ಲೇಖಕರು: ಮುಸ್ತಫಾ ಕೆ ಎಚ್
(ಸಂಶೋಧನಾ ವಿದ್ಯಾರ್ಥಿ ಮಂಗಳೂರು ವಿಶ್ವ ವಿದ್ಯಾಲಯ)

(ಶೈಕ್ಷಣಿಕ ವರ್ಷ 2019-20ನೇ ಸಾಲಿನಲ್ಲಿ ಮಂಗಳೂರು ವ್ಯಾಪ್ತಿಯ ತೃತೀಯ ಬಿ.ಎ ಪದವಿ ಕೊರ್ಸುಗೆ ಅಳವಡಿಸಲಾಗಿರುವ ಕನ್ನಡ ಐಚಿಕ ಪಠ್ಯ ‘ಸಾಹಿತ್ಯ ಮೀಮಾಂಸೆ’ಯ ಪಠ್ಯ ಭಾಗ-2 ಕನ್ನಡ ಮಿಮಾಂಸೆಯ ಅಧ್ಯಾಯ 1ನ್ನು ಮಾತ್ರ ಬೋಧಿಸಲು ಹಾಗು ಉಳಿದೆರಡು ಅಧ್ಯಾಯಗಳಾದ ‘ಪ್ರಕ್ರಿಯಾ ಮೀಮಾಂಸೆ’ ಮತ್ತು ‘ಪ್ರಮಾಣ ನಿರಾಕರಣೆ’ಗಳನ್ನು ಮಂಗಳೂರು ವಿಶ್ವ ವಿದ್ಯಾಲಯ ಹಿಂಪಡೆದಿದೆ ಈ ಕುರಿತು ಒಂದು ಪ್ರತಿಕ್ರಿಯ ಬರಹ)

ಆಧುನಿಕ ಸಂದರ್ಭದಲ್ಲಿಯೂ ನಮ್ಮ ಕಾವ್ಯ ಮೀಮಾಂಸೆ ಎಂದು ಬೋಧಿಸುವುದು ಸಂಸ್ಕೃತ ಚಿಂತನಾ ಮಾದರಿಗಳನ್ನೆ. ಮೊಟ್ಟ ಮೊದಲ ಬಾರಿಗೆ ಡಿ ಆರ್ ನಾಗರಾಜ ಅವರು ಅಲ್ಲಮ ಪ್ರಭು ಮತ್ತು ಶೈವಪ್ರತಿಭೆಯ ಮೂಲಕ ಅಲ್ಲಮನ ದಾರ್ಶನಿಕತೆಯನ್ನು ಮೀಮಾಂಸೆಯ ವಿವೇಚನೆಯಲ್ಲಿ ಸಂಸ್ಕೃತದ ಶ್ರೇಷ್ಠತೆಗೆ ಮುಖಾಮುಖಿಯಾಗುತ್ತಾರೆ. ಮುಂದೆ ಕಿರಂ ನಾಗರಾಜ, ನಟರಾಜ ಬೂದಾಳ್, ರಹಮತ್ ತರೀಕೆರೆ, ನಟರಾಜ ಹುಳಿಯಾರ್ ಅಂತವರು ಕನ್ನಡಕ್ಕೆ ಆದ ಕಾವ್ಯ ಮತ್ತು ಸಾಹಿತ್ಯ ಮೀಮಾಂಸೆಯೊಂದನ್ನು ರೂಪಿಸುವ ಕೆಲಸವನ್ನು ತಮ್ಮ ತಾರ್ಕಿಕವಾದ ಸಾಹಿತ್ಯಕ ಚಿಂತನಾ ಮಾದರಿಗಳ ಮೂಲಕ ಮಾಡಿದರು.

