• ಶರೀಫ್ ಕಾಡುಮಠ

ಡಿವಿಜಿ ಅವರ ಕಗ್ಗದ ನುಡಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಸೃಷ್ಟಿಗೊಂಡ ಒಂದು ಮೈಲಿಗಲ್ಲು ಎಂದೇ ಹೇಳಬಹುದು. ಅತಿ ಕಡಿಮೆ ಸಾಲಿನಲ್ಲಿ ಬರೆದರೂ ಪ್ರತಿ ಸಾಲು ಕೂಡಾ ಮುಖ್ಯ ಎಂಬಷ್ಟು ಸಮರ್ಥವಾಗಿ ತಮ್ಮ ಪದ್ಯಗಳಲ್ಲಿ ಪದಗಳ ಬಳಕೆ ಮಾಡಿದವರು ಅವರು. ‘ಅತಿ’ ಎಂಬುದು ಅವನತಿಯ ಆದಿ/ಹಾದಿ ಎಂಬುದನ್ನು ಬಹಳ ಚೆನ್ನಾಗಿ ವಿವರಿಸುವ ಅವರ ಒಂದು ಪದ್ಯ ಹೀಗಿದೆ.

ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ |
ಹಿತವಿರಲಿ ವಚನದಲಿ, ಋತವ ಬಿಡದಿರಲಿ ||
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ |
ಅತಿ ಬೇಡವೆಲ್ಲಿಯುಂ – ಮಂಕುತಿಮ್ಮ

ಸಾಮಾನ್ಯವಾಗಿ ಒಬ್ಬ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಅಂಶಗಳನ್ನು ಇಷ್ಟು ಸುಂದರವಾಗಿ ಹಿಡಿದಿಟ್ಟ ಕಡಿಮೆ ಸಾಲುಗಳು ನನಗೆ ತಿಳಿದ ಮಟ್ಟಿಗೆ ಬೇರೆ ಇಲ್ಲ. ಒಂದು ಆದರ್ಶದ ಸಲಹೆ ಇದು. ಕೊನೆಯ ಸಾಲು-ಅತಿಬೇಡವೆಲ್ಲಿಯುಂ- ಹಲವಾರು ಬಗೆಯಲ್ಲಿ ನಮ್ಮ ಬದುಕಿಗೆ ಮುಖ್ಯವಾಗುವ ಮಾತೇ. ಎಲ್ಲಿಯೂ ಅತಿ ಎನ್ನುವುದು ಒಳ್ಳೆಯದಲ್ಲ. ಮಿತ ಎಂಬುದು ಹಿತ.
ಈ ಸಾಲುಗಳನ್ನೇ ಮುಂದಿಟ್ಟುಕೊಂಡು ಒಬ್ಬ ಮಹಾನ್ ವ್ಯಕ್ತಿತ್ವದ ಕುರಿತು, ಆ ಮಾನವತೆಯ ಮಾರ್ಗದರ್ಶಕ ತೋರಿದ ಸರಳ ಬದುಕಿನ ಹಾದಿಯ ಕುರಿತು ಕೆಲವು ಮುಖ್ಯ ಅಂಶಗಳನ್ನು ಮುಂದಿಡಲು ಬಯಸುವೆ.
