ಭಾಗ-೩

  • ನಿರಂಜನಾರಾಧ್ಯ ವಿ ಪಿ
    (ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ
    ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ)

ಮಕ್ಕಳ ಮಾನಸಿಕ /ನೈತಿಕ ಬೆಂಬಲಕ್ಕೆ ಕ್ರಮ
ಈ ಸಂಕಷ್ಟದ ಕಾಲದಲ್ಲಿ ಮಕ್ಕಳಿಗೆ ಶೈಕ್ಷಣಿಕ ,ಮಾನಸಿಕ ಹಾಗು ನೈತಿಕ ಬೆಂಬಲಕ್ಕೆ ನಿಲ್ಲುವುದು ಒಂದು ದೊಡ್ಡ ಸವಾಲು ಮತ್ತು ಮಹತ್ವದ ವಿಷಯ. ಈ ಕೆಲಸದ ಭಾಗವಾಗಿ ಪಾಲಕರ ಅಥವಾ ಮಕ್ಕಳ ಸ್ಮಾರ್ಟ್ ಪೋನ್ ಗಳನ್ನು ಬಳಸಿ ಆಯಾ ಶಾಲಾ ವ್ಯಾಪ್ತಿಯ (ಶಾಲಾ ನೆರೆಹೊರೆ) ಮಕ್ಕಳ-ಶಿಕ್ಷಕರ ವಾಟ್ಸ್ಆಫ್ ಗುಂಪುಗಳನ್ನು ರಚಿಸುವುದು. ಈ ಗುಂಪಿನಲ್ಲಿ ಮಕ್ಕಳಿಗೇನಾದರು ಆತಂಕ –ತೊಂದರೆ; ವೈಯುಕ್ತಿಕವಾಗಲಿ ಅಥವಾ ಕಲಿಕೆಯಲ್ಲಾಗಲಿ, ಸಂಶಯಗಳಿದ್ದರೆ ಬಗೆಹರಿಸುವುದು ಮತ್ತು ಪೂರಕ ಬೆಂಬಲವನ್ನು ಒದಗಿಸುವುದು. ಅದೇ ರೀತಿಯಲ್ಲಿ, ಶಿಕ್ಷಕರು ಮಕ್ಕಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಅವರಿಗೆ ಆತ್ಮಸ್ಥೈರ್ಯ ಹಾಗು ವಿಷಯ ಪುನಾರಾವರ್ತನೆಗೆ ಸಹಾಯ ಮಾಡುವುದು. ಶಿಕ್ಷಕರು ತಾವು ಕಲಿಸುವ ವಿಷಯದಲ್ಲಿ ಮಕ್ಕಳಿಗೆ ಅನುಕೂಲವಗುವಂತೆ ಚಿಕ್ಕ ಚಿಕ್ಕ ವಿಡಿಯೋಗಳನ್ನು ಮಾಡಿ ಗುಂಪಿನಲ್ಲಿ ಹಂಚಿಕೊಳ್ಳಬಹುದು. ಇದು ಮಕ್ಕಳು ನಿರಂತರ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುವುದಲ್ಲದೆ ಅವರ ಆತಂಕವನ್ನು ದೂರಮಾಡಿ ಸಿಕ್ಕಿರುವ ಸಮಯವನ್ನು ಗರಿಷ್ಠವಾಗಿ ಬಳಸಿಕೊಳ್ಳಲು ಸಹಾಯವಾಗುತ್ತದೆ.

