- ಸಿಹಾನ ಬಿ.ಎಂ.
ಭಾರತ ದೇಶದ ಐಕ್ಯತೆ ಮತ್ತು ಶಾಂತಿಯನ್ನು ಬಯಸುವವರೇ…
ಸ್ವಾತಂತ್ರ್ಯ ಹೋರಾಟಗಾರ ಹಾಗೂ ದೇಶದ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರ “ಜೈ ಜವಾನ್ ಜೈ ಕಿಸಾನ್ ” ಘೋಷಣೆ ಮರೆತಿರುವಿರಾ..? ಈ ಭೂಮಿಯಲ್ಲಿ ಕೃಷಿಕರು ಮತ್ತು ಸೈನಿಕರು ಇವರಿಬ್ಬರೂ ಗೌರವಿಸಲ್ಪಡುವ ವ್ಯಕ್ತಿಗಳು. ದೇಶಕ್ಕಾಗಿ ಅನ್ನ, ನೀರು, ಆಹಾರ ತ್ಯಜಿಸಿ ಕಣ್ಣಿಗೆ ಎಣ್ಣೆ ಬಿಟ್ಟು ನಿದ್ದೆಗೆಟ್ಟು ಗಡಿ ಕಾಯುವ ಸೈನಿಕರು ನಮ್ಮ ದೇಶದ ಅಭಿಮಾನಿಗಳು! ಸೈನಿಕರು ಈ ಭೂಮಿಯ ಮತ್ತು ಬದುಕಿನ ಚೆಲುವಿಗೆ, ಪೌರತ್ವಕ್ಕೆ ಕಾರಣರಾದವರು. ಕೊರೆಯುವ ಶೀತಗಾಳಿಗೆ ಮೈಯೊಡ್ಡಿ ನೆಮ್ಮದಿಯನ್ನೂ, ತಾರುಣ್ಯವನ್ನೂ ಸತತ ಅಡವಿಟ್ಟು ಸಂಸಾರದ ನೆನಪುಗಳಲ್ಲಿ, ಸುಖದ ತ್ಯಾಗಗಳಲ್ಲಿ ಕುಟುಂಬಕ್ಕಾಗಿ, ದೇಶಕ್ಕಾಗಿ ಪ್ರಾಣತೆತ್ತು ಬಾಳುತ್ತಿರುವ ವೀರ ಪರಾಕ್ರಮಿಗಳು. ಅದೇ ರೀತಿ ಹೊಟ್ಟೆಯನ್ನು ಬೆನ್ನಿಗಂಟಿಸಿ, ಬಿರುಕುಬಿರುಕಾದ ಪಾದಗಳ ಸಿಪ್ಪೆ ಕೀಳುತ್ತಾ, ಬಿಸಿಲಿನ ತೀಕ್ಣತೆಗೂ ಕೊರೆಯುವ ಚಳಿಗೂ ಲೆಕ್ಕಿಸದೆ ಭತ್ತ ಬೆಳೆಯುವ, ಬೀಜ ಬಿತ್ತುವ, ನೇಗಿಲು ಊಳುವ ಆಹಾರ ಸಂರಕ್ಷಕರು ನಮ್ಮ ರೈತರು. ಅವರು ಹಸಿದ ಹೊಟ್ಟೆಗೆ ಉಣ ಬಡಿಸುವ ಅನ್ನದಾತರು. ಅಲ್ಪ ಬೆಲೆಗೆ ಮಹಾ ಸಂಪತ್ತು ದಾನ ಮಾಡುವ ದಾನಶೂರರು. ಅತ್ಯಲ್ಪ ಬೆಲೆಗೆ ಮಹಾ ಪರಿಶ್ರಮದ ಫಲವನ್ನು ಸಂತೋಷದಿಂದ ದೇಶದ ಮುಕ್ಕು ಮೂಲೆಗೂ ತಲುಪಿಸಿ ಹೊಟ್ಟೆ ತುಂಬಿಸುವ ನೈಜ ಯೋಧರು.
