ಯೋಗೇಶ್ ಮಾಸ್ಟರ್
(ಖ್ಯಾತ ಬರಹಗಾರರು ಮತ್ತು ಸಾಮಾಜಿಕ ಹೋರಾಟಗಾರರು)

ಮನುಷ್ಯ ಒಂದು ಸಾಮಾಜಿಕ ಪ್ರಾಣಿ ಎಂಬ ಅರಿವು ಉಂಟಾದಾಗಿನಿಂದಲೂ ಮಾನವನ ಸಾಮಾಜಿಕ ಇತಿಹಾಸದಲ್ಲಿ ಒಂದು ಆದರ್ಶ ಸಮಾಜವನ್ನು ಕಟ್ಟಿಕೊಳ್ಳುವ ಆಶಯ ಮತ್ತು ಕಾಳಜಿ ಸಾಮುದಾಯಿಕವಾಗಿಯೇ ಇದೆ.
ಆದರ್ಶ ಎಂದರೆ ಸಾಧಿಸಲು ಸಾಧ್ಯವಾಗದ್ದನ್ನು ಸಾಧಿಸುವುದು ಎಂತಲೋ, ಕಲ್ಪನೆ ಮತ್ತು ಭ್ರಮೆಗಳಿಂದ ಕೂಡಿರುವುದು ಎಂತಲೋ, ನಮಗಾಗದಿರುವುದನ್ನು ಬಯಸುವುದು ಎಂತಲೋ ಅಂದುಕೊಳ್ಳುವುದು ಬೇಡ. ಹೀಗಿದ್ದರೆ ಚೆನ್ನ ಎಂಬಷ್ಟು ಸರಳ ದೃಷ್ಟಿಯಿಂದ ಆದರ್ಶ ಎಂಬುದನ್ನು ಸ್ವೀಕರಿಸೋಣ.
ಇಲ್ಲಿ, ಆದರ್ಶ ಸಮಾಜ ಎಂದರೆ ಸೀಮಿತ ವಲಯದಲ್ಲಿರುವ ಎಲ್ಲಾ ಮನುಷ್ಯರು ಪರಸ್ಪರ ಗೌರವದಿಂದ, ನೆಮ್ಮದಿ, ಸೌಹಾರ್ದ, ಸೌಕರ್ಯ ಮತ್ತು ಸೇವೆಗಳಿಂದ ಒಟ್ಟಾಗಿ ಸಂತೋಷದಿಂದ ಬಾಳುವುದಷ್ಟೇ ಆಗಿದೆ.
ಮನುಷ್ಯನ ನಾಗರಿಕ ಸಮಾಜವು ಈ ದಿನದವರೆಗೆ ವಿಕಾಸವಾಗಲು ಅದೆಷ್ಟೋ ಮಿಲಿಯನ್ ವರ್ಷಗಳನ್ನು ತೆಗೆದುಕೊಂಡಿದ್ದರೂ ಅಂತಹ ಆದರ್ಶ ಸಮಾಜವನ್ನು ಸಂಪೂರ್ಣವಾಗಿ ಇಂದಿಗೂ ಕಾಣಲಾಗದೇ ಇರುವುದು ಏಕೆ?
ಅಂತಹ ಆದರ್ಶ ಸಮಾಜವನ್ನು ಬದುಕಲು, ಸಮಗ್ರ ಬದುಕನ್ನು ಕಟ್ಟಿಕೊಳ್ಳಲು ಭೂಮಿಯ ಮೇಲೆ ಹುಟ್ಟಿರುವ, ಅತ್ಯುತ್ತಮವೆನಿಸಬಹುದಾದಂತಹ ಎಲ್ಲಾ ಪರಿಕಲ್ಪನೆಗಳನ್ನು ಬಳಸಿಕೊಳ್ಳುವ ಪ್ರಯೋಗಗಳಾದವು. ಅಂತಹ ಸಾಧ್ಯತೆಗಳ ಪ್ರತಿಫಲನಗಳೇ ಧರ್ಮ, ಸಂಸ್ಕೃತಿ, ನೈತಿಕತೆ ಮತ್ತು ಪರಂಪರೆ ಇತ್ಯಾದಿಗಳು. ದುರದೃಷ್ಟವಶಾತ್ ಮಾನವನ ಬದುಕಿಗೆ ಸಂತೋಷ ಮತ್ತು ನೆಮ್ಮದಿಯನ್ನು ನೀಡುವ ಆಶಯ ಹೊಂದಿದ್ದ ಸುಂದರ ಪರಿಕಲ್ಪನೆಗಳೆಲ್ಲಾ ಸಂಘರ್ಷಕ್ಕೆ ಕಾರಣವಾಗಿದ್ದು, ಅದರಿಂದ ಸಂತೋಷ, ನೆಮ್ಮದಿ, ಸೌಹಾರ್ದ ಮತ್ತು ಸೌಕರ್ಯಗಳನ್ನು ಕಳೆದುಕೊಳ್ಳುವಂತಾಗಿದೆ. ಅದೇ ಈ ವಿಷಯದ ಕುರಿತಾದ ಬರವಣಿಗೆಯ ಕಾರಣವೂ ಆಗಿದೆ.

