ಸಮಾಜದ ಉನ್ನತಿ, ಶಿಕ್ಷಣ ಮತ್ತು ಮಾನವೀಯ ಸೇವೆಯನ್ನು ತನ್ನ ಜೀವನದ ಧ್ಯೇಯವನ್ನಾಗಿಸಿಕೊಂಡ ಆಧುನಿಕ ಭಾರತದ ಅಪರೂಪದ ವ್ಯಕ್ತಿತ್ವಗಳಲ್ಲಿ ಕೆ.ಕೆ. ಮಮ್ಮುಣ್ಣಿ ಮೌಲವಿಯವರು ಪ್ರಮುಖರು. ಇಸ್ಲಾಮಿಕ್ ವಿದ್ವಾಂಸರಾಗಿ, ಶಿಕ್ಷಣ ತಜ್ಞರಾಗಿ, ಒಬ್ಬ ಉತ್ತಮ ಸಂಘಟಕರಾಗಿ ಹಾಗೂ ಸಮಾಜ ಸೇವಕರಾಗಿ ಆರು ದಶಕಗಳಿಗೂ ಹೆಚ್ಚು ಕಾಲ ಅವರು ಸೇವೆ ಸಲ್ಲಿಸಿದರು. ಶಿಕ್ಷಣ ಮತ್ತು ಸಮಾಜ ಕಲ್ಯಾಣ ಕಾರ್ಯಗಳ ಮೂಲಕ ಅಸಂಖ್ಯಾತರ ಬದುಕಿನಲ್ಲಿ ಆಶಾಕಿರಣವಾದ ಅವರು ಭಾರತದ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅನನ್ಯವಾದ ಪ್ರಭಾವ ಬೀರಿದ್ದಾರೆ. ಅವರನ್ನು ಆಧುನಿಕ ಭಾರತದ ಸಂತ ಎಂದು ಕರೆಯಬಹುದು.
ಶಿಕ್ಷಣ ಮತ್ತು ವೃತ್ತಿ ಜೀವನ:
ಕೇರಳದ ಮಲಪ್ಪುರಂ ಜಿಲ್ಲೆಯ ಮುಲ್ಲಿಯಾಕುರ್ಸಿಯಲ್ಲಿ 1944ರಲ್ಲಿ ಕಲಕಂದಂತಿಲ್ ಮುಹಮ್ಮದ್ ಮತ್ತು ಕಡಂತೋಡಿ ಮರಿಯಾಕುಟ್ಟಿ ದಂಪತಿಯ ಪುತ್ರನಾಗಿ ಕೆ.ಕೆ. ಮಮ್ಮುಣ್ಣಿ ಮೌಲವಿ ಜನಿಸಿದರು. ಬಾಲ್ಯದಿಂದಲೇ ಧಾರ್ಮಿಕ ಶಿಕ್ಷಣದತ್ತ ಆಸಕ್ತಿ ಬೆಳೆಸಿಕೊಂಡ ಅವರು, ಪ್ರಾರ್ಥಮಿಕ ಶಿಕ್ಷಣದ ಬಳಿಕ 1955ರಿಂದ 1965ರವರೆಗೆ ಶಾಂತಪುರಂ ಇಸ್ಲಾಮಿಯಾ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಅಲ್ಲಿ ಎಫ್ಡಿ ಮತ್ತು ಬಿಎಸ್ಎಸ್ಸಿ ಪದವಿಗಳನ್ನು ಪಡೆದರು. ಬಳಿಕ ಕರಾಯಡ್ ಮದರಸಾದಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಚಾವಕ್ಕಾಡ್ ಮುತುವತ್ತೂರ್ ಮಹಲ್ನಲ್ಲಿ ಇಮಾಮ್ ಹಾಗೂ ಮದರಸ ಶಿಕ್ಷಕರಾಗಿ 1966ರಿಂದ 1976ರವರೆಗೆ ಸೇವೆ ಸಲ್ಲಿಸಿದ ಬಳಿಕ ಮೂವಾಟ್ಟುಪುಳದ ಮದರಸತುಲ್ ಬನಾತ್ ಸಂಸ್ಥೆಯ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು.