ನೂರ ಮೂವತ್ತೈದು ಕೋಟಿಗಿಂತಲೂ ಅಧಿಕ ಜನಸಂಖ್ಯೆಯಿರುವ ಭಾರತದ ಪ್ರತೀ ನಾಗರಿಕರಿಗಾಗಿ ಹಗಲು ರಾತ್ರಿ ಶ್ರಮಪಟ್ಟು ಸದ್ದಿಲ್ಲದೆ ವ್ಯಥೆಯ ಮಡುವಿನಲ್ಲೂ ಬೆವರನ್ನು ಅಮೃತವಾಗಿಸಿ ಗಳಿಗೆಗೊಮ್ಮೆ ಮರು ಜೀವನ್ನೀಯುವ ತ್ಯಾಗಿಗಳು. ” ರೈತನ ಹುಟ್ಟು ಸಾಲದಿಂದ, ಆತನ ಬದುಕು ಸಾಲದಿಂದ, ಕೊನೆಗೆ ಆತನ ಮರಣವೂ ಸಾಲದಿಂದ…” ಹಿಂದೊಮ್ಮೆ ಓದಿದ ಪಾಠದ ಭಾಗ ಇದೀಗ ಅಕ್ಷರಶಃ ನಿಜವಾಗುತ್ತಿದೆ. ಆತ ಬೆಳೆದ ಬೆಳೆಗೆ ಸೂಕ್ತ ಬೆಲೆಯಿಲ್ಲ. ಕೊಂಚ ಚೇತರಿಸಿಕೊಳ್ಳಲು, ನಿರಾಳವಾಗಲು ತನ್ನನ್ನು ತಾನು ಪುನರುಜ್ಜೀವಿಸಿಕೊಳ್ಳಲು ಆತನಿಗೆ ಅವಕಾಶವೇ ಕೊಡುತ್ತಿಲ್ಲ. ಮಳೆ ಹೊಯ್ಯುವುದು , ಬಿಸಿಲು ಕಾಯುವುದು, ಪ್ರಾಣಿ – ಪಕ್ಷಿ, ಕೀಟಗಳಿಂದ ಬೆಳೆಯನ್ನು ಸಂರಕ್ಷಿಸುವುದು, ನೇಗಿಲು ಹೂಳುವುದು, ಬೀಜ ಬಿತ್ತುವುದು, ಕಾಲಕ್ಕನುಗುಣವಾದ ಕೃಷಿ ಮಾಡುವುದು ಇದನ್ನೆಲ್ಲ ಚಾಚೂ ತಪ್ಪದೆ ಪಾಲಿಸುತ್ತಿದ್ದ ರೈತ ಸಮಯಕ್ಕೆ ಸರಿಯಾಗಿ ಮಳೆ ಸುರಿಯದಿದ್ದಾಗ ಅಧೀರನಾಗುತ್ತಾನೆ.
ಇಳೆಗೆ ಮಳೆ ಯಾವಾಗ ಸುರಿಯುವುದು ? ಸುರಿದರೂ ಅದರ ತೀವ್ರತೆ ಹೇಗಿರಬಹುದು ? ನೀರ ಬವಣೆ ಉಸಿರಗಟ್ಟಿಸಬಹುದೇ ? ಎಂದು ಲೆಕ್ಕಾಚಾರ ಮಾಡುವ ಆತ ಬೆಳೆ ಬೆಳೆಯುವುದು ಕೈಯಲ್ಲಿ ಹಣದ ಗಂಟುಗಳ ಕಟ್ಟು ಹಿಡಿದಲ್ಲ. ಬದಲಾಗಿ ಯಾರ್ಯಾರದೋ ಕೈ ಕಾಲು ಹಿಡಿದು ಕಚೇರಿ, ಬ್ಯಾಂಕ್, ಫೈನಾನ್ಸ್ ಗಳಿಗೆ ಅಲೆದಾಡಿ ಸಾಲಸೋಲ ಮಾಡಿ ಕೃಷಿ ಮಾಡುತ್ತಾನೆ. ರೈತ ಬೆಳೆದ ಹತ್ತು ರೂಪಾಯಿಯ ಟೊಮೆಟೊ ನೂರು ರೂಪಾಯಿಗೆ ಬೆಲೆಯೇರಿಕೆಯಾದಾಗ ಹೌಹಾರಿದ ಜನರು ರಾತ್ರಿ ಬೆಳಗಾಗುವುದರೊಳಗೆ ಚಿನ್ನದ ಬೆಲೆ ನಲ್ವತ್ತು ಸಾವಿರಕ್ಕೇರಿದಾಗ ತುಟಿಪಿಟಕ್ಕೆನ್ನಲಿಲ್ಲ. ಮತ್ತಷ್ಟು ಖರೀದಿಸುವ ಹಾಗು ಮಾರುವ ಉತ್ಸಾಹದಲ್ಲಿ ತೊಡಗಿಸಿಕೊಂಡರು. ತನ್ನ ಆದಾಯದ ಹತ್ತರಂಶ ಇತರರ ಪಾಲಾಗುತ್ತಿರುವಾಗ ಆ ರೈತ ತಾನು ನಂಬಿದ ಸರಕಾರದ ಮೇಲೆ ನಂಬಿಕೆಯಿಟ್ಟು ದಿನದೂಡುತ್ತಿದ್ದಾನೆ.
