• ಚಂದ್ರಶೇಖರ್ ಭಟ್, ಕೊಂಕಣಾಜೆ.
    ಎಸ್. ಡಿ. ಎಂ. ಸಿ. ಅಧ್ಯಕ್ಷರು ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಗಳತೇರು,ಕುಕ್ಕೇಡಿ.ಬೆಳ್ತಂಗಡಿ ತಾಲೂಕು .

ಈ ಪ್ರಪಂಚದಲ್ಲಿ ಯಾವುದೇ ವಿಚಾರದಲ್ಲಿ ಇರಲಿ ಮುಚ್ಚುವುದು ಸುಲಭ, ತೆರೆಯುವುದು ಕಷ್ಟ. ಮುಚ್ಚುವುದಕ್ಕೆ ಕ್ಷಣ ಕಾಲ ಸಾಕು. ಆದರೆ ತೆರೆಯುವುದಕ್ಕೆ ಸ್ವಲ್ಪ ಸಾವಕಾಶ ಬೇಕು. ಪ್ರಸ್ತುತ ಸರ್ಕಾರವಾಗಲಿ, ಪೋಷಕರಾಗಲಿ,ಶಿಕ್ಷಕರಾಗಲಿ ಎಲ್ಲರೂ ಯೋಚಿಸುತ್ತಿರುವ ವಿಚಾರವೆಂದರೆ ಮುಚ್ಚಿದ ಶಾಲೆಗಳನ್ನು ಯಾವಾಗ ತೆರೆಯುವುದು ಎಂಬುದಾಗಿ ಆಗಿದೆ.

ಲೋಕಕ್ಕೇ ಬಂದೆರಗಿದ ‘ಕೋವಿಡ್-19’ ಎಂಬ ಮಹಾಮಾರಿಯಿಂದಾಗಿ ಎಲ್ಲಾ ಕ್ಷೇತ್ರಗಳಲ್ಲಿ ಉಂಟಾದಂತೆ ಶಿಕ್ಷಣ ಕ್ಷೇತ್ರಕ್ಕೂ ಬಹು ದೊಡ್ಡ ಸಮಸ್ಯೆ ಬಂದೊದಗಿದೆ. ಇದರಿಂದ ಪಾರಾಗಲು ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಸುತ್ತಿದ್ದಾರೆ. ಹೀಗಿರುವಾಗ ಶಿಕ್ಷಣ ಕ್ಷೇತ್ರದ ಸಮಸ್ಯೆಯನ್ನು ಹೇಗೆ ಸರಿದೂಗಿಸುವುದು ಎಂಬುದೇ ಸರಕಾರಕ್ಕೆ ದೊಡ್ಡ ಸವಾಲಾಗಿದೆ.

ಇತ್ತೀಚೆಗೆ ವಿಶ್ವದ “ದೊಡ್ಡಣ್ಣ”ನೆನಿಸಿದ ಅಮೆರಿಕ ತನ್ನ ಶೈಕ್ಷಣಿಕ ವರ್ಷವನ್ನೇ ರದ್ದುಗೊಳಿಸಿ ಒಂದು ವರ್ಷ ಮುಂದೆ ಹಾಕಿದೆ. ಈ ಸುದ್ದಿ ಕೇಳಿದಾಗ ಎಷ್ಟೋ ಮಂದಿ ಹೇಳಿದ್ದು ‘ವಿದ್ಯಾರ್ಥಿಗಳ ಭವಿಷ್ಯ ಹಾಳಾಯಿತು’, ಒಂದು ವರ್ಷ ವೇಸ್ಟ್ ಆಯಿತು’ ಎಂಬಿತ್ಯಾದಿ ಮಾತುಗಳು. ಆದರೆ ಅಮೆರಿಕ ಸರಿಯಾಗಿಯೇ ಯೋಚಿಸಿ ಈ ನಿರ್ಧಾರಕ್ಕೆ ಬಂದಿದೆ ಎನಿಸುತ್ತದೆ.

ಮನುಷ್ಯನಿಗೆ ‘ಆರೋಗ್ಯ‘ಕ್ಕಿಂತ ಮಿಗಿಲಾದ ‘ಸಂಪತ್ತು’ ಬೇರೊಂದಿಲ್ಲ. ಟನ್ ಗಟ್ಟಲೆ ಸಕ್ಕರೆಯನ್ನು ಉತ್ಪಾದಿಸುವ ಸಕ್ಕರೆ ಕಾರ್ಖಾನೆಯ ಮಾಲೀಕನಿಗೂ ಕೆಲವೊಮ್ಮೆ ಒಂದು ಚಮಚದಷ್ಟು ಸಿಹಿಯನ್ನು ತಿನ್ನುವ ಯೋಗ ಇರುವುದಿಲ್ಲ, ಕಾರಣ ಆರೋಗ್ಯ(ರೋಗ)

