“ಶಿಕ್ಷಣದ ಖಾಸಗೀಕರಣವು ಸರಕಾರವು ತನ್ನ ಜವಾಬ್ದಾರಿಯಿಂದ ಜಾರಿಕೊಂಡು ಅನುಸರಿಸುತ್ತಿರುವ ಉದ್ದೇಶಪೂರ್ವಕ ಧೋರಣೆಯಾಗಿದೆ”

– ಪ್ರೊ. ಎನ್. ರಘುರಾಮ್, 

(ಡೀನ್, ಸ್ಕೂಲ್ ಆಫ್ ಬಯೋ ಟೆಕ್ನಾಲಜಿ, ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ತ ಯುನಿವರ್ಸಿಟಿ, ಹೊಸದಿಲ್ಲಿ)

ನಿರೂಪಣೆ: ನಿಖಿಲ್ ಕೋಲ್ಪೆ

ಇಂದಿನ ವಿವಿಧ ಸರಕಾರಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿರುವುದು ಮತ್ತು ಎಲ್ಲಾ ಮಟ್ಟಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ನಿಭಾಯಿಸಲು ವಿಫಲವಾಗಿರುವುದೇ  ಶಿಕ್ಷಣದ ಖಾಸಗೀಕರಣವು ಯದ್ವಾತದ್ವವಾಗಿ ನಡೆಯುತ್ತಿರುವುದಕ್ಕೆ ಕಾರಣ. ನೀವು ಆರ್‌ಬಿಐ ದಾಖಲೆಗಳು, ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಯ ವಾರ್ಷಿಕ ವರದಿಗಳು, ಉನ್ನತ ಶಿಕ್ಷಣ ಕುರಿತ ಅಖಿಲ ಭಾರತ ಸಮೀಕ್ಷೆ ಮತ್ತು ಯುಜಿಸಿಯ ವಾರ್ಷಿಕ ವರದಿಗಳನ್ನು ನೋಡಬೇಕು. ಇಂದು ಶಿಕ್ಷಣದಲ್ಲಿ ತೊಡಗಿಸಲು ಹಣವಿಲ್ಲವೆಂಬುದು ಕೇವಲ ನಾಟಕ. ವಿಶ್ವದ ಅತಿದೊಡ್ಡ, ಅತ್ಯಂತ ಹಳೆಯ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾದ ಭಾರತದ ಬಳಿ ಶಿಕ್ಷಣದಲ್ಲಿ ತೊಡಗಿಸಲು ಹಣವಿಲ್ಲವೆಂದರೆ, ಬೇರಾರ ಬಳಿ ಇದ್ದೀತು?

ಕಳೆದ ಮೂರರಿಂದ ನಾಲ್ಕು ವರ್ಷಗಳಲ್ಲಿ ಶಿಕ್ಷಣದಲ್ಲಿ ಕೇಂದ್ರ ಸರಕಾರದ ಬಜೆಟ್ ವಿನಿಯೋಗದಲ್ಲಿ ತೀವ್ರ ಇಳಿಕೆಯಾಗಿದೆ. ರಾಜ್ಯಗಳು ಹಿಂದೆಯೇ ಇದನ್ನು ಮಾಡುತ್ತಿದ್ದರೆ, ಇದೀಗ ಕೇಂದ್ರ ಸರಕಾರವೂ ಅದನ್ನು ಮಾಡುತ್ತಿದೆ. ಹೀಗೆ ಮಾಡಿಯೂ ಈ ಸರಕಾರಗಳು ನಿರುಮ್ಮಳವಾಗಿರುವುದು ಭಾರೀ ಆತಂಕದ ವಿಷಯ. ನನ್ನ ವಾದಗಳು ಹೆಚ್ಚಾಗಿ ಸರಕಾರದ ಅಂಕಿ ಅಂಶಗಳ ಮೇಲೆ ಆಧರಿಸಿದ್ದಾಗಿದ್ದು, ಅವುಗಳನ್ನು ನಾನು ತಯಾರಿಸಿದ್ದೇನಲ್ಲ. ಈ ದತ್ತಾಂಶಗಳ ಒಳಗೆ ಇನ್ನಷ್ಟು ಸತ್ಯಗಳು ಅಡಗಿವೆ.

ಕೇವಲ ಐದು ವರ್ಷಗಳ ಹಿಂದೆ ಶಿಕ್ಷಣದ ಮೇಲಿನ ಕೇಂದ್ರ ಸರಕಾರದ ವೆಚ್ಚವು ಅತಿ ಹೆಚ್ಚೆಂದರೆದರೆ ನಾಲ್ಕು ಶೇಕಡಾ ಇದ್ದು, ಇದು 2018-19ರ ಬಜೆಟಿನಲ್ಲಿ 3.48 ಶೇಕಡಾಕ್ಕೆ  ಇಳಿದಿದೆ. ಇದೇ ಬಜೆಟನ್ನು ಭಾರೀ ಉತ್ತಮ ಬಜೆಟ್ ಎಂಬಂತೆ ಬಿಂಬಿಸಲಾಯಿತು. ಕಳೆದ ನಾಲ್ಕು ವರ್ಷಗಳಲ್ಲಿ ಶಾಲೆಗಳಿಗೆ ಅನುದಾನವು ಇಳಿಯುತ್ತಾ ಬಂದಿರುವುದನ್ನು ಮತ್ತು ಉನ್ನತ ಶಿಕ್ಷಣದ ಮೇಲಿನ ವಿನಿಯೋಗವು ಒಂದೇ ಮಟ್ಟದಲ್ಲಿ ಸ್ಥಗಿತಗೊಂಡಿರುವುದನ್ನು ಬಜೆಟ್ ವ್ಯಯದ ಅಂಕಿ ಅಂಶಗಳು ತೋರಿಸುತ್ತವೆ. ಶಿಕ್ಷಣದ ವೆಚ್ಚವನ್ನು ಭರಿಸಲು ಶಿಕ್ಷಣ ಮೇಲ್ತೆರಿಗೆ (ಸೆಸ್) ಹೇರಲಾಗುತ್ತಿತ್ತು. ಈಗ ಅದಕ್ಕೆ ಶಿಕ್ಷಣ ಮತ್ತು ಅರೋಗ್ಯ ಮೇಲ್ತೆರಿಗೆ ಎಂಬ ಹೊಸ ನಾಮಕರಣ ಮಾಡಲಾಗಿದೆ. ಅಂದರೆ, ನಮ್ಮ ಮೇಲೆ ಹೇರಿದ ಮೇಲ್ತೆರಿಗೆಯನ್ನು ಶಿಕ್ಷಣ ಮತ್ತು ಆರೋಗ್ಯಕ್ಕೆ ವಿಭಜಿಸಲಾಗುತ್ತಿದ್ದು, ಮುಂದೆ ಇದಕ್ಕೆ ಏನನ್ನು ಬೇಕಾದರೂ ಸೇರಿಸಬಹುದು. ಜಿಡಿಪಿಯ ಪಾಲಿಗೆ, ಅಥವಾ ಒಟ್ಟಾರೆಯಾಗಿ ಶಿಕ್ಷಣದ ಮೇಲಿನ ವೆಚ್ಚಕ್ಕೆ ಸಂಬಂಧಿಸಿದಂತೆ ಏಕಪ್ರಕಾರವಾಗಿ, ನಿರಂತರವಾಗಿ ಮತ್ತು ಉದ್ದೇಶಪೂರ್ವಕವಾಗಿ ಇಳಿಕೆ ಮಾಡಲಾಗುತ್ತಿದೆ. ಒಟ್ಟು ಬೆಳವಣಿಗೆಯ ವಿಷಯದಲ್ಲಿ ಕೂಡಾ ತಪ್ಪುದಾರಿಗೆಳೆಯಲಾಗುತ್ತಿದೆ; ಏಕೆಂದರೆ ಈ ವೆಚ್ಚವು ಹಣದುಬ್ಬರವನ್ನಾಗಲೀ, ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಅಂತರವನ್ನಾಗಲೀ ಪರಿಗಣಿಸುವುದಿಲ್ಲ.