ಜವಹರಲಾಲ ನೆಹರೂರವರು ರೂಪಿಸಿದ ಪಂಚವಾರ್ಷಿಕ ಯೋಜನೆಯಡಿಯ ಸಬ್ಸಿಡಿಯ ಮೂಲಕ ಬೆಳೆ ಬೆಳೆಸುವುದು ಆತನಿಗೆ ಆಶ್ವಾಸನೆಯಾಗಿತ್ತು. ತನ್ನ ಸಾಲಮನ್ನಾಕ್ಕಾಗಿ ಸರಕಾರವನ್ನು ನಂಬಿ ಮೊರೆ ಹೋಗುತ್ತಿದ್ದಾನೆ. ಆತ ಕಾರ್ಪೊರೇಟ್ ವರ್ತಕರ ಪುಡಿಗಾಸಿನಿಂದ ಜೀವನ ನಡೆಸಲು ಬಯಸುತ್ತಿಲ್ಲ. ಅವರ ಜುಜುಬಿ ಕಾಸಿಗಾಗಿ ಹೊಲದಲ್ಲಿ ಬೆಳೆ ಬೆಳೆಯುತ್ತಿಲ್ಲ. ಇದೀಗ ಕಾರ್ಪೊರೇಟರ್ ದಲ್ಲಾಳಿಗಳು ಅವನ ಬೆಳೆಗೆ ಬೆಲೆ ಕಲ್ಪಿಸುವ ಹೊಸ ತಿದ್ದುಪಡಿ ನಿಯಮ ಆತನ ಅಭಿಮಾನಕ್ಕೆ ಬರೆಯೆಳೆದಿದೆ. ರೈತರೆಂದರೆ ಸ್ವಾಭಿಮಾನಿಗಳು. ಬಂಡವಾಳಶಾಹಿಗಳ ಕಾಸಿಗಾಗಿ ಅಂಗಲಾಚುವ ಭಿಕ್ಷುಕರಲ್ಲ. ಅವರು ಅನ್ನ ನೀಡುವ ಅನ್ನದಾತರು. ಈ ದೇಶದ ಆಧಾರಸ್ತಂಭಗಳು. ದೇಶಕ್ಕಾಗಿ, ಮಣ್ಣಿಗಾಗಿ ಜೀವವನ್ನೇ ಬಲಿಯರ್ಪಿಸಲು ಹೊರಟಿರುವ ಯೋಧರು. ಆತ್ಮವಿಶ್ವಾಸದ ಕಣಿಗಳು. ಅವರು ನಿಮ್ಮ ದೌರ್ಜನ್ಯಕ್ಕೆ ಹೆದರಿ ಬೆನ್ನಟ್ಟುವ ಹೇಡಿಗಳಲ್ಲ. ಕೊರೋನದ ಹೆಸರಿನಲ್ಲಿ ಇತರೆಲ್ಲ ಹೊಸ ಮಸೂದೆಗಳ ವಿರುದ್ಧ ಹೋರಾಡಿದವರನ್ನು ಗಪ್ ಚಿಪ್ ಮಾಡಲೆತ್ನಿಸಿದ ನಿಮ್ಮ ಆಟದ ಮುಂದೆ ಬಗ್ಗುವವರಲ್ಲ.ನೆನಪಿರಲಿ…
“ರೈತರು ಕಣ್ಣೀರಿಟ್ಟರೆ ಭಾರತ ಕಣ್ಣೀರಿಡುತ್ತೆ ರೈತರು ಎದ್ದು ನಿಂತರೆ ಭಾರತ ಎದ್ದು ನಿಲ್ಲುತ್ತೆ.” ಬದುಕಿಗಾಗಿ ಮಳೆ, ಬಿಸಿಲು, ಚಳಿಯ ಲೆಕ್ಕಿಸದೆ ಜೀವ ಪಣಕ್ಕಿಟ್ಟು ಸಾಲದಿಂದ ಬೆಂದು ಹತಾಶರಾಗಿ ಆತ್ಮಹತ್ಯೆಗೈದ ರೈತರ ಸಂಖ್ಯೆ ಭಾರತ ದೇಶದಲ್ಲಿ ಲಕ್ಷ ದಾಟಿಲ್ಲವೇ…? ಕಿಂಚಿತ್ತೂ ಅದರತ್ತ ಮುಖ ಮಾಡದ ಮಾಧ್ಯಮಗಳು ಶ್ರೀಮಂತ ಉದ್ಯಮಿ ಅಥವಾ ಚಿತ್ರನಟನೊಬ್ಬ ಆತ್ಮಹತ್ಯೆ ಮಾಡಿದರೆ ಅದೊಂದು ದೊಡ್ಡ ವಾರ್ತೆಯಾಗಿ ಬಿಂಬಿಸುತ್ತದೆ. ಅಂತರ್ಜಾತಿ ಪ್ರೇಮ ವಿವಾಹ ಭಗ್ನವಾದರೆ ( ಅಂತರ್ಜಾತಿ ಪ್ರೇಮ ವಿವಾಹಗಳಲ್ಲಿ ಇವೆಲ್ಲ ಸರ್ವೇಸಾಮಾನ್ಯ) ಜಾತಿ, ಧರ್ಮದ ಹೆಸರಿಟ್ಟು ಸಮಾಜವನ್ನು ಸಂಶಯದಲ್ಲಿ ಹೂತು ಬಿಡುವ ಯತ್ನದಲ್ಲಿ ಮಾಧ್ಯಮಗಳು ಕ್ರಿಯಾಶೀಲವಾಗುತ್ತಿರುವುದು, ದುಷ್ಟ ಶಕ್ತಿಗಳು ಈ ಸಂದರ್ಭವನ್ನು ಕೋಮು ದ್ವೇಷಿಸಲು ಬಳಸಿಕೊಳ್ಳುತ್ತಿರುವುದು, ರೈತರ ‘ದಿಲ್ಲಿ ಚಲೋ’ ಹೋರಾಟದಲ್ಲೂ ಕೆಲವು ಮಾನಸಿಕ ಅಸ್ವಸ್ಥರು “ರೈತ ಜಿಹಾದಿ” (ಎಲ್ಲದಕ್ಕೂ ಜಿಹಾದಿ ಎಂದು ಹೆಸರಿಡುವುದು ಅದೊಂದು ಹೊಸರೋಗವಾಗಿದೆ) ಎಂಬ ತಲೆಕಟ್ಟು ಕಟ್ಟಿ ಎಂಜಲು ಮುಟ್ಟಿಸುವ ಚಿತ್ರಗಳನ್ನು ಹಾಕಿ ವ್ಯವಸ್ಥಿತ ಪ್ರಚಾರ ಮಾಡಿ ಅದರ ಮೂಲಕ ವಿಷವಿತರಣೆ ಮಾಡಿ ದೇಶಪ್ರೇಮವನ್ನು ಮೆರೆಯುತ್ತಿದ್ದಾರೆ. ಸದಾ ಕೋಮು ದ್ವೇಷವನ್ನೇ ಉಸಿರಾಗಿಸಿ ಬದುಕ ಬಯಸುವವರೇ, ಸ್ವಲ್ಪ “ದಿಲ್ಲಿ ಚಲೋ” ಹೋರಾಟದತ್ತ , ಕ್ರೂರ ಹಿಂಸೆಯಲ್ಲಿ ಬೆಂದು ನರಳಿ ದಿಕ್ಕೆಟ್ಟ ರೈತ ಬಂಧುಗಳತ್ತ, ಬದುಕು ಕಳೆದುಕೊಂಡ ಸಂತ್ರಸ್ತರತ್ತ, ಹಸಿದ ಜೀವಿಗಳತ್ತ ಸ್ವಲ್ಪ ಗಮನ ಹರಿಸಿರಿ…ನಿಮ್ಮ ಪೊಳ್ಳು ವಾದಗಳನ್ನು ಬದಿಗಿಟ್ಟು ನೈಜತೆಯತ್ತ ಮುಖ ಮಾಡಿದರೆ ಸಾಕು.
