ಲೇಖಕರು : ಮಡಿವಾಳಪ್ಪ ಒಕ್ಕುಂದ, ಧಾರವಾಡ. (ಡಾ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಸಂಶೋಧನೆ ನಡೆಸಿದವರು)

ನಿನ್ನೆಯಷ್ಟೇ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕ ವೃತ್ತಿಯಿಂದ ನಿವೃತ್ತಿ ಹೊಂದಿರುವ ನಾಡಿನ ಖ್ಯಾತ ಸಾಹಿತಿ ಮತ್ತು ಸಂಶೋಧಕ ಡಾ.ರಹಮತ್ ತರೀಕೆರೆ ಅವರೊಂದಿಗಿನ ಒಡನಾಟವನ್ನು ಲೇಖಕರು ಹಂಚಿಕೊಂಡಿದ್ದಾರೆ.

ಡಾ. ರಹಮತ್ ತರೀಕೆರೆಯವರು ನಿನ್ನೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕ ವೃತ್ತಿಯಿಂದ ನಿವೃತ್ತಿ ಹೊಂದಿದರು. ಐದು ದಿನಗಳ ಹಿಂದೆ ಅವರ ಹುಟ್ಟುಹಬ್ಬವೂ ಇತ್ತು. ನಾಡಿನ ಮೂಲೆಮೂಲೆಯಿಂದ ಅವರನ್ನು ಕುರಿತು ಪ್ರೀತಿ ಅಭಿಮಾನದ ಹೊಳೆ ಹರಿದು ಬರುತ್ತಿದೆ. ನಿರಂತರ ದುಡಿಮೆ ಹಾಗೂ ಅಪಾರ ಅಂತಃಕರಣದ ಬದುಕಿಗೆ ಕನ್ನಡ ಮನಸ್ಸು ಪ್ರೀತಿ ಗೌರವಗಳನ್ನು ತೋರುತ್ತಿದೆ. ಕನ್ನಡ ಸಾಹಿತ್ಯ ಸಂಸ್ಕೃತಿ ಅಧ್ಯಯನಗಳಿಗೆ ಅವರು ಅಕ್ಷರಶಃ ಜೀವ ತೇದು ತೇದು ರೂಪಿಸಿದ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ವೈಚಾರಿಕ ಸಂಕಥನಗಳನ್ನು ಈ ಸಂಧಿಕಾಲದಲ್ಲಿ ನೆನಪಿಸಿಕೊಂಡು, ಒರೆಗೆ ಹಚ್ಚಿ ಸಂಭ್ರಮಿಸಲಾಗುತ್ತಿದೆ. ವಿದ್ಯಾರ್ಥಿಗಳನ್ನು ವೈಚಾರಿಕವಾಗಿ ರೂಪಿಸಿದ ಹಾಗೂ ಅಂತಃಕರಣದಿಂದ ಸಲುಹಿದ ಗುರುತನ ಮತ್ತು ತಾಯ್ತನಗಳಲ್ಲಿ ಆದರ್ಶ ಬದುಕಿನ ಮಾದರಿಯನ್ನು ಕಂಡುಕೊಳ್ಳಲಾಗುತ್ತಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಚರಿತ್ರೆಯುದ್ಧಕ್ಕೂ ಕನ್ನಡ ಸಂಸ್ಕೃತಿಯನ್ನು ರೂಪಿಸಿದ ಹಿರಿಯ ಜೀವಗಳಿಗೆ ತೋರುವ ಸಾಂಸ್ಕೃತಿಕ ಪ್ರೀತಿ ಅಭಿಮಾನಗಳನ್ನು ತೋರಲಾಗುತ್ತಿದೆ. ಈ ಎಲ್ಲವನ್ನೂ ಎಂದಿನ ಸಂಕೋಚದಿಂದ ಸ್ವೀಕರಿಸುತ್ತ ರಹಮತ್! ಪ್ರೀತಿಯ ಋಣ ತೀರಿಸಲು ಇನ್ನೂ ದುಡಿಯುವದೊಂದೇ ದಾರಿ ಎಂದಿದ್ದಾರೆ!
ಹೊಸ ತಲೆಮಾರಿಗೆ ಇದಕ್ಕಿಂತ ದೊಡ್ಡ ಆದರ್ಶ ಬೇಕೇ?