ಶಿಕ್ಷಣದ ಮೇಲಿನ ವೆಚ್ಚದ ದೂರಗಾಮಿ ಮನೋಭಾವದ ಕುರಿತು ಇರುವ ಅಂಕಿಅಂಶಗಳನ್ನು ಗಮನಿಸಿದಲ್ಲಿ, ಉದಾರೀಕರಣೋತ್ತರದ ಅವಧಿಯಲ್ಲಿ ಭಾರತೀಯ ಆರ್ಥಿಕತೆಯು ಅಷ್ಟೊಂದು ವೇಗದಲ್ಲಿ ಬೆಳೆಯದೇ ಇದ್ದ ಸಮಯದಲ್ಲಿ, ಒಟ್ಟು ಆರ್ಥಿಕತೆಯ ಗಾತ್ರವು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲ್ಲದೇ ಇದ್ದಾಗ ಕೂಡಾ ಸರಕಾರವು ಶಿಕ್ಷಣದ ಮೇಲೆ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿತ್ತು ಎಂದು ಗೊತ್ತಾಗುತ್ತದೆ. ಕಳೆದೆರಡು ದಶಕಗಳಿಂದ ಅದು ಒಂದೋ ಸ್ಥಗಿತಗೊಂಡಿರುವುದು ಅಥವಾ ಇಳಿದಿರುವುದು ಕಂಡುಬರುತ್ತದೆ. ಈಗ ನಾವು ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಮತ್ತು ಜಿಡಿಪಿಯಲ್ಲಿ ಅತ್ಯಂತ ಹೆಚ್ಚು ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ  ಎಂದು ಹೇಳಿಕೊಳ್ಳುತ್ತಿರುವ ಹೊತ್ತಿನಲ್ಲಿ ಶಿಕ್ಷಣದ ಮೇಲಿನ ವೆಚ್ಚದಲ್ಲಿ ಇಳಿಕೆಯಾಗಿದೆ.

ಉದಾರೀಕರಣೋತ್ತರದಲ್ಲಿ ಶಿಕ್ಷಣ ಬಯಸಿ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ತಲಾವಾರು ವೆಚ್ಚ, ಪ್ರತಿಯೊಂದು ಮಗುವಿಗಾಗಿ ಖರ್ಚು ಮಾಡಲಾಗುವ ವೆಚ್ಚದಲ್ಲಿ ಇಳಿಕೆಯಾಗಿದೆ; ಅದು ಕೂಡಾ ಒಟ್ಟು ಬಜೆಟಿನಲ್ಲಿ ಏರಿಕೆ ಆಗಿರುವಾಗ. ಶಿಕ್ಷಣದ ಹಕ್ಕಿನ ಕಾನೂನನ್ನು ಜಾರಿಗೊಳಿಸಿದುದರ ಹೊರತಾಗಿಯೂ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಿಕ್ಷಣದ ಮೇಲಿನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಕಣ್ಣಿಗೆ ರಾಚುತ್ತದೆ. ಇದಕ್ಕೆ ಗಮನಾರ್ಹವಾಗಿ ವ್ಯತಿರಿಕ್ತವಾಗಿರುವುದೆಂದರೆ, ಸಿಕ್ಕಿಂ ಮತ್ತು ದಿಲ್ಲಿಯಂತಹ ಕೆಲವು ರಾಜ್ಯಗಳಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಅವು ಅತ್ಯುತ್ತಮ ಸಾಧನೆ ತೋರಿವೆ. ದಿಲ್ಲಿಯಂತೂ ಶಿಕ್ಷಣದ ಮೇಲೆ ಸಾರ್ವಜನಿಕ ಹೂಡಿಕೆಗೆ ಸಂಬಂಧಿಸಿದಂತೆ ಅತ್ಯುತ್ಕೃಷ್ಟ ಸಾಧನೆ ತೋರಿದೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಸಾಮರ್ಥ್ಯದಲ್ಲಿ ಹೆಚ್ಚಳವಾಗಿದೆ, ಹಲವಾರು ಸರಕಾರಿ ಶಾಲೆಗಳಿಗೆ ಹೆಚ್ಚುವರಿ ಕಟ್ಟಡಗಳು ಸಿಕ್ಕಿವೆ, ಹೊಸ ಶಿಕ್ಷಕರನ್ನು ನೇಮಿಸಲಾಗಿದ್ದು, ಅವರಿಗೆ ಸೂಕ್ತ ತರಬೇತಿಯನ್ನೂ ಒದಗಿಸಲಾಗಿದೆ. 