ಇವತ್ತು ಲಕ್ಷಾಂತರ ರೈತರು ಮೂರು ಸ್ಥಳಗಳಿಂದ ಐನ್ನೂರಕ್ಕಿಂತಲು ಅಧಿಕ ಸಂಘಟನೆಗಳೊಂದಿಗೆ ದಿಲ್ಲಿಗೆ ಜಮಾಯಿಸಿ ಅನ್ನ , ನೀರು , ಆಹಾರ ಬಿಟ್ಟು ಹೋರಾಟ ನಡೆಸುತ್ತಾ ಪರದಾಡುತ್ತಿದ್ದಾರೆ. ಅದರಲ್ಲಿ ವೃದ್ಧರು , ಸ್ತ್ರೀಯರು, ಮಕ್ಕಳು ಕೈ ಜೋಡಿಸಿರುವರು. ದಿಲ್ಲಿಗೆ ಜಮಾಯಿಸಿದ ರೈತರನ್ನು ತಡೆಯಲು ಕಬ್ಬಿಣದ ಬ್ಯಾರಿಕೇಡ್ ಗಳನ್ನು ನಿಲ್ಲಿಸಿ ದೇಶಕ್ಕೆ ನುಗ್ಗುವ ಭಯೋತ್ಪಾದಕರನ್ನು, ನುಸುಳುಕೋರರನ್ನು ತಡೆಯುವ ರೀತಿಯಲ್ಲಿ ಪ್ರಹಸನ ನಡೆಸುತ್ತಿರುವುದು, ಜೊತೆಗೆ ಅಶ್ರುವಾಯು ಷೆಲ್ ಗಳನ್ನು ಮಿಸೈಲ್ ದಾಳಿಯ ರೀತಿಯಲ್ಲಿ ರೈತರ ಮೇಲೆ ಬೀಸುವುದು, ಕೊರೆಯುವ ಚಳಿಯಲ್ಲೂ ಜಲಫಿರಂಗಿಗಳನ್ನು ಹೊಡೆಯುತ್ತಿರುವ ಹೃದಯ ವಿದ್ರಾವಕ ದೃಶ್ಯಗಳನ್ನು ಕಂಡು ಈ ಪರಿತ್ಯಕ್ತರ ಜತೆಗೆ ನಿಲ್ಲುವುದನ್ನು ಮರೆತು ಸಣ್ಣ ಸಣ್ಣ ಮಿಂಚು ಸುದ್ಧಿಗಳನ್ನು ಬಿತ್ತರಿಸಿ ಮೆರೆದ ಈ ಹೊತ್ತು ಮನುಕುಲದ ಕೇಡುಗಾಲದ ಹೊತ್ತಲ್ಲದೆ ಮತ್ತೇನು ? ನಿಮಗೆ ಈ ಬಡಜೀವಿಗಳ ಅಹವಾಲನ್ನು ಸರಕಾರಕ್ಕೆ ಮುಟ್ಟಿಸುವ ಪ್ರಯತ್ನ ಮಾಡಬಾರದೇ… ? ಅವರು ತಿನ್ನಿಸಿದ ಅನ್ನದ ಅಗುಳಿನ ಋಣ ತೀರಿಸಬಾರದೇ…? ನಾಳೆ ಕೃತಕ ಆಹಾರ ಸೇವನೆಗೆ ಬಲಿಯಾಗುವ ಸಂಕಷ್ಟವನ್ನು ತಪ್ಪಿಸುವ ಪ್ರಯತ್ನ ಮಾಡಬಾರದೇ…? ಯಾವ ಧರ್ಮದ ದ್ವೇಷಿಗಳಾಗಿದ್ದೀರೋ ಅದೇ ಧರ್ಮದ ಇಪ್ಪತ್ತೈದು ಮಸೀದಿಗಳಲ್ಲಿ ರೈತರಿಗೆ ಅನ್ನ , ಆಹಾರ ,ಆಶ್ರಯ ನೀಡಿರುವ ಚಿತ್ರಗಳು ನಿಮ್ಮ ಕಣ್ಣ ಮುಂದೆ ಸುಳಿಯಲಿಲ್ಲವೇ…? ಪೊಲೀಸರು ಹೊಡೆದುರುಳಿಸಲು ಯತ್ನಿಸುತ್ತಿರುವ ಅದೇ ರೈತರು ಮತ್ತೊಮ್ಮೆ ಅವರಿಗೆ ಅನ್ನ , ನೀರು ಪೂರೈಕೆ ಮಾಡುವ ದೃಶ್ಯಗಳು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಲ್ಲವೇ…? ಇನ್ನು ಯಾರಾದರೂ ಈ ಹೊತ್ತಿನಲ್ಲಿ ಉರಿವ ಮನೆಯಲ್ಲಿ ಧರ್ಮ, ಜಾತಿ ತುರುಕಿಸಿದರೆ ಅಂತಹವರು ಈ ಭೂಮಿಯ ಮೇಲಿರಲು ನಾಲಾಯಕ್ಕರು. ಅವರ ದ್ವೇಷಕ್ಕೆ ಅವರೇ ಬೂದಿಯಾಗಬೇಕಷ್ಟೇ !
