ಯೋಗೇಶ್ ಮಾಸ್ಟರ್ (ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ)

ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿಯವರಿಗೆ ಶಾಲೆಗಳನ್ನು ನಡೆಸುವ ಅವಕಾಶವೇ ಒಂದು ಸಾಮಾಜಿಕ ಲೋಪವಾಗಿ ನನಗೀಗ ಕಾಣುತ್ತಿದೆ. ಏಕೆಂದರೆ, ಖಾಸಗಿಯವರ ಆಲೋಚನೆ, ಸಿದ್ಧಾಂತ, ವಾಣಿಜ್ಯದ ಉಪಾಯಗಳ ಅನುಗುಣವಾಗಿ ಶಾಲೆಗಳು ಕೆಲಸವನ್ನು ನಿರ್ವಹಿಸುತ್ತದೆ. ಅನುಕೂಲಕರ ಸಿಬ್ಬಂದಿಗಳು ನೇಮಿಸಲ್ಪಟ್ಟಿರುತ್ತಾರೆ. ವಾಸ್ತವವಾಗಿ ಮಗುವು ಶಾಲೆಯಲ್ಲಿ ಪಠ್ಯದ ಮೂಲಕ ಏನನ್ನು ಕಲಿಯುತ್ತದೆಯೋ ಅದಕ್ಕಿಂತ ಮುಖ್ಯವಾಗಿ ತನ್ನೊಡನೆ ಇರುವ ಸಹಪಾಠಿಗಳ ಮತ್ತು ಸಹವರ್ತಿಗಳ ಮಾದರಿಗಳಿಂದ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತದೆ ಮತ್ತು ಬದುಕಿನ ದಿಕ್ಕನ್ನು ಕಂಡುಕೊಳ್ಳುತ್ತದೆ. ಇಂತಾ ಸಂಪೂರ್ಣ ಖಾಸಗೀ ಒಡೆತನದ ಶಾಲೆಗಳಲ್ಲಿ ಓದುವಂತಹ ಮಗುವಿಗೆ ಮುಂದೆ ವಯಸ್ಕನಾದಾಗ ಒಂದು ಹಂತಕ್ಕೆ ವ್ಯಕ್ತಿಗತವಾದ ಭದ್ರತೆ ಅಥವಾ ಹಿತವನ್ನು ಕಂಡುಕೊಳ್ಳಲು ನೆರವಾಗಬಹುದು. ಆದರೆ, ಈ ಖಾಸಗಿ ಶಾಲೆಗಳ ವಿವಿಧ ಸ್ಥಿತಿ, ಪ್ರಭಾವ, ಸಿದ್ಧಾಂತ ಮತ್ತು ನೆಲೆಗಳ ಆಧಾರದ ಮೇಲೆ ಮಕ್ಕಳು ಅಲ್ಲಿಗೆ ಬರುತ್ತಾರೆ. ಒಂದು ವರ್ಗದ, ಒಂದು ಬಗೆಯ ಹಿನ್ನೆಲೆಗಳ ಅಥವಾ ಪೋಷಕರ ಇತಿ ಮಿತಿ, ಶಕ್ತ್ಯಾನುಸಾರ ಅಲ್ಲಿ ಮಕ್ಕಳ ಕೇಂದ್ರೀಕರಣವಾಗುತ್ತದೆ. ಆಗ ಆ ಮಕ್ಕಳಲ್ಲಿ ಸಾಮಾನ್ಯ ಚಿಂತನೆಗಳನ್ನು, ಆಲೋಚನೆಗಳನ್ನು, ಅವರ ಧೋರಣೆ, ಒಲವು, ನಿಲುವುಗಳನ್ನು ನಿರ್ಧರಿಸುವಂತಹ ಹಲವು ಅಂಶಗಳಿಗೆ ವ್ಯಾಪಕವಾದ, ವಿಸ್ತಾರವಾದ ಅವಕಾಶಗಳು ಸಿಗುವುದಿಲ್ಲ. ಇದರಿಂದ ಸಾಮಾಜಿಕವಾಗಿ ಚಿಂತಿಸುವಲ್ಲಿ, ಎಲ್ಲರನ್ನೂ ಒಳಗೊಳ್ಳುವಂತಹ ಸಮಷ್ಟಿಯ ಆಲೋಚನೆ ಮತ್ತು ದೃಷ್ಟಿಗಳನ್ನು ಹೊಂದುವಲ್ಲಿ ಕುಬ್ಜರಾಗುತ್ತಾರೆ. ದುಬಾರಿ ಮತ್ತು ಅಗ್ಗದ ಶಾಲೆಗಳು ದುಬಾರಿ ಶಾಲೆಗಳಲ್ಲಿ ಪಠ್ಯೇತರವಾದ ಅನೇಕಾನೇಕ ಆಕರ್ಷಣೆಗಳಿರುತ್ತವೆ. ಈಜು, ಕುದುರೆ ಸವಾರಿ, ನೃತ್ಯ ಮತ್ತು ಸಂಗೀತಗಳಲ್ಲಿ ವಿಶೇಷ ತರಗತಿಗಳು, ಸಮರ ಕಲೆಗಳು, ರೋಬೋಟ್ ತಯಾರಿ; ಹೀಗೆ ಹಲವಾರು ವಿಷಯಗಳು. ಅವರು ಶೈಕ್ಷಣಿಕ ಪ್ರವಾಸಕ್ಕೆಂದು ನಾಸಾಗೆ ಹೋಗುತ್ತಾರೆ. ಸಿಡ್ನಿಯೋ, ಸ್ವಿಸರ್ಲೆಂಡ್ ಕೂಡಾ ಪ್ರವಾಸಕ್ಕಿರಬಹುದು. ಇಂತಹ ಶಾಲೆಗಳಲ್ಲಿ ಓದುವ ಮಕ್ಕಳ ಪೋಷಕರು ಸಹಜವಾಗಿ ಸ್ಥಿತಿವಂತರೇ ಆಗಿದ್ದು, ಉತ್ತಮ ಆರ್ಥಿಕ ಅನುಕೂಲತೆಯುಳ್ಳ ಹಿನ್ನೆಲೆಯವರೇ ಆಗಿರುತ್ತಾರೆ. ಅವರು ವಾಸಿಸುವ ಸ್ಥಳಗಳು, ಕೊಂಡುಕೊಳ್ಳಲು ಹೋಗುವ ಸ್ಥಳಗಳು, ಕೊಳ್ಳುವ ವಸ್ತುಗಳು, ಅವರ ವಾರಾಂತ್ಯದ ಮನರಂಜನೆಯ ತಾಣಗಳು, ನೋಡುವ ಸಿನಿಮಾಗಳು, ಕೊಡುಕೊಳುವ ಉಡುಗೊರೆಗಳೆಲ್ಲವೂ ಕೂಡಾ ಆಯಾ ಕುಟುಂಬದ ಆರ್ಥಿಕ ಸಬಲತೆಯ ಮೇಲೆ ಅವಲಂಬಿತವಾಗಿರುತ್ತದೆ. ಇವುಗಳಿಂದ ಹುಟ್ಟುವಂತಹ ಆಲೋಚನೆಗಳು, ಚಿಂತನೆಗಳು, ತಳೆಯುವಂತಹ ಧೋರಣೆಗಳು, ಅವರಿಗಿರುವ ಒಲವು ನಿಲುವುಗಳು ಹೇಗಿರುತ್ತವೆ ಎಂದು ಯೋಚಿಸಿ. ಕೆಲವೊಂದು ಶಾಲೆಗಳಲ್ಲಿ ಬರೀ ಕೈಗಾರಿಕೋದ್ಯಮಿಗಳ, ರಫ್ತು ಆಮದು ವ್ಯಾಪಾರಸ್ತರ, ಮಂತ್ರಿಗಳ, ದೊಡ್ಡ ದೊಡ್ಡ ಅಧಿಕಾರಿಗಳ ಮತ್ತು ಸ್ಟಾರ್ ನಟ-ನಟಿಯರ ಮಕ್ಕಳಷ್ಟೇ ವಿದ್ಯಾರ್ಥಿಗಳಾಗಿರುತ್ತಾರೆ.  ಆ ಶಾಲೆಗಳಲ್ಲಿ ಮಕ್ಕಳನ್ನು ಶಿಕ್ಷಕರಾಗಲಿ, ಇತರ ಸಿಬ್ಬಂದಿಗಳಾಗಲಿ ಕಡೆಗಣಿಸಿ ಮಾತಾಡುವುದಿಲ್ಲ. ಗೌರವದಿಂದ ಮತ್ತು ಅವರು ದೊಡ್ಡ ವ್ಯಕ್ತಿಗಳ ಮಕ್ಕಳೆಂಬ ಅರಿವಿಟ್ಟುಕೊಂಡು ಎಚ್ಚರಿಕೆಯಿಂದಲೇ ನಡೆದುಕೊಳ್ಳುತ್ತಿರುತ್ತಾರೆ. ಹಾಗೆಯೇ ಶಾಲೆಯಲ್ಲಿ, ಕಲಿಕೆಯಲ್ಲಿ ಅಥವಾ ಇತರ ಸಿಬ್ಬಂದಿಗಳ ಕಡೆಯಿಂದ ಸ್ವಲ್ಪ ವ್ಯತ್ಯಾಸವಾದರೆ ಮನೆಯವರೂ ತರಾಟೆಗೆ ತೆಗೆದುಕೊಳ್ಳುತ್ತಾರೆ. ಈಗ ಅಂತಹ ಮಕ್ಕಳಲ್ಲಿ ಬೆಳೆಯುವ ಮಾನಸಿಕ ಸ್ಥಿತಿ ಮತ್ತು ಆತ್ಮವಿಶ್ವಾಸದ ಬಗ್ಗೆ ಯೋಚಿಸೋಣ. ಅವರಲ್ಲಿ ಮೇಲರಿಮೆ ಬಲವಾಗುತ್ತಿರುತ್ತದೆ. ಸುರಕ್ಷಿತ ಭಾವನೆ ಸದೃಢವಾಗಿರುತ್ತದೆ. ಮತ್ತೆ ಕೆಲವು ಶಾಲೆಗಳಲ್ಲಿ ಬರಿಯ ಡ್ರೈವರ್‍ಗಳ, ರಸ್ತೆ ಬದಿಯ ವ್ಯಾಪಾರಿಗಳ, ಮನೆಗೆಲಸ ಮಾಡುವವರ, ಬೇರೆ ಹೊಲಿಗೆಯ ಅಂಗಡಿಗಳಲ್ಲಿ ದರ್ಜಿಗಳಾದವರ, ಇನ್ನಿತರ ಶ್ರಮಜೀವಿಗಳ ಮಕ್ಕಳಷ್ಟೇ ವಿದ್ಯಾರ್ಥಿಗಳಾಗಿ ಬರುತ್ತಿರುತ್ತಾರೆ. ಆ ಶಾಲೆಗಳಲ್ಲಿ ಮಕ್ಕಳನ್ನು ಕಸಗುಡಿಸುವವರಿಂದ ಹಿಡಿದು, ಶಿಕ್ಷಕರವರೆಗೂ ಮಾತಾಡಿಸುವ ರೀತಿಯೇ ಭಿನ್ನ. ಹಗುರವಾದ, ಉಡಾಫೆಯ, ಗದರಿಕೆಯ, ಖಂಡನೆಯ, ಒರಟು ಮಾತುಗಳನ್ನೇ ನಿತ್ಯ ಕೇಳುವ ಆ ಮಕ್ಕಳಲ್ಲಿ ಕೀಳರಿಮೆ ರೂಪುಗೊಳ್ಳುತ್ತಿರುತ್ತದೆ. ಈ ಮಕ್ಕಳು ತಮ್ಮ ಮನೆಗಳಲ್ಲಿ ದೂರು ಹೇಳುವುದಿಲ್ಲ. ಏಕೆಂದರೆ ಅದು ಅವರಿಗೇ ತಿರುಗುಬಾಣವಾಗುತ್ತದೆ ಎಂದು ಭಯ. ಕೆಲವೊಂದು ಮನೆಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ದಂಡಿಸುವ, ತೆಗಳುವ ರೀತಿಗಳನ್ನು ಸಹಜವೆಂದು ಅಥವಾ ಸರಿಯೆಂದೇ ಒಪ್ಪಿಕೊಳ್ಳುತ್ತಾರೆ. ಮತ್ತೆ ಕೆಲವು ಪರ್ಯಾಯ (ಆಲ್ಟರ್ನೇಟಿವ್) ಮತ್ತು ಮುಕ್ತ ಶಾಲೆಗಳಲ್ಲಿ ಕಲಾವಿದರ, ಸಾಹಿತಿಗಳ ಅಥವಾ ಸಾಮಾಜಿಕ ಕಾರ್ಯಕರ್ತರ ಮಕ್ಕಳಷ್ಟೇ ಹೆಚ್ಚಿನ ಪ್ರಮಾಣಗಳಲ್ಲಿರುತ್ತಾರೆ. ಅಲ್ಲಿ ಅತಿರೇಕಗಳಿಲ್ಲದ ಮತ್ತೊಂದು ಬಗೆಯ ಪರಿಸರ. ಹೀಗೆ ಯಾವುದೇ ಆಧಾರದಲ್ಲಿ ವರ್ಗೀಕೃತವಾಗಿರುವ ಈ ರೀತಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಕೂಡಾ ವರ್ಗೀಕರಣವಾಗುವುದರಿಂದ ಸಾಮಾಜಿಕ ಸಂರಚನೆಯ ಪ್ರಕ್ರಿಯೆಯಲ್ಲಿ ಎಂತಹ ಪರಿಣಾಮಗಳಾಗುತ್ತವೆ ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾಗಿದೆ.  