ಚಿತ್ರ ವಿಮರ್ಶೆ

ಎಂ ಅಶೀರುದ್ದೀನ್ ಆಲಿಯಾ, ಮಂಜನಾಡಿ

ಇತ್ತೀಚಿಗೆ ಅಮೇಜ್ಆನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡು ಸುದ್ದಿಮಾಡಿದ್ದ ಹಲಾಲ್ ಲವ್ ಸ್ಟೋರಿ (Halal Love story) ಎಂಬ ಮಲೆಯಾಳಿ ಸಿನೆಮಾ. ಚಿತ್ರ ಜಗತ್ತಿನಲ್ಲಿ ಸಣ್ಣ ಬದಲಾವಣೆಯ ಸಂಚಲನ ಮೂಡಿಸಿದೆ. ಸುಡಾನಿ ಫ್ರಮ್ ನೈಜೀರಿಯಾ ಎಂಬ ಸಿನಿಮದ ಮೂಲಕ ಪ್ರಖ್ಯಾತಗೊಂಡ ನಿರ್ದೇಶಕ ಝಕರಿಯರ ಎರಡನೆಯ ಚಿತ್ರ. ಟ್ರೈಲರ್ ನಂತೆ ಸಿನಿಮ ನಿರೂಪಣೆ ಕೂಡ ಚಂದವಾಗಿ ಮೂಡಿ ಬಂದಿದೆ.

ಸಿನಿಮಾ, ಹರಾಮ್ ನಿಷಿದ್ಧ ಎಂದು ಹಲವು ಕಾಲದಿಂದ ನಂಬಿಕೆಯಿರಿಸಿದ್ದ ಮುಸ್ಲಿಂ ಸಮುದಾಯದಲ್ಲಿನ ಇಸ್ಲಾಮಿ ಸಂಘಟನೆಯ ಸದಸ್ಯರಿಬ್ಬರು ಸೇರಿ ಸಿನೆಮ ನಿರ್ಮಿಸುವ ಕಥೆ. ಸರ್ವೇ ಸಾಮಾನ್ಯವಾಗಿರುವ ಸಿನಿಮಾದೊಳಗೊಂದು ಸಿನಿಮಾವಾಗಿ ಮಾತ್ರ ಇದು ಬಾಕಿ ಉಳಿಯದೆ, ಸಾಮಾಜಿಕ, ರಾಜಕೀಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಷಯಗಳನ್ನು ಸಿನಿಮಾ ಚರ್ಚಿಸುತ್ತದೆ. ಜನರನ್ನು ರಂಜಿಸಲು ಅಶ್ಲೀಲ ಮುಖ ಹೊತ್ತ ಸಿನಿಮಾ ಹೇರಳವಾಗಿ ಬಿಡುಗಡೆಗೊಳ್ಳುವ ಕಾಲದಲ್ಲಿ ಅದಕ್ಕೆ ವ್ಯತಿರಿಕ್ತವಾದ ಸಾಮಾಜಿಕ ಬದಲಾವಣೆಯ ಸಂದೇಶವನ್ನು ನೀಡುವ ಒಂದು ಹೊಸ ರೀತಿಯ ಸಿನೆಮಾ ತಯಾರಿಸಬೇಕು ಎಂದು ಹೊರಟ ಕೆಲವು ಜನರ ಜೀವನವೇ ಮೂಲ ಕಥಾವಸ್ತು.

2000 ಇಸವಿಯ ಆರಂಭದಲ್ಲಿ ಕೇರಳದಲ್ಲಿ ಹೋಮ್ ಸಿನಿಮ ಅಥವಾ ಟೆಲಿ ಫಿಲಂ ಮಲೆಯಾಳಿ ಮನಸ್ಸಿನಲ್ಲಿ ಹೆಚ್ಚು ಪ್ರಭಾವ ಬೀರಿತ್ತು. ಸಾಮಾಜಿಕ, ಕೌಟುಂಬಿಕ ವಿಷಯಗಳ ಜೊತೆಗೆ ವಿದೇಶಿ ಮಲೆಯಾಳಿಗರ ಕಷ್ಟಗಳನ್ನು ವಿವರಿಸುವ ಸಿನಿಮಾಗಳಾಗಿದ್ದವು. ಸಣ್ಣ ಬಜೆಟ್ ನಲ್ಲಿ ಒಂದು ಗಂಟೆ ಸಮಯದ ಈ ಸಿನಿಮ, ಗಲ್ಫ್ ಮಲೆಯಾಳಿಗರನ್ನು ಹೆಚ್ಚು ಆಕರ್ಷಿಸಿತು. ಅಳಿಯನೂರು ಫ್ರೀ ವೀಸಾ, ಪೆರೆದನ್ ತಿರಿಚಿ ವರುನ್ನು, ಪಾದಿಯಾತ್ರೆಕ್ಕೋರು ಟಿಕೆಟ್, ವರನೇ ವಿಲ್ಕನುಂಡು, ನಷ್ಟ ಪರಿಹಾರಂ ಹೀಗೆ ಹಲವು… ಇದರ ಹಿಂದೆ ಸಲಾಂ ಕೊಡಿಯಾತ್ತೂರ್ ಎಂಬ ನಿರ್ದೇಶಕನ ಶ್ರಮ ಸ್ಮರಣೀಯ.

“ಹಲಾಲ್ ಲವ್ ಸ್ಟೋರಿ” ಎಂಬ ಟೈಟಲ್ ಈ ಸಿನೆಮಕ್ಕೆ ಹೆಚ್ಚಿನ ಮೆರುಗು ನೀಡುತ್ತದೆ.
ಕೇವಲ ಪ್ರೀತಿ ಪ್ರೇಮದ ಕಥೆಯಾಗದೆ ಹಲಾಲ್ (ಧಾರ್ಮ ಸಮ್ಮತ) ಯಾವುದು? ಹರಾಮ್ (ನಿಷಿದ್ಧ) ಯಾವುದು? ಎಂಬುವುದನ್ನು ತಿಳಿಸುತ್ತಾ, ಸಂಕಲ್ಪ ಶುದ್ದಿಯಿಂದಲೇ ಮನುಷ್ಯನಿಗೆ ಶುದ್ಧನಾಗಲು ಸಾಧ್ಯವೆಂದು ಸಿನಿಮದ ಆರಂಭದ ಬೋಧನೆಯಿಂದ ವ್ಯಕ್ತವಾಗುತ್ತದೆ. ಸಿನಿಮಾಕ್ಕಾಗಿ ಹಣ ಸಂಗ್ರಹಿಸುವಾಗ ಬಡ್ಡಿಯ ಹಣವನ್ನು ಉಪಯೋಗಿಸಿ ಎಂಬ ಬೇಡಿಕೆಯನ್ನು ತಿರಸ್ಕರಿಸಿ ” ಮಸೀದಿಗಾಗಿ ನೀವು ಆ ಹಣವನ್ನು ನೀಡುವಿರಾ ?” ಎಂಬ ತಾವುಫೀಕ್ (ಶರಫುದ್ದೀನ್) ಕೇಳುವ ಪ್ರಶ್ನೆಗೆ ಹೆಚ್ಚು ಪ್ರಸಕ್ತಿಯಿದೆ. ಹಲಾಲ್ ಆದ ಹಣವನ್ನು ಮಾತ್ರ ಸಿನಿಮಾಕ್ಕೆ ಬಳಸುತ್ತೇವೆ ಎಂದು ಹೇಳುವಾಗ ಸಿನಿಮ ಹರಾಮ್ ಎಂಬ ಇಸ್ಲಾಮೀ ಮೂಲಭೂತವಾದಿಗಳ ಕಲ್ಪನೆಯನ್ನು ಪ್ರಾರಂಭದಲ್ಲೇ ತೊಡೆದು ಹಾಕಲಾಗುತ್ತದೆ.

ಸಿನಿಮ, ಪ್ರತಿನಿಧಿಸಿದ ಸಂಘಟನೆಯೂ ವಸಾಹತು ಶಾಹಿಯನ್ನು ವಿರೋಧಿಸುತ್ತದೆ ಜಾರ್ಜ್ ಬುಷ್ ನ ಯುದ್ಧ ನೀತಿಯ ವಿರುದ್ಧ ಪ್ರತಿಭಟಿಸುತ್ತದೆ. ಬೀದಿ ನಾಟಕಗಳನ್ನು ಹಮ್ಮಿಕೊಳ್ಳುತ್ತದೆ. “ಇದ್ ಬಾಗ್ದಾದ್ ಆನೆನ್ನಮ್ಮ ಪರಂಜ ಒರರಭಿಕದಾಯಿಲೆ ಬಾಗ್ದಾದ್” ( ಇದು ಬಾಗ್ದಾದ್ ಆಗಿದೆ ನನ್ನ ತಾಯಿ ಹೇಳಿದ ಒಂದು ಆರಬಿ ಕಥೆಯ ಬಾಗ್ದಾದ್ ) ಎಂಬ ಮುರುಗನ್ ಕಟಕಡರ ಪ್ರಶಸ್ತ ಕವನದೊಂದಿಗೆ ಅಮೇರಿಕ ಇರಾಕ್ ಮೇಲೆ ನಡೆಸಿದ ಸಮರವನ್ನು ಪ್ರಶ್ನಿಸುತ್ತದೆ. ಪ್ಲ್ಯಾಚಿ ಮಾಡದಲ್ಲಿನ ಕೊಕೋಲಾ ಕಂಪೆನಿಯ ವಿರುದ್ಧ ಹಾಗೂ ಮಲ್ಟಿ ನ್ಯಾಷನಲ್ ಕಂಪೆನಿಯ ವಿರುದ್ಧವು ಸಿನಿಮ ಮಾತನಾಡುತ್ತದೆ.

