್ಯಾದೆಗಳು. ಒಂದು ವೇಳೆ ಈ ಪ್ರಯತ್ನದಲ್ಲಿ ಅವರು ಮರಣವನ್ನು ಅಪ್ಪಿದರೆ ಅವರಿಗೆ ವೀರಸ್ವರ್ಗ. ಹಾಗಾಗಿ ಅವರ ಗೌರವಾರ್ಥ ವೀರಗಲ್ಲುಗಳನ್ನು ನೆಟ್ಟಿರುವುದು ನಮ್ಮ ನಾಡಿನುದ್ದಗಲಕ್ಕೂ ಕಾಣುತ್ತೇವೆ.
ಗರುಡ ಎಂದು ಕರೆಯುತ್ತಿದ್ದ ತಮ್ಮ ಸ್ವಾಮಿಯ ಅಥವಾ ನಾಯಕರ ಬೆಂಗಾವಲಿವರು ಅಥವಾ ದಂಡಿನಲ್ಲಿದ್ದವರು ತಮ್ಮ ಸಾಹಸವನ್ನು ಮೆರೆದು ಹುತಾತ್ಮರಾದಾಗ ಅವರಿಗೆ ಅತ್ಯಂತ ದೊಡ್ಡ ಸನ್ಮಾನ ರೂಪದಲ್ಲಿ ಈ ಕಲ್ಲುಗಳನ್ನು ನೆಡಲಾಗುತ್ತಿತ್ತು. ಅವರ ವೈಯಕ್ತಿಕವಾದ ಬದ್ಧತೆಯು ನಾಡಿನ ಶ್ರದ್ಧೆಗೆ ಇರುತ್ತಿತ್ತು. ಹಾಗಾಗಿ ಅವರ ಆತ್ಮಾಹುತಿ ಎಂದು ಕರೆಯುತ್ತೇವೆ.
ತಮ್ಮ ಪ್ರಾಣವನ್ನು ಅದೆಷ್ಟು ಪ್ರೀತಿಸುತ್ತೇವೆ ಎಂದು ಸೂಚಿಸುವ ಕಥೆ ನಮ್ಮಲ್ಲಿ ಬಹಳ ಜನಜನಿತವಾಗಿದೆ. ಒಂದು ಕೋತಿ ನೀರನ್ನು ದಾಟುವಾಗ ಎದೆಗೆ ಅವುಚಿಕೊಂಡಿತ್ತು ತನ್ನ ಮರಿಯನ್ನು. ಆದರೆ, ನೀರಿನ ಮಟ್ಟವೇರಿದಾಗ ಆ ಮರಿಯನ್ನು ತನ್ನ ಭುಜದ ಮೇಲೆ ಇಟ್ಟುಕೊಂಡಿತು. ನೀರಿನ ಮಟ್ಟವು ಮತ್ತೂ ಏರಿದಾಗ ಆ ಮರಿಯನ್ನು ತಲೆಗೇರಿಸಿಕೊಳ್ಳಲಾಯಿತು. ಆದರೆ, ನೀರಿನ ಮಟ್ಟವು ಇನ್ನೂ ಏರಿದಾಗ ಮರಿಯನ್ನು ತನ್ನ ಕೆಳಗೆ ಹಾಕಿಕೊಂಡು ತಾನು ಅದರ ಮೇಲೇರಿತು. ಅಂದರೆ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವುದು ಬಹಳ ಸಹಜ ಎಂಬುದನ್ನು ಈ ಕಥೆಯು ರೂಪಿಸುತ್ತದೆ. ತಮ್ಮ ಪ್ರಾಣದ ಉಳಿವಿಗಾಗಿ ಯಾವ ಸಾಹಸವನ್ನಾದರೂ ಮಾಡುವುದು ಅತ್ಯಂತ ನೈಸರ್ಗಿಕವಾಗಿದೆ.
ಲೋಗ್ ಬಹುದ್ದೂರ್ ಥಾಪ ಎಂಬ ನೇಪಾಳಿ ಘೂರ್ಕ ನನ್ನ ಪರ್ವತಗಳಲ್ಲಿ ಅಲೆದಾಡಿಸುತ್ತಾ ನನ್ನ ಸಾಹಸ ಪ್ರವೃತ್ತಿಯನ್ನು ಬಹಳ ಪ್ರೇರೇಪಿಸುತ್ತಿದ್ದ. ಪರ್ವತದ ನೆತ್ತಿಗೆ ಹೋಗಲು ಕಾಲುದಾರಿಯಿದ್ದರೂ ಆತ ನನ್ನನ್ನು ಅದರ ಮೂಲಕ ಕರೆದೊಯ್ಯಲು ಇಷ್ಟಪಡುತ್ತಿರಲಿಲ್ಲ. ಅದನ್ನು ಲೇಡಿಸ್ ಕಾ ರಾಸ್ತಾ ಎಂದು ಕರೆಯುವುದೇ ಅಲ್ಲದೇ ಶೇರ್ ಕಾ ರಾಸ್ತಾ ಎಂದು ದುರ್ಗಮವಾದ ಮಾರ್ಗದಲ್ಲಿಯೇ ಕರೆದುಕೊಂಡು ಹೋಗುತ್ತಿದ್ದನು. ಒಂದು ಕಡೆ ಕಡಿದಾದ ಮತ್ತು ಉಬ್ಬಿದ ಬಂಡೆಯ ಮೇಲೆ ಅವನೇನೋ ಏರಿ ಹೋದ. ಆದರೆ ನನಗೆ ಅದು ತೀರಾ ಅಸಾಧ್ಯವೆನಿಸಿತು. ಆದರೆ ಮುಕ್ಕಾಲು ಪರ್ವತವನ್ನು ಏರಿಬಿಟ್ಟಿದ್ದೇನೆ. ಕೆಳಕ್ಕೆ ಇಳಿಯಲು ಸಾಧ್ಯವಿಲ್ಲ. ಹಾಗೆಯೇ ಕಣ್ಣಳತೆಯಲ್ಲಿ ನೋಡಿಕೊಂಡು ಪಕ್ಕಕ್ಕೆ ಕೊಂಚ ಕಷ್ಟಪಟ್ಟು ಹೋದೆಯಾದರೆ, ಅಲ್ಲಿಂದ ಮುಂದೆ ಜೊಂಡಿನ ಗೊಂಚಲುಗಳನ್ನು ಹಿಡಿದು ಹೇಗೋ ಕಲ್ಲುಗಳ ಮೇಲೆ ಹತ್ತಿಕೊಂಡು ಲೇಡಿಸ್ ಕಾ ರಾಸ್ತಾಗೆ ಹೋಗಿ ಅಲ್ಲಿಂದ ಮೇಲಕ್ಕೆ ಏರಬಹುದು ಎಂದು ತರ್ಕಿಸಿದೆ. ಸರಿ, ನಿಧಾನವಾಗಿ ಬೆಳೆದು ನಿಂತಿರುವ ಜೊಂಡುಗಳನ್ನು ತಲುಪಿ ಎಚ್ಚರಿಕೆಯಿಂದ, ಒಂದಷ್ಟು ಜೊಂಡನ್ನು ಎಚ್ಚರಿಕೆಯಿಂದ ಹಿಡಿದೆ. ತಟ್ಟನೆ ನಾಗರಹಾವೊಂದು ಹೆಡೆಯೆತ್ತಿತು. ಅನಿರೀಕ್ಷಿತವಾಗಿ ನಾಗರಹಾವೊಂದು ಭುಸ್ ಎಂದು ನನ್ನ ಕೈ ಕಡೆಗೇ ತನ್ನ ಗುರಿಯನ್ನು ತೊಟ್ಟ ತಕ್ಷಣವೇ ಮಿಂಚಿನ ವೇಗದಲ್ಲಿ ಕೈಯನ್ನು ಹಿಂದಕ್ಕೆ ಎಳೆದುಕೊಂಡಿದ್ದೇ ಅಲ್ಲದೇ, ಹಿಂದಕ್ಕೆ ಸರಸರನೆ, ಹಾವಿಗಿಂತಲೂ ವೇಗವಾಗಿ ನಡೆದು, ಯಾವ ಬಂಡೆಯನ್ನು ಏರಲಾರೆನೆಂದುಕೊಂಡಿದ್ದೆನೋ ಅದನ್ನು ಸರಸರನೇ ಏರಿ ಬಿಟ್ಟೆ.