ದೇವರು, ಧರ್ಮ, ಸಂಸ್ಕೃತಿ ಮತ್ತು ನೈತಿಕತೆ ಇವುಗಳನ್ನೆಲ್ಲಾ ಮೀರಿ ಮತ್ತೊಂದನ್ನು ನಾವು ತುರ್ತಾಗಿ ಗುರುತಿಸಬೇಕಾಗಿದೆ. ಮನುಷ್ಯನ ಸಣ್ಣ ಮತ್ತು ದೊಡ್ಡ ಗುಂಪುಗಳಾದ ಧರ್ಮ, ದೇಶ, ಸಂಸ್ಕೃತಿ, ರಾಜಕೀಯ; ಇವುಗಳೆಲ್ಲಾ ಬಹಳ ಸೂಕ್ಷ್ಮವೂ ಮತ್ತು ಪ್ರಚೋದಕವಾಗಿ ಮಾರ್ಪಾಟಾಗಿರುವುದರಿಂದ ಇವುಗಳಿಗೆ ಮರ್ಮಾಘಾತವಾಗದಂತೆಯೇ ಒಂದು ದೃಷ್ಟಿಯನ್ನು ಹೊಂದಬೇಕಿದೆ. ಅದನ್ನು ದೃಷ್ಟಿ ಎನ್ನುವುದೋ, ವಿಚಾರ ಎನ್ನುವುದೋ, ಪ್ರಸ್ತುತತೆ ಎನ್ನುವುದೋ, ವಸ್ತು ಎನ್ನುವುದೋ ಒಟ್ಟಾರೆ ಒಂದೇನೋ ಬೇಕಿದೆ. ಕನಿಷ್ಟಪಕ್ಷ ಒಂದು ಪ್ರಾಮಾಣಿಕ ಪ್ರಯೋಗಕ್ಕಾದರೂ ಒಂದೇನೋ ಬೇಕಿದೆ. ಅಲ್ಪ ಕಾಲಕ್ಕೋ, ದೀರ್ಘಕಾಲಕ್ಕೋ, ಒಟ್ಟಾರೆ ಒಂದಷ್ಟು ಸಮಯಕ್ಕೆ ನಾವು ನಮ್ಮ ಎಲ್ಲಾ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಿಕೊಂಡು, ನಮ್ಮ ಪ್ರತಿಭೆ, ಯುಕ್ತಿ ಮತ್ತು ಭಕ್ತಿಗಳನ್ನೆಲ್ಲಾ ಪರಿಗಣಿಸಿಕೊಂಡು, ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು, ರೂಢಿ ಮತ್ತು ಪೂರ್ವಾಗ್ರಹಗಳಿಂದ ಹೊರಬಂದು, ಅಹಂಕಾರ ಮತ್ತು ಗೆಲುವು ಹಾಗೂ ಸೋಲುಗಳ ವಿಷಯದಲ್ಲಿ ನಿರ್ಲಿಪ್ತರಾಗಿದ್ದು ಒಂದು ದಿಕ್ಕಿನಲ್ಲಿ ಕೆಲಸ ಮಾಡಬೇಕಿದೆ.