ಇನ್ನೂ ಹೇಳುವುದಾದರೆ ಪಂಜಾಬ್ ಮತ್ತು ಹರ್ಯಾಣದ ರೈತರೆಂದರೆ ಆತ್ಮಬಲ ಹೊತ್ತ ಧೀರರು… ಅವರು ಹಠಮಾರಿಗಳು. ಯಾರದೇ ಯಾವುದೇ ಆಮಿಷಕ್ಕೆ ಬಗ್ಗುವವರಲ್ಲ. ಅವರ ಮಾತು ಘನವುಳ್ಳದು. ಪಂಜಾಬಿಗಳೆಂದರೆ ಅವರಲ್ಲಿ ದಿಟ್ಟತನದ ಆಕರ್ಷಣೆಯಿದೆ…ಹಿಡಿದ ಕೆಲಸ ಬಿಡಲೊಲ್ಲರು. ಆದುದರಿಂದ ಅವರಿಗೆ ಮರಣದ ಭಯವಿಲ್ಲ. ಕೊರೋನ ವೈರಸ್ ಸೋಂಕು ನೆಪವಾಗಿಸಿ ಅವರನ್ನು ಹಿಂದಕ್ಕಟ್ಟಲು ನಿಮಗೆ ಸಾಧ್ಯವಿಲ್ಲ. ಸಾವಂತು ಖಚಿತ. ಇನ್ನು ಹೋರಾಡಿ ಸಾಯುವೆವೆಂದು ಪಣತೊಟ್ಟು ಹೋರಾಟಕ್ಕಿಳಿದಿರುವರು. ಅವರ ಬೇಡಿಕೆಯನ್ನು ಕೇಳಿ ಅವರಿಗೆ ಬೆಂಬಲ ನೀಡಬಾರದೇ…? ಕಷ್ಟಕಾಲದಲ್ಲೂ ಸ್ವಾರ್ಥದ ಗುಂಗಿನಲ್ಲಿ ಮೆರೆಯುವಿರೇಕೆ..? ಇಲ್ಲೂ ಬಲಪಂಥೀಯ ದುಷ್ಟಶಕ್ತಿಗಳು ನಡೆಸುತ್ತಿರುವ ದೌರ್ಜನ್ಯವೇ ಆಯ್ತಲ್ಲ..! ಜನರ ರಕ್ಷಣೆಗೆ ನಿಂತ ಸೈನಿಕರು , ಪೊಲೀಸರು ರೈತರ ಅಳಲನ್ನು ಸಮಾಧಾನದಿಂದ ಶಾಂತಿಯಿಂದ ಗೌರವದಿಂದ ಕೇಳಿ ಪರಿಹಾರ ಕಂಡು ಹಿಡಿಯಬೇಕು. ಅದು ಬಿಟ್ಟು ದೊಣ್ಣೆ ನಾಯಕರಾಗುವುದು ಮನಸ್ಸಿಗೆ ಬಹಳ ನೋವಾಗುತ್ತದೆ. ಕಂಬಳದ ಬಯಲಿನಲ್ಲಿ ಎತ್ತುಗಳಿಗೆ ಹೊಡೆಯುವಂತೆ ಆ ವಯೋವೃದ್ಧರ ಮೇಲೆ ಲಾಠಿಪ್ರಹಾರ ನಡೆಸುತ್ತಿರುವುದು ನೋಡುವಾಗ ಹೃದಯ ಒಡೆದು ಹೋಗುತ್ತಿದೆ. ತಿಂದ ಅನ್ನಕ್ಕೆ ತೋರುವ ಕೃತಜ್ಞತೆಯೇ ಈ ಅಶ್ರುವಾಯು ,ಜಲಫಿರಂಗಿ , ಲಾಠಿ ದೊಣ್ಣೆಗಳು ! ಒಟ್ಟಿನಲ್ಲಿ ಎಲ್ಲಿ ಹೋದರೂ ಎಲ್ಲಿ ನೋಡಿದರೂ ಅಮಾಯಕರ ಮೇಲೆ ನಡೆಸುವ ದಬ್ಬಾಳಿಕೆಯದೇ ಕತೆ. ಆದರೆ ಬೇಸರವೇನೆಂದರೆ ರಾಜ್ಯ ನೀತಿಯ ನಿರ್ದೇಶನ ತತ್ವ (Directive principle of state policy) ಜಾರಿಗೆ ಬಂದ ದಿನ , ದೇಶದ ನಾಗರಿಕರಿಗೆ ಹಕ್ಕುಗಳನ್ನು ನಿರ್ದೇಶಿಸಲಾದ ದಿನದಂದೇ ಆ ವಯೋವೃದ್ಧ ರೈತರ ಮೇಲೆ ಕಿಂಚಿತ್ತೂ ಕರುಣೆಯಿಲ್ಲದೆ ಅಮಾನವೀಯವಾಗಿ ತಳಿಸುತ್ತಿರುವುದು. ಅವರು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಗೈಯ್ಯಲು ಕಾರಣವೇನೆಂದು ತಿಳಿದಿದ್ದೂ ಇಂತಹ ಸಂಕಷ್ಟದಲ್ಲಿರುವ ಹೊತ್ತು ಯಾವ ಮಾನವೀಯತೆಯುಳ್ಳವನೂ ಸ್ಪಂದಿಸಬೇಕಾದ ಸಂದರ್ಭವಿದು. ಕೇಂದ್ರ ಸರಕಾರ ಕೃಷಿ ಉತ್ಪನ್ನ ಮಾರಾಟ ಕಾಯ್ದೆ , ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಹಾಗೂ ಆವಶ್ಯಕ ಪದಾರ್ಥಗಳ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ದೇಶದ ರೈತರ ಅಸ್ತಿತ್ವವನ್ನು ನಾಶಮಾಡುವಂತಹ ಕೃತ್ಯಕ್ಕೆ ಕೈ ಹಾಕಿದೆ. ತಾನಿನ್ನು ಶಾಶ್ವತವಾಗಿ ಕಾರ್ಪೊರೇಟ್ ದಲ್ಲಾಳಿಗಳ ಅಧೀನದಲ್ಲಿ ಬದುಕಬೇಕು. ನಂತರ ಈ ಬಂಡವಾಳ ಶಾಹಿಗಳು ರೈತರ ಹೊಲಗಳನ್ನು ಖರೀದಿಸಿ ದೇಶದ ಆಹಾರ ಭದ್ರತೆಯನ್ನು ನಾಶಮಾಡಬಹುದೆಂಬ ಆಶಂಕೆಯಿಂದ ರೈತರು ಬೀದಿಗಿಳಿದರು. ಸ್ವತಂತ್ರ ವಿಪಣಿಗಳೆಂಬ ಕಾರ್ಪೊರೇಟರ್ ಗಳು ತಾತ್ಕಾಲಿಕವಾಗಿ ಲಾಭದಾಯಕವೆಂದು ಮೇಲ್ನೋಟಕ್ಕೆ ಕಂಡರೂ ಭವಿಷ್ಯದಲ್ಲಿ ಅದು ವಿನಾಶಕ್ಕೆ ಕಾರಣವಾಗಬಹುದು. ಅಮೇರಿಕಾದ ಹಂದಿ ಸಾಕುಗಾರರ ಇಂದಿನ ಪರಿಸ್ಥಿತಿಯೇ ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ.