ಅವರು ಸಿದ್ಧರು, ನಾಥರು, ಸೂಫಿಗಳನ್ನು ಒಳಹೊರಗು ಬಿಟ್ಟುಕೊಂಡು ನಿರಂತರವಾಗಿ ಅವರ ಬೆನ್ನು ಹತ್ತಿ ದೇಶ ಕೋಶಗಳನ್ನು ಸುತ್ತಿ ಭಾರತದ ಜಾತ್ಯತೀತ ಸಂಸ್ಕೃತಿ ಮೀಮಾಂಸೆಯನ್ನು ಶೋಧಿಸಿದರು. ನಡೆದೂ ನಡೆದೂ ಅವರು ಪಡೆದ ತಾಕತ್ತು ಅವರ ಚೆಲುವಿಕೆಯನ್ನು ಹೆಚ್ಚಿಸುತ್ತಲೆ ಹೋಗಿದೆ. ಅವರು ನಿವೃತ್ತರಂತೆ ಕಾಣಿಸುವುದೇ ಇಲ್ಲ. ಸಿದ್ಧರು, ಸೂಫಿಗಳು ನೂರು ಇನ್ನೂರು ವರ್ಷ ಬದುಕುತ್ತಿದ್ದರಂತೆ. ಅವರ ಬೆನ್ನು ಹತ್ತಿದ ಈ ಸಂತ ನೂರಾರು ವರುಷ ಅವರಂತೆ ಬದುಕಲಿ ಎಂದು ಹಾರೈಸುವೆ. ವಿಶ್ವವಿದ್ಯಾಲಯದ ಸಾರ್ಥಕ ಸೇವೆಯಿಂದ ಬಿಡುಗಡೆಗೊಂಡ ಮೇಲೆ ಪೂರ್ಣವಾಧಿ ಸಂಶೋಧಕ ಹಾಗೂ ಲೇಖಕರಾದ ಮೇಲೆ ಇವರು ಸೃಷ್ಟಿಸಬಹುದಾದ ಸಂಶೋಧನೆ ಮತ್ತು ವಿಮರ್ಶೆಯ ಅಪಾರ ಸಾಧ್ಯತೆಗಳನ್ನು ಊಹಿಸಿದರೆ ಅವರ ಇಲ್ಲಿಯವರೆಗಿನ ಸಾಧನೆಗಿಂತ ಮುಂಬರುವ ಸಾಧನೆಯ ಬಗ್ಗೆ ಸಂಭ್ರಮ ಹೆಚ್ಚುತ್ತಿದೆ. ಸರ್ ನೂರಾರು ವರುಷ ಬಾಳಿ ನಿಮ್ಮ ಎಲ್ಲ ಸಾಧ್ಯತೆಗಳನ್ನು ಅಭಿವ್ಯಕ್ತಿಸಿ ಈ ನಾಡಿನ ಸಾಂಸ್ಕೃತಿಕ ಶ್ರೀಮಂತಿಯನ್ನು ಹೆಚ್ಚಿಸಿರಿ ಎಂದು ಪ್ರೀತಿಯಿಂದ ಹಾರೈಸುವೆ. ನಿಮ್ಮಂಥವರು ಇರುವವವರೆಗೆ, ನಿಮ್ಮಂಥವರ ಬರಹಗಳು ಇರುವವರೆಗೆ ಈ ದೇಶದ ಆತ್ಮವೇ ಆಗಿರುವ ಬಹುರೂಪಿ, ಸಂಕರಶೀಲ ಹಾಗೂ ಸೆಕ್ಯೂಲರ್ ದರ್ಶನವನ್ನು ಜೀವನ ಮೀಮಾಂಸೆಯನ್ನು ಯಾವ ಶಕ್ತಿಯೂ ಅಲ್ಲಾಡಿಸಲಾರದು. ನಿಮ್ಮ ಪ್ರತಿ ಅಕ್ಷರದ ಧ್ಯಾನ ಅದೇ ಅಲ್ಲವೇ? ನಡಿಗೆಯುದ್ಧಕ್ಕೂ ಪ್ರತಿ ಹೆಜ್ಜೆ ಸಪ್ಪಳದಲ್ಲೂ ಮಾರ್ದನಿಸೋದು ಇದೇ ಅಲ್ಲವೆ?.