ಅನಾಥ ಮಕ್ಕಳ ಸಂರಕ್ಷಕ:
ಅನಾಥ, ಬಡ ಕುಟುಂಬಗಳ ಮತ್ತು ಸೌಲಭ್ಯ ವಂಚಿತ ಸಮುದಾಯಗಳ ಮಕ್ಕಳ ಬದುಕಿನಲ್ಲಿ ಬೆಳಕು ತರಲು ಅವರು ನಿರಂತರವಾಗಿ ಶ್ರಮಿಸಿದರು. ನಿರಾಶ್ರಿತ, ಗಲಭೆ ಪೀಡಿತ, ಪ್ರಕೃತಿ ವಿಕೋಪ ಸಂಭವಿಸಿ ಮನೆಮಾರುಗಳನ್ನು ಕಳಕೊಂಡ ಭಾರತದ ವಿವಿಧ ಪ್ರದೇಶದ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಸೌಲಭ್ಯ ನೀಡಿ ಅವರಿಗೆ ಒಂದು ಸ್ವಾವಲಂಬಿ ಬದುಕನ್ನು ಕಲ್ಪಿಸಿ ಕೊಟ್ಟರು. ದಾನಿಗಳ ನೆರವಿನಿಂದ ದೇಶಾದ್ಯಂತ ಹಲವಾರು ಅನಾಥಾಶ್ರಮಗಳ ಹುಟ್ಟಿಗೆ ಆಧಾರವಾದರು. ಸಾವಿರಾರು ಅನಾಥ ಮಕ್ಕಳಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ನೆರವಾದರು. ಅವರಲ್ಲಿ ಅನೇಕರು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಯುತ ಸ್ಥಾನಗಳಿಸಲು ಸಾಧ್ಯವಾಯಿತು. ಈ ಕಾರಣಕ್ಕಾಗಿ ಅವರನ್ನು “ಅಬುಲ್ ಐತಾಮ್” ಅನಾಥ ಮಕ್ಕಳ ತಂದೆ ಎಂದೇ ಕರೆಯಲಾಗುತ್ತಿತ್ತು.
ಮಸೀದಿ ನಿರ್ಮಾಣ:
ಮಸೀದಿಗಳ ನಿರ್ಮಾಣ, ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರಗಳ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಅಸ್ಸಾಮ್, ಕೇರಳ, ಕರ್ನಾಟಕ ಸೇರಿದಂತೆ ದೇಶದ ಅನೇಕ ಪ್ರದೇಶಗಳಲ್ಲಿ 7500 ಕ್ಕಿಂತಲೂ ಹೆಚ್ಚಿನ ಮಸೀದಿಗಳನ್ನು ನಿರ್ಮಾಣಗೈದರು. ಪಶ್ಚಿಮ ಬಂಗಾಳದಲ್ಲಿ 1200ರಷ್ಟು ಮಸೀದಿಗಳನ್ನು ನಿರ್ಮಾಣ ಮಾಡಿದರು.
