ಲೇಖಕರು: ಯಾಸೀನ್ ಕೋಡಿಬೆಂಗ್ರೆ. ( ವಕೀಲರು ಮತ್ತು ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ವಿದ್ಯಾರ್ಥಿ)

ಕರ್ನಾಟಕದಲ್ಲಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ 2014 ರಲ್ಲಿ ಮೈಸೂರು ಹುಲಿ ಖ್ಯಾತ ನಾಮದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ನಿರ್ಧರಿಸಿದಾಗಲೇ ಟಿಪ್ಪುವಿನ ಬಗ್ಗೆ ಏಕಾಏಕೀ ಹಲವಾರು ಆಪಾದನೆಗಳು ಮುನ್ನಲೆಗೆ ಬಂದವು. ಇತಿಹಾಸದ ಗಂಧ ಗಾಳಿ ತಿಳಿಯದ ಮಂದಿಯೆಲ್ಲ ಟಿಪ್ಪುವಿನ ಇತಿಹಾಸ್ ಮೇಲೆ ಚರ್ಚೆ ನಡೆಸಲು ಆರಂಭಿಸಿದರು. “ ಹಿಂದು ವಿರೋಧಿ”, ಮತಾಂಧ, ಕನ್ನಡ ದ್ರೋಹಿ, ಮತಾಂತರಿ, ಕ್ರೂರಿ ಹೀಗೆ ಏನೆಲ್ಲಾ ಸಾಧ್ಯವೊ ಆ ಎಲ್ಲ ದೋಷರೋಪಣೆಯನ್ನು ಆತನ ಮೇಲೆ ಹೊರಿಸಲಾಯಿತು. ಅದಕ್ಕಿಂದ ಮುನ್ನ ಸ್ವತಃ ಬಿಜೆಪಿಯ ಮುಖಂಡರಾದ ಬಿ.ಎಸ್ ಯಡಿಯೂರಪ್ಪ, ಶ್ರೀ ರಾಮುಲು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಹಲವಾರು ಮಂದಿ ಟಿಪ್ಪುವಿನ ಸಾಂಕೇತಿಕ ಪೇಟ ಧರಿಸಿ, ಖಡ್ಗ ಕೈಯಲ್ಲಿ ಹಿಡಿದು ವೇದಿಕೆಯಲ್ಲಿ ಮಿಂಚಿದ್ದು ಇದೀಗ ಇತಿಹಾಸ.

ಕಾಂಗ್ರೇಸ್ ಸರಕಾರ ಟಿಪ್ಪುವಿನ ಜಯಂತಿ ಆಚರಿಸಲು ಆರಂಭಿಸಿದಾಗ ಅದನ್ನು ರಾಜಕೀಯ ಲಾಭಕ್ಕಾಗಿ ವಿರೋಧಿಸಿ ಹಿಂದು ಮುಸ್ಲಿಮರ ನಡುವೆ ಭಿನ್ನಮತ ಸೃಷ್ಟಿಸುವಲ್ಲಿ ಯಶಸ್ವಿಯಾದರೆ, ಕಾಂಗ್ರೇಸ್ ಕೂಡ ಈ ಜಯಂತಿಯ ಮುಖೇನ ಮುಸ್ಲಿಮರ ಮತದ ಮೇಲೆ ಕಣ್ಣಿಟ್ಟಿದ್ದು ಸುಳ್ಳಲ್ಲ! ಅಂತು ಈ ಬಾರಿ ಅಸ್ತಿತ್ವದಲ್ಲಿ ಬಂದ ಬಿಜೆಪಿ ಸರಕಾರ ಮತ್ತಷ್ಟು ವಿಭಜನಕಾರಿ ರಾಜಕೀಯಕ್ಕೆ ಮುಂದಾಗಿದ್ದು ಮೊದಲಿಗೆ ಕಾಂಗ್ರೇಸ್ ಸರಕಾರ ಜಾರಿಗೆ ತಂದ ಟಿಪ್ಪು ಜಯಂತಿಯನ್ನು ರದ್ದು ಮಾಡಿತು. ಅದರ ನಂತರ ಇದೀಗ ಅದು ಪಠ್ಯಗಳಿಂದ ಟಿಪ್ಪುವಿನ ಇತಿಹಾಸವನ್ನು ತೆಗೆಯುವ ನಿರ್ಧಾರದ ಬಗ್ಗೆ ತಿಳಿಸಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲಾತಾಣಗಳಲ್ಲಿ, ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. ಬಿಜೆಪಿಯ ವಿಭಜನಕಾರಿ ನೀತಿಗಳ ಬಗ್ಗೆಯೂ, ಇತಿಹಾಸದ ಪುಟಗಳ ತಿರುಚುವಿಕೆ ಮತ್ತು ಅಳಿಸುವಿಕೆಯ ವಿರುದ್ಧ ಆಕ್ರೋಶವು ವ್ಯಾಪಕವಾಗಿ ಚರ್ಚಿಸಲ್ಪಡುತ್ತಿದೆ. ಅದೇ ಬಿಜೆಪಿ ಸರಕಾರ ಮತ್ತೊಂದು ಕಡೆ ಇತಿಹಾಸದ ವಿವಾದಿತ ವ್ಯಕ್ತಿ ವೀರ ಸಾವರ್ಕರ್ ಗೆ “ಭಾರತ ರತ್ನ” ನೀಡಲು ಹೊರಟಿರುವುದು ಕೂಡ ಸಾಮಾಂತರವಾಗಿ ಚರ್ಚೆಯಾಗುತ್ತಿದೆ.