ಮೀಮಾಂಸೆ ಎಂಬ ಪರಿಕಲ್ಪನೆಯು ಸರಳೀಕೃತ ಆಯಾಮವನ್ನು ಹೊಂದಿಲ್ಲ. ಮೀಮಾಂಸೆಯ ಮೂಲವು ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಪರಿಭಾಷೆಯಾಗಿದ್ದು ತತ್ವಶಾಸ್ತ್ರದ ಚಿಂತನಾ ಮಾದರಿಗಳನ್ನು ತರ್ಕಬದ್ಧವಾಗಿ ಮಂಡಿಸಲು, ವಿಮರ್ಶಿಸಲು, ವಿಶ್ಲೇಷಿಸಲು ತತ್ವಶಾಸ್ತ್ರೀಯ ಧಾರೆಯನ್ನು ಪೂರ್ವಪಕ್ಷವಾಗಿ ಮಂಡಿಸಿ ತಮ್ಮ ಪಕ್ಷವನ್ನು ಪ್ರತಿಷ್ಠಾಸುವ ಕೆಲಸಕ್ಕೆ ಮೀಮಾಂಸೆ ಎಂದು ಕರೆಯಲಾಗುತ್ತದೆ.
ಕುವೆಂಪು ಅವರು ತೀನಂಶ್ರೀಯವರ ಭಾರತೀಯ ಕಾವ್ಯ ಮೀಮಾಂಸೆ ಕೃತಿಯ ಮುನ್ನುಡಿಯಲ್ಲಿ ಕೆಲವೊಂದು ಜಿಜ್ಙಾಸೆಗಳನ್ನು ಮುಂದಿಡುತ್ತಾರೆ. ಈ ಬಗೆಯ ಆಲೋಚನಗಳು ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆಯನ್ನು ಮರುನಿರ್ವಚನಕ್ಕೆ ಒಳಪಡಿಸುವ ಕಾರ್ಯವನ್ನು ಮಾಡುತ್ತದೆ *ಇದುವರೆಗೆ ಕನ್ನಡ ಸಾಹಿತ್ಯದಲ್ಲಿ ಮೂಡಿರುವ ಕಾವ್ಯ ಮೀಮಾಂಸೆ ಏನಿದ್ದರೂ ಅದೆಲ್ಲ ಸಂಸ್ಕೃತದ ಪಡಿನೆಳಲಂತಿದೆ. ಮುಂದೆ ಬರುವ ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ ಪಾಶ್ಚಮಾತ್ಯ ಪಡಿನೆರಳಲಾದರೆ ಅದಕ್ಕಿಂತಲೂ ಅಪಾಯಕರವಾಗುತ್ತದೆ- ಏಕೆಂದರೆ ತನ್ನತನವನ್ನೇ ಕಳೆದುಕೊಳ್ಳುವ ಸಂಭವವಿರುವುದರಿಂದ. ನಮ್ಮ ಮುಂದಿನ ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆಗಳು ಪಾಶ್ಚಮಾತ್ಯ ಮತ್ತು ಭಾರತೀಯ ಕಾವ್ಯಮೀಮಾಂಸೆಗಳಿಂದ ಮಾತ್ರವಲ್ಲದೆ ತತ್ತ್ವಶಾಸ್ತ್ರ, ಯೋಗವಿಜ್ಞಾನ, ಸೌಂದರ್ಯ ಮೀಮಾಂಸೆ ಮತ್ತು ಮನಶ್ಯಾಸ್ತ್ರ- ಇವುಗಳಿಂದಲೂ ಬೆಳಕು ಪಡೆದು ಧೀರವಾಗಿ ಸ್ವತಂತ್ರವಾಗಿ ಪೂರ್ಣದೃಷ್ಟಿಯ ಕಡೆಗೆ ಮುನ್ನಡೆಯಬೇಕಾಗುತ್ತದೆ (ತೀನಶ್ರೀ, ಭಾರತೀಯ ಕಾವ್ಯ ಮೀಮಾಂಸೆ)*