“ಚೋಟಾ ಸಾಬ್, ಇದು ಹೇಗಾಯಿತು” ಎಂದು ಲೋಗ್ಯಾ ಕೇಳುತ್ತಿರಲು ನನಗೆ ಉತ್ತರಿಸಲೂ ಉಸಿರಿರಲಿಲ್ಲ. ಇದು ಪ್ರಾಣ ಭಯವೆಂದರೆ. ಭೂಪಾಲದಲ್ಲಿ ವಿಷಾನಿಲ ಸೋರಿದಾಗ ಒಂದೇ ರಾತ್ರಿಯಲ್ಲಿ ನೂರಾರು ಮೈಲಿಗಳನ್ನು ಓಡಿ ಕ್ರಮಿಸಿದವರ ಬಗ್ಗೆ ತಿಳಿದಿದ್ದೇವೆ. ಹೌದು, ನಮ್ಮ ಜೀವಕ್ಕೆ ನಾವೇ ಮಹತ್ವ ಕೊಡದಿದ್ದರೆ ಬದುಕುವುದೇನು? ಬಾಳುವುದೇನು?

ಆತ್ಮಹತ್ಯೆಯ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು
ಇಷ್ಟು ಪ್ರೀತಿಸುವ ಜೀವವನ್ನು ಒಂದು ಉದ್ದೇಶಕ್ಕಾಗಿ ಕೊಡುವುದು ಎಂದರೆ ಅದಕ್ಕೇ ಅಷ್ಟೊಂದು ಮಹತ್ವ ಎಂದೆನಿಸುವುದು. ಅದು ಹಾಗಿರಲಿ, ಆತ್ಮಹತ್ಯೆಯನ್ನು ಮಾಡಿಕೊಳ್ಳುವವರ ಬಗ್ಗೆ ನನಗೆ ಮಾತ್ರವಲ್ಲ, ಸಮಾಜದಲ್ಲಿಯೂ ಕೂಡ ಮಿಶ್ರ ಪ್ರತಿಕ್ರಿಯೆಗಳು ಬರುತ್ತವೆ. ಮರುಕ ತೋರಿಸುವವರದು ಒಂದು ಸಾಮಾನ್ಯ ನಿಲುವು. ಛೇ ಹಾಗೆ ಮಾಡಬಾರದಿತ್ತು ಎಂದು ಕರುಣೆಯಿಂದಲೇ ಅವರನ್ನು ದೂರುವವರು ಒಂದು ಗುಂಪು. ಅನ್ಯಾಯ ಮಾಡಿದ, ಹೇಡಿ, ತನ್ನ ನಂಬಿದವರಿಗೆ ಮೋಸ ಮಾಡಿದ ಎಂದು ನೇರವಾಗಿ ಖಂಡಿಸುವವರು ಮತ್ತೊಂದು ಗುಂಪು. ಏನಾದರಾಗಲಿ, ಸತ್ತವರು ಸತ್ತರು. ಏನು ದೂರಿದರೂ, ಏನು ಮರುಕ ತೋರಿಸಿದರೂ ಏನೂ ಪ್ರಯೋಜನವಿಲ್ಲ.
ಎಮೋಶನಲ್ ಬ್ಲ್ಯಾಕ್ ಮೇಲ್
ಒಬ್ಬಳು ಹುಡುಗಿ, ತನ್ನ ತವರು ಮನೆಯಲ್ಲಿ ಮುದ್ದುಮುದ್ದಾಗಿ ಬೆಳೆದು ಬಂದಿರುವ ಹುಡುಗಿ. ಅವಳೋ ಮದುವೆಯಾಗುವ ಮುನ್ನ ಮುಂಚೆ ಎಲ್ಲವೂ ಅವಳಿಚ್ಛೆಯಂತೆಯೇ ಆಗುತ್ತಿತ್ತು. ಆದರೆ, ಈಗ ಮದುವೆಯಾಗಿ ಬಂದ ಮೇಲೆ ಅತ್ತೆಯ ಮಾತನ್ನು ಕೇಳಬೇಕು. ಗಂಡನಿಗೆ ಹೊಂದಿಕೊಳ್ಳಬೇಕು. ಒಟ್ಟಿನಲ್ಲಿ ತನ್ನ ಒಲವು ನಿಲುವು ಮತ್ತು ಸ್ವಭಾವಗಳ ಕುರಿತಾಗಿ ಹಲವು ರೀತಿಯ ರಾಜಿ ಮಾಡಿಕೊಳ್ಳಬೇಕಾಯಿತು. ಇದರಿಂದಾಗಿ ಅವಳಿಗೆ ತಾನು ಪೂರ್ತಿ ಕಳೆದುಹೋಗುತ್ತಿದ್ದೇನೆ ಎಂದು ಅನ್ನಿಸತೊಡಗಿತು. ಗಂಡನಿಗೆ ಅತ್ತೆಯ ಬಗ್ಗೆ ದೂರು ಹೇಳಿ ಹೇಳಿ, ಆತ್ಮಹತ್ಯೆಯ ಬೆದರಿಕೆಯನ್ನೂ ಒಡ್ಡಿ ಮನೆಯನ್ನು ಪ್ರತ್ಯೇಕಗೊಳಿಸಿದಳು. ಈಗ ಪ್ರತ್ಯೇಕಗೊಂಡಿರುವ ಮನೆಯಲ್ಲಿ ಗಂಡ ಒಂದಿಷ್ಟು ತಡವಾಗಿ ಬಂದರೆ ಮತ್ತದೇ ಗೋಳು, ಗೊಣಗಾಟ, ಗೋಗರೆಯುವುದು ಇತ್ಯಾದಿಗಳು.
ಈಗ ಸಣ್ಣ ಪುಟ್ಟದಕ್ಕೆಲ್ಲಾ ಹೆದರಿಸುವುದು. ಟ್ಯಾಬ್ಲೆಟ್‍ಗಳನ್ನು ತಂದು ನುಂಗಿಬಿಡುತ್ತೇನೆ ಎನ್ನುವುದು. ಇತ್ಯಾದಿಗಳನ್ನೆಲ್ಲಾ ನೋಡಿ ನೋಡಿ ರೋಸಿಹೋದ ಗಂಡ ಒಂದು ದಿನ ಅವಳು ಟ್ಯಾಬ್ಲೆಟ್ಸ್ ತಂದರೂ ಸುಮ್ಮನಿದ್ದ. ತನ್ನ ಕೋಣೆಯಲ್ಲಿ ಹೋಗಿ ಅವಳು ಅಷ್ಟನ್ನು ತಿಂದರೂ ಸುಮ್ಮನಿದ್ದ. ಇಲ್ಲಿ ವಿಷಯವೆಂದರೆ, ಅವನಿಗೆ ಹೆದರಿಸುವುದಷ್ಟೇ ಅವಳ ಉದ್ದೇಶವಾಗಿತ್ತು. ತನ್ನ ಹಟವು ಗೆಲ್ಲಲಿ ಎಂದು ಎಮೋಶನಲ್ ಬ್ಲ್ಯಾಕ್ ಮೇಲ್ ಮಾಡುವುದು.