ಸಿಕ್ಕಿಂ, ದಿಲ್ಲಿ ಮತ್ತು ಕೇರಳದಂತೆ ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ಸರಕಾರಿ ಹೂಡಿಕೆಯನ್ನು ಕಂಡಿರುವ ರಾಜ್ಯಗಳಲ್ಲಿ ಸಾಮಾಜಿಕ ಸೂಚ್ಯಂಕಗಳು ಅತ್ಯಂತ ಉತ್ತಮವಾಗಿವೆ. ಆದುದರಿಂದ ಶಿಕ್ಷಣದ ಮೇಲೆ ಸರಕಾರಿ ವೆಚ್ಚದಲ್ಲಿ ಇಳಿಕೆಗೆ ಯಾವುದೇ ಸಮರ್ಥನೆಯಾಗಲೀ, ನೆಪವಾಗಲೀ ಇಲ್ಲವೇ ಇಲ್ಲ. ಶಿಕ್ಷಣಕ್ಕೆ ಒಟ್ಟಾರೆಯಾಗಿ ಆರು ಶೇಕಡಾದಷ್ಟು ಹಣವನ್ನು ವೆಚ್ಚ ಮಾಡಬೇಕೆಂದು ಶಿಫಾರಸು ಮಾಡಿರುವ ಕೊಠಾರಿ ಸಮಿತಿಯ ವರದಿಯತ್ತ ಸರಕಾರಗಳು ಗಮನಹರಿಸಬೇಕು. ಆದರೆ, ನಾವು ಯಾವತ್ತೂ ಆ ಮಟ್ಟವನ್ನು ಮುಟ್ಟಿಯೇ ಇಲ್ಲ; ಮಾತ್ರವಲ್ಲ, ಅದಕ್ಕೆ ಹತ್ತಿರ ಕೂಡಾ ಬಂದಿಲ್ಲ.

ಖಾಸಗೀಕರಣದ ಅತ್ಯಂತ ದೊಡ್ಡ ವಕೀಲರಾಗಿರುವ ಯುಎಸ್‌ಎಯಂತಹಾ ಮುಂದುವರಿದ ದೇಶಗಳು ಕೂಡಾ ಶಿಕ್ಷಣಕ್ಕಾಗಿ ಭಾರತ ಸರಕಾರಕ್ಕಿಂತ ಜಿಡಿಪಿಯ ದುಪ್ಪಟ್ಟು ಪಾಲನ್ನು ಖರ್ಚು ಮಾಡುತ್ತಿವೆ. ಚೀನಾ, ಶ್ರೀಲಂಕಾ, ಮಾಲ್ದೀವ್ಸ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳು ಕೂಡಾ ನಮ್ಮ ದೇಶಕ್ಕಿಂತ ಹೆಚ್ಚಿನ ಪಾಲಿನ ಹಣವನ್ನು ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿವೆ. ಶ್ರೀಲಂಕಾ ದೇಶವು ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿರುವ ಪಾಲು (ಜಿಡಿಪಿಯ ಎಂಟು ಶೇಕಡಾ)- ಅದು ರಕ್ಷಣೆಗಾಗಿ ಖರ್ಚು ಮಾಡುತ್ತಿರುವ ಪಾಲಿಗೆ ಸಮನಾಗಿದೆ ಎಂಬುದು ಕುತೂಹಲಕಾರಿಯಾಗಿದೆ. ಅದೇ ಹೊತ್ತಿಗೆ ಭಾರತವು ರಕ್ಷಣೆಗಾಗಿ ಮಾಡುವ ಖರ್ಚಿನ ಮೂರನೇ ಒಂದಕ್ಕಿಂತ ಕಡಿಮೆ ಹಣವನ್ನು ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದೆ. ನಾವು ಸೂಕ್ತ ಶಿಕ್ಷಣ ಪಡೆಯದ, ‘ರಾಷ್ಟ್ರೀಯವಾದ’ ಅಥವಾ ಅಭದ್ರತೆಯಿಂದ ನರಳುತ್ತಿರುವ ಸರಕಾರವೊಂದರ ‘ಭದ್ರತೆ’ಗಾಗಿ ಸಾಯಲು ಸಿದ್ಧವಿರುವ ಸೈನಿಕರನ್ನು ಸೃಷ್ಟಿಸುತ್ತಿದ್ದೇವೆ. ಜಾಗತಿಕ ಮಟ್ಟದಲ್ಲಿ ಶಿಕ್ಷಣದ ಮೇಲಿನ ಸರಾಸರಿ ಹೂಡಿಕೆಯ ವಿಷಯದಲ್ಲಿ ದೇಶಗಳ ಸ್ಥಾನಮಾನದ ಸೂಚ್ಯಂಕವನ್ನು ನೋಡಿದರೆ ಭಾರತವು ಸರಾಸರಿಗಿಂತ ತುಂಬಾ ಕೆಳಗಿರುವುದು ಗೊತ್ತಾಗುತ್ತದೆ.

ಶಾಲಾ ಶಿಕ್ಷಣದ ಖಾಸಗೀಕರಣವು ಹಿಂದಿನ ಸ್ಥಿತಿಗೆ ಮರಳಲಾಗದ ಮಟ್ಟಕ್ಕೆ ತಲಪಿರುವುದು ಮಾತ್ರವಲ್ಲ; ಕಳೆದ ಎರಡು ದಶಕಗಳ ‘ಸಾಧನೆ’ ಎಂದರೆ, ಖಾಸಗಿ ಶಾಲಾ ಶಿಕ್ಷಣದ ಕಾರ್ಪೋರೇಟೀಕರಣ ಮಾಡಿರುವುದು. ಇತ್ತೀಚೆಗೆ ಹೈದರಾಬಾದಿನ ವರದಿಯೊಂದು ಏನು ಹೇಳುತ್ತದೆ ಎಂದರೆ, ಶಾಲಾ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು- ಏಕೆಂದರೆ, ಆಕೆಯ ಹೆತ್ತವರು 2000 ರೂ.ಗಳ ಶಾಲಾಶುಲ್ಕವನ್ನು ಕಟ್ಟಿಲ್ಲ ಎಂಬ ಕಾರಣಕ್ಕಾಗಿ ಶಾಲಾ ಆಡಳಿತವು ಆಕೆಯನ್ನು ಪರೀಕ್ಷಾ ಕೊಠಡಿಯಿಂದ ಹಿಂದೆ ಕಳಿಸಿತ್ತು. ಶಾಲಾ ಆಡಳಿತ ಮಂಡಳಿಗಳ ಈ ರೀತಿಯ ವರ್ತನೆಯನ್ನು ನಿಯಂತ್ರಿಸಲು ಈ ತನಕ ಒಂದೇ ಒಂದು ಕ್ರಮವನ್ನು ಕೈಗೊಳ್ಳಲಾಗಿಲ್ಲ.