ಜಿ ಎಸ್ ಶಿವರುದ್ರಪ್ಪನವರ ಪ್ರಕಾರ ಸಂಸ್ಕೃತ ಸಾಹಿತ್ಯದಲ್ಲಿ ಕಾವ್ಯಾಂತರ್ಗತ ಕಾವ್ಯಚರ್ಚೆಯೊಂದು, ಕನ್ನಡದಲ್ಲಿರುವಂತೆ ಒಂದು ಪರಂಪರೆಯಾಗಿ ಬೆಳೆದಿಲ್ಲ. ಇದು ಬಹಶಃ ಕನ್ನಡಕ್ಕೇ ವಿಶಿಷ್ಟವಾದದ್ದು. ಯಾಕೆಂದರೆ ಸಂಸ್ಕೃತದಲ್ಲಿ ಕಾವ್ಯ ನಿರ್ಮಿತಿಯೇ ಬೇರೆ, ಅಲಂಕಾರಶಾಸ್ತ್ರವೇ ಬೇರೆ. ಇನ್ನೂ ಆಳವಾದ ಅಧ್ಯಯನದಿಂದ ಕನ್ನಡಕ್ಕೆ ತನ್ನದೇ ಆದ ಸ್ವತಂತ್ರವಾದ ಕಾವ್ಯ ಚಿಂತನೆಗಳೇನಾದರೂ ಇವೆಯೆ ಎಂಬ ಶೋಧನೆ ನಡೆಯಬೇಕಾಗಿದೆ. ಹಾಗೆಯೇ ವಿವಿಧ ಪ್ರಾದೇಶಿಕ ಸಾಹಿತ್ಯಗಳು ಸಂಸ್ಕೃತಕ್ಕೆ ಭಿನ್ನವಾದ ಹಾಗೂ ಸಮಾನಾಂತರವಾದ ಕಾವ್ಯ ಚಿಂತನೆಗಳನ್ನೇನಾದರೂ ಕಟ್ಟಿ ಕೊಂಡಿವೆಯೆ ಎಂಬ ಕೆಲಸ ನಡೆಯಬೇಕಾಗಿದೆ. ಈಗ ನಾವು ನಿಜವಾದ ಅರ್ಥದ ‘ಭಾರತೀಯ ಕಾವ್ಯ ಮೀಮಾಂಸೆಯನ್ನು ಗುರುತಿಸಲು ಸಾಧ್ಯವಾಗಬಹುದು. ಅಲ್ಲಿಯವರೆಗೂ ‘ಸಂಸ್ಕೃತ ಕಾವ್ಯ ಮೀಮಾಂಸೆಯೆ’ ಭಾರತೀಯ ಕಾವ್ಯ ಮೀಮಾಂಸೆ ಎಂಬ ಭ್ರಮೆಯಿಂದ ಪಾರಾಗಲು ಸಾಧ್ಯವಿಲ್ಲ (ನಟರಾಜ ಬೂದಾಳ್. ಎಸ್, 2016, ಪುಟ-10)

ಅಲ್ಲಮ, ನಾಗಾರ್ಜುನ, ವಚನಕಾರರು, ಹರಿಹರ ಮುಂತಾದವರನ್ನು ನಮ್ಮ ಕನ್ನಡದ ಮೀಮಾಂಸೆಯ ವಕ್ತಾರರರಾಗಿ ಗುರುತಿಸುವ ಅನಿವಾರ್ಯತೆ ಇದೆ. ಮಂಟೇಸ್ವಾಮಿ, ಮಲೆಮಾದೇಶ್ವರ, ಜುಂಜಪ್ಪನ ಕಾವ್ಯವಾಹಿನಿಗಳು ನಮ್ಮ ನೆಲೆದ ಕಾವ್ಯಮೀಮಾಂಸೆಯ ಬಹುಮುಖ್ಯ ಪ್ರತಿಕ್ರಿಯೆಯಾಗಿದೆ. ಅವಧೂತ ಪರಂಪರೆ, ಆರೂಡ ಸಂಸ್ಕೃತಿಗಳು ನಮ್ಮ ತನವನ್ನು ಬಲಿಷ್ಠವಾಗಿಸುತ್ತಾ ಸಾಗಿದೆ.
ಅಲ್ಲದೆ ಬೌದ್ಧ ದಾರ್ಶನಿಕತೆಯ ಮೂಲಕ ಕನ್ನಡ ಮೀಮಾಂಸೆಯನ್ನು ಕಟ್ಟಬಹುದಾದ ಸಾಧ್ಯತೆ ಇದೆ ಎಂಬುದನ್ನು ನಟರಾಜ್ ಬೂದಾಳ್ ಅವರು ಮುಂದಿಡುತ್ತಾರೆ. ಮಹಾಯಾನ, ಸಿದ್ಧ, ನಾಥ, ದೈತ, ದರ್ಶನಗಳು ಮೀಮಾಂಸೆಯ ಪ್ರಸ್ಥಾನಕ್ಕೆ ಆಕರವಾಗಬಲ್ಲವು ಎಂಬುದನ್ನು ಅವರು ವಿವೇಚಿಸುವ ಕಾರ್ಯವನ್ನು ಮಾಡಿದ್ದಾರೆ. ಜೈನ, ಶೈವ, ಚಾರ್ವಾಕ ಆಯಾಮಗಳು ಇದಕ್ಕೆ ಪೂರಕವಾಗಿದೆ.