ಇಲ್ಲಿ ನಾವು ಚರ್ಚಿಸಬೇಕಾದ ಅತೀ ಮುಖ್ಯ ವಿಚಾರ, ಟಿಪ್ಪು ಸುಲ್ತಾನ್ ನ ಇತಿಹಾಸವನ್ನು ಬಿಜೆಪಿಯ ಮತ ಬ್ಯಾಂಕ್ ಬಲಿಷ್ಠಗೊಳಿಸುವ ಕಾರಣಕ್ಕೆ ಪಠ್ಯ ಪುಸ್ತಕದಿಂದ ತೆಗೆದು ಹಾಕುವುದರಿಂದ ಯಾವುದೇ ಇತಿಹಾಸವನ್ನು ಅಳಿಸಲು ಸಾಧ್ಯವಾಗುವುದಿಲ್ಲ. ಕ್ರಿ.ಶ 1750 ರಿಂದ 1799 ವರುಷಗಳು ಟಿಪ್ಪುವಿನ ಇತಿಹಾಸವನ್ನು ಚಿರಸ್ಮರಣಿಯವಾಗಿ ಇಡಲಿದೆ. ಆತನ ಕೊಡುಗೆಗಳು ಕೂಡ ಟಿಪ್ಪುವಿನ ಇತಿಹಾಸವನ್ನು ಅಳಿಸಲು ಯತ್ನಿಸುವ ಪ್ರತಿಯೊಬ್ಬನಿಗೂ ಎದುರುಗೊಳ್ಳಲಿದೆ.

ಟಿಪ್ಪು ಒರ್ವ ರಾಜನಾಗಿದ್ದ ಅವನನ್ನು ಒರ್ವ ರಾಜನಾಗಿ ನೋಡುವುದು ಅತೀ ಮುಖ್ಯ. ಆತನ ಆಡಳಿತ ಕಾಲದಲ್ಲಿ ಭಾರತ ದೇಶದ ಪರಿಕಲ್ಪನೆಯೇ ಇರಲಿಲ್ಲ. ಆತ ತನ್ನ ರಾಜ್ಯ ಉಳಿಸಲು ಆತನ ವಿರುದ್ಧವಿದ್ದ ಎಲ್ಲರೊಂದಿಗೆ ಯುದ್ಧ ಮಾಡಿದ್ದಾನೆ. ಯುದ್ಧದ ಸಂದರ್ಭದಲ್ಲಿ ಸಾವು ನೋವು ಸಾಮಾನ್ಯವಾಗಿರುತ್ತದೆ. ಆದರೆ ಆ ಸಂದರ್ಭದಲ್ಲಿ ನಡೆದ ಸಾವು ನೋವನ್ನು ಧರ್ಮದೊಂದಿಗೆ ಹೋಲಿಸುವುದೇ ಮೂರ್ಖತನವಾಗಿದೆ. ಇನ್ನು ಟಿಪ್ಪು ಕ್ರೈಸ್ತರ ವಿರೋಧಿ, ಮತಾಂತರಿ, ದೇವಸ್ಥಾನ ಒಡೆದ ಎಂಬ ಆರೋಪಗಳು ಸಾಕಷ್ಟಿವೆ. ಆದರೆ ಇದ್ಯಾವುದಕ್ಕೂ ಪುರಾವೆಗಳಿಲ್ಲ. ಕೆನರಾ ಕ್ರೈಸ್ತರೊಂದಿಗೆ ಟಿಪ್ಪು ಕಠಿಣವಾಗಿ ನಡೆದುಕೊಂಡದ್ದು ಅವರು ಬ್ರಿಟಿಷರ ಪರವಾಗಿದ್ದರು ಎಂಬ ಕಾರಣಕ್ಕೆ ಎಂಬುವುದು ಇತಿಹಾಸದ ಪುಟಗಳಿಂದ ತಿಳಿಯಲು ಸಾಧ್ಯವಾಗುತ್ತದೆ.

