ಲೇಖಕರು : ಡಾ.ವಡ್ಡಗೆರೆ ನಾಗರಾಜಯ್ಯ.

ಸಂವಿಧಾನದ ಎಂಟನೇ ಪರಿಚ್ಛೇದದದಲ್ಲಿ ದೇಶದ ಇಪ್ಪತ್ತೆರಡು ಭಾಷೆಗಳನ್ನು ರಾಷ್ಟ್ರೀಯ ಮಟ್ಟದ ಜನಬಳಕೆಯ ಮುಖ್ಯ ಭಾಷೆಗಳೆಂದು ಸಮಾನವಾಗಿ ಗುರುತಿಸಲಾಗಿದೆ. ಹಿಂದಿಗಿಂತಲೂ ಸಾವಿರಾರು ವರ್ಷಗಳ ಪ್ರಾಚೀನ ಚರಿತ್ರೆಯನ್ನು ಹೊಂದಿರುವ ಕನ್ನಡ ಭಾಷೆಯ ಮೇಲೆ ಹಿಂದಿ ಭಾಷೆಯ ಹೇರಿಕೆ ಥರವಲ್ಲ. “ನನ್ನ ಕನ್ನಡ ಭಾಷೆಗಿಂತ ಯಾರೂ ದೊಡ್ಡವರಲ್ಲ” ಎಂದು ಹೇಳಿರುವ ಕುವೆಂಪು ಅವರಿಂದ ನಾವು ಭಾಷಾಭಿಮಾನದ ಬಗ್ಗೆ ಕಲಿಯುಬೇಕಾಗಿರುವುದು ಸಾಕಷ್ಟಿದೆ.ವಸಾಹತುಶಾಹಿ ಪರಕೀಯ ಆಂಗ್ಲಭಾಷಿಕರು ಹೇಳಿದ, “A nation is known by the language it adapts”. ಎಂಬ ಮಾತನ್ನು ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ಕರ್ನಾಟಕ ರಾಜ್ಯದ ಪ್ರಜೆಗಳಾಗಿರುವ ನಾವೇಕೆ ಇಂದು ಒಪ್ಪಬೇಕು?

ಇಡೀ ಭಾರತ ದೇಶ ಬ್ರಿಟೀಷರ ಆಡಳಿತದ ಏಕಸೂತ್ರಕ್ಕೆ ಒಳಪಟ್ಟಾಗ ಎಲ್ಲರನ್ನೂ ಒಗ್ಗೂಡಿಸಿ ಆಳಲು ಆಂಗ್ಲಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಹೇರುವುದು ಅವರಿಗೆ ಅನಿವಾರ್ಯವಾಗಿತ್ತು. ಹಾಗೆಯೇ ಹಿಂದಿ ಭಾಷಿಕರಾಗಿದ್ದ ಉತ್ತರ ಭಾರತೀಯರೇ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕತ್ವ ವಹಿಸಿಕೊಂಡಾಗಲೂ ಹಿಂದಿ ಭಾಷೆ ಭಾರತದೆಲ್ಲೆಡೆ ಸಂಪರ್ಕ ಭಾಷೆಯಾಗಿ ಅನಿವಾರ್ಯವಾಗಿತ್ತು. ಆಗಿನಂತಹ ಪರಿಸ್ಥಿತಿ ಈಗ ನಮಗಿರುವುದಿಲ್ಲ. ಈಗ ನಮ್ಮದು ಒಕ್ಕೂಟ ರಾಜ್ಯ ವ್ಯವಸ್ಥೆ. ದಕ್ಷಿಣ ಭಾರತದ ಕೆಲವೇ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರವಿರುವ ನಮ್ಮ ದೇಶದಲ್ಲಿ ಯಾವುದೇ ಭಾಷೆಯೊಂದು ಯಜಮಾನ ಭಾಷೆಯಾಗುವ ಅಗತ್ಯ ನಮಗಿರುವುದಿಲ್ಲ. ಹಿಂದಿ ಕಲಿಕೆ ಐಚ್ಛಿಕವಾಗಿರಬೇಕೇ ಹೊರತು ಹೇರಿಕೆಯಾಗಬಾರದು. ಕನ್ನಡದ ಮೇಲೆ ಹಿಂದಿ ಮತ್ತಿತರ ಯಾವುದೇ ಅನ್ಯ ಭಾಷೆಯು ಯಜಮಾನಿಕೆ ಸಾಧಿಸುವುದಾಗಲೀ, ಹಿಂದಿ ಭಾಷಿಕ ಹೇರಿಕೆಯನ್ನು ಕನ್ನಡಿಗರಾದ ನಾವು ಒಪ್ಪಿಕೊಳ್ಳುವುದಾಗಲೀ ಸರಿಯಲ್ಲ..

ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಒಪ್ಪಿಸಲು ಕಳೆದ ಆರು ದಶಕಗಳಿಂದಲೂ ಹೆಚ್ಚೂಕಮ್ಮಿ ಭಾರತದ ಎಲ್ಲಾ ರಾಜ್ಯಗಳನ್ನು ಸಾಂಸ್ಕೃತಿಕ ಬಲಾತ್ಕಾರಕ್ಕೆ ಗುರಿಪಡಿಸಿರುವ ಉತ್ತರ ಭಾರತೀಯರು, ಉತ್ತರ ಭಾರತದ ಚರಿತ್ರೆಯ ಪಠ್ಯಗಳನ್ನೂ ನಮ್ಮ ಮೇಲೆ ಹೇರಲು ಹವಣಿಸುತ್ತಿದ್ದಾರೆ. ಇಂತಹ ಸಾಂಸ್ಕೃತಿಕ ಪರಭಾರೆಯನ್ನು ದಕ್ಷಿಣದ ತಮಿಳುನಾಡು ಮತ್ತು ಕೇರಳ ರಾಜ್ಯಗಳು ಬಲವಾಗಿಯೇ ಪ್ರತಿರೋಧಿಸಿವೆ. ಇಂತಹ ಪ್ರತಿರೋಧ ಕರ್ನಾಟಕದಲ್ಲಿ ಸಾಧ್ಯವಾಗಬೇಕು.

ಇನ್ನು ಭಾಷೆಯ ಸಂಗತಿಗೆ ಬಂದರೆ, ಭರತಖಂಡಕ್ಕೀಗ ಬೇಕಾಗಿರುವುದು ಬಹುಭಾಷಾಸೂತ್ರ…. ಹಿಂದಿಯು ರಾಷ್ಟ್ರಭಾಷೆಯೆಂಬ ಅಪಪ್ರಥೆ ನಿಲ್ಲಬೇಕು. ಒಕ್ಕೂಟ ವ್ಯವಸ್ಥೆಯ ನಮ್ಮ ದೇಶದಲ್ಲಿ ಅನೇಕ ರಾಜ್ಯಗಳು ತಮ್ಮದೇ ರಾಜ್ಯಭಾಷೆಗಳನ್ನು ಹೊಂದಿವೆ. ಹೀಗೆ ಸ್ವತಂತ್ರ ರಾಜ್ಯಭಾಷೆಗಳ ಮೇಲೆ ಕೇಂದ್ರ ಸರ್ಕಾರವು ಹಿಂದಿಯನ್ನು ವ್ಯವಸ್ಥಿತವಾಗಿ ಹೇರಿ ಸವಾರಿ ಮಾಡುವುದು ಒಪ್ಪತಕ್ಕದ್ದಲ್ಲ. ಸಂವಿಧಾನವು ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಅಂಗೀಕರಿಸಿಲ್ಲ. ಕೆಲವರು ಹಿಂದಿ ರಾಷ್ಟ್ರ ಭಾಷೆಯೆಂದು ತಪ್ಪು ತಿಳಿದಿದ್ದಾರೆ. ಇಂತಹ ಅಪಪ್ರಥೆಗೆ ನಾವು ಕಡಿವಾಣ ಹಾಕಬೇಕು.

LEAVE A REPLY

Please enter your comment!
Please enter your name here