ಪುಸ್ತಕ ವಿಮರ್ಶೆ

  • ಮಹಮ್ಮದ್ ಪೀರ್ ಲಟಗೇರಿ.

ಓದು ವ್ಯಕ್ತಿಯನ್ನು ಚಿಂತನಾಶೀಲನನ್ನಾಗಿಸುತ್ತದೆ.

ಪುಸ್ತಕದ ಮಾತುಕತೆಯು (Book Talk) ಪುಸ್ತಕವನ್ನು ಇತರ ಜನರಿಗೆ ಓದಲು ಮನವೊಲಿಸುವ ಗುರಿಯೊಂದಿಗೆ ಒಂದು ಸಣ್ಣ ಪ್ರಸ್ತುತಿಯಾಗಿದೆ. ಇದು ಪುಸ್ತಕದ ವರದಿ ಅಥವಾ ವಿಮರ್ಶೆ ಅಲ್ಲ.

ಕಾದಂಬರಿಯೂ ಪುಸ್ತಕದ ಉದ್ದದ ಕಾಲ್ಪನಿಕ ಗದ್ಯ ನಿರೂಪಣೆಯೊಂದಿಗೆ ವಿಶಿಷ್ಟವಾಗಿ ಪಾತ್ರ ಮತ್ತು ಕ್ರಿಯೆಯನ್ನು ಸ್ವಲ್ಪ ಮಟ್ಟಿಗೆ ವಾಸ್ತವಿಕತೆಯೊಂದಿಗೆ ಪ್ರತಿನಿಧಿಸುತ್ತದೆ.

ಕುರ್ ಆನಿನ ಮೊದಲ ವಾಕ್ಯವು “ಇಕ್ರಾ” ಅಂದರೆ ಓದಿರಿ ಎಂಬುದಾಗಿದೆ. ಸೃಷ್ಟಿಕರ್ತನು ಸಕಲ ಮಾನವರಿಗೆ ಅಭಿಸಂಬೋಧಿಸಿದ ಪ್ರಥಮ ವಚನವಿದು.

ಪ್ರವಾದಿ ಮುಹಮ್ಮದ್ ಅವರಿಗೆ ದೇವದೂತ ಜಿಬ್ರಾಯಿಲ್ ರವರು ಓದಲು ನಿರ್ದೇಶಿಸಿದ ಮೊದಲ ದೈವಿಕ ವಾಣಿಯಿದು. ಕುರ್ ಆನಿನ ಅಲ್ ಅಲಕ್ ಅಧ್ಯಾಯದ ಮೊದಲ ಐದು ಸೂಕ್ತಗಳಾಗಿದ್ದು ಅವು ಈ ಕೆಳಗಿನಂತಿವೆ.

” ಸಂದೇಶವಾಹಕರೇ ಓದಿರಿ, ನಿಮ್ಮನ್ನು ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ.

ಅವನು ಹೆಪ್ಪುಗಟ್ಟಿದ ರಕ್ತದ ಒಂದು ಪಿಂಡದಿಂದ ಮಾನವನನ್ನು ಸೃಷ್ಟಿಸಿದನು.

ಓದಿರಿ ಮತ್ತು ನಿಮ್ಮ ಪ್ರಭು ಮಹಾ ಉದಾರಿ.

ಅವನು ಲೇಖನಿಯ ಮೂಲಕ ವಿದ್ಯೆ ಕಲಿಸಿದನು.

ಮಾನವನು ತಿಳಿದಿರದಂತಹ ಜ್ಞಾನವನ್ನು ಅವನಿಗೆ ದಯಪಾಲಿಸಿದನು.”

ಪುಸ್ತಕಗಳು ಓದುಗನಿಗೆ ಅನ್ವೇಷಣೆಗೆ ಹಚ್ಚುವ, ತಿಳಿದಿರದ ಮಾಹಿತಿ ನೀಡುವ, ಹೊಸ ವಿಚಾರಗಳಿಗೆ ಚಿಂತನೆಗೆ ದೂಡುವ ಕ್ರಿಯೆಯಾಗಿದೆ.