ಇಷ್ಟೆಲ್ಲಾ ನಿರ್ಬಂಧಗಳಿಂದ ಕೂಡಿದ್ದು, ಅಷ್ಟೊಂದು ಶ್ರದ್ಧೆಯನ್ನು ಬೇಡುತ್ತಾ ತನ್ನ ಕೇಂದ್ರದಲ್ಲಿರಿಸಿಕೊಳ್ಳುತ್ತಿರುವ ವಸ್ತುವೆಂದರೆ ಅದು ‘ಮಗು’.
ಹೌದು ಮಗುವೇ! ಮಗುವನ್ನು ನಮ್ಮ ಚಿಂತನೆಗಳ, ಚಟುವಟಿಕೆಗಳ, ನಂಬಿಕೆಗಳ, ಸಂಪ್ರದಾಯಗಳ, ರಾಜಕೀಯ ವಿದ್ಯಮಾನಗಳ, ಸಾಮಾಜಿಕ ವ್ಯವಸ್ಥೆಗಳ, ಶಿಕ್ಷಣದ, ಕುಟುಂಬದ, ನೈತಿಕತೆಯ, ದೇಶದ, ಭವಿಷ್ಯದ, ಸಂಶೋಧನೆಗಳ, ಆವಿಷ್ಕಾರಗಳ, ಪೀಳಿಗೆಗಳ ಕೇಂದ್ರ ದೃಷ್ಟಿಯಾಗಿಟ್ಟುಕೊಳ್ಳಬೇಕು. ಆಗ ವ್ಯಕ್ತಿಯೊಬ್ಬ ಆದರ್ಶ ಅಥವಾ ಮಾದರಿ ವ್ಯಕ್ತಿಯಾಗಬಲ್ಲ. ಒಂದು ಕುಟುಂಬ ಮಾದರಿ ಕುಟುಂಬವಾಗಬಹುದು. ಹಾಗೆಯೇ ಸಮಾಜ, ವ್ಯವಸ್ಥೆ, ಸಂಸ್ಕೃತಿ, ನೈತಿಕತೆ, ದೇಶ, ಭವಿಷ್ಯ, ಆವಿಷ್ಕಾರ, ಸಂಶೋಧನೆ ಮತ್ತು ಪೀಳಿಗೆಗಳೆಲ್ಲವೂ ಆದರ್ಶಪ್ರಾಯವಾಗಿ ಮಾದರಿಯಾಗಬಹುದು.
ಓ, ಕ್ಷಮಿಸಿ, ನಾನು ಶಿಶುವಾದಿಯಲ್ಲ. ನಾನು ಮೇಲೆ ಹೇಳಿರುವಂತಹ ಮಾತುಗಳನ್ನು ಸಮರ್ಥಿಸಲು ಮನುಕುಲದ ಎಲ್ಲಾ ವಿಷಯಗಳನ್ನು ಹೇಗಾದರೂ ಮಾಡಿ ಶಿಶುವಿಗೆ ತಳುಕು ಹಾಕುವ ಸಾಹಸ ಮಾಡುವುದಿಲ್ಲ. ಆದರೆ, ಮನುಕುಲಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳೂ ಮಗುವಿನಿಂದ ಪ್ರಾರಂಭವಾಗುತ್ತವೆ ಎಂದು ಮನವರಿಕೆ ಹೊಂದಿದ್ದೇನೆ. ಹಾಗಾಗಿ ಶಿಶುಪ್ರಧಾನ ಸಮಾಜದ ಪರಿಕಲ್ಪನೆ ಮತ್ತು ಆಲೋಚನೆ ನನ್ನದು.

– ಮುಂದುವರಿಯುವುದು.

LEAVE A REPLY

Please enter your comment!
Please enter your name here