ವಿಶ್ವವಿದ್ಯಾಲಯಗಳ ಆವರಣಗಳಲ್ಲಿ ಪಿಎಚ್.ಡಿ ಮಾರ್ಗದರ್ಶಕರುಗಳ ಬಗ್ಗೆ ಕೇಳಬಾರದ ಸುದ್ಧಿಗಳನ್ನು ಕೇಳಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ನನ್ನ ಮಾರ್ಗದರ್ಶಕರಾಗಿದ್ದ ರಹಮತ್ ರೊಂದಿಗಿನ ಒಡನಾಟದ ಕೆಲವು ಗಳಿಗೆಗಳನ್ನು ಸ್ಮರಿಸಿಕೊಳ್ಳಲು ಹೆಮ್ಮೆ ಎನ್ನಿಸುತ್ತಿದೆ. “ಓಹ್! ನನ್ನ ಗುರು ಹೀಗೆ !” ಎಂಬ ಭಾವನಾತ್ಮಕ ಉದ್ಘಾರ ನನ್ನಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿದೆ. ಗುರು ಪಂಥದ ಪರಮ ಅನುಯಾಯಿಯಂತೆ ತೋರುವ ಅವರು ಶಿಷ್ಯರನ್ನು ಗೆಳೆಯರಂತೆ, ಮಕ್ಕಳಂತೆ ಕಾಣುತ್ತಿದ್ದರು ಮಾತ್ರವಲ್ಲ ಎಲ್ಲ ಬಗೆಯ ಪ್ರೀತಿ ಅಂತಃಕರಣಗಳನ್ನು
ಸುರಿದು ಬಿಡುತ್ತಿದ್ದರು. ಕೆಲಸ ತೆಗೆಯುವ ವಿಷಯದಲ್ಲಿ ಅಷ್ಟೇ ನಿಷ್ಠುರರಾಗಿದ್ದರು. ತಂದೆಯ ಹಾಗೆ. ಅವರಿಗೆ ನಾವು ಬಹುವಚನ ಬಳಿಸುತ್ತಿದ್ದೇವಾದರೂ ರಹಮತ್ ಎಂದು ಏಕವಚನದಲ್ಲೇ ಮಾತನಾಡಿದ ಒಳ ಅನುಭವವಾಗುತ್ತಿತ್ತು. ಅಂತದೊಂದು ಆತ್ಮೀಯತೆಯದು. ಇಷ್ಟು ದೊಡ್ಡ ವಿದ್ವಾಂಸರೊಬ್ಬರು ವಿದ್ಯಾರ್ಥಿಗಳ ಭಾವಲೋಕಕ್ಕೆ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಅವರ ಹಂತಕ್ಕೆ ಇಳಿಯುತ್ತಿದ್ದ ಬಗೆ ಅಪರೂಪದ್ದು.

ನಾನು ಪಿಎಚ್.ಡಿ ಗೆ ಸೇರುವವರೆಗೆ ರಹಮತ್ ಸರ್ ಅಷ್ಟೇನೂ ಆತ್ಮೀಯರಾಗಿರಲಿಲ್ಲ. ಅವರ ಪ್ರತಿಸಂಸ್ಕೃತಿ, ಮರದೊಳಗಣ ಕಿಚ್ಚು, ಕರ್ನಾಟಕದ ಸೂಫಿಗಳು ಕೃತಿಗಳನ್ನು ಓದಿದ್ದೆ. ಬಂಡಾಯ ಸಂಘಟನೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಕ್ಕೆ ಅವರ ಕೃತಿಗಳು ಮೆನಿಫೆಷ್ಟೋದ ಹಾಗೆ ಕಾಣುತ್ತಿದ್ದವು. ಮುಂಡರಗಿ, ಮಹಾಲಿಂಗಪುರ ಬಂಡಾಯ ರಾಜ್ಯ ಸಮ್ಮೇಳನಗಳನ್ನು ಸಂಘಟಿಸುವಾಗ ಬಂಡಾಯದ ಹೊಸ ತಲೆಮಾರಿನ ಗುಂಪಿಗೆ ನೈತಿಕ ಶಕ್ತಿಯಾಗಿದ್ದರು. ಸಾಕಷ್ಟು ಪರಿಚವಾಗಿದ್ದರು ಅವರ ವಿದ್ವತ್ತಿನ ಬಗೆಗಿನ ಭಯ ಮಿಶ್ರಿತ ಗೌರವದ ಕಾರಣಕ್ಕೆ ಅವರೊಂದಿಗೆ ಬೆರೆಯಲು ಹೆದರಿಕೆಯಾಗುತ್ತಿತ್ತು. ಹೀಗಾಗಿ ಅವರ ಮಾರ್ಗದರ್ಶನದಲ್ಲಿ ಪಿಎಚ್‌.ಡಿ ಗೆ ಕೇಳಲು ಬಸೂ ಹಾಗೂ ಹಸನ್ ನಯೀಮ್ ಸುರ್ಕೋಡ್ ಅವರನ್ನು ಕರೆದುಕೊಂಡು ಹಂಪಿಗೆ ಹೋಗಿದ್ದೆ. ಎಂದಿನಂತೆ “ಹೆಸರು ಮಾಡಿದ ಕವಿಗಳಿಗೆಲ್ಲ ಮಾರ್ಗದರ್ಶನ ಮಾಡೋದಾ?” ಅಂತ ನಗುನಗತಾ ಸ್ವಾಗತಿಸಿದ್ರು. “ಆರಾಮಾಗಿ ಕವಿತೆ ಬರ್ಕೊಂಡಿರೋದ್ಬಿಟ್ಟು ಇದೆಲ್ಲ ಯಾಕೆ ತಲೆ ಕೆಡಿಸ್ಕೊಂಡಿರಿ. ಕೆಲವು ಕವಿಗಳು ಪಿಎಚ್.ಡಿ ಸೇರಿದ್ಮೇಲೆ ಕವಿತೆ ಬರೆಯೋದನ್ನ ಬಿಟ್ಟುಬಿಟ್ಟಿದ್ದಾರೆ. ಒಬ್ಬ ಕವಿಯನ್ನು ಕಳೆದುಕೊಳ್ಳೋದಕ್ಕೆ ನಾನು ಕಾರಣ ಆಗ್ಬಾರ್ದು ” ಅಂದ್ರು. ಅವರ ಮಾತುಗಳೇ ಹಾಗೆ. ತೇಜಸ್ವಿಯವರ ಮನೋಹರ ಗದ್ಯದ ಹಾಗೆ. ಕವಿತೆ ಗಿವಿತೆ ಬರೆಯೋರು ಸರಿಯಾಗಿ ಕೆಲಸ ಮಾಡೋಲ್ಲ, ಕೆಲಸ ಮಾಡೋದಾದರೆ ಮಾತ್ರ ನನ್ನ ಹತ್ತಿರ ಬನ್ನಿ ಅನ್ನೋದನ್ನು ಅಷ್ಟು ಚಂದವಾಗಿ ಹೇಳಿದ್ದರು.