ಇನ್ನು ಟಿಪ್ಪು ಮತಾಂತರಿ, ದೇವಸ್ಥಾನಗಳನ್ನು ಒಡೆದ, ಆತ ಹಿಂದು ವಿರೋಧಿಯೆಂಬುವುದೆಲ್ಲ ಬರೀ ಸುಳ್ಳು. ಯಾಕೆಂದರೆ ಮರಾಠರು ಶೃಂಗೇರಿ ಮಠದ ಮೇಲೆ ದಾಳಿ ಮಾಡಲು ಮುಂದಾದಗ ತನ್ನ ಸೈನ್ಯ ಕಳುಹಿಸಿ ಮಠವನ್ನು ರಕ್ಷಿಸಿದ್ದ. ಅಷ್ಟೇ ಅಲ್ಲ ಶ್ರೀ ಸಚ್ಚಿದಾನಂದ ಭಾರತೀ ಆಚಾರ್ಯರೊಂದಿಗೆ ಟಿಪ್ಪು ಅತ್ಯುತ್ತಮ ಸಂಬಂಧ ಹೊಂದಿದ್ದನು. ಇವರಿಬ್ಬರ ನಡುವೆ ಹಲವಾರು ಪತ್ರ ವಿನಿಮಯ ನಡೆಯುತ್ತಿದ್ದವು. ಇಂದಿಗೂ ಅದರ ಹಿನ್ನಲೆಯನ್ನು https://www.sringeri.net/ ಮಠದ ಅಧಿಕೃತ ವೈಬ್ಸೈಟ್ ನಲ್ಲಿ ಪಡೆಯಬಹುದಾಗಿದೆ. ಅದೇ ರೀತಿ ಟಿಪ್ಪುವನ್ನು ನೆನಸಿಕೊಂಡು ಇಂದಿಗೂ ಕೊಲ್ಲೂರಿನ ಶ್ರೀ ಮೂಕಾಂಬಿಕ ದೇವಸ್ಥಾನದಲ್ಲಿ ‘ಸಲಾಮ್ ಪೂಜೆ’ ನೆರವೇರುತ್ತದೆ. ಹಾಗದರೆ ಪಠ್ಯದಿಂದ ಟಿಪ್ಪು ಇತಿಹಾಸವನ್ನು ಅಳಿಸಲು ಹೊರಟಿರುವ ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರಕಾರಕ್ಕೆ ಈ ಪೂಜೆಯನ್ನು ನಿಲ್ಲಿಸಲು ಅಥವಾ ಶೃಂಗೇರಿ ಮಠದ ಇತಿಹಾಸದಲ್ಲಿ ಟಿಪ್ಪುವಿನ ಅನ್ಯೋನ್ಯತೆಯ ಭಾಗವನ್ನು ಅಳಿಸಲು ಸಾಧ್ಯವೇ ಎಂಬ ಪ್ರಮಾಣಿಕ ಪ್ರಶ್ನೆ ಕೇಳಬೇಕಾಗುತ್ತದೆ. ಟಿಪ್ಪುವಿನ ಆಡಳಿತದ ಅವಧಿಯಲ್ಲಿ ಆತ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದ ಬಗ್ಗೆ ದಾಖಲೆಗಳಿವೆ. ಹಾಗದರೆ ಆ ದೇವಸ್ಥಾನಗಳ ಇತಿಹಾಸವನ್ನು ಅಳಿಸಲು ಸಾಧ್ಯವೇ ಅಥವಾ ಭೌತಿಕವಾಗಿ ದೇವಸ್ಥಾನವನ್ನು ಅಳಿಸಲು ಸಾಧ್ಯವೇ ಎಂಬ ಪ್ರಶ್ನೆಗಳು ಸರಕಾರದ ಮುಂದೆ ಹಾದು ಹೋಗುತ್ತದೆ.