ದೇಶದಲ್ಲಿ ಖಾಸಗಿ ಶಾಲೆಗಳ ಪರಿಸ್ಥಿತಿ ಈ ಮಟ್ಟಕ್ಕೆ ಇಳಿದಿದೆ. ಸಾವು ಎಚ್ಚೆತ್ತು, ಇದನ್ನು ಗಮನಿಸಲು  ಇನ್ನೆಷ್ಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಕು? ಖಾಸಗಿ ಶಾಲೆಗಳು ಕೇವಲ ಸ್ವತಂತ್ರವಾದ, ಸಣ್ಣ ವ್ಯವಹಾರವನ್ನಷ್ಟೇ ನಡೆಸುವ ಚಿಕ್ಕ ಆಡಳಿತಗಳಾಗಿ ಉಳಿದಿಲ್ಲ; ಅವು ಕಾರ್ಪೋರೇಟೀಕರಣಗೊಂಡಿವೆ ಮತ್ತು ಸಂಘಟಿತವಾಗಿವೆ. ಅವುಗಳಿಗೆ ಫ್ರಾಂಚೈಸಿಗಳೂ ಇವೆ. ದಿಲ್ಲಿಯಲ್ಲಿ ಅರ್ಧದಷ್ಟು ದಿಲ್ಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್)ಗಳು ಮೂಲ ಆಡಳಿತಗಳಿಗೆ ಸೇರಿಲ್ಲ. ಅದೇ ರೀತಿ ದೇಶದಾದ್ಯಂತ ಇರುವ ಮೂರನೇ ಎರಡರಷ್ಟು ಡಿಪಿಎಸ್ ಶಾಲೆಗಳು ಕೂಡಾ ಡಿಪಿಎಸ್ ಆಡಳಿತಕ್ಕೆ ಸೇರಿಲ್ಲ. ಇದು ಗೋಯೆಂಕಾ ಹೆರಿಟೇಜ್ ಮತ್ತು ಇಂತಹಾ ಹಲವಾರು ಸಂಸ್ಥೆಗಳ ಮಟ್ಟಿಗೂ ನಿಜ.

ಇದಕ್ಕಿಂತಲೂ ಕೆಟ್ಟ ವಿಷಯ ಎಂದರೆ, ಈಗ ಇಂತಹಾ ಶಾಲೆಗಳನ್ನು ಮಾಧ್ಯಮ ಸಂಸ್ಥೆಗಳು, ಅವುಗಳ ಹೂಡಿಕೆದಾರರು ಅಥವಾ ಪ್ರಾಯೋಜಕರು ನಡೆಸುತ್ತಿರುವುದು. ಇನ್ನೆಂದಿಗೂ ಈ ಶಾಲೆಗಳಲ್ಲಿ ನಡೆಯುವ ಋಣಾತ್ಮಕ ಘಟನೆಗಳಿಗೆ ಮಾಧ್ಯಮಗಳ ಪ್ರಚಾರ ಸಿಗಲಾರದು. ಪ್ರತಿಯೊಂದು ಮಾಧ್ಯಮ ಸಂಸ್ಥೆಯು ಶಾಲಾ ಶಿಕ್ಷಣಕ್ಕೆ ಸಾಫ್ಟವೇರ್‌ಗಳನ್ನು ಒದಗಿಸುತ್ತಿದೆ, ಕಾರ್ಪೊರೇಟ್ ಶಾಲೆಗಳಿಗೆ ಮಕ್ಕಳ ಪುರವಣಿಗಳನ್ನು ಹೊರತರುತ್ತಿದೆ, ಉದ್ಯೋಗ ಒದಗಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ, ಖಾಸಗಿ ವಿಶ್ವವಿದ್ಯಾಲಯಗಳಿಗೆ ಕಾರ್ಯಕ್ರಮ ನಿರ್ವಹಣಾ ಸೇವೆಗಳನ್ನು ಒದಗಿಸುತ್ತಿದೆ. ಕಳೆದೆರಡು ದಶಕಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳ ನಡುವಿನ ಕೂಟವು ಅಪಾಯಕಾರಿ ಮಟ್ಟಕ್ಕೆ ತಲಪಿದೆ.  ಇದರ ಕುರಿತು ಜಂಟಿ ಸಂಸದೀಯ ಸಮಿತಿ, ಸಿಬಿಐ ಅಥವಾ ನಿವೃತ್ತ ನ್ಯಾಯಧೀಶರೊಬ್ಬರಿಂದ ತನಿಖೆ ನಡೆಸಬೇಕಾದ ಅಗತ್ಯವಿದೆ. ಕಾರ್ಪೊರೇಟ್-ಶಾಲೆ ಹಾಗೂ ಕಾರ್ಪೊರೇಟ್-ಮಾಧ್ಯಮಗಳ ನಡುವಿನ ಅಪವಿತ್ರ ಮೈತ್ರಿಯ ಅಪಾಯವೆಂದರೆ, ನೀವು ಖಾಸಗೀಕರಣದ ವಿರುದ್ಧ ಹೋರಾಟ ನಡೆಸಿದರೂ, ಅದನ್ನು ವರದಿ ಮಾಡಲು ಯಾರೂ ಇರುವುದಿಲ್ಲ.