ವಿಷನ್ 2026 ಎಂಬ ದೂರದೃಷ್ಟಿ :
ಕೆ.ಕೆ. ಮಮ್ಮುಣ್ಣಿ ಮೌಲವಿಯವರ ಸಮಾಜ ಸೇವೆಯ ವ್ಯಾಪ್ತಿ ಕೇರಳಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಭಾರತದ ವಿವಿಧ ಹಿಂದುಳಿದ ಪ್ರದೇಶಗಳಲ್ಲಿ ಶಿಕ್ಷಣ ಮತ್ತು ಸಮಾಜದ ಅಭಿವೃದ್ಧಿಯ ಕಾರ್ಯದಲ್ಲಿಯೂ ಅವರು ಮಹತ್ವದ ಪಾತ್ರ ವಹಿಸಿದರು. ವಿಷನ್ 2026 ಯೋಜನೆಯ ಚೈಯರ್ಮಾನ್ ಆಗಿ ಕಾರ್ಯ ನಿರ್ವಹಿಸಿದರು. ಈ ಯೋಜನೆಯ ಮೂಲಕ ಉತ್ತರ ಭಾರತ ಸೇರಿದಂತೆ ದೇಶದ ವಿವಿಧ ಸೌಲಭ್ಯ ವಂಚಿತ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ, ಅನಾಥರ ಆರೈಕೆ, ಆರ್ಥಿಕ ಬೆಂಬಲ, ಸಮುದಾಯದ ಅಭಿವೃದ್ಧಿ ಮತ್ತು ವಿಪತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ದಾನಿಗಳ ನೆರವನ್ನು ಅಗತ್ಯವಿರುವ ಜನರಿಗೆ ತಲುಪಿಸುವುದು, ಸ್ಥಳೀಯ ಮಟ್ಟದಲ್ಲಿ ಸಮರ್ಥ ಸಂಸ್ಥೆಗಳನ್ನು ಮತ್ತು ಸೇವಾ ಯೋಜನೆಗಳನ್ನು ರೂಪಿಸುವುದು ಅವರ ಕಾರ್ಯವೈಖರಿಯ ಪ್ರಮುಖ ಅಂಶಗಳಾಗಿದ್ದವು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿಯ ಅವಕಾಶಗಳು ದೊರೆಯಬೇಕು ಎಂಬ ಆಶಯ ಅವರದ್ದಾಗಿತ್ತು.
ಮಕ್ಕಳಿಗಾಗಿ ‘ಮಲರ್ವಾಡಿ’:
ಮಕ್ಕಳಲ್ಲಿ ಜ್ಞಾನ, ಸೃಜನಶೀಲತೆ, ಧಾರ್ಮಿಕ ಮೌಲ್ಯಗಳು, ನೈತಿಕ ಪ್ರಜ್ಞೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಉದ್ದೇಶ ಹೊಂದಿದ್ದ ‘ಮಲರ್ವಾಡಿ’ ಎಂಬ ಕೇರಳದ ಪ್ರಸಿದ್ಧ ಮಕ್ಕಳ ನಿಯತಕಾಲಿಕೆಯ ಬೆಳವಣಿಗೆಯಲ್ಲಿಯೂ ಮಮ್ಮುಣ್ಣಿ ಮೌಲವಿಯವರ ಕೊಡುಗೆ ಗಮನಾರ್ಹವಾಗಿದೆ. ದೀರ್ಘಕಾಲ ಅದರ ಪ್ರಕಾಶಕರಾಗಿಯೂ ಸೇವೆ ಸಲ್ಲಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣ:
ಒಬ್ಬ ವ್ಯಕ್ತಿಯ ಸಾಧನೆಯನ್ನು ಅವರು ಅಲಂಕರಿಸಿದ ಹುದ್ದೆಗಳ ಸಂಖ್ಯೆಯಿಂದ ಮಾತ್ರ ಅಳೆಯಲಾಗದು; ಅವರು ನಿರ್ಮಿಸಿದ ಸಂಸ್ಥೆಗಳು, ರೂಪಿಸಿದ ವ್ಯಕ್ತಿತ್ವಗಳು ಮತ್ತು ಬದಲಿಸಿದ ಬದುಕುಗಳ ಮೂಲಕವೂ ಅಳೆಯಬೇಕು. ಈ ದೃಷ್ಟಿಯಿಂದ ಕೆ.ಕೆ. ಮಮ್ಮುಣ್ಣಿ ಮೌಲವಿಯವರ ಜೀವನ ಮಹತ್ವದ ಅಧ್ಯಯನಕ್ಕೆ ಅರ್ಹವಾಗಿದೆ. ಅವರು ನಿರ್ವಹಿಸಿದ ವಿವಿಧ ಜವಾಬ್ದಾರಿಗಳು ಕೇವಲ ಆಡಳಿತಾತ್ಮಕ ಹುದ್ದೆಗಳಾಗಿರಲಿಲ್ಲ. ಅವು ಶಿಕ್ಷಣ, ಸಂಘಟನೆ, ಅನಾಥರ ಆರೈಕೆ, ಮಸೀದಿಗಳ ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆಯ ಮೂಲಕ ಸಮಾಜವನ್ನು ಬಲಪಡಿಸುವ ಶಕ್ತಿಯಾಗಿತ್ತು.