ಪಿಎಚ್.ಡಿ ರಿಜಿಸ್ಟ್ರೇಷನ್ ಗೆಂದು ಹೊರಟವನು
ಇನ್ನೇನು ಹೊಸಪೇಟೆಯಲ್ಲಿ ಟ್ರೇನ್ ಇಳಿಯಬೇಕು ರಹಮತ್ ರಿಂದ ಫೋನ್ ಬಂತು. ಇಲ್ಲೇ ಸ್ಟೇಷನ್ ನಲ್ಲಿದ್ದೇನೆ, ಬನ್ನಿ ಅಂದ್ರು. ಕೆಳಗಿಳಿದರೆ ಅವರ ಕೈನೆಟಿಕ್ ಹೊಂಡಾದಲ್ಲಿ ಹಿಂದೆ ಕುಡ್ರಿಸಿಕೊಂಡು ಮನೆಗೆ ಹೋದ್ರು.
ಭಾನು ಮೇಡಂ ಪ್ರೀತಿಯಿಂದ ಸ್ವಾಗತಿಸಿದ್ರು. ಅವರ ಮನೆಯಲ್ಲೇ ತಿಂಡಿ ಚಹಾ ಜೊತೆಗೆ ಇಬ್ಬರಿಗೂ ಮಧ್ಯಾಹ್ನದ ಊಟವನ್ನೂ ಕಟ್ಟಿಸಿಕೊಂಡು ಕ್ಯಾಪಸ್ಸಿಗೆ ಕರೆದುಕೊಂಡು ಹೋದ್ರು. ಒಂದು ನಿಮಿಷ ಬಿಡದೆ ಜೊತೆಗಿದ್ದಷ್ಟೂ ಹೊತ್ತು ಸಂಶೋಧನಾ ವಿಧಾನಗಳ ಬಗ್ಗೆ ಓತಪ್ರೋತವಾಗಿ ಮಾತಾಡುತ್ತಿದ್ದರು. ನನ್ನ ಪಾಲಿಗೆ ತೀರ ಅನಿರೀಕ್ಷಿತವಾಗಿದ್ದ ಅವರ ಈ ಉಪಚಾರ ಮತ್ತು ಪ್ರೀತಿಗೆ ನಾನಂತೂ ಮೂಕನಾಗಿದ್ದೆ. ನಾನು ನಲವತ್ತು ದಾಟಿದವನು, ಬರವಣಿಗೆ, ಸಂಘಟನೆ ಅಂತ ಒಂದಿಷ್ಟು ಕ್ರಿಯಾಶೀಲವಾಗಿರೋನು ಅನ್ನೋದು ಖಂಡಿತ ಅವರ ನಡೆಗೆ ಕಾರಣವಾಗಿರಲಿಲ್ಲ. ರೆಗ್ಯುಲರ್ ಪಿಎಚ್.ಡಿ ಗೆ ಸೇರಿದ ಬಡ ವಿದ್ಯಾರ್ಥಿಗಳಿಗೆ ಅವರು ಉಪಚರಿಸಿದ ಉಪಕರಿಸಿದ ನಾನಾ ವಿಧಾನಗಳನ್ನು ಕಣ್ತುಂಬಿ ನೆನಪಿಸಿಕೊಳ್ಳುವ ದಂಡೇ ಇದೆ. ಶಿಷ್ಯರ ಪಾಲಿಗೆ ಅವರ ಮನೆ ಸೂಫಿ, ಹೆಸರಿಗೆ ತಕ್ಕಂತೆ ಅರಿವಿನೊಂದಿಗೆ ಎಲ್ಲ ಬಗೆಯ ಅಂತಃಕರಣವನ್ನು ಧಾರೆ ಎರೆವ ವಾತ್ಸಲ್ಯ ಕೇಂದ್ರವಾಗಿತ್ತು. ವಿದ್ಯಾರ್ಥಿಗಳನ್ನು ತಮ್ಮ ಕೆಲಸಗಳಿಗೆ ಆಳುಗಳಂತೆ ದುಡಿಸಿಕೊಳ್ಳುವ, ಅವರ ಸ್ಕಾಲರ್ಷಿಪ್ ಹಣಕ್ಕೂ ಕೈಚಾಚುವ, ತಮ್ಮ ದೈನಂದಿನ ಸಣ್ಣಪುಟ್ಟ ಖರ್ಚುಗಳನ್ನು ವಿದ್ಯಾರ್ಥಿಗಳ ಮೇಲೆ ಹೇರುವ, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುವ, ಇನ್ನೂ ಏನೇನೋ ವರದಿಗಳು ದಾಖಗಲಾಗುತ್ತಿರುವ ಕೆಟ್ಟ ಕಾಲದಲ್ಲಿ ರಹಮತ್ ಅವರ ಗೈಡ್ ಶಿಪ್ ತೀವ್ರವಾಗಿ ನೆನಪಾಗುತ್ತಿದೆ.