ನಮ್ಮ ನಗು ಇನ್ನೊಬ್ಬರನ್ನು ನೋಯಿಸಬಾರದು, ಅವರನ್ನು ನೋಡಿ, ಹಿಯಾಳಿಸಿ ನಕ್ಕೆವೇನೋ ಎಂದು ಅವರಿಗೆ ಅನಿಸುವಂತಾಗಬಾರದು ಎಂಬ ಉದ್ದೇಶದಲ್ಲಿ ಆ ಮಹಾನ್ ವ್ಯಕ್ತಿ ನಗುವುದರಲ್ಲೂ ಪಾಠ ಹೇಳಿದವರು. ಇದೆಂತಹ ಪಾಠ? ನಗುವಿಗೂ ಬೇಲಿಯೇ? ಎಂದು ನಮಗೆ ಅನಿಸಬಹುದು. ಆದರೆ ನಮ್ಮ ಸುತ್ತಲಿನಲ್ಲೇ, ನಾವು ಇನ್ನೊಬ್ಬರ ಜೊತೆ ಮಾತನಾಡುತ್ತ ಗಹಗಹಿಸಿ ನಗುವುದು, ಪಕ್ಕ ನಿಂತ ಅಪರಿಚಿತರು, ಅನ್ಯಭಾಷಿಕರು, ಇವರೇನೋ ತಮ್ಮನ್ನೇ ಗೇಲಿ ಮಾಡಿ ನಗುತ್ತಿದ್ದಾರೆ ಎಂದು ಭಾವಿಸುವುದು ನಡೆಯುತ್ತಲೇ ಇರುತ್ತದೆ. ಎಷ್ಟು ಬೇಕೋ ಅಷ್ಟು ನಗುವುದು. ಇನ್ನೊಬ್ಬರನ್ನು ನೋಯಿಸದ, ಮತ್ತೆ ಮತ್ತೆ ಅವರು ಅದನ್ನೇ ಯೋಚಿಸುತ್ತ ಕೊರಗುವಂತೆ ಮಾಡದ, ಗೊಂದಲ ಸೃಷ್ಟಿಸದ ನಗು ಮನುಷ್ಯ ಮನುಷ್ಯರ ನಡುವೆ ಇರಲಿ ಎಂಬ ಸಂದೇಶವನ್ನು ಅವರು ತಮ್ಮ ಚರ್ಯೆಯ ಮೂಲಕವೇ ತೋರಿಸಿದರು. ಡಿವಿಜಿ ಅವರು ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ ಎಂದಿದ್ದೇ ಅದಕ್ಕೆ. ನಗು ಎಂಬುದು ಮುಖಕ್ಕೆ ಸಾಕು. ಅದು ಇನ್ನೊಬ್ಬರ ಕಿವಿಗೆ ತಲುಪಬೇಕೆಂದಿಲ್ಲ.
ನಗುವಿನಂತೆಯೇ ಮಾತು ಕೂಡಾ ಅಷ್ಟೇ ಮಿತಿಯಲ್ಲಿರಬೇಕು ಎಂಬುದನ್ನೂ ಆ ಮಹಾನ್ ವ್ಯಕ್ತಿ ತಿಳಿಸಿದ್ದರು. ‘ಊಟ ಮಾಡುವಾಗ ಮಾತನಾಡಬಾರದು’ ಎಂಬ ಅವರ ಸಂದೇಶ ಒಂದೆಡೆ ಆರೋಗ್ಯದ ದೃಷ್ಟಿಯಿಂದ ಇದ್ದರೂ, ಮತ್ತೊಂದೆಡೆ ಮಾತಿಗೆ ಹಾಕಬೇಕಾದ ಕಡಿವಾಣದ ಬಗ್ಗೆಯೂ ಅದು ತಿಳಿಸುತ್ತದೆ. ಊಟ ಮಾಡುವಾಗಲೂ ಮಾತನಾಡುವಷ್ಟು