ಶಿಕ್ಷಣವೆಂದರೆ ಕೇವಲ ಪಠ್ಯಜ್ಞಾನವಲ್ಲ; ಅದು ವ್ಯಕ್ತಿತ್ವ ನಿರ್ಮಾಣ, ನೈತಿಕ ಬೆಳವಣಿಗೆ ಮತ್ತು ಸಾಮಾಜಿಕ ಪರಿವರ್ತನೆಯ ಪ್ರಮುಖ ಸಾಧನವಾಗಿದೆಯೆಂಬ ಚಿಂತನೆಯೇ ಅವರಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಹೊಸ ದಿಕ್ಕು ನೀಡಿತು. ಶಾಂತಪುರಂ ಇಸ್ಲಾಮಿಯಾ ಕಾಲೇಜು, ವಡನಪ್ಪಳ್ಳಿ ಅನಾಥಾಶ್ರಮ ಮತ್ತು ಇಸ್ಲಾಮಿಯಾ ಕಾಲೇಜು, ಅಝಿಕೋಡ್ ಇಸ್ಲಾಮಿಕ್ ಎಜುಕೇಷನಲ್ ಕಾಂಪ್ಲೆಕ್ಸ್, ಪೆರಿಂಥಲ್ಮನ್ನಾ, ಇಸ್ಲಾಮಿಕ್ ಮಿಷನ್ ಟ್ರಸ್ಟ್, ಪತ್ತಿರಿಪ್ಪಾಲ ಬೈತು ಶರೀಖಾ, ಪತ್ತಿರಿಪಾಲ ಮೌಂಟ್ ಸೀನಾ, ಅಲ್ ಖೈರಿ ಟ್ರಸ್ಟ್, ಪೆರುಂಪಿಲಾವು ಅನ್ಸಾರಿ ಚಾರಿಟೇಬಲ್ ಟ್ರಸ್ಟ್, ಹ್ಯೂಮನ್ ವೆಲ್ಫೇರ್ ಫೌಂಡೇಶನ್, ಸಹೂಲತ್ ಮೈಕ್ರೋಫೈನಾನ್ಸ್ ಮತ್ತು ಸೊಸೈಟಿ ಫಾರ್ ಬ್ರೈಟ್ ಫ್ಯೂಚರ್ ಕೆಚೇರಿ ಅಲ್ ಇಸ್ಲಾ, ಪೆರಿಂಗಡಿ ಅಲ್ಫಲಾ, ತುವ್ವೂರ್ ಹಿರಾ ಇಂಗ್ಲಿಷ್ ಶಾಲೆ ಇತ್ಯಾದಿ ಸಂಸ್ಥೆಗಳ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿ ಅದರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದರು. ದೇಶಾದ್ಯಂತ 180ಕ್ಕೂ ಅಧಿಕ ಸಂಸ್ಥೆಗಳ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಶಾಂತಪುರಂ ಮಹಲ್ನ ಸಹಾಯಕ ಖಾಝಿಯಾಗಿ ಸೇವೆ ಸಲ್ಲಿಸಿದರು.