ಸಂಘಟನಾ ಮುಖ್ಯಸ್ಥ ರಹೀಮ್ ಸಾಹಿಬ್ ನೇತೃತ್ವದಲ್ಲಿ (ನಾಸಿರ್ ಕರುತ್ತೇನಿ) ಸಿನಿಮಾ ಮಾಡಲು ಹೊರಟ ಸಂಘಕ್ಕೆ ಸಾಮಾನ್ಯವಾಗಿ ಸಿನಿಮಾ ಮಾಡಲು ಕಷ್ಟ ಇರುವಂತೆ ಸದುದ್ದೇಶದಿಂದ ಹಲಾಲಾಗಿ ಸಿನಿಮಾ ನಿರ್ಮಿಸಲು ಎಷ್ಟು ಸವಾಲುಗಳನ್ನು ಸ್ವೀಕರಿಸಬೇಕಾಗುತ್ತದೆ ಎಂಬುವುದು ಸಿನಿಮಾದ ಇನ್ನೊಂದು ಮೊಗ್ಗುಲು. ನಟನೆ ಎಂಬುವುದು ಕೆಲವರ ಸೊತ್ತು ಎಂಬ ಪರಂಪರಾಗತ ವಾದವನ್ನು ಅಲ್ಲಗೆಳೆಯುತ್ತದೆ. ಅನ್ಯ ಸ್ತ್ರೀ ಪುರುಷರು ಜೊತೆಯಾಗಿ ಅಭಿನಯಿಸುವುದು, ಜೊತೆಯಾಗಿ ಅಭಿನಯಿಸುವ ಗಂಡ ಹೆಂಡತಿಯರಲ್ಲಿ ಉಂಟಾಗುವ ಮಾನಸಿಕ ಭಿನ್ನತೆ, ಮಾದಕತೆಯಲ್ಲಿ ಮುಳುಗಿದ ಡೈರೆಕ್ಟರ್ ಸಿರಾಜ್ (ಜೋಜು )ನ ಪರಿಹರಿಸದ ಅಸ್ತವ್ಯಸ್ತ ಕೌಟುಂಬಿಕ ಜೀವನ ಇತ್ಯಾದಿ ವಿಷಯಗಳು ಸಿನಿಮಾದಲ್ಲಿನ ಇತರ ಪ್ರಮುಖ ಚರ್ಚಾ ವಿಷಯ. ಹಲವು ಬೀದಿ ನಾಟಕದಲ್ಲಿ ನಟಿಸಿ ಪ್ರಾವೀಣ್ಯತೆ ಹೊಂದಿದ ಷರೀಫ್ (ಇಂದ್ರಜಿತ್) ನ ಅಹಂಕಾರ ಆತ ಕ್ಯಾಮರಾದ ಮುಂದೆ ದುರ್ಬಲನಾದಾಗ ತನ್ನ ಮನದೊಳಗೆ ಕುದಿಯುವ ಅಸೂಯೆ, ದ್ವೇಷ ಆತನ ಪತ್ನಿ ಸುಹರಾ (ಗ್ರೇಸಿ ಆಂಟೋನಿ) ಮನದಾಳದ ನೋವು ಆಕೆಯ ಮುಗ್ದತೆ ಸಂಘಟನೆಯೊಂದಿಗೆ ಇರುವ ಬದ್ಧತೆ ಸಿನಿಮ ಎತ್ತಿ ತೋರಿಸುತ್ತದೆ. “ನಮಗೆ ನಮ್ಮ ಬೆಗ್ಗೆ ಇರುವ ಕಲ್ಪನೆಯೊಂದಿಗೆ ಸಮರಾ ಸಾರದೆ ಒಂದು ಪಾತ್ರವಾಗಿ ಬದಲಾಗಲು ಸಾಧ್ಯವಿಲ್ಲ “ ಎಂದು ಕಲಾವಿದರಿಗೆ ನೀಡುವ ಭರವಸೆಯ ಮಾತಿನೊಂದಿಗೆ ಪ್ರತ್ಯಕ್ಷವಾಗುವ ಹಸೀನಾ (ಪಾರ್ವತಿ) ಅತಿಥಿ ಪಾತ್ರವೂ ಉತ್ತಮವಾಗಿದೆ. ನಿಜ ಜೀವನದಲ್ಲಿ ಗಂಡ ಹೆಂಡತಿಯಾದವರು ಸಿನಿಮಾ ಜೀವನದಲ್ಲಿ ಏಕೆ ಸಾಧ್ಯವಿಲ್ಲ.? ಎಂಬ ಪ್ರಶ್ನೆಯಂತೆ. ಸಿನಿಮಾಂತ್ಯದಲ್ಲಿ ನಟ ನಟಿಯರು ಅಪ್ಪಿ ಹಿಡಿಯುವಲ್ಲಿ ಪ್ರಶ್ನೆ ಉಂಟಾಗುತ್ತದೆ. ನಿಜ ಜೀವನದಲ್ಲಿ ಗಂಡ ಹೆಂಡತಿಯರಿಗೆ ಅಪ್ಪಿ ಹಿಡಿಯುವುದರಿಂದ ತೊಂದರೆಯಿಲ್ಲದಿದ್ದರೆ ಸಿನಿಮಾದಲ್ಲೇ ಏಕೆ ತೊಂದರೆ ? ಎಂಬ ನಿರ್ದೇಶಕನ ಪ್ರಶ್ನೆಗೆ ಸಿನಿಮಾ ನೋಡಿದವರಿಗೆ “ಹಲಾಲ್ ಕಟ್” ನ ಮೂಲಕ ಉತ್ತರ ಸಿಗುತ್ತದೆ.