ವಾಚಾಳಿತನ ಇರಬಾರದು ಎಂಬುದನ್ನು ಸೂಚ್ಯವಾಗಿ, ನಯವಾಗಿ ಹಾಗೆ ಹೇಳಿದ್ದಾರೆ. ಅದರ ಜೊತೆಗೆ ಸತ್ಯಕ್ಕೆ ಅವರು ನೀಡಿದ ಮಹತ್ವವೂ ಅಷ್ಟೇ ಮುಖ್ಯ. ಎಂದಿಗೂ ಆ ವ್ಯಕ್ತಿ ಸುಳ್ಳಿಗೆ ಪ್ರಾಮುಖ್ಯತೆಯನ್ನೇ ಕೊಟ್ಟಿಲ್ಲ. ಸತ್ಯ ಹೇಳುವುದರಲ್ಲೊಂದು ಹಿತವಾದ ಸುಖವಿದೆ. ಅದನ್ನು ಸತ್ಯವಂತರಿಗೆ ಮಾತ್ರ ಅನುಭವಿಸಲು ಸಾಧ್ಯ. ಆ ಸುಖವನ್ನು ನಾವು ಸುಳ್ಳು ಹೇಳುವುದನ್ನು ರೂಢಿ ಮಾಡುತ್ತಲೇ ಕಳೆದುಕೊಳ್ಳುತ್ತೇವೆ. ‘ಋತವ ಬಿಡದಿರಲಿ’ ಎಂಬ ಸಾಲು, ಎಷ್ಟೇ ಮಾತನಾಡಿದರೂ ಸತ್ಯವನ್ನು ಬಿಡಬಾರದು ಎಂಬ ಸಂದೇಶ ಸಾರುತ್ತದೆ. ‘ಇನ್ನೊಬ್ಬರನ್ನು ನಗಿಸುವ ಉದ್ದೇಶದಿಂದಲೂ ಕೂಡಾ ಸುಳ್ಳನ್ನು ಹೇಳಬಾರದು’ ಎಂಬ ಆ ವ್ಯಕ್ತಿಯ ಸಂದೇಶ ಇಲ್ಲಿ ಪ್ರಸ್ತುತ. ನಮ್ಮ ಗೆಳೆಯರೇ ಇರುತ್ತಾರೆ. ನಾಲ್ಕು ಜನ ಜೊತೆಗಿದ್ದಾಗ, ಅವರನ್ನು ನಗಿಸಲು ಒಂದು ಘಟನೆಯ ನಡುವೆ ಹಾಸ್ಯದ ಸುಳ್ಳನ್ನು ತುರುಕಿಸಿಬಿಡುತ್ತಾರೆ. ಆಗ ಎಲ್ಲರೂ ನಗುತ್ತಾರೆ. ತಾನು ಹೀಗೆ ಹೇಳಿ ಅವರನ್ನು ನಗಿಸಿದೆ ಎಂಬ ಹೆಮ್ಮೆ ಅವರಿಗೆ. ಆದರೆ ಆ ನಗುವಿಗೋಸ್ಕರ ಒಂದು ಸುಳ್ಳನ್ನು ಹೇಳಿದೆನಲ್ಲ ಎಂಬ ಪರಿತಾಪವನ್ನು ಅವರ ಸುಪ್ತ ಮನಸ್ಸು ಹಾಗೇ ಕಟ್ಟಿಕೊಂಡಿರುತ್ತದೆ. ಮಾತು, ಸುಳ್ಳು, ನಗು ಈ ಮೂರೂ ಅಂಶಗಳನ್ನು ಮೇಲಿನ ಉದಾಹರಣೆಯನ್ನಿಟ್ಟುಕೊಂಡೇ ವಿಶ್ಲೇಷಿಸಬಹುದು.