ಆಧುನಿಕ ಕನ್ನಡ ಕಾವ್ಯದಲ್ಲಿ ಧಾರ್ಮಿಕ ಹಿಂಸೆ ಹಾಗೂ ಸೌಹಾರ್ದತೆ ಎಂಬ ವಿಷಯದಲ್ಲಿ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಗೇನೋ ಸೇರಿದೆ. ಹೋದಲ್ಲಿ ಪಾಠ ಮಾಡಿ ಮನೆ ಸೇರದೆ ಕಾಲೇಜನ್ನು ಸಾಂಸ್ಕೃತಿಕ ಮತ್ತು ವೈಚಾರಿಕ ಕೇಂದ್ರವಾಗಿ ರೂಪಿಸುವ ಸ್ವಯಂ ಹೇರಿಕೊಂಡ ಒತ್ತಡಕ್ಕೆ ಬಹುಪಾಲು ಸಮಯ ವಿನಯಳದ್ದೂ ಸೇರಿ ವಿನಿಯೋಗವಾಗುತ್ತಿತ್ತು. ಈಗಲೂ ಆಗುತ್ತಿದೆ. ಇದರೊಂದಿಗೆ ನನ್ನ ಆಲಸ್ಯವೂ ಸೇರಿತ್ತು. ಮೇಲಾಗಿ ರಹಮತ್ ಅವರ ವಿದ್ವತ್ತಿನೊಂದಿಗೆ ಸಂವಾದಿಸಲು ನನ್ನಲ್ಲಿ ಒಂದು ಪೂರ್ವತಯಾರಿ ಬೇಕಿತ್ತು. ಸುಮಾರು ಎರಡು ವರುಷ ನಾನು ಅಧ್ಯಯನಕ್ಕೆ ಕಳೆದೆ. ಅವರು ಧಾರವಾಡ, ಬೆಳಗಾಂವ ಭಾಗಕ್ಕೆ ಉಪನ್ಯಾಸಕ್ಕೆ
ಬರುವಾಗ ಮುಂಚಿತವಾಗಿ ಪತ್ರ ಬರೆಯೋರು. ನಾನು ತಕ್ಷಣ ಆ ದಿನ ಊರಲ್ಲಿ ಇರುವುದಿಲ್ಲ ನಾನೆ ಹಂಪಿಗೆ ಬಂದು ಭೆಟ್ಟಿಯಾಗುವೆ ಅಂತ ಪತ್ರ ಬರೆಯೋನು. ಕೆಲವೊಮ್ಮೆ ಅವರು ಬರುವ ದಿನಗಳಂದು ಬೇರೆ ಕಾರ್ಯಕ್ರಮಗಳನ್ನು ಜೋಡಿಸಿಕೊಂಡು ಊರು ಬಿಡೋನು. ವಿನಯಾ ನಗುತ್ತಲೇ ಬಯ್ಯುತ್ತಿದ್ದಳು. ಅವರಿಗೆ ಇದು ತಿಳಿದು ಹೋಯಿತು. ಕೊನೆಗೆ ಅವರು ಬರೆದೇ ಬಿಟ್ರು “ಒಕ್ಕುಂದ, ನಾನು ಇನ್ನು ಧಾರವಾಡ ಕಡೆ ಕಾರ್ಯಕ್ರಮಗಳಿಗೆ ಬರಬಾರದು ಅಂತ ತೀರ್ಮಾನಿಸಿದ್ದೇನೆ. ಪಾಪ ನಿಮಗೇಕೆ
ತೊಂದರೆ, ನಿಮ್ಮನ್ನು ಊರು ಬಿಡಿಸ್ತಾ ಇದ್ದೀನಿ ” ಎಂಥ ಗಂಭೀರವಾಗಿ ವಿಷಯವನ್ನು ಹಾಸ್ಯಮಯವಾಗಿ ಹೇಳಿ ಬಿಡುವ ಅವರ ಅನನ್ಯ ಶೈಲಿ ಅವರದ್ದು. ಇನ್ನು ಕಾಲಹರಣ ಮಾಡಿದ್ರೆ ನಡೆಯೋಲ್ಲ ಅಂತ ತೀರ್ಮಾನಿಸಿ ಒಂದು ವಾರ ರಜೆ ಹಾಕಿ ಹಂಪಿಯಲ್ಲಿ ಠಿಖಾನಿ ಹೂಡಿದೆ. ರಹಮತ್ ಸರ್ ಮೂರು ದಿನ ಗೆಸ್ಟ್ ಹೌಸ್ ರೂಮಲ್ಲಿ ನನ್ನ ಸಂಶೋಧನಾ ವಿಷಯ ಕುರಿತಂತೆ ಒಂದೊಂದು ಬಾರಿ ನಿರಂತರ 5-6 ತಾಸು