ಬರೆದವರು: ಎಂ.ಅಶೀರುದ್ದೀನ್ ಅಲಿಯಾ, ಮಂಜನಾಡಿ.

ಕರುನಾಡು ಕಾರುಣ್ಯದ ಗೂಡು
ಪ್ರೀತಿಯ ಹರಸಿ,
ಸ್ನೇಹವ ಬೆರಸಿ
ನೆರಳನ್ನು ಚಾಚಿದ
ಹೆಮ್ಮೆಯ ನಾಡಿಗೆ ಸಲಾಂ ಸಲಾಂ

ಜೋಗದ ಜುಳು ಜುಳು ನಾದದ
ಸಾಗರದಲೆಗಳ, ಸಾಲು ಮರಗಳ
ಕಾವೇರಿಯ ಒಡಲಿನ
ಸಹ್ಯಾದ್ರಿಯ ಮಡಿಲಿನ
ಹಸಿರು ಸಿಂಗಾರದ ನಾಡಿಗೆ ಸಲಾಂ ಸಲಾಂ

ಸಾಹಿತ್ಯ ಸಂಗೀತ ಸಂಸ್ಕೃತಿಯ
ಹಿರಿಮೆಯ ಗಳಿಸಿದ
ಕೋಟೆ ಕೊತ್ತಲ ಶಿಲ್ಪ ವರ್ಣದ ಕಲೆಗಳುದಾಯಿಸಿದ
ಗತ ಕಾಲದ ವೈಭವ ಸಾರುವ
ಇತಿಹಾಸದ ಬೀಡಿಗೆ ಸಲಾಂ ಸಲಾಂ

ರನ್ನ, ಪಂಪ, ಹರಿಹರ
ಕನಕ, ಕಬೀರ, ಕಾಳಿದಾಸರ
ಸರ್ವಜ್ಞ ಬಸವೇಶ್ವರ
ಕುವೆಂಪು, ಶರೀಫರ ನಾಡಿಗೆ ಸಲಾಂ ಸಲಾಂ

ವಿಜಯ ನಗರ, ಮೈಸೂರು,ಕಿತ್ತೂರು ರಾಜರ
ಹೈದರ್,ಟಿಪ್ಪು, ಬಹುಮನಿ ಸುಲ್ತಾನರ
ರಾಜ ಮಹಾರಾಜ ಒಡೆಯರು ಆಳಿದ
ಧೀರ ವೀರ ಶೂರರು ಹೋರಾಡಿದ
ಪುಣ್ಯ ಭೂಮಿಗೆ ಸಲಾಂ ಸಲಾಂ

ಬತ್ತ, ರಾಗಿ, ಜೋಳ
ಬಿತ್ತಿ ಉಳುವ
ತೆಂಗು ಕಂಗು ಕಬ್ಬು,ಕಾಫಿ
ಬಿತ್ತಿ ಬೆಳೆಯುವ
ಹಸಿವ ನೀಗಿಸುವ ಯೋಗಿಯ ಮಣ್ಣಿಗೆ
ಚಿನ್ನದ ನಾಡಿಗೆ ಸಲಾಂ ಸಲಾಂ

ಕನ್ನಡ ತಾಯಿಯ ಅಮೃತವ ಕುಡಿದು
ಹರಸಿದ ಕನ್ನಡ ಕುಲವನ್ನು ನೆನೆದು
ನಡೆ ಕನ್ನಡ ನೀ ನುಡಿ ಕನ್ನಡ
ಹಸಿರು ಕನ್ನಡ ಉಸಿರು ಕನ್ನಡ
ಕರುನಾಡಿಗೆ ಮಿಡಿದ ಕರುನಾಡಿಗೆ ಮಡಿದ
ಮಣ್ಣಿನ ಮಕ್ಕಳಿಗೆ ಸಲಾಂ ಸಲಾಂ

LEAVE A REPLY

Please enter your comment!
Please enter your name here