ಸಣ್ಣ ಬಜೆಟ್ ನಲ್ಲಿ ಆಕರ್ಷಕವಾದ ಪ್ರಾದೇಶಿಕತೆಯೊಂದಿಗೆ ಚೊಕ್ಕವಾಗಿ ಸಿನಿಮಾ ಮಾಡಲಾಗಿದೆ. ಇದರಲ್ಲಿ ಎಲ್ಲರು ನಾಯಕರು ಮತ್ತು ನಾಯಕಿಯರು ಅವರವರ ಭಾವಕ್ಕೆ. ಅನಗತ್ಯ ಹಾಸ್ಯ ಹರಟೆ ಸಿನಿಮಾದಲ್ಲಿ ಕಾಣಲು ಸಾಧ್ಯವಿಲ್ಲ ಮನರಂಜನೆ ಮಾತ್ರವಲ್ಲದೆ ಹಲವು ಸಾಮಾಜಿಕ ಚಿಂತನೆಯ ಬಾಗಿಲುಗಳನ್ನು ತೆರೆದಿಡುತ್ತದೆ. ಪರಿಶ್ರಮ ಮತ್ತು ಪ್ರಯತ್ನವಿದ್ದರೆ ಸಿನಿಮಾ ಪ್ರಯಾಸವಲ್ಲ ಎಂಬ ಅರಿವು ಸಿನಿ ಪಿರ್ಯರಿಗೆ ಸಿಗುತ್ತದೆ. ರಾಕ್ಸ್ ವಿಜಯನ್ ನ ಸಂಗೀತ ಸಂಯೋಜನೆಯೂ ಉತ್ತಮವಾಗಿ ಮೂಡಿ ಬಂದಿದೆ. ಮೊಹಸೀನ್ ಪರಾರಿ ಚಿತ್ರ ಕಥೆ ಬರೆದಿದ್ದಾರೆ ಶಹಬಾಜ್ ಅಮನ್ ಹಾಡಿದ್ದಾರೆ ಒಳ್ಳೆಯ ತಾರಾಂಗಣವಿದೆ ಇಂದ್ರಜಿತ್ ಸುಕುಮಾರ್, ಜೋಜು ಜೋರ್ಜ್, ಗ್ರೇಸಿ ಆಂಟೋನಿ, ಸೌಬಿನ್ ಶಹೀರ್, ಶರ್ಫುದ್ದೀನ್ ನಾಸಿರ್ ಕರುತ್ತೇನಿ, ಪಾರ್ವತೀ ತೆರುವಾತ್ತ್ ಮಾಮುಕ್ಕೋಯ ಇತ್ಯಾದಿ ಆಶಿಕ್ ಅಬುವಿನ ನಿರ್ಮಾಣ ಸಹಕಾರವು ಇದೆ. ನೋಡುಗರಿಗೆ ಬೋರು ಹೊಡೆಸದ ಸಿನಿಮಾ

LEAVE A REPLY

Please enter your comment!
Please enter your name here