ಕಳೆದ ಎರಡು ದಶಕಗಳ ಬೆಳವಣಿಗೆಯನ್ನು ಪರಿಗಣಿಸಿದರೆ, ಸಾಕ್ಷರತೆಯ ಬೆಳವಣಿಗೆಯ ದರ ನೇರವಾಗಿಲ್ಲ. ಅದು ಕ್ರಮೇಣವಾಗಿ 75 ಶೇಕಡಾದ ಮಟ್ಟದಲ್ಲಿ ಸ್ಥಗಿತಗೊಳ್ಳುವ ರೀತಿಯಲ್ಲಿ ಕುಸಿಯುತ್ತಿದೆ. ಸ್ವಾತಂತ್ರ್ಯೋತ್ತರದ ನಾಲ್ಕು ಅಥವಾ ಐದು ದಶಕಗಳ ಕಾಲ ನಾವು ದಶಕಕ್ಕೆ ಸುಮಾರು 30 ಶೇಕಡಾದ ಬೆಳವಣಿಗೆಯ ದರವನ್ನು ಕಾಯ್ದುಕೊಂಡಿದ್ದೆವು. ಕಳೆದ ದಶಕದಲ್ಲಿ ಅದು 10 ಶೇಕಡಾದಷ್ಟಿದ್ದರೆ, ಈ ದಶಕದಲ್ಲಿ ಅದು ಅದರ ಅರ್ಧದಷ್ಟಕ್ಕೆ ಕುಸಿದಿದೆ. ದೇಶದಾದ್ಯಂತ ಸಾಕ್ಷರತೆಯ ಬೆಳವಣಿಗೆಯ ದರ ಕುಸಿಯುವುದರೊಂದಿಗೆ, ಸರಕಾರಗಳು ಶಿಕ್ಷಣದ ಕುರಿತ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿರುವುದರ ಪರಿಣಾಮ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿಯ ಪ್ರಮಾಣ ಈ ದಶಕದುದ್ದಕ್ಕೂ 20 ಕೋಟಿಗೂ ಕಡಿಮೆಯಲ್ಲಿ ಸ್ಥಗಿತಗೊಂಡಿದೆ. 2014-15ರಲ್ಲಿ ಈ ಪ್ರಮಾಣ ಸ್ಥಗಿತಗೊಂಡಿರುವುದು ಮಾತ್ರವಲ್ಲ, ಸುಮಾರು 10 ಲಕ್ಷದಷ್ಟು ಕಡಿಮೆಯಾಗಿದೆ. ಇದು ಕಳೆದ ಎರಡು ವರ್ಷಗಳಲ್ಲಿ ಇನ್ನಷ್ಟು ಕುಸಿದಿರಬೇಕು. ಏಕೆಂದರೆ, ಹೂಡಿಕೆ ಇಲ್ಲದೇ ಹೊಸ ದಾಖಲಾತಿಗಳು ಕಾರ್ಯಸಾಧುವಲ್ಲ. ದಾಖಲಾದ ಮಕ್ಕಳಲ್ಲಿಯೂ ಬಹಳಷ್ಟು ಮಂದಿ ಪ್ರಾಥಮಿಕ ಶಿಕ್ಷಣ ಅಥವಾ ಹೈಸ್ಕೂಲು ಶಿಕ್ಷಣ ಪೂರೈಸುವುದಕ್ಕೆ ಮೊದಲೇ ಶಾಲೆ ಬಿಡುತ್ತಾರೆ. ವಾಸ್ತವವಾಗಿ ಉನ್ನತ ಶಿಕ್ಷಣ ಪ್ರವೇಶಿಸುವವರ ಸಂಖ್ಯೆ, ಒಟ್ಟು ದಾಖಲಾತಿಗೆ ಸಂಬಂಧಿಸಿದಂತೆ ಕೇವಲ 25 ಶೇಕಡಾಕ್ಕಿಂತಲೂ ಕಡಿಮೆ. ಅವರು ಕೂಡಾ ದುಬಾರಿ ಶುಲ್ಕ ನೀಡಿ ಖಾಸಗಿ ಕಾಲೇಜು/ ವಿಶ್ವವಿದ್ಯಾಲಯಗಳಿಗೆ ಸೇರುತ್ತಿದ್ದು, ಬಹುದೊಡ್ಡ ಶೇಕಡಾವಾರು ವಿದ್ಯಾರ್ಥಿಗಳ ಆರ್ಥಿಕ ಕಡೆಗಣಿಸುವಿಕೆಯನ್ನು ಮರೆಮಾಚಲಾಗುತ್ತಿರುವುದು ಸ್ಪಷ್ಟವಾಗಿದೆ. ಸರಕಾರವು ತನ್ನ ಜವಾಬ್ದಾರಿಯಿಂದ ಜಾರಿಕೊಂಡ ಪರಿಣಾಮವಾಗಿ ಮೂಲಭೂತ ಪ್ರವೇಶ ಮಟ್ಟದ ಶಿಕ್ಷಣದ ಅವಕಾಶ ಕೂಡಾ ಮಕ್ಕಳಿಗೆ ಒದಗದೆ, ಶಿಕ್ಷಣದ ಹಕ್ಕನ್ನು ಒಂದು ಅಣಕವನ್ನಾಗಿ ಮಾಡಿದೆ.

ಹೆಚ್ಚಿನ ರಾಜ್ಯಗಳಲ್ಲಿ ಶಿಕ್ಷಕರ ಹೊಸ ನೇಮಕಾತಿ ಆಗದೇ ಇರುವುದರಿಂದ ಶಿಕ್ಷಕ-ವಿದ್ಯಾರ್ಥಿ ಅನುಪಾತ ಕುಸಿಯುತ್ತಿದೆ. 2009ರಲ್ಲಿ ಆಗಿನ ಸರಕಾರವು 2022ರ ಒಳಗೆ 50 ಕೋಟಿ ಜನರಿಗೆ ಕೌಶಲ ಒದಗಿಸುವ ರಾಷ್ಟ್ರೀಯ ಕೌಶಲ ನೀತಿಯನ್ನು ಆರಂಭಿಸಿತು. ಆದರೆ, ಈಗಿನ ಸರಕಾರವು ಈ ಗುರಿಯನ್ನು ಪರಿಷ್ಕರಿಸಿ, 40 ಕೋಟಿಗೆ ಇಳಿಸಿದೆ. ‘ಸ್ಕಿಲ್ ಇಂಡಿಯಾ’ ಅಭಿಯಾನವು ಸಾರ್ವಜನಿಕರಲ್ಲಿ ಜನಪ್ರಿಯವಾಗಿದೆ. ಆದರೆ, ಅದರ ಗುರಿಯನ್ನು ಇಳಿಸಿರುವುದನ್ನು ಮಾತ್ರ ಬಚ್ಚಿಡಲಾಗುತ್ತಿದೆ.

ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಡೆಗಣಿಸಲಾಗಿರುವುದು- ಅವುಗಳನ್ನು ಖಾಸಗಿ ಶಾಲೆಗಳ ವೆಚ್ಚವನ್ನು ಭರಿಸಲಾಗದವರಿಗೆ ಉಳಿದಿರುವ ಕೊನೆಯ ಆಯ್ಕೆಯನ್ನಾಗಿ ಮಾಡಿದೆ. ಸರಕಾರವು ಉದ್ದೇಶಪೂರ್ವಕವಾಗಿ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕಾತಿ, ತರಬೇತಿ ಮತ್ತು ಆಡಳಿತವನ್ನು ಕಡೆಗಣಿಸಿರುವುದರಿಂದ ಸರಕಾರಿ ಶಾಲೆಗಳು ಶೋಷಿತವಾಗಿವೆ. ಈ ಸತ್ಯದಿಂದ ಪಾರಾಗಲು ಯಾವ ಹಾದಿಯೂ ಇಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ನಂಟು ಹೊಂದಿರುವ ರಾಜಕಾರಣಿಗಳು ತಮ್ಮ ಖಾಸಗಿ ಇಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ಕಾನೂನು ಮತ್ತು ಬಿ.ಎಡ್. ಕಾಲೇಜುಗಳಿಗೆ ಸಾಕಷ್ಟು ವಿದ್ಯಾರ್ಥಿಗಳು ಸಿಗುವಂತಾಗಲು, ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು 10+12 ಹಂತದಿಂದ ಹೊರಬರುವಂತೆ ಮಾಡುವ ಸಲುವಾಗಿ, ತೇರ್ಗಡೆಯ ಶೇಕಡಾವಾರು ಹೆಚ್ಚಿಸಲು ಅಥವಾ ಮೌಲ್ಯಮಾಪನದ ಗುಣಮಟ್ಟವನ್ನು ಇಳಿಸಲು ಸರಕಾರಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಮನೋವೃತ್ತಿಯು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ವಾಸ್ತವವಾಗಿ ಸರಕಾರಗಳು ಮೌಲ್ಯಮಾಪನದ ಗುಣಮಟ್ಟವನ್ನು ಇಳಿಸಲೇಬೇಕಾಗಿದೆ ಏಕೆಂದರೆ, ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಖಾಸಗಿ ಕಾಲೇಜು/ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣದ ಪೂರೈಕೆಯು ಏಕಾಏಕಿಯಾಗಿ ಬೇಡಿಕೆಯನ್ನು ಮೀರಿನಿಂತಿದೆ. ಕೆಳಗಿನ ಮಟ್ಟದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿ ಹೊರಬರದೇ ಇದ್ದಲ್ಲಿ ಅವರಲ್ಲಿರುವ ಸೀಟುಗಳು ಖಾಲಿ ಉಳಿಯುತ್ತವೆ. ಒಂದೋ ಕಲಿಸುವಿಕೆಯನ್ನು ಸುಧಾರಿಸದೆ ಅಥವಾ ಪಾಸಾಗಲು ಬೇಕಾಗುವ ಅಂಕಗಳನ್ನು ಇಳಿಸದೆ ಹೆಚ್ಚು ಮಂದಿ ಪಾಸಾಗುವಂತೆ ಮಾಡುವುದಾದರೂ ಹೇಗೆ?

ಇಕಾನಮಿಕ್ ಎಂಡ್ ಪೊಲಿಟಿಕಲ್ ವೀಕ್ಲಿ (ಇಪಿಡಬ್ಲ್ಯೂ)ಯ ಅತ್ಯುತ್ತಮ ಲೇಖನವೊಂದರಲ್ಲಿ ದಿವಂಗತ ಡಾ. ಕೆ. ಬಾಲಗೋಪಾಲ್ ಈ ಪ್ರಶ್ನೆಗಳನ್ನು ಕೇಳಿದ್ದಾರೆ: “ಶಾಲೆಗಳು ಮತ್ತು ಕಾಲೇಜುಗಳನ್ನು ನಡೆಸುತ್ತಿರುವ ಈ ಖಾಸಗಿ ಆಡಳಿತದವರು ಯಾರು? ಅವರ ಕಾರ್ಪೊರೇಟ್ ಇತಿಹಾಸಕ್ಕೆ ಇಣುಕಿನೋಡಿದರೆ, ಬಹಳಷ್ಟು ಸಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನೂ ನಡೆಸುತ್ತಿರುವ ಲಿಕ್ಕರ್ ಮಾಫಿಯಾ, ಬಿಲ್ಡರ್ ಮಾಫಿಯಾ, ಹೊಟೇಲ್ ಮಾಫಿಯಾ, ಗಣಿ ಮಾಫಿಯಾ ಮತ್ತು ಕಲ್ಲಿದ್ದಲು ಮಾಫಿಯಾ ಇತ್ಯಾದಿಗಳ ಜೊತೆ ಅವರ ನಂಟನ್ನು ಕಂಡುಹಿಡಿಯಲು ಸಾಧ್ಯ. ಜೆಪಿ ಮತ್ತು ಅನ್ಸಾಲ್ ರೀತಿಯ ಬಿಲ್ಡರ್‌ಗಳು ಕೂಡಾ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮತ್ತು ವಿಶ್ವವಿದ್ಯಾಲಯಗಳನ್ನು ನಡೆಸುತ್ತಿದ್ದಾರೆ.”

ಅವರಲ್ಲಿ ಹಲವಾರು ಮಂದಿ ಬ್ಯಾಂಕುಗಳಲ್ಲಿನ ದುಡಿಯದ ಆಸ್ತಿ (ವಸೂಲಾಗದ ಸಾಲ-ಎನ್‌ಪಿಎ) ಜೊತೆಗೆ ಸಂಬಂಧ ಹೊಂದಿದ್ದಾರೆ. ಲಕ್ಷ ಕೋಟಿ ರೂ.ಗಳ ಲೆಕ್ಕದಲ್ಲಿ ಎನ್‌ಪಿಎಗಳನ್ನು ಮನ್ನಾ ಮಾಡುವ ಸರಕಾರದ ಬಳಿಯಲ್ಲಿ ಶಿಕ್ಷಣಕ್ಕೆ ಮಾತ್ರ ಸಾಕಷ್ಟು ಹಣವಿಲ್ಲ. ಅಮಾನ್ಯೀಕರಣದ ಹೊರತಾಗಿಯೂ ಶಿಕ್ಷಣ ಉದ್ಯಮವು 10 ಶೇಕಡಾ ಸಂಯುಕ್ತ ವಾರ್ಷಿಕ ದರದಲ್ಲಿ ಬೆಳೆಯುತ್ತಿದೆ ಎಂದು ಸರಕಾರಿ ಅಂಕಿಅಂಶಗಳು ತಿಳಿಸುತ್ತಿದ್ದು, ಇದು ನಮ್ಮ ಆರ್ಥಿಕತೆಯ ಬೆಳವಣಿಗೆಯ ದರಕ್ಕಿಂತಲೂ ಹೆಚ್ಚು.