ಚರ್ಚೆ ಮಾಡೋರು. ರೂಮಲ್ಲಿ ಬೇಸರಾದ್ರೆ ಇಡೀ ಕ್ಯಾಂಪಸ್ ಸುತ್ತು ಹೊಡೆಯುತ್ತ ಮಾತನಾಡೋರು. ಅತ್ಯಂತ ಗಂಭೀರ ವಿಷಯವನ್ನು ವಿವರಿಸುತ್ತಲೇ ಬಿದ್ದುಬಿದ್ದು ನಗುವಂಥ ಹಾಸ್ಯ ಚಟಾಕಿಯೊಂದನ್ನು ಹಾರಿಸೋರು. ಸಮಯ ವ್ಯರ್ಥವಾಗಬಾರದೆಂದು
ಅವರ ಮನೆಗೆ ಚರ್ಚೆಯನ್ನು ಶಿಫ್ಟ್ ಮಾಡಿದರು. ಅವರ ಮನೆಯಲ್ಲಿ ಉಳಿದ ಆ ಮೂರು ದಿನಗಳು ಅವಿಸ್ಮರಣೀಯ. ಒಂದು ಬಾರಿಗೆ 7-8 ತಾಸು ಬಿಟ್ಟೂ ಬಿಡದೆ ನಿರಂತರ ಚರ್ಚೆ. ಅವರ ಓದು, ಅಧ್ಯಯನ, ಪಾಂಡಿತ್ಯ, ಸಂವೇದನಶೀಲತೆ, ವೈಚಾರಿಕತೆಗಳನ್ನೆಲ್ಲ ಒಟ್ಟುಗೊಳಿಸಿ ಅಗತ್ಯವಾದುದನ್ನೆಲ್ಲ ಸಮಯಕ್ಕೆ ಸರಿಯಾಗಿ ನೆನಪಿಸಿ ವಿವರಿಸೋರು. ನನಗಂತೂ ಗೋವಿಂದಭಟ್ಟ ಮತ್ತು ಶರೀಫರದ್ದೇ ನೆನಪು. 7-8 ತಾಸು ಕುಳಿತು, ಕೂತಲ್ಲೆ ಒರಗಿ ನಿರಂತರ ನಮಿಬ್ಬರ ಮಧ್ಯ ಚರ್ಚೆ ಮುಂದುವರಿದಾಗ “ಒಕ್ಕುಂದ ಶರೀಫ ಮತ್ತು ಗೋವಿಂದಭಟ್ಟ ಹೀಗೆ ಮಾತಾಡುತ್ತ ಕಾಲ ಕಳೆದಿರಬೇಕಲ್ಲ?” ಅಂದುಬಿಟ್ಟರು. ಬದುಕಿನ ಅತ್ಯಂತ ಖುಷಿಯ ಕ್ಷಣಗಳಲ್ಲಿ ಅದೂ ಒಂದು. ಚರ್ಚೆಯಲ್ಲಿ ನಮ್ಮಿಬ್ಬರಲ್ಲಿ ಎಷ್ಟೋ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿರುತ್ತಿದ್ದವು. ಜೋರು ಚರ್ಚೆಗಳು ನಡೆದದ್ದು ಇದೆ. ಅವರೆಂದೂ ತಮ್ಮ ಅಭಿಪ್ರಾಯಗಳನ್ನು ಹೇರಲಿಲ್ಲ. ಭಿನ್ನಾಭಿಪ್ರಾಯ ಹುಟ್ಟಿದಾಗಲೇ ಹೆಚ್ಚು ಸಂಭ್ರಮಿಸೋರು. ಅಡಿಗರ ಕಾವ್ಯ ಕುರಿತ ವಾಗ್ವಾದದಲ್ಲಿ ನಾನು ಅವರ ನಿಲುವನ್ನು ಕಟುವಾಗಿ ಟೀಕಿಸಿದ್ದೆ. ಮಾರ್ಗದರ್ಶಕ ಎಂಬ ಸಂಕೋಚಕ್ಕೊಳಗಾಗದೆ ನನ್ನ ಬರಹವನ್ನು ಟೀಕಿಸಿದ್ದು ನನಗೆ ಖುಷಿಯಾಗಿದೆ. ನಿಮ್ಮ ಟೀಕೆ ಸರಿಯಾಗಿದೆ ಎಂದು ಮೇಲ್ ಮಾಡಿದ್ದರು. ಪ್ರಾಮಾಣಿಕವಾಗಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಅವರ ಗುಣ ನನಗೆ ಅಚ್ಚುಮೆಚ್ಚು.

