ಲೇಖಕರು: ಹಕೀಮ್ ತೀರ್ಥಹಳ್ಳಿ.

ಮನುಷತ್ವ ನಾಶವಾದ ವ್ಯಕ್ತಿಯ ಕೈಯಲ್ಲಿದ್ದ ಆಯುಧ ತನಗಾಗದವನ ಹೊಟ್ಟೆಯನ್ನು ಸೀಳಿತು‌. ಅಲ್ಲಿಯೇ “ಅಮ್ಮಾ…!” ಎಂದು ಚೀರುತ ಕುಸಿದು ಬಿದ್ದ. ರಕ್ತವೂ ಚಿಮ್ಮಿ ಕೊಡಿಯಾಗಿ ಹರಿಯಿತು. ಅಲ್ಲೇ ನೋವಿನಿಂದ ನರಳಾಡಿದ. ಇದನ್ನು ಗಮನಿಸಿದ ಮನುಷತ್ವ ಗುಣ ಇರುವ ಅದ್ಯಾರೋ ಅವನನ್ನು ಪಕ್ಕದ ಆಸ್ಪತ್ರೆಗೆ ತಂದು ಮಲಗಿಸಿದರು. ವೈದ್ಯರು ಪರೀಕ್ಷಿಸಿ ಇವನ ಉಸಿರು ನಿಂತಿದೆ ಎಂದು ಬಂಧುಗಳಿಗೆ ತಿಳಿಸುತ್ತಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ತಂದೆ-ತಾಯಿ ಮಗನಿಗಾಗಿ ತಮ್ಮ ಉಸಿರಿರುವವರೆಗೂ ‘ಪುತ್ರ ಶೋಕಂ ನಿರಂತರಂ’ ಎನ್ನುವ ಹಾಗೆ ಕಣ್ಣೀರನ್ನು ಹರಿಸುತ್ತಾರೆ. ಇವನ ಜೊತೆ ರಕ್ತವನ್ನು ಹಂಚಿಕೊಂಡು ಹುಟ್ಟಿರುವವರು ಅಣ್ಣನಿಲ್ಲದೆಯೋ ತಮ್ಮನಿಲ್ಲದೆಯೋ ಸಂಕಟ ಪಡುತ್ತಾರೆ. ಜೀವನ ಪರ್ಯಂತ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಭರವಸೆ ಕೊಟ್ಟು ಕಟ್ಟಿಕೊಂಡ ಇವನ ಸಣ್ಣ ಪ್ರಾಯದ ಹೆಂಡತಿ ವಿಧವೆಯಾಗುತ್ತಾಳೆ. ಇವನ ಮಕ್ಕಳಿಗೆ ಮುಂದೆ ಗತಿ ಯಾರು?.

ಇಷ್ಟೆಲ್ಲಾ ಆಗುತ್ತಿರುವಾಗ ಆ ಸಾವಿಗೆ ಭಿನ್ನ ಕೋಮಿನವರು ಕಾರಣರಾದರೆ ಅದಕ್ಕೆ ಧರ್ಮದ ಬಣ್ಣ ಬಂದಾಗಿರುತ್ತದೆ. ಈಗ ಏನಿದ್ದರೂ ಪ್ರತಿಕಾರದ ಸಮಯ. ತಲೆ ಬುಡವಿಲ್ಲದ ಸುದ್ದಿಗಳು ಕಾಡ್ಗಿಚ್ಚಿನಂತೆ ಹಬ್ಬುತ್ತದೆ. ಇಂತಹ ಸಾವಿನ ಸುದ್ದಿಗೆ ಕಾದು ಕುಳಿತಿರುವ ಕೋಮು ದ್ವೇಷಿಗಳು, ಪರಸ್ಪರ ಸ್ನೇಹ ಸಂಬಂಧದ ವಿರೋಧಿಗಳು ಇಂತಹ ಸಮಯಕ್ಕೆ ಕಾದಿರುವಂತೆ ತಮ್ಮ ಸ್ವಾರ್ಥಕ್ಕಾಗಿ, ಸ್ವಂತದ ಲಾಭಕ್ಕಾಗಿ, ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಾರೆ. ಸಮಯ ಸಾಧಕರು ಹಚ್ಚುವ ಆ ಬೆಂಕಿ ಮತ್ತಷ್ಟು ಸುಣ್ಣ-ಬಣ್ಣಗಳಿಂದ ಯಾವುದೇ ತರ್ಕವಿಲ್ಲದೇ ಒಬ್ಬರಿಂದ ಒಬ್ಬರಿಗೆ ಮುಟ್ಟುತ್ತದೆ. ಆ ತಕ್ಷಣದಲ್ಲಿ ಬ್ರೇಕಿಂಗ್ ನ್ಯೂಸ್ ಎನ್ನುವ ಶೀರ್ಷಿಕೆಯಲ್ಲಿ ಪ್ರತಿ ಮನೆಗೂ ದೃಶ್ಯ ಮಾಧ್ಯಮ ಮತ್ತಷ್ಟು ಮಸಾಲೆಯೊಂದಿಗೆ ಭಿತ್ತರಿಸುತ್ತವೆ. ಇದನ್ನು ಗಮನಿಸುವ ಕೆಲವು ಯುವಕರು ಹಿಂದು-ಮುಂದುಗಳನ್ನು ಯೋಚಿಸದೆ, ಮನೆಯಲ್ಲಿರುವ ತನ್ನ ಶಾಂತಿ ಪ್ರಿಯರಾದ ತಂದೆ-ತಾಯಿಯ ಮಾತನ್ನೂ ಲೆಕ್ಕಿಸದೆ ಉನ್ಮಾದದಿಂದ ಬೀದಿಗೆ ಇಳಿಯುತ್ತಾರೆ. ಇಲ್ಲಿರುವ ನಿಜ ಸತ್ಯವೆಂದರೆ ಸಮಯ ಸಾಧಕರ ಮಕ್ಕಳು ಬೀದಿಯಲ್ಲಿರುವುದಿಲ್ಲ. ಬಡಪಾಯಿ ಕುಟುಂಬದ ಮಕ್ಕಳು ಸಾವಿನ ನ್ಯಾಯಕ್ಕಾಗಿ ಆಗ್ರಹಿಸುತ್ತಾರೆ. ಇದರಿಂದ ಇತರರಿಗೂ ತೊಂದರೆ ಉಂಟುಮಾಡಿ ತಮಗೆ ಅರಿವಿಲ್ಲದೆ ತಾವೇ ತೊಂದರೆಗೆ ಸಿಲುಕುತ್ತಾರೆ.

ಯುವಕರ ಅತಿಯಾದ ಉನ್ಮಾದದಿಂದ ಅಮಾಯಕರಾದ ಅನೇಕರು ತೊಂದರೆಗೆ ಒಳಗಾಗುತ್ತಾರೆ. ಕಷ್ಟ-ನಷ್ಟಗಳು ಎದುರಾಗುತ್ತದೆ. ಕ್ರಿಯೆಗೆ ಪ್ರತಿಕ್ರಿಯೆ ಎನ್ನುವಂತೆ ಕಂಡ-ಕಂಡ ಅಂಗಡಿಗಳಿಗೆ ಶಾಂತಿ ಪ್ರೀಯತೆ ಭೋದಿಸುವ ಧರ್ಮದ ದೇವರ ಹೆಸರನ್ನೆತ್ತಿ ಕಲ್ಲನ್ನು ಎಸೆಯುತ್ತಾರೆ. ಆ ಕಲ್ಲು ಬಡವನ ಹೊಟ್ಟೆಗೆ ನೇರವಾಗಿ ಹೊಡೆಯುತ್ತದೆ. ಒಂದೊತ್ತಿನ ಊಟಕ್ಕೆ ದಿನ ಪೂರ್ತಿ ದುಡಿಯುವ ಬೀದಿ ಬದಿಯ ವ್ಯಾಪಾರಿಯ ಅಂಗಡಿಯು ಧ್ವಂಸವಾಗುತ್ತದೆ. ಮನಸ್ಸಿನ ನೆಮ್ಮದಿಗೆ ಸೇರುವ ಪ್ರಾರ್ಥನಾ ಮಂದಿರಗಳು ಕ್ಷಣ ಮಾತ್ರದಲ್ಲಿ ಒಡೆದು ಚೂರಾಗುತ್ತದೆ. ಅಪಾರವಾದ ಉತ್ಸಾಹದಲ್ಲಿ ಶಾಂತಿ, ಪ್ರೀತಿ, ಸಹನೆ, ಸಹಬಾಳ್ವೆ ಇದೆಲ್ಲವನ್ನೂ ಮರೆಯುತ್ತಾರೆ‌. ಇದೆಲ್ಲವನ್ನೂ ಗಮನಿಸುವ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಇರುವ ಪೋಲೀಸರು ತಾಳ್ಮೆಗೆಟ್ಟು ತಮ್ಮ ಕೈಯಲ್ಲಿರುವ ಲಾಠಿಗೆ ಕೆಲಸ ಕೊಡುತ್ತಾರೆ. ಆ ಭಯದಲ್ಲಿ ಓಡುವಾಗ ಮತ್ತಷ್ಟು ನೋವುಗಳು ಸಂಭವಿಸುತ್ತದೆ. ಇದರಿಂದ ಸಮಾಜದಲ್ಲಿ ಭಯಂಕರವಾದ, ಭಯಭೀತವಾದ ವಾತವರಣ ನಿರ್ಮಾಣವಾಗುತ್ತದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕರ್ಫ್ಯೂ ಹೇರಲಾಗುತ್ತದೆ. ಇದರಿಂದ ಒಂದಷ್ಟು ಜನರ ಬದುಕಿಗೂ ಕಷ್ಟವಾಗುತ್ತದೆ.