ಆರೋಗ್ಯವಾಗಿರಲಿ, ಶಿಕ್ಷಣವಾಗಿರಲಿ, ಮಕ್ಕಳ ಮೇಲೆ ಮಾಡುವ ಸರಕಾರಿ ಖರ್ಚು ಒಂದೋ ಸ್ಥಗಿತಗೊಂಡಿದೆ, ಇಲ್ಲವೇ ಕಡಿತಗೊಂಡಿದೆ. ಖಾಸಗಿ ಶಾಲೆಗಳು ಮತ್ತು ಸರಕಾರಿ ಶಾಲೆಗಳನ್ನು ಕೂಡಾ ಸರಕಾರವು ಸರಿಯಾಗಿ ನಿರ್ವಹಿಸದೆ, ನಿಯಂತ್ರಿಸದೆ ಇರುವ ಪರಿಣಾಮವಾಗಿ ಶಿಕ್ಷಣದ ಗುಣಮಟ್ಟವು ವಾಸ್ತವವಾಗಿ ಆತಂಕಕಾರಿಯಾಗಿ ಇಳಿಯುತ್ತಿದೆ ಎಂದು ಸ್ವಯಂಸೇವಾ ಸಂಘಟನೆಯಾಗಿರುವ ‘ಪ್ರಥಮ್’ ಅಖಿಲ ಭಾರತ ಮಟ್ಟದಲ್ಲಿ ನಡೆಸುವ ಸಮೀಕ್ಷೆಗಳು ತೋರಿಸಿಕೊಡುತ್ತವೆ. ಐದನೇ ತರಗತಿಯನ್ನು ಮುಗಿಸಿರುವ ವಿದ್ಯಾರ್ಥಿಗಳೂ ಅಕ್ಷರಗಳನ್ನು ಗುರುತಿಸಲು ಅಥವಾ ಸರಳವಾದ ಕೂಡು-ಕಳೆಯುವ ಲೆಕ್ಕವನ್ನು ಮಾಡಲು ಕೂಡಾ ವಿಫಲರಾಗುತ್ತಿದ್ದಾರೆ. ಅವರು ಕಂಡುಕೊಂಡ ವಾಸ್ತವಾಂಶಗಳು ಗಂಭೀರವಾದ ಮಧ್ಯಪ್ರವೇಶದ ಅಗತ್ಯವನ್ನು ಸೂಚಿಸುತ್ತವೆ.

ನಾನು ತಮ್ಮ ಕೋಚಿಂಗ್ ಕ್ಲಾಸುಗಳಿಗೆ ಮಾರುಕಟ್ಟೆ ಹೂಡಿಕೆಗಾಗಿ ಪ್ರಯತ್ನಿಸುತ್ತಿರುವ ಖಾಸಗಿ ಟ್ಯೂಷನ್ ಸಂಸ್ಥೆಯ ಜಾಹೀರಾತೊಂದನ್ನು ಇಂಟರ್ನೆಟ್‌ನಲ್ಲಿ ನೋಡಿದೆ. ಶಾಲೆಗಳಲ್ಲಿ ಹೂಡಿಕೆಯು ನಿಯಂತ್ರಣಕ್ಕೆ ಒಳಪಡುತ್ತಿದ್ದು, ಇದಕ್ಕೆ ಹೋಲಿಸಿದಾಗ ಪ್ರಾಥಮಿಕಪೂರ್ವ ಮತ್ತು ವೃತ್ತಿ ಶಿಕ್ಷಣದಂತೆಯೇ ಕೋಚಿಂಗ್ ಕ್ಲಾಸುಗಳಲ್ಲಿ ಹೂಡಿಕೆಯ ಮೇಲೆ ಯಾವುದೇ ನಿಯಂತ್ರಣ ಇಲ್ಲ ಎಂದು ಹೇಳುವ ಮೂಲಕ ಅದು ಹೂಡಿಕೆದಾರರನ್ನು ಓಲೈಸಲು ಯತ್ನಿಸಿದೆ. ಆದುದರಿಂದ ಇಲ್ಲಿ ಹೂಡಿಕೆ ಮಾಡುವುದು ಅನುಕೂಲಕರ ಮತ್ತು ಹೆಚ್ಚಿನ ಲಾಭವನ್ನು ಗಳಿಸಬಹುದು ಎಂಬುದು ಅದರ ಇಂಗಿತ.

ಕಾಲೇಜುಗಳ ಸಂಖ್ಯೆಯು ಬೆಳೆಯುತ್ತಿದ್ದರೂ, ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿಯು 25 ಶೇಕಡಾವನ್ನು ಮೀರುತ್ತಿಲ್ಲ. ಅರ್ಧದಷ್ಟು ಕಾಲೇಜುಗಳು ಬಿ.ಎಡ್. ಬಿಬಿಎಂ ಅಥವಾ ಎಂಬಿಎ ಇರುವ ಏಕ ಪದವಿ ಕಾಲೇಜುಗಳು. ಇಂದು ನಾವು ಹೊಂದಿರುವ 900ರಷ್ಟು ವಿಶ್ವವಿದ್ಯಾಲಯಗಳಲ್ಲಿ ಸರಕಾರಿ ವಿಶ್ವವಿದ್ಯಾಲಯಗಳು 300ಕ್ಕೂ ಕಡಿಮೆ.

ಉನ್ನತ ಶಿಕ್ಷಣ ವಿಶ್ವವಿದ್ಯಾಲಯಗಳಲ್ಲಿ ಸರಕಾರದ ಅಸ್ತಿತ್ವವು ಮೂರನೇ ಒಂದಕ್ಕಿಂತಲೂ ಕೆಳಗಿಳಿದಿದೆ. ಕೇವಲ ಸರಕಾರಿ ವಿಶ್ವವಿದ್ಯಾಲಯಗಳು ಮಾತ್ರ ಅಧೀನ ಕಾಲೇಜುಗಳನ್ನು ಹೊಂದಿರುತ್ತವೆ. ಯಾವುದೇ ಖಾಸಗಿ ವಿಶ್ವವಿದ್ಯಾಲಯ ಅಧೀನ ಕಾಲೇಜುಗಳನ್ನು ಹೊಂದಿಲ್ಲ. ಆದರೆ, ಸರಕಾರಿ ವಿಶ್ವವಿದ್ಯಾಲಯಗಳು ತಮ್ಮ ಅಡಿಯಲ್ಲಿ ಖಾಸಗಿ ಅಧೀನ ಕಾಲೇಜುಗಳನ್ನೂ ಹೊಂದಿವೆ.

ಒಟ್ಟು ಪರಿಸ್ಥಿತಿಯು ಬಿಕ್ಕಟ್ಟಿನ ತುತ್ತತುದಿಯನ್ನು ತಲಪಿದೆ. ಸರಕಾರವು ಯುವ ಮತದಾರರಿಂದ ಗಂಭೀರವಾದ ಸವಾಲನ್ನು ಎದುರಿಸುತ್ತಿದೆ. ಅವರು ರಾಜಕೀಯ ಪಕ್ಷಗಳ ಯಶಸ್ಸು ಅಥವಾ ವೈಫಲ್ಯವನ್ನು ನಿರ್ಧರಿಸಬಲ್ಲರು. ಅವರು ಯುವ ಮತದಾರರ ವಿಶ್ವಾಸವನ್ನು ಗಳಿಸಿಕೊಂಡರೆ ಚುನಾವಣಾ ಗೆಲುವಿನ ಸಾಧ್ಯತೆ ಹೆಚ್ಚುತ್ತದೆ. ಆದರೆ, ಅವರು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ವಿಫಲರಾಗಿದ್ದಾರೆ. ಆದುದರಿಂದಲೇ ವಿಶ್ವವಿದ್ಯಾಲಯಗಳ ಕ್ಯಾಂಪಸುಗಳಲ್ಲಿ ರಾಷ್ಟ್ರೀಯವಾದವು ಏಕಾಏಕಿಯಾಗಿ ಹುಟ್ಟಿಕೊಂಡಿದೆ. ಜೆಎನ್‌ಯು, ಜಾಧವ್‌ಪುರ್ ವಿಶ್ವವಿದ್ಯಾಲಯ, ಎಫ್‌ಟಿಐಐ ಮತ್ತಿತರ ಕಡೆಗಳಲ್ಲಿ ಏನಾಗುತ್ತಿದೆಯೋ ಅದಕ್ಕೆ ಇದುವೇ ಕಾರಣ.