ಈ ನಿಟ್ಟಿನಲ್ಲಿ ಯೋಚಿಸುವಾಗ “ವಿದ್ಯಾರ್ಥಿಗಳ ಭವಿಷ್ಯ” ಎಂಬ ಒಂದು ಶಬ್ದವನ್ನೇ ಹಿಡಿದುಕೊಂಡು ಪ್ರಸ್ತುತ ನಮ್ಮ ಪರಿಸ್ಥಿತಿಯಲ್ಲಿ ಅವಸರದ ನಿರ್ಧಾರದಿಂದ ಶಾಲೆಗಳನ್ನು ತೆರೆದರೆ,ಅದರ ಪರಿಣಾಮ ಘೋರವಾಗಲೂಬಹುದು.ಕೆಲವು ಪೋಷಕರೂ ಅಷ್ಟೇ ತಮ್ಮ “ಮಕ್ಕಳ ಭವಿಷ್ಯ” ಎಂದು ಕೇವಲ ಏಕ ಮುಖವಾಗಿ ಆಲೋಚಿಸಿ ಶಾಲೆಗಳನ್ನು ತೆರೆಯುವಂತೆ ಸರಕಾರಕ್ಕೆ ಒತ್ತಡ ಹಾಕುವುದೂ ಸರಿಯಲ್ಲ.

ಈಗಾಗಲೇ ನಮ್ಮ ಶಿಕ್ಷಣ ಪದ್ದತಿ, ವ್ಯವಸ್ಥೆ ಹೇಗಿದೆ ಎಂಬುದು ಎಲ್ಲರಿಗೂ ವೇದ್ಯವಾದ ವಿಚಾರ. ಸರಕಾರ ಮಾಡಿದ ‘ನಲಿ-ಕಲಿ’ ವ್ಯವಸ್ಥೆ ಯಂತೂ ಈ ಮಾರಕ ರೋಗ ಹರಡಲು ‘ರಾಜಮಾರ್ಗ’ವಿದ್ದಂತೆ. ಹೀಗಿರುವಾಗ ಸರಿಯಾದ ಪೂರ್ವತಯಾರಿಗಳನ್ನು ನಡೆಸದೆ ಸರಿಯಾಗಿ ಯೋಚಿಸದೆ ಶಾಲೆಗಳನ್ನು ತೆರೆಯುವ ಅವಸರದ ನಿರ್ಧಾರವನ್ನು ಸರಕಾರ ಮಾಡಬಾರದು. ಹಾಗೂ ಪೋಷಕರೂ ಕೂಡಾ ಅವಸರ ಪಡಬಾರದು. ಒಂದು ವರ್ಷ ‘ವೇಸ್ಟ್’ ಆಗುತ್ತದೆ ಎಂಬ ಬದಲು ಮುಂದೆ ಸುಧೀರ್ಘ ಬದುಕನ್ನು ಬಾಳಬೇಕಾದ ಮಗುವೊಂದು ರೋಗಕ್ಕೆ ತುತ್ತಾಗಿ ಚಿಗುರಲ್ಲೇ ಕರಟಿಹೋಗದಂತೆ ಎಚ್ಚರ ವಹಿಸಬೇಕು ತಾನೇ?.

ದೇಶವನ್ನಾಳುವವರು ಹೃದಯವನ್ನು ತೆರೆದು ಸನ್ಮನಸ್ಸಿನಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳ ಪೋಷಕರು ಕೂಡಾ ಸರಿಯಾಗಿ ಯೋಚಿಸಿ ಈ ಪರಿಸ್ಥಿತಿಯಲ್ಲಿ ಶಾಲೆಗಳನ್ನು ತೆರೆದರೆ ಮುಂದೆ ಆಗುವ ದುರಂತಗಳನ್ನು ದೂರದೃಷ್ಟಿ ಯಿಂದ ಚಿಂತಿಸಿ ನಿರ್ಧಾರಗಳನ್ನು ಕೈಗೊಳ್ಳಬೇಕು. ಶಾಲೆ ತೆರೆದ ಬಳಿಕ ಏನಾಗಬೇಕು, ಹೇಗೆ ಶಾಲೆಯನ್ನು ರೋಗ ವಿಮುಕ್ತವಾಗಿ ನಡೆಸಬೇಕು ಎಂದು “ಚಿಂತನ-ಮಂಥನ” ನಡೆಸಿ ತೆರೆಯುವುದು ಒಳಿತು.ಆದುದರಿಂದ ವಿದ್ಯಾಭಿಮಾನಿಗಳಾದ ನಾವೆಲ್ಲರೂ ಒಮ್ಮೆ ವಿಶಾಲ ಮನಸ್ಸಿನಿಂದ ಯೋಚಿಸಿ “ಶಾಲೆ ತೆರೆಯುವ ಮುನ ನಮ್ಮ ನಮ್ಮ ಹೃದಯವನ್ನು ತೆರೆಯೋಣ”

ವಿದ್ಯೆಯೇ ಸಂಪತ್ತು

LEAVE A REPLY

Please enter your comment!
Please enter your name here