ಸಂಘಟನಾ ಬದುಕು :
ಕೆ.ಕೆ. ಮಮ್ಮುಣ್ಣಿ ಮೌಲವಿಯವರ ನಾಯಕತ್ವದ ಪ್ರಮುಖ ವೈಶಿಷ್ಟ್ಯವೆಂದರೆ ಸಂಘಟನೆಯನ್ನು ಕೇವಲ ಸಭೆ, ಸಮಾವೇಶಗಳಿಗೆ ಸೀಮಿತವಾಗಿಸದೆ ಶಿಕ್ಷಣ, ಆರೋಗ್ಯ, ಬಡವರ ಕಲ್ಯಾಣ ಮತ್ತು ಸಾಮಾಜಿಕ ಅಭಿವೃದ್ಧಿಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಶಯದೊಂದಿಗೆ ಬದುಕಿದರು.1977 ಮತ್ತು 1987 ರ ನಡುವೆ, ಸುಮಾರು ಹತ್ತು ವರ್ಷಗಳ ಕಾಲ ಜಮಾಅತೇ-ಇಸ್ಲಾಮಿ ಕೇರಳದ ವಲಯ ನಾಝಿಮ್ (ನಾಯಕ) ಆಗಿ ಸಂಘಟನಾ ಜವಾಬ್ದಾರಿಯನ್ನು ವಹಿಸಿಕೊಂಡರು. ಎರ್ನಾಕುಲಂ, ಆಲಪ್ಪುಳ, ಕೊಲ್ಲಂ, ತಿರುವನಂತಪುರಂ, ಕೊಟ್ಟಾಯಂ, ಇಡುಕ್ಕಿ, ಪತ್ತನಂತಿಟ್ಟ, ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಸಂಘಟನೆಯ ಜವಾಬ್ದಾರಿಯನ್ನು ನಿರ್ವಹಿಸಿದರು. ಜಮಾಅತೆ ಇಸ್ಲಾಮಿ ಕೇರಳದ ಶೂರಾ ಹಾಗೂ ಅಖಿಲ ಭಾರತ ಪ್ರತಿನಿಧಿ ಸಭೆಯ ಸದಸ್ಯರಾಗಿ ದೀರ್ಘಕಾಲ ಸೇವೆ ಸಲ್ಲಿಸಿದರು.
ಧಾರ್ಮಿಕ ವಿದ್ವತ್ತು, ಶೈಕ್ಷಣಿಕ ಬದ್ಧತೆ, ಸಂಘಟನಾ ಸಾಮರ್ಥ್ಯ ಮತ್ತು ಮಾನವೀಯ ಕಾಳಜಿ ಸಮನ್ವಯಗೊಂಡ ವ್ಯಕ್ತಿತ್ವವೇ ಕೆ.ಕೆ ಮಮ್ಮುಣ್ಣಿ ಮೌಲವಿ. ಅತ್ಯಂತ ಸರಳ ಮತ್ತು ಸುಂದರ ಜೀವನ ನಡೆಸಿದರು.
“ಜ್ಞಾನವು ಸಮಾಜದ ಒಳಿತಿಗೆ ಬಳಕೆಯಾಗಬೇಕು; ಸಂಪತ್ತು ಸಂಕಷ್ಟದಲ್ಲಿರುವವರ ನೆರವಿಗೆ ಬರಬೇಕು; ನಾಯಕತ್ವವು ಅಧಿಕಾರಕ್ಕಿಂತ ಸೇವೆಗೆ ಆದ್ಯತೆ ನೀಡಬೇಕು ಎಂಬುವುದನ್ನು ಕೆ.ಕೆ. ಮಮ್ಮುಣ್ಣಿ ಮೌಲವಿಯವರ ಬದುಕು ನಮಗೆ ನೀಡುವ ಸ್ಪಷ್ಟ ಸಂದೇಶವಾಗಿದೆ. ಜ್ಞಾನ, ಸಮರ್ಪಣೆ ಮತ್ತು ಮಾನವೀಯತೆಗಾಗಿ ಸೇವೆ ಸಲ್ಲಿಸಿದ ಅವರ ಮಾದರಿ ಜೀವನವು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ. ಅವರು ಬೆಳೆಸಿದ ಸೇವಾ ಪರಂಪರೆ ಇನ್ನಷ್ಟು ಬೆಳೆಯಲಿ, ಸಮಾಜದ ಅಂಚಿನಲ್ಲಿರುವ ಜನರಿಗೆ ಬೆಳಕಾಗಲಿ.ಸೆಪ್ಟೆಂಬರ್ 23, 2026 ರಂದು ತಮ್ಮ 82ನೇ ವಯಸ್ಸಿನಲ್ಲಿ ಕೆ.ಕೆ. ಮಮ್ಮುಣ್ಣಿ ಮೌಲವಿಯವರು ಇಹಲೋಕ ತ್ಯಜಿಸಿದರು.





















