ಒಂದು ಬಾರಿ ಪ್ರಗತಿ ವರದಿ ಸಲ್ಲಿಸಲು ಹೋಗಿದ್ದೆ. ರಹಮತ್ ಸರ್ ಸಹಿ ಮಾಡಿ ವರದಿ ಸಲ್ಲಿಸಿ ಮನೆಗೆ ಊಟಕ್ಕೆ ಬರಲು ಹೇಳಿದರು. ವರದಿ ಸಲ್ಲಿಸಿ ಮನೆಗೆ ಬಂದರೆ ಭಾನು ಮೇಡಂ ಮನೇಲಿಲ್ಲ. ರಹಮತ್ ಸರ್ ತಾವೇ ಮಟನ್ ತಂದು ಅಡಿಗೆ ಮಾಡಿದ್ರು. ಸಂಭ್ರಮದಿಂದ ಬಡಸಿದ್ರು. ನಾನು ಮತ್ತೆ ಮೂಕನಾಗಿದ್ದೆ. ಅಬ್ಬಾ! ಆ ರುಚಿ ಇನ್ನೂ ನಾಲಿಗೆಯ ಮೇಲಿದೆ. ಅಷ್ಟೊತ್ತಿಗೆ ಭಾನು ಮೇಡಂ ಬಂದ್ರು. ನಾನು ಬಾಯ್ ತುಂಬಿ ಸರ್ ಪಾಕ ಕಲೆಯನ್ನು ಹೊಗಳಿದೆ. ” ಭಾನು ನೋಡೇ, ಶಿಷ್ಯ ನಾನು ನಿನಗಿಂತ ಚೆನ್ನಾಗಿ ಅಡಿಗೆ ಮಾಡ್ತೀನಿ ಅಂತಿದಾರೆ ” ಅಂತ ಭಾನು ಮೇಡಂ ಅವರನ್ನು ಚೇಡಿಸಿದರು. ಮಾರ್ಗದರ್ಶಕರು ಅಡಿಗೆ ಮಾಡಿ ಉನ್ನಿಸಿದ ಘಟನೆ ಇದೊಂದೇ ಆಗಿರಬೇಕು. ಅವರ ಸರಳ ಸಹಜ ಅಂತಃಕರಣವನ್ನು ವಿವರಿಸಲು ಸಾಧ್ಯವಾಗುವುದೇ ಇಲ್ಲ.

ನನ್ನ ಥಿಸಿಸ್ ಬರಹ ಒಂದು ಹಂತ ತಲುಪಿತ್ತು. ನನ್ನ ಕಾಲೇಜು ಕೆಲಸಗಳ ಒತ್ತಡ ಹೆಚ್ಚಾಗಿತ್ತು. 8-10 ದಿನ ರಜೆ ಹಾಕಿ ಬರಲು ಸರ್ ಸೂಚಿಸಿದರು. ಅದು ಸಾಧ್ಯವಿರಲಿಲ್ಲ. ಕೊನೆಗೆ ರಹಮತ್ ಸರ್ ಕಾಲ್ ಮಾಡಿದ್ರು ” ನನಗೆ ಕರ್ನಾಟಕ ವಿಶ್ವವಿದ್ಯಾಲಯದ ಲೈಬ್ರರಿಯಲ್ಲಿ 8-10 ದಿನ ಕೆಲಸವಿದೆ. ಬೆಳಿಗ್ಗೆ ನಾನು ಲೈಬ್ರರಿಗೆ ಹೋಗುವೆ. ಸಂಜೆ ನೀವು ಬಂದಮೇಲೆ ಬರಹವನ್ನು ಓದಿ ಚರ್ಚಿಸೋಣ” ಅಂದ್ರು. ನನ್ನ ಪಾಲಿಗೆ ಬೆಟ್ಟವೆ ಮೊಹಮದನ ಬಳಿ ಬಂದಿತ್ತು! ಕವಿವಿ ಗೆಸ್ಟ್ ಹೌಸ್ ನಲ್ಲಿ ಒಂದು ಸಾಧಾರಣ ರೂಂ ಸಿಕ್ಕಿತ್ತು. ಮತ್ತೆ ಪ್ರತಿ ದಿನ ಸಂಜೆಯಿಂದ ಮಧ್ಯ ರಾತ್ರಿಯವರೆಗೆ ಓದಿ ತಿದ್ದಿಪಡಿಗಳನ್ನು ಸೂಚಿಸಿದರು. ಒಂದು