ಆದುದರಿಂದಲೇ ಶಿಕ್ಷಣ ಸಂಸ್ಥೆಗಳ ಮೇಲೆ ಆಕ್ರಮಣ ನಡೆಯುತ್ತಿದೆ. ಅವುಗಳಿಗೆ ಎಳ್ಳಷ್ಟೂ ಸಾಕ್ಷ್ಯಾಧಾರವಿಲ್ಲದೆ, ‘ರಾಷ್ಟ್ರವಿರೋಧಿ’ ಅಂಗಣಗಳು, ಅವು ದೇಶಪ್ರೇಮ ಹೊಂದಿಲ್ಲ ಅಥವಾ ಅವು ‘ದೇಶದ್ರೋಹ’ದಲ್ಲಿ ತೊಡಗಿವೆ ಇತ್ಯಾದಿ ಹಣೆಪಟ್ಟಿಗಳನ್ನು ಹಚ್ಚಲಾಗುತ್ತಿರುವುದು. ಹೊಸ ಧ್ರುವೀಕರಣ ನಡೆಯಲಿರುವುದು ಇಲ್ಲಿಯೇ.

ವಿಶ್ವವಿದ್ಯಾಲಯಗಳು ಪ್ರಜಾಪ್ರಭುತ್ವದ ಕೊನೆಯ ಕೋಟೆಗಳು. ಅವುಗಳನ್ನು ನೀವು ಕಳೆದುಕೊಂಡರೆ, ನೀವು ಎಲ್ಲವನ್ನೂ ಕಳೆದುಕೊಂಡಂತೆ. ಜೆಎನ್‌ಯುನಂತಹ ವಿಶ್ವವಿದ್ಯಾಲಯಗಳಲ್ಲಿ ಕೂಡಾ ಶಿಕ್ಷಕರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಪ್ರಾತಿನಿಧ್ಯಕ್ಕಾಗಿ ಹೆಣಗಾಡುತ್ತಿವೆ. ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಕೂಡಾ ಸರಕಾರದ ಕೈಗೊಂಬೆಗಳಾಗಿರುವ ಉಪಕುಲಪತಿಗಳ ಖಾಸಗಿ ಆಡುಂಬೊಲವನ್ನಾಗಿ ಮಾಡಲಾಗಿದೆ. ಯಾರಾದರೂ ಅವರನ್ನು ಟೀಕಿಸಿದ ತಕ್ಷಣ ಅವರಿಗೆ ‘ರಾಷ್ಟ್ರವಿರೋಧಿ’ ಹಣೆಪಟ್ಟಿ ಕಟ್ಟಲಾಗುತ್ತದೆ. ಸರಕಾರಿ ಅಧಿಕಾರದ ಸಾರಾಸಗಟು ದುರುಪಯೋಗದ ಮೂಲಕ ಅವರನ್ನು ಜೈಲಿಗೆ ತಳ್ಳಲು ಸಿದ್ಧರಾಗುತ್ತಾರೆ. ವ್ಯವಸ್ಥೆಯ ಟೀಕಾಕಾರರು ತಮ್ಮ ಜೀವಕ್ಕಾಗಿ, ಕೇವಲ ಜಾಮೀನು ಪಡೆಯಲು, ವಿಚಾರಣೆಗಾಗಿ, ಮೇಲ್ಮನವಿಗಾಗಿ ಅಥವಾ ಸಾಮಾಜಿಕ ಮನ್ನಣೆಗಾಗಿ ಕೂಡಾ ಒದ್ದಾಡಬೇಕಾಗುತ್ತದೆ. ಇದು ನಮ್ಮ ದುಸ್ಥಿತಿ.(ಪೀಪಲ್ಸ್ ಕಮೀಷನ್ ಆನ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್) ದೇಶದ ಶಿಕ್ಷಣ ಸಂಸ್ಥೆಗಳ ಮೇಲಿನ ಆಕ್ರಮಣಗಳ ಕುರಿತು ವಿಚಾರಣೆ ನಡೆಸಲು ಜನತಾ ನ್ಯಾಯಮಂಡಳಿಯೊಂದನ್ನು ಸಂಘಟಿಸಿತ್ತು. ಮಂಡಳಿಯಲ್ಲಿ ನ್ಯಾಯಮೂರ್ತಿ (ನಿವೃತ್ತ) ಹೊಸಬೆಟ್ ಸುರೇಶ್, ನ್ಯಾಯಮೂರ್ತಿ (ನಿವೃತ್ತ) ಬಿ.ಜಿ ಕೋಲ್ಸೆ-ಪಾಟೀಲ್, ಪ್ರೊ. ಅಮಿತ್ ಬಡೂರಿ, ಡಾ. ಉಮಾ ಚಕ್ರವರ್ತಿ, ಪ್ರೊ. ಟಿ.ಕೆ. ಊಮ್ಮನ್, ಪ್ರೊ. ವಸಂತಿ ದೇವಿ, ಪ್ರೊ. ಘನಶ್ಯಾಮ್ ಶಾ, ಪ್ರೊ. ಮೆಹರ್ ಇಂಜಿನಿಯರ್, ಪ್ರೊ. ಕಲ್ಪನಾ ಕಣ್ಣಬೀರನ್, ಪಮೇಲಾ ಫಿಲಿಪೋಸ್ ಅವರು ಸದಸ್ಯರಾಗಿದ್ದರು. ಅದರ ವರದಿ ಈಗ ಲಭ್ಯವಿದ್ದು, ಮಂಡಳಿಯ ಮುಂದೆ ನೀಡಲಾದ ಸಾಕ್ಷ್ಯದ ಲೇಖನ ರೂಪವಿದು.)

ಕೃಪೆ: ವಾರ್ತಾಭಾರತಿ

LEAVE A REPLY

Please enter your comment!
Please enter your name here