ನಿಜವಾಗಿ ಆತ್ಮಹತ್ಯೆ ಮಾಡಿಕೊಳ್ಳುವವರು ಮಾಡುವುದಾದರೂ ಏನನ್ನು?
ಯಾರಿಗೂ ತಿಳಿಸದೇ ಕೃತ್ಯಕ್ಕೆ ಮುಂದಾಗುತ್ತಾರೆ. ಯಾರು ಪ್ರಯತ್ನ ಪಟ್ಟು ಇವರನ್ನು ಉಳಿಸಲು ಯತ್ನಿಸಿದರೂ ಆಗದಂತೆ ಎಚ್ಚರಿಕೆಗಳನ್ನು ವಹಿಸುತ್ತಾರೆ. ಗಟ್ಟಿ ಭದ್ರ ಮಾಡಿಕೊಂಡು ನಂತರ ಆತ್ಮಹತ್ಯೆಗೆ ಯತ್ನಿಸುತ್ತಾರೆ. ಕೆಲವೊಮ್ಮೆ ಸುಧೀರ್ಘವಾಗಿ ಪತ್ರವನ್ನು ಬರೆದಿಟ್ಟು ನಂತರ ಸಾಯುತ್ತಾರೆ. ಇದಾವುದನ್ನೂ ಮಾಡದೇ ಬಾಗಿಲು ತೆರೆದಿಟ್ಟು, ನಾನು ಸಾಯುತ್ತೇನೆಂದು ಹೇಳಿ, ಎಲ್ಲರ ಎದುರಿಗೆ ಮಾಡಿಕೊಳ್ಳುವ ಪ್ರಯತ್ನಗಳು ಬರಿದೇ ಬೆದರಿಸುವುದಕ್ಕೆ ಅಥವಾ ಹೆದರಿಸುವುದಕ್ಕೆ, ತನ್ನ ಮಾತನ್ನು ಗೆಲ್ಲಿಸುವುದಕ್ಕೇ ಆಗಿರುತ್ತದೆ.
ಕೆಲವೊಮ್ಮೆ ಇವೂ ಕೂಡ ಯಶಸ್ವಿಯಾಗಿಬಿಡಬಹುದು.

ಸಿನಿಮಾಗಳಲ್ಲಿ ದ್ವಿಪತ್ನಿತ್ವ ಮತ್ತು ಆತ್ಮಹತ್ಯೆಗಳ ವೈಭವೀಕರಣ
ಏನೇ ಆಗಲಿ, ನಮ್ಮ ಸಿನಿಮಾಗಳೂ ಕೂಡ ಆತ್ಮಹತ್ಯೆಯನ್ನು ವಿಜೃಂಭಿಸುತ್ತವೆ. ಎಪ್ಪತ್ತು ಮತ್ತು ಎಂಭತ್ತರ ದಶಕದಲ್ಲಂತೂ ಅನೇಕಾನೇಕ ಸಿನಿಮಾಗಳು ಆತ್ಮಹತ್ಯೆಗಳಿಂದಲೇ ಕೊನೆಯಾಗುತ್ತಿದ್ದವು. ಮೊದಲಿಂದ ಕೊನೆಯವರೆಗೂ ಒದ್ದಾಡಿ, ಹೊಡೆದಾಡಿ ಕಡೆಗೆ ಯಾವ ಪುರುಷಾರ್ಥಕ್ಕೆ ಸಾವಿಗೆ ಶರಣಾಗುತ್ತಿದ್ದರೋ ತಿಳಿಯದು.
ಕ್ಯಾನ್ಸರ್, ಏಡ್ಸ್ ಅಥವಾ ಇನ್ನಾವುದೋ ಮಾರಕ ರೋಗಗಳು ಬಂದಿರುವವರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ, ಚೆನ್ನಾಗಿರುವವರು, ಮನಸ್ಸನ್ನು ಕೆಡಿಸಿಕೊಂಡು ಹತಾಶಭಾವದಿಂದ ತಾವಾಗಿಯೇ ಸಾಯುವವರು ಯಾವ ರೀತಿಯಲ್ಲಿಯೂ ಸಮರ್ಥನೆಗೆ ಯೋಗ್ಯರಲ್ಲ. ಆತ್ಮಹತ್ಯೆಯೊಂದೇ ದಾರಿ ಎನ್ನುವುದು ತೀವ್ರ ಹತಾಶೆಯ ಗುರುತು. ಇಂತಹ ಹತಾಶೆಯನ್ನು ಪಡೆಯಲು ಸಮಾಜ ಮತ್ತು ಸಂಬಂಧಗಳು ಕೂಡ ಕಾರಣವಾಗುತ್ತವೆ.
ನಾನೇ ಖುದ್ದು ಹಲವಾರು ಆತ್ಮಹತ್ಯೆಗಳಿಗೆ ನೇರ ಸಾಕ್ಷಿಯಾಗಿದ್ದೇನೆ.

ಪಾರ್ಕಿನಲ್ಲಿ ಸತ್ತವರು
ಅದೊಂದು ದಿನ ಕಬ್ಬನ್ ಪಾರ್ಕ್‍ನಲ್ಲಿ ಕುಳಿತುಕೊಂಡು ಓದುತ್ತಿದ್ದಾಗ ನನ್ನ ಕಣ್ಣಿನೆದುರೇ ಒಂದು ಗಂಡು ಮತ್ತು ಹೆಣ್ಣು ಬಂದು ಮಾತಾಡಿಕೊಂಡು ಕುಳಿತಿದ್ದರು. ನಂತರ ನಾನು ಓದುತ್ತಿದ್ದುದ್ದನ್ನು ಮುಗಿಸಿ, ಹೊರಡುವಾಗ ಮೇಲೆದ್ದು ನೋಡಲು ಅವರಿಬ್ಬರೂ ಪರಸ್ಪರ ಅಪ್ಪಿಕೊಂಡು ಮಲಗಿದಂತೆ ಕಂಡಿತು. ಆದರೆ ಅವರ ಅಪ್ಪುಗೆ ಸಹಜವಾಗಿ ಕಾಣದಿರುವುದರಿಂದ ನಾನು ಸ್ವಲ್ಪ ಗಮನಿಸಿ ನೋಡಿದರೆ, ಬಾಯಿಂದ ಜೊಲ್ಲು ಸುರಿಯುತ್ತಿದ್ದದ್ದು ಕಂಡು ಬಂದಿತು. ಕೂಡಲೇ ಅಲ್ಲಿಗೆ ಧಾವಿಸಿ ನೋಡಲು, ಆ ಪುರುಷ ಮತ್ತು ಮಹಿಳೆಯರಿಬ್ಬರೂ ವಿಷ ಸೇವಿಸಿರುವುದು ಕಂಡು ಬಂದಿತು. ಒಂದು ನೀರಿನ ಚೊಂಬು, ಎರಡು ಲೋಟ; ಹೀಗೆ ಎಲ್ಲವನ್ನೂ ತಂದು ಸುಸಜ್ಜಿತವಾಗಿ ಮೆಟಾಸಿಡ್ ವಿಷವನ್ನು ಸಮನಾಗಿ ಬೆರೆಸಿಕೊಂಡು ಕುಡಿದಿದ್ದಾರೆ. ನಾನು ಕೂಡಲೇ ಅಲ್ಲಿರುವವರನ್ನು ಕೂಗಿ ಕರೆದು, ಇದನ್ನು ತೋರಿಸಿ, ಅವರನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿ ಎಂದು ಗೋಗರೆದೆ. ಅವರೆಲ್ಲರೂ ಪೊಲೀಸ್ ಕೇಸಾಗುವುದೆಂದು ಹೆದರಿದರು. ನಮಗೆ ತೊಂದರೆಯಾಗುವುದು ಎಂದು ಹಿಂಜರಿದರು. ಆಗ ನಾನು ಕೂಡಲೇ ಹತ್ತಿರದ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್‍ಗೆ ಓಡಿದೆ. ಆಗ ಆ ಸ್ಟೇಷನ್‍ನಲ್ಲಿ ಇನ್ಸ್‍ಪೆಕ್ಟರಾಗಿ ಇದ್ದವರು ಸರಗಳ್ಳರನ್ನು ಹಿಡಿಯುವುದರಲ್ಲಿ ಪ್ರಖ್ಯಾತರಾಗಿದ್ದ ಟೈಗರ್ ಅಶೋಕ್ ಕುಮಾರ್ ಮತ್ತು ಮಂಜುಳಾ ಕುಮಾರಿ. ಅವರನ್ನು ಅಲ್ಲಿಗೆ ಕರೆ ತರುವಲ್ಲಿ ಆ ಪುರುಷ ಮತ್ತು ಮಹಿಳೆ ಮರಣಿಸಿದ್ದರು.
ಅವರು ಗಂಡ ಹೆಂಡತಿಯಾಗಿದ್ದವರು. ಸುರೇಶ್ ಮತ್ತು ಜಲಜಾ ಎಂದು ಅವರ ಹೆಸರು. ನಂತರ ನಾನು ಅವರು ಸುಧೀರ್ಘವಾಗಿ ಬರೆದಿಟ್ಟಿದ್ದ ಮರಣಶಾಸನವನ್ನು ಪಡೆದೆ. ಆಕೆ ಎರಡನೆಯ ಹೆಂಡತಿಯಾಗಿದ್ದವರು. ಅವರಿಗೆ ಒಬ್ಬನೇ ಮಗ ಸಂಜು ಎಂದು. ಆ ಹುಡುಗನಿಗೆ ಮೂರ್ನಾಲ್ಕು ವರ್ಷಗಳಿದ್ದಿರಬಹುದು. ಈ ಸುರೇಶ್ ಡೈಯಿಂಗ್ ಫ್ಯಾಕ್ಟರಿಯನ್ನೋ ಏನೋ ನಡೆಸುತ್ತಿದ್ದನೆಂಬ ನೆನಪು. ನಂತರ ಆದರೆ ಜಲಜಾ ಉಪಾಧ್ಯಾಯಿನಿಯಾಗಿ ಕೆಲಸ ಮಾಡುತ್ತಿದ್ದಳು. ಒಳ್ಳೆಯ ಹೆಸರು ಗಳಿಸಿದ್ದ ಉಪಾಧ್ಯಾಯಿನಿ ಆಕೆ. ನಂತರ ಸುರೇಶ್ ತನ್ನ ಈ ಎರಡನೆಯ ಹೆಂಡತಿಗೆಂದೊಂದು ಬಾಡಿಗೆ ಮನೆಯಲ್ಲಿ ಇರಿಸಿದ್ದ. ಆದರೆ, ಆ ಮನೆಯ ಓನರ್ ಇವರಿಗೆ ಸಣ್ಣ ಪುಟ್ಟ ಕಾರಣಗಳಿಗೆಲ್ಲಾ ಜಗಳವಾಡುವುದು, ನಿಂದಿಸುವುದು ಮಾತ್ರವಲ್ಲದೇ, ನೀನು ಇಟ್ಟುಕೊಂಡವಳು ಎಂಬ ಮಾತನ್ನೂ ಆಡುವುದು ಇತ್ಯಾದಿಯಾಗಿ ಕ್ಯಾತೆ ತೆಗೆಯುತ್ತಿದ್ದಳು. ಈ ಜಲಜಾ ಈ ವಿಷಯಕ್ಕೆ ಗಂಡನ ಬಳಿ ಬೇಸರಿಸಿಕೊಳ್ಳಲು, ತಮ್ಮದೇ ಮನೆಯಿರುವಾಗ ಏಕೆ ಹೀಗೆ ಒದ್ದಾಡಬೇಕೆಂದು ಒಂದು ದಿನ ಮನೆಯ ಸಾಮಾನುಗಳನ್ನೆಲ್ಲಾ ಹಾಕಿಕೊಂಡು ತನ್ನ ಸ್ವಂತ ಮನೆಗೆ, ಮೊದಲನೆಯ ಹೆಂಡತಿ ಇರುವ ಮನೆಗೆ ಬಂದುಬಿಟ್ಟಿದ್ದಾನೆ. ಇದರಿಂದ ಕೋಪಗೊಂಡ ಮೊದಲನೆ ಹೆಂಡತಿ ಮತ್ತು ಅವಳ ಸೋದರರು ಇವರಿಗೆ ಒಳಗೆ ಬರಲು ಅವಕಾಶವನ್ನು ಕೊಡದೇ, ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಇದರಿಂದ ನೊಂದ ಈ ಗಂಡ ಹೆಂಡತಿಯರು ತಾವು ತಂದ ಸಾಮಾನುಗಳನ್ನು ಓರ್ವ ಪರಿಚಯಸ್ಥರ ಮನೆಯಲ್ಲಿ ಇಟ್ಟು, ತಮ್ಮ ಮಗನಿಗೆ ಚೆನ್ನಾಗಿ ಓದಿಸಿ, ಎಂದು ಹೇಳಿ, ತಾನು ಅನುಭವಿಸಿದ ಅಪಮಾನವನ್ನೆಲ್ಲಾ ಸುಧೀರ್ಘವಾಗಿ ಬರೆದು, ಆ ದಿನ ನನ್ನ ಕಣ್ಣೆದುರೇ ಬಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಬಂದಿದ್ದು ನೋಡಿದ್ದೆ, ಅವರು ಕುಳಿತಿದ್ದು ನೋಡಿದ್ದೆ. ಆದರೆ, ನಾನು ಮುಂದೆ ಓದುವುದರಲ್ಲಿ ಸಂಪೂರ್ಣ ಮಗ್ನನಾಗಿ ಇನ್ನೇನು ಮಾಡಿದರು ಎಂದು ನೋಡದೇ ಹೋಗಿದ್ದೆ. ನಾನೇನಾದರೂ ಅವರನ್ನು ಕುಡಿದಾಗಲೇ ನೋಡಿದ್ದರೆ ಅವರನ್ನು ಉಳಿಸಲು ಆಗುತ್ತಿತ್ತೋ ಇಲ್ಲವೋ ಆದರೆ, ಈಗಲೂ ಅದು ನನ್ನ ಕಾಡುತ್ತದೆ. ನನ್ನ ಕಣ್ಣೆದುರೇ ಎರಡು ಜೀವಗಳು ವಿಷ ಕುಡಿದು ಪ್ರಾಣ ಬಿಡುತ್ತಿದ್ದರೂ ಅದನ್ನು ನೋಡದೆ ಪುಸ್ತಕ ಓದುವುದರಲ್ಲಿ ಮಗ್ನನಾಗಿದ್ದರ ಬಗ್ಗೆ ನನಗೇ ಬೇಸರವೆನಿಸುತ್ತದೆ.