ಟಿಪ್ಪುವಿನ ಕೊಡುಗೆಗಳು ಕೂಡ ಅಮೂಲ್ಯವಾಗಿರುವಂತಹದ್ದು ಆತನ ರಾಕೆಟ್ ತಂತ್ರಜ್ಞಾನ,ರೇಷ್ಮೆ ಕ್ಷೇತ್ರದಲ್ಲಿನ ಕೊಡುಗೆಗಳು, ಕೆರೆ ನಿರ್ಮಾಣ, ಸಾಹಿತ್ಯ ಕ್ಷೇತ್ರದಲ್ಲಿನ ಕೊಡುಗೆ ಹೀಗೆ ಅವನ ಅಗಣಿತ ಸೇವೆಗಳನ್ನು ಕೂಡ ಈ ನಾಡು ಮರೆಯುವಂತಿಲ್ಲ. ಸ್ವತಃ ಭಾರತದ ಸಂವಿಧಾನದ ಮೂಲ ಪ್ರತಿಯ ಪುಟ ಸಂಖ್ಯೆ 144, ಅಧ್ಯಾಯ 16 ರಲ್ಲಿ ಟಿಪ್ಪುವಿನ ಭಾವಚಿತ್ರವಿದೆ ಅದನ್ನು ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಅಳಿಸಲು ಸಾಧ್ಯವೆ. ದೇಶ ವಿದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ, ಮ್ಯೂಸಿಯಮ್ ಗಳಲ್ಲಿ ಟಿಪ್ಪು ಸುಲ್ತಾನಿನ ಇತಿಹಾಸ ಭದ್ರವಾಗಿದೆ ಎಲ್ಲೆಲ್ಲ ನೀವು ಅವನ ಇತಿಹಾಸ ಅಳಿಸಲು ಯತ್ನಿಸುತ್ತೀರಾ ಎಂಬ ಪ್ರಶ್ನೆ ಅತೀ ತೀಕ್ಷ್ಣವಾಗಿಯೇ ಕೇಳಬೇಕಾಗುತ್ತದೆ.

ಆತನ ತಂದೆ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಹೋರಾಡಿದ ನಾಲ್ಕು ಆಂಗ್ಲೋ ಇಂಡಿಯಾನ್ ಯುದ್ಧಗಳು ಜಗತ್ಪ್ರಸಿದ್ಧವಾದವುಗಳು ಅವುಗಳ ಬಗ್ಗೆ ಮಕ್ಕಳು ಕೇಳಿದಾಗ ಅದರ ಬಗ್ಗೆ ನೀವು ಯಾವ ಕಥೆ ಕಟ್ಟುತ್ತೀರಾ. 156 ದೇವಸ್ಥಾನಗಳಿಗೆ ಆತ ನೀಡುತ್ತಿದ್ದ ಸಹಾಯಧನ, ಅರ್ಥಿಕತೆಯ ಸುಧಾರಣೆಯಲ್ಲಿನ ಸಾಧನೆ,ಸ್ವಯಂ ಘೋಷಿತ ಮೇಲ್ವರ್ಗದವರು ದಬ್ಬಾಳಿಕೆಯಿಂದ ಎದೆಯ ಮೇಲೆ ಬಟ್ಟೆ ಹಾಕಲು ತೆರಿಗೆ ವಿಧಿಸಿ ಕೆಳವರ್ಗದ ಮಹಿಳೆಯರನ್ನು ಶೋಚಿಸುತ್ತಿದ್ದಾಗ ಅವರ ವಿಮೋಚನೆ ಮಾಡಿ ಅವರ ಮನದಲ್ಲಿ ಇಂದಿಗೂ ನಾಯಕನಾಗಿರುವ ಟಿಪ್ಪುವಿನ ಇತಿಹಾಸವನ್ನು ನಿಮ್ಮ “ದ್ವೇಷ ರಾಜಕೀಯ” ಮುಂದಿಟ್ಟುಕೊಂಡು ಪಠ್ಯದಿಂದ ಅಳಿಸಿ ಇಲ್ಲವಾಗಿಸುತ್ತೇವೆಂದು ನೀವು ಅಂದುಕೊಂಡರೆ ಅದು ಭ್ರಮೆ ಮಾತ್ರವೇ ಆಗಿದೆ.

1 COMMENT

 1. What will these people get changing in school text will not make any changes .
  History is written in world book .
  For example in London tippu sultan museum is there.

  Tippu was first freedom fighter of india .
  Tiger of mysore ,tiger of Karnataka n tiger of india .
  No one can change the history

LEAVE A REPLY

Please enter your comment!
Please enter your name here