ಸ್ಮಾರ್ಟ್ ಪೋನ್ ಸೌಲಭ್ಯಗಳಿಲ್ಲದ ಗ್ರಾಮೀಣ ಮಕ್ಕಳ ಅದರಲ್ಲೂ ವಿಶೇಷವಾಗಿ ಬಡ ಕೂಲಿ ಕಾರ್ಮಿಕರ ಮತ್ತು ಅವಕಾಶ ವಂಚಿತ ಮಕ್ಕಳ ಸಹಾಯಕ್ಕಾಗಿ ಕನಿಷ್ಠ ಆ ಮಕ್ಕಳು ಊರಿನ ಶಾಲೆಗೆ ಎರಡು ದಿನಕ್ಕೊಮ್ಮೆ ಭೇಟಿನೀಡಲು ಅವಕಾಶ ಕಲ್ಪಿಸಿ ಅಂದು ಕನಿಷ್ಠ ಒಬ್ಬರು ಶಿಕ್ಷಕರು ಶಾಲೆಯಲ್ಲಿ ಇರುವಂತೆ ನೋಡಿಕೊಳ್ಳುವುದು. ಈ ಸಂದರ್ಭದಲ್ಲಿ ದೈಹಿಕ/ವೈದ್ಯಕೀಯ ಅಂತರ ಕಾಯ್ದುಕೊಂಡು ಮಕ್ಕಳು ತಮಗಿರುವ ಸಂದೇಹಗಳನ್ನು ಬಗೆಹರಿಸಿಕೊಳ್ಳಲು ಸೂಕ್ತ ಕ್ರಮ ವಹಿಸುವುದು. ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅಗತ್ಯವಾದ ಮಾಸ್ಕ್ ಹಾಗು ಸ್ಯಾನಿಟೈಜರ್ ನ್ನು ಶಾಲೆಯಲ್ಲಿ ಒದಗಿಸುವುದು

ಎಸ್ಎಸ್ಎಲ್ ಸಿ/ಪಿಯುಸಿ ನಂತರ ಮಕ್ಕಳಿಗಿರುವ ಅವಕಾಶ ಹಾಗು ಅವರು ಬರೆಯಬೇಕಾದ ಅರ್ಹತಾ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್ಷೆಗಳ ಅಧಿಕೃತ ನಿಖರ ಮಾಹಿತಿ
ಮಕ್ಕಳಿಗೆ ಆತಂಕವಿರುವ ಸಂದರ್ಭದಲ್ಲಿ , ಎಸ್ಎಸ್ಎಲ್ ಸಿ/ಪಿಯುಸಿ ನಂತರ ಮಕ್ಕಳಿಗಿರುವ ಅವಕಾಶ ಹಾಗು ಅವರು ಬರೆಯಬೇಕಾದ ಅರ್ಹತಾ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್ಷೆಗಳ ಅಧಿಕೃತ ನಿಖರ ಮಾಹಿತಿಯನ್ನು ಶಿಕ್ಷಕರು ಅವರ ವಾಟ್ಸ್ಆಫ್ ಗುಂಪುಗಳಲ್ಲಿ ರವಾನಿಸುವುದು ಸೂಕ್ತ . ಅಂಥಹ ಮಾಹಿತಿಯ ಬಗ್ಗೆ ಹೆಚ್ಚಿನ ವಿವರಗಳು ಸಂದೇಹಗಳು ಏನಾದರು ಇದ್ದಲ್ಲಿ ಮಕ್ಕಳು ಅವರನ್ನು ಸಂಪರ್ಕಿಸಿ ತಿಳಿದುಕೊಳ್ಳಲು ಸಹಾಯವಾಗುತ್ತದೆ
ಮೇ 31 ರವರೆಗೆ (ಅಗತ್ಯವಿದ್ದಲ್ಲಿ ನಂತರ) ಮನೆಯಲ್ಲಿ ಮಕ್ಕಳು ನೆಮ್ಮದಿಯಿಂದ ಸೃಜನಾತ್ಮಕವಾಗಿ ತೊಡಗಿಸಕೊಳ್ಳಲು ಹೊಸಬಗೆಯ ಕಾರ್ಯಕ್ರಮ
ಲಾಕ್‌ಡೌನ್ ಸಮಯದಲ್ಲಿ ಮನೆಗಳೊಳಗೆ ಸಕ್ರಿಯವಾಗಿರಲು ಹೊಸ ಬಗೆಯ ಸೃಜನಶೀಲ ಮನರಂಜನೆಯ ಮೂಲಕ ಕಲಿಕೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ರೇಡಿಯೋ ಮತ್ತು ದೂರದರ್ಶನದಂತಹ ಉಚಿತ ಮತ್ತು ಸುಲಭವಾಗಿ ಲಭ್ಯವಿರು ಸಂವಹನ ಮಾಧ್ಯಮವನ್ನು ಬಳಸಿ ಪ್ರಸಾರ ಮಾಡುವುದು.
ಖಾಸಗಿ ಶಾಲೆಗಳಲ್ಲಿ ಶುಲ್ಕ ನಿಯಂತ್ರಣಕ್ಕೆ ಕ್ರಮ
ಕೋವಿಡ್ -19 ಬಡವರ ಅದರಲ್ಲೂ ದಿನಗೂಲಿ ನೌಕರರು, ಅಂದು ದುಡಿದು ಅಂದೇ ತಿನ್ನುವ ಲಕ್ಷಾಂತರ ಶ್ರಮ ಜೀವಿಗಳ,ರೈತರ ಮತ್ತು ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುವ ಜನರ ಜೀವನವನ್ನು ಮೂರಾಬಟ್ಟೆಯಾಗಿಸಿದೆ. ಅವರು ಆರ್ಥಿಕವಾಗಿ ಪಾತಾಳಕ್ಕೆ ಕುಸಿದಿದ್ದಾರೆ. ಜೀವನ ನಿರ್ವಹಣೆಯೇ ಅತಿ ದೊಡ್ಡ ಸವಾಲಾಗಿ ಪರಿಣಮಿಸದೆ . ಈ ಸಂದರ್ಭದಲ್ಲಿ ಲಕ್ಷಾಂತರ ಪಾಲಕರು ಖಾಸಗಿ ಶಾಲೆಗಳಲ್ಲಿ ಹಣ ತುಂಬಿ ಓದಿಸುವುದು ಅತ್ಯಂತ ಕಷ್ಟವಾಗಿ ಪರಿಣಮಿಸಿದೆ. ಈ ಸಂದರ್ಭದಲ್ಲಿ ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಮಾನವೀಯತೆಯಿಂದ ವರ್ತಿಸಿ ಮಕ್ಕಳ-ಪಾಲಕರ ಮೇಲೆ ಯಾವುದೇ ಬಗೆಯ ಒತ್ತಡ ಹಾಕದಂತೆ ಕ್ರಮವಹಿಸಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆ ಈಗಾಗಲೇ ತೆಗೆದುಕೊಂಡಿರುವ ಕ್ರಮಗಳ ಜೊತೆಗೆ ಈ ಕೆಳಕಂಡ ಕ್ರಮಗಳನ್ನು ಖಾಸಗಿ ಆಡಳಿತ ಮಂಡಳಿಗಳ ಜೊತೆ ಚರ್ಚಿಸಿ ಒಮ್ಮತದಿಂದ ಕೈಗೊಳ್ಳಬೇಕಿದೆ .

  • ಮಕ್ಕಳು –ಪಾಲಕರು-ಶಿಕ್ಷಕರು  ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಅನುವಾಗುವಂತೆ ಉಚಿತ ದೂರವಾಣಿಯನ್ನು ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸುವುದು. ಜೊತೆಗೆ ಸಾರ್ವಜನಿಕರಿಗೆ ಎಲ್ಲಾ ಬಿಇಒ ಗಳ ಮೊಬೈಲ್  ಮತ್ತು ಕಛೇರಿ ದೂರವಾಣಿ ಒದಗಿಸುವುದು
  • 2019-20ರಲ್ಲಿ ನಿಗದಿಪಡಿಸಿದ ಟ್ಯೂಷನ್ ಶುಲ್ಕ ವನ್ನು ಹೊರತುಪಡಿಸಿ ಬೇರೆ ಯಾವುದೇ ಶುಲ್ಕವನ್ನು ಶಾಲೆಗಳು ವಸೂಲಿ ಮಾಡಬಾರದು .ಈ ಶುಲ್ಕವನ್ನು ಶಿಕ್ಷಕರ ಸಂಬಳಕ್ಕೆ ಮಾತ್ರ ಬಳಸಬೇಕು
  • ಶಾಲೆಗಳು ತೆಗೆದುಕೊಳ್ಳಬಹುದಾದ ನಿರ್ವಹಣಾ ಶುಲ್ಕ ಹಾಗು ಸಾರಿಗೆ ಶುಲ್ಕವನ್ನು ಇಲಾಖೆ ವೈಜ್ಞಾನಿಕವಾಗಿ ಪಾಲಕರಿಗೆ ಹೊರೆಯಾಗದಂತೆ ಸರ್ಕಾರಿ ಶಾಲೆಗಳಿಗೆ ಈ ಅನುದಾನವನ್ನು ನೀಡುವ ಮಾದರಿಯಲ್ಲಿ ತೀರ್ಮಾನಿಸ ಬೇಕು. ಆರ್ ಟಿ ಒ (ಸಾರಿಗೆ) ಸಹಾಯದಿಂದ ಬಸ್ ಶುಲ್ಕವನ್ನು ನಿಗದಿಪಡಿಸಬೇಕು
  • ಈ ಬಾರಿ ಯಾವುದೇ ಅಭಿವೃದ್ಧಿ ಶುಲ್ಕ ವಸೂಲಿಗೆ  ಅವಕಾಶ ನೀಡಬಾರದು
  • ಬದಲಿಗೆ ಸಶಕ್ತವಾಗಿರುವ ಶಾಲೆಗಳು ಬಡಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು

ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಬರಬಹುದಾದ ಮಕ್ಕಳನ್ನು ಸ್ವಾಗತಿಸಲು ಇಲಾಖೆ ವಿಶೇಷ ಯೋಜನೆ ತಯಾರಿಸಬೇಕು
ಮೇಲಿನ ಎಲ್ಲಾ ಕಠಿಣ ಕ್ರಮಗಳ ಹೊರತಾಗಿಯು , ಕೋವಿಡ್-19 ರ ಆರ್ಥಿಕ ದಿವಾಳಿಯಿಂದ ತತ್ತರಿಸಿರುವ ಲಕ್ಷಾಂತರ ಶ್ರಮ ಜೀವಿಗಳ,ರೈತರು ಮತ್ತು ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುವ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಮುಂದುವರಿಸುವುದು ಕಷ್ಟಸಾಧ್ಯವಾಗಿ ಸರ್ಕಾರಿ ಶಾಲೆಗಳಿಗೆ ಮರಳುವ ಸಂಭವನೀಯತೆ –ಸಾಧ್ಯತೆ ದಟ್ಟವಾಗಿದೆ. ಈ ಮಕ್ಕಳನ್ನು ಸರ್ಕಾರಿ ಶಾಲೆಗೆ ಬರಮಾಡಿಕೊಳ್ಳಲು ಇಲಾಖೆ ವಿಶೇಷ ಯೋಜನೆ ತಯಾರಿಸಬೇಕು.

ಲಾಕ್ ಡೌನ್ ಸಂಪೂರ್ಣ ಮುಗಿದು ಸಹಜ ಸ್ಥಿತಿಗೆ ಮರಳಿ ಶಾಲೆಗಳು ಪ್ರಾರಂಭವಾಗಬಹುದು ಎನ್ನುವ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳು

ಶಾಲೆಯನ್ನು ಸಂಪೂರ್ಣ ಸ್ಚಚ್ಛಗೊಳಿಸಿ ಶಾಲೆಯನ್ನು ಪುನರಾರಂಭಿಸಲು ಸಿದ್ಧತೆ ಮಾಡುವುದು
ಸುರಕ್ಷತೆಯ ಭಾಗವಾಗಿ ಶಾಲೆಗಳನ್ನು ಸಂಪೂರ್ಣವಾಗಿ ಸೋಂಕು ನಿವಾರಣೆಗೊಳಿಸುವುದು. (Disinfection). ಈ ಕೆಲಸವನ್ನು ಸ್ಥಳೀಯ ಪಂಚಾಯತಿ/ನಗರ ಪಾಲಿಕೆ ಶಾಲಾ ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (ಎಸ್ಡಿಎಂಸಿ ) ನೆರೆವಿನೊಂದಿಗೆ ಕೈಗೊಳ್ಳುವುದು ಸೂಕ್ತ.ನಂತರ, ತರಗತಿವಾರು ಸ್ಯಾನಿಟೈಸರ್ ಹಾಗು ಎಲ್ಲಾ ಮಕ್ಕಳಿಗೆ ,ಶಿಕ್ಷಕರಿಗೆ ಮತ್ತು ಬೋಧಕೇತರ ಸಿಬ್ಬಂದಿಗೆ ಮಾಸ್ಕ್ ಒದಗಿಸುವುದು. ಶಾಲಾ ಹಂತದಲ್ಲಿ ಅಗತ್ಯ ಸಿದ್ಧತೆಗಳು;ಶಾಲೆಗಳನ್ನು ಸೋಂಕು ನಿವಾರಣೆಗೊಳಿಸುವುದು (Disinfection), ತರಗತಿವಾರು ಸ್ಯಾನಿಟೈಸರ್ ಒದಗಿಸುವುದು, ಎಲ್ಲಾ ಮಕ್ಕಳಿಗೆ ,ಶಿಕ್ಷಕರಿಗೆ ಬೋಧಕೇತರ ಸಿಬ್ಬಂದಿಗೆ ಮಾಸ್ಕ್ ವಿತರಣೆ ಇತ್ಯಾದಿಗಳು ಆಗದಿದ್ದಲ್ಲಿ ಜೂನ್ ಅಂತ್ಯದವರೆಗೆ ರಜೆಯನ್ನು ಮುಂದೂಡಬಹುದು.

ದೈಹಿಕ ಅಂತರ ಕಾಪಾಡಿಕೊಳ್ಳಲು ತರಗತಿ ಕೋಣೆಗಳನ್ನು ಪುನರ್ ಸಂಘಟಿಸುವುದು.
ಕೋವಿಡ್ 19 ಕ್ಕೆ ಲಸಿಕೆ ಕಂಡುಹಿಡಿದು ನಂತರ ಎಲ್ಲರಿಗೂ ಮುನ್ನೆಚ್ಚರಿಕೆಯಾಗಿ ಲಸಿಕೆ ಹಾಕುವವರೆಗೆ ದೈಹಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಕೊರೋನ ವೈರಸ್ ನಿಂದ ರಕ್ಷಣೆ ಪಡೆಯುವುದು ಅತೀ ಮುಖ್ಯವಾದ ಕಾರ್ಯತಂತ್ರವಾಗಿದೆ. ಈ ಕಾರಣದಿಂದ ಈಗಾಗಲೇ ವೈದ್ಯಕೀಯ ಸಮುದಾಯ ನಿಗದಿಪಡಿಸಿರುವಂತೆ ದೈಹಿಕ ಅಂತರವನ್ನು ಕಾಪಾಡಿಕೊಳ್ಳಲು ಅಗತ್ಯ ಸಿದ್ಧತೆಯನ್ನು ಶಿಕ್ಷಕರು ಹಾಗು ಎಸ್ಡಿಎಂಸಿಯವರು ಜೊತೆಗೂಡಿ ತರಗತಿ ಕೋಣೆಗಳನ್ನು ಪುನರ್ ಸಂಘಟಿಸಿಕೊಳ್ಳಬೇಕು. ಮಕ್ಕಳ ಮಧ್ಯೆ ದೈಹಿಕ ಅಂತರ ಕಾಪಾಡಿಕೊಳ್ಳಲು ತರಗತಿ ಕೋಣೆಗಳು ಸಾಲದಿದ್ದಲ್ಲಿ , ಲಭ್ಯವಿರುವ ಕಡೆ ಹೊರಾಂಡ, ತೆರೆದ ಜಾಗದಲ್ಲಿ ಮರದ ಕೆಳಗೆ ಇತ್ಯಾದಿಗಳನ್ನು ಬಳಸಿಕೊಳ್ಳಬಹುದು.

ಮುಂದುವರಿಯುವುದು…

LEAVE A REPLY

Please enter your comment!
Please enter your name here