ಇಲ್ಲಿ ಸುರೇಶ್ ಮತ್ತು ಜಲಜಾ (ಹೆಸರು ಬದಲಿಸಿದ್ದೇನೆ) ಮೊದಲನೆಯದಾಗಿ ಸಮಾಜದಲ್ಲಿ ವ್ಯವಸ್ಥೆಗೆ ಕಟ್ಟುಬಿದ್ದು ಮದುವೆ ಅಂತ ಮಾಡಿಕೊಂಡಾದ ಮೇಲೆ ಮತ್ತೊಂದು ಮದುವೆಯಾಗಿದ್ದೇ ಒಂದು ಎಡವಟ್ಟು. ಹಾಗೆ ಮದುವೆಯಾದ ಮೇಲೆ ಅದನ್ನು ಎದುರಿಸುವಷ್ಟು ಧೈರ್ಯ ಮತ್ತು ಗಟ್ಟಿತನ ಹೊಂದಬೇಕಿತ್ತು. ಇಲ್ಲದೇ ಹೋದರೆ ಅಂತಹ ಸಾಹಸಕ್ಕೆ ಕೈ ಹಾಕುವುದಾದರೂ ಹೇಗೆ? ನನಗೆ ಈಗಲೂ ಅರ್ಥವಾಗದೇ ಹೋಗಿದ್ದು, ಸುರೇಶ್ ತನ್ನ ಮೊದಲನೆಯ ಹೆಂಡತಿ ಇರುವಂತಹ ಮನೆಗೇ ಯಾವ ಧೈರ್ಯದ ಮೇಲೆ ಕುಟುಂಬ ಮತ್ತು ಸಮಾಜ ಸಮ್ಮತವಲ್ಲದ, ಅನ್ಯ ಕೋಮಿನ ತನ್ನ ಎರಡನೆಯ ಹೆಂಡತಿಯನ್ನು ಕರೆದುಕೊಂಡು ಹೋದ ಎಂಬುದು. ಅಷ್ಟಾದ ಮೇಲೆ ಅದನ್ನು ಅದ್ಯಾಕೆ ಅಪಮಾನ ಎಂದುಕೊಂಡರು ಎಂಬುದು. ನಂತರ ತಮ್ಮ ಮಗನನ್ನು ಜಲಜಾಳ ತಂಗಿಗೆ ಒಪ್ಪಿಸಿ ಭಾವಾವೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಎಲ್ಲವೂ ಕೂಡ ನನಗೆ ವಿಚಿತ್ರವಾಗಿಯೇ ಕಾಣುತ್ತದೆ. ವಿಷಯವೇನೆಂದರೆ ಇಂತಹ ಎಡವಟ್ಟುದಾರರೇ ಆತ್ಮಹತ್ಯೆ ಎಂಬ ದೊಡ್ಡ ಎಡವಟ್ಟನ್ನೂ ಮಾಡಿಕೊಳ್ಳುವುದು. ಸಂಯಮ, ಸಮಚಿತ್ತ ಮತ್ತು ಸ್ಥಿರಬುದ್ಧಿಯುಳ್ಳ ಪ್ರಜ್ಞಾವಂತರಾರೂ ಆತ್ಮಹತ್ಯೆಯನ್ನು ಮಾಡಿಕೊಳ್ಳುವುದಿಲ್ಲ. ಅಪಮಾನ, ಸೋಲು, ನಿರಾಶೆ, ಹತಾಶೆ ಇತ್ಯಾದಿಗಳೆಲ್ಲಾ ಸರಿದುಹೋಗುವಂತಹ ವಿಷಯಗಳು ಎಂಬ ಸಾಮಾನ್ಯ ಪ್ರಜ್ಞೆಯೂ ಇಲ್ಲದೇ ತಾವು ಒಳಗಾಗಿರುವ ಗಾಢ ಸನ್ನಿವೇಶಕ್ಕೆ ವಿಪರೀತವಾಗಿ ಪ್ರತಿಕ್ರಿಯಿಸುತ್ತಾರೆ.
ನನ್ನ ಜೀವನದುದ್ದಕ್ಕೂ ನಾನು ಅನೇಕಾನೇಕ ಆತ್ಮಹತ್ಯೆಗಳನ್ನು ನೇರವಾಗಿ (ಸ್ನೇಹಿತರು ಮತ್ತು ಬಂಧುಗಳು) ಕಂಡಿದ್ದೆ ಅಲ್ಲದೇ ಅವುಗಳ ಕೇಸ್ ಸ್ಟಡಿ ಮಾಡಿದ್ದೇನೆ. ಅವುಗಳನ್ನು ತಿಳಿಯುವುದರಿಂದ ನಮಗೆ ಇತರರು ತೋರುವ ಆತ್ಮಹತ್ಯಾ ಪ್ರವೃತ್ತಿಯನ್ನು ಗುರುತಿಸಿ ಬಾಳಲು ಸಹಕರಿಸಬಹುದೇನೋ ಎಂಬ ಆಶಾಭಾವ.

ಭೀಷ್ಮನ ಇಚ್ಛಾಮರಣ
ಮಾನವ ದೇಹವು ಮೂಳೆ ಮಾಂಸದ ತಡಿಕೆ, ಇದರ ಮೇಲಿದೆ ತೊಗಲಿನ ಹೊದಿಕೆ, ತುಂಬಿದೆ ಒಳಗೆ ಕಾಮಾದಿ ಬಯಕೆ ಎಂದು ಮನುಷ್ಯನ ಇಡೀ ಭೌತಿಕ ಅಸ್ತಿತ್ವವನ್ನು ಒಂದು ರೀತಿಯದಾಗಿ ಹೇಳಿಬಿಟ್ಟವರೊಂದು ಕಡೆ, ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಬೇಡಿ ಹುಚ್ಚಪ್ಪಗಳಿರಾ ಎಂದು ಹೇಳಿದವರೂ ಕೂಡ ಇನ್ನೊಂದು ಕಡೆ.
ಅರಿವಿಲ್ಲದಂತೆ ಆಯ್ತೆಮ್ಮ ಜನನ
ಅರಿತಿಲ್ಲ ನಾವು ಎಂದು ಬರುವುದೋ ಮರಣ
ಅವಧಿ ಎಂಬುವುದುಂಟು ಹುಟ್ಟು ಸಾವಿನ ನಡುವೆ
ಆ ಕಾಲವಲ್ಲವೇ ನಮ್ಮೆಲ್ಲಾ ಜೀವನ,
ಜೀವನದ ಪ್ರೇಮಕ್ಕೆ ಸ್ಪಂದಿಸಿದರೆ ನಮ್ಮ ಜೀವನ ಸಂಜೀವನ

ಹೌದು, ಹುಟ್ಟಿದ್ದು ನಮಗೆ ತಿಳಿದೇ ಇರಲಿಲ್ಲ. ಹಾಗೆಯೇ ಒಂದಷ್ಟು ಕಾಲ ನಮಗೆ ನಾವು ಇರುವುದೇ ಗೊತ್ತಿರಲಿಲ್ಲ. ಆಮೇಲೆ ಅದ್ಯಾವಾಗಲೋ, ಲೋಕ ಕರೆಯುವ ರೀತಿಯಲ್ಲಿ ಬುದ್ಧಿ ಎಂಬುದು ಬಂದಾದ ಮೇಲೆ, ನಾವು, ನಮ್ಮವರು, ನಮ್ಮ ಕೆಲಸ ಇತ್ಯಾದಿಗಳೆಲ್ಲಾ ತಿಳಿಯುತ್ತಾ ಬಂದು, ನಮ್ಮದೆಂದು ಹಕ್ಕು ಸಾಧಿಸುವುದನ್ನು, ನಾವು, ನಮ್ಮ ಸ್ಥಾನ ಇಂಥದ್ದೆಂದು ಹೆಮ್ಮೆ ಪಡುವುದನ್ನು, ಇದು ನಮ್ಮದಲ್ಲ, ಇವರು ಪರಕೀಯರು ಇತ್ಯಾದಿ ಹಲವು ವ್ಯತ್ಯಾಸಗಳನ್ನು ಕಂಡುಕೊಳ್ಳುವ ಶಿಕ್ಷಣವನ್ನು ಸಮಾಜವೇ ನಮಗೆ ಕಲಿಸಿಕೊಡುವುದು. ಆದರೆ, ಅದು ನಮ್ಮತನದ ಬಹು ಗಟ್ಟಿತನದ ಮೇಲೆ ಕೊರೆದುಕೊಳ್ಳುವ, ಒರೆದುಕೊಳ್ಳುವ ವಿಷಯದ ಮೇಲೆ ಅಹಂಕಾರದ ಬಣ್ಣವೋ, ನನ್ನತನದ ಲೇಪವೋ ತಿಳಿಯುತ್ತದೆ.
