• ಅಥರ್ವ ಎಂ.ಜಿ.

ಗಣರಾಜ್ಯೋತ್ಸವ ದಿನ ದಿಲ್ಲಿಯಲ್ಲಿ ನಡೆದ ರೈತ ಹೋರಾಟದಲ್ಲಿ ಒಬ್ಬ ರೈತ ಸಾವಿಗೀಡಾಗಿರುವುದು ಎಲ್ಲರಿಗೂ ಗೊತ್ತು. ಆದರೆ ಆತನ ಸಾವಿನ ಕಾರಣ ಮೊದಲ ಕೆಲ ದಿನಗಳವರೆಗೆ ಗುಂಡು ಹೊಕ್ಕಿದ್ದು ಎಂಬುದಾಗಿತ್ತು, ಬಳಿಕ, ಟ್ರ್ಯಾಕ್ಟರ್ ನಿಂದ ಉರುಳಿ ಬಿದ್ದು ಸಾವಿಗೀಡಾದ ಎಂದು ‘ತಿದ್ದುಪಡಿ’ ಮಾಡಲಾಯಿತು. ಇದರ ನಡುವೆ ಕೆಲವು ರಾಷ್ಟ್ರೀಯ ಸುದ್ದಿ ವಾಹಿನಿಗಳು ಆತನ ಸಾವನ್ನು ‘ಗುಂಡಿಗೆ ಬಲಿ’ ಎಂದೇ ಪ್ರಸಾರ ಮಾಡಿತ್ತು. ಅದಲ್ಲದೆ ಹಿರಿಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ, ಕಾಂಗ್ರೆಸ್ ನಾಯಕ ಶಶಿ ತರೂರ್ ತಮ್ಮ ಟ್ವಿಟರ್ ಖಾತೆಯಲ್ಲಿ ಇದೇ ಹೇಳಿಕೆ ನೀಡಿದ್ದರು. ಟ್ವಿಟರ್ ನಲ್ಲಿ ಈ ಸುದ್ದಿಯನ್ನು ಹಂಚಿದ್ದಕ್ಕೆ ರಾಜ್ ದೀಪ್ ಸರ್ದೇಸಾಯಿ ಅವರಿಗೆ ಇಂಡಿಯಾ ಟುಡೆ ಒಂದು ವಾರಗಳ ತಡೆ ನೀಡಿ, ಒಂದು ತಿಂಗಳ ಸಂಬಳ ಕಡಿತಗೊಳಿಸಿತು.
ಶಶಿ ತರೂರ್, ರಾಜ್ ದೀಪ್ ಸೇರಿದಂತೆ ಸುದ್ದಿ ಹಂಚಿದ ಎಲ್ಲ ಚಾನೆಲ್ ಗಳ ವಿರುದ್ಧವೂ ಎಫ್ ಐಆರ್ ದಾಖಲಿಸಲಾಗಿದೆ. ಈ ಬೆಳವಣಿಗೆಯ ನಡುವೆಯೇ ಸಿದ್ಧಾರ್ಥ್ ವರದರಾಜನ್ ಅವರ ದಿ.ವೈರ್ ವೆಬ್ ಸೈಟ್ ಇದೇ ಘಟನೆಗೆ ಸಂಬಂಧಿಸಿ ಸ್ಪೋಟಕ ಮಾಹಿತಿ ಹೊರಹಾಕಿದೆ. ‘ಟ್ರ್ಯಾಕ್ಟರ್ ನಿಂದ ಬಿದ್ದು ಸಾವಿಗೀಡಾಗಿದ್ದಾನೆ ಎನ್ನಲಾದ ರೈತನ ದೇಹದಲ್ಲಿ ಗುಂಡಿನ ಗಾಯಗಳಿದ್ದುದನ್ನು ಕಂಡಿದ್ದೇನೆ. ಆದರೆ ನಾನೇನೂ ಮಾಡಲಾಗುವುದಿಲ್ಲ’ ಎಂದು ಮೃತದೇಹದ ಪೋಸ್ಟ್ ಮಾರ್ಟಂ ಮಾಡಿರುವ ವೈದ್ಯ, ಆ ರೈತನ ಕುಟುಂಬಸ್ಥರ ಬಳಿ ತನ್ನ ಅಸಹಾಯಕತೆಯನ್ನು ತಿಳಿಸಿದ್ದಾರೆ.