ಜೈನರ ಅನೇಕಾಂತವಾದ ಮೂಲಕ ಕನ್ನಡ ಪ್ರಜ್ಞೆಯನ್ನು ಮುಂದಿಟ್ಟರೆ, ಸಂಸ್ಕೃತ ಕಾವ್ಯಮೀಮಾಂಸೆಯು ಅನೇಕಾಂತವಾದದ ವಿರುದ್ಧ ದಿಕ್ಕಿನಲ್ಲಿ ಚಲಿಸುವ ರಸ ಧ್ವನಿ, ಔಚಿತ್ಯ ನಿರೂಪಣೆಯನ್ನು ರೂಪಿಸುತ್ತಾ ಸಾಗುತ್ತದೆ. ಕನ್ನಡದ ಆರಂಭಿಕ ಕಾವ್ಯ ವಿನ್ಯಾಸಗಳು (ಪಂಪ, ರನ್ನ, ಜನ್ನ) ಅನೇಕಾಂತವಾದದ ತಳಹದಿಯಲ್ಲಿದೆ ಎಂಬುದನ್ನು ಗಮನಿಸಬೇಕಾಗಿದೆ. *ಜೈನರ ಅನೇಕಾಂತವಾದ ಕನ್ನಡದ ಕಾವ್ಯ ಮೀಮಾಂಸೆಯ ಪ್ರಧಾನ ನಿಲುವುಗಳಲ್ಲಿ ಒಂದು. ಅದು ವಸ್ತುನಿಷ್ಠತೆಯಿಂದ ವ್ಯಕ್ತಿನಿಷ್ಠತೆಯೆಡೆಗಿನ ಮೊದಲ ಪ್ರಮಾಣ. ಇಲ್ಲಿ ಪೂರ್ಣ ಸತ್ಯವೆನ್ನುವುದು ಇಲ್ಲ; ಎಲ್ಲವೂ ಆಂಶಿಕವಾಗಿ ಮಾತ್ರ ಸತ್ಯ; ಎನ್ನುವ ನಿಲುವು ಸಿದ್ಧಗೊಂಡು ಇದೆ ಮತ್ತು ಎಲ್ಲದರ ಹಿಂದೆ ಒಂದೇ ಇದೆ ಎನ್ನುವ ಏಕಮೂಲವಾದವನ್ನು ನಿರಾಕರಿಸುತ್ತದೆ. ಲೋಕವನ್ನು ಏಕವಾಗಿ ಗ್ರಹಿಸಲು ಸಾಧ್ಯವಿಲ್ಲವೆಂಬ ನಿಲುವು ಅನೇಕ ಪರಿಣಾಮಗಳನ್ನುಂಟು ಮಾಡುತ್ತದೆ (ನಟರಾಜ ಬೂದಾಳ್, ಎಸ್, 2016, ಪುಟ- 20-21)