ಹುಟ್ಟುವುದು ಎಂತೋ, ಹೇಗೋ, ನಮ್ಮ ನಿಯಂತ್ರಣ ಮತ್ತು ಅರಿವಿಲ್ಲದಂತೆ ಹುಟ್ಟುತ್ತೇವೆ. ಇನ್ನು ಬಾಳುವುದಾದರೂ ನಮ್ಮ ಪ್ರಜ್ಞೆಯಲ್ಲಿ ಮತ್ತು ಅರಿವಿನಲ್ಲಿ ಇರಬೇಕೆಂದು ಹೇಳುವ ವರ್ಗವು ಒಂದೆಡೆಯಾದರೆ, ಸಾವನ್ನೂ ತಮ್ಮ ಇಚ್ಛೆಯಂತಾಗ ಬೇಕು ಎಂದು ಹೇಳುವ ವರ್ಗ ಇನ್ನೊಂದು.

ದೇವವ್ರತನ ಭೀಷ್ಮ ಪ್ರತಿಜ್ಞೆ
ಮಹಾಭಾರತದಲ್ಲಿ ಶಂತನು ಮತ್ಸ್ಯಗಂಧಿಯ ಜಾಡನ್ನು ಮೂಸುತ್ತಾ ತನ್ನ ವಿಷಯ ವಾಸನೆಯನ್ನು ಜಾಹೀರು ಪಡಿಸಿಕೊಂಡಾಗ, ಮಗ ದೇವವ್ರತ ತಂದೆಯ ಆಸೆಯನ್ನು ನೆರವೇರಿಸಿ ತನ್ನ ಸ್ವಹಿತ, ಸ್ವಂತ ಸುಖವನ್ನು ತ್ಯಾಗ ಮಾಡಿ ಪ್ರತಿಜ್ಞೆಯನ್ನು ಮಾಡಿ ತಂದೆಯ ವೈಯಕ್ತಿಕ ಇಚ್ಛೆಯನ್ನು ನೆರವೇರಿಸಿ ಭೀಷ್ಮನೆಂದು ಕರೆಯಿಸಿಕೊಂಡ. ಅವನಿಗೆ ಅವನ ತಂದೆ ಕೊಟ್ಟ ವರವೆಂದರೆ ‘ಯಾವಾಗ ಬೇಕೋ ಆಗ ಸಾಯಿ’ ಎಂದು, ಅಂದರೆ ಇಚ್ಛಾ ಮರಣ.
ಸಿಂಹಾಸನದ ರಕ್ಷಕನಾಗಿ, ಮಕ್ಕಳ ಪಾಲಕನಾಗಿ, ಕುರು ಮತ್ತು ಪಾಂಡುವಂಶದ ಸಾಮರಸ್ಯಕ್ಕೆ ಒದ್ದಾಡುವ ಜೀವವಾಗಿ, ವಿಪರೀತ ಮುದುಕನಾಗಿ, ಕೊನೆಗೆ ಸಿಂಹಾಸನ ಯಾವ ಕಡೆಗಿರುತ್ತದೋ ಅದೇ ಕಡೆ ನಿಂತು ತಾನು ಯಾವುದನ್ನು ಅಧರ್ಮವೆಂದು ಕರೆಯುತ್ತಿದ್ದನೋ ಅದರ ಪರವಾಗಿಯೇ ಯುದ್ಧ ಮಾಡುವ ಕರ್ಮಕ್ಕೆ ಕಟ್ಟುಬಿದ್ದು ನಂತರ ಯುದ್ಧದಲ್ಲಿ ಬಾಣಗಳ ಗಾಯದಿಂದ ಜರ್ಝರಿತನಾಗಿ ಬಿದ್ದಿರುವಾಗಲೂ ತನ್ನ ಇಚ್ಛಾಮರಣದ ಬಲದಿಂದ ಸಾಯದೇ ಉಳಿದು, ಉತ್ತರಾಯಣಕಾಲದ ಪುಣ್ಯ ಸಮಯಕ್ಕೆ ಕಾದು ಪ್ರಾಣಬಿಟ್ಟ ಭೀಷ್ಮ ಪಿತಾಮಹನ ಸಾವನ್ನು ಏನೆಂದು ಕರೆಯುವುದು?
ಬದುಕಿನುದ್ದಕ್ಕೂ ಆತ್ಮವಂಚನೆಯನ್ನೇ ಮಾಡಿಕೊಂಡು ಬಂದ ಭೀಷ್ಮ ಯಾವಾಗಲೋ ಆತ್ಮಹತ್ಯೆ ಮಾಡಿಕೊಂಡು ಸಾಯಬಹುದಿತ್ತು. ಆದರೆ, ತನಗೊಂದು ಕರ್ತವ್ಯವಿದೆಯೆಂದು ಅದಕ್ಕಾಗಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಾದಿದ್ದು, ತನ್ನಿಂದಾಗುವ ಸರ್ವಪ್ರಯತ್ನವನ್ನೂ ಮಾಡಿಕೊಂಡು ತಾನಿನ್ನು ಯಾರಿಗೂ, ಯಾವುದಕ್ಕೂ ಬೇಡವೆಂದು ಅನಿಸುವಂತಹ ಸ್ಥಿತಿಯನ್ನು ತಲುಪಿದ ಮೇಲೆ ಸಾಯುವ ಮನಸ್ಸನ್ನು ಮಾಡಿದ ಅತ್ಯಂತ ಜೀವನ ಪ್ರಿಯ.