ಒಂದಂತೂ ನೆನಪಿರಲಿ. ಕೋಮುವಾದ, ದ್ವೇಷ ಸಾಧನೆಯಿಂದ ನಮ್ಮ ಹೊಟ್ಟೆ ತುಂಬಲಾರದು. ಹೊಟ್ಟೆ ತುಂಬಬೇಕಾದರೆ ರೈತರ ದುಡಿಮೆಯೇ ಬೇಕು. ನಾವಿರುವ ನೆಲದ ಫಲಗಳನ್ನು ಅನುಭವಿಸಬೇಕಾದರೆ ನಾವು ಅವರೊಂದಿಗೆ ಕರ ಜೋಡಿಸಬೇಕೇ ಹೊರತು ಈ ಕಾರ್ಪೊರೇಟರ್ ಗಳನ್ನು ನಂಬಿಯಲ್ಲ. ಅದು ನಮಗೆ ಕೇಡುಗಾಲ ತರಬಹುದು. ಫ್ಯಾಸಿಸ್ಟ್ ಗಳ ಹುನ್ನಾರ , ಪಿತೂರಿಗಳ ವಿರುದ್ಧ ರೈತರ ಹೋರಾಟವೇ ವಿನಾ ಸ್ವಂತ ಸ್ವಾರ್ಥಲಾಭಕ್ಕಾಗಿಯಲ್ಲ. ಇದು ಜಾತಿ , ಧರ್ಮದ ವಿರುದ್ಧದ ಹೋರಾಟವಲ್ಲ. ಒಂದು ಸಂಸ್ಥೆಯ ವಿರುದ್ಧದ ಹೋರಾಟವಲ್ಲ. ಬದಲಾಗಿ ಹಕ್ಕುಗಳ ಸಂರಕ್ಷಣೆ ಮತ್ತು ದೇಶದ ಆಹಾರ ಭದ್ರತೆಯ ಸುರಕ್ಷಿತೆಗಾಗಿ ಅವರೆಲ್ಲ ಒಟ್ಟುಗೂಡಿ ಪ್ರತಿಭಟಿಸುತ್ತಿರುವುದು.” ಜೈ ಜವಾನ್ ಜೈ ಕಿಸಾನ್” ಎಂದರೆ ಸೈನಿಕರಿಗೂ ಜಯವಾಗಲಿ ಮತ್ತು ಕೃಷಿಕರಿಗೂ ಜಯವಾಗಲಿ. ಜವಾನ್ ದೇಶದ ಸುರಕ್ಷತೆಗಾಗಿ ಜಯಿಸಬೇಕು. ಕೃಷಿಕ ಆಹಾರ ಸಾಮಾಗ್ರಿಗಳ ಭದ್ರತೆ ಹಾಗು ಸಂರಕ್ಷಣೆಗಾಗಿ ಜಯಿಸಬೇಕು.ತನ್ನ ಮಗ ದೇಶದ ಸೈನಿಕನಾದರೆ ಬೀಗುವ ಆ ರೈತ ತಂದೆ ದೇಶಕ್ಕಾಗಿ ನೆಲ, ಸಂತಾನವನ್ನು ಅರ್ಪಿಸಲೂ ಸಿದ್ಧ. ದೇಶಕ್ಕಾಗಿ ಸೈನಿಕರನ್ನು, ಆರಕ್ಷಕರನ್ನು ಸಮರ್ಪಿಸಿದ ತ್ಯಾಗಮಯಿ ತಂದೆತಾಯಿಗಳು ಅವರಾಗಿದ್ದಾರೆ. ಯೋಧನಾದ ಮಗ ದೇಶಕ್ಕಾಗಿ ಹುತಾತ್ಮನಾಗಬೇಕೆಂದು ಬಯಸುವರೇ ಹೊರತು ಅನ್ಯಾಯದ ಪರ ನಿಲ್ಲುವಂತೆ ಅವರು ಕನಸು ಮನಸ್ಸಿನಲ್ಲೂ ಊಹಿಸಲಾರರು. ಅಂತಹ ರೈತ ಸಮೂಹವನ್ನು ಗೌರವಿಸಬೇಕೇ ವಿನಾ ತಳಿಸುವುದು ನ್ಯಾಯವೇ..?
ಸರಕಾರ ಅವರ ನೋವಿಗೆ ಸ್ಪಂದಿಸುವ ಕಿವಿಗಳಾಗಬೇಕು. ಕೃಷಿ ಮಂತ್ರಿ ಅಥವಾ ಪ್ರಧಾನ ಮಂತ್ರಿಗಳು ಅವರ ಪರವಾಗಿ ನಿಂತು ಸಮಸ್ಯೆಯನ್ನು ಬಗೆಹರಿಸಬೇಕು. ” ರೈತ ಈ ದೇಶದ ಸಂಪತ್ತು. ಅವರ ದುಡಿಮೆಯೇ ದೇಶದ ಭದ್ರತೆ… ಅವರ ಪರಿಶ್ರಮವೇ ದೇಶದ ಆಹಾರ ಸಮೃದ್ಧಿ. ಸೈನಿಕನಿದ್ದರೆ ದೇಶ ಉಳಿಯುತ್ತದೆ, ರೈತನಿದ್ದರೆ ಭದ್ರತೆ ಇರುತ್ತದೆ. ಉತ್ತಮ ಸೈನಿಕ ದೇಶದ ಆಸ್ತಿಯಾದರೆ ಶ್ರಮಪಟ್ಟು ದುಡಿಯುವ ರೈತ ದೇಶದ ಬೆನ್ನಲುಬು.”
ಕೃಪೆ : ಅನುಪಮ ಮಹಿಳಾ ಮಾಸಿಕ