ಇದನ್ನೆಲ್ಲ ಗಮನಿಸುವ ಸರ್ಕಾರ ಮತ್ತು ಅದರ ಭಾಗವಾಗಿರುವ ಕೆಲವರು ಕುಟುಂಬಕ್ಕೆ ಸಾಂತ್ವನದ ನೆಪದಲ್ಲಿ ಒಂದಷ್ಟು ಪರಿಹಾರ ಘೋಷಿಸುತ್ತಾರೆ. ಅಂತಹ ಹಣ ಎಷ್ಟೇ ಕೊಟ್ಟರು ಅದು ಜೀವ ಕಳೆದುಕೊಂಡ ವ್ಯಕ್ತಿಗೆ ಸಮವಾಗಲು ಸಾಧ್ಯವಿಲ್ಲ. ಆ ಹಣದಿಂದ ಜೀವವನ್ನು ಮರಳಿ ತರಲು ಸಾಧ್ಯವೇ? ಈ ಹಣವನ್ನು ನೀಡುವವರು ಜೀವನ ಪರ್ಯಂತ ಕುಟುಂಬದ ಜೊತೆ ನಿಂತು ಮಗನ ಸ್ಥಾನ ತುಂಬುತ್ತಾರೆಯೇ? ಎನ್ನುವ ಪ್ರಶ್ನೆ ಉದ್ಭವಿಸದೆ ಇರದು. ಈ ಸಮಯದಲ್ಲಿ ಪ್ರತಿಕ್ರಿಯೆ ಎನ್ನುವ ನೆಲೆಯಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶ ಮಾಡುವ ಬಡಪಾಯಿ ಯುವಕರು ಒಂದಷ್ಟು ಕೇಸನ್ನು ಹಾಕಿಸಿಕೊಳ್ಳುತ್ತಾರೆ. ನಂತರ ಕೋರ್ಟ್, ಕೇಸ್ ಇದ್ದಿದ್ದೇ. ಈ ಸಂದರ್ಭದಲ್ಲಿ ಆ ಯುವಕರ ಸಹಾಯಕ್ಕೆ ನಿಲ್ಲಲು ಯಾರು ಮುಂದಾಗುವುದಿಲ್ಲ. ಇದರಿಂದ ಲಾಭ ಪಡೆದವರು ಬಹಳ‌ ಜಾಗರೂಕ ದಾರಿಯಿಂದ ತಾವು ತಲುಪ ಬೇಕಾದ ಹಂತ ತಲುಪಿರುತ್ತಾರೆ. ಈ ಕೋಮು ಗಲಭೆಯ ಪರಿಣಾಮದ ಅರಿವಿಲ್ಲದೆ ಮಾಡುವ ಅವಾಂತರ ಇಡೀ ಊರನ್ನೆ ಉರಿಸಿ ಬಿಡುತ್ತದೆ.

ದೇಶ ಪ್ರೇಮ ಎಂದರೆ ‘ದ್ವೇಷ ಭಿತ್ತಿ ದೇಶ ಕಟ್ಟುವುದಲ್ಲ’. ದ್ವೇಷ ಅಸೂಯೆಗಳಿಂದ ಒಂದು ದೇಶವನ್ನು ಕೆಡವಬಹುದೇ ಹೊರತು ಕಟ್ಟಲು ಸಾಧ್ಯವಿಲ್ಲ. ದೇಶ ಕಟ್ಟಲು ಪರಸ್ಪರ ಸ್ನೇಹ, ಪ್ರೀತಿ, ಸೌಹಾರ್ದತೆ ಅಗತ್ಯ. ಇತ್ತೀಚಿನ ದಿನಗಳಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ದೇಶ ಭಕ್ತಿಯ ಹೆಸರಿನಲ್ಲಿ ಜಾತಿ, ಧರ್ಮ, ಭಾಷೆಯ ಮಧ್ಯೆ ವೈಷಮ್ಯ ಮೂಡಿಸುತ್ತಿರುವುದು ದುರಂತ. ನಾವು ನಿಜವಾಗಿಯೂ ಚಿಂತಿಸ ಬೇಕಾದ ಸಮಸ್ಯೆ ನಮ್ಮ ಕಣ್ಣಮುಂದೆ ಅನೇಕ ಇವೆ. ಹೀಗಿರುವಾಗ ಇದರ ಬಗ್ಗೆ ಯೋಚಿಸುವ ಮತಿ ಅದೆಷ್ಟು ಜನರಿಗಿದೆ ಎಂದು ಯೋಚಿಸುವಾಗ ತುಂಬಾ ವ್ಯಥೆಯಾಗುತ್ತದೆ. “ಚಿಂತಿಸುವವನಿಗೆ ದೃಷ್ಟಾಂತವಿದೆ”. ಬದಲಾಗೋಣ.

LEAVE A REPLY

Please enter your comment!
Please enter your name here