ಭೀಷ್ಮನ ಮಾತುಗಳಾವುವೂ ನೆರವೇರಲಿಲ್ಲ. ಹೆಸರಿಗಷ್ಟೇ ಅವನ ಹೊಂದಿದ್ದು, ಎಲ್ಲರೂ ಅವರವರ ಹಟ ಸಾಧನೆಗಳಲ್ಲೇ ಮುಳುಗೆದ್ದರು. ತನ್ನ ವ್ಯಕ್ತಿಗತವಾದಂತಹ ಹೆಂಡತಿ, ಮಕ್ಕಳು, ಸುಖ, ಹಿತ ಯಾವುದೂ ದಕ್ಕಲಿಲ್ಲ, ಅಧಿಕಾರ, ರಾಜ್ಯಪಟ್ಟ ಯಾವ ಸ್ಥಾನವೂ ಇಲ್ಲ, ತನ್ನ ಮಾತು ಕೇಳುವವರೂ ಇಲ್ಲ, ಕೇಳಿಸಿಕೊಂಡರೂ ನಡೆಸುವುದಿಲ್ಲ. ಮನೆಯಲ್ಲಿ ಗೇಯ್ದಿರುವ ಹಿರಿಯನೆಂಬ ಒಂದು ಮಾನ್ಯತೆ ಇತ್ತು. ಅದರಿಂದ ಮುದುಕನ ಬದುಕಿಗೇನೂ ಸುಖವಿಲ್ಲ, ನೆಮ್ಮದಿಯಿಲ್ಲ. ಆದರೂ ಅವನು ಯಾರಿಗೂ ಬೇಡದ ತನ್ನ ಕರ್ತವ್ಯಗಳನ್ನು ನಿಭಾಯಿಸುವಲೋಸುಗ ಬದುಕಿಯೇ ಇದ್ದ. ನರಳುತ್ತಾ ನೋವಿನಲ್ಲಿ ಬಿದ್ದಿದ್ದರೂ ತನ್ನ ಸಮಾಧಾನಕ್ಕೆ ಉತ್ತರಾಯಣಕಾಲಕ್ಕೆ ಕಾದು ಸತ್ತ.
ಬೈಕ್ ಕೊಡಿಸಲಿಲ್ಲ, ಪರೀಕ್ಷೆಯಲ್ಲಿ ನಪಾಸು, ಗಂಡ ಬೈದ, ಹೆಂಡತಿ ಎಲ್ಲಿಗೋ ಓಡಿಹೋದಳು, ಸಾಲ ಹೆಚ್ಚಾಯ್ತು, ಹಾಗೆ ಅವಮಾನವಾಯ್ತು, ಇವರು ಮೋಸ ಮಾಡಿದರು ಎಂದೆಲ್ಲಾ ಸಾಯುವ ಮನಸ್ಸು ಮಾಡುವ ಮಂದಿ ಭೀಷ್ಮನ ಕಡೆ ನೋಡಬೇಕು.

ಕೊಂದು ಸಾಯುವ ಘಾತುಕರು
ಇನ್ನೂ ಘೋರಾತಿಘೋರ ಎಂದರೆ, ಗಂಡನಿಗೆ ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗಿದೆ. ಸಾಲ ಮಾಡಿದ್ದಾನೆ. ಬಡ್ಡಿ ಎಲ್ಲಾ ಬೆಳೆದು ನೆತ್ತಿ ಕಾಣದಷ್ಟು ಎತ್ತರದಲ್ಲಿ ನಿಂತಿದೆ. ತನಗೆ ಇನ್ನು ತೀರಿಸಲು ಆಗದು, ಸಾಲಗಾರರು ಇಬ್ಬದಿಯ ಕೀಲು ಮುರಿಯುತ್ತಿದ್ದಾರೆ. ಹೆಂಡತಿಗೆ ವಿಷವುಣಿಸಿ, ಮಕ್ಕಳನ್ನು ಕೊಂದು ತಾನು ನೇಣು ಬಿಗಿದುಕೊಂಡು ಸಾಯುತ್ತಾನೆ.
ಎಂಥಾ ಮೋಸ! ತಾನು ಸತ್ತೆನೆಂದರೆ ಉಳಿದವರಿಗೆ ಬದುಕುವುದಕ್ಕೆ ಸಾಧ್ಯವೇ ಇಲ್ಲ ಎಂಬಂತಹ ಸಂಕುಚಿತ ಅಹಂಕಾರದ ಮನಸ್ಥಿತಿ. ಅವರ ಬದುಕಿನ ಅಧಿಕಾರವನ್ನು ತಾನು ಕಸಿದುಕೊಳ್ಳುವಂತಹ ಧಾರ್ಷ್ಟ್ಯ. ತಾನೇ ಇವರ ಜೀವನದ ಆಧಾರ ಎಂಬ ಹುಸಿ ಭಾವನೆ. ಇನ್ನು ಲೋಕವನ್ನು ಅರಿಯದ, ಮುಂದೆ ಬದುಕಿ ಬಾಳಬೇಕಾದ ಮಕ್ಕಳ ಬಾಳಿಗೆ ಕೊಳ್ಳಿ. ಯಾವ ಪುರುಷಾರ್ಥಕ್ಕಾಗಿಯೋ.
ಯಾರು ಇದ್ದರೂ, ಯಾರು ಇಲ್ಲದಿದ್ದರೂ ಅವರವರ ಬದುಕಿನ ಬಂಡಿಯನ್ನು ಅವರವರು ನಡೆಸಿಕೊಂಡು ಹೋಗುವಂತಹ ಸಾಮರ್ಥ್ಯ ಲೋಕದಲ್ಲಿ ಪ್ರತಿಯೊಬ್ಬರಿಗಿದೆ. ಪರಾವಲಂಬಿಯಾಗಿದ್ದು ದಿಢೀರನೆ ಆಧಾರವು ಪಲಾಯನ ಮಾಡುವುದರಿಂದ ಪ್ರಾರಂಭದಲ್ಲಿ ಕೊಂಚ ಕಷ್ಟವಾಗಬಹುದು. ಆದರೆ, ತಮ್ಮ ಜೀವನ ಪ್ರೇಮವು ತಮ್ಮನ್ನು ಬದುಕಿಸಿ ಉಳಿಸುತ್ತದೆ. ಲೋಕಾನುಭವವನ್ನು ನೀಡುತ್ತದೆ. ಗಟ್ಟಿಯಾಗುತ್ತಾರೆ ಉಳಿ ಪೆಟ್ಟು ತಿಂದವರಂತೆ.

ಜೀವಕುಲಕ್ಕೆ ಮಾಡುವ ಅವಮಾನ
ಒಂದು ಸತ್ಯ ನೆನಪಿಡಬೇಕು. ಈ ಲೋಕದ ಸಾಮಾನ್ಯವಾದ ಲೌಕಿಕ ರೀತಿಯೆಂದರೆ, ದುರಂತವಿಲ್ಲದೇ, ಎದ್ದು ಕಾಣುವಂತಹ ನೋವು ಸಾವು ಇಲ್ಲದೇ ಎಲ್ಲಾ ಚೆನ್ನಾಗಿದೆ ಎಂದು ತೋರುವಾಗ ನೆರವಿಗೆ ಬಾರದವರು, ದುರಂತವೊಂದು ಸಂಭವಿಸಿತು ಎಂದಾಗ ಉಳಿದವರ ನೆರವಿಗೆ ಬರುತ್ತಾರೆ. ಆಗಲಾದರೂ ಕಾರುಣ್ಯವನ್ನು ಹೊಂದುವಷ್ಟು ಮಾನವತೆಯು ಜಗತ್ತಿನ ಜನರಲ್ಲಿ ಇದೆ. ಇಡೀ ಜಗತ್ತಿನ ಜನರ ಮಾನವೀಯತೆಯನ್ನೇ ಧಿಕ್ಕರಿಸುವ ಹಾಗೆ, ಅನುಮಾನಿಸುವ ಹಾಗೆ, ತನ್ನ ಹೆಂಡತಿ ಮತ್ತು ಮಕ್ಕಳನ್ನು ಕೊಲ್ಲುವ ಸಾಲಗಾರ ಗಂಡ ಅಥವಾ ಮನೆಯಲ್ಲಿ ಗಂಡ ಅಥವಾ ಇತರರ್ಯಾರೋ ಕಾಟ ಕೊಟ್ಟರು ಅಂತ ತಾಯಿ ತನ್ನ ಮಕ್ಕಳನ್ನು ಬಾವಿಗೆ ಅಥವಾ ಕೆರೆಗೆ ಎಸೆದು ತಾನೂ ಸಾಯುವುದು ಮನುಕುಲವನ್ನೇ ಅಪಮಾನಿಸುವ ರೀತಿ.