ಬೆಳಿಗ್ಗೆ ಧಾರವಾಡಕ್ಕೆ ಭಾನು ಮೇಡಂ ಬಂದು ಇಳಿದ್ರು. ಅಂದು ಅವರ ಮದುವೆಯ ವಾರ್ಷಿಕೋತ್ಸವ. ತಾವೇ ಸಂಭ್ರಮದಿಂದ ನಮ್ಮನ್ನೆಲ್ಲ ಊಟಕ್ಕೆ ಕರೆದುಕೊಂಡು ಹೋದ್ರು. ಏನು ಹೇಳಿದರೂ ಬಿಲ್ ಕೊಡಗೊಡಲಿಲ್ಲ. ಭಾನು ಮೇಡಂ ಗೆ ಸೀರೆ ತಗೋಬೇಕಿತ್ತು. ಕಾಂಚನ್ ಸಿಲ್ಕ್ ಸೆಂಟರ್ ಗೆ ಹೋದೆವು. ಸೀರೆಗಳ ಆಯ್ಕೆ ಮುಗೀತು. ಮನೆಗೆ ಯಾರೇ ಹೆಣ್ಣುಮಕ್ಕಳು ಬಂದರೂ ಸೀರೆ ಕೊಡುವ ವಾಡಿಕೆಯಂತೆ ವಿನಯಾ ಭಾನು ಮೇಡಂ ಗೆ ಒಂದು ಸೀರೆ ತಗೊಂಡಳು. ಭಾನು ಮೇಡಂ ಮೊದಲೇ ಬೇಡ ಅನ್ನುತ್ತಿದ್ದರು. ರಹಮತ್ ಸರ್ ಕೊಡಕೂಡದೆಂದು ಹೇಳಿ ನೋಡಿದರು. ನಾವೂ ಒತ್ತಾಯಿಸತೊಡಗಿದೆವು. ಸರ್ ಒಮ್ಮೆಲೇ ಸಿಟ್ಟಾಗಿಬಿಟ್ಟರು. “ವಿನಯಾ, ಈ ಬಾರಿ ಕೊಡಕೂಡದು, ಹಾಗೇನಾದ್ರು ಕೊಟ್ರೆ ಗೈಡ್ಶಿಪ್ ಕ್ಯಾನ್ಸಲ್ ಮಾಡಿಬಿಡ್ತೀನಿ ” ಅಂತ ಗುಡುಗಿದರು. ನಾವೆಲ್ಲ ತಣ್ಣಗಾಗಿ
ಕಾರು ಸೇರಿದೆವು. ಏನೂ ನಡೆದೇ ಇಲ್ಲ ಅನ್ನುವಂತೆ ನಗನಗತಾ ಮಾತಾಡತೊಡಗಿದರು. ಅಂದು ಉಳಿಯಲು ರೂಮ್ ಮಾಡ್ತೇನೆ ಅಂದ್ರೆ ಕೇಳಲಿಲ್ಲ. ಕವಿವಿ ಗೆಸ್ಟ್ ಹೌಸ್ ನ ರೂಮ್ನಲ್ಲೇ ಉಳದ್ರು. ಬೆಳಿಗ್ಗೆದ್ದು ಹೋದ್ರೆ ರಾತ್ರಿ ಮಳೆ ಗಾಳಿಗೆ ಕಿಡಕಿಯೇ ಕಿತ್ತು ಬಿದ್ದಿತ್ತು.
ಚಳಿ ಗಾಳಿಗೆ ಅವರಿಗೆ ತುಂಬಾ ತೊಂದ್ರೆ ಆಗಿತ್ತು. ” ಒಕ್ಕುಂದ ರೂಮ್ ತುಂಬಾ ಚೆನ್ನಾಗಿದೆ. ಫುಲ್ ಏರ್ ಕಂಡೀಷನ್ ರೂಮ್! ” ಅಂತ ನಗಾಡಿದರು. ಹೇಳುತ್ತ ಹೋದರೆ ಅದು ಮುಗಿಯಲಾರದ ಕಥೆ.

ಇಂಥ ಮಾರ್ಗದರ್ಶಕರ ನೀವು ಕಾಣಿರೇ ನೀವು ಕಾಣಿರೇ….

LEAVE A REPLY

Please enter your comment!
Please enter your name here