ಹಾಗೇ ನೋಡಿದರೆ ಬಹು ಮತ್ತು ಬಹುತ್ವ ಸಂಸ್ಕೃತಿಗಳ ಸಾಹಿತ್ಯಕ ತಳಹದಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಕನ್ನಡಕ್ಕೇ ಆದ ಕಾವ್ಯಮೀಮಾಂಸೆ ಅತ್ಯಂತ ಅಗತ್ಯ. ಕೇವಲ ಬೌದ್ಧದಾರ್ಶನಿಕತೆಯಿಂದ ಕನ್ನಡ ಚಿಂತನಾಧಾರೆಯನ್ನು ನೋಡಲಾಗಿದೆ ಎಂಬ ವೈದಿಕ ಕೂಗುಮಾರಿಗಳ ಮನೋಭೂಮಿಕೆಯನ್ನು ಮರುಪರಿಶೀಲನೆಗೆ ಒಳಪಡಿಸಬೇಕು. ಆಧುನಿಕ ಕನ್ನಡ ಕಾವ್ಯವನ್ನು ಯಾವ ಮೀಮಾಂಸೆಯ ತಳಹದಿಯಲ್ಲಿ ನೀವುಗಳು ವಿವೇಚಿಸುತ್ತೀರಿ. ಹೋಗಲಿ ಚಂಪೂ, ವಚನ, ರಗಳೆ ಆಯಾಮವನ್ನು ಭಾರತೀಯ ಎನ್ನುವ ಸಂಸ್ಕೃತ ಮೀಮಾಂಸೆಯಿಂದ ಮೌಲ್ಯಮಾಪನಗೊಳಿಸಲು ಸಾಧ್ಯವೆ? ಸಾಧ್ಯವಾದರೆ ಅದು ಹೇಗೆ? ಪೂರ್ಣಪಠ್ಯಗಳನ್ನು ಅರ್ಥಮಾಡಿಕೊಳ್ಳಲು ಕಾವ್ಯ ವಿನ್ಯಾಸವನ್ನು ಬಗೆಯಲು ಕೇವಲ ಸಂಸ್ಕೃತ ಮೀಮಾಂಸೆಯೊಂದರ ಟೂಲ್ ಗಳು ಸಾಕೇ? ದೇವನೂರು ಅವರ ಕುಸುಮಬಾಲೆ ಕಥನ ಕಾವ್ಯವೊಂದರ ಆಯಾಮವನ್ನು ಹೊಂದಿದೆ ಅದನ್ನು ಹೇಗೆ ನಿಮ್ಮ ಸಂಸ್ಕೃತ ಮೀಮಾಂಸೆಯಿಂದ ಅರ್ಥಮಾಡಿಕೊಳ್ಳಲು ಸಾಧ್ಯ? ಕನ್ನಡ ಜನಪದವನ್ನು, ಜನಸಂಸ್ಕೃತಿಯ ಆಳದಲ್ಲಿ ಬೇರೂರಿರುವ ಜೀವನ ಕ್ರಮಗಳನ್ನು ಗ್ರಹಿಸಲು ಸಂಸ್ಕೃತದ ಕಾವ್ಯ ಮೀಮಾಸೆ, ಜೀವನ ಮೀಮಾಂಸೆಯಿಂದ ಸಾಧ್ಯವಾಗುದಾದರೆ ಹೇಳಿಬಿಡಿ. ಒಪ್ಪಿಕೊಳ್ಳೋಣ. ಇಲ್ಲ ಕನ್ನಡದ ಜನಪರ ಜಾಯಮಾನವನ್ನು ಸೆಕ್ಯುಲರಿಸಂ ನಿರೂಪಣೆಗಳನ್ನು ಒಪ್ಪಿಕೊಂಡ ಚಿಂತನಾಧಾರೆಯ ಕಡೆಗೆ ಚಲಿಸೋಣ.

LEAVE A REPLY

Please enter your comment!
Please enter your name here