ತಾವು ಹೋಗುವರೋ? ಧಾರಾಳವಾಗಿ ಹೋಗಲಿ. ಅವರ ಮೂರ್ಖ ಅಹಂಕಾರಕ್ಕೆ ಅಥವಾ ಖಿನ್ನತೆಯ ತೀವ್ರತೆಯನ್ನು ತಾವು ಬಗೆ ಹರಿಸಿಕೊಳ್ಳಲಾಗದು ಎಂಬ ದಡ್ಡತನದ ನಿರ್ಧಾರಕ್ಕೆ ನಾವು ಹೊಣೆಯಾಗುವುದಿಲ್ಲ. ಆದರೆ, ಮಕ್ಕಳನ್ನು ಕೊಲ್ಲುವ ಯಾವ ತಂದೆ ತಾಯಿಯನ್ನೂ ಕ್ಷಮಿಸಲು ಸಾಧ್ಯವೇ ಇಲ್ಲ. ಎಷ್ಟೋ ಬಾರಿ ಅವರು ಹೋದ ಮೇಲೆ ಮಕ್ಕಳಿಗೆ ಇನ್ನೂ ಅನುಕೂಲವಾಗುತ್ತದೆ, ನೆರವಿನ ಮಾರ್ಗಗಳು ವಿಫುಲವಾಗುತ್ತವೆ ಎಂದು ಹೇಳುವುದನ್ನು ಕೇಳುವುದಕ್ಕೆ ಕಷ್ಟ ಎನಿಸಿದರೂ, ಹಲವು ಬಾರಿ ನಿಜವಾಗುತ್ತವೆ.
ಖಿನ್ನತೆಗೆ ಅಥವಾ ಹತಾಶೆಗೆ ಒಳಗಾದ ವ್ಯಕ್ತಿಯ ಪರಿಕಲ್ಪನೆಯಷ್ಟು ಲೋಕ ಅಸಹ್ಯವಾಗಿಲ್ಲ. ಅಥವಾ ಲೋಕ ಹಾಗೇ ಇದೆ ಎಂದು ಅಂದುಕೊಂಡೇ ಬಿಡೋಣ. ಆದರೆ ತನ್ನ ಬದುಕನ್ನು ತಾನು ನಿರ್ವಹಿಸಿಕೊಂಡು ಹೋಗಲಾರದಷ್ಟು ಯಾವುದೇ ವ್ಯಕ್ತಿಯ ಮನೋಬಲ ನಿರ್ಬಲವಾಗಿರುವುದಿಲ್ಲ.

ಆತ್ಮಹತ್ಯೆಗಳೆಲ್ಲವೂ ಉನ್ಮತ್ತತೆಯಲ್ಲಿಯೇ ಆಗುವುದು. ಅದು ಮದ್ಯ ಅಥವಾ ಮಾದಕದ್ರವ್ಯದ ಅಮಲಿಗಿಂತಲೂ ಘೋರ. ಭಯ, ಖಿನ್ನತೆ, ಹತಾಶೆ, ನಿರಾಶೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಜಾರಿಕೊಳ್ಳುವ ಗುಣ, ಎಲ್ಲಕ್ಕೂ ಮಿಗಿಲಾಗಿ ಅಹಂಕಾರ ಇವುಗಳು ತರುವ ಅಮಲು ಬಹಳ ಭಯಂಕರ ಮತ್ತು ಅಪಾಯಕಾರಿ. ಇವುಗಳ ಉನ್ಮಾದದ ಮುಂದೆ ಇನ್ನು ಯಾವ ಉನ್ಮಾದವೂ ಇಲ್ಲ. ಈ ಉನ್ಮಾದದಲ್ಲಿಯೇ ಜನ ಆತ್ಮಹತ್ಯೆಗೆ ಶರಣಾಗುವುದು.
ಯಾರೋ ಒಬ್ಬಾಕೆ ತನಗೆ ಕೈ ಕೊಟ್ಟಳೆಂದು, ಮೋಸ ಮಾಡಿದಳೆಂದು ಹೇಗೋ ನೆಗೆದು ಬೀಳುವ ಯುವಕ ತನ್ನ ಜೊತೆಗೆ ಇರುವ ಸ್ನೇಹಿತರನ್ನು ಅಪಮಾನಿಸುತ್ತಾನೆ. ತನ್ನ ತಂದೆ, ತಾಯಿ ಮತ್ತು ಇತರ ಕುಟುಂಬದ ಸದಸ್ಯರ ಪ್ರೀತಿ ಮತ್ತು ವಾತ್ಸಲ್ಯವನ್ನು ಧಿಕ್ಕರಿಸಿರುತ್ತಾನೆ. ಹಾಗೆ ತನ್ನ ಜೊತೆಗೆ ಇರುವವರನ್ನು, ತನ್ನ ಕರ್ತವ್ಯ ಮತ್ತು ಹಕ್ಕನ್ನು ನೆನೆಯದೇ ಸಾಯುವವರು ಯಾರೇ ಆಗಲಿ ಪರಮ ಸ್ವಾರ್ಥಿಗಳು ಮತ್ತು ಸ್ವಕೇಂದ್ರಿತ ಮೂರ್ಖರು. ಜೊತೆಗೆ ತನ್ನ ಬದುಕಿಗೆ ಅನೇಕ ರೀತಿಯ ಕೊಡುಗೆಗಳನ್ನು ಕೊಟ್ಟ ತನ್ನ ಎಲ್ಲಾ ಸಹಜೀವಿಗಳನ್ನು ಅಪಮಾನಿಸುವ ಕೃತಘ್ನರು.
ಇನ್ನೂ ಸರಳವಾಗಿ ಹೇಳಬೇಕೆಂದರೆ, ತನ್ನ ಜೀವಕ್ಕಿಂತಲೂ ಮಿಗಿಲಾಗಿರುವಂತಹ ಉದಾತ್ತ ಧ್ಯೇಯ ಮತ್ತು ಧೋರಣೆಗಳನ್ನು ಹೊಂದಿರದಂತಹವರು. ಹಾಗೇನಾದರೂ ತಮ್ಮ ಗಮ್ಯ ಮತ್ತು ಗಮನ ಉದಾತ್ತ ಮತ್ತು ಶ್ರೇಷ್ಟವೇ ಆಗಿದ್ದ ಪಕ್ಷದಲ್ಲಿ, ತಮ್ಮ ಬದುಕು, ದೇಹ, ಮನಸ್ಸು ಮತ್ತು ಪ್ರಾಣಗಳು ಅದರ ಸಾಧನೆಗೆ ಕರಣವಾಗಿರುವುದು ಎಂದು ಜತನವಾಗಿ ನೋಡಿಕೊಂಡಿದ್ದು ಮಹೋನ್ನತ ಕಾರ್ಯಗಳನ್ನು ಮಾಡುತ್ತಾರೆ.
ಇಲ್ಲದಿದ್ದರೆ, ಹೋದವರ ಬಾಯಿಗೆ ಮಣ್ಣು, ಇದ್ದವರ ಬಾಯಿಗೆ ಅನ್ನ, ಅಷ್ಟೇ!

(ಮುಂದುವರಿಯುವುದು)

LEAVE A REPLY

Please enter your comment!
Please enter your name here