‘ಗುಂಡೇಟಿನ ಗಾಯಗಳನ್ನು ಸ್ಪಷ್ಟವಾಗಿ ನೋಡಿದ್ದಾಗಿ ವೈದ್ಯರು ಹೇಳಿದ್ದರಿಂದ ನಾವು ಅಂತ್ಯಸಂಸ್ಕಾರ ನೆರೆವೇರಿಸಿದ್ದೇವೆ. ಆದರೆ ಮರಣೋತ್ತರ ವರದಿಯಲ್ಲಿ ಗುಂಡೇಟಿನ ಕುರಿತ ವಿವರಗಳಿಲ್ಲ’ ಎಂದು ಮೃತ ರೈತನ ಕುಟುಂಬ ದೂರಿದೆ. ಸತ್ಯಾಸತ್ಯತೆ ಕಣ್ಣ ಮುಂದೆ ಇದ್ದರೂ ಅದನ್ನು ವರದಿಯಲ್ಲಿ ಬರೆಯಲು ಸಾಧ್ಯವಿಲ್ಲದ ಪರಿಸ್ಥಿತಿ ವೈದ್ಯರದ್ದು.
ಈ ಬೆಳವಣಿಗೆಗಳು ಏನನ್ನು ಸೂಚಿಸುತ್ತಿವೆ? ಆ ದಿನ ಘಟನಾ ಸ್ಥಳದಲ್ಲಿ ಇದ್ದವರೆಲ್ಲ ಆತ ಗುಂಡೇಟಿನಿಂದ ಬಲಿಯಾದ ಎಂದಿರುವಾಗ, ಆತನನ್ನು ಮತ್ತೆ ಹೊಸದಾಗಿ ಟ್ರ್ಯಾಕ್ಟರ್ ನಿಂದ ಉರುಳಿಸಿ ಸಾವಿಗೀಡಾಗಿಸುವ ತಂತ್ರ ಹೆಣೆದದ್ದು ಯಾರು? ತರೂರ್, ರಾಜ್ ದೀಪ್ ಮುಂತಾದವರ ವಿರುದ್ಧ ಅಷ್ಟು ತುರ್ತಾಗಿ ಎಫ್ ಐಆರ್ ದಾಖಲಾಗಲು ಕಾರಣ ಏನು? ಮೃತದೇಹದ ಎಕ್ಸ್ ರೇ ತೆಗೆಯಲು ಅವಕಾಶ ನೀಡದೇ ಇದ್ದುದು ಏಕೆ? ವೈದ್ಯರ ಬಾಯಲ್ಲಿ ಬಂದ ಗುಂಡೇಟಿನ ಗುರುತಿನ ಮಾತು ವರದಿಯಲ್ಲಿ ಬಾರದಂತೆ ತಡೆದದ್ದು ಯಾರು?
ಶಶಿ ತರೂರ್, ರಾಜ್ ದೀಪ್ ಸರ್ದೇಸಾಯಿ ಅವರ ಮೇಲೆ ಎಫ್ ಐಆರ್ ದಾಖಲಿಸಿದರೆ ಎಲ್ಲರ ಗಮನ ಅವರಿಬ್ಬರ ಕಡೆಗೆ ಹೊರಳುತ್ತದೆ. ಅವರೇ ಸುಳ್ಳು ಸುದ್ದಿ ಹರಡಿದರು ಎಂದು ಜನ ನಂಬಲು ಶುರು ಮಾಡುತ್ತಾರೆ. ಆ ಮೂಲಕ ಗುಂಡೇಟಿಗೆ ರೈತ ಬಲಿಯಾಗಿದ್ದಾನೆ ಎಂಬ ಯೋಚನೆಯನ್ನು ಜನರು ಕೈಬಿಡುತ್ತಾರೆ ಎಂಬ ಲೆಕ್ಕಾಚಾರ ಈ ತಂತ್ರ ಹೂಡಿದವರಿಗಿರಬಹುದು. ಆದರೆ ರೈತ ಹೋರಾಟ ಇನ್ನೂ ಮುಗಿದಿಲ್ಲ‌. ಕಾಲ‌ ಮಿಂಚಿಯೂ ಇಲ್ಲ. ರೈತನ ಸಾವಿನ ಸತ್ಯಾಸತ್ಯತೆಗಳು ಒಂದೊಂದಾಗಿ ಬಯಲಾಗುತ್ತಲೇ ಬರಲಿವೆ. ಆಗ ಎಫ್ ಐಆರ್ ನ‌ ಪಟ್ಟಿ ದೊಡ್ಡದಾಗುತ್ತಾ ಹೋದರೂ ಅಚ್ಚರಿಯೇನಿಲ್ಲ‌. ಬಿಜೆಪಿ ಆಡಳಿತದ ವೇಳೆ ಮುನವ್ವರ್ ಫಾರೂಖಿಯಂತೆ ಕಾರಣಗಳೇ ಇಲ್ಲದೆ ಬಂಧಿತರಾದವರು ಇಲ್ಲಿ ಹಲವರಿರುವಾಗ ಇದು ದೊಡ್ಡ ಸಂಗತಿಯೇನಲ್ಲ.
ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದ ಹಿಂಸಾಚಾರಗಳು ಎಲ್ಲವೂ ಜೀವಂತವಾಗಿಯೇ ಉಳಿದಿವೆ. ಯಾರು ಹಿಂಸೆ ಮಾಡಿದವರು ಯಾರು ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಸತ್ಯವನ್ನು ಪ್ರತ್ಯಕ್ಷದರ್ಶಿಗಳು ಬಾಯಿಬಿಟ್ಟರೆ ಮರುದಿನ ಅವರು ಬದುಕಿ ಇರುತ್ತಾರೋ, ಇದ್ದರೂ ಊರಲ್ಲಿರುತ್ತಾರೋ ಅಥವಾ ಯಾವುದೋ ನೆಪಕ್ಕೆ ಬಲಿಯಾಗಿ ಜೈಲು ಪಾಲಾಗುತ್ತಾರೋ ಹೇಳಲಾಗದು. ಹಿಂಸಾಚಾರಗಳ ಸಾಕ್ಷ್ಯನಾಶ ಮಾಡಲಾಗುತ್ತಿದೆ, ಅದನ್ನು ಪ್ರಶ್ನಿಸಿದವರಿಗೆ ಜೈಲಿನ ದಾರಿ, ಎಫ್ ಐಆರ್ ಹಾಕಿ ಬೆದರಿಸಲಾಗುತ್ತಿದೆ. ಜೆಎನ್ ಯು ನಲ್ಲಿ, ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಗಳು ಸೇರಿದಂತ ಹಲವು ಹಿಂಸಾಚಾರಗಳನ್ನು ಗಮನಿಸಿದರೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬಹುದು. ಇಂತಹ ಹಲವು ಪ್ರಕರಣಗಳು ಗೊಂದಲಕಾರಿಯಾಗಿಯೇ ಅಂತ್ಯ ಕಂಡಿವೆ. ಹಿಂಸೆ ಸೃಷ್ಟಿಸಿದ್ದು ಯಾರು ಎಂದು ಆರಂಭದಲ್ಲಿ ಸುದ್ದಿಯಾಗುವುದು ಬೇರೆ, ಮತ್ತೆ ಸುದ್ದಿ ಬದಲಾಗುವುದು ಬೇರೆ, ಎಲ್ಲ ಮುಗಿದ ಮೇಲೆ ಘಟನೆಯ ಭೀಕರ ಸತ್ಯಾಸತ್ಯತೆ ಹೊರಬರುವುದು ಬೇರೆ.
ಈ ಬಗೆಯ ಅಪಾಯಕಾರಿ ಪ್ರವೃತ್ತಿಗಳು ಅನ್ಯಾಯವಾಗಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿದ್ದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಬಹುದು ಎಂಬುದೇ ಆತಂಕಕಾರಿ ಸಂಗತಿ. ನ್ಯಾಯ ಎಂದು ಸಿಗುವುದು ನ್ಯಾಯವೇ ಆಗಿರುವುದಿಲ್ಲ, ಸತ್ಯ ಎಂದು ನಂಬಿಸುವುದು ಸತ್ಯವೇ ಆಗಿರುವುದಿಲ್ಲ. ಆಡಳಿತವೇ ಹೀಗಾದರೆ, ವ್ಯವಸ್ಥೆಯೇ ಹೀಗಿದ್ದರೆ ಜನರು ಯಾರ ಮೊರೆ ಹೋಗಬೇಕು?
ಮಾಧ್ಯಮ, ನ್ಯಾಯ, ಕಾನೂನು ಎಲ್ಲವನ್ನೂ ತೆಕ್ಕೆಗೆ ತೆಗೆದುಕೊಂಡು ಆಡಳಿತ ನಡೆಸುವುದು ಪರೋಕ್ಷವಾಗಿ ಸರ್ವಾಧಿಕಾರವೇ ಅಲ್ಲವೇ?
ಒಟ್ಟಿನಲ್ಲಿ ಇಂತಹ ಕ್ರೌರ್ಯ, ಅಟ್ಟಹಾಸದ ಆಡಳಿತವನ್ನು ಕೊನೆಯಾಗಿಸದೆ ಬೇರೆ ದಾರಿಯಿಲ್ಲ ಎಂಬುದಂತೂ ಸತ್ಯ.

LEAVE A REPLY

Please enter your comment!
Please enter your name here