ಮಕ್ಕಳಿಗೆ ತಮ್ಮ ಕಣ್ಣಿಗೆ ಕಾಣುವ ಮತ್ತು ತಮ್ಮ ಇಂದ್ರಿಯಗಳಿಗೆ ಒದಗುವ ಅನುಭವದ ವ್ಯಾಪ್ತಿಯ ಆಚೆಗೆ ನೋಡಲಾಗುವುದಿಲ್ಲ. ಅವರಷ್ಟು ಪಕ್ವವಲ್ಲ. ಅವರ ಗ್ರಹಿಕೆ ಮತ್ತು ಒಲವುಗಳು ನೇರ ಮತ್ತು ಪ್ರತ್ಯಕ್ಷ. ತಮಗೆ ಒದಗುವ ವಸ್ತು ವಿಷಯಗಳ ಆಧಾರದಲ್ಲಿಯೇ ತಮ್ಮ ಒಳನೋಟಗಳನ್ನು, ಮುಂದುವರಿದ ಚಿಂತನೆಗಳನ್ನು ಹೊಂದುತ್ತಾರೆ. ಸಾಮಾನ್ಯವಾಗಿ ತಮ್ಮ ಹಿತದ ಮತ್ತು ಸುಖದ ಆಧಾರಿತವಾಗಿರುವ ಅವರ ಆಲೋಚನೆಗಳು ಮತ್ತು ವ್ಯಕ್ತಿತ್ವವು ರೂಪುಗೊಳ್ಳುತ್ತಿರುತ್ತವೆ. ಆಗ ಬೇರೊಬ್ಬರ ಅಭಿರುಚಿ, ಆಸಕ್ತಿ, ಜೀವನ ಶೈಲಿಯ ಕಡೆಗೆ ಮುಕ್ತ ಮನಸ್ಸಿನಿಂದ ನೋಡುವ, ಸಹಜವಾಗಿ ಗ್ರಹಿಸುವ, ನಮ್ಮದಿರುವಂತೆಯೇ ಅವರದೂ ಎಂದು ಸಮಾನವಾಗಿ ಉಪಚರಿಸುವ ಮುಕ್ತ ಅಥವಾ ಪ್ರಬುದ್ಧ ಮನಸ್ಥಿತಿಯನ್ನು ಹೊಂದಲಾಗುವುದಿಲ್ಲ. ತನ್ನ ದುಬಾರಿ ಬಟ್ಟೆಯ ಮುಂದೆ ಬೇರೊಬ್ಬನ ಅಗ್ಗದ ಬಟ್ಟೆ ಕೀಳಾಗಿ ಕಾಣುತ್ತದೆ. ತನ್ನ ಕಾರಿನ ಪ್ರಯಾಣ ಬೇರೊಬ್ಬನ ಬಸ್ಸಿನ ಪ್ರಯಾಣಕ್ಕಿಂತ ಹೆಮ್ಮೆಯದಾಗಿರುತ್ತದೆ. ಬಡತನ ಮತ್ತು ಶ್ರೀಮಂತಿಕೆ ಅಥವಾ ಶ್ರಮಿಕವರ್ಗ ಮತ್ತು ಮಾಲಿಕತ್ವ ಮೊದಲಾದ ತಾರತಮ್ಯ ಢಾಳಾಗಿರುವ ಈ ಸಮಾಜದಲ್ಲಿ ಪಂಚತಾರಾ ಶಾಲೆಗಳಲ್ಲಿ ಓದುವ ಮಕ್ಕಳು ತಾವು ಉಳ್ಳವರು ಎಂಬ ಮೇಲರಿಮೆಯನ್ನು ಹೊಂದಿ, ಆರ್ಥಿಕವಾಗಿ ಅಥವಾ ಯಾವುದೇ ರೀತಿಯಲ್ಲಿ ತಮಗಿಂತ ಕೆಳಗಿರುವವರನ್ನು ಕೀಳಾಗಿ ನೋಡುವುದು ರೂಢಿಯಾಗಿಬಿಟ್ಟರೆ ಸಾಮಾಜಿಕವಾಗಿ ಕಂದಕವನ್ನು ಸೃಷ್ಟಿಸಿದಂತಾಗುತ್ತದೆ. ಅವರು ಇತರರಿಗೆ ಸಂವೇದಿಸುವುದಿಲ್ಲ. ಇಲ್ಲಿ ಕೊರತೆಯೇ ಸಮಾಜದ ಇತರ ವರ್ಗದ ಮತ್ತು ಬೇರೆ ಬಗೆಯ ಜನರ ಬಗ್ಗೆ ಸಂವೇದನಾಶೀಲತೆ. ಸಂವೇದನಾಶೀಲತೆಯೂ ಕೂಡಾ ತನಗೆ ದೊರಕಿರುವ ವಿಷಯ ಮತ್ತು ವಸ್ತುಗಳನ್ನು ಅವಲಂಬಿಸಿರುತ್ತದೆ. ಯಾವುದರ ಪರಿಚಯವೇ ಇರುವುದಿಲ್ಲವೋ ಅಥವಾ ತಿಳುವಳಿಕೆಯೇ ಬರುವುದಿಲ್ಲವೋ ಅವುಗಳ ಬಗ್ಗೆ ಸಂವೇದನೆಯನ್ನು ಹೊಂದಲಾದರೂ ಹೇಗೆ ಸಾಧ್ಯ? ಸಮಾನತೆ ಮತ್ತು ಮಾನವತೆಯ ಜ್ಞಾನೋದಯವು ಅಷ್ಟೇನೂ ಸುಲಭವಲ್ಲ. ಕೆಲವರಿಗಷ್ಟೇ ಸಾಧ್ಯ. ಆದರೆ ವರ್ಗೀಕೃತ ಶಾಲೆಗಳಲ್ಲಿ ತಮ್ಮಂತೆಯೇ ಇರುವ ವ್ಯಕ್ತಿಗಳ ಜೊತೆಯೇ ನಿತ್ಯ ಒಡನಾಟ ಇರುವುದರಿಂದ, ಹೊರಗಿನ ಮತ್ತು ಅದರಾಚೆಯ ಚರ್ಚೆ ಮತ್ತು ಮಾತುಕತೆಗಳಿಗೆ ಆಸ್ಪದಗಳೂ ಕಡಿಮೆ. ಪುನರಾವರ್ತಿತವಾಗುವಂತಹ ವಿಷಯಗಳು ಮತ್ತು ಪ್ರಭಾವಗಳು ಮಗುವಿನ ವ್ಯಕ್ತಿತ್ವವನ್ನು ನಿರ್ಮಾಣ ಮಾಡುವುದರಲ್ಲಿ ಬಹಳ ಮಹತ್ತರವಾದಂತಹ ಪಾತ್ರವನ್ನು ವಹಿಸುತ್ತದೆ. ಸಮಾಜಮುಖಿಯಾಗಿ ಅವುಗಳು ನೀಡುವ ಕಾಣ್ಕೆಯು ಪ್ರಶ್ನಾರ್ಹವಾಗಿವೆ. ಅದೇ ರೀತಿ ಅಗ್ಗದ ಶಾಲೆಗಳಲ್ಲಿ ಸವಲತ್ತುಗಳೂ ಕಡಿಮೆ. ಉತ್ತಮ ಸಂಭಾವನೆಗಳಿಲ್ಲದ ಕಾರಣ ಅನುಭವಿ ಮತ್ತು ಅಗತ್ಯ ವಿದ್ಯಾರ್ಹತೆಯುಳ್ಳ ಶಿಕ್ಷಕರೂ ಕೂಡಾ ಇಲ್ಲದೇ ಬೋಧನಾ ಮಟ್ಟವು ಅಷ್ಟಕ್ಕಷ್ಟೇ ಇರುತ್ತದೆ. ಆರ್ಥಿಕವಾಗಿ ದುರ್ಬಲರಾಗಿರುವವರು ಮತ್ತು ಬೇರೆ ರೀತಿಗಳಲ್ಲಿ ಕೆಳಮಟ್ಟಕ್ಕೆ ನೋಡಲ್ಪಡುವವರು ತಮ್ಮ ಮಕ್ಕಳನ್ನು ಇಂತಹ ಶಾಲೆಗಳಿಗೆ ಕಳುಹಿಸುತ್ತಾರೆ. ಇಲ್ಲಿಯೂ ಸಹ ದುಬಾರಿ ಶಾಲೆಗಳಲ್ಲಾಗುವಂತಹ ನಕಾರಾತ್ಮಕ ಪರಿಣಾಮವೇ ಆಗುತ್ತದೆ. ಒಂದೇ ಬಗೆಯ ಆಲೋಚನೆಗಳು. ತಮಗಿಂತ ಮೇಲ್ಮಟ್ಟಕ್ಕೆ ಗುರುತಿಸಿಕೊಂಡಿರುವವರ ಬಗ್ಗೆ ಅಸೂಯೆ ಅಥವಾ ಅಸಹನೆ. ಒಂದೇ ಬಗೆಯ ಆಲೋಚನೆಗಳು, ಧೋರಣೆಗಳು ಪುನರಾವರ್ತಿತವಾಗಿ ಸುತ್ತುತ್ತಿರುತ್ತವೆ. ಕೀಳರಮೆಯಿಂದ ಹಿಂಜರಿಯುತ್ತಿರುತ್ತಾರೆ ಅಥವಾ ಅಸೂಯೆಯಿಂದ ನಕಾರಾತ್ಮಕವಾಗಿ ವರ್ತಿಸುತ್ತಿರುತ್ತಾರೆ. ದುಬಾರಿ ಶಾಲೆಗಳಲ್ಲಿ ಮಕ್ಕಳನ್ನು ಉತ್ತಮ ಪದವಿ, ಉದ್ಯೋಗವನ್ನು ಹೊಂದುವಂತಹ, ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಓದುವ ಅಥವಾ ಕೆಲಸ ಮಾಡುವಂತಹ ವೇದಿಕೆಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒದಗಿಸಿಕೊಡುತ್ತಿದ್ದರೆ, ಇತ್ತ ಕಡೆ ಅಗ್ಗದ ಶಾಲೆಗಳಲ್ಲಿ ಕನಿಷ್ಟ ಅಂಕೆಗಳನ್ನು ಪಡೆದು ಉತ್ತೀರ್ಣರಾಗಿ ಹೋದರೆ ಸಾಕು ಎಂಬಂತಹ ಮನೋಭಾವವೇ ಕೆಲಸ ಮಾಡುತ್ತಿರುತ್ತದೆ. ಮಗುವೊಂದು ವಯಸ್ಕನಾದಾಗ ತಾನು ಕಾರು ಓಡಿಸಬೇಕು. ಕ್ಯಾಬ್ ಡ್ರೈವರ್ ಆಗಬೇಕು ಆಸೆ ಪಡುತ್ತಾ, ಕನಸು ಕಾಣುತ್ತಾ, ವಿಧವಿಧವಾದ ಜನರನ್ನು ನೋಡುತ್ತೇನೆ, ವಿಧವಿಧವಾದ ಸ್ಥಳಗಳಿಗೆ ಹೋಗುತ್ತೇನೆ, ಇದೊಂದು ಸಾರ್ವಜನಿಕ ಜೀವನದಲ್ಲಿ ಉತ್ತಮವಾದ ಸೇವೆ ಎಂಬ ಮನೋಭಾವದಲ್ಲಿ ಅಭಿರುಚಿಯನ್ನು ಮತ್ತು ಆಸಕ್ತಿಯನ್ನು ಬೆಳೆಸಿಕೊಂಡು ಕ್ಯಾಬ್ ಡ್ರೈವರ್ ಆದರೆ ಆ ಮನಸ್ಥಿತಿ, ಆ ಜೀವನ ಚೆನ್ನ. ಆದರೆ, ತಾನು ಓದಿರುವ ಅಗ್ಗದ ಶಾಲೆಯ ಇತಿಮಿತಿಗಳಿಂದಾಗಿ ತನಗೆ ಸಾಕಷ್ಟು ಅವಕಾಶಗಳಿಲ್ಲದೇ, ತನ್ನ ಕುಟುಂಬದ ಆರ್ಥಿಕ ಸ್ಥಿತಿಗತಿಗಳು ಸರಿ ಇರದ ಕಾರಣ ವಿಜ್ಞಾನಿಯಾಗಬೇಕೆಂದೋ, ಪ್ರಾದ್ಯಾಪಕನಾಗಬೇಕೆಂದೋ ಕನಸು ಕಂಡು, ಅದನ್ನು ನೆರವೇರಿಸಿಕೊಳ್ಳಲಾಗದೇ, ವಿಧಿಯಿಲ್ಲದೇ ಕ್ಯಾಬ್ ಡ್ರೈವರ್ ಆಗುವಂತಹ ಸ್ಥಿತಿ ವ್ಯಕ್ತಿಗತವಾಗಿಯೂ ಮತ್ತು ಸಾಮಾಜಿಕವಾಗಿಯೂ ಒಪ್ಪಿತವೇನಲ್ಲ. ಜಾತಿ ಮತ್ತು ಧಾರ್ಮಿಕ ಸಂಸ್ಥೆಗಳ ಶಾಲೆಗಳು ಅಗ್ಗದ ಮತ್ತು ದುಬಾರಿಯ ಶಾಲೆಗಳು ಮಕ್ಕಳ ವೈಯಕ್ತಿಕ ಜೀವನ ಮತ್ತು ಸಮಾಜದ ಮೇಲೆ ಪ್ರಭಾವ ಬೀರುವಂತೆಯೇ ಜಾತಿ ಆಧಾರಿತ ಅಥವಾ ಧಾರ್ಮಿಕ ಸಂಸ್ಥೆಗಳು ನಡೆಸುವ ಶಾಲೆಗಳಲ್ಲಿ ಮತ್ತೊಂದು ಬಗೆಯ ಮಾನಸಿಕ ಮತ್ತು ಸಾಮುದಾಯಿಕ ಒತ್ತಡಗಳಿರುತ್ತವೆ. ಯಾವುದೋ ಒಂದು ಜಾತಿ ಮತ್ತು ಧರ್ಮವನ್ನು ಪ್ರತಿನಿಧಿಸುವ ಸಂಸ್ಥೆಯೇ ತಮ್ಮದಾಗಿರುವ ಕಾರಣದಿಂದ ಅವುಗಳ ಸಿದ್ಧಾಂತವನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಎತ್ತಿ ಹಿಡಿಯುವ ಅಥವಾ ಪ್ರತಿಪಾದಿಸುವ ಪಠ್ಯೇತರ ಪ್ರಯತ್ನಗಳು ಅಲ್ಲಿ ಇದ್ದೇ ಇರುತ್ತವೆ. ಅದೇ ಪಂಗಡಗಳಿಗೆ ಸೇರಿದ ವ್ಯವಸ್ಥಾಪಕ ಮಂಡಳಿ, ಉಪಾಧ್ಯಾಯರು ಮತ್ತು ಇತರ ಸಿಬ್ಬಂದಿಗಳು ಹೆಚ್ಚಾಗಿದ್ದು ಜಾತಿ ರಾಜಕಾರಣ, ಜಾತಿ ಪ್ರಜ್ಞೆ ಅಥವಾ ಜಾತಿಯ ಮೇಲರಿಮೆಯ ಇತರ ಪರಿಣಾಮಗಳು ಮಕ್ಕಳಿಗೆ, ಅವರ ನೇರ ಗ್ರಹಿಕೆಗೆ ಬರದಂತೆಯೇ ಆಗುತ್ತಿರುತ್ತದೆ. ಎಷ್ಟೋ ಬಾರಿ ಆ ಜಾತಿಯ ಅಥವಾ ಧರ್ಮದ ಮೌಢ್ಯಗಳು, ಪರಿಕಲ್ಪನೆಗಳು, ಆಚಾರ ವಿಚಾರಗಳು ಸಮಕಾಲದ ಆಲೋಚನೆಗೆ ಅಥವಾ ಜಾಗತಿಕ ಮಟ್ಟದ ವ್ಯಾಪ್ತಿಗೆ ಹೊಂದದೇ ಹೋದರೂ ಅವುಗಳ ಶ್ರೇಷ್ಟತೆಯ ಗೀಳಿಗೆ ಅಥವಾ ಅವುಗಳನ್ನು ಬಿಟ್ಟಿರಲಾರದಂತಹ ವ್ಯಸನಕ್ಕೆ ಈಡಾಗುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇಂತಹ ಮಕ್ಕಳಲ್ಲಿ ಸಮುದಾಯ ಪ್ರಜ್ಞೆಯು ಇಲ್ಲವಾಗಿ ಜಾತಿಪ್ರಜ್ಞೆ ದೃಢವಾಗುವ ಅಪಾಯಗಳಿರುತ್ತವೆ. ಕಡೆಗಣಿಸಲ್ಪಟ್ಟ ಸಮುದಾಯಗಳ ಪ್ರಗತಿ ಮತ್ತು ಅಭಿವೃದ್ಧಿಗೆ ಸಮುದಾಯ ಪ್ರಜ್ಞೆ ಎಷ್ಟು ಮುಖ್ಯವೋ ಅದೇ ರೀತಿ ಸಾಮಾಜಿಕ ಸಂರಚನೆಯಲ್ಲಿ ಜಾತಿಪ್ರಜ್ಞೆಯು ಅಷ್ಟೇ ಅಪಾಯಕರ. ಒಟ್ಟಾರೆ ಹೇಳುವುದಿಷ್ಟೇ. ವರ್ಗಾಧಾರಿತವಾಗಿ ಖಾಸಗಿ ಶಾಲೆಗಳು ದುಬಾರಿ ಅಥವಾ ಅಗ್ಗವಾಗುವುದರಿಂದ, ಅಥವಾ ಜಾತಿ ಹಾಗೂ ಧಾರ್ಮಿಕ ಸಂಸ್ಥೆಗಳು ಖಾಸಗೀ ಒಡೆತನವನ್ನು ಶಾಲೆಗಳ ಮೇಲೆ ಹೊಂದುವುದರಿಂದ ಮಕ್ಕಳು ಸಮಾಜಮುಖಿಯಾಗಿ ಮತ್ತು ಸಮಷ್ಟಿಯ ಭಾವದಲ್ಲಿ ವಿಕಾಸ ಹೊಂದದೇ ಹೋಗುವ ಸಾಧ್ಯತೆಗಳಿರುತ್ತವೆ. ಎಂತಹದ್ದೇ ಕೌಟುಂಬಿಕ ಮತ್ತು ಶೈಕ್ಷಣಿಕ ವಾತಾವರಣವಿದ್ದರೂ ಯಾವುದೇ ವ್ಯಕ್ತಿಯು ತನ್ನ ಕುಟುಂಬ ಶಿಕ್ಷಣದಿಂದ ಅಥವಾ ತನ್ನದೇ ಪ್ರಜ್ಞೆಯಿಂದ ಸಮಷ್ಟಿ ಭಾವವನ್ನು ಅರಿತುಕೊಳ್ಳುವ ಮತ್ತು ರೂಢಿಸಿಕೊಳ್ಳಲು ಸಾಧ್ಯವಿದೆ. ಆದರೆ ಅದು ಸಾಮಾನ್ಯವೂ ಅಲ್ಲ, ಸುಲಭವೂ ಅಲ್ಲ. ಆ ವ್ಯಕ್ತಿಗೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ವಿಶೇಷ ಬದ್ಧತೆ, ಶ್ರದ್ಧೆ ಮತ್ತು ತಿಳುವಳಿಕೆ ಇರಬೇಕು. ಆದರೆ ಈ ವಿಶೇಷವನ್ನೇ ಸಾಮಾನ್ಯಗೊಳಿಸಬೇಕೆಂದರೆ, ಶಿಕ್ಷಣ ವ್ಯವಸ್ಥೆಯು ನೇರವಾಗಿ ಸಂವಿಧಾನಬದ್ಧವಾಗಿ, ಪ್ರಜಾತಾಂತ್ರಿಕ ವ್ಯವಸ್ಥೆಯಾದ ಸರ್ಕಾರದ್ದೇ ಹೊಣೆಗಾರಿಕೆಯ ಸಂಸ್ಥೆಯಾಗಿರಬೇಕು. ದುಬಾರಿ ಅಥವಾ ಅಗ್ಗದ ಆಲೋಚನೆಗಳಿಲ್ಲದೇ ಪ್ರಾದೇಶಿಕ ವ್ಯಾಪ್ತಿಯಲ್ಲಿರುವ ಎಲ್ಲಾ ಮಕ್ಕಳೂ ಒಂದೇ ಸೂರಿನಡಿಯಲ್ಲಿ ಸಮಾನವಾಗಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಬೇಕು. ಎಲ್ಲಾ ಮಕ್ಕಳನ್ನೂ ಆಯಾ ಶಿಕ್ಷಣ ಸಂಸ್ಥೆಯು ಗೌರವಯುತವಾಗಿ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಆತ್ಮವಿಶ್ವಾಸವನ್ನು ಮೂಡಿಸುವ ನಿಟ್ಟಿನಲ್ಲಿ ವರ್ತಿಸಬೇಕು. ಅನಗತ್ಯದ ವೈಭವದ ಪಠ್ಯೇತರಗಳೂ ಬೇಡದ, ಅಗತ್ಯದ ಕೊರತೆಗಳೂ ಇರದಂತಹ ಸರ್ಕಾರಿ ಶಾಲೆಗಳಲ್ಲೇ ಎಲ್ಲಾ ವರ್ಗದ, ವರ್ಣದ ಮಕ್ಕಳು ತಮ್ಮ ಲಾಂಛನಗಳಿಗೆ ಅತೀತವಾಗಿ ಹಾಗೂ ಸಮಾನವಾಗಿ ಶಿಕ್ಷಣ ಪಡೆಯಲು ಸಾಧ್ಯವಾದರೆ ಮುಂದಿನ ಪೀಳಿಗೆಗಳು ಅನಗತ್ಯ ಸಂಘರ್ಷಗಳಿಲ್ಲದೇ ಪ್ರಗತಿಪರವಾಗಿ, ಅಭಿವೃದ್ಧಿಶೀಲರಾಗಿ, ವಿಕಾಸಮುಖಿಯಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಇದರಿಂದ ವ್ಯಕ್ತಿಗತವಾಗಿಯೂ ಮತ್ತು ರಾಷ್ಟ್ರದ ದೃಷ್ಟಿಯಲ್ಲಿಯೂ ಹಿತವಾಗುವುದೆಂಬ ಸಾರ್ವಜನಿಕ ಹಿತಾಸಕ್ತಿಯ ಕಾಳಜಿ ಮತ್ತು ಆಶಯ.  ಅಂತಹ ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ಹೊಂದಿರುವ ರಾಷ್ಟ್ರಗಳು ಅಭಿವೃದ್ಧಿ ಹೊಂದಿ ಮಾದರಿಗಳಾಗಿವೆ. 

LEAVE A REPLY

Please enter your comment!
Please enter your name here