‘ಮಿತವಿರಲಿ ಮನಸಿನುದ್ವೇಗದಲಿ- ಭೋಗದಲಿ’. ನಾವು ಭಾವುಕರಾಗುತ್ತೇವೆ. ಬಹಳ ಬೇಗ ಉದ್ವೇಗಕ್ಕೆ ಒಳಗಾಗುತ್ತೇವೆ. ಕೆಲವು ಸಂಗತಿಗಳಿಗೆ ವ್ಯಕ್ತಿ-ವ್ಯಕ್ತಿತ್ವಗಳಿಗೆ ಬೇಗನೆ ಆಪ್ತವಾಗಿ ಬಿಡುತ್ತೇವೆ. ಭಾವೋದ್ವೇಗದಿಂದ, ಕೋಪದಿಂದ ಏನೇನೋ ಅನಾಹುತಗಳನ್ನು ಮಾಡಿಬಿಡುತ್ತೇವೆ. ಯಾರಿಗೋ ಮಾಡಿದ ಅವಮಾನ ನಮಗೇ ಮಾಡಿದಂತನಿಸುತ್ತದೆ. ಅವರ ಪರವಾಗಿ ನಾವೇ ಪ್ರತೀಕಾರ ತೀರಿಸಬೇಕು ಅನಿಸುತ್ತದೆ. ಆಕ್ರೋಶ ಹೆಚ್ಚುತ್ತದೆ. ಈ ಎಲ್ಲ ಪ್ರಕ್ರಿಯೆಗಳನ್ನು ಖಂಡಿತವಾಗಿಯೂ ನೀವು ನಿಮ್ಮ ಸಮಾಜದಲ್ಲಿ ನಿತ್ಯ ಕಾಣುತ್ತಲೇ ಇರುತ್ತೀರಿ. ದೇವರ ಬಗ್ಗೆ, ಪವಿತ್ರ ಸ್ಥಳಗಳ ಬಗ್ಗೆ ಆಯಾ ಧರ್ಮದವರಿಗೆ ಅವರದೇ ನಂಬಿಕೆ ಭಾವನೆಯಿದೆ. ಆದರೆ ಇನ್ನೊಬ್ಬರು ಅದರಲ್ಲಿ ವಿಕೃತಿ ಮೆರೆದಾಗ ನಾವು ಭಾವೋದ್ವೇಗಕ್ಕೊಳಗಾಗುತ್ತೇವೆ. ಆಕ್ರೋಶಿತರಾಗುತ್ತೇವೆ. ಅದು ಕೆಲವೊಮ್ಮೆ ಮನುಷ್ಯರನ್ನು ಕೊಲ್ಲುವ ಮಟ್ಟಕ್ಕೂ ತಲುಪಿಸುತ್ತದೆ. ಹೀಗೆ ಅಹಿಂಸೆಯನ್ನು ಕಲಿಸುವ ಧರ್ಮಗಳ ರಕ್ಷಣೆ ಎಂಬ ನೆಪದಲ್ಲಿ ನಾವು ಹಿಂಸೆಯ ಮೊರೆ ಹೋಗುತ್ತೇವೆ. ಮೂರ್ಖರೆನಿಸಿಕೊಳ್ಳುತ್ತೇವೆ. ಹೀಗಾಗಿಯೇ ಭಾವನೆಗಳನ್ನು, ನಿಯಂತ್ರಿಸಿಕೊಳ್ಳುವ ನಿಟ್ಟಿನಲ್ಲಿಯೂ ಹಲವು ವಿಷಯಗಳನ್ನು ಆ ಮಹಾನ್ ವ್ಯಕ್ತಿ ಜನರ ಮುಂದಿಟ್ಟಿದ್ದಾರೆ. ಅವು ಅತಿಯಾದರೆ ತಂದೊಡ್ಡಬಹುದಾದ ಅಪಾಯಗಳನ್ನು ಅವರು ಸೂಚಿಸಿದ್ದಾರೆ.
ಭೋಗ- ಎಂದರೆ ಸುಖ, ಸಂಪತ್ತು, ಐಷಾರಾಮದ ಬದುಕು. ಇವೆಲ್ಲದಕ್ಕೂ ‘ಮಿತ’ ದ ಬೇಲಿಯನ್ನು ತಂದಿಟ್ಟಿದ್ದಾರೆ ಆ ವ್ಯಕ್ತಿ. ಸ್ವತಃ ಆರ್ಥಿಕವಾಗಿ ಸಾಧಾರಣ ಕುಟುಂಬದವರಾಗಿದ್ದ ಅವರು, ಐಷಾರಾಮದ ಬದುಕಬ್ನು ಎಂದೂ ಬಯಸಿಲ್ಲ. ಅತ್ಯಂತ ಬಡವರಾಗಿ, ದಿನದ ಹೊತ್ತಿಗೆ ಸರಿಯಾಗಿ ಊಟವಿಲ್ಲದೆಯೂ ದಿನಕಳೆದವರು. ಕೆಲವು ಶ್ರೀಮಂತರಿದ್ದಾರೆ. ತಮಗೆ ಈ ಶ್ರೀಮಂತಿಕೆ ಹೇಗೋ ಬಂದಿದೆ. ದೇವರು ಕೊಟ್ಟದ್ದು. ಹಾಗಾಗಿ ನಾವದನ್ನು ವ್ಯಯಿಸುತ್ತೇವೆ ಎನ್ನುತ್ತಾರೆ. ಆದರೆ ಶ್ರೀಮಂತಿಕೆಗೆ ನಿಯಂತ್ರಣ ತಂದಿರುವುದು ‘ದಾನ’ ಎಂಬ ಪರಿಣಾಮಕಾರಿ ಮಾರ್ಗ. ಅದನ್ನು ಕಲಿಸಿದ್ದು ‘ಅವರು’. ಏಕೆ ದಾನ ಮಾಡಬೇಕು? ಏಕೆ ದಾನ ಪಡೆಯಬೇಕು? ನಮ್ಮ ಸಮಾಜದಲ್ಲಿ ಬಡವರಿದ್ದಾರೆ ಶ್ರೀಮಂತರೂ ಇದ್ದಾರೆ‌ ಬಡವರು ನೇರವಾಗಿ ಶ್ರೀಮಂತರ ಮನೆಗೆ ಹೋಗಿ ‘ನಾನು ಬಡವ, ನೀವು ಶ್ರೀಮಂತರಿದ್ದೀರಿ‌. ಹಾಗಾಗಿ ನಿಮ್ಮಲ್ಲಿರುವ ಸಂಪತ್ತಿನ ಸ್ವಲ್ಪವನ್ನು ನನಗೂ ಕೊಡಿ, ಆಗ ನನ್ನ ಕುಟುಂಬವೂ ಆರ್ಥಿಕವಾಗಿ ಚೇತರಿಸುತ್ತದೆ’ ಎಂದು ಹೇಳಿದರೆ ಅವರು ಕೊಟ್ಟುಬಿಡುತ್ತಾರೆಯೇ? ಖಂಡಿತಾ ಇಲ್ಲ. ಇದೇ ಕಾರಣಕ್ಕೆ ದಾನ ಎಂಬ ಪರಿಕಲ್ಪನೆಯನ್ನು ತರಲಾಗಿದೆ. ದಾನಕ್ಕೆ ಲೆಕ್ಕವಿಲ್ಲ. ಕಾರಣವಿಲ್ಲ. ಎಷ್ಟು ಬೇಕಾದರೂ ದಾನ ಮಾಡಬಹುದು. ನಿಜಕ್ಕೂ ಸಮಾಜದಲ್ಲಿ ಆರ್ಥಿಕ ಅಸಮಾನತೆಯನ್ನು ನಿವಾರಿಸಬಹುದಾದ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದರೆ ಅದು ‘ದಾನ’ದ ಮಾರ್ಗ. ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವುದೇ ದಾನದ ನಿಜ ಉದ್ದೇಶ. ಆರ್ಥಿಕ ಅಸಮಾನತೆ ಎನ್ನುವುದು ಎಷ್ಟೊಂದು ಅಪಾಯಕಾರಿ ಎಂಬುದು ಇನ್ನೂ ನಮ್ಮ ಪ್ರಜ್ಞೆಗೆ ಬಂದಿಲ್ಲ ಎಂಬುದೇ ದುರಂತ.