ಕನ್ನಡದ ಖ್ಯಾತ ಸಾಹಿತಿ ಬೊಳುವಾರು ಮಹಮದ್ ಕುಂಞಿ ರವರು ಬರೆದ ಪ್ರವಾದಿ ಮುಹಮ್ಮದರ ಜೀವನಾಧಾರಿತ ಮೊತ್ತ ಮೊದಲ ಐತಿಹಾಸಿಕ ಕಾದಂಬರಿ “ಓದಿರಿ” ಪುಸ್ತಕವು ಪ್ರವಾದಿ ಮುಹಮ್ಮದ್ ರವರ ಬದುಕು-ಸಂದೇಶವನ್ನು ಕನ್ನಡಿಗರಿಗೆ ಬಹಳ ಸರಳವಾಗಿ ತಿಳಿಸುವಲ್ಲಿ ಸಹಕಾರಿಯಾಗಿದೆ.

ಧರ್ಮಗ್ರಂಥಗಳು ಯಾವುದೇ ಇರಲಿ ಅವುಗಳನ್ನು ಸಮರ್ಥಿಸುವ ಅಥವಾ ವಿರೋಧಿಸುವ ಮೊದಲು ಒಮ್ಮೆಯಾದರೂ ಓದು ಎಂಬ ಪ್ರಥಮ ಸತ್ಯವು ಪ್ರತಿಯೊಬ್ಬರಿಗೆ ಮನವರಿಕೆಯಾಗಬೇಕು ಎಂಬುದೇ ಈ ಪುಸ್ತಕದ ರಚನೆಗೆ ಪ್ರೇರಣೆ ಎಂದು ಲೇಖಕರು ತಿಳಿಸುತ್ತಾರೆ.

ಧರ್ಮ ಪ್ರಚಾರದಲ್ಲಿ ನನಗೆ ಆಸಕ್ತಿಯಿಲ್ಲ ನನಗಷ್ಟು ವಯಸ್ಸೂ ಆಗಿಲ್ಲ‌ ಎನ್ನುತ್ತಾ ಈ ಕಾದಂಬರಿಯ ಬರವಣಿಗೆಯ ಹಿಂದಿರುವ ಆಸೆ ಬಹಳ ಸಣ್ಣದು, ಈ ಪುಸ್ತಕ ಓದುವ ಮೂಲಕ ಪರಸ್ಪರ ಪರಿಚಿತರಾದರೆ ನಮ್ಮೆಲ್ಲರ ಸಣ್ಣ-ಪುಟ್ಟ ದೋಷಗಳು ನಿವಾರಣೆಯಾಗಬೇಕು ಎಂಬುದು ಈ ಕಾದಂಬರಿಯ ಉದ್ದೇಶವೆಂದು ಲೇಖಕರು ತಿಳಿಸುತ್ತಾರೆ.

ಭೂಮಿಯ ಮೇಲೆ ಬದುಕುತ್ತಿರುವ ಎಲ್ಲ ಪಂಗಡಗಳ ಮುಸ್ಲಿಮರು ಪ್ರಶ್ನಾತೀತವಾಗಿ ಅಂತ್ಯಪ್ರವಾದಿಯೆಂದು ನಂಬುವ ಮುಹಮ್ಮದರ ಬದುಕಿನ ಬಗ್ಗೆ ಇತಿಹಾಸದಲ್ಲಿ ದಾಖಲೆಗೊಂಡಿರುವ ಮಾಹಿತಿಗಳನ್ನು ಬಳಸಿಕೊಂಡು ಕನ್ನಡದಲ್ಲಿ ರೂಪಿಸಲಾದ ಮೊತ್ತ ಮೊದಲ ಐತಿಹಾಸಿಕ ಕಾದಂಬರಿ ಇದು.

ಜಾತಿ ಧರ್ಮ ಯಾವುದೇ ಇರಲಿ ಬರಹಗಳಲ್ಲಿ ತಮ್ಮ ನಂಬಿಕೆಗಳು ಮಾತ್ರ ಅಂತಿಮ ಸತ್ಯವೆಂದು ಸ್ಥಾಪಿಸುವುದರಲ್ಲೇ ಧನ್ಯತೆ ಅನುಭವಿಸುವವರಿಗೆ ಮೋಕ್ಷಕ್ಕೆ ಅದೂ ಒಂದು ದಾರಿಯೆಂದು ನಂಬಿದವರಿಗೆ ಓದುಗರು ಮುಖ್ಯರಾಗುವುದೇ ಇಲ್ಲ ಎನ್ನುವ ತಮ್ಮ ಭಿನ್ನಹವನ್ನು ಓದುಗರ ಎದುರಿಗೆ ಪ್ರಸ್ತಾಪಿಸುತ್ತಾರೆ.

ಯಾವುದೇ ಬಗೆಯ ಧರ್ಮ ಪರಿಚಯದ ಬರಹಗಳು ಅನ್ಯ ಧರ್ಮದ ಓದುಗರನ್ನು ಉಚಿತ ವಿತರಣೆಯಾದಾಗಲೂ ಪ್ರೀತಿಯಿಂದ ಓದಿಸಿಕೊಳ್ಳುವುದಿಲ್ಲ ಎಂಬ ವಾಸ್ತವಿಕ ಸತ್ಯವನ್ನು ಪುಸ್ತಕದ ಪ್ರಸ್ತಾವನೆಯಲ್ಲಿ ತಿಳಿಸುತ್ತಾರೆ.

ಧಾರ್ಮಿಕವಾಗಿ ಪೂರ್ವಾಗ್ರಹ ಪೀಡಿತರಾದ ನಾವು, ಹುಟ್ಟಿ ಬೆಳೆದ ಜಾತಿ ಧರ್ಮಕ್ಕೆ ಸಂಬಂಧಿಸಿದ್ದಲ್ಲದ ಪುಸ್ತಕಗಳು ಕಣ್ಣಿಗೆ ಬಿದ್ದಾಗಲೂ ಎತ್ತಿಕೊಳ್ಳುವುದು ಅಪರೂಪ ಎಂಬ ತಮ್ಮ ಅಳಲನ್ನು ಈ ಪುಸ್ತಕದ ಮೂಲಕ ಹಂಚಿಕೊಂಡಿದ್ದಾರೆ.

ಈ ಕೃತಿಯಲ್ಲಿ ಕಾಣಿಸಿರುವ ಘಟನೆಗಳೆಲ್ಲವನ್ನೂ ಇತಿಹಾಸಕಾರರು ಹತ್ತಾರು ಭಾಷೆಗಳಲ್ಲಿ, ನೂರಾರು ಕೃತಿಗಳಲ್ಲಿ ಈಗಾಗಲೇ ದಾಖಲಿಸಿದ್ದಾರೆ, ಅವುಗಳಲ್ಲಿ ಈ ಕಾದಂಬರಿಯ ಬಂಧಕ್ಕೆ ಸರಿಹೋಗುವ ವಿವರಗಳಿಗೆ ಕಥಾ ರೂಪ ನೀಡಲು ಯತ್ನಿಸಿರುವ ಲೇಖಕರ ಪ್ರಯತ್ನ ಶ್ಲಾಘನೀಯ.

ಪ್ರವಾದಿ ವರ್ಯರ ಮಾನವ ಕುಲದ ಮೇಲಿನ ಕಾಳಜಿ ಹಾಗೂ ಸತ್ಯ ಸಂದೇಶದ ಜವಾಬ್ದಾರಿಯ ನಿರ್ವಹಣೆಯೂ ಪ್ರತಿಯೊಬ್ಬ ಮನುಷ್ಯನಿಗೂ ಬದುಕಿನ ಉದ್ದೇಶವನ್ನು ಅರಿಯುವುದಕ್ಕೆ ಪ್ರೇರಣೆಯಾಗಿದೆ.

ಲೇಖಕರು ಸ್ವತಃ ಮುಸ್ಲಿಮರಾಗಿದ್ದು ಪ್ರವಾದಿಯವರ ಪಾವನ ಜೀವನವನ್ನು ಕನ್ನಡಿಗರಿಗೆ ತಲುಪಿಸುವಾಗಲೂ ಅವರ ಮೇಲೆ ಬಹುದೊಡ್ಡ ಹೊಣೆಗಾರಿಕೆ ಇರುತ್ತದೆ. ಕಾರಣ ಪ್ರವಾದಿ ವರ್ಯರ ಪ್ರಾಮಾಣಿಕ ಮತ್ತು ಸತ್ಯಸಂಧತೆಯ ವ್ಯಕ್ತಿತ್ವವನ್ನು ಹಾಗೂ ಎಲ್ಲ ತತ್ವ ಸಿದ್ಧಾಂತಗಳನ್ನು ಮೀರಿದ ಪ್ರವಾದಿ ಅವರ ಬೋಧನೆಗಳು ಮತ್ತು ಉಪದೇಶಗಳನ್ನು ಪರಿಚಯಿಸುವುದು ಬಹಳ ಶ್ರೇಷ್ಠ ಕಾರ್ಯ ಅದನ್ನು ಓದುಗನ ಗ್ರಹಿಕೆಗೆ ಪೂರಕವಾಗಿ ಕಥೆ ಹೆಣೆದಿರುವುದು ವಿಶೇಷ.

ಇಡೀ ಮಾನವ ಕುಲದ ಮೇಲೆ ಪ್ರೇರಣಾತ್ಮಕ ಪರಿಣಾಮ ಬೀರಿದ ಮಾನವತೆಯ ಶ್ರೇಷ್ಠ ವ್ಯಕ್ತಿತ್ವದವರಾದ ಪ್ರವಾದಿ ವರ್ಯರ ಜೀವನ ಓದುಗನ ಮುಂದೆ ಇಡುವಾಗ ಆ ಕಾಲದ ಇಡೀ ಐತಿಹಾಸಿಕ ಚಿತ್ರಣವನ್ನು ಪ್ರಸ್ತುತ ಕಾಲಘಟ್ಟದ ವಾಸ್ತವಿಕತೆಗೆ ಸರಿಹೊಂದುವಂತೆ ಕಾದಂಬರಿಯನ್ನು ನಿರೂಪಿಸಲಾಗಿದೆ. ಕಾದಂಬರಿಯ ಪಾತ್ರಗಳು ಅದರಂತೆ ಓದುಗನಿಗೆ ಸನಿಹವಾಗುತ್ತವೆ.

ಬಹಳ ಜಾಗರೂಕತೆಯಿಂದ ಪ್ರವಾದಿಯವರ ಜೀವನ ಸಂದೇಶವನ್ನು ಪರಿಚಯಿಸುವಲ್ಲಿ ಲೇಖಕರ ನಿರೂಪಣಾ ಶೈಲಿಯ ಜಾಣ ಪ್ರದರ್ಶನವಾಗಿದೆ.

ಓದುವಿಕೆಯು ಪೂರ್ವಾಗ್ರಹ ಪೀಡಿತ ಮತ್ತು ಕಪೋಲಕಲ್ಪಿತ ವಿಚಾರಗಳಿಂದ ಮುಕ್ತಗೊಳಿಸಿ ಚಿಂತಿಸುವ, ವೈಚಾರಿಕ ಮನೋಭಾವವನ್ನು ಬೆಳೆಸುತ್ತದೆ.

ಓದುವುದರಿಂದ ನಮ್ಮಲ್ಲಿನ ವೈಚಾರಿಕ ಮತ್ತು ಸೈದ್ಧಾಂತಿಕ ಚಿಂತನೆಗಳಲ್ಲಿ ವಾಸ್ತವಿಕತೆ ಹಾಗೂ ಪ್ರಸ್ತುತತೆ ಬರುತ್ತದೆ ಆದ್ದರಿಂದ ಓದಿರಿ.

LEAVE A REPLY

Please enter your comment!
Please enter your name here