ಕೊನೆಯದಾಗಿ, ಕೊನೆಯ ಸಾಲು, ‘ಅತಿ ಬೇಡವೆಲ್ಲಿಯುಂ- ಮಂಕುತಿಮ್ಮ’ ಎಂಬುದು. ನೀವು ಯಾವುದೇ ವಿಷಯವನ್ನು ತೆಗೆದುಕೊಳ್ಳಿ. ‘ಅತಿ’ ಮತ್ತು ‘ಮಿತ’ ಎಂಬ ಎರಡು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತಿ ವಿಷಯಗಳನ್ನೂ ಗಮನಿಸಿ. ಈ ಜಗತ್ತಿನಲ್ಲಿ ಸೃಷ್ಟಿಯಾದ ಪ್ರತಿಯೊಂದು ಅನಾಹುತದ ಹಿಂದೆ ‘ಅತಿ’ ಎಂಬುದೇ ಇರುತ್ತದೆ! ಎಲ್ಲಿಯೂ ಅತಿ ಬೇಡ ಎಂದಿದ್ದು ಅದಕ್ಕೇ. ಪ್ರತಿಯೊಂದನ್ನೂ ಮಿತವಾಗಿ ಬಳಸಿ, ಮಿತಿಯಲ್ಲೇ ಬದುಕುವುದನ್ನು ‘ಅವರು’ ಈ ಸಮಾಜಕ್ಕೆ ಕಲಿಸಿದ್ದರು. ಅವರ ಬದುಕಿನ ಆದರ್ಶಕ್ಕೆ ಮಹಾತ್ಮ ಗಾಂಧಿ, ಲಿಯೊ ಟಾಲ್ಸ್ಟಾಯ್ ಅವರಂತಹ ಮಹಾನ್ ವ್ಯಕ್ತಿಗಳು ಮನಸೋಲುವುದಕ್ಕೆ ಇರುವ ಕಾರಣಗಳೇ ಇವು. ಅವರ ಸರಳ ಬದುಕು, ಸಾಮಾಜಿಕ ನೀತಿ, ನ್ಯಾಯ, ಬದ್ಧತೆ, ನಾಯಕತ್ವ ಇವೆಲ್ಲವೂ ಜಗತ್ತಿನ ಎಲ್ಲ ಮಹಾನ್ ವಿದ್ವಾಂಸರನ್ನೂ ಸೆಳೆದಿದೆ.
ಅಷ್ಟಕ್ಕೂ ಆ ಮಹಾನ್ ವ್ಯಕ್ತಿ ಯಾರು? ಆ ವ್ಯಕ್ತಿಯ ಹೆಸರನ್ನು ಆರಂಭದಲ್ಲೇ ಹೇಳಬಹುದಿತ್ತಲ್ಲವೇ ಎಂದು ನಿಮಗನಿಸಬಹುದು. ಆದರೆ ಆ ವ್ಯಕ್ತಿಯ ಹೆಸರು ಕೇಳಿದ ಮೇಲೆ ಇದನ್ನು ಓದುವುದಕ್ಕಿಂತ, ಓದ ಪೂರ್ತಿಯಾದ ಮೇಲೆ ಆ ಹೆಸರು ತಿಳಿದರೆ ಉಂಟಾಗಬಹುದಾದ ಬದಲಾವಣೆಗಾಗಿ ಮೊದಲಲ್ಲೇ ಹೇಳಲಿಲ್ಲ. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಬದಲಾಗಿ, ಈ ಸಮಾಜ ಕೇವಲ ಮುಸ್ಲಿಂ ಸಮುದಾಯಕ್ಕೆ ಸಂದೇಶ ಕೊಟ್ಟವರು ಎಂದು ಭಾವಿಸಿದ, ಆದರೆ ಇಡೀ ಜಗತ್ತಿಗೇ ಜಾತಿ ಧರ್ಮಗಳ ಪರಿಧಿಯಾಚೆಗಿನ ಮಾನವತೆಯ ಸಂದೇಶವನ್ನು ನೀಡಿದ ಮಾರ್ಗದರ್ಶಕ, ಪ್ರವಾದಿ ಮುಹಮ್ಮದ್ (ಸ). ಅವರ ಜನ್ಮದಿನದ ಮಾಸದಲ್ಲಿ, ಎಂದಿಗೂ ಮಾಸಿಹೋಗದ, ಸಮಾಜವನ್ನು ಪರಿವರ್ತಿಸಬಲ್ಲ, ಸ್ವಸ್ಥ ರೀತಿಗೆ ತರಬಲ್ಲ ಅವರ ಸಂದೇಶಗಳನ್ನು ಈ ಹೊತ್ತು ನೆನಪಿಸಿಕೊಳ್ಳುವುದು ಅಗತ್ಯ ಎನ್ನುವಷ್ಟೇ, ಅವುಗಳ ಅನುಸರಣೆ, ಅಳವಡಿಕೆ ಕೂಡಾ ಮುಖ್ಯವಾಗುತ್ತದೆ.

LEAVE A REPLY

Please enter your comment!
Please enter your name here